80 ಮತ್ತು 90 ರ ದಶಕಗಳಲ್ಲಿ ಭಾರತದಲ್ಲಿ ಡಿಸ್ಕೋ ಸಂಗೀತವನ್ನು ಜನಪ್ರಿಯಗೊಳಿಸಿದ ಸಂಗೀತ ಸಂಯೋಜಕ ಮತ್ತು ಗಾಯಕ ಬಪ್ಪಿ ಲಾಹಿರಿ ಅವರು ಮುಂಬೈನ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
“ಲಾಹಿರಿ ಅವರು ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರವಷ್ಟೇ ಡಿಸ್ಚಾರ್ಜ್ ಆಗಿದ್ದರು. ಆದರೆ ಮಂಗಳವಾರ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅವರ ಕುಟುಂಬವು ಮನೆಗೆ ವೈದ್ಯರನ್ನು ಕರೆದಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಯಲ್ಲಿ ಅವರು ನಿಧನರಾದರು. ಅವರಿಗೆ ಹಲವಾರು ಆರೋಗ್ಯ ಸಮಸ್ಯೆಗಳಿದ್ದವು” ಎಂದು ಆಸ್ಪತ್ರೆಯ ನಿರ್ದೇಶಕರಾದ ಡಾ ದೀಪಕ್ ನಾಮಜೋಶಿ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಬಪ್ಪಿ ಲಾಹಿರಿ ಅವರು 1970-80 ರ ದಶಕದ ಉತ್ತರಾರ್ಧದಲ್ಲಿ ‘ಚಲ್ತೇ ಚಲ್ತೆ’, ‘ಡಿಸ್ಕೋ ಡ್ಯಾನ್ಸರ್’ ಮತ್ತು ‘ಶರಾಬಿ’ ನಂತಹ ಹಲವಾರು ಚಲನಚಿತ್ರಗಳಲ್ಲಿ ಜನಪ್ರಿಯ ಹಾಡುಗಳನ್ನು ನೀಡಿದ್ದರಯ. ಭಂಕಾಸ್ ಶೀರ್ಷಿಕೆಯ ಅವರ ಕೊನೆಯ ಬಾಲಿವುಡ್ ಹಾಡು 2020 ರ ಚಿತ್ರ ‘ಬಾಘಿ 3’ ಗಾಗಿ ಮಾಡಿದ್ದರು.
ಅವರು ತೆರೆಯ ಮೇಲೆ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು ಸಲ್ಮಾನ್ ಖಾನ್ ಅವರೊಂದಿಗೆ ಬಿಗ್ ಬಾಸ್-15 ರಿಯಾಲಿಟಿ ಶೋನಲ್ಲಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಕೊರೊನಾ ಪಾಸಿಟಿವ್ ಆಗಿ, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ದಿನಗಳ ನಂತರ ಸೋಂಕಿನಿಂದ ಅವರು ಚೇತರಿಸಿಕೊಂಡಿದ್ದರು.
ಇದನ್ನೂ ಓದಿ: ಹಿಜಾಬ್ ಧರಿಸಿದ ಪುಟಾಣಿಯನ್ನು ಓಡಿಸಿಕೊಂಡು ಹೋಗುತ್ತಿರುವ ವಿಡಿಯೊ ವೈರಲ್



Great music director. But unfortunately he has lost his respect due to his communal utterances.