Homeಚಳವಳಿನಂಜುಂಡಸ್ವಾಮಿ, ಶರದ್ ಜೋಷಿ, ಟಿಕಾಯತ್ ಫೆನಾಮೆನನ್

ನಂಜುಂಡಸ್ವಾಮಿ, ಶರದ್ ಜೋಷಿ, ಟಿಕಾಯತ್ ಫೆನಾಮೆನನ್

- Advertisement -
- Advertisement -

ಹಸಿರು ಕ್ರಾಂತಿಯ ಹಿನ್ನೆಲೆಯಲ್ಲಿ ಸ್ಫೋಟಿಸಿದ ರೈತ ಚಳವಳಿಗಳನ್ನು ಬೇರೆಬೇರೆಯಾಗಿ ಕಾಣುವುದರಿಂದ ಅವುಗಳನ್ನು ಅರ್ಥೈಸಿಕೊಳ್ಳಲಾಗುವುದಿಲ್ಲ. ಒಂದೇ ಮರದ ರೆಂಬೆಗಳಲ್ಲಿ ಒಂದೊಂದನ್ನೂ ಪ್ರತ್ಯೇಕ ಮರವೆಂಬಂತೆ ಪರಿಗಣಿಸಿದರೆ ಆ ರೆಂಬೆಯೂ, ಅದರ ಹೂ, ಫಲಗಳ ಬಗ್ಗೆಯೂ ಸರಿಯಾಗಿ ತಿಳಿಯಲಾಗುವುದಿಲ್ಲ. ಮರವನ್ನೂ ಅರಿಯಲಾಗುವುದಿಲ್ಲ ಅಲ್ಲವೇ! ಆ ಕಾಲದ ರೈತ ಚಳವಳಿಗಳ ನಡುವಣ ಸಾಮ್ಯತೆ, ಭಿನ್ನತೆಗಳ ತುಲಾನಾತ್ಮಕ ಅಧ್ಯಯನ ಮಾಡುವುದರ ಮೂಲಕ ಮಾತ್ರ ನಂಜುಂಡಸ್ವಾಮಿಯವರನ್ನೂ ಕರ್ನಾಟಕ ರಾಜ್ಯ ರೈತಸಂಘವನ್ನೂ ವಿಶ್ಲೇಷಣೆಗೊಳಪಡಿಸಲು ಸಾಧ್ಯ ಎಂಬ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಗಮನ ಸೆಳೆದಿದ್ದೇನೆ.

ಕೈಗೆತ್ತಿಕೊಂಡ ಕೃಷಿಯ ಸಮಸ್ಯೆಗಳು

ಈ ಎಲ್ಲ ರೈತಸಂಘಟನೆಗಳೂ ಕೈಗೆತ್ತಿಕೊಂಡ ಸಮಸ್ಯೆಗಳು ಸರಿಸುಮಾರು ಒಂದೇ ರೀತಿಯವು. ಅವೆಲ್ಲವೂ ಬೆಳೆಗಳ ಮತ್ತು ಫಸಲಿನ ಸಮಸ್ಯೆಗಳಾಗಿದ್ದವು. ಈ ಎಲ್ಲ ಸಂಘಟನೆಗಳ ಹೋರಾಟಗಳ ಪ್ರಧಾನ ಹೂರಣ ಫಸಲುಗಳ ಬೆಲೆ. ಅದರಲ್ಲೂ ಬಹುಹೆಚ್ಚು ಗಮನವನ್ನು ಸೆಳೆದದ್ದು ಕಬ್ಬಿನ ಬೆಲೆ. ಇದರ ಜೊತೆಗೆ ಭತ್ತ, ಹತ್ತಿ, ಈರುಳ್ಳಿ ಮತ್ತಿತರ ಬೆಳೆಗಳ ಬೆಲೆಯ ಪ್ರಶ್ನೆ ಕೂಡಾ ಬೇರೆಬೇರೆ ಸಮಯದಲ್ಲಿ ಹೋರಾಟದ ಪ್ರಶ್ನೆಯಾಯಿತು.

ಕರ್ನಾಟಕ ರಾಜ್ಯ ರೈತ ಸಂಘವನ್ನು ಸ್ಥಾಪಿಸುವ ಮೊದಲೇ ಅಸ್ತಿತ್ವದಲ್ಲಿದ್ದುದು ಎಚ್.ಎಸ್.ರುದ್ರಪ್ಪನವರ ನೇತೃತ್ವದ ಶಿವಮೊಗ್ಗ ಕಬ್ಬು ಬೆಳೆಗಾರರ ಸಂಘ. ಕಬ್ಬಿನ ಬೆಲೆ, ಸಕ್ಕರೆ ಕಾರ್ಖಾನೆಗಳು ಸರಬರಾಜು ಮಾಡಿದ ಕಬ್ಬಿನ ಹಣ ನೀಡದೇ ವರ್ಷಗಟ್ಟಲೇ ಬಾಕಿ ಉಳಿಸಿಕೊಳ್ಳುವುದು, ಮತ್ತಿತರ ಕಬ್ಬು ಬೆಳೆಯ ಸಮಸ್ಯೆಗಳೇ ಅದಕ್ಕೆ ಮುಖ್ಯವಾಗಿದ್ದವು. ರಾಜ್ಯ ರೈತ ಸಂಘ ಸ್ಥಾಪನೆಯಾದ ನಂತರ ಇದು ಶಿವಮೊಗ್ಗ ಮಾತ್ರವಲ್ಲದೆ ಮಂಡ್ಯ, ಬಳ್ಳಾರಿ, ಕೊಪ್ಪಳ, ಬೆಳಗಾಂ ಮೊದಲಾದ ಜಿಲ್ಲೆಗಳ ಕಬ್ಬು ಬೆಳೆಗಾರರ ಸಮಸ್ಯೆಗಳನ್ನೂ ಸೇರಿಸಿ ಕೈಗೆತ್ತಿಕೊಳ್ಳಲಾಯಿತು. 1982ರಲ್ಲಿ ಕಾಳಮುದ್ದನದೊಡ್ಡಿಯ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಮುಂದೆ, ಮೈಸೂರು ರಸ್ತೆಯ ಗೆಜ್ಜಲಗೆರೆಯಲ್ಲಿ ತೀವ್ರ ಹೋರಾಟಗಳಾದವು. ಈ ಸಮಯದಲ್ಲಿ ಗುಂಡೇಟಿನಿಂದ ಇಬ್ಬರು ರೈತರ ಹತ್ಯೆಯಾಯಿತು ಎಂದರೆ ಈ ಸಮಸ್ಯೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಬಹುದು. ಇದೇ ಪ್ರಶ್ನೆಯ ಮೇಲೆ ವಿಧಾನಸೌಧದ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹಗಳು ನಡೆದವು. ನಂತರ ವಿಧಾನಸೌಧದೊಳಗೆ ಹೆಗಡೆ ಸರ್ಕಾರದೊಡನೆ ನಡೆದ ಮಾತುಕತೆ ವಿಫಲವಾದಾಗ ವಿಧಾನಸೌಧದ ಸಮ್ಮೇಳನ ಸಭಾಂಗಣದೊಳಗೇ 1983ರ ಆಗಸ್ಟ್ 3ರಿಂದ 9ರವರೆಗೆ 7 ದಿನಗಳ ಧರಣಿ ಎಂಬಂತಹ ಗಂಭೀರ ಸ್ವರೂಪವನ್ನು ಕಬ್ಬಿನ ಬೆಲೆಯ ಹೋರಾಟ ಪಡೆದುಕೊಂಡಿತು. ನಂತರವೂ ಹತ್ತಾರು ಬಾರಿ ಕಬ್ಬಿನ ಬೆಲೆಗಾಗಿ ಹೋರಾಟಗಳನ್ನು ಸಂಘಟಿಸಲಾಯಿತು.

ನಂಜುಂಡಸ್ವಾಮಿಯವರು ರೈತಸಂಘಕ್ಕೆ ಬರುವ ಮೊದಲೇ ಲೆವಿ ಪ್ರಶ್ನೆಯನ್ನು ಎತ್ತಿದ್ದರು. ಲೆವಿ ಎಂದರೆ ಬರಗಾಲ ಮತ್ತು ಆಹಾರ ಕೊರತೆಯನ್ನು ನೀಗಿಸಲು ರೂಪಿಸಿದ ಪಡಿತರ ವ್ಯವಸ್ಥೆಗೆ ಆಹಾರ ಧಾನ್ಯಗಳನ್ನು ಪೂರೈಸಲು ಸರ್ಕಾರ ಭತ್ತದ ಬೆಳೆಗಾರರಿಂದ ಕಡಿಮೆ ಬೆಲೆಗೆ ಕೊಳ್ಳುತ್ತಿದ್ದ ಪದ್ಧತಿ. ಲೆವಿಯ ಜೊತೆಗೆ ಆಹಾರ ಧಾನ್ಯಗಳ ಬೆಲೆ ನಿಯಂತ್ರಣದಲ್ಲಿಡಲು ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ಹೊರಕ್ಕೆ ಸಾಗಾಟ ಮಾಡಲಾಗದಂತೆ ನಿರ್ಬಂಧಗಳನ್ನು ಹೇರಲಾಗಿತ್ತು. ಕರ್ನಾಟಕ ರಾಜ್ಯ ರೈತ ಸಂಘ ಈ ಸಮಸ್ಯೆಗಳನ್ನು ಹಲವು ಬಾರಿ ಕೈಗೆತ್ತಿಕೊಂಡು ಹೋರಾಟ ರೂಪಿಸಿತು.

ಆಗಾಗ್ಗೆ ಗಮನ ನೀಡಿದ ಮತ್ತೊಂದು ಬೆಳೆ ಎಂದರೆ ಹತ್ತಿ. ಆದರೆ ಕಬ್ಬು ಮತ್ತು ಭತ್ತದ ಬೆಲೆ ಪ್ರಶ್ನೆ ಪಡೆದುಕೊಂಡಷ್ಟು ಪ್ರಾಮುಖ್ಯತೆಯನ್ನು ಹತ್ತಿ ಪಡೆದುಕೊಳ್ಳಲಿಲ್ಲ. ಉಳಿದ ಕೆಲವು ಬೆಳೆಗಳ ಪ್ರಶ್ನೆಗಳು ಸ್ಥಳೀಯ ಮಟ್ಟದಲ್ಲಿನ ಹೋರಾಟಗಳಿಗೇ ಸೀಮಿತವಾದವು.

ಈ ಅಂಶವೇ ರಾಜ್ಯ ರೈತ ಸಂಘದ ಪ್ರಧಾನ ನೆಲೆ ಕಬ್ಬು, ಭತ್ತ ಬೆಳೆಯುವ ಪ್ರದೇಶಗಳಿಗೆ ಸೀಮಿತಗೊಂಡ ವಾಸ್ತವಕ್ಕೆ ಕಾರಣವನ್ನು ನೀಡುತ್ತದೆ.

ಸಾಲ ವಸೂಲಿ, ಆಸ್ತಿ ಜಪ್ತಿ, ಅಧಿಕಾರಿಗಳ ಗ್ರಾಮ ಪ್ರವೇಶಕ್ಕೆ ತಡೆ

ಬೆಳೆಗಳ ಬೆಲೆ ಪ್ರಶ್ನೆಯ ನಂತರ ಸಾಲ, ಕಂದಾಯ ವಸೂಲಾತಿ ಮತ್ತು ಅದಕ್ಕಾಗಿ ಕಂದಾಯಾಧಿಕಾರಿಗಳು ರೈತರ ಮನೆಗೆ ನುಗ್ಗಿ ಅವರ ಆಸ್ತಿಗಳನ್ನು ಜಪ್ತಿ ಮಾಡುವ ಸಮಸ್ಯೆ ರಾಜ್ಯ ರೈತ ಸಂಘದಲ್ಲಿ ಗಣನೀಯ ಪ್ರಾಮುಖ್ಯತೆಯನ್ನು ಪಡೆಯಿತು. ಮುಖ್ಯವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ತಲಾಟಿಯಿಂದ ತಹಸೀಲ್ದಾರ್‌ವರೆಗೆ ಅಧಿಕಾರಿಗಳು ರೈತರ ಮನೆಗೆ ನುಗ್ಗಿ ಬದುಕಿನ ದೈನಂದಿನ ಅಗತ್ಯಗಳೂ ಸೇರಿದಂತೆ ರೈತರ ಆಸ್ತಿಗಳನ್ನು ಜಪ್ತಿ ಮಾಡುತ್ತಿದ್ದರು. ಇದರ ವಿರುದ್ಧವಾಗಿ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಸಾಲ ವಸೂಲಾತಿಗಾಗಿ ಸರಕಾರ ಭೂಮಿ ಹರಾಜು ಕೈಗೊಳ್ಳಲು ಮುಂದಾಗುತ್ತಿತ್ತು. ಈ ಸಂದರ್ಭದಲ್ಲಿ ರೈತರ್‍ಯಾರೂ ಹರಾಜಿನಲ್ಲಿ ಭಾಗವಹಿಸಿ ಸಾಲ ಬಾಕಿಯುದಿಳಿದ್ದ ರೈತರ ಭೂಮಿಯನ್ನು ಕೊಳ್ಳಬಾರದೆಂದು ಕರೆ ನೀಡಲಾಯಿತು.

ನಂತರ ರೈತರ ಆಸ್ತಿಯನ್ನು ಜಪ್ತಿ ಮಾಡಿಟ್ಟುಕೊಂಡಿದ್ದ ಕಡೆಗೆ ಹೋಗಿ ಅವುಗಳನ್ನು ಮರುಜಪ್ತಿ ಮಾಡಿ ರೈತರಿಗೆ ಹಿಂದಿರುಗಿಸುವ ಕ್ರಮ ಕೈಗೊಳ್ಳಲಾಯಿತು. ಅಧಿಕಾರಿಗಳ ವಿರುದ್ಧ ಪ್ರತಿಕ್ರಮವಾಗಿ ಭ್ರಷ್ಟಾಚಾರದಿಂದ ಗಳಿಸಿದ ಆಸ್ತಿಯನ್ನು ರೈತ ಸಂಘದ ಕಾರ್ಯಕರ್ತರು ಜಪ್ತಿ ಮಾಡುವುದು. ಈ ಕ್ರಮಗಳು ಹೆಚ್ಚಾಗಿ ಶಿವಮೊಗ್ಗ ಜಿಲ್ಲೆಗೆ ಸೀಮಿತವಾದವು. ಇತರ ಜಿಲ್ಲೆಗಳಲ್ಲಿ ಕೆಲವು ಕಡೆ ಮಾತ್ರ ಇಷ್ಟು ಸ್ಫೂರ್ತಿಯಿಂದ ಇಂತಹ ಪ್ರತಿಕ್ರಮಗಳಿಗೆ ಕೈ ಹಾಕಲಾಯಿತು. ಆದರೆ ಹೆಚ್ಚು ಜನಪ್ರಿಯವಾದದ್ದು ಗ್ರಾಮಗಳಿಗೆ ಅಧಿಕಾರಿಗಳು ಪ್ರವೇಶಿಸಬಾರದು ಎಂದು ಹಳ್ಳಿಗಳ ಮುಂದೆ ರೈತರು ಬೋರ್ಡ್ ಹಾಕುವ ಕ್ರಮ.

ಇಂತಹ ಕ್ರಮಗಳು ನಂಜುಂಡಸ್ವಾಮಿಯವರಿಗೆ ಜನಪ್ರಿಯತೆಯನ್ನು ತಂದುಕೊಟ್ಟವು. ಪತ್ರಿಕೆಗಳಲ್ಲಿ ಈ ಕ್ರಮಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ನಂಜುಂಡಸ್ವಾಮಿಯವರ ಹೇಳಿಕೆಗಳು ಹೆಚ್ಚು ಪ್ರಚಾರವನ್ನು ಪಡೆದವು.

ಸಾಲ ವಸೂಲಿಗೆ ಸಂಬಂಧಿಸಿದಂತೆ ರಾಜ್ಯವ್ಯಾಪಿ ಸ್ವರೂಪ ಪಡೆದ ಒಂದು ಹೋರಾಟ 301 (ಸಿ) ಕಲಂ ತಿದ್ದುಪಡಿ ವಿರುದ್ಧದ್ದು. ರಾಮಕೃಷ್ಣ ಹೆಗಡೆ ಸರ್ಕಾರ ಒಂದು ಸುಗ್ರೀವಾಜ್ಞೆ ಹೊರಡಿಸಿತ್ತು. ಸಹಕಾರಿ ಸಂಘಗಳ ಕಾನೂನಿಗೆ ತಂದ ಆ ತಿದ್ದುಪಡಿ ಸಾಲ ಬಾಕಿ ವಸೂಲಿಗೆ ರೈತರ ಭೂಮಿಯನ್ನು ಹರಾಜಿಗಿಟ್ಟಾಗ ರೈತರ್‍ಯಾರೂ ಹರಾಜಿನಲ್ಲಿ ಭಾಗವಹಿಸದಿದ್ದರೆ ಸರ್ಕಾರವೇ ಭೂಮಿಯನ್ನು ವಹಿಸಿಕೊಳ್ಳುವ ಕ್ರಮ. ಇದನ್ನು ವಿರೋಧಿಸಿ ರಾಜ್ಯ ರೈತ ಸಂಘ 1985ರಲ್ಲಿ ಬೆಳಗಾವಿಯಿಂದ ರೈತರ ಪಾದಯಾತ್ರೆ ಸಂಘಟಿಸಿತು. ಸರಿಸುಮಾರು ಒಂದು ತಿಂಗಳ ಕಾಲದ ಪಾದಯಾತ್ರೆ ಇದು. ಸರ್ಕಾರ ಈ ಸುಗ್ರೀವಾಜ್ಞೆಯನ್ನು ಹಿಂತೆಗೆದುಕೊಳ್ಳುವುದರ ಮೂಲಕ ಹೋರಾಟ ಯಶಸ್ವಿಯಾಯಿತು.

ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರವೆಂದರೆ ರೈತರಿಗೆ ಹೆಚ್ಚು ಸಾಲ ಕೊಡಬೇಕು ಎಂಬ ಒತ್ತಾಯ ಈ ಹೋರಾಟಗಳಲ್ಲಿ ಸೇರಿಲ್ಲ ಎಂಬುದು. ಖಾಸಗಿ ಬಡ್ಡಿ ಸಾಹುಕಾರರ ಸಾಲ ವಸೂಲಾತಿ, ಸುಲಿಗೆಗಳ ಪ್ರಶ್ನೆ ಇಲ್ಲ.

ಈ ಪ್ರಮುಖ ಪ್ರಶ್ನೆಗಳನ್ನು ಬಿಟ್ಟರೆ 80ರ ದಶಕದಲ್ಲಿ ರಾಜ್ಯ ರೈತ ಸಂಘ ನೀಲಗಿರಿ ನೆಡುವುದರ ವಿರುದ್ಧ, ಗ್ರಾನೈಟ್ ಕಲ್ಲು ಗಣಿಗಾರಿಕೆಯ ಅಕ್ರಮಗಳ ವಿರುದ್ಧ, ಸಾರಾಯಿ ವಿರುದ್ಧ, ರೈತರನ್ನು ಬಂಧಿಸುವುದರ ವಿರುದ್ಧ ಒಂದೆರಡು ತಾಲ್ಲೂಕುಗಳಿಗೆ ಸೀಮಿತವಾಗಿ ನಡೆದ ಹೋರಾಟಗಳಾಗಿವೆ.

ರೈತರ ಹಲವು ಒತ್ತಾಯಗಳ ಪಟ್ಟಿಯೊಂದನ್ನು ಮಂಡಿಸಿ ಅದರ ಬಗ್ಗೆ ನಡೆಸಿದ ಹೋರಾಟಗಳು 80ರ ದಶಕದಲ್ಲಿ ಬಹಳ ಮುಖ್ಯವಾದವು. ಅವು ರಾಜ್ಯ ರೈತ ಸಂಘ ಹಾಗೂ ನಂಜುಂಡಸ್ವಾಮಿಯವರಿಗೆ ರಾಜ್ಯದಲ್ಲೂ, ದೇಶದಲ್ಲೂ ಖ್ಯಾತಿಯನ್ನು ತಂದುಕೊಟ್ಟಿತು.

1982ರ ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿ ನಡೆಸಿದ ಬೃಹತ್ ಬಹಿರಂಗ ಸಭೆ ಲಕ್ಷಗಟ್ಟಲೆ ರೈತರನ್ನು ಅಣಿನೆರೆಸಿತು. ರಾಜ್ಯದೆಲ್ಲೆಡೆಯಿಂದ ರೈತರು ವಾಹನಗಳಲ್ಲಿ ಬಂದು ಕಬ್ಬನ್ ಪಾರ್ಕನ್ನು ತುಂಬಿದರು.

1984ರ ಜನವರಿ 26ರಂದು ಆರಂಭದ ಚಳವಳಿ ಫೆ.2ರವರೆಗೆ ನಡೆದು, ರಸ್ತೆ, ರೈಲು ತಡೆ ಚಳುವಳಿಯಲ್ಲಿ 32 ಸಾವಿರಕ್ಕಿಂತ ಹೆಚ್ಚು ಜನ ಬಂಧನಕ್ಕೊಳಗಾದರು. ಜೈಲುಗಳಲ್ಲಿ ಜಾಗಗಳಿಲ್ಲದೆ ಶಾಲೆಗಳಲ್ಲಿ ಬಂಧನ. ಕೊನೆಗೆ, ಬಂಧಿಸಿದ ರೈತರನ್ನು ದೂರದ ಜಿಲ್ಲೆಗಳಲ್ಲಿ ಎಲ್ಲೆಲ್ಲೋ ಬಿಟ್ಟು ಬರುವುದು ಮೊದಲಾದ ಘಟನೆಗಳ ಮೂಲಕ ಕರ್ನಾಟಕ ಇಡೀ ದೇಶದ ಗಮನವನ್ನು ಸೆಳೆಯಿತು.

ಇವುಗಳ ಜೊತೆಗೆ 1987ರಲ್ಲಿ ಹಳಿಯಾಳದಲ್ಲಿ ಮಹಿಳಾ ರೈತರ ಸಮಾವೇಶ, ಹುಬ್ಬಳ್ಳಿಯಲ್ಲಿ ಪರ್ಯಾಯ ರಾಜಕೀಯ ಶಕ್ತಿ ಸಮಾವೇಶ, ಎರಡು ಜೈಲ್ ಭರೋ ಚಳುವಳಿಗಳನ್ನು ನಡೆಸಲಾಯಿತು.

ಮಹಾರಾಷ್ಟ್ರದ ಶೇತ್ಕರಿ ಸಂಘಟನೆ ಮತ್ತು ಶರದ್ ಜೋಷಿ

ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟಗಳು ನಮಗೆ ಹೆಚ್ಚು ಪ್ರಸ್ತುತವೆಂದು ಸ್ವಲ್ಪ ವಿವರವಾಗಿ ಬರೆದಿದ್ದೇನೆ. ಅದೇ ತೆರನೆ ಇತರ ರೈತ ಸಂಘಗಳು ಕೈಗೆತ್ತಿಕೊಂಡ ಪ್ರಶ್ನೆಗಳು, ಅದರ ನಾಯಕರು ಪ್ರಸಿದ್ಧರಾದ ಬಗೆಯನ್ನು ಸಂಕ್ಷಿಪ್ತವಾಗಿ ನೀಡಲು ಪ್ರಯತ್ನಿಸುತ್ತೇನೆ.

ಶರದ್ ಜೋಷಿಯವರು 1979ರಲ್ಲಿ ಶೇತ್ಕರಿ ಸಂಘಟನೆ ಸ್ಥಾಪಿಸಿದ ಮೇಲೆ ಪುಣೆಯ ಬಳಿಯಿದ್ದ ತಮ್ಮ ಕೃಷಿ ಕ್ಷೇತ್ರದ ಪ್ರದೇಶದಲ್ಲಿಯೇ ರೈತರು ಬೆಳೆಯುತ್ತಿದ್ದ ಬೆಳೆಗಳ ಬೆಲೆಯಿಂದ ನಷ್ಟವಾಗುತ್ತಿರುವುದರ ವಿರುದ್ಧ ಹೋರಾಟ ಆರಂಭಿಸಿದರು. 1980ರಲ್ಲಿ ನರಗುಂದ, ನವಲಗುಂದ ರೈತ ಚಳವಳಿಯ ಸ್ಫೋಟದ ನಂತರ ನಿಪ್ಪಾಣಿಯಲ್ಲಿ ಬೀಡಿ ಹೊಗೆಸೊಪ್ಪು ಬೆಳೆಯುವ ರೈತರ ಹೋರಾಟದಲ್ಲಿ ಅವರು ಭಾಗವಹಿಸಿದರು.

ಅವರಿಗೆ ಬಹಳ ಪ್ರಸಿದ್ಧಿಯನ್ನು ತಂದುಕೊಟ್ಟಿದ್ದು ನಾಸಿಕ್ ರಸ್ತೆ ತಡೆ ಹೋರಾಟ. ಈರುಳ್ಳಿ ಬೆಲೆ ಕುಸಿತದಿಂದಾಗಿ ಕಂಗೆಟ್ಟ ರೈತರಿಗೆ ನೇತೃತ್ವ ನೀಡಿ ಲಕ್ಷಗಟ್ಟಲೆ ರೈತರನ್ನು ವಾರಗಟ್ಟಲೆ ರಸ್ತೆಯ ಮೇಲೆ ಕೂಡಿಸಿ ದೊಡ್ಡ ಹೋರಾಟ ಮಾಡಿದರು. ಹತ್ತಿ, ಕಬ್ಬು ಮತ್ತಿತರ ಬೆಳೆಗಳ ಬೆಲೆ ಕುಸಿದಾಗಲೆಲ್ಲ ಅವರು ರೈತರ ಪ್ರಶ್ನೆಗಳನ್ನು ಕೈಗೆತ್ತಿಕೊಂಡರು.

ಹೀಗೆ ನಂಜುಂಡಸ್ವಾಮಿಯವರಂತೆಯೇ ಅವರ ಹೋರಾಟಗಳೆಲ್ಲ ಹೆಚ್ಚಾಗಿ ಕೇಂದ್ರೀಕೃತವಾಗಿದ್ದು ಬೆಳೆಗಳ ಬೆಲೆಗಳ ಸುತ್ತವೇ. ಆಹಾರ ಧಾನ್ಯಗಳ ಲೆವಿ, ಸಾಗಾಟ ನಿರ್ಬಂಧ, ವಿದ್ಯುತ್ ದರಗಳು, ಅದರ ಸರಬರಾಜು, ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ, ಕಾನೂನುಗಳ ಹಿಡಿತ ಕೂಡಾ ಅವರು ಕೈಗೆತ್ತಿಕೊಂಡ ಇತರ ವಿಷಯಗಳು.

ಅವರ ಘೋಷಣೆಯೂ ಕೂಡಾ ನಂಜುಂಡಸ್ವಾಮಿಯವರಂತೆಯೇ: ’ರೈತರೇನೂ ಭಿಕ್ಷೆ ಕೇಳುತ್ತಿಲ್ಲ, ಅವರ ಬೆವರಿನ ಬೆಲೆ ಪಡೆಯುವುದು ಅವರ ಹಕ್ಕು’. ಬೆಲೆ ಸರಿಯಾಗಿ ನೀಡಿದರೆ ಯಾವ ಸಹಾಯಧನವೂ ಬೇಕಿಲ್ಲ. ಸಾಲಮನ್ನಾ ಕೂಡಾ ಕೇಳುವವರಲ್ಲ ರೈತರು. ಮಾರುಕಟ್ಟೆಯ ಮೇಲಿನ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಿ ಮಾರುಕಟ್ಟೆ ಮುಕ್ತ ಮಾಡಿ ಎಂಬುದು ಅವರ ನಿಲುವಾಗಿತ್ತು.

ಭಾರತೀಯ ಕಿಸಾನ್ ಯೂನಿಯನ್ ಮತ್ತು ಮಹೇಂದ್ರ ಟಿಕಾಯತ್

ಚರಣ್ ಸಿಂಗ್ ಸ್ಥಾಪಿಸಿ ನಂತರ ಕ್ರಿಯಾಶೀಲತೆ ಕಳೆದುಕೊಂಡಿದ್ದ ಭಾರತೀಯ ಕಿಸಾನ್ ಯೂನಿಯನ್‌ಅನ್ನು 1986ರಲ್ಲಿ ಪುನರ್ ಸಂಘಟಿಸಿದ ಟಿಕಾಯತ್, ತಮ್ಮ ಊರನ್ನೇ ಅದರ ಕೇಂದ್ರ ಕಚೇರಿ ಮಾಡಿ ವರ್ಗಾಯಿಸಿದರು.

1987ರಲ್ಲಿ ವಿಪರೀತವಾಗಿ ಏರಿಸಲಾಗಿದ್ದ ವಿದ್ಯುತ್ ದರಗಳು ಮತ್ತು ಅದರ ಸರಬರಾಜಿನ ಸಮಸ್ಯೆಗಳ ಬಗ್ಗೆ ಹೋರಾಟ ಆರಂಭಿಸಿದರು. 1988ರ ಜನವರಿ-ಫೆಬ್ರವರಿಯಲ್ಲಿ ಹಲವು ಹತ್ತು ಸಾವಿರ ರೈತರು ಮೀರತ್ ಜಿಲ್ಲಾಧಿಕಾರಿ ಕಚೆರಿಯನ್ನು ಮುತ್ತಿಗೆ ಹಾಕಿ ವಿದ್ಯುತ್ ಬಾಕಿ ಬಿಲ್ ವಜಾಕ್ಕೆ ಒತ್ತಾಯಿಸಿದರು. ಮೂರು ವಾರಗಳ ಕಾಲ ಅದರ ಕಾರ್ಯವನ್ನು ಬಂದ್ ಮಾಡಿದ ಹೋರಾಟದ ಮೂಲಕ ಟಿಕಾಯತ್ ಪ್ರಸಿದ್ಧರಾದರು. ನಂತರ ಒಂದು ದಶಕದ ಕಾಲ ಅವರ ಹೋರಾಟಗಳು ಉತ್ತುಂಗದಲ್ಲಿದ್ದವು.

ಮೀರತ್ ಹೋರಾಟದ ಯಶಸ್ಸಿನಿಂದ ಉತ್ತೇಜಿತರಾಗಿ 1988ರ ಅಕ್ಟೋಬರ್‌ನಲ್ಲಿ ದೆಹಲಿಯ ಬೋಟ್ ಕ್ಲಬ್‌ನ ವಿಶಾಲ ಮೈದಾನದಲ್ಲಿ ಲಕ್ಷಾಂತರ ರೈತರ ಬೃಹತ್ ಬಹಿರಂಗ ಸಭೆಯನ್ನು ಸಂಘಟಿಸಿದರು. ಶರದ್ ಜೋಷಿ ಮೊದಲಾದ ರೈತ ನಾಯಕರೂ ಇದರಲ್ಲಿ ಪಾಲ್ಗೊಂಡಿದ್ದರು.

ಈ ಸಭೆಯ ಸಂದರ್ಭದಲ್ಲಿ ದೆಹಲಿ ನಗರದಲ್ಲಿ ಹತ್ತಾರು ಕಿಮಿಗಳ ದೂರ ಎತ್ತಿನ ಬಂಡಿಗಳು, ಟ್ರ್ಯಾಕ್ಟರ್‌ಗಳು ನಿಂತು ಇಡೀ ದೆಹಲಿಯ ಸಂಚಾರವನ್ನೇ ಬಂದ್ ಮಾಡಿದುದನ್ನು ದೆಹಲಿಯ ನಾಗರಿಕರು ಇಂದೂ ನೆನಪಿಸಿಕೊಳ್ಳುವಂತಾಗಿದೆ.

ಅಂದಿನ ರಾಜೀವ್ ಗಾಂಧಿ ಸರ್ಕಾರ ಟಿಕಾಯತ್ ಸಲ್ಲಿಸಿದ 35 ಒತ್ತಾಯಗಳ ಮನವಿಯಲ್ಲಿ ಹಲವನ್ನು ಒಪ್ಪಿಕೊಳ್ಳಬೇಕಾಯಿತು. ಅದರಲ್ಲಿ ಕಬ್ಬಿನ ಬೆಲೆ, ವಿದ್ಯುತ್ ದರ ಬಾಕಿ ಮನ್ನಾ, ನೀರಿನ ದರ ಇಳಿಕೆ ಇತ್ಯಾದಿ ಇದ್ದವು. ಸಾಲ ಮನ್ನಾ ಮುಂದಿನ ದಿನಗಳಲ್ಲಿ ಮುಖ್ಯವಾಗಿ ಕೈಗೆತ್ತಿಕೊಂಡ ಮತ್ತೊಂದು ಮುಖ್ಯ ಸಮಸ್ಯೆಯಾಗಿತ್ತು.

ಮತ್ತೆ 1990, 92ರಲ್ಲಿ ಕೂಡಾ ಲಕ್ನೋದಲ್ಲಿ ಎರಡು ಮೂರು ಲಕ್ಷ ರೈತರ ಬೃಹತ್ ಹೋರಾಟಗಳನ್ನು ಸಂಘಟಿಸಿದರು. ಅವರೂ ಕೂಡಾ ನೀಡುತ್ತಿದ್ದ ಘೋಷಣೆ, ಮಾಡುತ್ತಿದ್ದ ಭಾಷಣಗಳು ನಮಗೆ ಬೇಕಾದ್ದು ’ಭಿಕ್ಷೆಯಲ್ಲ, ಬೆವರಿನ ಬೆಲೆ’ ಎಂದು.

ಹೀಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ನಂಜುಂಡಸ್ವಾಮಿಯವರು, ಶೇತ್ಕರಿ ಸಂಘಟನೆ ಮತ್ತು ಶರದ್ ಜೋಶಿಯವರು, ಭಾರತೀಯ ಕಿಸಾನ್ ಯೂನಿಯನ್ ಮತ್ತು ಮಹೇಂದ್ರ ಟಿಕಾಯತ್ ಎತ್ತಿಕೊಂಡ ಪ್ರಶ್ನೆಗಳು ಬೆಲೆಗಳ ಬೆಲೆಗಳು, ಸಾಲ, ಕೃಷಿ ಉತ್ಪಾದನೆಯ ಸಮಸ್ಯೆಗಳು, ಹೋರಾಟದ ವಿಧಾನಗಳು ಕೂಡಾ ಬಹಳಷ್ಟು ಸಾಮ್ಯ. ಬೃಹತ್ ಬಹಿರಂಗ ಸಭೆಗಳು, ಕಚೆರಿಗಳ ಮುತ್ತಿಗೆ, ರಸ್ತೆ ಬಂದ್ ಇತ್ಯಾದಿ ಹಾಗೂ ಪ್ರಸಿದ್ಧಿಗೆ ಬಂದ ರೀತಿಯೂ ಕೂಡಾ ಒಂದೇ ರೀತಿಯದು. ಬೃಹತ್ ರೈತ ಸಭೆಗಳ ಹೋರಾಟಗಳ ಮೂಲಕ ಮುನ್ನುಗ್ಗಿ ಜನರನ್ನು-ಸರ್ಕಾರಗಳನ್ನು ತಲುಪುತ್ತಿದ್ದುದು ವಿಶೇಷವಾಗಿತ್ತು.

ಹೀಗೆ 80ರ ದಶಕದಲ್ಲಿ ಉತ್ತುಂಗದಲ್ಲಿದ್ದ ಈ ರೈತ ಸಂಘಟನೆಗಳು 90ರ ದಶಕದಲ್ಲಿ ಇಳಿಮುಖವಾದವೇಕೆ? ಮುಂದಿನ ಸಂಚಿಕೆಯಲ್ಲಿ..

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: ರೈತ ಹೋರಾಟ; 80-90ರ ದಶಕದ ಬೆಳವಣಿಗೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...