Homeಮುಖಪುಟವಾಗ್ಜಾಲ ಭ್ರಾಂತಿಯ ಒಕ್ಕೂಟ ಬಜೆಟ್ 2022-23

ವಾಗ್ಜಾಲ ಭ್ರಾಂತಿಯ ಒಕ್ಕೂಟ ಬಜೆಟ್ 2022-23

- Advertisement -
- Advertisement -

ಪ್ರಸ್ತಾವನೆ

ಇದೊಂದು ವಾಗ್ಜಾಲ ಭ್ರಾಂತಿಯ ಮತ್ತು ಮಾತಿನಲ್ಲಿಯೇ ಮನೆ ಕಟ್ಟಿರುವ ಬಜೆಟ್ಟಾಗಿದೆ. ಇಂದು ನಮ್ಮ ಆರ್ಥಿಕತೆಗೆ ಬೇಕಾಗಿದ್ದುದು ಉದ್ಯೋಗ ಪ್ರಣೀತ ಅಭಿವೃದ್ಧಿ ಯೋಜನೆ. ಇಂದು ದೇಶ ಹಿಂದೆಂದೂ ಕಾಣದಂತಹ ಅತ್ಯಂತ ತೀವ್ರತರನಾದ ನಿರುದ್ಯೋಗವನ್ನು ಎದುರಿಸುತ್ತಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್‌ಐಈ) ಪ್ರಕಾರ ಡಿಸೆಂಬರ್ 2021ರಲ್ಲಿದ್ದ ನಿರುದ್ಯೋಗಿಗಳ ಸಂಖ್ಯೆ 530 ಲಕ್ಷ. ಇವರಲ್ಲಿ ಮಹಿಳೆಯರ ಸಂಖ್ಯೆ 170 ಲಕ್ಷ. ಈ ಜ್ವಲಂತ ಸಮಸ್ಯೆಯನ್ನು ಎದುರಿಸುವ ಬಗ್ಗೆ ಬಜೆಟ್ಟಿನಲ್ಲಿ ಯಾವುದೇ ನಿರ್ದಿಷ್ಟ ಕಾರ್ಯಕ್ರಮಗಳಿಲ್ಲ. ಈ ಬಜೆಟ್ಟು ಆಕರ್ಷಣೀಯ ಶಬ್ದಾಡಂಬರಗಳಿಂದ ಕೂಡಿದ ಒಂದು ಕಡತವಾಗಿದೆ. ಸದ್ಯದ ಅಗತ್ಯಗಳಿಗಿಂತ ಈ ಬಜೆಟ್ ಮುಂದಿನ 25 ವರ್ಷಗಳ ಭವಿಷ್ಯದ ಬಗ್ಗೆ ಮಾತನಾಡುತ್ತದೆ. ಅಮೃತ ಮಹೋತ್ಸವ 2022ಕ್ಕಿಂತ ಅಮೃತ ಕಾಲದ(2047)ಬಗ್ಗೆ ಇದು ಹೆಚ್ಚು ಕಾಳಜಿ ವಹಿಸಿರುವಂತೆ ಕಾಣುತ್ತದೆ.

ಈ ಬಜೆಟ್ಟಿನಲ್ಲಿ ವಿಚಾರಕ್ಕೆ (ಸಿದ್ಧಾಂತ-ಜ್ಞಾನ) ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ವಿನಾ ಆಚಾರಕ್ಕೆ (ಕ್ರಿಯೆ-ಚಟುವಟಿಕೆಗಳಿಗೆ) ಕ್ರಿಯಾಯೋಜನೆಗೆ ಹೆಚ್ಚಿನ ಒತ್ತು ನೀಡಿಲ್ಲ. ಅಮುಗೆ ದೇವಯ್ಯ ಎನ್ನುವ ವಚನಕಾರ ಇಂಥದ್ದನ್ನು ’ಕ್ರಿಯೆಯಿಲ್ಲದ ಜ್ಞಾನ ವಾಗ್ಜಾಲ ಭ್ರಾಂತು’ ಎನ್ನುತ್ತಾನೆ. ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2022-23ರ ಬಜೆಟ್ಟು ಒಂದು ವಾಗ್ಜಾಲ ಕಂತೆಯಾಗಿದೆ. ಉದಾ: ಸಬ್ ಕಾ ಪ್ರಯಾಸ್, ಪಿಎಮ್ ಗತಿಶಕ್ತಿ, ಅಮೃತ ಕಾಲ, ಕವಚ, ಸಾಗರಮಾಲಾ, ಪರ್ವತಮಾಲಾ, ಆತ್ಮನಿರ್ಭರ್‌ಭಾರತ್ ಪಿಎಮ್-ಡಿವೈನ್ (ಪ್ರೈಮ್ ಮಿನಿಸ್ಟರ್ ಡೆವಲಪ್‌ಮೆಂಟ್ ಇನಿಶಿಯೇಟಿವ್ ಫಾರ್ ನಾರ್ಥ್ ಈಸ್ಟ್), ಡಿಜಿಟಲ್ ಭಾರತ್, ಡಿಜಿಟಲ್ ವಿಶ್ವವಿದ್ಯಾಲಯ, ಡಿಜಿಟಲ್ ಕರೆನ್ಸಿ ಮುಂತಾದ ಆಕರ್ಷಣೀಯ ಪದಪುಂಜಗಳು ಬಜೆಟ್ಟಿನ ತುಂಬಾ ತುಂಬಿಕೊಂಡಿವೆ. ಈ ಬಜೆಟ್ಟಿನಲ್ಲಿ ’ಸದ್ಯ’ದ ಅಗತ್ಯಗಳಿಗಿಂತ ಮುಂದಿನ ’ಮೂರು ವರ್ಷ’, ಮುಂದಿನ ’ಐದು ವರ್ಷ’, ಮುಂದಿನ ’ಇಪ್ಪತೈದು ವರ್ಷ’ಗಳ ಬಗ್ಗೆ ಹೆಚ್ಚು ಮಾತನಾಡಲಾಗಿದೆ. ನಿದರ್ಶನವಾಗಿ ವಿತ್ತಮಂತ್ರಿಯ ಈ ಮಾತುಗಳನ್ನು ನೋಡಿ:

’ಆತ್ಮ ನಿರ್ಭರ ಭಾರತ ನಿರ್ಮಾಣಕ್ಕಾಗಿ ಕಾರ್ಯಕ್ಷಮತೆ ಆಧಾರದಲ್ಲಿ ಜೋಡಿಸಿದ 14 ವಲಯಗಳ ಸಂಯುಕ್ತ ಕಾರ್ಯಕ್ರಮಕ್ಕೆ ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿ 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ರೂ. 30 ಲಕ್ಷ ಕೋಟಿ ಮೌಲ್ಯದ ಉತ್ಪಾದನೆ ಮಾಡುವ ಸಂಭಾವ್ಯ ಸಾಮರ್ಥ್ಯವಿದೆ’ (ಬಜೆಟ್ 2022-23ರ ಭಾಷಣದ ಪ್ಯಾರ: 10). ಸಂಭಾವ್ಯ ಸಾಮರ್ಥ್ಯದ ಬಜೆಟ್ಟು ಇದಾಗಿದೆ.

ಇಂತಹ ಅನೇಕ ಮಾತುಗಳನ್ನು ಬಜೆಟ್ಟಿನಲ್ಲಿ ನೋಡಬಹುದು. ಅಂದಮೇಲೆ ಬಜೆಟ್ಟಿನ ಉದ್ಯೋಗದ ಗುರಿ ವಾರ್ಷಿಕ 20 ಲಕ್ಷ ಮಾತ್ರ. ಜಾನ್ ಮನಿಯಾರ್ಡ್ ಕೀನ್ಸ್ ಎನ್ನುವ ಬ್ರಿಟಿಷ್ ಅರ್ಥವಿಜ್ಞಾನಿ 1930ರ ದಶಕದಲ್ಲಿ ಪ್ರಕಟಿಸಿದ ’ಜನರಲ್ ಥಿಯರಿ ಆಫ್ ಎಂಪ್ಲಾಯಮೆಂಟ್, ಇಂಟರೆಸ್ಟ್ ಆಂಡ್ ಮನಿ’ ಕೃತಿಯಲ್ಲಿ ಹೇಳಿರುವಂತೆ ’ದೀರ್ಘಾವಧಿ ಎನ್ನುವುದು ಸದ್ಯದ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ದಿಶೆಯಲ್ಲಿ ದಾರಿ ತಪ್ಪಿಸುವ ಮಾರ್ಗದರ್ಶನವಾಗಿದೆ. ದೀರ್ಘಾವಧಿಯಲ್ಲಿ ನಾವೆಲ್ಲರು ಸತ್ತಿರುತ್ತೇವೆ’. ದೀರ್ಘಾವಧಿ ಎನ್ನುವುದು (ನಾಳೆ ಎಂಬಂತೆ) ಬರುವುದೇ ಇಲ್ಲ. ’ಸದ್ಯ’ವನ್ನು ಮರೆತು ’ನಾಳಿ’ನ ಬಗ್ಗೆ ಚಿಂತಿಸುವ ಒಂದು ಬಜೆಟ್ ಇದಾಗಿದೆ. ಬಜೆಟ್ಟೆನ್ನುವುದು ಒಂದು ವಾರ್ಷಿಕ ಆರ್ಥಿಕ – ಹಣಕಾಸು ಚಟುವಟಿಕೆಯಾಗಿದೆ. ಇದರಲ್ಲಿ ಮೂರು ವರ್ಷ, ಐದು ವರ್ಷ, 25 ವರ್ಷ ಎನ್ನುವುದಕ್ಕೆ ಅರ್ಥವಿಲ್ಲ. ಈ ಸರ್ಕಾರವು ಹಾಕಿಕೊಂಡ ಕಾಲಬದ್ಧ ಕಾರ್ಯಕ್ರಮಗಳೆಲ್ಲವೂ ವಿಫಲವಾಗಿವೆ. ಉದಾ: 2022ರಲ್ಲಿ ರೈತರ ವರಮಾನ ದುಪ್ಪಟ್ಟು ಮಾಡುವುದು (ಇದು ನಡೆದಿಲ್ಲ), 2024-25ರಲ್ಲಿ ದೇಶದ ವರಮಾನವನ್ನು 5 ಟ್ರಿಲಿಯನ್ ಡಾಲರ್ ಮಾಡುವುದು (ಇದು ನಡೆಯುವ ಸೂಚನೆಯಿಲ್ಲ), ವರ್ಷಕ್ಕೆ 2 ಕೋಟಿ ಉದ್ಯೋಗಗಳು, ಪ್ರತಿಯೊಬ್ಬ ಭಾರತೀಯನ ಖಾತೆಗೆ ರೂ 15 ಲಕ್ಷ ತುಂಬುವುದು ಇತ್ಯಾದಿ. ಭರವಸೆಗಳಿಂದ ದುಡಿಮೆಗಾರರ ಹೊಟ್ಟೆ ತುಂಬುವುದಿಲ್ಲ ತಾನೇ!

ಒಕ್ಕೂಟ ಬಜೆಟ್ 2022-23: ಆಯ್ದ ಆತಂಕಕಾರಿ ಸಂಗತಿಗಳು

1. ಉಳ್ಳವರ ಹಿತಾಸಕ್ತಿಗಳನ್ನು ಭದ್ರಪಡಿಸುವ ಮತ್ತು ಉಳಿದವರ ಬದುಕನ್ನು ಅಭದ್ರಗೊಳಿಸುವ ಬಜೆಟ್ ಇದಾಗಿದೆ. ಈ ಬಜೆಟ್ಟಿನಲ್ಲಿ ಉಳಿದವರ ಮೇಲಿನ ಪ್ರತಿಗಾಮಿ ಪರೋಕ್ಷ ತೆರಿಗೆಗಳನ್ನು (ಜಿಎಸ್‌ಟಿ) ಏರಿಸಲಾಗುತ್ತಿದೆ. ಉಳ್ಳವರ ಮೇಲಿನ ತೆರಿಗೆಗಳನ್ನು ಏರಿಸದೆ ಸ್ಥಿರವಾಗಿಟ್ಟುಕೊಳ್ಳಲಾಗಿದೆ. ಜಿಎಸ್‌ಟಿ ತೆರಿಗೆ ಸಂಗ್ರಹ ಜನವರಿ 2022ರಲ್ಲಿ ರೂ. 1.40 ಲಕ್ಷ ಕೋಟಿಯಾಗಿದೆ ಎನ್ನುವದನ್ನೇ ಸರ್ಕಾರವು ತನ್ನ ದೊಡ್ಡ ಸಾಧನೆಯನ್ನಾಗಿ ಹೇಳಿಕೊಳ್ಳುತ್ತಿದೆ. ರೂ. 1.40 ಲಕ್ಷ ಕೋಟಿ ಜಿಎಸ್‌ಟಿ- ಪರೋಕ್ಷ ತೆರಿಗೆಯು ಬಡವರ ಮೇಲೆ ಹೇರಿದ ಹೆಚ್ಚಿನ ಹೊರೆಯಾಗಿದೆ. ಒಕ್ಕೂಟದ ಬಜೆಟ್ಟಿಗೆ ವರಮಾನ ತೆರಿಗೆಯ ಪ್ರಮಾಣ 2022-23ರಲ್ಲಿ ಶೇ.15ರಷ್ಟಿದ್ದರೆ ಜಿಎಸ್‌ಟಿ ಪ್ರಮಾಣ ಶೇ.16. ವರಮಾನ ತೆರಿಗೆಯು ಉಳ್ಳವರು ನೀಡುವ ತೆರಿಗೆ. ಜಿಎಸ್‌ಟಿ ಎಲ್ಲರೂ ನೀಡುವ ತೆರಿಗೆ. ಇದು ಉಳಿದವರ ಮೇಲೆ ಹೆಚ್ಚು ಭಾರ ಹೊರಿಸುತ್ತದೆ.

ಉದಾ: ಗ್ರಾಮೀಣ ಪ್ರದೇಶದ ಒಬ್ಬ ದಲಿತ ಹೆಣ್ಣು ಮಗಳು ಸೋಪನ್ನು ಕೊಳ್ಳುವಾಗ ಎಷ್ಟು ಜಿಎಸ್‌ಟಿ ಕಟ್ಟುತ್ತಾಳೋ ಅಷ್ಟೇ ಜಿಎಸ್‌ಟಿ ಮುಖೇಶ್ ಅಂಬಾನಿ ಕೂಡ ಕಟ್ಟುತ್ತಾನೆ. ಆದರೆ
ತೆರಿಗೆ ನೀಡುವ ಸಾಮರ್ಥ್ಯವು ಅಂಬಾನಿಗೆ (ಇವನ 2022ರ ಸಂಪತ್ತು ರೂ.6.6 ಲಕ್ಷ ಕೋಟಿ) ಅಧಿಕವಾಗಿದ್ದರೆ ಗ್ರಾಮೀಣ ದಲಿತ ಮಹಿಳೆಯ ತೆರಿಗೆ ನೀಡುವ ಸಾಮರ್ಥ್ಯ (ಇವಳ ಸಂಪತ್ತು ಶೂನ್ಯ) ನಿಕೃಷ್ಟವಾಗಿರುತ್ತದೆ. ಆದರೆ ಇಬ್ಬರಿಗೂ ಜಿಎಸ್‌ಟಿ ಸಮನಾಗಿರುತ್ತದೆ. ಕೆಳಗಿನ ಕೋಷ್ಟಕದಲ್ಲಿ ನೇರ ಮತ್ತು ಪರೋಕ್ಷ ತೆರಿಗೆಗಳ ಪ್ರಮಾಣವನ್ನು ನೀಡಲಾಗಿದೆ.

ಸರಿಸುಮಾರು ನೇರ ಮತ್ತು ಪರೋಕ್ಷ ತೆರಿಗೆಗಳ ಪ್ರಮಾಣ ಸಮನಾಗಿದೆ. ಶ್ರೀಮಂತರು-ಉದ್ಯಮಪತಿಗಳು (ಉಳ್ಳವರು) ಹಾಗೂ ಉಳಿದವರ ನಡುವೆ ತೆರಿಗೆ ದೃಷ್ಟಿಯಿಂದ ವ್ಯತ್ಯಾಸವೇ ಇಲ್ಲಿ ಇದ್ದಂತೆ ಕಾಣುವುದಿಲ್ಲ. ನಮ್ಮದು ’ಪ್ರತಿಗಾಮಿ’ ಮತ್ತು ’ಬಡವರ ರಕ್ತ ಹೀರುವ’ ತೆರಿಗೆ ವ್ಯವಸ್ಥೆಯಾಗಿದೆ.

2. ಸಮಾಜದಲ್ಲಿ ಯಾರನ್ನು ’ಉಳಿದವರು’ ಎಂದು ಕರೆಯುತ್ತೇವೆಯೋ ಅವರಿಗೆ ಸಂಬಂಧಿಸಿದ ಜನೋಪಯೋಗಿ ಕಾರ್ಯಕ್ರಮಗಳ ಮೇಲಿನ ಅನುದಾನವನ್ನು ತೀವ್ರತರವಾಗಿ 2022-23ರ ಬಜೆಟ್ಟಿನಲ್ಲಿ ಕಡಿತ ಮಾಡಲಾಗಿದೆ. ಕೆಲವೊಂದು ಬಾಬ್ತುಗಳಲ್ಲಿ ಹಿಂದಿನ ವರ್ಷದಷ್ಟೇ ಇಟ್ಟುಕೊಂಡಿದೆ. ಈ ದೇಶದ ಬಡವರ, ಕಾರ್ಮಿಕರ, ಪ.ಜಾ., ಪ.ಪಂ., ಒಬಿಸಿ., ಅಲ್ಪಸಂಖ್ಯಾತ ಜನವರ್ಗಕ್ಕೆ ಬದುಕನ್ನು ನೀಡುತ್ತಿರುವ ಎರಡು ಕಾರ್ಯಕ್ರಮಗಳೆಂದರೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಮತ್ತೊಂದು ಮಹಾತ್ಮ ಗಾಂದಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ (ನರೆಗ). ಇವೆರಡೂ ಕಾರ್ಯಕ್ರಮಗಳ ಬಗ್ಗೆ ಇಂದಿನ ಸರ್ಕಾರಕ್ಕೆ ತಿರಸ್ಕಾರವಿದೆ.

3. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಸಹಾಯಧನ 2020-21ರಲ್ಲಿ ರೂ. 4.62 ಲಕ್ಷ ಕೋಟಿಯಿದ್ದುದ್ದನ್ನು 2021-22ರಲ್ಲಿ ರೂ. 2.01 ಲಕ್ಷ ಕೋಟಿಗೆ ಮತ್ತು 2022-23ರಲ್ಲಿ ರೂ. 1.46 ಲಕ್ಷ ಕೋಟಿಗೆ ಕಡಿತ ಮಾಡಲಾಗಿದೆ. ಅಂದರೆ 2020-21ರಿಂದ 2021-22ರಲ್ಲಿ ಕಡಿತ ಶೇ. 52.37 ರಷ್ಟಾಗಿದ್ದರೆ 2021-22 ರಿಂದ 2022-23ರಲ್ಲಿ ಕಡಿತ ಶೇ.30.81 ರಷ್ಟಾಗಿದೆ.

4. ಪಡಿತರಕ್ಕಾಗಿ ಆಹಾರ ಸಂಗ್ರಹಣೆಗೆ (ಪ್ರೊಕ್ಯೂರ್‌ಮೆಂಟ್) ನೀಡಿರುವ ಅನುದಾನ 2020-21ರಲ್ಲಿ ರೂ.78337 ಕೋಟಿಯಾಗಿದ್ದರೆ ಇದು 2021-22ರಲ್ಲಿ ರೂ. 75290 ಕೋಟಿಗೆ ಮತ್ತು 2022-23ರಲ್ಲಿ ರೂ. 60661 ಕೋಟಿಗೆ ಇಳಿದಿದೆ. ಇಲ್ಲಿನ ಕಡಿತ ಕ್ರಮವಾಗಿ ಶೇ. 3.89 ಮತ್ತು ಶೇ. 19.43 ರಷ್ಟಾಗಿದೆ.

5. ಒಟ್ಟು ಆಹಾರ ಸಬ್ಸಿಡಿ 2020-21ರಲ್ಲಿ ರೂ. 5.41 ಲಕ್ಷ ಕೋಟಿಯಿದ್ದುದು 2021-22ರಲ್ಲಿ ರೂ. 2.86 ಲಕ್ಷ ಕೋಟಿಗೆ ಮತ್ತು 2022-23ರಲ್ಲಿ ರೂ. 2.07 ಲಕ್ಷ ಕೋಟಿಗೆ ಕಡಿತ ಮಾಡಲಾಗಿದೆ. ಇಲ್ಲಿನ ಕಡಿತ ಕ್ರಮವಾಗಿ ಶೇ. 47.13 ಮತ್ತು ಶೇ.27.62 ರಷ್ಟಾಗಿದೆ.

6. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ ಕಾರ್ಯಕ್ರಮಕ್ಕೆ 2020-21ರಲ್ಲಿ ಅನುದಾನ ರೂ.1.11 ಲಕ್ಷ ಕೋಟಿಯಿದ್ದುದು 2021-22ರಲ್ಲಿ ರೂ. 98000 ಕೋಟಿಗೆ ಮತ್ತು 2022-23ರಲ್ಲಿ ರೂ.73000 ಕೋಟಿಗೆ ಇಳಿಸಲಾಗಿದೆ.

7. ರಾಷ್ಟ್ರೀಯ ಸಾಮಾಜಿಕ ಭದ್ರತಾ ಕಾರ್ಯಕ್ರಮದ ಅನುದಾನವು 2019-20ರಲ್ಲಿ ರೂ. 42443 ಕೋಟಿಯಿತ್ತು. ಆದರೆ ಇದು 2022-23ರಲ್ಲಿ ರೂ. 9652 ಕೋಟಿಗಿಳಿದಿದೆ. ಇಲ್ಲಿನ ಅನುದಾನದ ಕಡಿತ ಶೇ. (-)77.25. ಇದು ದೇಶದ ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ ಮತ್ತು ವಿಧವೆಯರಿಗೆ ಪಿಂಚಣಿ ನೀಡುವ ಕಾರ್ಯಕ್ರಮವಾಗಿದೆ.

8. ಪರಿಶಿಷ್ಟ ಜಾತಿ ಉಪಯೋಜನೆಗೆ ನೀಡಿದ್ದ ಅನುದಾನವು 2020-21 ಮತ್ತು 2021-22ರ ನಡುವೆ ಶೇ.94.89ರಷ್ಟು ಏರಿಕೆಯಾಗಿದ್ದರೆ 2021-22 ರಿಂದ 2022-23ರ ನಡುವೆ ಏರಿಕೆ ಕೇವಲ ಶೇ. 1.71. ಇದೇ ರೀತಿಯಲ್ಲಿ ಬುಡಕಟ್ಟು ಉಪಯೋಜನೆ ಅನುದಾನ 2020-21 ಮತ್ತು 2021-22ರ ನಡುವೆ ಶೇ.76.95ರಷ್ಟು ಏರಿಕೆಯಾಗಿದ್ದರೆ 2021-22 ಮತ್ತು 2022-23ರ ನಡುವಿನ ಏರಿಕೆ ಕೇವಲ ಶೇ. 2.05.

9. ಒಟ್ಟು ರೆವಿನ್ಯೂ ವೆಚ್ಚವು 2021-22ರಲ್ಲಿ ರೂ. 3.17 ಲಕ್ಷ ಕೋಟಿಯಿದ್ದುದು 2022-23ರಲ್ಲಿ ರೂ. 3.19 ಲಕ್ಷ ಕೋಟಿಯಾಗಿದೆ. ಇಲ್ಲಿನ ಏರಿಕೆ ನಿಕೃಷ್ಟವಾಗಿದೆ (ಶೇ.0.63). ಜನರ ಅನುಭೋಗ ವೆಚ್ಚವನ್ನು ಬಲಪಡಿಸುವ ಸಾಮರ್ಥ್ಯವುಳ್ಳ ರೆವಿನ್ಯೂ ವೆಚ್ಚದಲ್ಲಿ ತೀವ್ರ ಏರಿಕೆಯಾಗಿಲ್ಲ.

10. ಬಂಡವಾಳ ವೆಚ್ಚ 2021-22ರಲ್ಲಿ ರೂ. 5.54 ಲಕ್ಷ ಕೋಟಿಯಿದ್ದುದು 2022-23ರಲ್ಲಿ ರೂ. 7.5 ಲಕ್ಷ ಕೋಟಿಯಾಗಿದೆ. ಆದರೆ ಇಲ್ಲಿ ಅನೇಕ ಸಮಸ್ಯೆಗಳಿವೆ. ರಾಜ್ಯಗಳಿಗೆ ಬಂಡವಾಳ ವೆಚ್ಚಕ್ಕಾಗಿ ರೂ. 1 ಲಕ್ಷ ಕೋಟಿ ಬಡ್ಡಿ-ಮುಕ್ತ ಅನುದಾನ ನೀಡಲಾಗಿದೆ. ತೀವ್ರ ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿರುವ ರಾಜ್ಯಗಳು ಇದನ್ನು ಬಂಡವಾಳ ವೆಚ್ಚಕ್ಕೆ ಬಳಸುವುದರ ಬಗ್ಗೆ ಅನುಮಾನವಿದೆ. ಮೇಲಾಗಿ ರೂ. 1 ಲಕ್ಷ ಕೋಟಿಯಲ್ಲಿ ಪ್ರತಿರಾಜ್ಯಕ್ಕೆ ದೊರೆಯುವ ಹಣ ರೂ.3571.43 ಕೋಟಿ. ಇದರಿಂದ ಬಹಳಷ್ಟು ನಿರೀಕ್ಷಿಸುವುದು ಸಾಧ್ಯವಿಲ್ಲ.

ಹೀಗೆ ಅನುದಾನ ಕಡಿತವಾಗಿರುವ ಕಾರ್ಯಕ್ರಮಗಳೆಲ್ಲವೂ ಬಡವರ, ದುಡಿಮೆಗಾರರ, ಮಹಿಳೆಯರ, ದಲಿತರ ಮತ್ತು ಆದಿವಾಸಿಗಳ ಹಾಗೂ ಅಲ್ಪಸಂಖ್ಯಾತರ ಬದುಕನ್ನು ಕಾಪಿಡುತ್ತಿದ್ದ ಕಾರ್ಯಕ್ರಮಗಳು.

ಒಂದು ಕಡೆ ಭಾರಿ ಶ್ರೀಮಂತರ ಮೇಲೆ ಸರ್ಕಾರವು (ನೇರ)ತೆರಿಗೆಪ್ರಮಾಣವನ್ನು ಹೆಚ್ಚಿಸುತ್ತಿಲ್ಲ. ಆದರೆ ಬಡವರ, ಕಾರ್ಮಿಕರ, ಮಹಿಳೆಯರ, ದಲಿತರ, ಆದಿವಾಸಿಗಳ ಮತ್ತು ಅಲ್ಪಸಂಖ್ಯಾತರ ಬದುಕನ್ನು ಸಂರಕ್ಷಿಸುವ ಕಾರ್ಯಕ್ರಮಗಳಿಗೆ ಅನುದಾನವನ್ನು ಕಡಿತ ಮಾಡಲಾಗಿದೆ ಮತ್ತು ಇವರಿಗೆ ಅತಿಯಾಗಿ ಭಾರವಾಗುವ ಜಿಎಸ್‌ಟಿಯನ್ನು ಹೆಚ್ಚಿಸಲಾಗುತ್ತಿದೆ. ಉದಾ: ಒಕ್ಕೂಟ ಸರ್ಕಾರ 2022-23ರ ವರಮಾನ ತೆರಿಗೆಯಿಂದ ರೂ.7.00 ಲಕ್ಷ ಕೋಟಿ ಸಂಗ್ರಹಿಸಿದ್ದರೆ, ಜಿಎಸ್‌ಟಿ ಸಂಗ್ರಹ ರೂ.7.8 ಲಕ್ಷ ಕೋಟಿ.

ಅಸಮಾನತೆಯೆಂಬ ಆರ್ಥಿಕ ದೌರ್ಜನ್ಯ

ಜನವರಿ 17, 2022ರಂದು ಆಕ್ಸ್‌ಫಾಮ್ ಇಂಟರ್‌ನ್ಯಾಷನಲ್ ಸಂಸ್ಥೆಯು ಬಿಡುಗಡೆ ಮಾಡಿರುವ 2022ರ ಜಾಗತಿಕ ’ಅಸಮಾನತೆ ವರದಿ’ಯನ್ನು, ಅದು ’ಅಸಮಾನತೆ ಕೊಲ್ಲುತ್ತದೆ’ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದೆ. ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಅಸಮಾನತೆಯನ್ನು ಅದು ’ಆರ್ಥಿಕ ದೌರ್ಜನ್ಯ’ ಎಂದು ಕರೆದಿದೆ. ಈ ವರದಿಯು ಭಾರತದನ್ನು ’ಭಾರಿ ಅಸಮಾನತೆಯ ದೇಶ’ ಎಂದು ವರ್ಣಿಸಿದೆ. ಏಕೆಂದರೆ ಕೋವಿಡ್ ಮಹಾಮಾರಿ ಆಕ್ರಮಣದ ಅವಧಿಯಲ್ಲಿ ಗೌತಮ್ ಆದಾನಿಯ ವರಮಾನ 8 ಪಟ್ಟು ಹೆಚ್ಚಿದೆ. ಮುಖೇಶ್ ಅಂಬಾನಿಯು ಪೆಂಡಮಿಕ್ ಸಂದರ್ಭದಲ್ಲಿಯೂ ಗಂಟೆಗೆ ರೂ 90 ಕೋಟಿ ಸಂಪಾದಿಸುತ್ತಾ 2022ರಲ್ಲಿ ರೂ. 6.6 ಲಕ್ಷ ಕೋಟಿ ಸಂಪತ್ತಿನ ಒಡೆಯನಾಗಿದ್ದಾನೆ. ನಮ್ಮ ಶ್ರೇಣೀಕೃತ ಸಮಾಜದ ಮೇಲುಸ್ತರದ ಶೇ.10ರಷ್ಟು ಜನರು ದೇಶದ ಸಂಪತ್ತಿನಲ್ಲಿ ಶೇ.57ರಷ್ಟು ನುಂಗಿನೊಣೆಯುತ್ತಿದ್ದರೆ ಸಾಮಾಜಿಕ ಪಿರಮಿಡ್‌ನ ಕೆಳಸ್ತರದ ಶೇ.50ರಷ್ಟು ಜನರು ಸಂಪತ್ತಿನಲ್ಲಿ ಶೇ.13ರಷ್ಟನ್ನು ಮಾತ್ರ ಪಡೆಯುತ್ತಿದ್ದಾರೆ. ನಮ್ಮ ದೇಶದ ಅತಿ ಶ್ರೀಮಂತ 98 ಭಾರತೀಯರ ಸಂಪತ್ತು ಕೆಳಸ್ತರದ 55.2 ಕೋಟಿ ಜನರ ಸಂಪತ್ತಿಗೆ ಸಮನಾಗಿದೆ. ಭಾರತದಲ್ಲಿ ಬಿಲಿಯನರುಗಳ ಸಂಖ್ಯೆಯು 2021ರಲ್ಲಿ 102ರಿಂದ 2022ರಲ್ಲಿ 142ಕ್ಕೇರಿದೆ. ಅತಿಶ್ರೀಮಂತ 100 ಕುಟುಂಬಗಳ ಸಂಪತ್ತು ರೂ. 57.3 ಲಕ್ಷಕೋಟಿಯಾಗಿದೆ. ಈ ಸುಖಲೋಲುಪತೆಯಲ್ಲಿ ಮೆರೆಯುತ್ತಿರುವ ವರ್ಗದ ಮೇಲಿನ ತೆರಿಗೆ ದರಗಳನ್ನು ಏರಿಸುತ್ತಿಲ್ಲ. ಉದಾ: 2022-23ರಲ್ಲಿ ಒಕ್ಕೂಟ ಸರ್ಕಾರದ ತೆರಿಗೆ ರಾಶಿಯಲ್ಲಿ ಪ್ರತ್ಯಕ್ಷ ತೆರಿಗೆಗಳ ಪಾಲು ಶೇ.30ರಷ್ಟಿದ್ದರೆ ಪರೋಕ್ಷ ತೆರಿಗೆಗಳ ಪಾಲು ಶೇ.28ರಷ್ಟಿದೆ. ಎರಡೂ ತೆರಿಗೆಗಳ ನಡುವೆ ಬಹಳ ವ್ಯತ್ಯಾಸವೇನಿಲ್ಲ. ವರಮಾನ ತೆರಿಗೆ ಪಾಲು ಶೇ.15 ರಷ್ಟಿದ್ದರೆ ಜಿಎಸ್‌ಟಿ ಪಾಲು ಶೇ.16 ರಷ್ಟಿದೆ (ವಿವರಗಳಿಗೆ ನೋಡಿ: ಕೋಷ್ಟಕ 1)

ಇಂಗ್ಲಿಷ್ ಅಕ್ಷರ ’ಕೆ’ ವಿನ್ಯಾಸದ ಆರ್ಥಿಕ ಪುನಶ್ಚೇತನ

ಕೋವಿಡ್-2ನೆಯ ಅಲೆಯ ನಂತರ 2021-22ರಲ್ಲಿ ನಿಧಾನವಾಗಿ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಕೋವಿಡ್ 3ನೆಯ ಅಲೆಯಿಂದಾಗಿ ಆರ್ಥಿಕ ಬೆಳವಣಿಗೆ ಮಂದವಾಗಿರುವ ಸಾಧ್ಯತೆಯಿದೆ. ಆರ್ಥಿಕ ಸಮೀಕ್ಷೆ 2021-22ರಲ್ಲಿ ಅಂದಾಜು ಮಾಡಿರುವಂತೆ 2021-22ರಲ್ಲಿ ಜಿಡಿಪಿ ಬೆಳವಣಿಗೆ ಶೇ.9.5ರಷ್ಟಾಗುವ ಸಾಧ್ಯತೆಯಿದೆ. ಅಂದರೆ ಆರ್ಥಿಕ ಚೇತರಿಕೆ ನಡೆಯುತ್ತಿದೆ. ಆದರೆ ಈ ಪುನಶ್ಚೇತನವು ಆಶಾದಾಯಕವಾಗಿ ಕಂಡುಬರುತ್ತಿಲ್ಲ. ಅನೇಕ ಮಾರುಕಟ್ಟೆ ತಜ್ಞರು ಹಾಗೂ ಅರ್ಥಶಾಸ್ತ್ರಜ್ಞರು ಭಾರತದಲ್ಲಿ ಇಂದು ನಡೆಯುತ್ತಿರುವ ಆರ್ಥಿಕ ಪುನಶ್ಚೇತನ ಎಷ್ಟೇ ಮಂದವಾಗಿರಲಿ, ಅದನ್ನು ಅಸಮಾನತೆಯ ಪುನಶ್ಚೇತನ ಎಂದು ಕರೆಯುತ್ತಿದ್ದಾರೆ. ಇದನ್ನು ಇಂಗ್ಲಿಷ್ ಅಕ್ಷರದ ’ಕೆ’ ರೀತಿಯಲ್ಲಿದೆ ಎನ್ನುತ್ತಿದ್ದಾರೆ. ಅಂದರೆ ’ಕೆ’ ಅಕ್ಷರದ ಎಡ ಭಾಗದಲ್ಲಿನ ಒಂದು ಕೈಯಿ ಮೇಲ್ಮುಖಿಯಾಗಿದ್ದರೆ ಮತ್ತೊಂದು ಕೈಯಿ ಕೆಳಮುಖಿಯಾಗಿದೆ. ನಮ್ಮ ಆರ್ಥಿಕತೆಯಲ್ಲಿ ಐಟಿ ಕಂಪನಿಗಳು, ತಂತ್ರಜ್ಞಾನ ಘಟಕಗಳು, ಈ-ಕಾರ್ಮಸ್ ಕಂಪನಿಗಳು, ಬೃಹತ್ ಬಂಡವಾಳದ ಉದ್ದಿಮೆಗಳು ಹೆಚ್ಚುಹೆಚ್ಚು ಲಾಭ ಮಾಡಿಕೊಳ್ಳುತ್ತಿವೆ ಮತ್ತು ಆರ್ಥಿಕ ರಚನೆಯಲ್ಲಿನ ಉನ್ನತ ವರ್ಗಗಳ ವರಮಾನ ಏರಿಕೆಯಾಗುತ್ತಿದೆ. ’ಕೆ’ ಅಕ್ಷರದ ಮೇಲ್ಮುಖಿ ಕೈಯಿ ಇದನ್ನು ಪ್ರತಿನಿಧಿಸುತ್ತಿದ್ದರೆ ಕೆಳಮುಖಿ ಕೈಯಿ ನೆಲಕಚ್ಚಿರುವ ’ಎಮ್‌ಎಸ್‌ಎಮ್‌ಈ’ (ಇದರಲ್ಲಿ 12 ಕೋಟಿ ಜನರ ಬದುಕು ಅಡಗಿದೆ), ಕೆಲಸ ಕಳೆದುಕೊಂಡಿರುವ, ವರಮಾನ ಕುಸಿದಿರುವ ಅಸಂಘಟಿತ ವಲಯದ ಕಾರ್ಮಿಕರು, ರೈತಾಪಿ ವರ್ಗವನ್ನು, ಅತಂತ್ರದಲ್ಲಿರುವ ಶಿಕ್ಷಣ ವಲಯಗಳನ್ನು ಪ್ರತಿನಿಧಿಸುತ್ತದೆ. ಇದಕ್ಕೆ ತಜ್ಞರು ವಾಹನಗಳ ಮಾರಾಟದ ನಿದರ್ಶನ ನೀಡುತ್ತಾರೆ. ಉದಾ: ನಾಲ್ಕು ಚಕ್ರ ವಾಹನಗಳ ಮಾರಾಟವು 2021-22ರ ಪುನಶ್ಚೇತನದ ಸಂದರ್ಭದಲ್ಲಿ ತೀವ್ರ ಏರಿಕೆಯಾಗುತ್ತಿದ್ದರೆ ದ್ವಿಚಕ್ರ ವಾಹನಗಳ ಮಾರಾಟವು ಕುಸಿತವನ್ನು ಅನುಭವಿಸುತ್ತಿದೆ. ದ್ವಿಚಕ್ರ ವಾಹನಗಳ ಮಾರಾಟವು ಮಧ್ಯಮವರ್ಗವನ್ನು, ಗ್ರಾಮೀಣ ಯುವಕ-ಯುವತಿಯರನ್ನು ಪ್ರತಿನಿಧಿಸಿದರೆ ನಾಲ್ಕು ಚಕ್ರದ ವಾಹನಗಳು ಶ್ರೀಮಂತರನ್ನು, ಉನ್ನತ ವರ್ಗವನ್ನು ಪ್ರತಿನಿಧಿಸುತ್ತದೆ. ಈ ಬಗೆಯಲ್ಲಿ ನಡೆಯುತ್ತಿರುವ ಅಸಮಾನತೆಯ ಪುನಶ್ಚೇತನವನ್ನು ಆಕ್ಸ್‌ಫಾಮ್ ಸಂಸ್ಥೆಯು ತನ್ನ 2022ರ ಅಸಮಾನತೆ ವರದಿಯಲ್ಲಿ ’ಆರ್ಥಿಕ ದೌರ್ಜನ್ಯ’ ಎಂದು ಕರೆದಿದೆ.

ಅತ್ಯಂತ ದುರದೃಷ್ಟದ ಸಂಗತಿಯೆಂದರೆ ಇಂತಹ ’ಕೆ’ ಆಕಾರದ ಪುನಶ್ಚೇತನದಲ್ಲಿನ ಅಸಮಾನತೆಯ ಕ್ರೂರ ಪರಿಣಾಮಗಳನ್ನು ಆರ್ಥಿಕ ಸಮೀಕ್ಷೆಯಾಗಲಿ ಅಥವಾ ಬಜೆಟ್ಟಾಗಲಿ ಗುರುತಿಸಿಲ್ಲ. ಈ ಬಗೆಯ ಅಸಮಾನತೆಯಿಂದ ಕೂಡಿದ ಆರ್ಥಿಕ ಪುನಶ್ಚೇತನವನ್ನು ಸರಿದಾರಿಗೆ ತರುವ ಕ್ರಮಗಳನ್ನು 2022-23ರ ಬಜೆಟ್ಟಿನಲ್ಲಿ ತೆಗೆದುಕೊಂಡಿಲ್ಲ. ಈಗಾಗಲೆ ಮೇಲೆ ಚರ್ಚಿಸಿರುವ ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ ಕಾರ್ಯಕ್ರಮ ಮತ್ತು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ ಕಾರ್ಯಕ್ರಮಗಳ ಅನುದಾನವನ್ನು 2022-23ರ ಬಜೆಟ್ಟಿನಲ್ಲಿ ತೀವ್ರ ಕಡಿತಗೊಳಿಸಲಾಗಿದೆ (ಈ ಎರಡು ಕಾರ್ಯಕ್ರಮಗಳ ಅನುದಾನ 2021-22ರಲ್ಲಿ ರೂ. 6.60 ಲಕ್ಷ ಕೋಟಿಯಿದ್ದುದು 2022-23ರಲ್ಲಿ ರೂ. 4.86 ಲಕ್ಷ ಕೋಟಿಗೆ ಇಳಿದಿದೆ). ಈ ಕ್ರಮದಿಂದ ಬಹುಪಾಲು ಜನರ ಬದುಕು ಮೂರಾಬಟ್ಟೆಯಾಗುವ ಸಾಧ್ಯತೆಯಿದೆ. ಯಾವ ವರ್ಗಕ್ಕೆ ಬೆಂಬಲ, ಪೋಷಣೆ, ಉತ್ತೇಜನ, ಪ್ರೋತ್ಸಾಹ ಬೇಕಾಗಿತ್ತೊ ಆ ವರ್ಗವನ್ನು ಬಜೆಟ್ಟಿನಲ್ಲಿ ಕಡೆಗಣಿಸಲಾಗಿದೆ.

ಖಾಸಗಿ ವಲಯ ಮತ್ತು ಕಾರ್ಪೊರೆಟ್‌ಗಳಿಗೆ ಬಜೆಟ್ ನೀಡಿರುವ ರಸದೌತಣ

ಇಂದು ನಮ್ಮ ಆರ್ಥಿಕತೆಗೆ ಅಗತ್ಯವಾಗಿರುವುದು ಗತಿಶಕ್ತಿಯಂತಹ ಆಡಳಿತಾತ್ಮಕ ಆಶ್ವಾಸನೆಗಳಲ್ಲ ಅಥವಾ ಜಿಡಿಪಿ ವ್ಯಸನವಲ್ಲ. ಕಾರ್ಪೊರೆಟ್-ಖಾಸಗಿ ವಲಯವನ್ನು ಓಲೈಸುವ-ಪೋಷಿಸುವ ಮತ್ತು ಕಾಂಟ್ರಾಕ್ಟ್‌ಗಿರಿ-ಕಾಮಗಾರಿಗಳಿಂದ ಕೂಡಿದ ಎಲ್ಲ ಯೋಜನೆಗಳು ’ಪಿಎಮ್‌ಗತಿಶಕ್ತಿ’ ಒಳಗೊಂಡಿದೆ (ರಸ್ತೆ, ರೈಲ್ವೇ, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹ ಸಾಗಣಿಕೆ, ಜಲಸಾರಿಗೆ ಮತ್ತು ಸರಕು-ಸೇವೆಗಳ ಸಾಗಣಿಕೆ ಮೂಲಸೌಕರ್ಯ). ಈ ಎಲ್ಲ ಏಳು ಕ್ಷೇತ್ರಗಳಲ್ಲಿ ಮುಖೇಶ್ ಅಂಬಾನಿ ಮತ್ತು ಗೌತಮ್ ಆದಾನಿಗಳಿಗೆ ಕಾಂಟ್ರಾಕ್ಟ್-ಕಾಮಗಾರಿ ನೀಡುವ ಪ್ರಚ್ಛನ್ನ ಉದ್ದೇಶ ಗತಿಶಕ್ತಿ ಯೋಜನೆಯಲ್ಲಿದೆ. ಈ ಏಳು ಎಂಜಿನ್ನುಗಳ ವ್ಯಾಪ್ತಿಯಲ್ಲಿನ ಕಾರ್ಯಕ್ರಮಗಳೆಲ್ಲ ’ಕಾಂಟ್ರಾಕ್ಟ್-ಕಾಮಗಾರಿ’ ಕಾರ್ಯಕ್ರಮಗಳಾಗಿವೆ. ಈಗಾಗಲೆ ಬಂದರುಗಳು, ವಿಮಾನ ನಿಲ್ದಾಣಗಳು, ರೈಲು ನಿಲ್ದಾಣ-ರೈಲು ಮಾರ್ಗ, ಜಲಸಾರಿಗೆ ಮುಂತಾದವುಗಳಲ್ಲಿ ಈ ಇಬ್ಬರು ಉದ್ಯಮಪತಿಗಳು ಒಂದು ಬಗೆಯಲ್ಲಿ ಏಕಸ್ವಾಮ್ಯವನ್ನು ಸಾಧಿಸಿಕೊಳ್ಳು ದಿಕ್ಕಿನಲ್ಲಿ ನಡೆದಿದ್ದಾರೆ. ’ಪಿಎಮ್ ಗತಿಶಕ್ತಿ’ ಎನ್ನುವ (ರಾಷ್ಟ್ರೀಯ ಮಾಸ್ಟ್‌ರ್‌ಪ್ಲಾನ್ ಫಾರ್ ಮಲ್ಟಿ ಮಾಡೆಲ್ ಕನೆಕ್ಟಿವಿಟಿ) ಕಾರ್ಯಕ್ರಮಕ್ಕೆ ಬಜೆಟ್ಟಿನಲ್ಲಿ ನಿರ್ದಿಷ್ಟ ಅನುದಾನವೆಂಬುದೇನಿಲ್ಲ. ವಾಸ್ತವವಾಗಿ ಇದೊಂದು ಆಡಳಿತಾತ್ಮಕ ಮತ್ತು ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿಕೊಳ್ಳುವ ಕಾರ್ಯಕ್ರಮ. ’ಸದ್ಯ’ದಲ್ಲಿ ಇದರಿಂದ ಉದ್ಯೋಗದ ಅವಕಾಶಗಳೇನು ಉದುರುವುದಿಲ್ಲ. ಆದರೆ ಉದ್ಯಮಪತಿಗಳಿಗೆ ಅಪಾರ ಲಾಭ ಒದಗಿಸಿಕೊಡುತ್ತವೆ. ಖಾಸಗೀಕರಣದ ಆರಾಧನೆಗೆ ಇದೊಂದು ಉತ್ತಮ ಉದಾಹರಣೆಯಾಗಬಲ್ಲದು.

ಆರ್ಥಿಕ ಅಸಮಾನತೆಯನ್ನು ತಡೆಯುವುದು ಮತ್ತು ಸಂಪತ್ತಿನ ಕೇಂದ್ರೀಕರಣವನ್ನು ತೊಡೆದು ಹಾಕುವುದು ಸರ್ಕಾರದ ಸಂವಿಧಾನಾತ್ಮಕ ಕರ್ತವ್ಯ. ಇದನ್ನು ಸಂವಿಧಾನದ ಭಾಗ 4ರ ಪರಿಚ್ಛೇದ 38 ಮತ್ತು 39ರಲ್ಲಿ ಸ್ಪಷ್ಟವಾಗಿ ಘೋಷಿಸಲಾಗಿದೆ. ಹಕ್ಕುಗಳ ಕಾಲ ಮುಗಿಯಿತು ಎಂದು ಹೇಳಿ ಕರ್ತವ್ಯಗಳ ಬಗ್ಗೆ ಗಮನ ನೀಡಬೇಕು ಎನ್ನುವ ಸರ್ಕಾರವು ತನ್ನ ಕರ್ತವ್ಯಗಳನ್ನು ನಿರ್ವಹಿಸುತ್ತಿದೆಯೇ ಎಂಬ ಪ್ರಶ್ನೆಯನ್ನು ನಾವು ಕೇಳಬೇಕಾಗುತ್ತದೆ (ಈ ಬಗ್ಗೆ ವಿವರಗಳಿಗೆ: ನಿಖಿಲ್ ಡೇ ಮತ್ತು ಅರುಣ ರಾಯ್ ಅವರ 31.01.2022ರ ದಿ ಹಿಂದು ಲೇಖನ ’ಶೋ ಕಮಿಟ್‌ಮೆಂಟ್ ಟು ಈಕ್ವಿಟಿ ಇನ್ ದಿ ಬಜೆಟ್’ ನೋಡಿ).

ಆರ್ಥಿಕ ಪುನಶ್ಚೇತನ!!

ಈ ಬಜೆಟ್ಟಿನಿಂದ ಆರ್ಥಿಕ ಪುನಶ್ಚೇತನ ಸಾಧ್ಯವಿಲ್ಲ. ಏಕೆಂದರೆ 2022-23ರ ಸಾರ್ವಜನಿಕ ವೆಚ್ಚವು (ರೂ. 39.44 ಲಕ್ಷ ಕೋಟಿ) 2022-23ನೆಯ ಸಾಲಿನ ಅಂದಾಜು ಜಿಡಿಪಿಯ ಶೇ.15.29 ರಷ್ಟ್ಟಿದ್ದರೆ 2020-21ರಲ್ಲಿ ಇದು ಆ ವರ್ಷದ ಜಿಡಿಪಿಯ ಶೇ.17.47ರಷ್ಟಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಆರ್ಥಿಕತೆಯಲ್ಲಿ, ಸಮಗ್ರ ಬೇಡಿಕೆಯಲ್ಲಿ ತೀವ್ರ ಏರಿಕೆಯಾಗುತ್ತಿಲ್ಲ. ಒಟ್ಟು ಅನುಭೋಗ ವೆಚ್ಚವು 2019-20ರಲ್ಲಿ ಜಿಡಿಪಿಯ ಶೇ.71.7ರಷ್ಟಿದ್ದುದು 2021-22ರಲ್ಲಿ ಶೇ.69.7ಕ್ಕಿಳಿದಿದೆ. ಖಾಸಗಿ ಅನುಭೋಗ ವೆಚ್ಚವು ಇದೇ ಅವಧಿಯಲ್ಲಿ ಜಿಡಿಪಿಯ ಶೇ.60.5ರಷ್ಟಿದ್ದುದು ಶೇ.57.5ಕ್ಕಿಳಿದಿದೆ (ಆರ್ಥಿಕ ಸಮೀಕ್ಷೆ 2021-೨೨. ಪುಟ: 10). ಅಭಿವೃದ್ಧಿಗೆ ಅಗತ್ಯವಾದ ಮೂಲ ದ್ರವ್ಯವೆಂದರೆ ಆರ್ಥಿಕತೆಯಲ್ಲಿನ ಉಳಿತಾಯದ ಪ್ರಮಾಣ. ನಮ್ಮ ದೇಶದಲ್ಲಿ ಒಟ್ಟು ಉಳಿತಾಯವು 2009-2010ರಲ್ಲಿ ಜಿಡಿಪಿಯ ಶೇ.36 ರಷ್ಟಿದ್ದುದು 2019-2020ರಲ್ಲಿ ಶೇ.31.4ಕ್ಕಿಳಿದಿದೆ. ಜನರ ಬದುಕು ಯಾವ ರೀತಿಯಲ್ಲಿ ದುಸ್ಥಿತಿಗೆ ಒಳಗಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಆರ್ಥಿಕತೆಯಲ್ಲಿ ಸಮಗ್ರ ಬೇಡಿಕೆಯನ್ನು ಬಲಪಡಿಸದೆ ತೀವ್ರ ಬೆಳವಣಿಗೆ ಸಾಧ್ಯವಿಲ್ಲ. ಆರ್‌ಬಿಐ ನಡೆಸಿದ ಸಮೀಕ್ಷೆಯ ಪ್ರಕಾರ ನಮ್ಮ ಆರ್ಥಿಕತೆಯ ಅನುಭೋಗಿಗಳ ಆತ್ಮಸ್ಥೈರ್ಯದ ಸೂಚ್ಯಂಕ ಇಂದು 62.3ರಷ್ಟಿದೆ. ಸಮಗ್ರ ಬೇಡಿಕೆಯನ್ನು ಬಲಪಡಿಸದೆ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವುದು, ಉತ್ಪಾದನೆ ಹೆಚ್ಚಿಸುವುದು ಮತ್ತು ಉದ್ಯೋಗದ ಪ್ರಮಾಣವನ್ನು ಹೆಚ್ಚಿಸುವುದು ಸಾಧ್ಯವಿಲ್ಲ. ಇದಾವುದೂ ನಮ್ಮ ಆರ್ಥಿಕತೆಯಲ್ಲಿ ಇಂದು ನಡೆಯುತ್ತಿಲ್ಲ. ಬಜೆಟ್ಟಿನಲ್ಲಿ ಇದಕ್ಕೆ ಪೂರಕವಾದ ಕ್ರಮಗಳಿಲ್ಲ. ಸರಿಸುಮಾರು 12 ಕೋಟಿ ಜನರ ಬದುಕಾಗಿರುವ ’ಎಮ್‌ಎಸ್‌ಎಮ್‌ಈ’ ವಲಯಕ್ಕಾಗಲಿ ಅಥವಾ ನಗರ ಪ್ರದೇಶದಲ್ಲಿನ ಕೋಟ್ಯಾಂತರ ವಲಸೆ ಕಾರ್ಮಿಕರ ಉದ್ಯೋಗ ಭದ್ರತೆಗಾಗಲಿ ಬಜೆಟ್ಟಿನಲ್ಲಿ ಯಾವ ಯೋಜನೆಯೂ ಇಲ್ಲ. ಪ.ಜಾ., ಪ.ಪಂ., ಒಬಿಸಿ ಮತ್ತು ಅಲ್ಪಸಂಖ್ಯಾತರ ಹಿತಕಾಯುವ ಬಗ್ಗೆ ಬಜೆಟ್ ಮೌನವಾಗಿದೆ.

ಶಿಕ್ಷಣ, ಆರೋಗ್ಯ ಮತ್ತು ಕೃಷಿ-ಸಂಬಂಧಿಸಿದ ಕ್ಷೇತ್ರಗಳಿಗೆ 2022-23ರಲ್ಲಿ ಅನುದಾನವನ್ನು ಅತ್ಯಂತ ಸಣ್ಣ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಮಹಿಳಾ ಬಜೆಟ್ ಬಗ್ಗೆ ಪ್ರತ್ಯೇಕ ಭಾಗವಿದೆ. ಆದರೆ ಇದಕ್ಕೆ ಅನುದಾನ ನೀಡುವಲ್ಲಿ ಸಮಸ್ಯೆಗಳಿಗೆ. ಮಹಿಳಾ ಅಭಿವೃದ್ಧಿಗೆ ಎರಡು ಬಗೆಯ ಕಾರ್ಯಕ್ರಮಗಳಿವೆ. ಮೊದಲನೆಯದು ಶೇ.100ರಷ್ಟು ಮಹಿಳಾ-ನಿರ್ದಿಷ್ಟ ಕಾರ್ಯಕ್ರಮಗಳು (ಭಾಗ ಎ) ಮತ್ತು ಶೇ.30ರಷ್ಟು ಮಹಿಳಾ ನಿರ್ದಿಷ್ಟ ಕಾರ್ಯಕ್ರಮಗಳು (ಭಾಗ ಬಿ). ಒಟ್ಟು ಮಹಿಳಾ ಬಜೆಟ್ಟಿನಲ್ಲಿ (ರೂ.171006.47 ಕೋಟಿ) ಭಾಗ ’ಎ’ ಕಾರ್ಯಕ್ರಮಗಳಿಗೆ ನೀಡಲಾದ ಅನುದಾನದ (ರೂ.26772.89 ಕೋಟಿ) ಪ್ರಮಾಣ ಶೇ.15.66ರಷ್ಟಿದ್ದರೆ ಭಾಗ ’ಬಿ’ನ ಅನುದಾನದ (ರೂ.144233.58 ಕೋಟಿ) ಪ್ರಮಾಣ ಶೇ.84.34. ಇದರಿಂದ ಬಜೆಟ್ಟಿನ ಮಹಿಳಾ ಸ್ಪಂದನೆ ಎಷ್ಟು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಸರ್ಕಾರ

ಉದ್ಯೋಗ, ಆಹಾರ, ಜೀವಿಸುವುದು, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ವಸತಿ ಮುಂತಾದವು ಮಾನವ ಹಕ್ಕುಗಳು. ನಮ್ಮ ಪ್ರಧಾನಮಂತ್ರಿ ಹಾಗೂ ವಿತ್ತ ಮಂತ್ರಿ ಇದನ್ನು ಅಲ್ಲಗಳೆಯುತ್ತಿದ್ದಾರೆ. ಹಕ್ಕುಗಳ ಬಗ್ಗೆ ಹೋರಾಟ ಮಾಡುವುದು ಕೇವಲ ’ಸಮಯದ ವ್ಯಯ’ ಎನ್ನುತ್ತಾರೆ ನಮ್ಮ ಪ್ರಧಾನಮಂತ್ರಿ. ಹಕ್ಕುಗಳನ್ನು ಬಿಟ್ಟು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವು ’ಕರ್ತವ್ಯ’ಗಳ ಬಗ್ಗೆ ಗಮನ ನೀಡಬೇಕು ಎಂಬುದು ಇವರ ಸಂದೇಶವಾಗಿದೆ. ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಅವರ ಆಣಿಮುತ್ತುಗಳು ಹೀಗಿವೆ:

1. ಹಕ್ಕುಗಳ ಬಗ್ಗೆ ಹೋರಾಟ ಮಾಡುವುದು ’ವೇಸ್ಟ್ ಆಫ್ ಟೈಮ್’.

2. ಹಿಂದಿನ 75 ವರ್ಷಗಳು (1947-2022) ನಾವು ಹಕ್ಕುಗಳ ಬಗ್ಗೆ ಗಮನ ನೀಡುತ್ತಾ ಬಂದಿದ್ದೇವೆ. ಇದರಿಂದಾಗಿಯೇ ನಮ್ಮ ದೇಶ ’ದುರ್ಬಲ’ವಾಗಿದೆ.

3. ಕರ್ತವ್ಯಗಳನ್ನು ನಿರ್ಲಕ್ಷಿಸುವುದು ನಮ್ಮ ರಾಷ್ಟ್ರೀಯ ಜೀವನದ ಅಂಗವೇ ಆಗಿಬಿಟ್ಟಿದೆ

4. ಮುಂದಿನ 25 ವರ್ಷಗಳನ್ನು (2022-2047) ಕಠಿಣ ಪರಿಶ್ರಮಕ್ಕೆ, ತ್ಯಾಗಕ್ಕೆ ಮೀಸಲಿಟ್ಟು ಇದನ್ನು ತಪಸ್ಸಿನಂತೆ ಪಾಲಿಸಬೇಕು.

ಡಾ. ಎಂ. ರಾಮಾಜೋಯಿಸ್

ನ್ಯಾಯಮೂರ್ತಿ ಡಾ. ಎಂ. ರಾಮಾಜೋಯಿಸರು ’ಹಕ್ಕುಗಳು ಭಾರತೀಯ ಪರಂಪರೆಯವಲ್ಲ’ ಎಂದು ಹೇಳಿದ್ದರು(2017). ನಮ್ಮ ವಿತ್ತಮಂತ್ರಿ ಅವರು 2020ರ ಬಜೆಟ್ಟಿನಲ್ಲಿ ’ಹಕ್ಕುಗಳ ಕಾಲ ಮುಗಿದಿದೆ: 2022ರಲ್ಲಿ ಸ್ವಾತಂತ್ರ್ಯದ 75ನೆಯ ವರ್ಷಾಚರಣೆಯಲ್ಲಿ ನಮ್ಮನ್ನು ನಾವು ದೇಶಕ್ಕೆ ಸೇವೆ ಮಾಡುವುದಕ್ಕೆ ಅರ್ಪಣೆ ಮಾಡಿಕೊಳ್ಳಬೇಕು’ ಎಂದು ಹೇಳಿದ್ದರು. ಈ ಎಲ್ಲ ಹೇಳಿಕೆಗಳ ತಾತ್ಪರ್ಯವೇನು? ಇವರೆಲ್ಲರೂ ಹಕ್ಕುಗಳ ಬಗ್ಗೆ ಗಿಣಿಪಾಠ ಒಪ್ಪಿಸುತ್ತಿದ್ದಾರೆ. ಕರ್ತವ್ಯಗಳ ಬಗ್ಗೆ ಗಮನ ನೀಡಬೇಕು ಎನ್ನುವ ಇವರ್‍ಯಾರೂ ಭಾರತೀಯರು ಕಳೆದ 75 ವರ್ಷಗಳಲ್ಲಿ ಯಾವ ಕರ್ತವ್ಯವನ್ನು ನಿರ್ಲಕ್ಷಿಸಿದ್ದಾರೆ ಎಂಬುದನ್ನು ಹೇಳಿಲ್ಲ. ಸಂವಿಧಾನದ ಪರಿಚ್ಛೇದ 51(ಎ)ನಲ್ಲಿನ ಎಲ್ಲ 11 ಮೂಲಭೂತ ಕರ್ತವ್ಯಗಳನ್ನು ನಾಗರಿಕರು ಪಾಲಿಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಸರ್ಕಾರ ಮತ್ತು ಮುಖ್ಯವಾಗಿ ಆಳುವ ಪಕ್ಷದ ಸದಸ್ಯರು ಮೂಲಭೂತ ಕರ್ತವ್ಯಗಳನ್ನು ಪಾಲಿಸುತ್ತಿಲ್ಲ. ಉದಾ: ಸಂವಿಧಾನಕ್ಕೆ ಬದ್ಧವಾಗಿರುವುದು ಮತ್ತು ಅದಕ್ಕೆ ಗೌರವ ನೀಡುವುದು ಮೊದಲ ಕರ್ತವ್ಯವಾಗಿದೆ. ಇದನ್ನು ಖುಲ್ಲಂಖುಲ್ಲ ಆಳುವ ಪಕ್ಷದ ಸದಸ್ಯರು ಉಲ್ಲಂಘಿಸುತ್ತಿದ್ದಾರೆ. ಧರ್ಮ, ಭಾಷೆ, ಪ್ರಾದೇಶಿಕತೆಗಳ ಎಲ್ಲೆ ಮೀರಿ ಜನರಲ್ಲಿ ಸೌಹಾರ್ದತೆ ಮತ್ತು ಭ್ರಾತೃತ್ವ ಭಾವನೆ ಬೆಳೆಸುವುದು ಐದನೆಯ ಕರ್ತವ್ಯ. ಇದನ್ನು ಸರ್ಕಾರದ ಉನ್ನತ ಸ್ಥಾನದಲ್ಲಿರುವವರೇ ಉಲ್ಲಂಘಿಸುತ್ತಿದ್ದಾರೆ. ಜನರಲ್ಲಿ ವೈಜ್ಞಾನಿಕ ಮನೋಭಾವನ್ನು ಬೆಳೆಸುವುದು ಎಂಟನೆಯ ಕರ್ತವ್ಯ. ಇದರ ಉಲ್ಲಂಘನೆಗೆ ಸರ್ಕಾರದ ಮಟ್ಟದಲ್ಲಿಯೇ ದಂಡಿಯಾಗಿ ನಿದಶನಗಳು ದೊರೆಯುತ್ತವೆ. ಹಕ್ಕುಗಳು ನಮ್ಮ ಸಂವಿಧಾನ 140 ಕೋಟಿ ಜನತೆಗೆ ನೀಡಿರುವ ಕೊಡುಗೆ.

ಈ ರೀತಿಯ ಹಕ್ಕು-ವಿರೋಧಿ ಪ್ರಣಾಳಿಕೆಯ ಚೌಕಟ್ಟಿನಲ್ಲಿ ಒಕ್ಕೂಟ ಬಜೆಟ್ 2022-23 ಸಿದ್ಧವಾಗಿದೆ. ಅನ್ನ, ಅಕ್ಷರ, ಆರೋಗ್ಯ, ಆದಾಯ ಇವೆಲ್ಲವೂ ನಮ್ಮ ಹಕ್ಕುಗಳು. ಹಕ್ಕುಗಳನ್ನು ಒತ್ತಾಯಿಸುವುದು ನಮ್ಮೆಲ್ಲರ ಕರ್ತವ್ಯ. ಹಕ್ಕಗಳ ಬಗ್ಗೆ ನಮ್ಮ ಕಾರ್ಮಿಕರು, ರೈತಾಪಿಗಳು, ವಿದ್ಯಾರ್ಥಿಗಳು, ಮಹಿಳೆಯರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಕಳೆದ 75 ವರ್ಷಗಳಲ್ಲಿ ಹೋರಾಟ ಮಾಡದೆ ಇದ್ದಿದ್ದರೆ, ಹಕ್ಕುಗಳ ಬಗ್ಗೆ ಗಮನ ನೀಡದೆ ಇದ್ದಿದ್ದರೆ ಇವರ ಸ್ಥಿತಿ ಇಂದು ಏನಾಗಬಹುದಿತ್ತು ಎಂಬುದನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಹಕ್ಕುಗಳಿಗೆ ಗಮನ ನಿಡುವುದು ’ವೇಸ್ಟ್ ಆಫ್ ಟೈಮ್’ ಎನ್ನುವುದು ಯಾವ ಬಗೆಯ ರಾಜಕಾರಣ? ಹಕ್ಕುಗಳ ಬಗೆಗಿನ ಹೋರಾಟದಿಂದಾಗಿ ಇಂದು ನಮ್ಮ ದೇಶ ’ದುರ್ಬಲ’ವಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಸಾವಿರಾರು ವರ್ಷಗಳು ಸನಾತನ ಅಸಮಾನತೆ ಮತ್ತು ಹಂಗಿನ ಬದುಕನ್ನು ಅನುಭವಿಸುತ್ತಾ ಬಂದಿದ್ದ ಪ.ಜಾ., ಪ.ಪಂ., ಮಹಿಳೆಯರು, ಒಬಿಸಿ ಜನವರ್ಗಕ್ಕೆ ಮೊದಲ ಬಾರಿಗೆ ಡಾ. ಬಿ. ಆರ್. ಅಂಬೇಡ್ಕರ್ ಪ್ರಣೀತ ಸಂವಿಧಾನವು ಹಕ್ಕುಗಳನ್ನು ನೀಡಿದೆ.

ಒಟ್ಟಾರೆ ಒಕ್ಕೂಟ ಬಜೆಟ್ 2022-23 ಜನಪರವಾಗಿಲ್ಲ. ಆರ್ಥಿಕತೆಗೆ ಪುನಶ್ಚೇತನ ನೀಡುವ ಬಜೆಟ್ ಇದಲ್ಲ. ಬಡವರ ರಕ್ತ ಹೀರುವ ತೆರಿಗೆ ವ್ಯವಸ್ಥೆ ಇಲ್ಲಿದೆ. ’ಪಿಎಮ್ ಗತಿಶಕ್ತಿ’ ಎಂಬುದು ಮಹತ್ವಾಕಾಂಕ್ಷೆಯ ಯೋಜನೆ. ಆದರೆ ಇದರ ಅನುಷ್ಠಾನದ ಕ್ರಮಗಳನ್ನು ಇನ್ನೂ ಸಿದ್ಧಪಡಿಸಿಲ್ಲ. ತೀವ್ರ ಕುಸಿತ ಕಂಡಿರುವ ಅನುಭೋಗಿ ವೆಚ್ಚವನ್ನು ಹೆಚ್ಚಿಸುವ ಬಗ್ಗೆ ಬಜೆಟ್ ಮೌನವಾಗಿದೆ. ಬಜೆಟ್ಟಿನಲ್ಲಿ ಭರವಸೆಗಳು ಭರಪೂರವಾಗಿವೆ. ಇದರ ಬಗ್ಗೆ ಜನರಿಗೆ ವಿಶ್ವಾಸ ಇಲ್ಲವಾಗಿದೆ. ಜನರ ಬದುಕನ್ನು ಸಮೃದ್ಧಪಡಿಸುವ ಕಾರ್ಯಕ್ರಮಗಳಿಗೆ ಅನುದಾನ ಕಡಿತ ಮಾಡಲಾಗಿದೆ. ಬಜೆಟ್ಟು ’ಡಿಜಿಟಲ್ ಅಸಮಾನತೆ’ಯನ್ನು ಸಮಾಜದಲ್ಲಿ ಸೃಷ್ಟಿಸುತ್ತಿದೆ. ಏಕೆಂದರೆ ಗ್ರಾಮೀಣ ಪ್ರದೇಶದ ಅತಿಸಣ್ಣ-ಸಣ್ಣ ರೈತರು, ಅಸಂಘಟಿತ ವಲಯದ ಕಾರ್ಮಿಕರು, ಕೂಲಿಕಾರ ಮಹಿಳೆಯರು ಡಿಜಿಟಲ್ ವ್ಯವಸ್ಥೆಗೆ ಇನ್ನೂ ಸಿದ್ಧವಾಗಿಲ್ಲ. ಆದರೆ ಬಜೆಟ್ಟಿನ ತುಂಬಾ ಡಿಜಿಟಲೈಸೇಸನ್ ಬಗ್ಗೆ ಮಾತನಾಡಲಾಗಿದೆ. ಇದು ಬೇಕು. ಆದರೆ ಒಂದು ರಾತ್ರಿಯಲ್ಲಿ ನಡೆಯುವ ಕಾರ್ಯ ಇದಲ್ಲ. ಒಟ್ಟಾರೆ ಇದೊಂದು ಜನವಿರೋಧಿ ಬಜೆಟ್ಟಾಗಿದೆ.

ಡಾ. ಟಿ. ಆರ್. ಚಂದ್ರಶೇಖರ

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿ.ಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿರುವ ಮುಂಚೂಣಿ ಚಿಂತಕರು


ಇದನ್ನೂ ಓದಿ: ಬಜೆಟ್ 2022-23: ಈ ನಂಬರುಗಳು ಬಜೆಟಿನ ಹಣೆಬರಹ ಹೇಳುತ್ತಿವೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...