ಕಳೆದ ವರ್ಷ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತ ಹತ್ಯಾಕಾಂಡ ನಡೆಸಿದ ಆರೋಪ ಹೊತ್ತಿರುವ ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ತೇನಿ ಅವರ ಪುತ್ರ ಆಶಿಶ್ ಮಿಶ್ರಾಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಒಂದು ವಾರದಲ್ಲಿ ಶರಣಾಗುವಂತೆ ಕೋರ್ಟ ಆರೋಪಿಗೆ ಆದೇಶಿಸಿದೆ.
ಉತ್ತರ ಪ್ರದೇಶ ಚುನಾವಣೆಯ ಪ್ರಚಾರದ ಮಧ್ಯೆ ಫೆಬ್ರವರಿ 10ರ ಆಶಿಶ್ ಮಿಶ್ರಾಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿತ್ತು. ಅಕ್ಟೋಬರ್ 3 ರಂದು ನಡೆದ ಹತ್ಯಾಕಾಂಡದಲ್ಲಿ ಹತ್ಯೆಗೀಡಾದ ರೈತರ ಕುಟುಂಬಗಳಿಂದ ಆಶಿಶ್ ಮಿಶ್ರಾಗೆ ನೀಡಿದ್ದ ಜಾಮೀನನ್ನು ಪ್ರಶ್ನಿಸಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್, “ಹೈಕೋರ್ಟ್ ಆದೇಶವು ಅಪ್ರಸ್ತುತ ಅವಲೋಕನಗಳು ಮತ್ತು ನಿರ್ಲಕ್ಷಿಸಲಾದ ಸಂಬಂಧಿತ ಪರಿಗಣನೆಗಳನ್ನು ಆಧರಿಸಿದೆ” ಎಂದು ತೀರ್ಪು ನೀಡಿದೆ.
ಇದನ್ನೂ ಓದಿ: ರೈತರ ಹತ್ಯಾಕಾಂಡ ನಡೆದ ಲಖಿಂಪುರ್ ಖೇರಿ ಚುನಾವಣಾ ಫಲಿತಾಂಶ ಹೀಗಿದೆ
“ಸಂತ್ರಸ್ತರಿಗೆ ಪರಿಣಾಮಕಾರಿ ವಿಚಾರಣೆಯ ಅವಕಾಶವನ್ನು ನಿರಾಕರಿಸಲಾಗಿದೆ ಎಂದು ನಾವು ಭಾವಿಸುತ್ತೇವೆ” ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ನಿರ್ಧಾರವನ್ನು ಪ್ರಕಟಿಸುವಾಗ ಹೇಳಿದ್ದಾರೆ. ಪ್ರತ್ಯೇಕ ಪೀಠ ಜಾಮೀನು ಅರ್ಜಿಯ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಲಖಿಂಪುರ ಖೇರಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಆಶಿಶ್ ಮಿಶ್ರಾ, ನಾಲ್ವರು ರೈತರು ಮತ್ತು ಪತ್ರಕರ್ತರ ಮೇಲೆ ಕಾರುಚಲಾಯಿಸಿ ಹತ್ಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಅವರ ವಿರುದ್ದ ಕ್ರಮ ಕೈಗೊಳ್ಳಲು ಯುಪಿ ಪೋಲಿಸ್ ಮತ್ತು ಆಡಳಿತವು ವಿಳಂಬ ಮಾಡುತ್ತಿದೆ ಎಂದು ದೇಶದಾದ್ಯಂತ ಆಕ್ರೋಶ ವ್ಯಕ್ತವಾದ ನಂತರ, ಘಟನೆ ನಡೆದು ಹಲವಾರು ದಿನಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು.
ಆಶಿಶ್ ಮಿಶ್ರಾ ಸಾಕ್ಷಿಗಳಿಗೆ ಬೆದರಿಕೆಯೊಡ್ಡಿರುವ ಕಾರಣ ಅವರ ಜಾಮೀನು ರದ್ದುಗೊಳಿಸಬೇಕು ಎಂದು ರೈತರ ಕುಟುಂಬಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. “ಕಳೆದ ಮಾರ್ಚ್‌ನಲ್ಲಿ ಪ್ರಕರಣದ ಸಾಕ್ಷಿಯೊಬ್ಬರ ಮೇಲೆ ದಾಳಿ ನಡೆಸಲಾಯಿತ್ತು. ಅಲ್ಲದೆ ಇತ್ತೀಚಿಗೆ ಯುಪಿ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ಉಲ್ಲೇಖಿಸಿ ದಾಳಿಕೋರರು ತಮಗೆ ಬೆದರಿಕೆ ಹಾಕಿದ್ದರು” ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಲಖೀಂಪುರ್ ರೈತ ಹತ್ಯೆ; ಅಧಿಕಾರದ ಪರವಾಗಿ ನಿಂತ ಮಾಧ್ಯಮಗಳ ದುರುಳತನ
ಅಕ್ಟೋಬರ್ 3 ರಂದು ಲಖಿಂಪುರ ಖೇರಿಯಲ್ಲಿ ನಡೆದ ಹತ್ಯಾಕಾಂಡದ ಸಮಯದಲ್ಲಿ ಎಂಟು ಜನರು ಸಾವನ್ನಪ್ಪಿದ್ದರು. ಒಕ್ಕೂಟ ಸರ್ಕಾರದ ಸಚಿವರ ಬೆಂಗಾವಲು ವಾಹನ ಐದು ಜನರ ಮೇಲೆ ಹರಿದು ಸಾವಿಗೀಡಾಗಿದ್ದರು. ಇದರ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಇನ್ನೂ ಮೂವರು ಕೊಲ್ಲಲ್ಪಟ್ಟಿದ್ದರು.


