1998ರಲ್ಲಿ ನಾನು ನ್ಯಾಷನಲ್ ಕಾಲೇಜಿನ ನಾಟಕದ ಸಂಚಾಲಕನಾಗಿ ವಿದ್ಯಾರ್ಥಿಗಳಿಗೊಂದು ರಂಗತರಬೇತಿ ಕಾರ್ಯಾಗಾರವನ್ನು ನಡೆಸಿದ್ದೆ. ಆಗ ಮೇಕಪ್ ನಾಣಿ ಅವರನ್ನು ಮೇಕಪ್ ಕ್ಲಾಸ್ ಮಾಡಲು ಆಹ್ವಾನಿಸಿದ್ದೆ. ಅದೇ ಸಂದರ್ಭದಲ್ಲಿ ಶ್ರೀಮತಿ ಭಾರ್ಗವಿ ನಾರಾಯಣ್ ಅವರನ್ನೂ ತಮ್ಮ ರಂಗಭೂಮಿಯ ಅನುಭವವನ್ನು ಹಂಚಿಕೊಂಡು ನಮ್ಮ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕೆಂದು ಕೇಳಿಕೊಂಡಿದ್ದೆ. ಅದೇ ವರ್ಷ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಯೂ ಸಂದಿತ್ತು. ಅವರು ಬಂದು ವಿದ್ಯಾರ್ಥಿಗಳೊಡನೆ ಅಮ್ಮನಂತೆ ಬೆರೆತು ಪ್ರೀತಿಯಿಂದ ಮಾತನಾಡಿದರು. ನಾಟಕಗಳಲ್ಲಿ ಹೆಣ್ಣಿನ ಪಾತ್ರಗಳನ್ನು ಗಂಡಸೇ ಮಾಡುತ್ತಿದ್ದ ಅಂದಿನ ಸಂದರ್ಭದಲ್ಲಿ ತಾವು ಕನ್ನಡ ರಂಗಭೂಮಿಯನ್ನು ಪ್ರವೇಶಿಸಿ ಹೆಣ್ಣಿನ ಪಾತ್ರವನ್ನು ನಿರ್ವಹಿಸಿದ್ದನ್ನು ಸ್ವಾರಸ್ಯಕರವಾಗಿ ಹೇಳಿ ವಿದ್ಯಾರ್ಥಿಗಳನ್ನು ಆಶ್ಚರ್ಯಗೊಳ್ಳುವಂತೆ ಮಾಡಿದ್ದರು.
ನಂತರದಲ್ಲಿ ನ್ಯಾಷನಲ್ ಕಾಲೇಜಿಗೆ ಸಂಜೆಯ ವೇಳೆ ವಿವಿಧ ನಾಟಕ ತಂಡಗಳ ನಾಟಕದ ತಾಲೀಮಿಗಾಗಿ ಬರುತ್ತಿದ್ದಾಗ ಕೆಲವೊಮ್ಮೆ ಕಂಡು ಮಾತನಾಡಿಸಿದ್ದೆ. ಅಷ್ಟೇ ನನ್ನ ಅವರ ಪರಿಚಯ ಮತ್ತು ಭೇಟಿ. ನಂತರದಲ್ಲಿ ನಾನು ಅವರನ್ನು ಕಂಡದ್ದು ಕೆಲವು ನಾಟಕಗಳಲ್ಲಿ ಮಾತ್ರ. ಅದರಲ್ಲೂ ಕಲಾಗಂಗೋತ್ರಿ ತಂಡ ಅಭಿನಯಿಸಿದ ಎರಡು ನಾಟಕಗಳು ನನಗೆ ಅವರ ನೆನಪನ್ನು ಯಾವಾಗಲೂ ಹಸಿರಾಗಿಸಿಡುತ್ತದೆ. ಒಂದು ’ಪರಹಿತ ಪಾಷಾಣ’ ಎಂಬ ನಾಟಕದಲ್ಲಿ ಯಮುನಾ ಮೂರ್ತಿಯವರೊಡನೆ ಜೋಡಿಯಾಗಿ ನಟಿಸಿದ್ದರು. ಅದರಲ್ಲಿ ಇಬ್ಬರು ಮದುವೆಯಾಗದೇ ಉಳಿದ ಹಿರಿಯ ಹೆಂಗಸರು ಮನೆಗೆ ಬಂದ ಅತಿಥಿಗಳನ್ನು ಕೊಲ್ಲುವ ಕಥೆಯುಳ್ಳ ಆ ನಾಟಕ. ಅದರಲ್ಲಿ ಅವರದು ’ಅಕ್ಕಯ್ಯಮ್ಮ’ನ ಪಾತ್ರ. ಆ ಪಾತ್ರವನ್ನು ಅವರು ನಿರ್ವಹಿಸಿದ ರೀತಿ ನನಗೆ ತುಂಬಾ ಮೆಚ್ಚುಗೆಯಾಗಿತ್ತು.
ತಣ್ಣನೆಯ ಕ್ರೌರ್ಯವನ್ನು ಮುಂದಿಡುವ ಆ ನಾಟಕದಲ್ಲಿ ಭಾರ್ಗವಿ ಅವರದು ಅಮಾಯಕತೆಯೇ ಮೈವೆತ್ತಿದಂತಹ ಪಾತ್ರ. ಹಾಸ್ಯದ ಧಾಟಿಯಲ್ಲಿ ಅತ್ಯಂತ ಸಹಜ ನಟನೆಯಲ್ಲಿ ರಂಜಿಸುತ್ತಿದ್ದರು. ಅವರು ನಾಟಕದ ಪಾತ್ರ ಎಂದು ಅಂದುಕೊಡೇ ಇಲ್ಲವೇನೋ ಎಂಬಷ್ಟು ಸಹಜವಾಗಿತ್ತು ಅವರ ರಂಗದ ಮೇಲಿನ ಓಡಾಟ. ಆ ಇಬ್ಬರು ಹಿರಿಯ ಜೀವಗಳ ನಟನಾ ಚಾತುರ್ಯವನ್ನು ಯಾರೂ ಮರೆಯಲಾರರು. ಇನ್ನೊಂದು ನಾಟಕ ಕಲಾಗಂಗೋತ್ರಿ ಅಭಿನಯಿಸಿದ ಅತ್ಯಂತ ಯಶಸ್ವೀ ನಾಟಕ ’ಮುಖ್ಯಮಂತ್ರಿ’. ಅದರಲ್ಲಿ ಅವರು ಮುಖ್ಯಮಂತ್ರಿಯವರ ಹೆಂಡತಿ ಪ್ರದ್ಯುಮ್ನಾದೇವಿಯವರ ಪಾತ್ರವನ್ನು ನಿರ್ವಹಿಸಿದ್ದರು. ಈ ಎರಡೂ ನಾಟಕಗಳ ಪಾತ್ರಗಳ ವೈವಿಧ್ಯತೆಯನ್ನು ತುಂಬಿಕೊಡುತ್ತಿದ್ದ ಭಾರ್ಗವಿ ನಾರಾಯಣ್ ಅವರು ಎಲ್ಲ ಬಗೆಯ ಗೌರವಗಳಿಗೂ ಅರ್ಹರು. ಅಂತೇ ಅವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳೂ ಲಭಿಸಿವೆ. ಒಂದು ಬಾರಿ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರೂ ಆಗಿದ್ದರು.
ಭಾರ್ಗವಿ ನಾರಾಯಣ್ ಅವರ ಸಿನೆಮಾ ನಟನೆಯ ಬಗೆಗೆ ನನಗೆ ಅಷ್ಟೇನೂ ಮೆಚ್ಚುಗೆ ಇಲ್ಲ. ಬಹುಷಃ ’ವಂಶವೃಕ್ಷ’ ಚಿತ್ರದಲ್ಲಿ ಅವರನ್ನು ನೋಡಿದಂತೆ ಇನ್ನಿತರ ಚತ್ರಗಳಲ್ಲಿ ನಾನು ಅವರನ್ನು ಕಾಣಲಿಲ್ಲ. ಇನ್ನೊಂದು ಚಿತ್ರ ಪ್ರೊಫೆಸರ್ ಹುಚ್ಚೂರಾಯ. ಇದರಲ್ಲಿ ಅವರಿಗೆ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯೂ ಸಂದಿದೆ. ನಾನು ನೋಡಿದ ಇತರೆ ಚಿತ್ರಗಳಲ್ಲಿ ಅವರದು ಒಂದೇ ಬಗೆಯ ನಟನೆ, ಎಲ್ಲ ಪಾತ್ರಗಳೂ ಒಂದೇ ಏನೋ ಎಂಬಂತಿರುತ್ತಿತ್ತು. ಬಹುಷಃ ಇದು ನಮ್ಮ ಚಿತ್ರರಂಗದ ಮಿತಿಯೇನೋ ಅದು! ಹೆಚ್ಚಗಿನ ಧಾರಾವಾಹಿಗಳಲ್ಲಿ ಮಧ್ಯಮವರ್ಗದ ಬ್ರಾಹ್ಮಣ ಕುಟುಂಬದ ಹೆಣ್ಣುಮಗಳ ಪಾತ್ರವನ್ನು ಮನಮುಟ್ಟುವಂತೆ ಅಭಿನಯಿಸುತ್ತಿದ್ದರು.
ಎಲ್ಲಕ್ಕಿಂತ ಹೆಚ್ಚಾಗಿ ಅವರ ರಂಗದ ಮೇಲಿನ ಚಟುವಟಿಕೆಯ ಪಾತ್ರಪೋಷಣೆ ನಮ್ಮನ್ನು ಬೆರಗುಗೊಳಿಸುತ್ತಿದ್ದುದು ನಿಜ. ಬೆಂಗಳೂರು ಆಕಾಶವಾಣಿಯ ಕಲಾವಿದೆಯಾಗಿದ್ದರು. ರೇಡಿಯೋ ನಾಟಕಗಳಲ್ಲಿ ಭಾಗವಹಿಸಿ, ಆಕಾಶವಾಣಿಗಾಗಿ ಹಲವಾರು ನಾಟಕಗಳನ್ನೂ ಬರೆದು ನಿರ್ದೇಶಿಸಿದರು. 600ಕ್ಕೂ ಹೆಚ್ಚು ನಾಟಕಗಳು, ನೂರಾರು ಸಿನೆಮಾಗಳು, ಹತ್ತಾರು ಧಾರಾವಾಹಿಗಳು, ನಿರಂತರ ರಂಗಭೂಮಿ ಮತ್ತಿತರ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ – ಈ ಎಲ್ಲವೂ ಅವರ ವೈವಿಧ್ಯಮಯ ಬದುಕಿನ ಆಯ್ಕೆಗೆ ಹಿಡಿದ ಕನ್ನಡಿಯೇ ಆಗಿದೆ. ಭಾರ್ಗವಿ ಅವರು ತಮ್ಮ ಜೀವನವನ್ನು ಕುರಿತಂತೆ ’ನಾನು ಭಾರ್ಗವಿ’ ಎಂಬ ಆತ್ಮಕಥೆಯನ್ನು ಬರೆದಿದ್ದಾರೆ. ಹಾಗೇ ’ನಾ ಕಂಡ ನಮ್ಮವರು’ ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಡಾ. ಎಚ್.ಎನ್ ಅವರನ್ನು ಕಂಡರೆ ಅವರಿಗೆ ತುಂಬಾ ಗೌರವ. ಡಾ. ಎಚ್.ಎನ್ ಕೂಡಾ ಆಗಾಗ ನಾಣಿಯವರ ಬಗೆಗೆ ಮಾತು ಬಂದಾಗಲೆಲ್ಲ ಇವರನ್ನು ಅಕ್ಕರೆಯಿಂದ ಹಾಸ್ಯಮಯವಾಗಿ ನೆನಪಿಸಿಕೊಳ್ಳುತ್ತಿದ್ದುದನ್ನು ನಾನು ನೋಡಿದ್ದೇನೆ.
ಭಾರ್ಗವಿ ಅವರು ಕುಟುಂಬದಲ್ಲೂ ಅತ್ಯಂತ ಪ್ರಭಾವಶಾಲೀ ವ್ಯಕ್ತಿತ್ವ. ಪತಿ ಬಿ.ಎನ್.ನಾಣಿ, ಮಕ್ಕಳು ಎಲ್ಲರೂ ರಂಗಭೂಮಿ, ಕಿರುತೆರೆ, ಹಿರಿತೆರೆ ಎಲ್ಲದರಲ್ಲೂ ತುಂಬಾ ಚಟುವಟಿಕೆಯಿಂದ ನಿರಂತರವಾಗಿ ಸುದ್ದಿಯಲ್ಲಿರುವವರು. ತುಂಬು ಜೀವನವನ್ನು ಕಂಡ ಅವರು 84ನೇ ವಯಸ್ಸಿನಲ್ಲಿ ತೀರಿಕೊಂಡರು. ಅವರ ಅಗಲಿಕೆ ಸಹಜವಾಗಿಯೇ ದುಃಖ ತರುವಂಥದ್ದು. ರಂಗಭೂಮಿಯ ಹಿರಿಯರೆಲ್ಲರೂ ಒಬ್ಬೊಬ್ಬರಾಗಿ ಲೋಕವನ್ನು ಬಿಡುತ್ತಿದ್ದರೆ ಮುಂದಿನ ಯುವ ಜನಾಂಗಕ್ಕೆ ಅಗತ್ಯವಾಗಿ ಕಲೆಯ ಬದ್ಧತೆಯನ್ನು ತಿಳಿಸುವ ಅಗಣಿತ ಪ್ರೇರಣೆಯ ಕೊಂಡಿಗಳು ಕಳಚುತ್ತಾ ಬಂದಂತೆ ಎಂದೆನಿಸುತ್ತದೆ.

ಡಾ. ಹೆಚ್.ವಿ. ವೇಣುಗೋಪಾಲ್
ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸಮುದಾಯ ರಂಗತಂಡದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ: ಡಿಜಿಟಲ್ ವೇದಿಕೆಗಳಲ್ಲಿ ಸೊರಗಿದ ರಂಗಭೂಮಿ; ಆಪ್ತತೆಯ ಸಂವಾದ ಮರುಕಳಿಸಲಿ


