“ಭಾರತವನ್ನು ಬೌದ್ಧಧರ್ಮದ ಅಪಾಯದಿಂದ ಕಾಪಾಡಿದ್ದು ಬ್ರಾಹ್ಮಣರ ಹೆಗ್ಗಳಿಕೆಯಾಗಿದೆ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಸುಧಾಕರ್ ರಾಜೀನಾಮೆಗೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಭಾರೀ ಪ್ರತಿಭಟನೆಗಳು ಜರುಗಿವೆ. ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗೌರಿಬಿದನೂರು, ಗುಡಿಬಂಡೆ, ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ, ದೊಡ್ಡಬಳ್ಳಾಪುರ ತಾಲ್ಲೂಕುಗಳಲ್ಲಿ ಪ್ರತಿಭಟನೆಗಳು ದಾಖಲಾಗಿವೆ.

ಅಂಬೇಡ್ಕರ್ ಫೋಟೊ ಮತ್ತು ನೀಲಿ ಧ್ವಜಗಳನ್ನು ಹಿಡಿದು ಬೀದಿಗಿಳಿದ ಹೆಚ್ಚಿನ ಸಂಖ್ಯೆಯ ಯುವಕರು, ಜೈಭೀಮ್ ಘೋಷಣೆಗಳನ್ನು ಮೊಳಗಿಸಿದ್ದಲ್ಲದೆ, ಸಚಿವ ಸುಧಾಕರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

“ಇಡೀ ದೇಶವೇ ಬೌದ್ಧಧರ್ಮವನ್ನು ಅಪ್ಪಿಕೊಳ್ಳುವ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಧರ್ಮ, ಸಂಸ್ಕೃತಿಗೆ ಎದುರಾಗಿದ್ದ ಅಪಾಯವನ್ನು ತಪ್ಪಿಸಿ ಭಾರತವನ್ನು ಭಾರತೀಯತೆಯನ್ನು ಉಳಿಸಿದ ಆದಿಶಂಕರಚಾರ್ಯರನ್ನು ನಾವು ಸ್ಮರಿಸಲೇಬೇಕು. ಈ ಸಾಲಿನಲ್ಲಿ ಮಧ್ವರು, ಶ್ರೀರಾಮಾನುಜಾಚಾರ್ಯರು ಸೇರಿದ್ದಾರೆ” ಎಂದು ಬ್ರಾಹ್ಮಣ ಸಂಘದ ಕಾರ್ಯಕ್ರಮದಲ್ಲಿ ಸುಧಾಕರ್ ಮಾತನಾಡಿದ್ದರು. ಇದಕ್ಕೆ ತೀವ್ರ ವಿರೋಧ ಸಹ ವ್ಯಕ್ತವಾಗಿತ್ತು. ಇದರ ವಿರುದ್ಧ ಜಿಲ್ಲೆಯ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಮಾರ್ಚ್ 10ರ ಗುರುವಾರ ಚಿಕ್ಕಬಳ್ಳಾಪುರ ನಗರದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲು ತೀರ್ಮಾನಿಸಿವೆ.

ದೊಡ್ಡಬಳ್ಳಾಪುರದಲ್ಲಿ ಪ್ರಾಂತ ರೈತ ಸಂಘದ ಮುಖಂಡರಾದ ಚಂದ್ರತೇಜಸ್ವಿ ಮಾತನಾಡಿ, “ಸರ್ವ ಜನರು ಸಮಾನರು, ಎಂಬ ಸಮಾನತೆಯ ಆಧಾರದ ಮೇಲೆ ಪಂಚಶೀಲ ಮತ್ತು ಅಷ್ಮಾಂಗ ಮಾರ್ಗ ಭೋಧಿಸಿದ ಬುದ್ಧ ಧರ್ಮ ಸಕಲ ಜೀವಗಳಿಗೆ ಒಳಿತನ್ನು ಬಯಸುತ್ತದೆ. ಇಂದು ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವುದು ಮತ್ತು ಗೌರವಿಸುವುದು ಭಗವಾನ್ ಬುದ್ಧನ ನಾಡು ಎಂಬ ಕಾರಣಕ್ಕಾಗಿ. ಅಂತಹ ಧರ್ಮವನ್ನು ಅವಹೇಳನ ಮಾಡಿದವರು ಈ ಸರ್ಕಾರದಲ್ಲಿರಬಾರದು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನುಷ್ಯರನ್ನು ಮನುಷ್ಯರನ್ನಾಗಿ ಕಾಣದ ಹಿಂದೂ ಧರ್ಮದ ಕಂದಚಾರವನ್ನು ಬಯಲುಗೊಳಿಸಿದ್ದು ಬುದ್ಧ ಧರ್ಮವಾಗಿದೆ. ಹಿಂದು ಧರ್ಮದ ಅಸಮಾನತೆಯಿಂದ ಬೇಸತ್ತು ಅಂಬೇಡ್ಕರ್ ಸಹ ಬೌದ್ಧ ಧರ್ಮ ಸ್ವೀಕರಿಸಿದರು. ಅಧಿಕಾರ ಮತ್ತು ಹಣಕ್ಕಾಗಿ ಅಪರೇಷನ್ ಕಮಲಕ್ಕೆ ತುತ್ತಾದ ಡಾ.ಕೆ.ಸುಧಾಕರ್ ಪುರೋಹಿತಶಾಯಿಗಳ ಪರವಾಗಿ ನಿಂತಿದ್ದಾರೆ. ಒಂದೆಡೆ ಬೌದ್ಧ ಧರ್ಮದ ಬಗ್ಗೆ ಒಳ್ಳೆಯ ಮಾತನಾಡುವ ಸಚಿವರು ಮತ್ತೊಂದೆಡೆ ಬೌದ್ಧ ಧರ್ಮದ ಬಗ್ಗೆ, ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಅವರ ಬೌದ್ಧಿಕ ದಿವಾಳಿತನ ತೋರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಭಾರತವನ್ನು ಬೌದ್ಧಧರ್ಮದ ಅಪಾಯದಿಂದ ಕಾಪಾಡಿದ್ದು ಬ್ರಾಹ್ಮಣರು: ಸಚಿವ ಸುಧಾಕರ್ ಹೇಳಿಕೆಗೆ ಆಕ್ಷೇಪ


