ಸವರ್ಣೀಯರ ಗುಂಪೊಂದು ದಲಿತ ಬಾಲಕನ ಮೇಲೆ ಚಪ್ಪಲಿ ಕದ್ದ ಆರೋಪ ಹೊರಿಸಿ, ಓಡಾಡಿಸಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅದೇ ಚಪ್ಪಲಿ ತೊಳೆಸಿ, ಜಾತಿ ನಿಂದನೆ ಮಾಡಿ ಅಶ್ಪೃಸ್ಯತೆ ಆಚರಿಸಿರುವ ಆರೋಪ ಕೇಳಿಬಂದಿದೆ. ಇದನ್ನು ಪ್ರಶ್ನಿಸಿದ ಬಾಲಕನ ತಾಯಿ ಮೇಲೆಯೂ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿ, ಜಾತಿ ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ಹಾಸನ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಜರುಗಿದೆ.
ಪ್ರಕರಣದ ಹಿನ್ನೆಲೆ
ಕೊಂಡಜ್ಜಿ ಗ್ರಾಮದ ದಲಿತ ಸಮುದಾಯದ ರವಿ ಕುಮಾರ್ ಮತ್ತು ಭವ್ಯರವರ ಪುತ್ರ ದರ್ಶನ್ ಸೀಗೆ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಾರ್ಚ್ 29ರ ಮಂಗಳವಾರ ವಾರ್ಷಿಕ ಪರೀಕ್ಷೆ ಬರೆದು ದರ್ಶನ್ ವಾಪಸ್ಸು ಗ್ರಾಮಕ್ಕೆ ಬರುವಾಗ ಮದ್ಯಾಹ್ನ 12.30ರ ವೇಳೆಯಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಚಪ್ಪಲಿಯನ್ನು ಯಾರದಿವು ಎಂದು ಕಾಲುಗಳಿಂದ ತಳ್ಳಿದ್ದಾನೆ. ಅಷ್ಟಕ್ಕೆ ಸೀಗೆ ಗ್ರಾಮದ ಬಾರೆಯಲ್ಲಿ ವಾಸವಾಗಿರುವ ಲಿಂಗಾಯತ ಸಮುದಾಯಕ್ಕೆ ಸೇರಿದ ರೇವಣಸಿದ್ದಪ್ಪ ಬಿನ್ ಹಲಗಪ್ಪ, ಬಸವರಾಜು ಬಿನ್ ಹಲಗಪ್ಪ ಮತ್ತು ಸಾಗರ್ ಎಂಬುವವರು ಸೇರಿ ನಮ್ಮ ಚಪ್ಪಲಿಯನ್ನು ಕದ್ದಿದ್ದಿಯ ಎಂದು ಆರೋಪ ಹೊರಿಸಿ ದರ್ಶನ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
“ನಾನು ಪರೀಕ್ಷೆ ಬರೆದು ವಾಪಸ್ ಬರುವಾಗ ರಸ್ತೆಯಲ್ಲಿ ಬಿದ್ದಿದ್ದ ಚಪ್ಪಲಿಯನ್ನು ಪಕ್ಕಕ್ಕೆ ತಳ್ಳಿದ ಕಾರಣಕ್ಕೆ ಹೊಡೆಯಲು ಬಂದರು. ನಾನು ಭಯದಿಂದ ಓಡಿಹೋಗಲು ಯತ್ನಿಸಿದರೂ ಹಿಡಿದು ಮನಬಂದಂತೆ ಥಳಿಸಿದರು. ನಾನು ಎಸ್‌ಸಿ ಕಾಲೋನಿಯ ಹುಡುಗ ಎಂದು ತಿಳಿದೊಡನೆಯೇ ಹೊಲೆಯನ ಮಗನಾಗಿ ನನ್ನ ಚಪ್ಪಲಿ ಹೊತ್ತುಕೊಂಡು ಹೋಗಿದ್ದೀಯ ಎಂದು ಬೈಯ್ದು ಚಪ್ಪಲಿ ತೊಳೆಯುವಂತೆ ಒತ್ತಾಯಿಸಿದರು. ನಾನು ಚಪ್ಪಲಿ ಕದ್ದಿಲ್ಲ, ತೊಳೆಯೊಲ್ಲ ಎಂದಿದ್ದಕ್ಕೆ ಎದೆಗೆ ಒದ್ದರು” ಎಂದು ದರ್ಶನ್ ಅಳಲು ತೋಡಿಕೊಂಡಿದ್ದಾರೆ.
ನನ್ನ ತಲೆ ಮೇಲೆ ಹೊಡೆದರು. ನಮ್ಮ ಶಾಲೆಯ ಪಕ್ಕದಲ್ಲಿಯೇ ಅವರ ಪ್ಲಾಸ್ಟಿಕ್ ಚಪ್ಪಲಿ ತೊಳೆಸಿ ಅವಮಾನ ಮಾಡಿದರು. ವಿಷಯ ತಿಳಿದ ನನ್ನ ಸ್ನೇಹಿತ ಮನೋಜ್ ನಮ್ಮ ತಂದೆ ತಾಯಿಗೆ ತಿಳಿಸಿದರು. ಅದನ್ನು ಪ್ರಶ್ನಿಸಿದ ನಮ್ಮ ತಂದೆ ತಾಯಿ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ದರ್ಶನ್ ತಿಳಿಸಿದ್ದಾರೆ.
ದರ್ಶನ್ ತಾಯಿ ಭವ್ಯರವರು ಮಾತನಾಡಿ, “ಹುಡುಗ ರವಿ ಮಗ ಎಂದು ಗೊತ್ತಾದಮೇಲೆಯೂ ಹೊಡೆದಿದ್ದಿರಲ್ಲ ಸರಿಯೇ ಎಂದು ಪ್ರಶ್ನಿಸಿದ್ದಕ್ಕೆ ಸೂಳೆಮುಂಡೆ ನಮ್ಮನ್ನೆ ಕೇಳುತ್ತೀಯ ಎಂದು ಬೈಯ್ದು ನನ್ನ ಮೇಲೆಯೂ ಹಲ್ಲೆ ನಡೆಸಿದರು. ತಾಳಿ ಸರ, ಓಲೆ ಕಿತ್ತುಹಾಕಿದ್ದಾರೆ. ಬಟ್ಟೆಯನ್ನು ಹರಿದು ಹಾಕಿ ಹೊಲೆಯ ಮುಂಡೆ ಎಂದು ಬೈಯ್ದು ಹೆಂಗಸರು ಹೇಳಲಾಗದ ಕೆಟ್ಟ ಭಾಷೆಯಲ್ಲಿ ಬೈದಿದ್ದಾರೆ” ಎಂದು ದೂರಿದ್ದಾರೆ.
ಅಮಾನುಷ ಹಲ್ಲೆ ನಡೆಸಿದ ಆರೋಪಿಗಳಾದ ರೇವಣಸಿದ್ದಪ್ಪ, ಬಸವರಾಜು ಹಾಗೂ ಅವರ ಮಕ್ಕಳಾದ ಶರತ್ ಮತ್ತು ಸಾಗರ್ ಇವರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘಟನೆಯ ಪ್ರಮುಖರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಭೀಮವಿಜಯ ಪತ್ರಿಕೆ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ: ವಿಕಲಾಂಗ ವ್ಯಕ್ತಿಯ ಮೇಲೆ ತೀವ್ರ ಹಲ್ಲೆ ನಡೆಸಿದ್ದವರ ಪತ್ತೆ