Homeಮುಖಪುಟಬಜೆಟ್ 2022-23: ಈ ನಂಬರುಗಳು ಬಜೆಟಿನ ಹಣೆಬರಹ ಹೇಳುತ್ತಿವೆ

ಬಜೆಟ್ 2022-23: ಈ ನಂಬರುಗಳು ಬಜೆಟಿನ ಹಣೆಬರಹ ಹೇಳುತ್ತಿವೆ

- Advertisement -
- Advertisement -

(ಲೇಖನದಲ್ಲಿ ಮಹಾಪ್ರಾಣ ಬಳಕೆ ಮಾಡಿಲ್ಲ)

ಈ ಕೆಳಗಿನ ಕೆಲ ವಾಸ್ತವಗಳನ್ನು ಗಮನಿಸಿ

  • ಮಾನವ ಅಬಿವ್ರುದ್ದಿ ಸೂಚ್ಯಂಕದಲ್ಲಿ ಬಾರತದ ಸ್ತಾನ 131/189
  • ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಬಾರತದ ಸ್ತಾನ‌ 101/116

ಅಪೌಶ್ಟಿಕತೆಯಲ್ಲಿ ಬಾರತದ ಸ್ತಿತಿ ಆಪ್ರಿಕಾದ ಎಶ್ಟೋ ಬಡ ದೇಶಗಳಿಗಿಂತ ಕೆಳಗಿದೆ. 2016 ರಿಂದ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಾ ಕಡೆಯ ನಲವತ್ತು ಐವತ್ತು ವರ್ಶಗಳಲ್ಲೇ ಅತಿ‌ ಹೆಚ್ಚಿನ‌ ನಿರುದ್ಯೋಗ ದರ ತಲುಪಿದೆ.

ಕೋವಿಡ್ ನಂತರದ ಆರ್ತಿಕ ಅಬಿವ್ರುದ್ದಿ K ಆಕಾರದ ಅಬಿವ್ರುದ್ದಿ ( ಶ್ರೀಮಂತರ ಆದಾಯ ಹೆಚ್ಚುತ್ತಲೇ ಸಾಗಿದ್ದರೆ ಬಡವರ ಆದಾಯ ಇಳಿಯುತ್ತಿದ್ದು ಬಡವರು ಮತ್ತಶ್ಟು ಬಡವರಾಗುತ್ತಿದ್ದಾರೆ ) ಎಂದು ಎಲ್ಲ ಅದ್ಯಯನಗಳೂ ಹೇಳುತ್ತಿವೆ.

ಇಂತಹ ವಾಸ್ತವದ ಹಿನ್ನೆಲೆಯಲ್ಲಿ ಮಂಡಿತವಾದ 2022-23 ರ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಉದ್ಯೊಗ ಸ್ರುಶ್ಟಿ ಮಾಡುವ ಕಡೆಗೆ ಇರಬೇಕಿತ್ತು.

ಯಾಕೆಂದರೆ, ಅಗತ್ಯ ಸಂಕ್ಯೆಯಲ್ಲಿ ತಕ್ಕ ಉದ್ಯೋಗ ಸ್ರುಶ್ಟಿಯಾದಾಗ ಸಹಜವಾಗಿ ಅಪೌಶ್ಟಿಕತೆಯ ಸಮಸ್ಯೆ, ಹಸಿವಿನ ಸಮಸ್ಯೆ ಮತ್ತು ಇವೆಲ್ಲಕ್ಕೆ ಪೂರಕವಾಗಿ ಅಸಮಾನತೆಯ ಸಮಸ್ಯೆಗಳು ಬಹುತೇಕ ಪರಿಹಾರವಾಗಿ ಇಡೀ ದೇಶ ಸಮಗ್ರ ಅಬಿವ್ರುದ್ದಿ ಹೊಂದುವುದು ಸಾದ್ಯವಾಗುತ್ತದೆ.

ಜೊತೆಗೆ ಅಗತ್ಯ ಸಂಕ್ಯೆಗೆ ಅನುಗುಣವಾದ ತಕ್ಕ ಉದ್ಯೊಗ ಸ್ರುಶ್ಟಿ ಮಾಡಬೇಕಾದರೆ ಅದಕ್ಕೆ ಪೂರಕವಾಗಿ ಉತ್ತಮ ಶಿಕ್ಶಣ ಮತ್ತು ಆರೋಗ್ಯ ವ್ಯವಸ್ತೆಯನ್ನೂ ಒದಗಿಸಲೇಬೇಕಾಗುತ್ತದೆ.

ಆದರೆ, ಉದ್ಯೋಗ, ಶಿಕ್ಶಣ ಮತ್ತು ಆರೋಗ್ಯ ಕ್ರೇತ್ರಗಳಿಗೆ ಈ ಬಜೆಟಿನಲ್ಲಿ ಸಿಕ್ಕಿರುವ ಅನುದಾನ ಗಮನಿಸಿದರೆ ಸಾಕು, ಈ ಬಜೆಟ್ ಎಲ್ಲರನ್ನೂ ಒಳಗೊಂಡ ಸಮಗ್ರ ಅಬಿವ್ರುದ್ದಿಗೆ ಪೂರಕವಾಗಿದೆಯೋ ಇಲ್ಲವೋ ಎಂಬುದು ಸ್ಪಶ್ಟವಾಗಿ ತಿಳಿಯುತ್ತದೆ.

ನೇರ ಉದ್ಯೋಗ ಸ್ರುಶ್ಟಿಗೆ ಸಂಬಂದಿಸಿದಂತೆ ಈ ಬಜೆಟ್ ಹೇಳುವ ಅಂಶ ಗಮನಿಸಿ

  1. “ಮೂಲಸೌಕರ್ಯ ಅಬಿವ್ರುದ್ದಿಗೆ ಬಜೆಟಿನಲ್ಲಿ ಕೊಟ್ಟಿರುವ ಪ್ರಾಮುಕ್ಯತೆಯಿಂದ ಮುಂದಿನ ಐದು ವರ್ಶಗಳಲ್ಲಿ 60 ಲಕ್ಶ ಉದ್ಯೋಗ ಸ್ರುಶ್ಟಿ ಆಗಲಿವೆ” – ಒಕ್ಕೂಟ ಸರ್ಕಾರ.

    ವಾಸ್ತವ ಏನಿದೆ ನೋಡಿ
    *
    2019 ರಲ್ಲಿ ಇದ್ದ ನಿರುದ್ಯೋಗಿಗಳ ಸಂಕ್ಯೆ 3 ಕೋಟಿ.
    * 2020-21 ರಲ್ಲಿ ಅದಕ್ಕೆ ಇನ್ನೂ 1 ಕೋಟಿ ಹೆಚ್ಚುವರಿ ನಿರುದ್ಯೋಗಿಗಳು ಸೇರಿಕೊಂಡಿದ್ದಾರೆ.
    * ಜೊತೆಗೆ ಪ್ರತಿವರ್ಶ 50 ರಿಂದ 60 ಲಕ್ಶ ಯುವಕ ಯುವತಿಯರು ಉದ್ಯೋಗ ಮಾರುಕಟ್ಟೆಗೆ ಸೇರ್ಪಡೆಯಾಗುತ್ತಿದ್ದಾರೆ.

    ಅಂದರೆ, ಎಲ್ಲ ಸೇರಿ ಮುಂದಿನ ಐದು ವರ್ಶಗಳಲ್ಲಿ ಒಟ್ಟು ಉದ್ಯೋಗಾಕಾಂಕ್ಶಿಗಳ ಸಂಕ್ಯೆ ಕನಿಶ್ಟ 5 ಕೋಟಿ‌ ಇದ್ದರೆ ಒಕ್ಕೂಟ ಸರ್ಕಾರ ಸ್ರುಶ್ಟಿ ಮಾಡುತ್ತೇನೆಂದು ಹೇಳುತ್ತಿರುವ ಉದ್ಯೋಗಗಳ ಸಂಕ್ಯೆ ಕೇವಲ 60 ಲಕ್ಶ.

    ಈ 60 ಲಕ್ಶ ಉದ್ಯೋಗಗಳು ಸ್ರುಶ್ಟಿ ಆಗುವುದು ಕೂಡ ಈ ವಿಶಯದಲ್ಲಿ ಈ ಸರ್ಕಾರದ ಕಳೆದ ಎಂಟು ವರ್ಶಗಳ ಸಾದನೆಯ ಹಿನ್ನೆಲೆಯಲ್ಲಿ ನೋಡಿದಾಗ ಅನುಮಾನಾಸ್ಪದವೇ ಆಗಿದೆ.

  2. ಕೋವಿಡ್ ಲಾಕ್ ಡೌನ್ ಕಾರಣದಿಂದ ಕನಿಶ್ಟ ಮೂರು ಕೋಟಿಯಶ್ಟು ಮಂದಿ ಹಳ್ಳಿಗಳಿಗೆ ಹಿಂದುರಿಗಿ ಕ್ರುಶಿ ಮತ್ತು ಕ್ರುಶಿ ಸಂಬಂದಿತ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ನರೇಗಾಕ್ಕೆ ( ಗ್ರಾಮೀಣ ಉದ್ಯೋಗ ಕಾತ್ರಿ ಯೋಜನೆ )ಕೊಡುತ್ತಿರುವ ಅನುದಾನವನ್ನು ಗಣನೀಯವಾಗಿ ಹೆಚ್ಚಿಸಬೇಕಿತ್ತು. ಜೊತೆಗೆ ಒಟ್ಟಾರೆಯಾಗಿ ಕ್ರುಶಿ ಕ್ಶೇತ್ರಕ್ಕೆ ಅನುದಾನ ಹೆಚ್ಚಿಸಬೇಕಿತ್ತು.

    ಆದರೆ, ಕಾಸಗೀಕರಣದ ಕಟ್ಟಾ ಬೆಂಬಲಿಗ ಅರ್ತಶಾಸ್ತ್ರಜ್ನರೂ ಬೆಚ್ಚಿಬೀಳುವಂತೆ ಈ ಸರ್ಕಾರ ನರೇಗಾಕ್ಕೆ ಕಳೆದ ವರ್ಶ ಕೊಟ್ಟಿದ್ದ 98,000 ಕೋಟಿಯಿಂದ ಈ ವರ್ಶ 73,000 ಕೋಟಿಗೆ ಇಳಿಸಿ ಒಟ್ಟು 25% ನಶ್ಟು ಅನುದಾನ ಕಡಿತಗೊಳಿಸಿದೆ.

    ಉದ್ಯೋಗ ಸ್ರುಶ್ಟಿಯ ದ್ರುಶ್ಟಿಯಿಂದ ನಗರ ಕೇಂದ್ರಿತ ನರೇಗಾ ಸ್ಕೀಮ್ ಮಾಡಬೇಕಿರುವುದು ಅತ್ಯಗತ್ಯವಾಗಿದ್ದಂತ ಕಾಲಗಟ್ಟದಲ್ಲಿ ನಗರ ನರೇಗಾ ಸ್ರುಶ್ಟಿ ಮಾಡುವುದಿರಲಿ, ಇರುವ ಗ್ರಾಮೀಣ ನರೇಗಾಕ್ಕೇ ಅನುದಾನ ಕಡಿತಗೊಳಿಸಿರುವುದು ಈ ಬಜೆಟ್ ಗೆ ( ಒಟ್ಟಾರೆಯಾಗಿ ಸರ್ಕಾರಕ್ಕೆ ) ಉದ್ಯೋಗ ಸ್ರುಶ್ಟಿಯ ಬಗ್ಗೆ ಗಂಬೀರತೆಯೇ ಇಲ್ಲದಿರುವುದನ್ನು ತೋರಿಸುತ್ತದೆ.

  3. ಕೋವಿಡ್ ಲಾಕ್ ಡೌನ್ ಕಾರಣಕ್ಕೆ ಕನಿಶ್ಟ ಮೂರು ಕೋಟಿ ಜನ ಹಳ್ಳಿಗಳಿಗೆ ಹಿಂತಿರುಗಿರುವ ಕಾರಣಕ್ಕೆ ಮತ್ರು ಮುಕ್ಯವಾಗಿ ರೈತರ ಬೆಳೆಗಳಿಗೆ ಕನಿಶ್ಟ ಬೆಂಬಲ ಬೆಲೆ ಕಾತ್ರಿ ಮಾಡಬೇಕಿರುವ ಕಾರಣಕ್ಕೆ ಈ ಬಜೆಟಿನಲ್ಲಿ ಕ್ರುಶಿ ಕ್ಶೇತ್ರದ ಅನುದಾನವನ್ನು ಗಣನೀಯವಾಗಿ ಹೆಚ್ಚಿಸಬೇಕಿತ್ತು.‌

    ಆದರೆ, ಕ್ರುಶಿ ( 1,51,521 crores) ಮತ್ತು ಗ್ರಾಮೀಣಾಬಿವ್ರುದ್ದಿಗಳಿಗೆ ( 2,06,293 crores ) ಕಳೆದ ಬಾರಿಗಿಂತ ಕಡಿಮೆ ಅನುದಾನ ಕೊಡುವುದರ ಮೂಲಕ ಈ ಬಜೆಟ್ ಈ ದೇಶದ 80 ಕೋಟಿಯಶ್ಟಿರುವ ಗ್ರಾಮೀಣ ಮತ್ತು ರೈತ ಸಮುದಾಯದ ಆದಾಯ ವ್ರುದ್ದಿಗೇ ದೊಡ್ಡ ಪೆಟ್ಟು ನೀಡಿದೆ. ಹಾಗೂ, ರೈತ ಹೋರಾಟದ ಹಿನ್ನೆಲೆಯಲ್ಲಿ ರೈತ ಸಮುದಾಯಕ್ಕೆ ಕೊಟ್ಟ ಬರವಸೆಗಳು ಪೊಳ್ಳು ಎಂಬುದನ್ನೂ ತೋರಿಸುತ್ತಿದೆ.

  4. ಉತ್ತಮ ಶಿಕ್ಶಣ ವ್ಯವಸ್ತೆಯಿಲ್ಲದೆ ಯಾವುದೇ ದೇಶ ಸಮಗ್ರವಾಗಿ ಮುಂದುವರೆಯಲು ಸಾದ್ಯವಿಲ್ಲ.

    ಕೋವಿಡ್ ಕಾರಣದಿಂದ ಇಡೀ ದೇಶದಲ್ಲಿ ಲಕ್ಶಾಂತರ ಮಕ್ಕಳು ಶಿಕ್ಶಣವನ್ನೇ ಬಿಟ್ಟಿದ್ದರೆ, ಕೋಟ್ಯಂತರ ಮಕ್ಕಳ ಕಲಿಕಾ ಸಾಮರ್ತ್ಯ ಗಣನೀಯವಾಗಿ ಕಡಿಮೆಯಾಗಿದೆ.

    ( ಹಲವಾರು ಅದ್ಯಯನಗಳು ಈ ಅಂಶವನ್ನು ದ್ರುಡೀಕರಿಸಿವೆ)

    ಇಂತಾ ಮಕ್ಕಳು ನಾಳೆ ಉದ್ಯೋಗ ಕ್ರೇತ್ರಕ್ಕೆ ಬಂದಾಗ ಸಹಜವಾಗಿ ಅವರ ಉತ್ಪಾದನಾ ಸಾಮರ್ತ್ಯ ಉತ್ತಮ‌ಶಿಕ್ಶಣ ಪಡೆದ ಮಕ್ಕಳಿಗಿಂತ ಕಡಿಮೆಯಿರುತ್ತದೆ.

    ಇದು ಆ ಮಕ್ಕಳ ವೈಯಕ್ತಿಕ ಸಮಸ್ಯೆಯಶ್ಟೇ ( ಇದರಲ್ಲಿ ಮಕ್ಕಳ ತಪ್ಪೇನೂ ಇಲ್ಲ )ಅಲ್ಲದೆ ಮುಂದೆ ಇಡೀ ದೇಶದ ಉತ್ಪಾದನಾ ವೇಗ ಮತ್ತು ಅಬಿವ್ರುದ್ದಿಯ ಮೇಲೂ ಬಾರೀ ನಕಾರಾತ್ಮಕ ಪರಿಣಾಮ ಬೀರುತ್ತದೆ.

    ಇಂತಾ ವಾಸ್ತವದ ಹಿನ್ನೆಲೆಯಲ್ಲಿ ಸರ್ಕಾರ ಶಾಲೆಬಿಟ್ಟ ಲಕ್ಶಾಂತರ ಮಕ್ಕಳನ್ನು ಕರೆತರಲು ಮತ್ತು ಕೋಟ್ಯಂತರ ಮಕ್ಕಳ ಕಲಿಕಾ ಹಿನ್ನಡೆಯನ್ನು ಸರಿಪಡಿಸಲು ಮುಂದಿನ ಎರಡು ವರ್ಶ ಸಮರದೋಪಾದಿಯಲ್ಲಿ ಕೆಲಸಮಾಡಬೇಕಿತ್ತು.

    ಇದಕ್ಕಾಗಿಯೇ ಶಿಕ್ಶಣ ಕ್ರೇತ್ರದ ರೆಗ್ಯಲರ್ ಅನುದಾನದ ಜೊತೆಯಲ್ಲಿ ವಿಶೇಶ ಅನುದಾನವೆಂದು ಕನಿಶ್ಟ 2,00,000 ಕೋಟಿಗಳನ್ನು ಮುಂದಿನ ಎರಡು ವರ್ಶಕ್ಕೆ ಮೀಸಲಿಡಬೇಕಿತ್ತು.

    ಆದರೆ, ಶಾಲಾ ಶಿಕ್ಶಣಕ್ಕೆ ಕೇವಲ 3,604 ಕೋಟಿಗಳಶ್ಟು ಮಾತ್ರ ( 59,845 crores to 63,449 crores ) ಅನುದಾನ ಹೆಚ್ಚಿಸಿದೆ.

    ಮತ್ತು, ಒಟ್ಟಾರೆ ಶಿಕ್ಶಣಕ್ಕೆ ಅನುದಾನವನ್ನು 1,04,278 ಕೋಟಿಗಳಿಗೆ ನಿಗದಿಗೊಳಿಸಿದ್ದು ಕಳೆದ ಬಾರಿಗಿಂತ ಕೇವಲ 0.31% ರಶ್ಟು ಹೆಚ್ಚಿಸಲಾಗಿದೆ.

    ಈ ಬಾರಿಯ ಬಜೆಟಿನಲ್ಲಿ ಶಿಕ್ಶಣ ಕ್ರೇತ್ರದ ವಿಶೇಶ ಸನ್ನಿವೇಶವನ್ನು ಪರಿಗಣಿಸದೆ ಇರುವುದು ಈ ಸರ್ಕಾರಕ್ಕೆ ಶಿಕ್ಶಣದ ಮಹತ್ವವೇ ಗೊತ್ತಿಲ್ಲವೆಂಬುದನ್ನು ಸ್ಪಶ್ಟಪಡಿಸುತ್ತಿದೆ.

  5. ಸದ್ರುಡ ಆರೋಗ್ಯ ವ್ಯವಸ್ತೆ ಇಲ್ಲದ ಕಡೆ ದೇಶವನ್ನು ಕಟ್ಟಬಲ್ಲ ಸದ್ರುಡ ಪ್ರಜೆಗಳೂ ಸ್ರುಶ್ಟಿಯಾಗಲಾರರು ಎಂಬುದು ಜಾಗತಿಕ ಸತ್ಯ. ಕೋವಿಡ್ ಸೋಂಕು ನಮ್ಮ ದೇಶದ ಆರೋಗ್ಯ ವ್ಯವಸ್ತೆಯ ಹುಳುಕುಗಳನ್ನು ಡಾಳಾಗಿ ವಿಶ್ವದ ಮುಂದೆ ತೆರೆದಿಟ್ಟಿದೆ.

    ಈ ಅವಕಾಶವನ್ನೇ ಬಳಸಿಕೊಂಡು ಸದ್ರುಡ ಆರೋಗ್ಯ ವ್ಯವಸ್ತೆಯನ್ನು ಮುಂದಿನ ಐದು ವರ್ಶಗಳಲ್ಲಿ ಕಟ್ಟಲು ಈ ಬಜೆಟ್ಟಿನಿಂದಲೇ ವಿಶೇಶ ಅನುದಾನ ಕೊಟ್ಟು ಕಾರ್ಯತತ್ಪರರಾಗುವ ಅವಕಾಶ ಈ ಸರ್ಕಾರಕ್ಕಿತ್ತು.

    ಆದರೆ, ವಿಶೇಶ ಅನುದಾನ‌ ಕೊಡುವುದಿರಲಿ, ಕಳೆದ ಬಾರಿಗಿಂತ ಕೇವಲ 1,000 ಕೋಟಿಯಶ್ಟು ( revised estimate of 82,291 crores to 83,000 crores in 22-23 ) ಮಾತ್ರ ಹೆಚ್ಚಿಸಿ ಆರೋಗ್ಯ ಕ್ಶೇತ್ರದ ಪ್ರಾಮುಕ್ಯತೆ ತನಗೆ ಗೊತ್ತಿಲ್ಲ ಎಂದು ಸರ್ಕಾರ ತೋರಿಸಿಕೊಂಡಂತಿದೆ.

  6. ನಾಳಿನ ಸದ್ರುಡ ಪ್ರಜೆಗಳನ್ನು ಬೆಳೆಸುವ ಯೋಜನೆಯಾಗಿ ಗೋಶಿತವಾದ ಪ್ರದಾನಮಂತ್ರಿ ಪೋಶಣ್ ಶಕ್ತಿ ನಿರ್ಮಾಣ್ ಅಥವಾ ಸರಳವಾಗಿ ಪ್ರದಾನಮಂತ್ರಿ ಪೋಶಣ್ ಯೋಜನೆಗೆ ಕಳೆದ ವರ್ಶಕಿಂತ ಅನುದಾನ ಕಡಿಮೆಗೊಳಿಸಿದೆ ( 11,500 crores to 10,233 crores ). ಈ ದೇಶದಲ್ಲಿ ಮಕ್ಕಳ ಅಪೌಶ್ಟಿಕತೆ ಅತ್ಯಂತ ಹೆಚ್ಚಿರುವಂತ ಸಂದರ್ಬದಲ್ಲಿ ಪ್ರದಾನಮಂತ್ರಿ ಪೋಶಣ್ ಯೋಜನೆಗೆ ಹೆಚ್ಚಿನ ಅನುದಾನ ಕೊಡುವುದರ ಬದಲು ಇದ್ದುದ್ದನ್ನೇ ಕಡಿತಗೊಳಿಸಿರುವುದು ಈ ಸರ್ಕಾರದ ಕಾಸಗೀಕರಣದ ಕಡೆಗಿನ ಒಲವನ್ನು ಎತ್ತಿ ತೋರಿಸುತ್ತಿದೆ.

ಮೇಲೆ ಚರ್ಚಿಸಿದ ಮೊದಲೆರಡು ಅಂಶಗಳು ಮಾತ್ರ ನೇರವಾಗಿ ಉದ್ಯೋಗ ಸ್ರುಶ್ಟಿಗೆ ಸಂಬಂದಿಸಿವೆ ಅಂತ ಕಾಣಿಸಿದರೂ, ಶಿಕ್ಶಣ ಮತ್ತು ಆರೋಗ್ಯ ಕ್ಶೇತ್ರ ವಾಸ್ತವದಲ್ಲಿ ಅತ್ಯಂತ ಹೆಚ್ಚಿನ ಉದ್ಯೋಗ ಸ್ರುಶ್ಟಿ ಮಾಡುವಂತ ಕ್ಶೇತ್ರಗಳಾಗಿವೆ.

ಮುಕ್ಯವಾಗಿ, ಮೂಲಸೌಕರ್ಯ ಅಬಿವ್ರುದ್ದಿಯಂತ ಕೆಲಸಗಳು ಉದ್ಯೋಗಸ್ರಶ್ಟಿ ಮಾಡುತ್ತವಾದರೂ ಅಲ್ಲಿಯ ಉದ್ಯೋಗ ಸ್ರುಶ್ಟಿ ನಿದಾನವಾಗಿ ಆಗುವಂತದು ಮತ್ತು ತಾತ್ಕಾಲಿಕವಾದದ್ದು. ಅದೇ ಶಿಕ್ಶಣ ಮತ್ತು ಆರೋಗ್ಯ ಕ್ಶೇತ್ರದಲ್ಲಿ ಸ್ರುಶ್ಟಿಯಾಗುವ ಉದ್ಯೋಗಗಳು ನಿರಂತರವಾಗಿರುವಂತ ಉದ್ಯೋಗಗಳಾಗಿರುತ್ತವೆ.

ಅಂದರೆ, ಶಿಕ್ಶಣ ಮತ್ತು ಆರೋಗ್ಯ ಕ್ಶೇತ್ರಕ್ಕೆ ಕೊಡುವ ಅನುದಾನವು ಸುಶಿಕ್ಶಿತ ಮತ್ತು ಸದ್ರುಡ ಪ್ರಜೆಗಳನ್ನು ಸಮಾಜಕ್ಕೆ ಕೊಡುವುದೇ ಅಲ್ಲದೆ ಗಣನೀಯವಾಗಿ ಉದ್ಯೋಗ ಸ್ರುಶ್ಟಿಯನ್ನೂ ಮಾಡುತ್ತದೆ.
ಆದರೆ, ಈ ಬಜೆಟ್ ಎರಡೂ ಕ್ಶೇತ್ರಗಳಿಗೆ ಕೋವಿಡ್ ನಂತಾ ವಿಶೇಶ ಸಂದರ್ಬದಲ್ಲೂ ಕೂಡ ಹೆಚ್ಚಿನ ಅನುದಾನ ಕೊಡದೆ ಒಟ್ಟಾರೆ ಉದ್ಯೋಗ ಸ್ರುಶ್ಟಿಯ ಕಡೆಗೆ ತನಗೆ ಗಂಬೀರತೆ ಇಲ್ಲ ಎಂಬುದನ್ನು ತೋರಿಸಿದೆ.

ಒಟ್ಟಾರೆಯಾಗಿ ಕೋವಿಡ್ ಲಾಕ್ ಡೌನ್ ನಿಂದಾಗಿ ಕಳೆದೆರಡು ವರ್ಶಗಳಲ್ಲಿ ಉಂಟಾಗಿದ್ದ ಆರ್ತಿಕ ಹಿಂಜರಿತ, ಮತ್ತೂ ಹೆಚ್ಚಾಗಿರುವ ಬಡತನ ,ಆರ್ತಿಕ ಅಸಮಾನತೆ, ಮಕ್ಕಳ ಕಲಿಕಾ ಗುಣಮಟ್ಟದಲ್ಲಿನ ಕುಸಿತ, ಮತ್ತೂ ಹೆಚ್ಚಾಗಿರುವ ನಿರುದ್ಯೋಗ, ಜನರ ಕೊಳ್ಳುವ ಶಕ್ತಿಯ ಕುಸಿತ ಇತ್ಯಾದಿಗಳ ಹಿನ್ನೆಲೆಯಲ್ಲಿ ಶಿಕ್ಶಣ, ಆರೋಗ್ಯ ಮತ್ತು ಕ್ರುಶಿ ಕ್ಶೇತ್ರಗಳಿಗೆ ವಿಶೇಶ ಉತ್ತೇಜನದ ಮೂಲಕ ಉದ್ಯೋಗ ಸ್ರುಶ್ಟಿಸಿ ದೇಶದ ಸಮಗ್ರ ಅಬಿವ್ರುದ್ದಿಗೆ ಅಡಿಪಾಯ ಹಾಕಬಹುದಾಗಿದ್ದ ಅವಕಾಶವನ್ನು ಈ ಬಜೆಟ್ ಕಳೆದುಕೊಂಡಿದೆ ಎಂದು ಹೇಳಬಹುದು.

ಇದನ್ನೂ  ಓದಿ: ಬಹುಜನ ಭಾರತ; ದೇಶದ ಬಹುಜನರ ಅಣಕಿಸುವ ಬಜೆಟ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...