ಉಕ್ರೇನ್‌ನಲ್ಲಿ ರಷ್ಯಾ ಸೇನೆಯ ದಾಳಿಗೆ ಹಾವೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದ್ದು, ನವೀನ್ ಸಾವಿಗೆ ಯುದ್ದದಾಹಿ ರಷ್ಯಾ ಸೇನೆ ಎಷ್ಟು ಹೊಣೆಯೋ, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಸಕಾಲದಲ್ಲಿ ನೆರವಾಗದೆ ನಿರ್ಲಕ್ಷಿಸಿದ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರದ ನಿರ್ಲಕ್ಷ್ಯ ಅಷ್ಟೇ ಹೊಣೆಯಾಗಿದೆ ಎಂದು ಎಸ್‌ಎಫ್‌ಯ ರಾಜ್ಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ರಷ್ಯಾ-ಯುಕ್ರೇನ್ ಯುದ್ದಕ್ಕೆ ಅಮಾಯಕ ನಾಗರಿಕರು ಬಲಿಯಾಗುತ್ತಿದ್ದು, ಎರಡು ರಾಷ್ಟ್ರಗಳು ಶಾಂತಿಯುತ ಮಾತುಕತೆಗೆ ಮಂದಾಗಿ ಯುದ್ದ ನಿಲ್ಲಿಸಬೇಕು ಎಂದು ಎಸ್‌ಎಫ್‌ಐ ಆಗ್ರಹಿಸಿದೆ. ಭಾರತದ ಪ್ರಧಾನಿಗಳು ಮತ್ತು ವಿದೇಶಾಂಗ ಇಲಾಖೆ ಅಂತರರಾಷ್ಟ್ರೀಯ ಸಂಬಂಧಗಳನ್ನು ಬಳಸಿಕೊಂಡು ಯುದ್ಧದಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳು, ನಾಗರೀಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಪ್ರಯತ್ನಿಸಬೇಕು ಎಂದು ಒಕ್ಕೂಟ ಸರ್ಕಾರಕ್ಕೆ SFI ಒತ್ತಾಯಿಸಿದೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಬಿಕ್ಕಟ್ಟು: ಕ್ಷಿಪಣಿ ದಾಳಿ; ಕರ್ನಾಟಕ ಮೂಲದ ವಿದ್ಯಾರ್ಥಿ ಬಲಿ
“ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ನವೀನ್ ಸಾವಿಗೆ ಕಾರಣವಾಗಿರುವ ಭಾರತದ ವೈಧ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವ ಕುರಿತು ಕೇಂದ್ರ ಸರ್ಕಾರ ಗಂಭೀರವಾಗಿ ಪ್ರಯತ್ನಿಸಬೇಕು. ನಮ್ಮ ದೇಶ ಬಿಟ್ಟು ವೈಧ್ಯಕೀಯ ಶಿಕ್ಷಣಕ್ಕಾಗಿ ಹತ್ತಾರು ಸಾವಿರ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ಹೋಗಲು ನಿಜವಾದ ಕಾರಣವಾಗಿರುವ ಅಂಶಗಳನ್ನು ಭಾರತ ಸರ್ಕಾರ ಮನಗಾಣಬೇಕು.
ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಅತಿಯಾದ ಖಾಸಗೀಕರಣ, ಕೇಂದ್ರೀಕರಣ ಹಾಗೂ ನೀಟ್ ಪ್ರವೇಶ ಪರೀಕ್ಷೆಯ ದುಷ್ಪರಿಣಾಮವಾಗಿ ‘ಭಾರತದಲ್ಲಿ ಪ್ರತಿವರ್ಷ ಸುಮಾರು 1.20 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯುತ್ತಿದ್ದು, ಅವರಲ್ಲಿ 8 ಸಾವಿರ ಮಂದಿಗೆ ಮಾತ್ರ ಸರ್ಕಾರಿ ಸೀಟುಗಳು ಸೇರಿದಂತೆ 60 ಸಾವಿರ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತದೆ. ಇನ್ನು ಮಿಕ್ಕ ಬಡ, ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳಿಗೆ ಕೋಟ್ಯಂತರ ರುಪಾಯಿ ದುಬಾರಿ ಶುಲ್ಕ ಪಾವತಿ ಕಷ್ಟಕರವಾಗಿದ್ದು, ನಿಗದಿತ ಸಂಖ್ಯೆಯಲ್ಲಿರುವ ಸೀಟುಗಳು ಸಿಗುವುದಿಲ್ಲ. ಜೊತೆಗೆ ಭಾರತದಲ್ಲಿ ಕಲಿಯಲು ಶಿಕ್ಷಣ ಸಾಲ ಕೂಡ ಸಮರ್ಪಕವಾಗಿ ಸಿಗುವುದಿಲ್ಲ, ಉಕ್ರೇನ್‌ನಲ್ಲಿ ಕಲಿಯುವುದಾದರೆ ಶೈಕ್ಷಣಿಕ ಸಾಲ ಸಹ ಸಿಗುತ್ತದೆ. ಇದರಿಂದಾಗಿ ಜನರು ವಿದೇಶಕ್ಕೆ ಹೋಗುತ್ತಿದ್ದಾರೆ” ಎಂದು ಎಸ್‌ಎಫ್‌ಐ ಹೇಳಿದೆ.
“ಭಾರತದಲ್ಲಿ ನೀಟ್ ಪ್ರವೇಶ ಪರೀಕ್ಷೆ ಕಡ್ಡಾಯ ವಾಗಿದ್ದು, ನೀಟ್ ನಲ್ಲಿ ಕಡಿಮೆ ಅಂಕ ಪಡೆದವರಿಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ದೊರೆಯುವುದಿಲ್ಲ. ಈ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಲು ಖಾಸಗಿ ಕೋಚಿಂಗ್ ಕೇಂದ್ರಗಳಿಗೆ ಐದಾರು ಲಕ್ಷ ರೂಪಾಯಿ ಸುರಿದು ತರಬೇತಿ ಪಡೆದುಕೊಳ್ಳಬೇಕು. ಈ ನೀಟ್ ಖಾಸಗಿ ಕೋಚಿಂಗ್ ಮಾಫಿಯಾ ಭಾರತದಲ್ಲಿ ಹತ್ತಾರು ಸಾವಿರ ಕೋಟಿ ರುಪಾಯಿಗಳ ದೊಡ್ಡ ವ್ಯವಹಾರವಾಗಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಉಕ್ರೇನ್ ಮೇಲಿನ ದಾಳಿಯ ನಂತರ ಪುಟಿನ್ ಅವರು ಮೋದಿ ಜೊತೆಗೆ ಮಾತುಕತೆಗೆ ಮನವಿ ಮಾಡಿಲ್ಲ
ಈ ನೀಟ್ ಪರೀಕ್ಷೆಯಲ್ಲಿ ಅಗತ್ಯ ರ್‍ಯಾಂಕ್ ಪಡೆಯದ ಕಾರಣದಿಂದಾಗಿ ತಮಿಳುನಾಡು ಸೇರಿದಂತೆ ದೇಶದೆಲ್ಲೆಡೆ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ ಎಂದು ತಮಿಳುನಾಡು ರಾಜ್ಯ ಸರ್ಕಾರ ನೇಮಿಸಿದ ಎ.ಕೆ. ರಾಜನ್ ಆಯೋಗದ ತಿಳಿಸಿದೆ. ಆದ್ದರಿಂದ ನೀಟ್ ಪರೀಕ್ಷೆ ರದ್ದುಗೊಳಿಸಿ ಏಕ ರೂಪದ ಕೇಂದ್ರೀಯ ಶಾಸನ ಜಾರಿಗೆ ತರಲು ಆಗ್ರಹಿಸಿ ತಮಿಳುನಾಡಿನಾದ್ಯಂತ ವಿದ್ಯಾರ್ಥಿ ಚಳುವಳಿ ತೀವ್ರಗೊಂಡಿದೆ. ಇದರ ಪರಿಣಾಮವಾಗಿ ತಮಿಳುನಾಡಿನ ಸರ್ವಪಕ್ಷಗಳ ಸಂಸದರು ನೀಟ್ ಪರೀಕ್ಷೆ ರದ್ದುಗೊಳಿಸಲು ಒಕ್ಕೂಟ ಸರ್ಕಾರದ ಮೇಲೆ ಒತ್ತಡ ಹೇರಲು ಸಂಸತ್ ಅಧಿವೇಶನದಲ್ಲಿ ಪ್ರತಿಭಟಿಸಿದ್ದಾರೆ” ಎಂದು ಎಸ್‌ಎಫ್‌ಐ ಹೇಳಿದೆ.
“ಪಿಯುಸಿ ಸೈನ್ಸ್ ಓದಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ವಿದ್ಯಾಭ್ಯಾಸದ ಕನಸು ದೊಡ್ಡದಾಗಿರುತ್ತದೆ. ಆದರೆ ಈ ನೀಟ್ ಎಂಬ ಅಸಮತೋಲನ ಪೈಪೋಟಿಯ ವೇದಿಕೆ ಅಸಂಖ್ಯಾತ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನಾಶಗೊಳಿಸಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದ ಉಕ್ರೇನ್‌ಗೆ ಹೋಗಲು ಇಚ್ಚಿಸುತ್ತಾರೆ. ಉಕ್ರೇನ್‌ನಲ್ಲಿ ವಿವಿಧ ದೇಶಗಳ 75 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 20 ಸಾವಿರ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ” ಎಂದು ಎಸ್‌ಎಫ್‌ಐ ಹೇಳಿದೆ.
“ಭಾರತೀಯ ವಿದ್ಯಾರ್ಥಿಗಳಿಗೆ ಇದು ಏಕೆ ನೆಚ್ಚಿನ ದೇಶವಾಯಿತು ಎಂದರೆ ಉಕ್ರೇನ್‌ನ ಖಾಸಗಿ ವೈದ್ಯಕೀಯ ಬೋಧನಾ ಶುಲ್ಕ ಭಾರತದ ಕಾಲೇಜುಗಳಿಗೆ ಹೋಲಿಸಿದರೆ ತುಂಬ ಅಗ್ಗ, ಉಕ್ರೇನಿಯನ್ ಕಾಲೇಜುಗಳು ವಿಶ್ವ ಆರೋಗ್ಯ ಮಂಡಳಿ ಮತ್ತು ಭಾರತೀಯ ವೈದ್ಯಕೀಯ ಮಂಡಳಿಗಳ ಮಾನ್ಯತೆ ಗಳಿಸಿವೆ. ಯೂರೋಪ್ ವೈದ್ಯಕೀಯ ಮಂಡಳಿ, ಬ್ರಿಟನ್ ಜನರಲ್ ವೈದ್ಯಕೀಯ ಮಂಡಳಿಗಳು ಕೂಡ ಮಾನ್ಯತೆ ನೀಡಿರುವುದರಿಂದ ಯುರೋಪ್ ಸೇರಿದಂತೆ ಇಡೀ ವಿಶ್ವದಲ್ಲಿ ಅತ್ಯಂತ ಕಡಿಮೆ ವೆಚ್ಚದ ವೈಧ್ಯಕೀಯ ಶಿಕ್ಷಣ ನೀಡುವ ದೇಶ ಎಂಬ ಹಿರಿಮೆ ಉಕ್ರೇನ್‌ಗೆ ಇದೆ” ಎಂದು ಎಸ್‌ಎಫ್‌ಐ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಬಿಕ್ಕಟ್ಟು: 352 ಉಕ್ರೇನಿಯನ್ ನಾಗರಿಕರು ಸಾವು, 1,684 ಮಂದಿಗೆ ಗಾಯ
“ಈ ಮೊದಲು ಯೂನಿಯನ್ ಆಫ್ ಸೋವಿಯತ್ ಸೋಷಿಯಲಿಸ್ಟ್ ರಿಪಬ್ಲಿಕ್ಸ್ ಆಡಳಿತಕ್ಕೆ ಒಳಪಟ್ಟಿದ್ದ ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಭಾರಿ ಅಗ್ಗ ಎಂಬುದು ಜನಜನಿತ. ಇದೇ ಕಾರಣಕ್ಕಾಗಿ ಭಾರತದಿಂದ ಸಾಕಷ್ಟು ಮಂದಿ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುವ ದುಸ್ಥಿತಿ ಉಂಟಾಗಿದೆ. ಈ ಅಂಶಗಳನ್ನು ಮರೆಮಾಚಲು ‘ಉಕ್ರೇನ್‌ನಂತಹ ಸಣ್ಣ ರಾಷ್ಟ್ರದಲ್ಲಿ ಶಿಕ್ಷಣ ಪಡೆಯುವುದಕ್ಕಿಂತ ಭಾರತದಲ್ಲೇ ಶಿಕ್ಷಣ ಪಡೆಯಿರಿ ಎಂದು ಹೇಳಿರುವ ಪ್ರಧಾನಿ ಮೋದಿಯವರ ಬೇಜವಾಬ್ದಾರಿ ಹೇಳಿಕೆಯು ತೀರಾ ಹಾಸ್ಯಾಸ್ಪದವಾಗಿದೆ” ಎಂದು ಅದು ವಿದ್ಯಾರ್ಥಿ ಸಂಘಟನೆ ಹೇಳಿದೆ.
“ಈ ಉಪದೇಶ ನೀಡುವ ಮೋದಿ ಸರ್ಕಾರ ಭಾರತ ದೇಶದಲ್ಲಿ ವೈಧ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕನಿಷ್ಠ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ನಿರ್ಮಿಸಬೇಕು. ಆದರೆ ಒಕ್ಕೂಟ ಸರ್ಕಾರ ಈ ಯಾವುದೇ ಕೆಲಸಗಳು ಮಾಡದೆ ಜನರ ತೆರಿಗೆಯ ಹಣದಲ್ಲಿ ಪ್ರಚಾರಕ್ಕೆ ಪ್ರತಿಮೆಗಳು, ಮಂದಿರ, ಸೆಂಟ್ರಲ್ ವಿಸ್ಟಾ, ದುಬಾರಿ ವಿಮಾನ ಖರೀದಿಸುವ ಮೂಲಕ ದೇಶದ ಶಿಕ್ಷಣ, ಆರೋಗ್ಯವನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದೆ” ಎಂದು ಆಕ್ರೋಶ ವ್ಯಕ್ತವಾಗಿದೆ.
“ಕೊವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಭಾರತದ ವೈಧ್ಯಕೀಯ ವ್ಯವಸ್ಥೆ ಅಗತ್ಯ ವೈದ್ಯರ ಕೊರತೆಯನ್ನು ತೀವ್ರವಾಗಿ ಎದುರಿಸಿತು. ಇದರಿಂದ ಭಾರತ ಸರ್ಕಾರ ಯಾವುದೇ ಪಾಠ ಕುರಿತಂತೆ ಕಾಣುತ್ತಿಲ್ಲ. ಈ ಸಾಂಕ್ರಾಮಿಕ ದುರಿತ ಕಾಲದಲ್ಲಾದರೂ ಒಕ್ಕೂಟ ಸರ್ಕಾರ ಎಚ್ಚೆತ್ತುಕೊಂಡು ವೈದ್ಯಕೀಯ ಶಿಕ್ಷಣ, ಆರೋಗ್ಯಕ್ಕೆ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಸಿಂಹಪಾಲು ಮೀಸಲಿಡಬೇಕಿತ್ತು. ಆದರೆ ಮೋದಿ ಸರ್ಕಾರ ಭಾರತದ ಪ್ರಜೆಗಳಿಗೆ ಆರೋಗ್ಯ, ಶಿಕ್ಷಣವನ್ನು ನೀಡುವ ಕನಿಷ್ಠ ಕರ್ತವ್ಯಕ್ಕೆ ಬೆನ್ನು ತೋರಿಸಿ ದೇಶದ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸುತ್ತಿದೆ” ಎಂದು ಎಸ್‌ಎಫ್‌ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.


