Homeಕರ್ನಾಟಕಶಿಕಾರಿಪುರ: ಲಾಯರ್‌ ಮೇಲೆ ಹಲ್ಲೆ ಮಾಡಿದ್ದ ಪೊಲೀಸ್ ಅಧಿಕಾರಿ ಅಮಾನತು

ಶಿಕಾರಿಪುರ: ಲಾಯರ್‌ ಮೇಲೆ ಹಲ್ಲೆ ಮಾಡಿದ್ದ ಪೊಲೀಸ್ ಅಧಿಕಾರಿ ಅಮಾನತು

- Advertisement -
- Advertisement -

ಶಿಕಾರಿಪುರ ತಾಲ್ಲೂಕಿನ ತೊಗರ್ಸಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಿರೇಕೆರೂರಿನ ವಕೀಲರಾದ ಜಯದೇವ ಬಿ.ಕೆರೂಡಿ ಅವರ ಮೇಲೆ ಹಲ್ಲೆ ನಡೆಸಿದ್ದ ಪೊಲೀಸ್‌ ಅಧಿಕಾರಿ ಗುರುರಾಜ ಮೈಲಾರಿಯವರನ್ನು ಪೊಲೀಸ್‌ ಇಲಾಖೆ ಅಮಾನತು ಮಾಡಿದೆ.

ಪೊಲೀಸರು ಹಲ್ಲೆ ಮಾಡಿದ್ದಲ್ಲದೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಹಿರೇಕೆರೂರು ನ್ಯಾಯವಾದಿಗಳ ಸಂಘ ಇತ್ತೀಚೆಗೆ ಆಕ್ರೋಶ ವ್ಯಕ್ತಪಡಿಸಿತ್ತು.

ಮಾರ್ಚ್ 13ರಂದು ಮಲ್ಲಿಕಾರ್ಜುನ ದೇವರ ರಥೋತ್ಸವ ಪ್ರಯುಕ್ತ ದರ್ಶನಕ್ಕೆಂದು ಹಿರೇಕೆರೂರು ತಾಲ್ಲೂಕಿನ ಹಂಸಭಾವಿ ಗ್ರಾಮದ ವಕೀಲರಾದ ಜಯದೇವ ಬಿ. ಕೆರೂಡಿ ತೆರಳಿದ್ದರು. ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಜನ ಸಂದಣಿ ಹೆಚ್ಚಾಗಿದ್ದು, ಸಣ್ಣ ಮಕ್ಕಳು, ಹೆಣ್ಣು ಮಕ್ಕಳು ದೇವರ ದರ್ಶನಕ್ಕೆಂದು ಹರಸಾಹಸ ಪಡುತ್ತಿದ್ದರು. ನೂಕುನುಗ್ಗಲನ್ನು ತಡೆಯುವಂತೆ ಪೊಲೀಸರಿಗೆ ಜಯದೇವ ಅವರು ಕೋರಿದಾಗ ಪೊಲೀಸರು ದರ್ಪ ತೋರಿದ್ದಲ್ಲದೆ ಹಲ್ಲೆ ನಡೆಸಿದ್ದರು. ದೇವಾಲಯದ ಸಿಸಿ ಕ್ಯಾಮೆರಾದಲ್ಲಿ ಘಟನೆ ಸೆರೆಯಾಗಿತ್ತು.

ಸರತಿ ಸಾಲನ್ನು ಸರಿಪಡಿಸಲು ಕೋರಿದಾಗ ಅಲ್ಲಿದ್ದ ಸಿಪಿಐ ಗುರುರಾಜ ಮೈಲಾರಿ ಹಾಗೂ ಸಿಬ್ಬಂದಿ ಅವ್ಯಾಚ್ಯವಾಗಿ ನಿಂದಿಸಿದ್ದು, ವಕೀಲಿ ವೃತ್ತಿಗೂ ಅವಹೇಳನ ಮಾಡಿದ್ದಾರೆ. ಈ ವೇಳೆ ಸಿಪಿಐ ಹಾಗೂ ಹೆಡ್‌ಕಾನ್‌ಸ್ಟೇಬಲ್‌ ಇಬ್ಬರೂ ವಕೀಲರಿಗೆ ಥಳಿಸಿದ್ದಾರೆ. ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಠಾಣೆಗೆ ಕರೆದೊಯ್ದು ಅಲ್ಲಿಯೂ ಮೃಗೀಯ ವರ್ತನೆ ತೋರಿಸಿದ್ದಾರೆ. ಜಯದೇವ ಅವರು ಮಹಿಳಾ ಸಿಬ್ಬಂದಿ ಮೇಲೆ ಕೈ ಮಾಡಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. ಸದರಿ ವಕೀಲರಿಗೆ ಕಾನೂನು ಬಾಹಿರವಾಗಿ ಕೈಗೆ ಕೋಳ ತೊಡಿಸಿ ನ್ಯಾಯಾಲಯಕ್ಕೆ ಹಾಜರು ಮಾಡಿದ್ದಾರೆ ಎಂದು ವಕೀಲರು ಆಕ್ರೋಶ ಹೊರಹಾಕಿದ್ದರು. ಘಟನೆ ಹಿನ್ನೆಲೆಯಲ್ಲಿ ಕ್ರಮ ಜರುಗಿಸಿರುವ ದಾವಣಗೆರೆ ಪೂರ್ವ ವಲಯದ ಪೊಲೀಸ್‌ ಮಹಾನಿರೀಕ್ಷಕರು, ಶಿಕಾರಿಪುರ ನಗರ ಸಿಪಿಐ ಗುರುರಾ‌ಜ್‌ ಎನ್‌.ಮೈಲಾರಿ ಅವರನ್ನು ಅಮಾನತು ಮಾಡಿದ್ದಾರೆ.

ಅಮಾನತು ಆದೇಶದಲ್ಲಿ ಏನಿದೆ?

“ದೇವಾಲಯದಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಭಕ್ತರನ್ನು ಬಿಡುವಂತೆ ಜೋರು ದನಿಯಲ್ಲಿ ವಕೀಲ ಜಯದೇವ ಅವರು ಇಲಾಖೆಯ ಬಂದೋಬಸ್ತ್‌ನಲ್ಲಿದ್ದ ಸಿಬ್ಬಂದಿಯೊಂದಿಗೆ ವಾಗ್ವಾದ ಮಾಡುತ್ತಿರುವಾಗ ಸ್ಥಳದಲ್ಲಿಯೇ ಇದ್ದ ನೀವು ಪರಿಸ್ಥಿತಿಯನ್ನು ತಿಳಿಗೊಳಿಸಿ ಜನಸಂದಣಿಯನ್ನು ನಿಭಾಯಿಸದೆ ತೀವ್ರವಾಗಿ ಉದ್ವೇಗಕ್ಕೊಳಗಾಗಿದ್ದೀರಿ. ದೇವಸ್ಥಾನಕ್ಕೆ ಆಗಮಿಸಿದ್ದ ಸಾರ್ವಜನಿಕರ ಮುಂದೆಯೇ ಲಾಯರ್‌ ಜೊತೆಯಲ್ಲಿ ವಾಗ್ವಾದಕ್ಕಿಳಿದು, ನೂಕಾಟ ನಡೆಸಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದೀರಿ. ಒಂದು ವೇಳೆ ಸದರಿಯವರು ಅನುಚಿತವಾಗಿ ವರ್ತಿಸಿದ್ದಕ್ಕೆ ಅವರ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಿ ಕಾನೂನು ರೀತಿ ಕ್ರಮ ಜರುಗಿಸಬಹುದಿತ್ತು…”

“ನೀವು ಬಂದೋಬಸ್ತ್‌ ಕರ್ತವ್ಯದಲ್ಲಿದ್ದ ಇತರೆ ಸಿಬ್ಬಂದಿಗಳ ಸಹಾಯದೊಂದಿಗೆ ಅವರನ್ನು ಪಕ್ಕಕ್ಕೆ ಕರೆದೊಯ್ದು ಅವರ ಮೇಲೆ ಹಲ್ಲೆ ಮಾಡುವ ಮೂಲಕ, ಶಿಸ್ತಿನ ಇಲಾಖೆಯ ಸಿಪಿಐ ಹುದ್ದೆಯಂತಹ ಜವಾಬ್ದಾರಿ ಸ್ಥಾನದಲ್ಲಿದ್ದು, ಬೇಜವಾಬ್ದಾರಿತನದ ಮತ್ತು ಕರ್ತವ್ಯದಲ್ಲಿ ಘೋರ ನಿರ್ಲಕ್ಷ್ಯ ತೋರಿದ್ದಲ್ಲದೇ ಇಲಾಖೆಯ ಘನತೆಗೆ ಸಾರ್ವಜನಿಕವಾಗಿ ಮುಜುಗರವುಂಟಾಗುವಂತೆ ದುರ್ವರ್ತನೆ ತೋರಿದ್ದೀರಿ. ಇದು ದೇವಸ್ಥಾನದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳಿಂದ ಮತ್ತು ಶಿವಮೊಗ್ಗ ಪೊಲೀಸ್‌ ಅಧೀಕ್ಷಕರ ಉಲ್ಲೇಖಿತ ವರದಿಯ ಪರಿಶೀಲನೆಯಿಂದ ಮನವರಿಕೆಯಾಗಿದೆ. ಹೀಗಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಮ್ಮನ್ನು ಸೇವೆಯಿಂದ ಅಮಾನತು ಮಾಡಲಾಗಿದೆ” ಎಂದು ಮಾರ್ಚ್ 20ರಂದು ಆದೇಶ ಹೊರಡಿಸಲಾಗಿದೆ.

“ಅಮಾನತಿನ ಅವಧಿಯಲ್ಲಿ ಮೊದಲನೇ ಆರು ತಿಂಗಳ ಅವಧಿಯಲ್ಲಿ ಕೆಸಿಎಸ್‌ಆರ್‌ 1958ರ ನಿಯಮ 96ರಂತೆ ಅರ್ಧ ಸಂಬಳ ನೀಡಲಾಗುತ್ತದೆ…. ಅಮಾನತಿ ಅವಧಿಯಲ್ಲಿ ಯಾವುದೇ ಇತರೆ ವ್ಯಾಪಾರದಲ್ಲಿ ತೊಡಗಿಸಿಕೊಂಡರೆ ಪ್ರತ್ಯೇಕವಾದ ಶಿಸ್ತಿನ ಕ್ರಮ ಜರುಗಿಸಲಾಗುವುದು…” ಎಂದು ಎಚ್ಚರಿಸಲಾಗಿದೆ.


ಇದನ್ನೂ ಓದಿರಿ: ಬಜರಂಗದಳ ಮುಖಂಡನಿಂದ ಕೊಲೆಯಾದ ದಲಿತ ವ್ಯಕ್ತಿ ದಿನೇಶ್‌ ಮನೆಗೆ ಸಿದ್ದರಾಮಯ್ಯ ಭೇಟಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...