ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸ್ವಗ್ರಾಮ ಭಕ್ತಿಯಾರ್‌ಪುರದಲ್ಲಿ ಭಾರಿ ಭದ್ರತಾ ಲೋಪ ಉಂಟಾಗಿದ್ದು, ವ್ಯಕ್ತಿಯೊಬ್ಬ ನಿತೀಶ್‌ಕುಮಾರ್ ಮೇಲೆ ದಾಳಿ ಮಾಡಿರುವ ಘಟನೆ ಭಾನುವಾರ ನಡೆದಿದೆ.
ದಾಳಿ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವ್ಯಕ್ತಿಯನ್ನು ಬಂಧಿಸಲಾಗಿದೆ. ವ್ಯಕ್ತಿಯು ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾನೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಘಟನೆಯನ್ನು ದುರದೃಷ್ಟಕರ ಎಂದು ಕರೆದಿರುವ ರಾಜ್ಯ ಸಚಿವ ಅಶೋಕ್ ಚೌಧರಿ, “ಮುಖ್ಯಮಂತ್ರಿ ಭದ್ರತೆಯ ಉಸ್ತುವಾರಿ ವಹಿಸಿರುವವರ ಕಡೆಯಿಂದ ಲೋಪವಾಗಿದೆ. ತನಿಖೆಯಾಗಬೇಕು” ಎಂದು ಹೇಳಿದ್ದಾರೆ.
ಸ್ಥಳೀಯ ಸಫರ್ ಆಸ್ಪತ್ರೆ ಸಂಕೀರ್ಣದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಶಿಲಭದ್ರ ಯಾಜಿ ಅವರ ಪ್ರತಿಮೆಗೆ ಮುಖ್ಯಮಂತ್ರಿ ಮಾಲಾರ್ಪಣೆ ಮಾಡಲಿರುವಾಗ ದಾಳಿ ನಡೆದಿರುವುದನ್ನು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳು ತೋರಿಸಿವೆ.
ಹಿಂದಿನಿಂದ ಬಂದ ವ್ಯಕ್ತಿ, ವೇಗವಾಗಿ ವೇದಿಕೆಯ ಮೇಲೆ ಏರುತ್ತಾನೆ. ಪ್ರತಿಮೆಗೆ ಪುಷ್ಪನಮನ ಸಲ್ಲಿಸಲು ಬಾಗಿದ ನಿತೀಶ್ ಕುಮಾರ್ ಅವರಿಗೆ ಹಿಂದಿನಿಂದ ಹೊಡೆಯುತ್ತಾನೆ. ತಕ್ಷಣ ಆತನನ್ನು ಮುಖ್ಯಮಂತ್ರಿ ಭದ್ರತಾ ಸಿಬ್ಬಂದಿ ಎಳೆದೊಯ್ದರು.
“ಅವನನ್ನು ಹೊಡೆಯಬೇಡಿ. ಅವನು ಏನು ಹೇಳುತ್ತಿದ್ದಾನೆ ಎಂಬುದನ್ನು ಮೊದಲು ಕಂಡುಹಿಡಿಯಿರಿ” ಎಂದು ಮುಖ್ಯಮಂತ್ರಿಗಳು ತಮ್ಮ ಭದ್ರತಾ ಸಿಬ್ಬಂದಿಗೆ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಆ ವ್ಯಕ್ತಿಯನ್ನು ಶಂಕರ್ ಸಾಹ್ ಎಂದು ಗುರುತಿಸಲಾಗಿದೆ. ಭಕ್ತಿಯಾರ್‌ಪುರದ ಅಬು ಮಹಮದ್ ಪುರ ನಿವಾಸಿ ಶಂಕರ್ ಆಭರಣ ಮಳಿಗೆ ಹೊಂದಿದ್ದಾರೆ.
ಹಲ್ಲೆ ನಡೆಸಿದ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ. ಅವರ ಕುಟುಂಬದವರು ಆತನನ್ನು ಹೆಚ್ಚಾಗಿ ಮನೆಯಲ್ಲಿಯೇ ಇರಿಸಿದ್ದರು ಎಂದು ಮೂಲಗಳು ತಿಳಿಸಿವೆ. ಕುಟುಂಬದ ಸದಸ್ಯರು ಹೊರಗಿದ್ದ ಕಾರಣ ಶಂಕರ್ ಮನೆಯಿಂದ ಹೊರ ಬಂದು ಈ ರೀತಿ ವರ್ತಿಸಿದ್ದಾರೆ ಎಂದು ಪಾಟ್ನಾ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ. ಭದ್ರತಾ ಲೋಪದ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಯವರು ತಮ್ಮ ಹಳೆಯ ಲೋಕಸಭಾ ಕ್ಷೇತ್ರವಾದ ಬರ್ಹ್‌ನ ವಿವಿಧ ಭಾಗಗಳಲ್ಲಿ ಪ್ರವಾಸ ಕೈಗೊಂಡಿದ್ದರು. ನಿತೀಶ್ ಕುಮಾರ್ ಅವರು 1989ರಿಂದ 1999 ರವರೆಗೆ ಬಾರ್ಹ್‌ನಿಂದ ಐದು ಬಾರಿ ಆಯ್ಕೆಯಾಗಿದ್ದಾರೆ.
2020ರ ನವೆಂಬರ್‌ನಲ್ಲಿ ಬಿಹಾರದ ಮಧುಬನಿಯಲ್ಲಿ ರಾಜ್ಯ ಚುನಾವಣೆಗಳಿಗಾಗಿ ಪ್ರಚಾರ ನಡೆಸುತ್ತಿದ್ದಾಗ ನಿತೀಶ್ ಕುಮಾರ್ ದಾಳಿಗೊಳಗಾಗಿದ್ದರು.
ಕುಮಾರ್ ಅವರು ಹರ್ಲಖಿಯಲ್ಲಿ ನಡೆದ ರ್ಯಾಲಿಯಲ್ಲಿ ಉದ್ಯೋಗಗಳ ಕುರಿತು ಮಾತನಾಡುತ್ತಿದ್ದರು, ಜನಸಮೂಹದಿಂದ ಈರುಳ್ಳಿಯನ್ನು ಎಸೆಯಲಾಗಿತ್ತು. “ಖುಬ್ ಫೆಕೋ, ಖುಬ್ ಫೆಕೋ, ಖುಬೇ ಫೆಕೋ (ಎಸೆಯುತ್ತಲೇ ಇರು)” ಎಂದು ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ ದಾಳಿಕೋರನು ಭದ್ರತಾ ಸಿಬ್ಬಂದಿಯ ಕೈಗೆ ಸಿಕ್ಕಿಬಿದ್ದಾಗ ನಿತೀಶ್, “ಅವನು ಹೋಗಲಿ, ಅವನತ್ತ ಗಮನ ಹರಿಸಬೇಡ” ಎಂದಿದ್ದರು.
ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ದಾಳಿಯನ್ನು ಖಂಡಿಸಿದ್ದು, ಪ್ರಜಾಪ್ರಭುತ್ವದ ಮೂಲಕ ಪ್ರತಿಭಟಿಸುವಂತೆ ಜನರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿರಿ: ಈ ವಾರದ ಟಾಪ್ 10 ಸುದ್ದಿಗಳು: ಮಿಸ್ ಮಾಡದೆ ಓದಿ


