ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನಲೆಯಲ್ಲಿ ಹಲವಾರು ಹಳೆಯ ಹಾಗೂ ಸಂಬಂಧಪಡದ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದೀಗ “ರಷ್ಯಾ ಸೈನಿಕನಿಗೆ ನಿನ್ನ ದೇಶಕ್ಕೆ ವಾಪಸ್ ಹೋಗು ಎಂದು ಬೆದರಿಸುತ್ತಿರುವ ಉಕ್ರೇನ್ ದೇಶದ ಬಾಲಕಿ” ಎಂದು ಪ್ರತಿಪಾದಿಸಿ ಪುಟ್ಟ ಬಾಲಕಿಯ ವಿಡಿಯೊವೊಂದು ವೈರಲ್ ಆಗಿದೆ.
ಬಲಪಂಥೀಯ ವಿಚಾರಗಳೊಂದಿಗೆ ಗುರುತಿಸಿಕೊಂಡಿರುವ ಕನ್ನಡದ ಸುದ್ದಿ ಚಾನೆಲ್‌ಗಳಾದ ಪಬ್ಲಿಕ್ ಟಿವಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ದಿಗ್ವಿಜಯ ನ್ಯೂಸ್‌ನ ವೆಬ್ ಆವೃತ್ತಿಯಾದ ವಿಜಯವಾಣಿ.ನೆಟ್ ಈ ಬಗ್ಗೆ ವಿಡಿಯೊ ಸುದ್ದಿಯನ್ನು ಮಾಡಿದೆ. ಪಬ್ಲಿಕ್ ಟಿವಿ ‘ಈ ಕ್ಷಣವೇ ನಮ್ಮ ದೇಶ ಬಿಟ್ಟು ಹೋಗಿ- ಉಕ್ರೇನ್ ಬಾಲಕಿಯ ಸಿಟ್ಟು’ ಎಂಬ ಶೀರ್ಷಿಕೆಯ ಜೊತೆಗೆ ಬಾಲಕಿಯ ಕುರಿತು ತನ್ನ ವೆಬ್‌ಸೈಟ್‌ನಲ್ಲಿ ಸುದ್ದಿ ಮಾಡಿದೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ‘ನಮ್ಮ ದೇಶವನ್ನು ಬಿಟ್ಟು ತೊಲಗಿ, ಇಲ್ಲದಿದ್ರೆ ಸಾಯಿಸುವೆ, ರಷ್ಯಾ ಸೈನಿಕರಿಗೆ ಉಕ್ರೇನ್ ಬಾಲಕಿ ಆವಾಜ್’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊ ಸುದ್ದಿ ಮಾಡಿದೆ. ಜೊತೆಗೆ ತನ್ನ ಫೇಸ್‌ಬುಕ್ ಪೇಜ್ ಅಲ್ಲೂ ಈ ಸುದ್ದಿ ವಿಡಿಯೊವನ್ನು ಅಪ್‌ಲೋಡ್ ಮಾಡಿದೆ.
ದಿಗ್ವಿಜಯ ನ್ಯೂಸ್‌ನ ವೆಬ್ ಆವೃತ್ತಿಯಾದ ವಿಜಯವಾಣಿ.ನೆಟ್, “ನಮ್ ದೇಶಕ್ಕೆ ಯಾಕ್ ಬಂದ್ರಿ… ರೈಫಲ್ ಹಿಡಿದ ಸೈನಿಕನಿಗೆ ರಸ್ತೆಯಲ್ಲೇ ಪುಟ್ಟ ಬಾಲಕಿ ಆವಾಜ್! ಮನಕಲಕುತ್ತೆ ಈ ದೃಶ್ಯ’’ ಶೀರ್ಷಿಕೆಯೊಂದಿಗೆ ವರದಿ ಮಾಡಿದೆ.
ಇದನ್ನೂ ಓದಿ: BJP ಸದಸ್ಯರನ್ನೆ ‘ಬಿಜೆಪಿ ಬೆಂಬಲಿಸುವ ಸಾಮಾನ್ಯ ಮುಸ್ಲಿಮರು’ ಎಂದು ಚಿತ್ರಿಸಿದ ‘ಟಿವಿ9 ಭಾರತವರ್ಷ’
ಹಲವಾರು ಸಾಮಾಜಿಕ ಜಾಲತಾಣದ ಬಳಕೆದಾರರು ಕೂಡಾ ಅದೇ ನಿರೂಪಣೆಯೊಂದಿಗೆ ಈ ವಿಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊದ ಸ್ಕ್ರೀನ್‌ಶಾಟ್ ಬಳಸಿಕೊಂಡು ನಾನುಗೌರಿ.ಕಾಂ ರಿವರ್ಸ್ ಸರ್ಚ್ ಮಾಡಿದಾಗ, ಈ ವಿಡಿಯೊ ಸುಮಾರು 9 ವರ್ಷಗಳಷ್ಟು ಹಳೆಯದಾಗಿದ್ದು, ಇದನ್ನು ಫ್ಯಾಲೆಸ್ತೀನ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ಕಂಡುಕೊಂಡಿದ್ದೇವೆ.
ವಿಡಿಯೊದಲ್ಲಿ ಇರುವ ದಿಟ್ಟ ಬಾಲಕಿಯ ಹೆಸರು ಅಹೆದ್ ತಮೀಮಿ ಎಂದಾಗಿದ್ದು, ಇವರು ಫ್ಯಾಲೆಸ್ತೀನಿ ಹೋರಾಟಗಾರ್ತಿಯಾಗಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ನೀಟ್ ಟಾಪರ್‌ಗೆ ಸೀಟ್ ಸಿಗಲಿಲ್ಲವೆಂದು ಸುಳ್ಳು ಸುದ್ದಿ ಹರಡಿದ ‘ವಿಶ್ವವಾಣಿ’!
ಅಹೆದ್ ತಮೀಮಿ ತನ್ನ ತಾಯ್ನಾಡಿನಲ್ಲಿ ಇಸ್ರೇಲಿ ವಸಾಹತುಗಾರರು ಮಾಡುವ ಅಕ್ರಮಗಳ ವಿರುದ್ದ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. 2018 ರಲ್ಲಿ ಇಸ್ರೇಲಿ ಮಿಲಿಟರಿ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಕ್ಕೆ ಅವರನ್ನು ಬಂಧಿಸಿ ವಿಚಾರಣೆ ಕೂಡಾ ನಡೆಸಿತ್ತು.

ಅಹೆದ್ ತಮೀಮಿ ಅವರು ತನ್ನ ತಾಯ್ನಾಡಿನ ಪರವಾಗಿ ಮಾಡಲಾಗುತ್ತಿರುವ ಹೋರಾಟಗಳಲ್ಲಿ ನಿರಂತರವಾಗಿ ಗುರುತಿಸಿಕೊಂಡಿದ್ದಾರೆ. ಅವರು ಫ್ಯಾಲೆಸ್ತೀನಿ ಪ್ರತಿರೋಧ ಹೋರಾಟದ ಐಕಾನ್ ಬಾಲಕಿಯಾಗಿದ್ದಾರೆ.

ಒಟ್ಟಿನಲ್ಲಿ ಹೇಳಬಹುದಾದರೆ, ‘ರಷ್ಯಾ ಸೈನಿಕನಿಗೆ ಬೆದರಿಸುತ್ತಿರುವ ಉಕ್ರೇನ್ ದೇಶದ ಬಾಲಕಿ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೊಗೂ, ರಷ್ಯಾ-ಉಕ್ರೇನ್ ಯುದ್ಧಕ್ಕೂ ಯಾವುದೇ ಸಂಬಂಧವಿಲ್ಲ. ಈ ವಿಡಿಯೊ ಪ್ಯಾಲೆಸ್ತೀನ್ ದೇಶದ್ದಾಗಿದ್ದು, ಸೈನಿಕನೂ ವಸಾಹತುಶಾಹಿ ದೇಶವಾದ ಇಸ್ರೇಲ್‌ನವರಾಗಿದ್ದಾರೆ. ಇದು 2012 ನೇ ಇಸವಿಯ ವಿಡಿಯೊವಾಗಿದ್ದು, ದಿಟ್ಟ ಬಾಲಕಿಯು ಹೆಸರು ಅಹೆದ್ ತಮೀಮಿ ಎಂದಾಗಿದೆ. ಅವರು ಪ್ಯಾಲೆಸ್ತೀನ್ ದೇಶದ ಹೋರಾಟಗಾರ್ತಿಯಾಗಿದ್ದಾರೆ.
ಅಹೆದ್ ತಮೀಮಿ ಅವರು ಮತ್ತಷ್ಟು ವಿಡಿಯೊಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೊದಲ್ಲಿರುವ ಈ ಮಹಿಳೆ ಮುಸ್ಲಿಂ ಅಲ್ಲ, ಪಂಜಾಬಿ ಹಿಂದೂ


