“ಭಾರತದ ಕಾರ್ಮಿಕ ವರ್ಗವು ಒಂದೆಡೆ ವಿದೇಶಿ ಸಾಮ್ರಾಜ್ಯಶಾಹಿಯನ್ನು ಭಾರತೀಯ ಬಂಡವಾಳಶಾಹಿಗಳ ಪಿತೂರಿಯನ್ನು ಎದುರಿಸಬೇಕಾಗಿದೆ. ಭಾರತೀಯ ಬಂಡವಾಳಶಾಹಿ ವರ್ಗವು ವಿದೇಶಿ ಬಂಡವಾಳದೊಂದಿಗೆ ಕೈ ಸೇರಿಸಿ ಜನಸಮೂಹವನ್ನು ವಂಚಿಸುತ್ತಿದೆ ಮತ್ತು ಇದಕ್ಕೆ ಪ್ರತಿಯಾಗಿ ಕೆಲವೊಂದು ಸವಲತ್ತನ್ನು ಪಡೆಯುತ್ತಿದೆ. ಆದ್ದರಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಲು ಮತ್ತು ಎಲ್ಲಾ ಸಾಮಾಜಿಕ ಅಸಮಾನತೆ ಶೋಷಣೆಗಳನ್ನು ಅಳಿಸಲು ಸಮಾಜವಾದ ಒಂದೇ ಕಾರ್ಮಿಕ ವರ್ಗಕ್ಕೆ ಇರುವ ಭರವಸೆ”.
ತಾನೆ ನೇತೃತ್ವವಹಿಸಿ ಮುನ್ನಡೆಸುತ್ತಿದ್ದ ಕ್ರಾಂತಿಕಾರಿ ಸಂಘಟನೆ ಹಿಂದೂಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ( ಎಚ್ ಎಸ್ ಆರ್ ಎ) ಯ ಪ್ರಣಾಳಿಕೆಯ ಮೂಲಕ ಈ ರೀತಿ ಘೋಷಿಸಿದ ಚಂದ್ರಶೇಖರ್ ಆಜಾದ್ ಜುಲೈ 1906 ರಂದು ಇಂದಿನ ಉತ್ತರ ಪ್ರದೇಶದ ಬಾವಾರ ಎಂಬ ಹಳ್ಳಿಯಲ್ಲಿ ಸೀತಾರಾಮ್ ತಿವಾರಿ ಹಾಗೂ ಜಗರಾಣಿ ದೇವಿಯವರ ಮಗನಾಗಿ ಜನಿಸಿದರು. ಆಜಾದ್ ರವರು ಇದೇ ಹಳ್ಳಿಯ ಶಾಲೆಯಲ್ಲಿ ಓದುತ್ತಿದ್ದರು. ಆಟ-ಪಾಠದಲ್ಲಿ ಮುಂದಿದ್ದ ಆಜಾದ್ ರ ಬಗ್ಗೆ ಅವರ ಉಪಾಧ್ಯಾಯರಾಗಿದ್ದ ಮನೋಹರ್ ಲಾಲ್ ರವರಿಗೆ ವಿಶೇಷ ಒಲವಿತ್ತು. ಮಕ್ಕಳಿಗೆಲ್ಲ ನಾಯಕ ಆಗಿರುತ್ತಿದ್ದ ಬಾಲಕ ಆಜಾದ್ ಒಮ್ಮೆ ಮಕ್ಕಳೊಂದಿಗೆ ಸೇರಿ ದೀಪಾವಳಿ ಹಬ್ಬಕ್ಕೆ ದೊಡ್ಡದಾಗಿ ಬೆಳಕು ಕಾಣುವಂತೆ ಮಾಡಲು ಪಟಾಕಿ ಗಳನ್ನೆಲ್ಲಾ ಒಂದೆಡೆ ಗುಡ್ಡೆ ಹಾಕಿ ಎಲ್ಲದಕ್ಕೂ ಒಟ್ಟಿಗೆ ಬೆಂಕಿಹಚ್ಚಿದ್ದ. ಈ ಸಂಭ್ರಮದ ನಡುವೆ ಆಜಾದ್ ತಮ್ಮ ಬಲಗೈ ಸುಟ್ಟಿರುವುದನ್ನು ನೋಡಲೇ ಇಲ್ಲ! ನಂತರ ಈತನ ಗೆಳೆಯರು ಇದನ್ನು ನೋಡಿ ಗಾಬರಿಗೊಂಡು ಮನೆಗೆ ಓಡಲಾರಂಭಿಸಿದರು. ಆದರೆ ಆಜಾದ್ ಇವರನ್ನೆಲ್ಲ ತಡೆದು ಧೈರ್ಯ ತುಂಬಿ ಮತ್ತೆ ಪಟಾಕಿ ಹಚ್ಚುವುದನ್ನು ಮುಂದುವರಿಸಿದ. ಆ ದಿನವೇ ಹಳ್ಳಿಯ ಜನ ಈತನ ಧೈರ್ಯ, ನೋವನ್ನು ಲೆಕ್ಕಿಸದ ಗುಣವನ್ನು ಕಂಡು ಬೆರಗಾಗಿದ್ದರು.
ಮುಂದೆ ಮನೆಯಲ್ಲಿ ತಾವು ಬಯಸಿದ ಸ್ವಾತಂತ್ರ್ಯ ಸಿಗದಿದ್ದಾಗ ಮನೆಬಿಟ್ಟು ಮುಂಬೈ ಸೇರಿದರು. ಮುಂಬೈಯಲ್ಲಿ ಹಣವಿಲ್ಲದೆ ಹಸಿವಿನಿಂದ ಹಲವಾರು ದಿನಗಳನ್ನು ಕಳೆದರೂ ಆತ್ಮಗೌರವಕ್ಕೆ ಕುಂದು ತರುವಂತಹ ಯಾವುದೇ ಕೆಲಸವನ್ನು ಮಾಡಲಿಲ್ಲ. ಅಲ್ಲಿ ಹಡಗಿನಲ್ಲಿ, ಬಂದರಿನಲ್ಲಿ ಮೂಟೆ ಹೊರುವ ಕೂಲಿಯಾಗಿ ಕೆಲಸಮಾಡುತ್ತಿದ್ದರು. ಅಲ್ಲಿ ಕೂಲಿಯಾಳುಗಳ ನಡುವೆಯೇ ವಾಸಮಾಡುತ್ತಿದ್ದರು. ನಂತರ ವಿದ್ಯಾಭ್ಯಾಸ ಮುಂದುವರಿಸುವ ಇಚ್ಚೆಯಿಂದ ಕಾಶಿಗೆ ಹೋದರು. ಅಲ್ಲಿ ಸಂಸ್ಕೃತ ಶಾಲೆಯಲ್ಲಿ ವಿದ್ಯಾರ್ಥಿಯಾಗಿ ಸೇರಿದಾಗ ಅವರಿಗೆ 15ರ ಹರೆಯ.
ಆಗ ಬ್ರಿಟಿಷರ ವಿರುದ್ಧ ಅಸಹಕಾರ ಚಳುವಳಿ ಬಿರುಸಾಗಿ ನಡೆಯುತ್ತಿದ್ದ ಕಾಲ. ತಾಯಿನಾಡಿನ ಕರೆಯಂತೆ ಆಜಾದ್ ಅಸಹಕಾರ ಚಳುವಳಿಗೆ ಧುಮುಕಿದರು. ಕಾಶಿಯಲ್ಲಿ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ಬ್ರಿಟಿಷರ ಪೊಲೀಸರು ವಿದ್ಯಾರ್ಥಿಗಳನ್ನು ತಡೆದು ತಳಿಸಲಾರಂಭಿಸಿದರು. ಈ ಕಾರ್ಯದಿಂದ ಕೋಪಗೊಂಡ ವಿದ್ಯಾರ್ಥಿಗಳ ನಾಯಕರಾದ ಆಜಾದ್ ಪೊಲೀಸರಡೆಗೆ ಕಲ್ಲೊಂದನ್ನು ಬೀಸಿದರು. ಇದರಿಂದಾಗಿ ಬಂಧಿತರಾದ ಆಜಾದ್ ರವರು ಮರುದಿನ ವಿಚಾರಣೆ ವೇಳೆ ನ್ಯಾಯಾಧೀಶರು ನಿನ್ನ ಹೆಸರೇನೆಂದು ಕೇಳಿದಾಗ ಆಜಾದ್ ( ಸ್ವಾತಂತ್ರ) ಎಂದು, ನಿನ್ನ ತಂದೆ ಹೆಸರೇನು ಎಂಬ ಪ್ರಶ್ನೆಗೆ ಸ್ವಾದೀನತೆ ಎಂದು, ನಿನ್ನ ವಾಸವೆಲ್ಲಿ? ಎಂದು ಕೇಳಿದಾಗ ಸೆರೆಮನೆಯೆಂದು ದಿಟ್ಟವಾಗಿ ಉತ್ತರಿಸಿದ್ದರು! ಇದರಿಂದ ಕುಪಿತರಾದ ಕ್ರೂರಿ ನ್ಯಾಯಾಧೀಶ ಆಜಾದ್ ರವರಿಗೆ 12 ಛಡಿ ಏಟಿನ ಶಿಕ್ಷೆ ವಿಧಿಸಿದರು. ಒಂದೊಂದು ಏಟಿಗೂ ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಎಂದು ಕೂಗುತ್ತಿದ್ದರು. ಜೈಲಿನಿಂದ ಹೊರಬಂದ ಬಾಲಕನನ್ನು ಜನರು ಆನಂದದಿಂದ ಮೇಲೆತ್ತಿ ಆಜಾದ್ ಎಂದು ಕರೆದರು. ಅಂದಿನಿಂದ ಅವರು ಚಂದ್ರಶೇಖರ್ ಆಜಾದ್ ಎಂದೇ ಖ್ಯಾತರಾದರು.
1921 ರಲ್ಲಿ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂಪಡೆದರು. ಇದರಿಂದ ಬೇಸತ್ತ ಆಜಾದ್ ಅವರು ಮುಂದೆ ತಮ್ಮ 16ನೇ ವಯಸ್ಸಿನಲ್ಲಿ ಸಚ್ಚೀಂದ್ರ ನಾಥ ಸನ್ಯಾಲರು, ರಾಮ್ ಪ್ರಸಾದ್ ಬಿಸ್ಮಿಲ್ಲಾರು ಮುನ್ನಡೆಸುತ್ತಿದ್ದ ಹಿಂದುಸ್ತಾನ್ ರಿಪಬ್ಲಿಕ್ ಅಸೋಸಿಯೇಷನ್ ಎಂಬ ಕ್ರಾಂತಿಕಾರಿ ಪಕ್ಷವನ್ನು ಸೇರಿದರು. ತಮಗೆ ವಹಿಸುತ್ತಿದ್ದ ಯಾವುದೇ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಒಮ್ಮೆ ಆಜಾದ್ ಭಿತ್ತಿಪತ್ರಗಳನ್ನು ಹಚ್ಚುವಾಗ ಪೊಲೀಸ್ ಠಾಣೆಗೆ ಹೋದರು ಅಲ್ಲಿ ಪೋಲಿಸ್ ಪೇದೆಯೊಂದಿಗೆ ಸಂಭಾಷಣೆಗಿಳಿದು ಠಾಣೆಯ ಗೋಡೆಗೆ ಬೆನ್ನನ್ನು ಉಜ್ಜುತ್ತಾ ನಿಂತುಕೊಂಡಿದ್ದರು ಬೆನ್ನಿಗೆ ಭಿತ್ತಿಪತ್ರವನ್ನು ಅಂಟಿಸಿಕೊಂಡಿದ್ದ ಆಜಾದರು ಸುಲಭವಾಗಿ ತಮ್ಮ ಕೆಲಸವನ್ನು ಮುಗಿಸಿದರು. ಮರುದಿನ ಪೊಲೀಸ್ ಠಾಣೆಯ ಮೇಲೆ ಬಿತ್ತಿಪತ್ರ! ಹೀಗೆ ಎಲ್ಲಾ ಕಡೆ ಮಿಂಚಿನಂತೆ ಸಂಚರಿಸಿ ಎಂತಹ ಅಪಾಯಕಾರಿ ಕೆಲಸವನ್ನು ಸುಲಭವಾಗಿ ಮಾಡುತ್ತಿದ್ದ ಆಜಾದರನ್ನು ತಮ್ಮ ಸಹವರ್ತಿ ರಾಮ್ ಪ್ರಸಾದ್ ಬಿಸ್ಮಿಲ್ಲಾ ರವರು ಪಾದರಸವೆಂದು ಕರೆಯುತ್ತಿದ್ದರು.
ಆ ದಿನಗಳಲ್ಲಿ ಬ್ರಿಟಿಷ್ ಸರ್ಕಾರವು ‘ಸೈಮನ್’ ನೇತೃತ್ವದಲ್ಲಿ ಆಯೋಗವನ್ನು ರಚಿಸಿತು. ಭಾರತೀಯರಿಗೆ ಎಷ್ಟು ಅಧಿಕಾರವನ್ನು ನೀಡಬಹುದೆಂದು ತೀರ್ಮಾನಿಸಲು 1928ರ ಫೆಬ್ರವರಿಯಲ್ಲಿ ಭಾರತಕ್ಕೆ ಬಂದ ಆಯೋಗಕ್ಕೆ, ಅದು ಹೋದಲ್ಲೆಲ್ಲ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸಲಾಯಿತು. ದೇಶದಾದ್ಯಂತ ‘ಸೈಮನ್ ಹಿಂತಿರುಗು’ ಎಂಬ ಘೋಷಣೆಗಳು ಮೊಳಗಿತು. ಲಾಹೋರಿಗೆ 1928ರ ಅಕ್ಟೋಬರ್ 30ರಂದು ಆಯೋಗ ಬಂದಾಗ ಪಂಜಾಬಿನ ಕೇಸರಿ ಲಾಲಾ ಲಜಪತ್ ರಾಯ್ ರವರ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಸಲಾಯಿತು. ‘ನೌಜವಾನ್ ಭಾರತ ಸಭಾ’ದ ಮೂಲಕ ನೇರವಾಗಿ ಎಲ್ಲಾ H.S.R.A.ಕ್ರಾಂತಿಕಾರಿಗಳು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ತಮ್ಮ ಮೇಲೆ ಪೋಲಿಸ್ ವಾರೆಂಟ್ ಇದ್ದುದರಿಂದ ಆಜಾದರು ಗುಪ್ತವಾಗಿ ಜನರನ್ನು ಸಂಘಟಿಸಿ, ಜಾಗೃತಿ ಮೂಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ತಮ್ಮ ಸಂಘಟನೆ ಹಿಂದುಸ್ತಾನ್ ರಿಪಬ್ಲಿಕನ್ ಅಸೋಶಿಯೇಶನನ್ನು ಮುನ್ನಡೆಸಲು ಕಾಕೋರಿ ರೈಲು ದರೋಡೆ ಮೂಲಕ ಶಸ್ತ್ರಾಸ್ತ್ರಗಳನ್ನು, ಹಣವನ್ನು ಗಳಿಸಿದ್ದರಾದರೂ ತಮ್ಮ ಪ್ರಮುಖ ಸಂಗಾತಿಗಳಾದ ರಾಮಪ್ರಸಾದ್, ಅಶ್ಪಕುಲ್ಲಾ ಖಾನ್, ರಾಜೇಂದ್ರ ಲಹಿರಿ, ರೋಷನ್ ಸಿಂಗರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಆದರೂ ಧೃತಿಗೆಡದ ಆಜಾದ್ ಕೂಲಿಕಾರರಾಗಿ, ಶ್ರೀಮಂತನಾಗಿ, ಡ್ರೈವರ್ ಆಗಿ ವೇಷಮರೆಸಿಕೊಂಡು ನಾನಾ ಕಡೆ ಸಂಚರಿಸಿ ಸಂಘಟನೆಯನ್ನು ಮುನ್ನಡೆಸಿದರು. ಹೀಗೆ ಎಚ್.ಆರ್ .ಎ.ನ ಪ್ರಧಾನ ಸೇನಾಧಿಪತಿಯಾಗಿ ಆಯ್ಕೆಯಾದ ಆಜಾದರು ಸಮಾಜವಾದಿ ಸಮ ಸಮಾಜದ ನಿರ್ಮಾಣವೇ ತಮ್ಮ ಗುರಿ ಎಂದು ಘೋಷಿಸಿದರು. ಇದರ ಸಲುವಾಗಿ ಹೆಚ್ ಆರ್ ಎ. ಯನ್ನು ಹಿಂದೂಸ್ತಾನ್ ಸೋಸಿಯಲಿಸ್ಟ್ ರಿಪಬ್ಲಿಕನ್ ಅರ್ಮಿ(H.S.R.A.)ಯೆಂದು ಎಂದು ಮರು ನಾಮಕರಣ ಮಾಡಲಾಯಿತು. ನಂತರ ದಿನಗಳಲ್ಲಿ ತನ್ನ ಎಚ್.ಎಸ್.ಆರ್.ಎ ಸಂಗತಿಗಳಾದ ಭಗತ್ ಸಿಂಗ್, ರಾಜಗುರು, ಸುಖ ದೇವರನ್ನು ಬ್ರಿಟಿಷರು ಗಲ್ಲಿಗೇರಿಸಿದರು.
ಅತ್ಯಂತ ಜತನದಿಂದ ತಾವೇ ಕಟ್ಟಿ ಬೆಳೆಸಿದ ಸಂಘಟನೆಗಳು ಕುಸಿದಾಗಲೂ, ಕಣ್ಣ ಮುಂದೆಯೇ ತಮ್ಮ ಪ್ರೀತಿಪಾತ್ರರಾದ ಸಂಗತಿಗಳೆಲ್ಲಾ ಹುತಾತ್ಮರಾದರೂ, ಬಹುತೇಕ ಏಕಾಂಗಿಯಾದ ಆಜಾದರೂ ಧೃತಿಗೆಡಲಿಲ್ಲ. ಒಂದೆಡೆ ಸಂಗಾತಿಗಳ ಬಂಧನ-ಸಾವು, ಇನ್ನೊಂದೆಡೆ ಸೆರೆಸಿಕ್ಕ ಕೆಲವರ ದ್ರೋಹ. ಇದಾವುದರಿಂದಲೂ ವಿಚರಿತರಾಗದೆ ‘ಮೇರು ಪರ್ವತ’ದಂತೆ ಆಜಾದ್ ರು ನಿಂತರು. ಸಂಗಾತಿಗಳೇ, ಪ್ರಾಣವನ್ನು ಒತ್ತೆಯಿಟ್ಟಾದರೂ ದೇಶವನ್ನು ದಾಸ್ಯದಿಂದ ಮುಕ್ತಗೊಳಿಸಲು ಯತ್ನಿಸುತ್ತೇನೆ. ಸಶಸ್ತ್ರ ಕ್ರಾಂತಿ ನೆರವೇರಿಸುತ್ತೇನೆ. ನಮ್ಮೆಲ್ಲರ ಕನಸನ್ನು ನನಸಾಗಿಸುತ್ತೇನೆ. ಎಂದು ಪೂರೈಸುವತ್ತ ಧೃಡವಾದ ಹೆಜ್ಜೆ ಹಾಕಲಾರಂಭಿಸಿದರು.
1931ರ ಫೆಬ್ರವರಿ 27 ರಂದು ಅಲಹಾಬಾದಿನ ಆಲ್ಫ್ರೆಡ್ ಪಾರ್ಕ್ ನಲ್ಲಿ ತಮ್ಮ ಸಂಗಾತಿಯೊಂದಿಗೆ ಅವರು ಮಾತನಾಡುತ್ತಿದ್ದರು. ದ್ರೋಹಿಗಳ ಸಂಚಿನಿಂದ ಪೊಲೀಸರಿಗೆ ವಿಷಯ ತಿಳಿಯಿತು. 80 ಜನರ ಪೊಲೀಸರ ಪಡೆ ಅವರನ್ನು ಸುತ್ತುವರೆಯಿತು. ಅರ್ಧ ಗಂಟೆಗಳ ಕಾಲ ಮಹಾಭಾರತದ ಅಭಿಮನ್ಯುವಿನಂತೆ ಏಕಾಂಗಿಯಾಗಿ ಆಜಾದ್ ಸೆಣಸಿದರು. ಗುಂಡುಗಳಿಂದ ದೇಹ ರಕ್ತಮಯವಾಗಿದ್ದರೂ, ಕಣ್ಮುಂದೆಯೇ ಸಾವಿನ ಛಾಯೆ ನರ್ತಿಸುತ್ತಿದ್ದರೂ ಕೊನೆಗಳಿಗೆ ವರೆಗೂ ಹೋರಾಡಿದ ಆಜಾದ್ ರವರಿಗೆ ಗುಂಡಿನ ಲೆಕ್ಕ ತಪ್ಪಿರಲಿಲ್ಲ. ಪ್ರತಿಜ್ಞೆ ಮರೆತಿರಲಿಲ್ಲ. “ಜೀವಂತವಾಗಿ ನಾನೆಂದು ಪೊಲೀಸರಿಗೆ ಸಿಕ್ಕಿ ಕೊಳ್ಳುವುದಿಲ್ಲ, ಕೈಗೆ ಬೇಡಿ ತೊಟ್ಟು ಕೋತಿಯಂತೆ ಹಿಂಬಾಲಿಸಲಾರೆ. ನಾನು ಸ್ವಾತಂತ್ರ್ಯವಾಗಿ ಬದುಕುತ್ತೇನೆ. ಸ್ವತಂತ್ರವಾಗಿ ಮಡಿಯುತ್ತೇನೆ” ಎಂದು ತಮಗೆ ತಾವೇ ತಮ್ಮ ಪಿಸ್ತೂಲಿನ ಕೊನೆಯ ಗುಂಡಿನಿಂದ ಗುಂಡಿಟ್ಟುಕೊಂಡು ನೆಲಕ್ಕುರುಳಿದರು.
ನಂತರ ವಿಷಯ ತಿಳಿದು, ಜನರು ತಂಡೋಪತಂಡವಾಗಿ ಪಾರ್ಕಿನತ್ತ ಧಾವಿಸಿ ಬಂದರು. ಗುಂಡೇಟಿನಿಂದ ಘಾಸಿಗೊಂಡು ಒರಗಿದ ಮರವೇ ಪೂಜಾಸ್ಥಳವಾಯಿತು. ಜನರು ಶ್ರದ್ಧೆ, ಗೌರವಗಳಿಂದ ಹೋರಾಟಕ್ಕೆ ಮೂಕ ಸಾಕ್ಷಿಯಾಗಿ ನಿಂತ ಮರದ ಚಕ್ಕೆಗಳನ್ನು ತೆಗೆದುಕೊಂಡು ಹೋಗಲಾರಂಭಿಸಿದರು. ಸರ್ಕಾರ ಹೆದರಿ ರಾತ್ರೋರಾತ್ರಿ ಆ ಮರವನ್ನು ಕಡಿದು ಹಾಕಿತು. ಮೂರ್ಖ ಸರ್ಕಾರ! ಮರ ಕಡಿಯುವುದರಿಂದ ಆಜಾದ್ ನೆನಪು ಮಾಸಿ ಹೋಗುವುದೆ? ಪಾರ್ಕಿನ ಸ್ಥಳವೇ ಯಾತ್ರಾಸ್ಥಳವಾಯಿತು. ಕೇವಲ 24 ವರ್ಷದ ಆಜಾದ್ ರ ಸಾಹಸ, ದೇಶ ಪ್ರೇಮಗಳು ಸಾವಿರಾರು ಯುವಕರಲ್ಲಿ ಸ್ಪೂರ್ತಿಯನ್ನು ತುಂಬಿ, ವಿದ್ಯಾರ್ಥಿ ಯುವಜನರು ಸ್ವತಂತ್ರ ಹೋರಾಟದಲ್ಲಿ ಧುಮುಕುವಂತೆ ಮಾಡಿತು.
ಇಂದು ನಮಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಂದರ್ಭ ಬಂದಾಗಲೆಲ್ಲ ಹಲವಾರು ಪ್ರಶ್ನೆಗಳು ನಮ್ಮ ಮುಂದೆ ಉದ್ಭವಿಸುತ್ತವೆ. ನಮ್ಮ ವಿದ್ಯಾಭ್ಯಾಸ, ಕೆಲಸ, ತಂದೆ-ತಾಯಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಇವೇ ಮುಂತಾದ ವ್ಯಕ್ತಿಗತ ಭಾವನೆಗಳು ಅಡ್ಡಿಯಾಗಿ ನಿಲ್ಲುತ್ತವೆ. ಇಂಥಹ ಸಂದರ್ಭದಲ್ಲೆಲ್ಲಾ ಆಜಾದರ ಬದುಕು ನಮಗೆಲ್ಲ ಆದರ್ಶವಾಗಬೇಕು. ಆಜಾದ್ ಇಂತಹ ವ್ಯಕ್ತಿಗತ ಭಾವನೆಗಳನ್ನು ಮೀರಿ ನಿಂತಿದ್ದರು. ಸ್ವಾತಂತ್ರ್ಯ ಆಂದೋಲನಕ್ಕೆ ಕಾಲಿಟ್ಟ ಮೇಲೆ ಎಂದೂ ಅವರು ಹಿಂತಿರುಗಿ ನೋಡಲಿಲ್ಲ. ಒಮ್ಮೆ ಆಜಾದರ ಸಂಗಾತಿಗಳು ಕಡುಕಷ್ಟದಲ್ಲಿದ್ದ ಆಜಾದ್ ರ ತಂದೆತಾಯಿಗಳಿಗೆ ಹಣ ಕಳಿಸುತ್ತೇವೆ ಎಂದಾಗ ಆಜಾದರೂ ಅದನ್ನು ಸಾರಾಸಗಟಾಗಿ ತಿರಸ್ಕರಿಸಿ ಹೀಗೆಂದರು “ಲಕ್ಷಾಂತರ ತಂದೆ ತಾಯಿಗಳ ಪರಿಸ್ಥಿತಿಯೂ ಹೀಗೇ ಇರುವಾಗ ಕೇವಲ ನನ್ನ ತಂದೆತಾಯಿಗಳಿಗೆ ಮಾತ್ರ ವಿಶೇಷ ಕಾಳಜಿ ಅನಗತ್ಯ”. ಅದೇ ರೀತಿ ಇನ್ನೊಮ್ಮೆ ಬಹಳ ದಿನಗಳ ನಂತರ ತಮ್ಮ ಹಳ್ಳಿಗೆ ಹೋದಾಗ ಕೆಲವು ಹಿತೈಷಿಗಳು ಆಜಾದರ ವೃದ್ಧ ತಂದೆ ತಾಯಿಗಳಿಗೆಂದು ಸ್ವಲ್ಪ ಹಣ ಸಂಗ್ರಹಿಸಿರುವುದು ತಿಳಿದು ಅವರನ್ನು ಹತ್ತಿರ ಕರೆದು ಹೀಗೆ ಹೇಳಿದರು “ಸ್ವಾಮಿ ನನ್ನ ತಂದೆ ತಾಯಿಯರಿಗಾಗಿ ಹಣ ಸಂಗ್ರಹಿಸಿರುವಿರಿ. ನನ್ನ ಹೆಸರನ್ನೂ ಬಳಸಿದ್ದೀರಿ. ನನ್ನದು ದೇಶಕ್ಕಾಗಿ ಮುಡಿಪಿಟ್ಟ ಬದುಕು. ನನ್ನ ಹೆಸರಿನಲ್ಲಿ ಸಂಗ್ರಹಿಸಿದೆಲ್ಲಾ ದೇಶಸೇವೆಗೆ ಸೇರಬೇಕೆ ಹೊರತು ಯಾರ ಸ್ವಂತ ಮನೆ ಖರ್ಚಿಗೂ ಒಂದು ಚಿಕ್ಕ ಕಾಸೂ ಖರ್ಚಾಗಬಾರದು” ಎಂದು ಹಣವನ್ನೆಲ್ಲಾ ಹೋರಾಟದ ನಿಧಿಗೆ ಸೇರಿಸಿಕೊಂಡುಬಿಟ್ಟರು.
ಇಂದು ವಿದ್ಯಾರ್ಥಿಗಳು ತಮ್ಮ ಜಾತಿ,ಧರ್ಮ, ಭಾಷೆ, ಭೇದಗಳನ್ನು ಮರೆತು ಸಾಮರಸ್ಯದ ಆಧಾರದ ಮೇಲೆ ಆಜಾದ್ ರ ಕನಸಾಗಿದ್ದ ಶೋಷಣಾ ರಹಿತ ಸಮಾಜವನ್ನು ನಿರ್ಮಿಸಲು ಒಂದುಗೂಡಬೇಕಿದೆ. ಎಷ್ಟೋ ಸಂದರ್ಭಗಳಲ್ಲಿ ವಿಚ್ಚಿದ್ರಕಾರಿ ಶಕ್ತಿಗಳ ಪ್ರಭಾವದಿಂದಾಗಿ ನಾವು ಸ್ವಜಾತಿ, ಸ್ವಧರ್ಮ, ನಮ್ಮ ಭಾಷೆ ಮುಂತಾದ ಅಂಧಾಭಿಮಾನಗಳಿಗೆ ಬಲಿಯಾಗುವುದುಂಟು. ಕೆಲವು ಕೋಮುವಾದಿ ಶಕ್ತಿಗಳು ಚಿತ್ರಿಸಿದಂತೆ ಅವರು ಎಂದೂ ಇಂತಹುದಕ್ಕೆ ಬಲಿಯಾಗಿರಲಿಲ್ಲ . ಎಲ್ಲಾ ಕಡೆ ಪ್ರಚಲಿತವಿರುವ ‘ಜನಿವಾರ ಧರಿಸಿರುವ ಅವರ ಭಾವಚಿತ್ರ’ ಇಂತಹ ಗೊಂದಲವನ್ನುಂಟು ಮಾಡುತ್ತದೆ. ಅದರ ಬಗ್ಗೆ ಸಹ ಸ್ವಾರಸ್ಯಕರವಾದ ಪ್ರಸಂಗವಿದೆ. ಅವರು ಒಮ್ಮೆ ವೇಷ ಮರೆಸಿಕೊಂಡು ಇರಬೇಕಾದ ಸಂದರ್ಭದಲ್ಲಿ ಹರಿಶಂಕರ ಶರ್ಮ ಎಂಬ ಹೆಸರಿನ ಬ್ರಾಹ್ಮಣನಾಗಿ ರುದ್ರ ನಾರಾಯಣನೆಂಬ ಓರ್ವ ಬೆಂಬಲಿಗರ ಮನೆಯಲ್ಲಿಯದ್ದಿದುಂಟು. ಬ್ರಾಹ್ಮಣನೆಂದುಕೊಂಡಿದ್ದ ಮೇಲೆ ಜನಿವಾರ ಧರಿಸಲೇಬೇಕಿತ್ತು. ರುದ್ರನಾರಾಯಣರು ಆಜಾದರ ಫೋಟೋ ತೆಗೆಯಬೇಕೆಂಬ ತಮ್ಮ ಒತ್ತಾಸೆ ತಡೆದುಕೊಳ್ಳಲಾಗದೆ ಒಮ್ಮೆ ಸ್ನಾನ ಮುಗಿಸಿ ಹೊರಬಂದ ಆಜಾದ್ ರ ಭಾವಚಿತ್ರ ತೆಗೆದರು!
ಆಜಾದ್ ರ 92ನೇ ಹುತಾತ್ಮ ದಿನಾಚರಣೆಯನ್ನು ಆಚರಿಸುವ ಈ ಸುದಿನದಲ್ಲಿ ಅವರ ಆದರ್ಶ, ಸಾಹಸ, ಚಿಂತನೆಗಳು ರೈತ-ಕಾರ್ಮಿಕರ ಹಿತಕ್ಕಿಂತ ಬಂಡವಾಳಶಾಹಿಗಳ ಹಿತವನ್ನೇ ಆಧ್ಯತೆಯನ್ನಾಗಿರಿಸಿಕೊಂಡಿರುವ ಪ್ರಭುತ್ವದ ವಿರುದ್ದ ಧ್ವನಿಯೆತ್ತಲು ಹಾಗು ಅವರು ಕನಸು ಕಂಡಿದ್ದ ಭಾರತವನ್ನು ನನಸು ಮಾಡಲು ನಮಗೆಲ್ಲರಿಗೂ ಪ್ರೇರಣೆಯಾಗಲಿ.
- ಎಲ್ದೋ ಹೊನ್ನೇಕುಡಿಗೆ
ಕಾರ್ಮಿಕ ಮುಖಂಡರು, ಪ್ರಗತಿಪರ ಹೋರಾಟಗಾರರು
ಇದನ್ನೂ ಓದಿ; ಬಹುಜನ ಭಾರತ; ಭಗತ್ ಸಿಂಗ್ ಎಂಬ ಬೆಳಕಿಗೆ ಬೆನ್ನು ಮಾಡಿರುವ ಸಮಾಜ


