ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾದ ಬಳಿಕ ಗುತ್ತಿಗೆದಾರರ ಸಮಸ್ಯೆಗಳು ಹೊರಬೀಳತೊಡಗಿವೆ. ಸರ್ಕಾರ ಹಾಗೂ ಸಚಿವರ ಮೇಲೆ ಗುತ್ತಿಗೆದಾರರು ಆರೋಪಗಳನ್ನು ಮಾಡುತ್ತಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ರಾಜ್ಯ ಗುತ್ತಿಗೆದಾರರಸಂಘದ ಅಧ್ಯಕ್ಷ ಡಿ.ಕೆಂಪಣ್ಣ, “ಗುತ್ತಿಗೆದಾರರಿಂದ 40% ಕಮಿಷನ್ ಪಡೆಯುತ್ತಿರುವುದು ನಿಜ. ಈ ಕುರಿತು ಈ ಹಿಂದೆಯೇ ಪತ್ರ ಬರೆಯಲಾಗಿತ್ತು. ಇಷ್ಟು ದಿನವಾದರೂ ಮುಖ್ಯಮಂತ್ರಿಯವರು ನಮ್ಮನ್ನು ಕರೆದು ಮಾತನಾಡಲಿಲ್ಲ. ಸರ್ಕಾರದ ಸ್ಪಷ್ಟ ನಿಲವು ಕೂಡ ವ್ಯಕ್ತವಾಗಿಲ್ಲ. ಈಗಲಾದರೂ ನಿಲುವು ತಾಳುತ್ತಾರೋ ಗೊತ್ತಿಲ್ಲ” ಎಂದು ವಿಷಾದಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಂತಾಪ ಸೂಚಿಸಿದ ಅವರು, “ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಸಂತೋಷ್ ಪಾಟೀಲ್ ಪ್ರಕರಣದ ಸ್ವತಂತ್ರ ತನಿಖೆ ನಡೆಸಬೇಕು. ಇಲ್ಲದಿದ್ದರೆ ಸತ್ಯ ಹೊರಬರುವುದಿಲ್ಲ. ಸಂತೋಷ ಅವರ ಪತ್ನಿ ಜಯಶ್ರೀ ಅವರಿಗೆ ಎರಡು ಕೋಟಿ ರೂ. ಪರಿಹಾರ ಕೊಡಬೇಕು. ಉಳಿಕೆ ಬಿಲ್‌ಗಳನ್ನೆಲ್ಲ ಕ್ಲಿಯರ್ ಮಾಡಿಕೊಡಬೇಕು. ಜಯಶ್ರೀಯವರಿಗೆ ಒಂದು ಸರ್ಕಾರಿ ಉದ್ಯೋಗವನ್ನು ನೀಡಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿರಿ: ಇವರದೊಂದು ಜನ್ಮನಾ, ನಾಯಿ ಜನ್ಮ: ಈಶ್ವರಪ್ಪ ವಿರುದ್ಧ ಸಂತೋಷ್ ಪತ್ನಿ ಆಕ್ರೋಶ
“ಸಂತೋಷ್ ಪಾಟೀಲ್ ಯಾರೆಂದೇ ಗೊತ್ತೇ ಇಲ್ಲ, ಕಾಮಗಾರಿಗಳನ್ನು ಮಾಡಿಯೇ ಇಲ್ಲ” ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, “ಘಟನೆಯಾದ ಬಳಿಕ ಎಲ್ಲರೂ ಹಾಗೆಯೇ ಹೇಳುತ್ತಿದ್ದಾರೆ. ಸಂತೋಷ್ ಪಾಟೀಲ್ ಅವರು ಈಶ್ವರಪ್ಪನವರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ, ಅವರಿಗೆ ಲೆಟರ್‌ಗಳನ್ನು ಕೊಟ್ಟಿದ್ದಾರೆ. ಇವುಗಳಿಗೆಲ್ಲ ದಾಖಲೆ ಇವೆ. ಕಳ್ಳರು ಯಾವತ್ತಾದರೂ ಒಪ್ಪಿಕೊಳ್ಳುತ್ತಾರಾ?” ಎಂದು ಪ್ರಶ್ನಿಸಿದರು.
“ಅಭಿವೃದ್ಧಿ ಕೆಲಸಗಳು ಸಂಪೂರ್ಣ ಕುಂಠಿತವಾಗಿವೆ. 40 ಪರ್ಸೆಂಟ್ ಭ್ರಷ್ಟಾಚಾರ ಮಾಡಿದರೆ ಅಭಿವೃದ್ಧಿ ಸಾಧ್ಯವೆ? 40% ಕಮಿಷನ್ ಪಡೆಯುತ್ತಿರುವುದು ಶೇ. 100ರಷ್ಟು ನಿಜ. ಅದಕ್ಕಾಗಿಯೇ ನಾವು ಸ್ವತಂತ್ರ ತನಿಖೆಗೆ ಆಗ್ರಹಿಸುತ್ತಿದ್ದೇವೆ” ಎಂದು ಮತ್ತೊಮ್ಮೆ ಆಗ್ರಹಿಸಿದರು.
ಗುತ್ತಿಗೆದಾರರ ನಿತ್ಯದ ನೋವುಗಳನ್ನು ಬಿಚ್ಚಿಟ್ಟ ಕೆಂಪಣ್ಣನವರು, “ಪೇಮೆಂಟ್‌ಗಾಗಿ ಗುತ್ತಿಗೆದಾರರು ಇಲಾಖೆಗಳನ್ನು ಅಲೆಯುತ್ತಿದ್ದಾರೆ. 25,000 ಕೋಟಿ ರೂ. ಪೆಂಡಿಂಗ್ ಬಿಲ್ ಇದೆ ಎಂದರೆ ಅಲೆದಾಟ ಎಷ್ಟಿರಬಹುದೆಂದು ಊಹಿಸಿ. 40% ಪರ್ಸೆಂಟ್ ಕಮಿಷನ್ ಕೊಟ್ಟು ನಾವು ಒಳ್ಳೆಯ ಕಾಮಗಾರಿಯನ್ನು ಮಾಡಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
‘ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ಏಜೆಂಟ್, ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ’ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಬಹಳ ಸಂತೋಷ. ಕೇಸ್ ಹಾಕಿಕೊಳ್ಳಲಿ. ಆದರೆ ನಾನು ಕಾಂಗ್ರೆಸ್‌ನವನೆಂದು ಫ್ರೂವ್ ಮಾಡಲಿ. ನಿಜವಾಗಿ ಹೇಳುವುದಾದರೆ ಸುಧಾಕರ್ ಅವರೇ ಕಾಂಗ್ರೆಸ್‌ನವರು. ಈಗ ಬಿಜೆಪಿ, ಮುಂದೆ ಕಾಂಗ್ರೆಸ್ ಆಗುತ್ತಾರೆ” ಎಂದು ಭವಿಷ್ಯ ನುಡಿದರು.
ಮುಂದಿನ ನಡೆಯ ಬಗ್ಗೆ ತಿಳಿಸಿದ ಅವರು, “ಸರ್ಕಾರ ನಮ್ಮ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಸಿದರು.
ಈಶ್ವರಪ್ಪ ಮಾರ್ಯಾದೆ ಕೊಡುತ್ತಿರಲಿಲ್ಲ: ಗುತ್ತಿಗೆದಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗನ್ನಾಥ್ ಶೇಗಜಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “ಗುತ್ತಿಗೆದಾರರು ಈಶ್ವರಪ್ಪನವರ ಮನೆಗೆ ಹೋದರೆ ಗೆಟ್‌ಔಟ್ ಎಂದು ಹೇಳುತ್ತಿದ್ದರು. ಗುತ್ತಿಗೆದಾರರಿಗೆ ಈಶ್ವರಪ್ಪ ಮರ್ಯಾದೆ ಕೊಡುತ್ತಿರಲಿಲ್ಲ” ಎಂದು ಆರೋಪಿಸಿದ್ದಾರೆ.
ಕಾಮಗಾರಿ ಬಿಲ್‌ಗಾಗಿ ಈಶ್ವರಪ್ಪನವರ ಮನೆಗೆ ಹೋದ್ರೆ ಗದರುತ್ತಿದ್ದರು. ಹಲವು ಇಲಾಖೆಗಳಲ್ಲಿ ಕಾಮಗಾರಿ ಬಿಲ್‌ಗಳು ಆಗಿಲ್ಲ. ಕಾಮಗಾರಿಗಳ ಆರಂಭಕ್ಕೂ ಮುನ್ನವೇ ಪರ್ಸೆಂಟೇಜ್ ಕೇಳಿದ್ದಕ್ಕೆ ಹಲವು ಕಾಮಗಾರಿಗಳಿಗೆ ಪೂಜೆಯೇ ಆಗಿಲ್ಲ. ಬಿಲ್ ಪಾಸ್ ಮಾಡಿಸಿಕೊಳ್ಳಲು ಎಲ್ಲರಿಗೂ ಲಂಚ ನೀಡಬೇಕು. ಅಧಿಕಾರಿಗಳಿಂದ ಜನಪ್ರತಿನಿಧಿಗಳವರೆಗೆ ಪರ್ಸೆಂಟೇಜ್ ನೀಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿರಿ: ಸಂತೋಷ್ ಸಾವು ಪ್ರಕರಣ: ಇಂತಹ ನೂರು ಕೇಸ್ ನೋಡಿದ್ದೇನೆ; ರಾಜೀನಾಮೆ ನೀಡುವ ಪ್ರಶ್ನೆಯೆ ಇಲ್ಲ: ಕೆ.ಎಸ್. ಈಶ್ವರಪ್ಪ


