Homeಕರ್ನಾಟಕಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಭಟ್ಕಳ-ಹೊನ್ನಾವರ: ಧರ್ಮಕಾರಣ ಮತ್ತು ಜಾತಿಕಾರಣದ ಜುಗಲ್‌ಬಂದಿಯ ಆಖಾಡ!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಭಟ್ಕಳ-ಹೊನ್ನಾವರ: ಧರ್ಮಕಾರಣ ಮತ್ತು ಜಾತಿಕಾರಣದ ಜುಗಲ್‌ಬಂದಿಯ ಆಖಾಡ!

- Advertisement -
- Advertisement -

ಉತ್ತರ ಕನ್ನಡದ ದಕ್ಷಿಣ ತುದಿಯಲ್ಲಿರುವ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರ ಪಶ್ಚಿಮ ಘಟ್ಟದ ದಟ್ಟ ಕಾಡು-ಕಣಿವೆ-ನದಿ-ಸಮುದ್ರ-ಬೀಚ್-ದ್ವೀಪಗಳ ಚಂದದ ಪ್ರಕೃತಿ ತಾಣ. ಅಡಿಕೆ-ತೆಂಗು-ಭತ್ತ-ತರಕಾರಿ ಮತ್ತು ಮೀನು ಕೃಷಿ ಜನರ ಜೀವನಾಧಾರ. ಮೀನುಗಾರಿಕೆ ಮತ್ತು ಕೊಲ್ಲಿ ರಾಷ್ಟ್ರಗಳ ಸಂಪರ್ಕದ ಇಲ್ಲಿಯ ನವಾಯತ ಮುಸ್ಲಿಮರ ಮೂಲಕ ಹರಿದಾಡುವ ಹಣಕಾಸು ವಾಣಿಜ್ಯ ವಹಿವಾಟಿನ ಮೂಲ. ನವಾಯತ ಮುಸ್ಲಿಮರು ಕೊಲ್ಲಿ ದೇಶಗಳಲ್ಲಿ ವ್ಯವಹರಿಸಿ ತಂದ ದುಡ್ಡಿನ ಹರಿವಿನಿಂದ ’ಮಿನಿ ದುಬೈ’ ಎಂದೂ ಕರೆಸಿಕೊಳ್ಳುವ, ಹಿಂದುತ್ವದ ಪ್ರಯೋಗಶಾಲೆಯಲ್ಲಿ ಗುರಿಯಾಗಿ, ಇದು ಮುಸ್ಲಿಮ್ ಭಯೋತ್ಪಾದಕರು ಹೆಚ್ಚಿರವ ತಾಣ ಎಂದು ಹೊರಪ್ರಪಂಚಕ್ಕೆ ಭಾವನೆ ಹುಟ್ಟಿಸಿರುವ ಭಟ್ಕಳವೆಂದರೆ ಇಲ್ಲಿನ ರಾಜಕೀಯ ಆಟಗಳು ಅರ್ಥವಾದೀತು. ಆದರೆ ಭಟ್ಕಳದ ಬಹುತೇಕ ಮಂದಿ ಎಲ್ಲ ಮತದ ಹೊಟ್ಟು ತೂರಿ ಸಾಮರಸ್ಯದಿಂದ ಬದುಕಲು ಬಯಸಿದ್ದಾರೆ.

ಭೂಗೋಳ-ಇತಿಹಾಸ-ಸಮಾಜ

ಹೊನ್ನಾವರ ತಾಲೂಕಿನ ಹೊಳೆಸಾಲು (ಶರಾವತಿ ನದಿ ಪಾತ್ರದ ಇಕ್ಕೆಲ) ಮತ್ತು ಸಂಪೂರ್ಣ ಭಟ್ಕಳ ತಾಲೂಕು ಸೇರಿಸಿ ರಚಿಸಲಾಗಿರುವ ಭಟ್ಕಳ ವಿಧಾನಸಭಾ ಕ್ಷೇತ್ರ ಭೌಗೋಳಿಕವಾಗಿ ಅಷ್ಟೇ ಅಲ್ಲ, ಸಾಮಾಜಿಕವಾಗಿಯೂ ಹಲವು ವೈಶಿಷ್ಟ್ಯಗಳ ಪ್ರದೇಶ. ಅರಬ್ಬೀ ಸಮುದ್ರ ಮತ್ತು ಸಹ್ಯಾದ್ರಿ ಶಿಖರ ಶ್ರೇಣಿಯ ನಡುವೆ ಹಸಿರು ಹೊನ್ನಿನ ಗಣಿಯಂತೆ ಗೋಚರಿಸುವ ಹೊನ್ನಾವರ-ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಶರಾವತಿ ಮತ್ತು ಶರಾಬಿ ನದಿಗಳು ಜೀವಕಳೆ ತುಂಬಿವೆ. ಹೊನ್ನಾವರದ ಗೇರುಸೊಪ್ಪದ ನಿತ್ಯ ಹರಿದ್ವರ್ಣ ಕಾಡಿನಲ್ಲಿ ಅಪರೂಪದ ಸಿಂಹ ಬಾಲದ ಮಂಗ- ’ಸಿಂಗಳೀಕ’ದ ಸಂತತಿಯಿದೆ.

ಕರಿಮೆಣಸಿನ ರಾಣಿ ಚೆನ್ನಭೈರಾದೇವಿಯ ಆಸ್ಥಾನವಾಗಿದ್ದ ಗೇರುಸೊಪ್ಪದ ಚತುರ್ಮುಖ ಬಸದಿ ಪ್ರಸಿದ್ಧವಾಗಿದೆ. ಹೊನ್ನಾವರದ ಕರ್ನಲ್ ಹಿಲ್ ಹಾಗು ಕಾಸರಕೋಡಿನ ಇಕೋ ಬೀಚ್ ಅಂಚಲ್ಲಿರುವ ಅಪ್ಸರಕೊಂಡ ಜಲಪಾತ ಪ್ರವಾಸಿಗರ ಕೈಬೀಸಿ ಕರೆಯುತ್ತದೆ. ಹೊನ್ನಾವರದ ಹೊಳೆಸಾಲು ಯಕ್ಷಗಾನ, ತಾಳ ಮದ್ದಲೆಗಳ ತೊಟ್ಟಿಲು. ಪದ್ಮ ಪ್ರಶಸ್ತಿ ಪುರಸ್ಕೃತ ಹಲವು ಯಕ್ಷರಂಗದ ದಿಗ್ಗಜರು ಮತ್ತು ಆನಂತರದ ತಲೆಮಾರಿನ ಅನೇಕ ಪ್ರತಿಭಾನ್ವಿತ ಯಕ್ಷ ನಟರು ಶರಾವತಿ ತೀರದವರು.

ಎಸ್.ಎಂ.ಯಾಹ್ಯಾ

ಹಲವು ರಾಜವಂಶಗಳ ಉದಯ, ಆಡಳಿತ ಮತ್ತು ಪತನ ಕಂಡಿರುವ ಭಟ್ಕಳ ಹೊಯ್ಸಳ, ವಿಜಯನಗರ ಸಾಮ್ರಾಜ್ಯದಲ್ಲಿತ್ತು. ಭಟ್ಕಳವನ್ನು ಹೈದರ್ ಅಲಿ, ಟಿಪ್ಪು ಸುಲ್ತಾನ್ ಆಳಿದ್ದರು. ಟಿಪ್ಪುನ ಒಬ್ಬಳು ಹೆಂಡತಿ ಭಟ್ಕಳದವಳಾಗಿದ್ದಳು. ಸುಂದರ ಕಡಲ ತಡಿಯ ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರ, ಸಮುದ್ರದ ಮಧ್ಯವಿರುವ ರುದ್ರ ರಮಣೀಯ ನೇತ್ರಾಣಿ ದ್ವೀಪ, ಕಾಂಡ್ಲಾ ವನ, ಸಾರಸ್ವತ ಬ್ರಾಹ್ಮಣರ ಚಿತ್ರಾಪುರ ಮಠ, ಪುರಾಣ ಪ್ರಸಿದ್ಧ ದೇವಾಲಯಗಳು ಮತ್ತು ಮೀನುಗಾರಿಕಾ ಬಂದರುಗಳಿರುವ ಭಟ್ಕಳ ಕ್ಷೇತ್ರದಲ್ಲಿ ಕನ್ನಡ, ಕೊಂಕಣಿ ಮತ್ತು ನವಾಯತಿ ದೈನಂದಿನ ವ್ಯಾವಹಾರಿಕ ಭಾಷೆ. ಭಟ್ಕಳ ನಗರ ಹಾಗು ಅದರ ಸುತ್ತಲಿನ ಹಳ್ಳಿಗಳ ಕನ್ನಡದಲ್ಲಿ ಪಕ್ಕದ ಕುಂದಾಪುರದ ವಿಶಿಷ್ಟ ಕುಂದಗನ್ನಡದ ಸೊಗಡಿದೆ.

ಕಾಡಿನಂಚಿನಲ್ಲಿ ಗೊಂಡ ಎಂಬ ಬುಡಕಟ್ಟು ಸಮುದಾಯವಿದೆ. ಅರಣ್ಯ ನಂಬಿ ಬದುಕಿರುವ ಗೊಂಡರಿಗೆ ಈಚೆಗೆ ಪರಿಶಿಷ್ಟ ಪಂಗಡ ಮೀಸಲಾತಿ ಸಿಗುತ್ತಿದೆಯಾದರೂ ಅವರ ಕೊಪ್ಪಗಳಲ್ಲಿ ಪ್ರಗತಿಯ ಗಾಳಿ ಬೀಸುತ್ತಿಲ್ಲ. ಮೀನುಗಾರ ಕುಲದ ಮೊಗೇರ ಎಂಬ ಜನಾಂಗದವರು ಪರಿಶಿಷ್ಟ ಜಾತಿ ಮೀಸಲಾತಿ ಪಡೆಯುತ್ತಿರುವುದು ದೊಡ್ಡ ವಿವಾದವಾಗಿದೆ. ಇದು ದಲಿತ ಮತ್ತು ಮೊಗೇರರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಪ್ರವರ್ಗ 1ರಲ್ಲಿ ಬರುವ ಮೀನುಗಾರ ಮೊಗೇರರಿಗೆ ಕೊಳ್ಳೆಗಾಲ, ಸುಳ್ಯ ಕಡೆಯಲ್ಲಿ ಮೊಲದ ಬೇಟೆಯಾಡಿ ಬದುಕುವ ಕಸುಬಿನ ದಲಿತ ಮೊಗೇರರ ಜತೆ ಸಮೀಕರಿಸಿ ಎಸ್‌ಸಿ ಮೀಸಲಾತಿ ಕೊಡುತ್ತಿರುವುದನ್ನು ದಲಿತರು ವಿರೋಧಿಸುತ್ತಿದ್ದಾರೆ.

ಭಟ್ಕಳ ಕ್ಷೇತ್ರದ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಾಗುವಷ್ಟು ದೊಡ್ಡ ಸಂಖ್ಯೆಯಲ್ಲಿರುವ ಮೊಗೇರರಿಗೆ, 1970ರ ದಶಕ ಪ್ರಭಾವಿ ಶಾಸಕ, ಮಂತ್ರಿಯಾಗಿದ್ದ ಎಸ್.ಎಂ.ಯಾಹ್ಯಾ ತಮ್ಮ ರಾಜಕೀಯ ಅನುಕೂಲಕ್ಕಾಗಿ ದಲಿತ ಕೆಟಗರಿ ಸೌಲಭ್ಯ ಸಿಗುವಂತೆ ಮಾಡಿದ್ದರೆನ್ನಲಾಗಿದೆ. ದಶಕಗಳ ಕಾಲ ನ್ಯಾಯಾಲಯದ ಒಳಗೆ-ಹೊರಗೆ ದಲಿತರು ನಡೆಸಿದ ಹೋರಾಟದಿಂದ ಮೊಗೇರರಿಗೆ ಎಸ್ಸಿ ಪ್ರಮಾಣಪತ್ರ ನೀಡುವುದನ್ನು ನಿಲ್ಲಿಸಲಾಗಿದೆಯಾದರೂ ವಿವಾದ ತಾರ್ಕಿಕ ಅಂತ್ಯ ಕಂಡಿಲ್ಲ.

ಜೈನರು ಮತ್ತು ನವಾಯತರು

ಭಟ್ಕಳ ಸಾಳುವ (ಜೈನ) ದೊರೆಗಳ ಕಾಲದಲ್ಲಿ ಜೈನರ ಪ್ರಬಲ ನೆಲೆಯಾಗಿತ್ತು. ಇಂದು ಪುಟ್ಟ ಕುಗ್ರಾಮವಾಗಿರುವ ಹಾಡುವಳ್ಳಿ ಅಂದು ಸಂಗೀತಪುರವೆಂಬ ಹೆಸರಿಂದ ಸಾಳುವ ಸಾಮ್ರಾಜ್ಯದ ಎರಡನೆ ರಾಜಧಾನಿಯಾಗಿತ್ತು.
’ಕರ್ನಾಟಕ ಶಬ್ದಾನುಶಾಸನ’ ಬರೆದ ಪ್ರಸಿದ್ಧ ವ್ಯಾಕರಣಕಾರ ಭಟ್ಟಾಕಳಂಕ (ಭಟ್ಕಳಂಕ) ಭಟ್ಕಳದ ಸಂಗೀತಪುರದವರಾಗಿದ್ದರು (ಹಾಡುವಳ್ಳಿ). ಈ ಜೈನ ಮುನಿಯ ಹೆಸರೆ ಭಟ್ಕಳಕ್ಕೆ ಬಂದಿದೆಯೆನ್ನಲಾಗಿದೆ. ಹಾಡುವಳ್ಳಿಯಲ್ಲಿ 24 ಜೈನ ತೀರ್ಥಂಕರರ ವಿಗ್ರಹಗಳಿದ್ದರೆ, ಭಟ್ಕಳ ತಾಲೂಕಿನಾದ್ಯಂತ 30ಕ್ಕೂ ಹೆಚ್ಚು ವಿಶಿಷ್ಟ ಜೈನ ಬಸದಿಗಳಿವೆ.

ವ್ಯಾಪಾರಿ ಜನಾಂಗವಾದ ಜೈನರ ನಾಡಿನತ್ತ ಸಹಜವಾಗೆ ಅರಬ್ ವ್ಯಾಪಾರಿಗಳು ಆಕರ್ಷಿತರಾಗಿದ್ದರು. ಆಭರಣ, ಚರ್ಮದ ವಸ್ತುಗಳು ಮತ್ತು ಅರೇಬಿಯನ್ ಕುದುರೆ ವ್ಯಾಪಾರಕ್ಕಾಗಿ ಭಟ್ಕಳಕ್ಕೆ ಬರುತ್ತಿದ್ದ ಅರಬ್ಬರು ಇಲ್ಲಿಯೆ ನಲೆಯೂರಿದರು. ಜೈನ ಹೆಣ್ಣುಗಳನ್ನು ಮದುವೆಯಾಗಿ ಸಂಸಾರ ಹೂಡಿದರು. ಈ ಸಮಾಗಮದಿಂದ ಹೊಸತೊಂದು ಜನಾಂಗ ಹುಟ್ಟಿಕೊಂಡಿತು. ಅದೆ ’ನವಾಯತ’ ಸಮುದಾಯ.

ನವಾಯತ ಎಂದರೆ ಹೊಸಬರು ಅಥವಾ ಹೊಸದಾಗಿ ಬಂದವರು ಎಂದರ್ಥ. ಭಟ್ಕಳ ಕೊಂಕಣಿ ಭಾಷಾ ಪ್ರಭಾವದ ಪ್ರದೇಶವಾಗಿದ್ದರಿಂದ ನವಾಯತರು ಅರೇಬಿಕ್ ಮತ್ತು ಪರ್ಶಿಯನ್ ಮಿಶ್ರಿತ ಕೊಂಕಣಿಯನ್ನು ಸಂವಹನಕ್ಕೆ ಬಳಸುತ್ತಿದ್ದರು. ಸ್ಥಳೀಯ ಮುಸ್ಲಿಮರ ಸಂಪರ್ಕದಿಂದ ನವಾಯತಿ ಭಾಷೆಯಲ್ಲಿ ಕ್ರಮೇಣ ಉರ್ದು ಶಬ್ದಗಳು ಸೇರಿಕೊಂಡವು. ಭಟ್ಕಳ ನಗರ, ಮುರ್ಡೇಶ್ವರ ಮತ್ತು ಹೊನ್ನಾವರ ತಾಲೂಕಿನ ಮಂಕಿ ಮತ್ತು ಉಪ್ಪೋಣಿ ಭಾಗದಲ್ಲಿರುವ ನವಾಯತರಿಗೆ ವ್ಯಾಪಾರ-ಉದ್ಯಮ ಜೀವನಾಧಾರ ವೃತ್ತಿ. ಕೊಲ್ಲಿ ರಾಷ್ಟ್ರಗಳೊಂದಿಗೆ ಸಂಬಂಧ ಹೊಂದಿರುವ ನವಾಯತರು ಅಲ್ಲಿ ಉದ್ಯೋಗ-ವಹಿವಾಟು ಮಾಡಿಕೊಂಡಿದ್ದಾರೆ. ಅಲ್ಲಿ ದುಡಿದ ಹಣ ಇಲ್ಲಿ ಹೂಡಿಕೆ ಮಾಡಿದ್ದಾರೆ. ಅರಬ್ ಮತ್ತು ನವಾಯತರ ಮಧ್ಯೆ ವೈವಾಹಿತ ಸಂಬಂಧವೂ ಇದೆ. ಹೀಗಾಗಿ ವಿದೇಶಿ ವಿನಿಮಯ ಭಟ್ಕಳದಲ್ಲಿ ದೊಡ್ಡ ಪ್ರಮಾಣದಲ್ಲಾಗುತ್ತಿದೆ.

ವರ್ಗ ಸಂಘರ್ಷ-ಕೋಮು ಸಂಘರ್ಷ

1990ರ ದಶಕದ ಮೊದಲಾರ್ಧದ ಕೊನೆಯಲ್ಲಿ ಒಂದಿಡೀ ವರ್ಷ ನಡೆದ ಕೋಮುಗಲಭೆಯ ನೆತ್ತರು ಕಲೆ ಭಟ್ಕಳಕ್ಕಂಟಿದೆ. ನಗರದಲ್ಲಿ ಮುಕ್ಕಾಲು ಪಾಲಿನಷ್ಟಿರುವ ನವಾಯತರು ಮತ್ತು ಹೊಳೆಸಾಲಿನಲ್ಲಿ ಸಾಂದ್ರತೆ ಹೆಚ್ಚಿರುವ ದೀವರು (ಈಡಿಗರು) ಸುಮಾರು ಸಮತೂಕದಲ್ಲಿದ್ದಾರೆ. ಕೊಲ್ಲಿ ದೇಶಗಳಲ್ಲಿ ದುಡಿದ ದುಡ್ಡಿಂದ ನವಾಯತರು ಭಟ್ಕಳದಲ್ಲಿ ಆಧುನಿಕ ಮಹಲು-ಮೋಲು ಕಟ್ಟಿ, ಐಶಾರಾಮಿ ವಾಹನದಲ್ಲಿ ಓಡಾಡುತ್ತಿದ್ದಾರೆ. ಇವರ ಮನೆಗಳಿಗೆ ಹಿಂದು ಜನಾಂಗದ ಬಡ ಹೆಂಗಸರು ಚಾಕರಿಗೆ ಹೋಗುತ್ತಿದ್ದಾರೆ. ಇನ್ನೊಂದೆಡೆ ಶೂದ್ರ ಸಂಕುಲದಲ್ಲಿ ಗಂಜಿಗೂ ಪರದಾಡುವ ದಾರಿದ್ರ್ಯವಿದೆ. ನವಾಯತರ ವೈಭವ ಹಿಂದುಗಳಲ್ಲಿ ಮನುಷ್ಯ ಸಹಜ ಅಸೂಯೆ-ಅಸಹನೆ ಮೂಡಿಸಿದೆ; ವ್ಯಾಪಾರ-ವಹಿವಾಟಲ್ಲಿ ಮೇಲಾಟವು ನಡೆದಿದೆ.

ಡಾ. ಚಿತ್ತರಂಜನ್

ಈ ವರ್ಗ ಸಂಘರ್ಷವನ್ನು ಕೋಮು ಗಲಭೆಯಾಗಿ ಪರಿರ್ತಿಸಿ ಧರ್ಮಕಾರಣಿಗಳು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆಂಬುದು ಸಾಮಾನ್ಯ ಅಭಿಪ್ರಾಯ. ಬಾಬ್ರಿ ಮಸೀದಿ ಧ್ವಂಸ ಮತ್ತು 1990ರ ದಶಕದಲ್ಲಿ ಸಂಘಪರಿವಾರದ ದಿಗ್ಗಜ ಡಾ. ಚಿತ್ತರಂಜನ್ ಮತ್ತವರ ಶಿಷ್ಯ- ಅಂದಿನ ಹಿಂದು ಜಾಗರಣಾ ವೇದಿಕೆಯ ಮುಂದಾಳು ಹಾಗೂ ಇಂದಿನ ಸಂಸದ ಅನಂತಕುಮಾರ್ ಹೆಗಡೆ ಹಿರಿತನದಲ್ಲಿ ನಡೆದ ಧ್ರುವೀಕರಣ, ನಂತರ ಕೆಲವು ಕರ್ಮಠ ನವಾಯತ ತರುಣರು ಮುಸ್ಲಿಮ್ ಭಯೋತ್ಪಾದಕ ಸಂಘಟನೆಗಳ ಸಂಪರ್ಕ ಸಾಧಿಸಿದ್ದು ಇವೆಲ್ಲವೂ ಹತ್ತಿಕೊಂಡ ಬೆಂಕಿಗೆ ತುಪ್ಪ ಸುರಿದಿದ್ದವು.

ಕೋಮು ಗಲಭೆ ಭಟ್ಕಳದಲ್ಲಿ ಎಷ್ಟು ಅಪಾಯಕಾರಿ ಹಂತ ತಲುಪಿತೆಂದರೆ, ಬಿಜೆಪಿ ಶಾಸಕರಾಗಿದ್ದ ಡಾ. ಚಿತ್ತರಂಜನ್ ನಿಗೂಢವಾಗಿ ಗುಂಡಿಗೆ ಆಹುತಿಯಾದರು. ಡಾ. ಚಿತ್ತರಂಜನ್‌ರನ್ನು ಮುಸ್ಲಿಮ್ ಉಗ್ರರೆ ಕೊಂದಿದ್ದಾರೆಂದು ಬಿಂಬಿಸಲಾಯಿತು. 1996ರ ಲೋಕಸಭಾ ಚುನಾವಣೆ ಸಂದರ್ಭದಲ್ಲಾದ ಈ ಕೊಲೆಯ ಕಾರಣಕ್ಕೆ ಹುಟ್ಟಿದ ಅನುಕಂಪದ ಅಲೆಯಲ್ಲಿ ಅಂದು ಅಷ್ಟೇನು ಪರಿಚಿತರಲ್ಲದ ಅನಂತಕುಮಾರ್ ಹೆಗಡೆ ನಿರಾಯಾಸವಾಗಿ ಎಂಪಿಯಾದರು! ಅನಂತ್ ಹೆಗಡೆ ’ಧರ್ಮಕಾರಣಿ’ಯಾಗಿ ರೂಪುಗೊಂಡಿದ್ದೇ ಭಟ್ಕಳದ ಅಗ್ನಿಕುಂಡದಲ್ಲೆಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿದೆ.

ಡಾ. ಚಿತ್ತರಂಜನ್ ಹತ್ಯೆಯ ನಂತರ ಕೇಂದ್ರದಲ್ಲಿ ಮೂರು ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಡಾ. ಚಿತ್ತರಂಜನ್‌ರ ಅಚ್ಚುಮೆಚ್ಚಿನ ನೀಲಿ ಕಣ್ಣಿನ ಹುಡುಗ ಅನಂತ್ ಆರು ಸಲ ಎಂಪಿಯಾಗಿ ಕೆಲವು ತಿಂಗಳು ಮೋದಿ ಸರಕಾರದಲ್ಲಿ ಸಣ್ಣಮಟ್ಟದ ಮಂತ್ರಿಯೂ ಆಗಿದ್ದರು. ಆದರೆ ಡಾ. ಚಿತ್ತರಂಜನ್ ಹಂತಕರನ್ನು ಮಾತ್ರ ಹಿಡಿಯಲಾಗಿಲ್ಲ. ಸಿಬಿಐ ಇದೊಂದು ಪತ್ತೆ ಹಚ್ಚಲಾಗದ ಪ್ರಕರಣವೆಂದು “ಸಿ” ರಿಪೋರ್ಟ್ ಹಾಕಿ ಕೈತೊಳೆದುಕೊಂಡಿದೆ. ತಮ್ಮ ಗುರುವನ್ನು ಕೊಂದವರನ್ನು ಕಂಡುಹಿಡಿಯುವ ತನಿಖೆ ಸರಿಯಾಗಿ ನಡೆಯುವಂತೆ ಮಾಡಲು ಸಂಸದ ಅನಂತ್ ಹೆಗಡೆ ಆಸಕ್ತಿ ವಹಿಸಲಿಲ್ಲವೆಂಬ ಆಕ್ಷೇಪ ಇವತ್ತಿಗೂ ಕೇಳಿಬರುತ್ತಿದೆ.

ವರ್ಷಾನುಗಟ್ಟಲೆ ಹೊತ್ತಿ ಉರಿದ ಭಟ್ಕಳದ ಕೋಮು ಯುದ್ಧದಲ್ಲಿ ಕಾಲಾಳುಗಳಾಗಿದ್ದ ಹಿಂದುಳಿದ ವರ್ಗದ ಹುಡುಗರೆ ಹೆಚ್ಚು ಬಲಿಯಾಗಿದ್ದಾರೆ. ಹಾಗೆ ನೋಡಿದರೆ ಅವಿಭಜಿತ ದಕ್ಷಿಣ ಕನ್ನಡಕ್ಕಿಂತಲೂ ಮೊದಲೇ ಭಟ್ಕಳದ ಮೂಲಕ ಉತ್ತರ ಕನ್ನಡವನ್ನು ಹಿಂದುತ್ವದ ಪ್ರಯೋಗಶಾಲೆಯನ್ನಾಗಿಸುವ ಹುನ್ನಾರ ನಡೆಸಿತ್ತು. ಹಳಿ ತಪ್ಪಿದ ಡಾ. ಚಿತ್ತರಂಜನ್, ತಿಮ್ಮಪ್ಪ ನಾಯ್ಕ್ ಕೊಲೆ ಪ್ರಕರಣದ ತನಿಖೆ, ಹಿಂದುಳಿದ ವರ್ಗದ ಹುಡುಗರನ್ನು ಸಂಘರ್ಷಕ್ಕೆ ಹಚ್ಚಿ ಲಾಭ ಮಾಡಿಕೊಳ್ಳುವ ಮೇಲ್ವರ್ಗದ ಮುಂದಾಳುಗಳ ತಂತ್ರಗಾರಿಕೆಯು ನಿರೀಕ್ಷಿತ ಮಟ್ಟದಲ್ಲಿ ಫಲ ಕೊಡದೆ ಹೋದದ್ದು, ಇಂತಹ ಹಲವು ಕಾರಣಗಳಿಂದ ಬಿಜೆಪಿಗೆ ಹಿನ್ನಡೆಯಾಯಿತು. ರಾಜಕೀಯ ಪ್ರಜ್ಞೆಯ ಬಹುಸಂಖ್ಯಾತ ದೀವರು ಸಂಘಪರಿವಾರದ ಮೇಲಿನ ನಂಬಿಕೆ ಕಳೆದುಕೊಂಡರು. ಹೀಗಾಗಿ ಡಾ. ಚಿತ್ತರಂಜನ್ ಕೊಲೆಯಿಂದ ಹುಟ್ಟಿದ ಅನುಕಂಪದಿಂದ ಉಪಚುನಾವಣೆಯಲ್ಲಿ ಶಾಸಕನಾಗಿದ್ದ ಶಿವಾನಂದ ನಾಯ್ಕ್ 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲಲಾಗಲಿಲ್ಲ. ತನ್ನ ಕರ್ಮ ಕ್ಷೇತ್ರ ಮಾಡಿಕೊಂಡಿದ್ದ ಭಟ್ಕಳದಲ್ಲಿ ಅನಂತ್ ಹೆಗಡೆ ಲೀಡೂ ಕಡಿಮೆಯಾಗುತ್ತ ಹೋಯಿತು.

ರಾಜಕಾರಣದ ಮೈಲಿಗಲ್ಲುಗಳು

ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಗಡಿ ರಚನೆಯಲ್ಲಿ 1967ರಿಂದ ದೊಡ್ಡ ರೀತಿಯ ಬದಲಾವಣೆಯೇನೂ ಆಗಿಲ್ಲ. ಸುಮಾರು 2,14,000 ಮತದಾರರಿರುವ ಈ ಕ್ಷೇತ್ರದಲ್ಲಿ ದೀವರು 60,000 ಇದ್ದರೆ, ಅಲ್ಪ ಸಂಖ್ಯಾತ ಸಮುದಾಯಗಳ (ಮುಸ್ಲಿಮ್+ಕ್ರಿಶ್ಚಿಯನ್) ಜನ ಸರಿಸುಮಾರು ಅಷ್ಟೆ ಇದ್ದಾರೆ. ಗ್ರಾಮ ಒಕ್ಕಲಿಗರು 25,000, ವಿವಿಧ ಪ್ರಬೇಧದ ಮೀನುಗಾರರು 20,000, ಶೇರುಗಾರರು 20,000, ಬ್ರಾಹ್ಮಣರು 8,000 ಮತ್ತು ದಲಿತರು ಸೇರಿ ಇನ್ನಿತರ ಸಣ್ಣ-ಪುಟ್ಟ ಸಂಖ್ಯೆಯ ಸಮುದಾಯದ ಮತದಾರರಿದ್ದಾರೆ. 1967ರ ಚುನಾವಣೆಯಲ್ಲಿ ಹೊನ್ನಾವರದ ಎಂ.ಎಂ.ಜಾಲಿಸತ್ಗಿ ಶಾಸಕರಾಗಿದ್ದರು. ಕವಿ-ಕರ್ಮಯೋಗಿ ದಿನಕರ ದೇಸಾಯಿ ನೇತೃತ್ವದಲ್ಲಿ ನಡೆದಿದ್ದ ಭೂಮಾಲಿಕರ ಶೋಷಣೆ ವಿರುದ್ದದ ಹೋರಾಟದ ಮುಂಚೂಣಿಯಲ್ಲಿದ್ದ ಜಾಲಿಸತ್ಗಿ ಪ್ರಜಾ ಸೋಷಲಿಸ್ಟ್ ಪಕ್ಷದ ಹುರಿಯಾಳಾಗಿ ಕಾಂಗ್ರೆಸನ್ನು ದೊಡ್ಡ ಅಂತರದಿಂದ ಮಣಿಸಿದ್ದರು.

ದೇವರಾಜ ಅರಸು

ಕಾನೂನು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಭಟ್ಕಳದ ನವಾಯತ ಸಮುದಾಯದ ಎಸ್.ಎಂ.ಯಾಹ್ಯಾರನ್ನು 1972ರಲ್ಲಿ ದೇವರಾಜ ಅರಸು ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಿದ್ದರು. ಸಂಸ್ಥಾ ಕಾಂಗ್ರೆಸ್‌ನ ಎಂ.ಆರ್.ನಾಯ್ಕರನ್ನು ಯಾಹ್ಯಾ 8,677 ಮತದಂತರದಿಂದ ಪರಾಭವಗೊಳಿಸಿದ್ದರು. 1978ರಲ್ಲಿ ಜನಸಂಘ ಮೂಲದ ಜನತಾ ಪಕ್ಷದ ಅಭ್ಯರ್ಥಿ ಡಾ. ಯು. ಚಿತ್ತರಂಜನ್‌ರನ್ನು ಸೋಲಿಸಿ ಎರಡನೆ ಬಾರಿ ವಿಧಾನಸಭೆ ಪ್ರವೇಶಿಸಿದ್ದ ಯಾಹ್ಯಾರಿಗೆ 1983ರ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿದ್ದ ಬಂಗಾರಪ್ಪನವರ ಪ್ರಭಾವದ ಪ್ರವಾಹದ ವಿರುದ್ದ ಈಜಿ ಜಯಿಸಲಾಗಲಿಲ್ಲ. ಜನತಾರಂಗದ ಅನಾಮಧೇಯ ಅಭ್ಯರ್ಥಿ ಆರ್.ಎನ್.ನಾಯ್ಕ್ ಶಾಸಕನಾಗಿದ್ದರು.

ದೀವರ ಮೀಸಲು ಕ್ಷೇತ್ರ

1983ರಿಂದ 2018ರ ತನಕ ಜರುಗಿದ 10 ಅಸೆಂಬ್ಲಿ ಚುನಾವಣೆಯಲ್ಲಿ 1994ರಲ್ಲೊಮ್ಮೆ ಬಿಟ್ಟು ಉಳಿದೆಲ್ಲ ಸಲ ಭಟ್ಕಳದಲ್ಲಿ ದೀವರ ಜಾತಿಯವರೇ ಶಾಸಕರಾಗಿದ್ದಾರೆ. ಬಂಗಾರಪ್ಪನವರ ಹೆಸರಿನ ಮಹಿಮೆ ಇವತ್ತಿಗೂ ಕ್ಷೇತ್ರದಲ್ಲಿದೆ. ದೀವರ ಬಾಹುಳ್ಯದ ಈ ಕ್ಷೇತ್ರದಲ್ಲಿ ಪ್ರಮುಖ ಪಕ್ಷದವರು ಅದೆ ಜಾತಿಯವರಿಗೆ ಟಿಕೆಟ್ ಕೊಡುತ್ತ ಬಂದಿದ್ದಾರೆ. ಹೀಗಾಗಿ ಭಟ್ಕಳಕ್ಕೆ ದೀವರ ಮೀಸಲು ಕ್ಷೇತ್ರವೆಂಬ ಛಾಪು ಬಿದ್ದುಬಿಟ್ಟಿದೆ. 1983ರಲ್ಲಿ ಬಂಗಾರಪ್ಪನವರ ಅನುಯಾಯಿ ಆರ್.ಎನ್.ನಾಯ್ಕ್ ಜನತಾ ರಂಗದ ಅಭ್ಯರ್ಥಿಯಾಗಿ ಮಂತ್ರಿಯಾಗಿದ್ದ ಎಸ್.ಎಂ.ಯಾಹ್ಯಾರನ್ನು ಸೋಲಿಸಿದ್ದರು. 1985ರಲ್ಲಿ ಬಂಗಾರಪ್ಪ ಕಾಂಗ್ರೆಸ್‌ನಲ್ಲಿದ್ದರಿಂದ ಆರ್.ಎನ್.ನಾಯ್ಕ್ ಕಾಂಗ್ರೆಸ್ ಶಾಸಕನಾಗಿ ಆಯ್ಕೆಯಾದರು. ಬಂಗಾರಪ್ಪನವರ ನಾಮಬಲದ ಜತೆ ಜನತಾ ಪಕ್ಷದ ದಾಮೋದರ ಗರ್ಡಿಕರ್ ಮತ್ತು ಬಂಡಾಯ ಅಭ್ಯರ್ಥಿ ಗ್ರಾಮ ಒಕ್ಕಲಿಗ ಸಮುದಾಯದ ಶಂಭುಗೌಡರ ಮೇಲಾಟ ಆರ್.ಎನ್.ನಾಯ್ಕ್‌ಗೆ ಅನುಕೂಲ ಕಲ್ಪಿಸಿತ್ತು.

1989ರ ಇಲೆಕ್ಷನ್ ವೇಳೆಗೆ ಆರ್.ಎನ್.ನಾಯ್ಕ್ ಎಂಟಿ ಇನ್‌ಕಂಬೆನ್ಸಿ ಬಿಸಿ ಅನುಭವಿಸುತ್ತಿದ್ದರು. ಜನತಾದಳದ ದಾಮೋದರ್ ಗರ್ಡಿಕರ್ ಎದುರು ತಿಣುಕಾಡಿ ಕೇವಲ 2,092 ಮತದಂತರದಿಂದ ದಡ ಸೇರಿದ್ದರು. ಬಂಗಾರಪ್ಪನವರ ಚರಿಷ್ಮಾದಿಂದ ನಾಯ್ಕ್ ಬಚಾವಾದರೆಂದು ವಿಶ್ಲೇಷಿಸಲಾಗತ್ತಿದೆ. 1994ರ ಚುನಾವಣೆ ವೇಳೆಗೆ ನಾಯ್ಕ್ ಗುರು ಬಂಗಾರಪ್ಪನವರಿಂದ ದೂರವಾಗಿ ಮೊಯ್ಲಿ ಸಂಪುಟದಲ್ಲಿ ಸಚಿವರಾದರು. ಸ್ಥಳೀಯವಾಗಿ ಪ್ರಬಲವಾಗಿರುವ ನವಾಯತ ನಾಯಕರನ್ನು ಎದುರು ಹಾಕಿಕೊಂಡಿದ್ದ ನಾಯ್ಕ್‌ಗೆ ಬಂಗಾರಪ್ಪನವರ ಕೃಪಾಶ್ರಯವೂ ಇರಲಿಲ್ಲ. ಹಾಗಾಗಿ ನಾಯ್ಕ್‌ಗೆ 1994ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ.

ಬಿಜೆಪಿ ತೆಕ್ಕೆಗೆ ಬಿದ್ದ ಭಟ್ಕಳ

1994ರ ಇಲೆಕ್ಷನ್ ಸಂದರ್ಭದಲ್ಲಿ ಬಂಗಾರಪ್ಪ ಕಾಂಗ್ರೆಸ್‌ನಿಂದ ಹೊರಬಂದು ಕೆಸಿಪಿ ಕಟ್ಟಿದ್ದರು; ಜಿಲ್ಲಾ ಕಾಂಗ್ರೆಸ್ ಮೇಲೆ ಮಾರ್ಗರೆಟ್ ಆಳ್ವ ಹಿಡಿತ ಸಾಧಿಸಿದ್ದರು. ಬಂಗಾರಪ್ಪ ದೀವರ ಜಾತಿಯ ಎಲ್.ಸಿ.ನಾಯ್ಕ್‌ಗೆ ತನ್ನ ಪಕ್ಷದ ಕ್ಯಾಂಡಿಡೇಟ್ ಮಾಡಿದ್ದರೆ, ಮಾರ್ಗರೆಟ್ ಆಳ್ವ ಅದೆ ಸಮುದಾಯದ ಲಕ್ಷ್ಮೀ ನಾಯ್ಕರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದರು. ಇವರಿಬ್ಬರೂ ತೀರಾ ದುರ್ಬಲ ಹುರಿಯಾಳಾಗಿದ್ದರು. ಆ ವೇಳೆ ಭಟ್ಕಳದಲ್ಲಿ ಕೋಮು ಸಂಘರ್ಷವೂ ಮಿತಿ ಮೀರಿತ್ತು. ಹೀಗಾಗಿ ಕಟ್ಟರ್ ಹಿಂದುತ್ವವಾದಿ ಡಾ. ಚಿತ್ತರಂಜನ್‌ಗೆ ಬಿಜೆಪಿಯಿಂದ ಶಾಸಕನಾಗುವ ಯೋಗ ಖುಲಾಯಿಸಿತ್ತು.

ಶಾಸಕನಾಗಿ ಒಂದೂವರೆ ವರ್ಷ ಕಳೆಯುವಷ್ಟರಲ್ಲೆ ಚಿತ್ತರಂಜನ್ ಹತ್ಯೆಗೀಡಾದರು. 1996ರಲ್ಲಿ ಉಪ ಚುನಾವಣೆ ಎದುರಾಯಿತು. ಬಿಜೆಪಿ ಅಭ್ಯರ್ಥಿಯಾಗಿದ್ದ ಸಂಸದ ಅನಂತ್ ಹೆಗಡೆ ಆಪ್ತ ಶಿವಾನಂದ ನಾಯ್ಕ್ ಭರ್ಜರಿ ಗೆಲುವು ಸಾಧಿಸಿದರು. ಜನತಾ ದಳದ ದಾಮೋದರ ಗರ್ಡಿಕರ್ 28,718 ಮತ ಗಳಿಸಿದರೆ, ಕಾಂಗ್ರೆಸ್ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಹಿಂದುತ್ವದ ಭದ್ರ ಕೋಟೆ ಎನಿಸಿದ್ದ ಭಟ್ಕಳದಲ್ಲಿ ಫಲಿತಾಂಶ ಉಲ್ಟಾಪಲ್ಟಾ ಆಗಿತ್ತು! ಕಾಂಗ್ರೆಸ್‌ನ ಜೆ.ಡಿ.ನಾಯ್ಕ್ ಬಿಜೆಪಿಯ ಶಿವಾನಂದ ನಾಯ್ಕ್‌ರನ್ನು ಮಣಿಸಿದ್ದರು.

ಬಂಗಾರಪ್ಪ

ಶಿವಾನಂದ ನಾಯ್ಕ್ 2004ರಲ್ಲಿ ಮತ್ತೆ ಶಾಸಕರಾದರಷ್ಟೆ ಅಲ್ಲ, ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಮಂತ್ರಿಯೂ ಆದರು. ಹಿಂದುಳಿದ ವರ್ಗದ ಶಿವಾನಂದ ನಾಯ್ಕ್ ಸಚಿವನಾಗಿದ್ದು ಬಿಜೆಪಿಯೊಳಗಿನ ಮೇಲ್ವರ್ಗದ ಹಿರೇಮಣಿಗಳ ಕಣ್ಣು ಕೆಂಪಾಗಿಸಿತ್ತೆನ್ನಲಾಗಿದೆ. ಮೂರು ಬಾರಿ ಶಾಸಕರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ತನಗೆ ಶಿವಾನಂದ ನಾಯ್ಕ್‌ರಿಂದ ಅವಕಾಶ ತಪ್ಪಿತೆಂದು ಬೇಸರಗೊಂಡಿದ್ದರು; ಶಿವಾನಂದ ನಾಯ್ಕ್ ಮತ್ತವರ ಗುರು ಸಂಸದ ಅನಂತ ಹೆಗಡೆ ಸಂಬಂಧವೂ ಹಳಸಿತ್ತು. 2008ರ ಚುನಾವಣೆಯಲ್ಲಿ ನಾಯ್ಕರನ್ನು ಸೋಲಿಸಲು ಬಿಜೆಪಿಯಲ್ಲಿ ಯೋಜನೆ ಸಿದ್ಧವಾಯಿತು. ಕಾಂಗ್ರೆಸ್ ಅಭ್ಯರ್ಥಿ ಜೆ.ಡಿ.ನಾಯ್ಕ್‌ಗೆ ಸಂಸದ ಹೆಗಡೆ ಸಹಕಾರ ನೀಡಿದರೆಂಬ ಮಾತೂ ಅಂದು ಕೇಳಿಬಂದಿತ್ತು. ಶಿವಾನಂದ ನಾಯ್ಕ್ ಸಣ್ಣ ಅಂತರದಲ್ಲಿ ಸೋತರು.

ಶಿವಾನಂದ ನಾಯ್ಕ್ ಸೋತಿದ್ದರಿಂದ ಯಡಿಯೂರಪ್ಪ ಅನಿವಾರ್ಯವಾಗಿ ಕಾಗೇರಿಯನ್ನು ಮಂತ್ರಿ ಮಾಡಿದರು. ನಾಯ್ಕರಿಗೆ ನಿಗಮವೊಂದರ ಅಧ್ಯಕ್ಷತೆ ಕೊಡಲಾಯಿತು. 2013ರ ಚುನಾವಣೆಯಲ್ಲಿ ಶಿವಾನಂದ ನಾಯ್ಕ್ ಯಡಿಯೂರಪ್ಪರ ಕೆಜೆಪಿಯಿಂದ ಸ್ಪರ್ಧಿಸಿದರು. ಕಾಂಗ್ರೆಸ್‌ನಿಂದ ಜೆ.ಡಿ.ನಾಯ್ಕ್ ಅಖಾಡಕ್ಕೆ ಇಳಿದಿದ್ದರು. ಬಿಜೆಪಿ ಅಭ್ಯರ್ಥಿಯೂ ದೀವರ ಸಮುದಾಯದವರಾಗಿದ್ದರು. ಬಹುಸಂಖ್ಯಾತ ದೀವರ ಓಟು ಸ್ವಜಾತಿಯ ಮೂವರು ಅಭ್ಯರ್ಥಿಗಳ ನಡುವೆ ಹಂಚಿಕೆಯಾದ್ದರಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮಂಕಾಳ ವೈದ್ಯ ಸುಲಭವಾಗಿ ಜಯಗಳಿಸಿದರು. ಆ ಚುನಾವಣೆಯಲ್ಲಿ ಜೆಡಿಎಸ್‌ನ ಇನಾಯಿತುಲ್ಲಾ ಶಾಬಂದ್ರಿ 27,435 ಮತದೊಂದಿಗೆ ರನ್ನರ್ ಅಪ್ ಆಗಿದ್ದರು.

ಮಂಕಾಳ ವೈದ್ಯ ಆಡಳಿತಾರೂಢ ಕಾಂಗ್ರೆಸ್ ಸಹ-ಶಾಸಕನಾಗಿ ಕೋಟಿಗಟ್ಟಲೆ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆಂದು ಜನರು ಹೇಳುತ್ತಾರೆ. ಮಂಕಾಳ ವೈದ್ಯ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದರೆ, ಸಂಸದ ಅನಂತ ಹೆಗಡೆಯ ಅನುಯಾಯಿ ಸುನಿಲ್ ನಾಯ್ಕ್ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಧರ್ಮ-ಜಾತಿ ಕಲಸುಮೇಲೋಗರವಾಗಿ ಜಿದ್ದಾಜಿದ್ದಿ ಕದನವೆ ಆಗಿಹೋಯಿತು. ಚುನಾವಣೆ ಸಮಯದಲ್ಲಾದ ಹೊನ್ನಾವರದ ಮೀನುಗಾರರ ಹುಡುಗ ಪರೇಶ್ ಮೇಸ್ತನ ನಿಗೂಢ ಸಾವಿನ ಪ್ರಕರಣ ಬಳಸಿಕೊಂಡು ಬಿಜೆಪಿ ಹಿಂದು ಮತಗಳನ್ನು ಧ್ರುವೀಕರಿಸಿತು; ಸುನಿಲ್ ನಾಯ್ಕ್ ಕ್ಷೇತ್ರದ ಪ್ರಥಮ
ಬಹುಸಂಖ್ಯಾತರಾದ ಸ್ವಜಾತಿ ದೀವರ ಓಟ ಬಾಚಿಕೊಂಡಿದ್ದರು. ಆದರೂ ಬಿಜೆಪಿ ತಿಣುಕಾಡಿ ಕೇವಲ 5,930 ಮತದಂತರದಿಂದ ಬಚಾವಾಗಿತ್ತು. ಜನಸಾಮಾನ್ಯರ ಕಷ್ಟ, ಸುಖಕ್ಕೆ ಸ್ಪಂದಿಸುತ್ತಾರೆಂಬ ಮಂಕಾಳ ವೈದ್ಯರ ಇಮೇಜ್ ಇದಕ್ಕೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಸೋತರು ಮಂಕಾಳ ವೈದ್ಯ ಕ್ಷೇತ್ರಕ್ಕೆ ಬೆನ್ನುಹಾಕಿ ಕೂರದೆ ಜನಸಂಪರ್ಕದಲ್ಲಿದ್ದಾರೆಂಬ ಅಭಿಪ್ರಾಯವಿದೆ.

ಕ್ಷೇತ್ರದ ಕಷ್ಟ-ಇಷ್ಟ

ವಿದ್ಯುತ್, ಕುಡಿಯುವ ನೀರು, ಶಾಲೆ, ಆರೋಗ್ಯದಂಥ ಮೂಲಸೌಕರ್ಯಗಳಿರದ ದುರ್ಗಮ ಹಳ್ಳಿಗಳಿರುವ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮಾಮೂಲಿ ಬಜೆಟ್ ಕಾಮಗಾರಿಗಳು ಬರುತ್ತಿವೆಯೆ ಹೊರತು ಯುವಸಮೂಹಕ್ಕೆ, ರೈತ, ಮೀನುಗಾರರಿಗೆ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂಥ ದೂರದೃಷ್ಟಿಯ ಯೋನೆಗಳು ಬಂದಿಲ್ಲ. ಭಟ್ಕಳದಲ್ಲಿ ಸಕಲ ಸೌಲಭ್ಯಗಳಿರುವ ಒಂದು ಆಸ್ಪತ್ರೆಯಿಲ್ಲ. ಗಂಭೀರ ಆರೋಗ್ಯ ಸಮಸ್ಯೆ, ಅಪಘಾತವಾದರೆ ಪಕ್ಕದ ಮಣಿಪಾಲ, ಮಂಗಳೂರಿಗೆ ಹೋಗಬೇಕು.

ಶಾಸಕ ಸುನಿಲ್ ನಾಯ್ಕ್ ಸಮಷ್ಟಿ ಕೆಲಸದ ನೀಲನಕ್ಷೆ ತಯಾರಿಸಿಕೊಳ್ಳುವುದು ಬಿಟ್ಟು, ದೇವಸ್ಥಾದ ಪ್ರವೇಶ ದ್ವಾರದಲ್ಲಿ ಕಾಂಕ್ರೀಟ್ ಕಮಾನು ಕಟ್ಟುವುದು, ರಿಕ್ಷಾ ಶೆಡ್ ನಿರ್ಮಿಸುವುದು, ಖಾಸಗಿ ವಾಣಿಜ್ಯ ಬಂದರು ಸ್ಥಾಪನೆ ಮತ್ತು ಸ್ವಲಾಭವಿರುವ ರಸ್ತೆ-ಕಾಲುಸಂಕದಂಥ ಕಾಮಗಾರಿಯಲ್ಲಿ ನಿರತರಾಗಿದ್ದಾರೆಂದು ಜನರು ಆರೋಪಿಸುತ್ತಾರೆ. ಹೊಳೆಸಾಲಿನ ರೈತರ ಹೊಲ, ತೋಟ ಹಸನು ಮಾಡುವ ಶರಾವತಿ ನೀರಾವರಿ ಯೋಜನೆ ಮತ್ತು ಬಹು ಗ್ರಾಮ ಕುಡಿಯುವ ನೀರಿನ ಪ್ರಾಜೆಕ್ಟ್‌ಗಾಗಿ ಕೂಗು ಕೇಳಿ ಬರುತ್ತಿದ್ದರು ಶಾಸಕ ಸುನಿಲ್ ನಾಯ್ಕ್ ನಿಷ್ಕ್ರಿಯರಾಗಿದ್ದಾರೆ ಎನ್ನಲಾಗಿದೆ.

ಬೆಸ್ತರಿಗೆ ಮೀನು ಕೆಡದಂತೆ ಕಾಪಾಡುವ ಶೈತ್ಯಾಗಾರ ಬೇಕಾಗಿದೆ. ಮುರ್ಡೇಶ್ವರ-ಮಂಕಿ ಮಧ್ಯದಲ್ಲಿ ಬೋಟು ತಂಗುದಾಣಬೇಕೆಂದು ಮೀನುಗಾರರು ಕೇಳುತ್ತಿದ್ದಾರೆ.

ಮಾರ್ಗರೆಟ್ ಆಳ್ವ

ಹೊನ್ನಾವರದ ಕಾಸರಕೋಡಲ್ಲಿ ಖಾಸಗಿ ಮಾಲಿಕತ್ವದ ವಾಣಿಜ್ಯ ಬಂದರು ಕಾಮಗಾರಿ ಬಲಾತ್ಕಾರವಾಗಿ ನಡೆಸಲಾಗುತ್ತಿದೆ. ಈ ’ಅಭಿವೃದ್ಧಿ’ಯಿಂದ ತಮ್ಮ ವಾಸಸ್ಥಾನ-ಜೀವನಾಧಾರ ಕಸುಬು ಧ್ವಂಸವಾಗುತ್ತದೆಂದು ಮೀನಗಾರರು ಗೋಗರೆಯುತ್ತಿದ್ದಾರೆ. ಅಪರೂಪದ ಕಡಲಾಮೆಗಳಿಗೆ ಈ ಬಂದರು ಗಂಡಾಂತರಕಾರಿ ಆಗಿದೆಯೆಂದು ಪರಸರವಾದಿಗಳು ಮತ್ತು ಪರಸರ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸುತ್ತಾರೆ.

ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಮಾಡುವ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹೈವೆಯುದ್ದಕ್ಕೂ ಜನರು ಓಡಾಡುವುದೇ ದುಸ್ತರವಾಗಿದೆ. ಹೊನ್ನಾವರ-ತಾಳಗುಪ್ಪ ರೈಲು ಮಾರ್ಗಕ್ಕಾಗಿ ಬಹಳ ವರ್ಷದಿಂದ ಬೇಡಿಕೆಯಿದೆಯಾದರೂ ಶಾಸಕ-ಸಂಸದರೇಕೋ ದಿವ್ಯ ನಿರ್ಲಕ್ಷದಲ್ಲಿದ್ದಾರೆಂಬ ಆಕ್ಷೇಪ ಕ್ಷೇತ್ರದಲ್ಲಿದೆ.

ಹೊನ್ನಾವರದ ಹೊಳೆಸಾಲಿನ ಮಂದಿ ಪ್ರತಿ ಮಳೆಗಾಲದಲ್ಲಿ ಅನುಭವಿಸುವ ಸಂಕಟ ಹೇಳತೀರದು. ಉಕ್ಕಿ ಹರಿವ ನದಿ ನೀರು ಮನೆ-ತೋಟ-ಬದುಕು ಕೊಚ್ಚಿಕೊಂಡು ಹೋಗುತ್ತದೆ. ಶರಾವತಿ ಟೇಲ್‌ರೇಸ್ ವಿದ್ಯುತ್ ಅಣೆಕಟ್ಟೆಯ ಗೇಟ್ ತೆರೆದರಂತೂ ಹೊಳೆಸಾಲು ತಿಂಗಳುಗಳ ಕಾಲ ನಾಗರಿಕ ಪ್ರಪಂಚದ ಸಂಪರ್ಕವೆ ಕಳೆದುಕೊಂಡು ದ್ವೀಪದಂತಾಗುತ್ತದೆ. ಹೊಳೆಯಂಚಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಪುನರ್ವಸತಿ ಕಸುಲ್ಪಿಸವ ಪ್ರಯತ್ನ ಯಾರೂ ಪ್ರಾಮಾಣಿಕವಾಗಿ ಮಾಡುತ್ತಿಲ್ಲವೆಂಬ ಸಿಟ್ಟು ಜನರಲ್ಲಿದೆ.

ಭಟ್ಕಳ-ಹೊನ್ನಾವರ ಹೆಂಚಿನ ಕಾರ್ಖಾನೆಗಳಿಂದಲೆ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಕಾಲವೊಂದಿತ್ತು. ಕ್ರಮೇಣ ಈ ಹೆಂಚು ಕಾರ್ಖಾನೆಗಳು ನಶಿಸಿ ನಿರುದ್ಯೋಗ ಸಮಸ್ಯೆ ಹೆಚ್ಚಾಯಿತು. ಅದಕ್ಕೆ ಪರ್ಯಾಯವಾಗಿ ಯಾವ ಕೈಗಾರಿಕೆಯಾಗಲಿ, ಕಾರ್ಖಾನೆಗಳಾಗಲಿ ಬಂದಿಲ್ಲ.

ಪ್ರವಾಸೋದ್ಯಮಕ್ಕೆ ಗೇರುಸೊಪ್ಪದಿಂದ ಹಾಡುವಳಿ, ಅಲ್ಲಿಂದ ಭಟ್ಕಳ-ಬೈಂದೂರು ಗಡಿವರೆಗೆ ವಿಪುಲ ಅವಕಾಶವಿದೆ. ಮುರ್ಡೇಶ್ವರ ಬಿಟ್ಟರೆ ಉಳಿದೆಲ್ಲಿಯೂ ಪ್ರವಾಸೋದ್ಯಮ ಬೆಳೆದಿಲ್ಲ. ಗೋಕರ್ಣಕ್ಕೆ ಹೋಲಿಸಿದರೆ ಮುರ್ಡೇಶ್ವರದ ಪ್ರವಾಸೋದ್ಯಮ ಲೆಕ್ಕಲ್ಲವೆಂಬ ವಾದವೂ ಇದೆ. ಇಲ್ಲಿಯ ಕಡಲು ತೀರ, ನದಿ ದಂಡೆ, ಗೇರುಸೊಪ್ಪೆಯ ದಟ್ಟ ಕಾಡು, ಕಾಂಡ್ಲಾವನ, ಹಾಡುವಳ್ಳಿಯ ಜೈನ ಬಸದಿಗಳು, ದೇವಸ್ಥಾನಗಳನ್ನು ಬಳಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಪಡಿಸಿದರೆ ವಲಸೆ ಹೋಗುವ ಯುವಕರು ಸ್ಥಳೀಯವಾಗಿ ಬದುಕು ಕಂಡುಕೊಳ್ಳಲು ಅವಕಾಶವಾಗುತ್ತಿತ್ತು. ಅನಾದಿಕಾಲದಿಂದ ಅರಣ್ಯ ಭೂಮಿಯಲ್ಲಿ ವಾಸ್ತವ್ಯ, ಸಾಗುವಳಿ ಮಾಡಿ ಜೀವನ ನಡೆಸುತ್ತಿರುವ ಹಲವು ಕುಟುಂಬಗಳು ಸಮಸ್ಯೆಯಲ್ಲಿವೆ.

ರಾಜಕೀಯ ರಂಗದಲ್ಲಿ ಅದಲು-ಬದಲು?

ಜ್ವಲಂತ ಸಮಸ್ಯೆಗಳತ್ತ ಗಮನಹರಿಸದ ಶಾಸಕ ಸುನಿಲ್ ನಾಯ್ಕ್ ಕೋಟ್ಯಾಂತರ ರೂ. ವಹಿವಾಟಿನ ಅಕ್ರಮ ಮರಳು ಲಾಬಿ ಪೋಷಿಸುತ್ತಿದ್ದಾರೆಂಬ ಆರೋಪ ಕ್ಷೇತ್ರದಲ್ಲಿ ಮಾಮೂಲಾಗಿದೆ. ಶಾಸಕರ ಆಪ್ತರ ಅಕ್ರಮ ಸಾರಾಯಿ ವ್ಯವಹಾರಕ್ಕೆ ಕಡಿವಾಣ ಹಾಕಿದ ಪೊಲೀಸ್ ಅಧಿಕಾರಿ ವರ್ಗಾವಣೆ ಸುದ್ದಿ ಸದ್ದುಮಾಡುತ್ತಿದೆ. ಕ್ಷೇತ್ರದ ಬೇಕು-ಬೇಡಗಳ ತಿಳಿವಳಿಕೆ ಶಾಸಕರಿಗಿಲ್ಲವೆಂದು ಜನರು ಅಭಿಪ್ರಾಯ ಪಡುತ್ತಾರೆ; ಜನರಿಗೆ ನಾಟ್ ರೀಚಬಲ್ ಶಾಸಕನೆಂಬ ಆಕ್ಷೇಪವೂ ಇದೆ. ಸಂಘಪರಿವಾರದ ಬೈಠಕ್‌ಗಳಲ್ಲಿ ಸುನಿಲ್ ನಾಯ್ಕ್ ಬಗ್ಗೆ ಅಸಮಾಧಾನ ಪದೆಪದೆ ವ್ಯಕ್ತವಾಗುತ್ತಿದೆಯೆನ್ನಲಾಗಿದೆ.

ಗುರು, ಸಂಸದ ಅನಂತ ಹೆಗಡೆಯನ್ನೂ ಎದುರು ಹಾಕಿಕೊಂಡದ್ದಾರಂತೆ ಸುನಿಲ್ ನಾಯ್ಕ್. ಕಾಂಗ್ರೆಸ್ ಮೂಲದ ಸುನಿಲ್ ಆರ್‌ಎಸ್‌ಎಸ್‌ಗೆ ನಿಷ್ಠರಲ್ಲ; ಅವರ ಸ್ನೇಹ, ವ್ಯವಹಾರವಿರುವುದು ನವಾಯತರೊಂದಿಗೆಂಬ ಅಸಮಾಧಾನ ಕಟ್ಟರ್ ಸಂಘಿಗಳಲ್ಲಿದೆ. ಈ ಎಲ್ಲ ಕಾರಣದಿಂದ ಸುನಿಲ್‌ಗೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗುವುದು ಅನುಮಾನ ಎನ್ನುವ ವಿಶ್ಲೇಷಣೆಗಳು ನಡೆಯುತ್ತಿದೆ. ಆದರೆ ಬಿಜೆಪಿಗೆ ಸುನಿಲ್ ನಾಯ್ಕರಷ್ಟು ಸಶಕ್ತ ಅಭ್ಯರ್ಥಿ ಸಿಗದಾಗಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಸಂಸದ ಅನಂತ್ ಹೆಗಡೆ ನಂಬಿ ಬಿಜೆಪಿ ಸೇರಿದ್ದ ಮಾಜಿ ಶಾಸಕ ಜೆ.ಡಿ.ನಾಯ್ಕ್ ನಿರಾಶರಾಗಿ ಮತ್ತೆ ತವರು ಸೇರಿದ್ದಾರೆ. ಹೀಗಾಗಿ ಬಿಜೆಪಿಗೆ ಸುನಿಲ್ ಬಿಟ್ಟರೆ ಗತಿಯಿಲ್ಲದಾಗಿದೆ.

ಸಂಘದ ಗರ್ಭಗುಡಿ ಸಂಸ್ಕೃತಿಗೆ ಒಗ್ಗಿಕೊಳ್ಳಲಾಗದ ಸುನಿಲ್ ಸ್ವಜಾತಿ ಕಾಂಗ್ರೆಸ್ ಮುಂದಾಳು ಮಧು ಬಂಗಾರಪ್ಪರ ಮೂಲಕ ಕಾಂಗ್ರೆಸ್ ಪ್ರವೇಶಕ್ಕೆ ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆನ್ನಲಾಗುತ್ತಿದೆ. ಕಾಂಗ್ರೆಸ್‌ಗೆ ಮೀನುಗಾರ ಸಮುದಾಯದ ಮಂಕಾಳ ವೈದ್ಯರಿಗಿಂತ ಬಹುಸಂಖ್ಯಾತ ದೀವರ ಕುಲದ ಗಟ್ಟಿಗನ ಅವಶ್ಯಕತೆಯಿದೆ. ಈ ಸಮೀಕರಣ ಅರ್ಥ ಮಾಡಿಕೊಂಡಿರುವ ಮಂಕಾಳ ವೈದ್ಯ ತನ್ನ ಎದುರಾಳಿ ಸುನಿಲ್ ಕಾಂಗ್ರೆಸ್ ಸೇರಿದರೆ ಅತಂತ್ರ ಆಗಬೇಕಾಗುತ್ತದೆಂಬ ಲೆಕ್ಕಾಚಾರದಿಂದ ಬಿಜೆಪಿಯತ್ತ ಕಣ್ಣು ಹಾಯಿಸುತ್ತಿದ್ದಾರೆನ್ನಲಾಗಿದೆ. ಸಚಿವ ಈಶ್ವರಪ್ಪರನ್ನು ಒಮ್ಮೆ ಭೇಟಿಯಾಗಿ ಬಂದಿದ್ದಾರೆಂಬ ಗುಲ್ಲೆದ್ದಿದೆ. ಚುನಾವಣೆ ವೇಳೆಗೆ ಕಾಂಗ್ರೆಸ್ ಮತ್ತು ಬಿಜೆಪಿ ರಂಗಸ್ಥಳದ ನಟರು ಅದುಲುಬದಲಾದರೆ ಅಚ್ಚರಿ ಪಡುವಂಥದೇನಿಲ್ಲ ಎಂಬ ರೋಚಕ ಚರ್ಚೆ ನಡೆದಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿ: ಕರ್ನಾಟಕ ರಾಜಕೀಯ ಕ್ಷೇತ್ರಗಳ ಸಮೀಕ್ಷೆ; ಕುಮಟಾ-ಹೊನ್ನಾವರ: ’ಸಂಘ’ಕ್ಕೆ ಶಾಸಕ ಶೆಟ್ಟಿ ಸಹವಾಸ ಸಾಕಾಯಿತೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...