ಆಮ್ ಆದ್ಮಿ ಪಕ್ಷದ ನಾಯಕ, ಪಂಜಾಬ್‌ನ ಚುನಾಯಿತ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶನಿವಾರ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಮಾರ್ಚ್ 16 ರಂದು ಮಧ್ಯಾಹ್ನ 12.30 ಕ್ಕೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಸ್ವಗ್ರಾಮದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಅವರು ರಾಜಭವನದ ಹೊರಗೆ ತಿಳಿಸಿದ್ದಾರೆ.
“ಪಂಜಾಬ್‌ನಾದ್ಯಂತ ಇರುವ ಮನೆಗಳಿಂದ ಜನರು ಸಮಾರಂಭಕ್ಕೆ ಬರುತ್ತಾರೆ ಮತ್ತು ಭಗತ್ ಸಿಂಗ್‌ಗೆ ಗೌರವ ಸಲ್ಲಿಸುತ್ತಾರೆ. ಉತ್ತಮ ಕ್ಯಾಬಿನೆಟ್ ಇರಲಿದ್ದು, ಹಿಂದೆಂದೂ ಮಾಡದ ಐತಿಹಾಸಿಕ ನಿರ್ಧಾರಗಳನ್ನು ಮಾಡಲಾಗುವುದು” ಎಂದು ಭಗವಂತ್ ಮಾನ್ ಅವರು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.
ಇದನ್ನೂ ಓದಿ: Punjab Election Results | ಪಂಜಾಬ್‌ನಲ್ಲಿ AAP ಭರ್ಜರಿ ಜಯ; ಸಂಪೂರ್ಣ ಫಲಿತಾಂಶ ಹೀಗಿದೆ
ಶುಕ್ರವಾರ ಮೊಹಾಲಿಯಲ್ಲಿ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಧುರಿ ಕ್ಷೇತ್ರದಿಂದ 58,000 ಮತಗಳಿಂದ ಗೆದ್ದಿರುವ ಮಾನ್ ಅವರನ್ನು ಎಎಪಿಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಆಮ್ ಆದ್ಮಿ ಪಕ್ಷದ ಹೊಸ ಶಾಸಕರಿಗೆ ತಮ್ಮ ಮೊದಲ ನಿರ್ದೇಶನದ ನೀಡಿದ ಮಾನ್ ಅವರು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗರಿಷ್ಠ ಸಮಯವನ್ನು ಕಳೆಯಬೇಕೆ ಹೊರತು, ರಾಜಧಾನಿ ಚಂಡೀಗಡದಲ್ಲಿ ಅಲ್ಲ ಮತ್ತು ಕ್ಯಾಬಿನೆಟ್ ಸ್ಥಾನಗಳಿಗಾಗಿ ಹಾತೊರೆಯಬೇಡಿ ಎಂದು ಹೇಳಿದ್ದಾರೆ.
“ನಾವು ಮತ ಕೇಳಲು ಹೋದ ಎಲ್ಲ ಸ್ಥಳಗಳಿಗೆ ಹೋಗಿ ನಾವು ಕೆಲಸ ಮಾಡಬೇಕು. ಎಲ್ಲಾ ಶಾಸಕರು ಚಂಡೀಗಢದಲ್ಲಿ ಉಳಿಯದೆ ಅವರು ಆಯ್ಕೆಯಾದ ಪ್ರದೇಶಗಳಲ್ಲಿ ಕೆಲಸ ಮಾಡಬೇಕು” ಎಂದು ಮಾನ್ ಹೇಳಿದ್ದಾರೆ.
“ಮುಖ್ಯಮಂತ್ರಿ ಹೊರತುಪಡಿಸಿ 17 ಮಂದಿ ಕ್ಯಾಬಿನೆಟ್ ಮಂತ್ರಿಗಳನ್ನು ಹೊಂದಬಹುದು. ಯಾರೂ ಅಸಮಾಧಾನಗೊಳ್ಳಬೇಕಾಗಿಲ್ಲ, ನೀವೆಲ್ಲರೂ ಕ್ಯಾಬಿನೆಟ್ ಮಂತ್ರಿಗಳೆ” ಎಂದು ಅವರು ತಮ್ಮನ್ನು ಒಳಗೊಂಡಂತೆ 92 ಶಾಸಕರ ಸಭೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಪಂಜಾಬ್‌ನಲ್ಲಿ ಅಭೂತಪೂರ್ವ ಜಯ ದಾಖಲಿಸಿದ ಆಪ್: ಕರ್ನಾಟಕದ ಮುಖಂಡರ ಪ್ರತಿಕ್ರಿಯೆ ಹೀಗಿದೆ
ಪಕ್ಷಕ್ಕೆ ಮತ ಹಾಕದವರ ಪರವಾಗಿಯೂ ದುರಹಂಕಾರಕ್ಕೆ ಒಳಗಾಗದೆ ಕೆಲಸ ಮಾಡಿ ಎಂದು ಅವರು ಮನವಿ ಮಾಡಿದ್ದಾರೆ.
“ಯಾವುದೆ ದುರಹಂಕಾರ ಬೇಡ ಎಂದು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. ನಿಮಗೆ ಮತ ಹಾಕದವರಿಗಾಗಿಯೂ ಕೆಲಸ ಮಾಡಿ, ನೀವು ಪಂಜಾಬಿಗಳ ಶಾಸಕರಾಗಿದ್ದೀರಿ” ಎಂದು ಅವರು ಹೇಳಿದ್ದಾರೆ.
117 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಎಎಪಿ 92 ಸ್ಥಾನಗಳನ್ನು ಗಳಿಸುವ ಮೂಲಕ ಚುನಾವಣೆಯಲ್ಲಿ ಭಾರಿ ಗೆಲುವು ದಾಖಲಿಸಿದೆ.
ಹಾಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಕಾಂಗ್ರೆಸ್ ರಾಜ್ಯ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಮತ್ತು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೇರಿದಂತೆ ವಿವಿಧ ಪಕ್ಷಗಳ ಹಿರಿಯ ನಾಯಕರನ್ನು ಎಎಪಿ ಸೋಲಿಸಿದೆ. 60 ವರ್ಷಗಳ ಇತಿಹಾಸದಲ್ಲಿ ರಾಜ್ಯದಲ್ಲಿ ಒಂದು ಪಕ್ಷ ಇಷ್ಟು ಹೆಚ್ಚಿನ ಸ್ಥಾನಗಳನ್ನು ಪಡೆದಿರುವುದು ಇದುವೆ ಮೊದಲ ಬಾರಿಯಾಗಿದೆ.
ಇದನ್ನೂ ಓದಿ: ಪಂಜಾಬ್: ಹಾಲಿ, ಮಾಜಿ ಸಿಎಂಗಳಿಗೆಲ್ಲ ಸೋಲಿನ ರುಚಿ


