ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರ ಹೆಸರಲ್ಲಿ ನಕಲಿ ಪೋಸ್ಟರ್ ಸೃಷ್ಟಿಸಿರುವ ಕಿಡಿಗೇಡಿಗಳು ಸಮಾಜದಲ್ಲಿ ದ್ವೇಷ ಸೃಷ್ಟಿಸಲು ಯತ್ನಿಸಿದ್ದಾರೆ. ಚೇತನ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ನಕಲಿ ಪೋಸ್ಟರ್ ಫೋಟೋ ಹಂಚಿಕೊಂಡು ಸ್ಪಷ್ಟನೆ ನೀಡಿದ್ದಾರೆ.
‘ದಲಿತರು ಮುಸಲ್ಮಾನರ ನಡುವಿನ ಸಹೋದರತ್ವ ಸತ್ಯ ಆಗಿದ್ರೆ, ದಲಿತರು ಕತ್ತರಿಸಿದ ಮಾಂಸವನ್ನು ಮುಸಲ್ಮಾನರು ತಿನ್ನಲಿ: ನಟ’ ಎಂಬ ಶೀರ್ಷಿಕೆಯ ಪೋಸ್ಟರ್‌ನಲ್ಲಿ ಚೇತನ್ ಫೋಟೋ ಬಳಸಲಾಗಿದೆ. Nanugori.in( ಸರಿಯಾಗಿ ಗಮನಿಸಿ, ಅದು naanugauri.com ಅಲ್ಲ) ಇದ ಎಂದು ನಕಲಿ ಹೆಸರನ್ನು ಸೃಷ್ಟಿಸಿ, ಜನರಲ್ಲಿ ಗೊಂದಲ ಮೂಡಿಸಲು ಯತ್ನಿಸಲಾಗಿದೆ.
ನಿಜವಾಗಿಯೂ ಈ ಥರದ ಒಂದು ವೆಬ್‌ಸೈಟ್ ಇದೆಯೇ ಎಂದು ಹುಡುಕಾಡಿದಾಗ, ಇದು ಕಿಡಿಗೇಡಿಗಳ ಕೃತ್ಯ ಎಂಬುದು ಸ್ಪಷ್ಟವಾಗಿದೆ. ಅಲ್ಲದೇ ಹಲವಾರು ಓದುಗರು, ಈ ದುಷ್ಕೃತ್ಯವನ್ನು ‘ನಾನುಗೌರಿ.ಕಾಂ’ ಗಮನಕ್ಕೆ ತಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ನಟ ಚೇತನ್, “ದಲಿತರು ಮತ್ತು ಮುಸ್ಲಿಮರು ಒಂದು ವೇದಿಕೆಗೆ ಬರುತ್ತಿದ್ದಾರೆ. ಅದನ್ನು ಸಹಿಸಲಾಗದ ಮತೀಯ ಶಕ್ತಿಗಳು ಸುಳ್ಳು ಹರಡಿ ಸಮುದಾಯಗಳನ್ನು ಒಡೆಯಲು ಯತ್ನಿಸಿದ್ದಾರೆ. ಮುಸ್ಲಿಮರು ಹಾಗೂ ದಲಿತರ ನಡುವೆ ವೈಷಮ್ಯ ಬೆಳೆಸಲೆಂದು ಈ ಪೋಸ್ಟರ್ ಹರಿಬಿಟ್ಟಿದ್ದಾರೆ” ಎಂದು ತಿಳಿಸಿದರು.
ದಲಿತರು ಮತ್ತು ಮುಸ್ಲಿಮರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ‘ನಾನುಗೌರಿ.ಕಾಂ’ ನಿರಂತರ ವರದಿ ಮಾಡುತ್ತಿದೆ. ಇದನ್ನು ಸಹಿಸದ ಮತೀಯ ಸಂಘಟನೆಗಳು ಈ ಕೃತ್ಯವನ್ನು ಎಸಗಿರುವುದು ಮೇಲು ನೋಟಕ್ಕೆ ಕಂಡುಬಂದಿದೆ.
“ಉಗಾದಿ ವರ್‍ಸತೊಡಕು: ದಲಿತರಿಗೆ ತಮ್ಮಿಷ್ಟದ ‘ಜಟ್ಕಾ ಕಟ್ ಮಾಂಸ’ ಸಿಗುವುದೇ?” ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿಯನ್ನು ಮಾಡಲಾಗಿತ್ತು. ಹಬ್ಬದ ಸಂದರ್ಭದಲ್ಲಿ ದಲಿತರೇ ದನವನ್ನು ಕಡಿಯುತ್ತಾರೆ, ಅಥವಾ ಮುಸ್ಲಿಂ ವರ್ತಕರಿಂದ ಖರೀದಿಸುತ್ತಾರೆ ಎಂಬ ವಿಷಯದ ಕುರಿತು ಬೆಳಕು ಚೆಲ್ಲಲಾಗಿತ್ತು. ಜಟ್ಕಾ ಕಟ್, ಹಲಾಲ್ ಕಟ್ ವಿವಾದ ಸೃಷ್ಟಿಸಿ ಮುಸ್ಲಿಂ ಸಮುದಾಯದ ಮೇಲೆ ಹೇರಲಾಗುತ್ತಿರುವ ಆರ್ಥಿಕ ನಿರ್ಬಂಧಗಳನ್ನು ಖಂಡಿಸಿ ಹಲವು ದಲಿತ ಯುವಕರು ‘ನಾನುಗೌರಿ.ಕಾಂ’ಗೆ ಹೇಳಿಕೆ ನೀಡಿದ್ದರು.
‘ದಲಿತರು ದನದ ಮಾಂಸವನ್ನು ಹಬ್ಬಗಳಲ್ಲಿ ತಿನ್ನುತ್ತಾರೆ. ಜಟ್ಕಾ ಕಟ್‌ನಲ್ಲಿ ದನದ ಮಾಂಸ ಸಿಗುತ್ತದೆಯೇ?’ ಎಂದು ದಲಿತರು ಪ್ರಶ್ನಿಸಿದ್ದರು. ಜೊತೆಗೆ ದಲಿತರು ಮಾಂಸದಂಗಡಿ ಇರಿಸಿದರೆ ಇತರ ಸವರ್ಣೀಯ ಹಿಂದೂ ಜಾತಿಗಳು ಅವರಲ್ಲಿ ವ್ಯಾಪಾರ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ರಾಜ್ಯದ ಕೆಲವು ಭಾಗಗಳಲ್ಲಿ ಹಬ್ಬಗಳ ಸಂದರ್ಭಗಳಲ್ಲಿ ದಲಿತರೇ ದನವನ್ನು ಕೊಯ್ಯುತ್ತಾರೆ. ಆದರೆ ಅದು ವಾಣಿಜ್ಯ ಉದ್ದೇಶಗಳಿಗಲ್ಲ ಎಂಬುದು ವರದಿಯಿಂದ ಸ್ಪಷ್ಟವಾಗಿತ್ತು. ಈ ವರದಿಯನ್ನು ಸಹಿಸಲಾಗದವರು ದಲಿತರು ಮತ್ತು ಮುಸ್ಲಿಮರ ನಡುವೆ ದ್ವೇಷ ಹಬ್ಬಿಸಲು ಯತ್ನಿಸಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. (ಪೂರ್ಣ ವರದಿಯನ್ನು ಇಲ್ಲಿ ಓದಬಹುದು)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿರಿ: ಮತ್ತೆ ನಾಲಗೆ ಹರಿಬಿಟ್ಟ ಯತಿ ನರಸಿಂಗಾನಂದ; ಎಫ್‌ಐಆರ್


