ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ಹಿಂದಿಯನ್ನು “ರಾಷ್ಟ್ರೀಯ ಭಾಷೆ” ಎಂದು ಉಲ್ಲೇಖಿಸಿದ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಹೈದರಾಬಾದ್ ನಿವಾಸಿಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಪ್ರಸಂಗ ಜರುಗಿದೆ.
ಮುಂಬೈ ಪೊಲೀಸರು ಗಂಗಮ್ ಸುಧೀರ್ ಕುಮಾರ್ ರೆಡ್ಡಿ ಎಂಬ ವ್ಯಕ್ತಿಯನ್ನು ಅವರು ಪ್ರಯಾಣಿಸುತ್ತಿದ್ದ ವಾಹನದಲ್ಲಿ ವಾಣಿಜ್ಯ ಪ್ರಮಾಣದ ಗಾಂಜಾ ಪತ್ತೆಯಾಗಿದೆ ಎಂದು ಆರೋಪಿಸಿ ಜುಲೈ 2019 ರಲ್ಲಿ ಬಂಧಿಸಿದ್ದರು. ಆ ವಾಹನವು ರೆಡ್ಡಿ ಅವರ ಹೆಂಡತಿಗೆ ಸೇರಿದ್ದು ಎನ್ನಲಾಗಿದೆ. ಪೊಲೀಸರು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ ಸೆಕ್ಷನ್‌ಗಳ ಅಡಿಯಲ್ಲಿ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಈ ಕುರಿತು ಜಾಮೀನು ಅರ್ಜಿ ಸಲ್ಲಿಸಿರುವ ರೆಡ್ಡಿ ಪೊಲೀಸರು ತನ್ನ ಬಂಧನಕ್ಕೆ ಕಾರಣಗಳ ಬಗ್ಗೆ ಹಾಗೂ ನನ್ನ ಶಾಸನಬದ್ಧ ಹಕ್ಕುಗಳ ಬಗ್ಗೆ ಹಿಂದಿಯಲ್ಲಿ ಹೇಳಿದ್ದಾರೆ. ನನಗೆ ಹಿಂದಿ ಬಾರದ ಕಾರಣ ಅದು ಅರ್ಥವಾಗಿಲ್ಲ, ಹಾಗಾಗಿ ಜಾಮೀನು ನೀಡಬೇಕೆಂದು ವಾದಿಸಿದ್ದರು.
ಈ ವಾದಕ್ಕೆ ಪ್ರತಿಕ್ರಿಯೆಯಾಗಿ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಅವರು, ‘ರೆಡ್ಡಿ ಅವರು ಟ್ರಾವೆಲ್ಸ್ ವ್ಯವಹಾರವನ್ನು ಹೊಂದಿದ್ದಾರೆ ಮತ್ತು ಅವರು “ಸ್ಥಳೀಯ ಭಾಷೆಯ ಸ್ಥಳಾಕೃತಿ ಮತ್ತು ಸಂಕೇತಗಳ ಬಗ್ಗೆ ತಿಳಿದಿರಬೇಕು” ಎಂದು ಹೇಳಿ, ರೆಡ್ಡಿಗೆ ಹಿಂದಿ ಗೊತ್ತಿದೆ ಎಂದು ಹೈಕೋರ್ಟ್ ಭಾವಿಸಬಹುದು’ ಎಂದಿದ್ದರು.
“ಅರ್ಜಿದಾರರಿಗೆ ತಮ್ಮ ಹಕ್ಕಿನ ಬಗ್ಗೆ ಹಿಂದಿಯಲ್ಲಿ ತಿಳಿಸಲಾಗಿದೆ, ಅದು ರಾಷ್ಟ್ರೀಯ ಭಾಷೆಯಾಗಿದೆ” ಎಂದು ಜಾಮೀನು ಅರ್ಜಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಸಾಂಬ್ರೆ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.
ಸಂವಿಧಾನದ ಪ್ರಕಾರ ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ರೆಡ್ಡಿ ವಾದಿಸಿದ್ದಾರೆ. ಅವರು ಸಂವಿಧಾನದ 345 ನೇ ವಿಧಿಯನ್ನು ಉಲ್ಲೇಖಿಸಿ, ಇದು ಶಾಸಕಾಂಗವು ರಾಜ್ಯದಲ್ಲಿ ಯಾವುದೇ ರಾಜ್ಯ ಭಾಷೆ ಅಥವಾ ಹಿಂದಿಯನ್ನು ಅಧಿಕೃತ ಭಾಷೆಯಾಗಿ ಬಳಸಲು ಅನುಮತಿಸುತ್ತದೆ. ಇಲ್ಲಿ ಹಿಂದಿ ರಾಷ್ಟ್ರ ಭಾಷೆ ಎಂದು ಉಲ್ಲೇಖಿಸಿಲ್ಲ ಎಂದಿದ್ದಾರೆ.
ಸಂವಿಧಾನ ರಚನಾ ಸಭೆಯಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆದಿದೆ. ನಮ್ಮ ಸಂವಿಧಾನ ರಚನಾಕಾರರು ಹಿಂದಿಯನ್ನು ಹಿಂದಿಯನ್ನು ರಾಷ್ಟ್ರಭಾಷೆಯೆಂದು ಒಪ್ಪಿಕೊಂಡಿಲ್ಲ ಎಂದು ರೆಡ್ಡಿ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
ಪೊಲೀಸರು ನನಗೆ ತಿಳಿದಿರುವ ರಾಜ್ಯಭಾಷೆಯಲ್ಲಿ ನನ್ನ ಹಕ್ಕುಗಳ ಬಗ್ಗೆ, ನನ್ನ ಮೇಲಿನ ಆರೋಪಗಳ ಬಗ್ಗೆ ತಿಳಿಸಿಲ್ಲ. ಇದು ಸಾಂವಿಧಾನಿಕ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ಆರೋಪಿಸಿದ್ದಾರೆ. ಟ್ರಾವೆಲ್ ಏಜೆನ್ಸಿಯವರು ಸ್ಥಳೀಯ ಭಾಷೆ ತಿಳಿದಿರಬೇಕು ಎಂಬ ಹೈಕೋರ್ಟ್ ಆದೇಶದ ಬಗ್ಗೆ ಮಾತನಾಡಿರುವ ಅವರು, ಸ್ಥಳೀಯ ಭಾಷೆಯಲ್ಲಿ ಸೈನ್‌ಬೋರ್ಡ್‌ಗಳಿಗಿಂತ ನಾನು ಗೂಗಲ್ ನಕ್ಷೆಗಳ ಅಪ್ಲಿಕೇಶನ್ ಅನ್ನು ಅವಲಂಬಿಸಿದ್ದೆ ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ: ರಾಜಧಾನಿಯಲ್ಲಿ ಭೋರ್ಗರೆದ ’ಭೀಮ ಸಾಗರ’: ರ್‍ಯಾಲಿಯನ್ನು ಚಿತ್ರಗಳಲ್ಲಿ ನೋಡಿ



ಹಿಂದಿ ಹೇರಿಕೆಯ ವಿರುದ್ಧದ ಹೋರಾಟ ಮುಂದುವರಿಯಬೇಕು.