ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಫಕೀರನ ಕಟ್ಟೆಯ ಬಳಿಯ ಗುಜರಿ ಅಂಗಡಿಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಪೋಟಗೊಂಡು ಮೂವರು ಮೃತಪಟ್ಟಿರುವ ಘಟನೆ ಸೋಮವಾರ ಸಂಭವಿಸಿದೆ. ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಮಲ್ಲಾರ್‌ನ ರಜಬ್, ಚಂದ್ರನಗರದ ರಜಾಕ್ ಮತ್ತು ನಿಯಾಜ್ ಎಂದು ಗುರುತಿಸಲಾಗಿದೆ. ರಜಾಕ್ ಮತ್ತು ರಜಬ್ ಸ್ಥಳದಲ್ಲೇ ಮೃತಪಟ್ಟರೆ, ನಿಯಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಡೈಜಿವಲ್ಡ್.ಕಾಂ ವರದಿ ಮಾಡಿದೆ.
ಇದನ್ನೂ ಓದಿ: ಶಿಕಾರಿಪುರ: ಲಾಯರ್ ಮೇಲೆ ಹಲ್ಲೆ ಮಾಡಿದ್ದ ಪೊಲೀಸ್ ಅಧಿಕಾರಿ ಅಮಾನತು
ಘಟನೆಯಲ್ಲಿ ಹಸನಬ್ಬ ಹಾಗೂ ಬೆಳಪು ಗ್ರಾಮ ಪಂಚಾಯಿತಿ ಸದಸ್ಯ ಫಾಹಿಂ ಬೆಳಪು ಅವರು ಕೂಡಾ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಗುಜರಿಗೆ ಎಂದು ಅಂಗಡಿಗೆ ತರಲಾಗಿದ್ದ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅಂಗಡಿಯಲ್ಲಿ ಇರಿಸಲಾದ ಹಳೆಯ ಪ್ರಿಜ್ ಸೇರಿದಂತೆ ಗುಜರಿ ಸಾಮಗ್ರಿಗಳು ಬೆಂಕಿಗೆ ಸುಟ್ಟಿಹೋಗಿದ್ದು ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಭುಗಿಲೆದ್ದ ಬೆಂಕಿಯನ್ನು ನಂದಿಸಲು ಎರಡು ಅಗ್ನಿಶಾಮಕ ವಾಹನಗಳನ್ನು ಕಾರ್ಯನಿರ್ವಹಿಸಿದ್ದು, ಸ್ಥಳಕ್ಕೆ ಕಾಪು ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ನೆದರ್‌ಲ್ಯಾಂಡ್ಸ್ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕಡ್ಡಾಯ ಎಂಬುದು ಸುಳ್ಳು ಸುದ್ದಿ


