Homeಕರ್ನಾಟಕವಿಶೇಷ ವರದಿ: ವರ್ಷ ವರ್ಷವೂ ಎಸ್‌ಸಿ, ಎಸ್‌ಟಿಗಳ ಅನುದಾನ ಗೋತಾ; ಸರ್ಕಾರಕ್ಕಿಲ್ಲ ದಲಿತರ ಮೇಲೆ ಕಾಳಜಿ

ವಿಶೇಷ ವರದಿ: ವರ್ಷ ವರ್ಷವೂ ಎಸ್‌ಸಿ, ಎಸ್‌ಟಿಗಳ ಅನುದಾನ ಗೋತಾ; ಸರ್ಕಾರಕ್ಕಿಲ್ಲ ದಲಿತರ ಮೇಲೆ ಕಾಳಜಿ

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪರಿಶಿಷ್ಟ ಜಾತಿ, ಪಂಗಡಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ, ಆರ್ಥಿಕ ತಜ್ಞರಾದ ಟಿ.ಆರ್‌.ಚಂದ್ರಶೇಖರ್‌, ಚಂದ್ರ ಪೂಜಾರಿ ಹಾಗೂ ದಲಿತ ನಾಯಕರಾದ ಮಾವಳ್ಳಿ ಶಂಕರ್‌ ಅವರು ‘ನಾನುಗೌರಿ.ಕಾಂ’ನೊಂದಿಗೆ ಬಿಚ್ಚಿಟ್ಟಿದ್ದಾರೆ.

- Advertisement -
- Advertisement -

ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಾರ್ಟಿಯು ಬಡವರು ಹಾಗೂ ದಲಿತರನ್ನು ದಿನೇ ದಿನೇ ಕಡೆಗಣಿಸುತ್ತಲೇ ಇದೆ. ಮತ್ತೊಂದೆಡೆ ಹಿಂದುತ್ವದ ಅಜೆಂಡಾಗಳಿಗೆ ಹೆಚ್ಚಿನ ಅನುದಾನವನ್ನು ನೀಡುತ್ತಿರುವುದು ಢಾಳಾಗಿ ಕಾಣಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಬಜೆಟ್ ಗಾತ್ರ ಹೆಚ್ಚುತ್ತಿದ್ದರೂ ಪರಿಶಿಷ್ಟ ಜಾತಿ, ಪಂಗಡಗಳಿಗೆ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಮೀಸಲಿಡುತ್ತಿರುವ ಹಣ ಮಾತ್ರ ಕಡಿಮೆಯಾಗುತ್ತಲೇ ಇದೆ.

ಪರಿಶಿಷ್ಟರಿಗೆ ಮೀಸಲಾದ ಹಣವನ್ನು ಅನ್ಯಕಾರ್ಯಕ್ರಮಗಳಿಗೆ ಬಳಸುವುದು ಅಥವಾ ಘೋಷಣೆ ಮಾಡಿದ ಅನುದಾನವನ್ನು ಸರಿಯಾಗಿ ಬಿಡುಗಡೆ ಮಾಡದಿರುವುದು, ಬಿಡುಗಡೆಯಾದ ಅನುದಾನವನ್ನು ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಬಳಕೆ ಮಾಡದಿರುವುದು ನಡೆಯುತ್ತಿದೆ.

ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಪರಿಶಿಷ್ಟರ ಕಾರ್ಯಕ್ರಮಗಳಿಗೆ ಮಾತ್ರ ಬಳಸಬೇಕು ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಹೇಳುತ್ತದೆ. ಆದರೆ ಅದೇ ಕಾಯ್ದೆಯಲ್ಲಿನ ಸಣ್ಣ ಲೋಪದೋಷವೇ ಇಡೀ ಪರಿಶಿಷ್ಟರ ಹಣ ಅನ್ಯರ ಪಾಲಾಗುವುದಕ್ಕೆ ಕಾರಣವಾಗುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಗಳ ಅನುದಾನದಲ್ಲಿ ತಾರತಮ್ಯ ಎಸಗುತ್ತಿರುವ ಕುರಿತು ಆರ್ಥಿಕ ತಜ್ಞರು, ದಲಿತ ನಾಯಕರು, ಚಿಂತಕರು ಪ್ರಶ್ನಿಸುತ್ತಲೇ ಇದ್ದಾರೆ. ಅಲಕ್ಷಿತ ಸಮುದಾಯಗಳ ಕುರಿತು ಬಿಜೆಪಿಯ ನಿರ್ಲಕ್ಷ್ಯ ಮಾತ್ರ ಕಡಿಮೆಯಾಗುತ್ತಿಲ್ಲ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಅರ್ಥಶಾಸ್ತ್ರಜ್ಞ ಡಾ.ಟಿ.ಆರ್‌.ಚಂದ್ರಶೇಖರ್ ಅವರು ರಾಜ್ಯ ಸರ್ಕಾರ ಪರಿಶಿಷ್ಟರಿಗೆ ಮಾಡುತ್ತಿರುವ ಅನ್ಯಾಯವನ್ನು ಸವಿಸ್ತಾರವಾಗಿ ವಿವರಿಸಿದರು.

ಇದನ್ನೂ ಓದಿರಿ: ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಮುಖಭಂಗ: ಮಹಿಳಾ ಅರಣ್ಯಾಧಿಕಾರಿ ಸಂಧ್ಯಾ ವರ್ಗಾವಣೆ ಆದೇಶಕ್ಕೆ ತಡೆ

“ಕಾಯ್ದೆಯ ಅನುಗುಣವಾಗಿ ಬಜೆಟ್‌ ವೆಚ್ಚದಲ್ಲಿ ಉಪಯೋಜನೆ ಅನುದಾನದ ಪ್ರಮಾಣ ಶೇ. 14.84 ಇರಬೇಕು. 2017- 18ರಲ್ಲಿ 1,86,561 ಕೋಟಿ ರೂ.ಗಳ ಬಜೆಟ್ ಮಂಡಿಸಲಾಯಿತು. ಪರಿಶಿಷ್ಟರ ಅನುದಾನ 27,703.54 ಕೋಟಿ ರೂ. ಇತ್ತು. ಅಂದರೆ ಶೇ. 14. 84ರಷ್ಟು ಹಣವನ್ನು ಮೀಸಲಿಡಲಾಗಿತ್ತು. 2018-19ರಲ್ಲಿ ಬಜೆಟ್ ಗಾತ್ರ 2,18,488 ಕೋಟಿ ರೂ.ಗಳು. ಪರಿಶಿಷ್ಟರ ಉಪಯೋಜನೆಗೆ ನೀಡಿದ್ದು 29,209.47 ಕೋಟಿ ರೂಗಳು. ಉಪಯೋಜನೆಯ ಒಟ್ಟು ಪ್ರಮಾಣ ಶೇ. 12.23 ಮಾತ್ರ. 2019-20ರ ಬಜೆಟ್‌ ಗಾತ್ರ 2,34,152 ಕೋಟಿ ರೂ.ಗಳಾದರೆ, ಪರಿಶಿಷ್ಟರಿಗೆ ನೀಡಿದ್ದು 30,464.99 ಕೋಟಿ ರೂ; ಉಪಯೋಜನೆಯ ಗಾತ್ರ ಶೇ. 13 ಆಗಿತ್ತು. 2020-21ರಲ್ಲಿ ಬಜೆಟ್ ಗಾತ್ರ 2,37,892 ಕೋಟಿ ರೂ. ಉಪಯೋಜನೆಗೆ ನೀಡಿದ್ದು 27,699.52 ಕೋಟಿ ರೂ. ಅಂದರೆ ಶೇ. 11.64 ಮಾತ್ರ. 2021-2022ರ ಬಜೆಟ್‌ನಲ್ಲಿ ಪರಿಶಿಷ್ಟರಿಗೆ ನೀಡಿದ್ದು 26,005.01 ಕೋಟಿ ರೂ. ಅಂದರೆ ಶೇ. 10.64 ಮಾತ್ರ. 2022-23ರ ಬಜೆಟ್ ಗಾತ್ರ 2,65,720 ಕೋಟಿ ರೂ. ಪರಿಶಿಷ್ಟರಿಗೆ ಮೀಸಲಾಗಿರುವುದು 28,238.33 ಕೋಟಿ ರೂ. ಅಂದರೆ ಶೇ. 10.61 ಮಾತ್ರ” ಎಂದು ಚಂದ್ರಶೇಖರ್‌ ಹೇಳಿದರು.

“2017-18 ರಿಂದ 2022-23ರವರೆಗೆ ಬಜೆಟ್ಟಿನ ಒಟ್ಟು ಗಾತ್ರದಲ್ಲಿ ಶೇ. 42.43ರಷ್ಟು ಏರಿಕೆಯಾಗಿದ್ದರೆ, ಉಪಯೋಜನೆಗಳ ಅನುದಾನ ಇದೇ ಅವಧಿಯಲ್ಲಿ ಶೇ. 1.93ರಷ್ಟು ಏರಿಕೆಯಾಗಿದೆ. ರಾಜ್ಯದ ಒಟ್ಟು ಬಜೆಟ್ಟಿನ ಗಾತ್ರದಲ್ಲಿ ಉಪಯೋಜನೆಗಳ ಅನುದಾನ 2017-18ರಲ್ಲಿ ಶೇ.14.86 ರಷ್ಟಿದ್ದದ್ದು, 2022-23ರಲ್ಲಿ ಶೇ.10.61ಕ್ಕಿಳಿದಿದೆ. ಒಟ್ಟು ಬಜೆಟ್ಟಿನ ಮೊತ್ತ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಆದರೆ ಉಪಯೋಜನೆಗಳ ಅನುದಾನ ಅದೇ ಪ್ರಮಾಣದಲ್ಲಿ ಏರಿಕೆಯಾಗುತ್ತಿಲ್ಲ. ಇದು ಅನ್ಯಾಯ” ಎಂದು ಖಂಡಿಸಿದರು.

“ವಾಸ್ತವವಾಗಿ 2020-21ರ ನಂತರ ಅನುದಾನದ ಒಟ್ಟು ಮೊತ್ತದಲ್ಲಿಯೇ ಕಡಿಮೆಯಾಗುತ್ತಿದೆ. ಉದಾ: 2019-20ರಲ್ಲಿ ಅನುದಾನ 30,444.99 ಕೋಟಿ ರೂ. ಇದ್ದದ್ದು, 2020-21ರಲ್ಲಿ 27,699.52 ಕೋಟಿ ರೂ. ಆಗಿದೆ. 2021-22ರಲ್ಲಿ ರೂ.26,001 ಕೋಟಿ ರೂ.ಗೆ ಇಳಿದಿದೆ. ಈ ಬಜೆಟ್‌ನಲ್ಲಿ (2022-23) ಕೊಂಚ ಏರಿಕೆಯಾಗಿದ್ದು, 28,234.33 ಕೋಟಿ ರೂ. ನೀಡಲಾಗಿದೆ” ಎಂದರು.

ಸೆಕ್ಷನ್‌ 7ಡಿ ದುರುಪಯೋಗವಾಗುತ್ತಿದೆ: ಪ್ರಿಯಾಂಕ್‌ ಖರ್ಗೆ

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ್‌ ಖರ್ಗೆಯವರು, “ಸಚಿವರಾದ ಗೋವಿಂದ ಕಾರಾಜೋಳ, ಕೋಟ ಶ್ರೀನಿವಾಸ ಪೂಜಾರಿ, ಬಿ.ಶ್ರೀರಾಮುಲು ಅವರು ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆಯನ್ನು ಓದಿದ್ದಾರೋ ಇಲ್ಲವೋ ಎಂಬ ಅನುಮಾನ ಬರುತ್ತಿದೆ. ಕಾಯ್ದೆಯ ಸೆಕ್ಷನ್‌‌ 7(ಡಿ) ಅಡಿಯಲ್ಲಿ ಬೇರೆ ಉದ್ದೇಶಗಳಿಗೆ ಹಣ ದುರ್ಬಳಕೆಯಾಗುತ್ತಿರುವುದು ಹೆಚ್ಚುತ್ತಿದೆ. ಹಣ ಯಾರಿಗೆ ಹೋಗುತ್ತಿದೆ? ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ನಡೆಯುತ್ತಿದೆಯಾ? ಯಾವ ಇಲಾಖೆಯಲ್ಲಿ ಹೇಗೆ ವಿನಿಯೋಗವಾಗುತ್ತಿದೆ ಎಂಬುದನ್ನು ಸಚಿವರಾದವರು ಗಮನಿಸುತ್ತಿದ್ದಾರಾ?” ಎಂದು ಪ್ರಶ್ನಿಸಿದರು.

ಇದನ್ನೂ ಓದಿರಿ: ಸುಧಾಕರ್‌‌ ಸದನದಲ್ಲೇ ಕ್ಷಮೆ ಕೇಳಬೇಕು: ಬಿಜೆಪಿ ಶಾಸಕ ಹರ್ಷವರ್ಧನ್‌ ಆಗ್ರಹ

“ನಾವು ಅಧಿಕಾರದಲ್ಲಿದ್ದಾಗ ಡಾ.ಬಿ.ಆರ್‌.ಅಂಬೇಡ್ಕರ್‌‌ ನಿಗಮಕ್ಕೆ 300ರಿಂದ 400 ಕೋಟಿ ರೂ. ನೀಡಲಾಗುತ್ತಿತ್ತು. ಈಗ ಏಕೆ ಸಾಧ್ಯವಾಗುತ್ತಿಲ್ಲ? ಬಜೆಟ್‌ ಗಾತ್ರ ಹಾಗೂ ತೆರಿಗೆ ಸಂಗ್ರಹ ಹೆಚ್ಚಾಗಿದೆ. ಹಣ ಎಲ್ಲಿಗೆ ಹೋಗುತ್ತಿದೆ? ನಾನು ಸಚಿವನಾಗಿದ್ದಾಗ ಐರಾವತ ಎಂಬ ಯೋಜನೆಯಡಿ 5 ಲಕ್ಷ ರೂ. ಗ್ರಾಂಟ್‌ ನೀಡಲಾಗುತ್ತಿತ್ತು. ಅದನ್ನು ಈಗ 50,000 ರೂ.ಗಳ ಲೋನ್‌ ಆಗಿ ಪರಿವರ್ತಿಸಿದ್ದಾರೆ. ನಾನು ಮಾಡಿದ್ದನ್ನು ಇವರಿಗೇಕೆ ಮಾಡಲು ಸಾಧ್ಯವಾಗುತ್ತಿಲ್ಲ? ನನಗನಿಸಿದ ಮಟ್ಟಿಗೆ ಇವರಿಗೆ ಯಾರಿಗೂ ಆಸಕ್ತಿ ಇಲ್ಲ ಹಾಗೂ ಕಾಯ್ದೆಯನ್ನು ಸರಿಯಾಗಿ ಓದಿಲ್ಲ” ಎಂದು ಟೀಕಿಸಿದರು.

“ಕಾಯ್ದೆಯ ಸೆಕ್ಷನ್‌ 7ಡಿ ಕಾಲಂ ತೆಗೆದು ಹಾಕಬೇಕಿದೆ. ನೀರಾವರಿ ಯೋಜನೆಗಳಿಗೆ ಪರಿಶಿಷ್ಟರ ಹಣ ವಿನಿಯೋಗಿಸುವಾಗ ಏನು ಹೇಳುತ್ತಾರೆ? ಈ ನೀರು ಎಸ್‌ಟಿ, ಎಸ್‌ಟಿಗಳ ಹೊಲಗಳಿಗೂ ಹೋಗುತ್ತದೆ ಎಂದಲ್ಲವೇ? ಆಯ್ತು ಒಪ್ಪೋಣ. ಎಸ್‌ಸಿ, ಎಸ್‌ಟಿಗಳ ಹೊಲಗಳನ್ನು ಸುಲಭವಾಗಿ ಗುರುತಿಸಬಹುದಲ್ಲ? ಸಾವಿರ ಎಕರೆಯಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದವರ ಜಮೀನು ಸುಮಾರು 40 ಎಕರೆ ಇದ್ದರೆ, ಅಷ್ಟು ಜಾಗಕ್ಕೆ ಎಷ್ಟು ಹಣ ಬೇಕಾಗುತ್ತದೆಯೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಬೇಕಲ್ಲವೇ? ನಾನು ಮಿನಿಸ್ಟರ್‌ ಆಗಿದ್ದಾಗ,  ಎಚ್‌.ಡಿ.ರೇವಣ್ಣನವರು ಪರಿಶಿಷ್ಟರ ಹಣವನ್ನು ಪ್ಲೈಓವರ್‌ಗೆ ನಿರ್ಮಾಣಕ್ಕೆ ಬಳಸಲು ಮುಂದಾಗಿದ್ದರು. ದಲಿತರೂ ಈ ರಸ್ತೆಯನ್ನು ಬಳಸುತ್ತಾರಲ್ಲ ಎಂದಿದ್ದರು. ಹಾಗಂತ ನೀವೇನು ನೀಲಿ ಬಣ್ಣವನ್ನು ಪ್ಲೈಓವರ್‌ಗೆ ಬಳಿಸುತ್ತೀರಾ ಎಂದು ‍ಪ್ರಶ್ನಿಸಿದ್ದೆ. ದಲಿತರ ಹಣದಲ್ಲಿ ಬಸ್‌ಗಳನ್ನು ಖರೀದಿಸುತ್ತಾರೆ. ಸೆಕ್ಷನ್‌ 7ಡಿಯನ್ನು ಬಿಜೆಪಿ ಸರ್ಕಾರ ದುರುಪಯೋಗ ಮಾಡುತ್ತಿದೆ” ಎಂದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಮ್ಮ ಕಡೆಯ ಪ್ರತಿನಿಧಿಸುವ ಬಸವರಾಜ್ ಸೇಡಂ ಅವರನ್ನು ಮಾಡಿದ್ದಾರೆ. ಆ ಇಲಾಖೆಗೆ ೫೦೦ ಕೋಟಿ ರೂ. ಸ್ಕಿಲ್‌ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ಗೆ ಕೊಟ್ಟ ಅನುದಾನಕ್ಕಿಂತ ಇದು ಹೆಚ್ಚಾಗಿದೆ. ಆರ್‌ಎಸ್‌ಎಸ್‌ ಕಾರ್ಯಕ್ರಮವನ್ನು ಮಾಡಲು ಬಳಸುತ್ತಿದ್ದಾರೆ. ಬಜನೆ ಹೇಳಿಕೊಡುವುದು, ರಂಗೋಲಿ ಹಾಕೋದು, ಮನೆಯ ಅಂಗಳದಲ್ಲಿ ಆರ್ಗ್ಯಾನಿಕ್‌‌ ಸಸಿಗಳನ್ನು ಹಾಕೋದು- ಎಂಬ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಬಡವರಿಗೆ ಮನೆಗಳೇ ಇಲ್ಲ, ಆದರೆ ಯಾರ ಮನೆಗಳ ಅಂಗಳದ ಬಗ್ಗೆ ಇವರು ಮಾತನಾಡುತ್ತಿದ್ದಾರೆ. ನಮಗಿಂತ ಜಾಸ್ತಿ ಆರ್‌ಎಸ್‌ಎಸ್‌ ಆಗಿ ಬೊಮ್ಮಾಯಿಯವರು ಬದಲಾಗಿದ್ದಾರೆ ಎಂದು ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

ಇದನ್ನೂ ಓದಿರಿ: ಕಲಬುರಗಿ: 144 ಸೆಕ್ಷನ್‌ ಇದ್ದರೂ ಮೆರವಣಿಗೆ ನಡೆಸಿ ಗಲಭೆಗೆ ಪ್ರಚೋದಿಸಿದ ಕೇಂದ್ರ ಸಚಿವ ಮತ್ತು ಬಿಜೆಪಿ ಶಾಸಕರು!

ಮೇಲ್ವರ್ಗಗಳಿಗಷ್ಟೇ ಬಿಜೆಪಿ: ಪ್ರೊ.ಚಂದ್ರ ಪೂಜಾರಿ

“ಬಿಜೆಪಿಯ ಸಾಮಾಜಿಕ ಹಿನ್ನೆಲೆಯೇ ಮೇಲ್ವರ್ಗವಾಗಿದೆ. ಅದು ಅವರ ಆರ್ಥಿಕ ನೀತಿಯಲ್ಲಿ ಕಾಣಿಸಿಕೊಳ್ಳುತ್ತದೆ” ಎನ್ನುತ್ತಾರೆ ಆರ್ಥಿಕತಜ್ಞರಾದ ಪ್ರೊ.ಚಂದ್ರ ಪೂಜಾರಿ.

“ಮೇಲ್ವರ್ಗಕ್ಕೆ ಕಡಿಮೆ ತೆರಿಗೆ ವಿಧಿಸಿ, ಬಡವರಿಗೆ ಹೆಚ್ಚಿನ ತೆರಿಗೆ- ಇದು ಬಿಜೆಪಿಯ ನೀತಿ. ಬಜೆಟ್‌ ಹಣವನ್ನು ಮೇಲ್ವರ್ಗಕ್ಕೆ ಹೆಚ್ಚು ಖರ್ಚು ಮಾಡುವುದು ಕೇಂದ್ರ ಹಾಗೂ ರಾಜ್ಯ ಬಜೆಟ್‌ಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಕೇಂದ್ರ ಸಂಗ್ರಹಿಸುವ 100 ರೂ. ತೆರಿಗೆಯಲ್ಲಿ  65 ರೂ. ಪರೋಕ್ಷ ತೆರಿಗೆಯಿಂದ ಬರುತ್ತದೆ. ಅಂದರೆ ಅದು ಬಡವರ ಹಣ. ನೇರ ತೆರಿಗೆಯಿಂದ 35 ರೂ. ಮಾತ್ರ ಬರುತ್ತದೆ. ರಾಜ್ಯದಲ್ಲಿ ಶೇ. 90ರಷ್ಟು ತೆರಿಗೆ ಪರೋಕ್ಷ ತೆರಿಗೆಯಾಗಿದೆ. ಮತ್ತೊಂದೆಡೆ ಸರ್ಕಾರ ಶೇ. 30ರಷ್ಟು ಸಾಲ ಮಾಡುತ್ತದೆ. ಆದರೆ ಈ ಸಾಲವನ್ನು ಜನರ ತೆರಿಗೆಯಿಂದಲೇ ಕಟ್ಟಬೇಕು. ಜನರ ತೆರಿಗೆಯನ್ನು ರಸ್ತೆ, ಪ್ಲೈಓವರ್‌, ಬಂದರು ಇತ್ಯಾದಿಗಳ ನಿರ್ಮಾಣಕ್ಕಾಗಿ ಬಳಸುತ್ತಾರೆ. ಇವುಗಳನ್ನು ಅಭಿವೃದ್ಧಿ ಮಾಡಬಾರದು ಅಂತಲ್ಲ. ಆದರೆ ಶಾಲೆ, ಆಸ್ಪತ್ರೆ, ವಸತಿ ನಿರ್ಮಾಣಕ್ಕೆ ಹಾಗೂ ಮೂಲಸೌಕರ್ಯಕ್ಕೆ ಎಷ್ಟು ವಿನಿಯೋಗಿಸುತ್ತಾರೆ” ಎಂದು ಪ್ರಶ್ನಿಸುತ್ತಾರೆ ಚಂದ್ರ ಪೂಜಾರಿ.

“ಉತ್ತರ ಪ್ರದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನೋಡಿ ಎಚ್ಚೆತ್ತುಕೊಳ್ಳುತ್ತಿರುವ ರಾಜ್ಯ ಬಿಜೆಪಿ ಸರ್ಕಾರ 100 ಗೋಶಾಲೆ ತೆರೆಯಲು ಹೊರಟಿದೆ. ಒಂದು ತಾಲ್ಲೂಕಿಗೆ ನಾಲ್ಕೈದು ಗೋಶಾಲೆ ಇದ್ದರೂ 175 ತಾಲ್ಲೂಕಿಗೆ ಕನಿಷ್ಟ 5,000 ಕೋಟಿ ರೂ. ಹಣ ಬೇಕಾಗುತ್ತದೆ. ಇದು ವ್ಯಥಾ ಖರ್ಚಲ್ಲವೆ?” ಎಂದು ಅವರು ಪ್ರಶ್ನಿಸಿದರು.

ಬೊಮ್ಮಾಯಿಗಿಂತ ಯಡಿಯೂರಪ್ಪನವರೇ ಪರವಾಗಿರಲಿಲ್ಲ: ಮಾವಳ್ಳಿ ಶಂಕರ್‌

ಹಿರಿಯ ದಲಿತ ನಾಯಕ ಮಾವಳ್ಳಿ ಶಂಕರ್‌ ಮಾತನಾಡಿ, “ಪರಿಶಿಷ್ಟರ ಅಭಿವೃದ್ಧಿ ನಿಗಮಕ್ಕೆ ಅನುದಾನದ ಅಗತ್ಯವಿದೆ. ಸಾವಿರಾರು ಅರ್ಜಿಗಳು ಖಾಲಿ ಬಿದ್ದಿವೆ. ಅಲ್ಲಿಗೆ 5,000 ಕೋಟಿ ರೂ.ಗಳನ್ನು ನೀಡಿದರೆ ಫಲಾನುಭವಿಗಳಿಗೆ ನೇರವಾಗಿ ತಲುಪಲಿದೆ. ಮತ್ತೊಂದೆಡೆ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದಲಿತ ಮುಖಂಡರೊಂದಿಗೆ ಯಾವುದೇ ಚರ್ಚೆ ನಡೆಸುತ್ತಿಲ್ಲ. ಇವರಿಗೆ ಹೋಲಿಸಿದರೆ ಬಿ.ಎಸ್‌.ಯಡಿಯೂರಪ್ಪನವರೇ ಪರವಾಗಿರಲಿಲ್ಲ” ಎಂದು ಅಭಿಪ್ರಾಯಪಟ್ಟರು.

“ಪರಿಶಿಷ್ಟ ಜಾತಿ, ಪಂಗಡದ ಮಕ್ಕಳು ಶಾಲೆ ಬಿಡುವುದನ್ನು ತಡೆಯಬೇಕಾದರೆ ಈ ಮಕ್ಕಳ ಪೋಷಕರನ್ನು ಆರ್ಥಿಕವಾಗಿ ಪುನಶ್ಚೇತನ ಮಾಡಬೇಕಿದೆ ಎಂದು ಹೇಳುತ್ತಲೇ ಇದ್ದೇವೆ. ಹುಂಡಿಯಲ್ಲಿ ಪ್ರಸಾದ ಹಂಚಿದಂತೆ ಬೊಮ್ಮಾಯಿ ದಲಿತರಿಗೆ ಹಣ ನೀಡಿದ್ದಾರೆ. ಪರಿಶಿಷ್ಟ ಸಮುದಾಯಗಳ ಎಂಎಲ್‌ಎಗಳು ಪಕ್ಷಾತೀತವಾಗಿ ಒಂದೆಡೆ ಬಂದು ಕೂತು ಸಮುದಾಯದ ನೋವುಗಳನ್ನು ಪರಿಹರಿಸುತ್ತಿಲ್ಲ. ಎಸ್‌ಸಿ, ಎಸ್‌ಟಿ ಶಾಸಕರ ಸಮಿತಿಯು ಹಲ್ಲು ಕಿತ್ತ ಹಾವಾಗಿದೆ” ಎನ್ನುತ್ತಾರೆ ಮಾವಳ್ಳಿ ಶಂಕರ್‌.

ಇದನ್ನೂ ಓದಿರಿ: ಉಕ್ರೇನ್‌ನಲ್ಲಿನ ಭಾರತೀಯ ವಿದ್ಯಾರ್ಥಿಗಳ ಸ್ಥಿತಿಗೆ ಕೇಂದ್ರ ಬಿಜೆಪಿ ಸರ್ಕಾರವೇ ಕಾರಣ: ಸಿದ್ದರಾಮಯ್ಯ

“ಈ ಹಿಂದೆ ದಲಿತ ಚಳವಳಿಗಾರರನ್ನು ಕರೆದು ಮಾತನಾಡಿಸುವ ಸಂಪ್ರದಾಯವನ್ನು ಈ ಹಿಂದಿನ ಎಲ್ಲಾ ಮುಖ್ಯಮಂತ್ರಿಗಳು ಮುಂದುವರಿಸಿದ್ದರು. ಬಿ.ಎಸ್.ಯಡಿಯೂರಪ್ಪನವರೂ ಮುಖಂಡರೊಂದಿಗೆ ಚರ್ಚೆ ನಡೆಸುತ್ತಿದ್ದರು. ಆದರೆ ಬೊಮ್ಮಾಯಿಯವರು ಈ ಸಂಪ್ರದಾಯವನ್ನು ಒಡೆದುಹಾಕಿದ್ದಾರೆ. ಯಡಿಯೂರಪ್ಪನವರು ನಮ್ಮನ್ನು ಕರೆಸಿ ಮಾತನಾಡಿಸುವ ವ್ಯವಧಾನ ಹೊಂದಿದ್ದರು. ಆದರೆ ಬೊಮ್ಮಾಯಿ ಸಂಪೂರ್ಣವಾಗಿ ಸಂಘಪರಿವಾರದ ಹಿಡಿತಕ್ಕೆ ಒಳಗಾಗಿದ್ದಾರೆ” ಎಂದರು.

“ಬೊಮ್ಮಾಯಿಯವರು ಸಂಘಪರಿವಾರದ ಹಿಡಿತಕ್ಕೆ ಸಿಲುಕಿರುವ ಛಾಯೆ ದಟ್ಟವಾಗಿದೆ. ಸಾವಿತ್ರಿ ಬಾಯಿ ಫುಲೆ ಅವರ ಹೆಸರಲ್ಲಿ ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಆದರೆ ಅದಕ್ಕೆ ಹಣ ಮೀಸಲಿಟ್ಟಿಲ್ಲ. ಅಂಬೇಡ್ಕರ್‌ ಅವರು ಭೇಟಿ ನೀಡಿದ್ದ ಸ್ಥಳಗಳನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದ್ದಾರೆ. ಅದಕ್ಕೂ ಹಣ ಮೀಸಲಿಟ್ಟಿಲ್ಲ. ಸಮಾಜ ಕಲ್ಯಾಣ ಇಲಾಖೆಯಿಂದಲೇ ಅದಕ್ಕಾಗಿ ಹಣ ಎಳೆಯುವುದು ಸ್ಪಷ್ಟ” ಎಂದು ಎಚ್ಚರಿಸಿದರು.

“ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆಯಡಿ ಜನಸಂಖ್ಯೆಗೆ ಅನುಗುಣವಾಗಿ ಹಣ ನಿಗದಿ ಮಾಡಬೇಕೆಂದು ಸೂಚಿಸಲಾಗಿದೆ. ಈ ಹಿಂದೆ ಕಾಟಾಚಾರಕ್ಕೆ ಹಣ ಮೀಸಲಿಡುತ್ತಿದ್ದರು. ಆದರೆ ಸಿದ್ದರಾಮಯ್ಯನವರ ಅವಧಿಯಲ್ಲಿ 86,000 ಕೋಟಿ ರೂ.ಗಳು ಪರಿಶಿಷ್ಟರಿಗೆ ದೊರೆತ್ತಿತ್ತು. ದುರಾದೃಷ್ಟವಶಾತ್‌ ಕಾಯ್ದೆಯ ಸೆಕ್ಷನ್‌ 7ಡಿ ಅಡಿಯಲ್ಲಿ ಸಾರ್ವಜನಿಕ ಉದ್ದೇಶಗಳಿಗೆ ಹಣವನ್ನು ಬಳಸಲಾಗುತ್ತಿದೆ. ಹಣ ಏನಾಗುತ್ತಿದೆ ಎಂಬುದು ನಮಗೆ ಆರಂಭದಲ್ಲಿ ತಿಳಿಯುತ್ತಿರಲಿಲ್ಲ. ಕಾಯ್ದೆಯನ್ನು ಗಮನವಿಟ್ಟು ಅಧ್ಯಯನ ಮಾಡಿದಾಗ ಸೆಕ್ಷನ್ 7ಡಿ ಹಣ ದುರುಪಯೋಗಕ್ಕೆ ಅವಕಾಶ ನೀಡಿರುವುದು ಗಮನಕ್ಕೆ ಬಂತು” ಎಂದು ಹೇಳಿದರು.

“ನೀರಾವರಿಗೆ ಪರಿಶಿಷ್ಟರ ಹಣವನ್ನು ಬಳಸಲಾಗುತ್ತಿದೆ. ಇದರಿಂದ ಎಷ್ಟು ಜನ ಪರಿಶಿಷ್ಟರಿಗೆ ಅನುಕೂಲವಾಗುತ್ತದೆ ಎಂಬುದರ ಕುರಿತು ಅಂಕಿ-ಅಂಶ ಇದೆಯಾ ಎಂದು ಮೊದಲಿನಿಂದಲೂ ಕೇಳುತ್ತಿದ್ದೇವೆ. ಆದರೆ ಸರ್ಕಾರ ನೀಡುತ್ತಿಲ್ಲ. ಇರುವ ಹಣವನ್ನೆಲ್ಲ 7ಡಿ ಅಡಿ ತೆಗೆದುಕೊಂಡರೆ ಪರಿಶಿಷ್ಟರು ಏನು ಮಾಡಬೇಕು?” ಎಂದು ಶಂಕರ್‌ ಪ್ರಶ್ನಿಸುತ್ತಾರೆ.


ಇದನ್ನೂ ಓದಿರಿ: ಉಕ್ರೇನ್‌ನಿಂದ ಬಂದಿರುವ ವೈದ್ಯ ವಿದ್ಯಾರ್ಥಿಗಳ ಭವಿಷ್ಯವೇನು?: ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಾನವತಾವಾದಿ’ ಸಂವಿಧಾನವನ್ನು ‘ಮನುವಾದಿ’ ಮಾಡಲು ಹೊರಟಿದ್ದಾರೆ: ಪ್ರೊ. ನರೇಂದ್ರ ನಾಯಕ್

0
'ನಮ್ಮ ಸಂವಿಧಾನವೇ ನಮಗೆ ಅಂತಿಮ; ಈಗ ಅವರು ಅದನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಮಾನವತಾವಾದಿ ಸಂವಿಧಾನವನ್ನು ಈಗ ಮನುವಾದಿ ಸಂವಿಧಾನ ಮಾಡಲು ಹೊರಟಿದ್ದಾರೆ' ಎಂದು ಭಾರತೀಯ ವಿಚಾರವಾದಿಗಳ ಸಂಘಗಳ ಒಕ್ಕೂಟದ ಪ್ರೊಫೆಸರ್ ನರೇಂದ್ರ ನಾಯಕ್...