ಛತ್ತೀಸ್‌ಘಡದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟ ತನ್ನ 7 ವರ್ಷದ ಮಗಳ ಮೃತದೇಹವನ್ನು ವ್ಯಕ್ತಿಯೊಬ್ಬ 10 ಕಿ.ಮೀ ನಷ್ಟು ಹೊತ್ತೊಯ್ದ ಅಮಾನವೀಯ ಘಟನೆ ಮಾಸುವ ಮುನ್ನವೇ ಅಂತದ್ದೆ ಅಮಾನುಷ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ಮೃತಪಟ್ಟ ಸಂಬಂಧಿಯ ಶವ ಸಾಗಿಸಲು ಆಂಬುಲೆನ್ಸ್ ಸಿಗದ ಕಾರಣ ನಾಲ್ವರು ಮಹಿಳೆಯರು ಮಂಚದಲ್ಲಿಯೇ ಶವ ಹೊತ್ತು ನಡೆದ ಘಟನೆ ಜರುಗಿದೆ.
ಮಧ್ಯಪ್ರದೇಶದ ರೇವಾ ಜಿಲ್ಲೆಯ ರಾಯ್ಪುರ್‌ನಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟ ಮಹಿಳೆಯ ಶವ ಸಾಗಿಸಲು ಯಾವುದೇ ಆಂಬುಲೆನ್ಸ್ ಸಿಕ್ಕಿಲ್ಲ. ಹಾಗಾಗಿ ನಾಲ್ವರು ಮಹಿಳೆಯರು ಮಂಚದಲ್ಲಿಯೇ ಶವ ಹೊತ್ತೊಯ್ಯುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹುಟ್ಟಿಸಿದೆ.
“ಜ್ವರದಿಂದ ಬಳಲುತ್ತಿದ್ದ ನಮ್ಮ ಸಂಬಂಧಿ ರಾಯ್ಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟರು. ಆಸ್ಪತ್ರೆಯವರು ಶವ ಸಾಗಿಸಲು ಯಾವುದೇ ವ್ಯವಸ್ಥೆ ಮಾಡಲಿಲ್ಲ. ಹಾಗಾಗಿ ನಾವು ಮಂಚದಲ್ಲಿಯೇ ಹೊತ್ತುಕೊಂಡು ಮನೆಗೆ ಹೋಗುತ್ತಿದ್ದೇವೆ” ಎಂದು ಮಹಿಳೆಯೊಬ್ಬರು ಮಾತನಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ನಮಗೆ ಆಸ್ಪತ್ರೆಯಾಗಲಿ, ಆಡಳಿತವಾಗಲಿ ಯಾವುದೇ ಸಹಾಯ ಮಾಡಲಿಲ್ಲ. ಹಾಗಾಗಿ ನಾವು ಬಂದ ದಾರಿಯಲ್ಲಿಯೇ ಮಂಚದಲ್ಲಿಯೇ ಶವ ಹೊತ್ತು ಹೋಗುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಘಟನೆ ಕುರಿತು ಜಿಲ್ಲೆಯ ಮುಖ್ಯ ಆರೋಗ್ಯ ಅಧಿಕಾರಿ ಬಿ.ಎಲ್ ಮಿಶ್ರಾ ಮಾತನಾಡಿ, “ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಶವ ಸಾಗಿಸಲು ವಾಹನ ಅಥವಾ ಆಟೋ ವ್ಯವಸ್ಥೆ ಮಾಡಲು ಪ್ರಯತ್ನಿಸಿದರು. ಆದರೆ ಕಾಯಲು ಸಿದ್ದವಿಲ್ಲದ ಮೃತರ ಸಂಬಂಧಿಗಳು ತರಾತುರಿಯಲ್ಲಿ ಮಂಚದಲ್ಲಿಯೇ ಶವ ಹೊತ್ತೊಯ್ದಿದ್ದಾರೆ. ಇದೇನು ದೊಡ್ಡ ವಿಷಯವಲ್ಲ, ಏಕೆಂದರೆ ನಾವು ಶವ ಸಾಗಿಲು ವಾಹನ ಹೊಂದಿಲ್ಲ” ಎಂದಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರಕ್ಕೆ ರೋಗಿಗಳನ್ನು ಕರೆದೊಯ್ಯಲು ವಾಹನಗಳ ಕೊರತೆಯಿಂದ ಈ ಹಿಂದೆಯೂ ಈ ರೀತಿಯ ತೊಂದರೆ ಉಂಟಾಗಿದೆ ಎಂದು ಕೆಲ ಸಿಬ್ಬಂದಿಗಳು ಹೇಳಿದ್ದಾರೆ. ಇದು ಆರೋಗ್ಯ ವ್ಯವಸ್ಥೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ದೂರು ಕೇಳಿಬಂದಿದೆ.
ಇದು ಮೊದಲ ಘಟನೆಯಲ್ಲ. ಇಂತಹ ನೂರಾರು ಘಟನೆಗಳು ನಮ್ಮ ದೇಶದಲ್ಲಿ ಜರುಗಿವೆ. ಭಾರತದಲ್ಲಿ ಆರೋಗ್ಯ ವ್ಯವಸ್ಥೆ ಕಳಪೆ ಮಟ್ಟದಲ್ಲಿರುವುದನ್ನು ಇಂತಹ ಘಟನೆಗಳು ಪದೇ ಪದೇ ನಿರೂಪಿಸುತ್ತಿವೆ. ದೇಶದ ಎಲ್ಲರಿಗೂ ಉಚಿತ ಮತ್ತು ಗುಣಮಟ್ಟದ ಆರೋಗ್ಯ ಮತ್ತು ಶಿಕ್ಷಣ ಸೇವೆ ನೀಡಬೇಕಾದ ಸರ್ಕಾರಗಳು ತಮ್ಮ ಕರ್ತವ್ಯ ಪಾಲಿಸುತ್ತಿಲ್ಲ. ಸಮರ್ಪಕ ಮೇಲ್ವಿಚಾರಣೆ ಇಲ್ಲದ ಕಾರಣಕ್ಕೆ ಇರುವ ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅದರಿಂದಾಗಿಯೇ ಇಂತಹ ಅನಾಹುತಗಳು ಸಂಭವಿಸುತ್ತಿವೆ. ಈಗಲಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು ಮತ್ತು ಅದಕ್ಕಾಗಿ ಜನರು ಒತ್ತಾಯಿಸಬೇಕಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ; ಮಗಳ ಮೃತದೇಹವನ್ನು 10 ಕಿ.ಮೀ ಹೊತ್ತೊಯ್ದ ತಂದೆ: ಛತ್ತೀಸ್‌ಘಡದಲ್ಲೊಂದು ಅಮಾನವೀಯ ಘಟನೆ


