ಕೆಲವು ದಿನಗಳ ಹಿಂದೆ ಹಲವು ಜಾತ್ರೆಗಳಲ್ಲಿ ಮುಸಲ್ಮಾನ ವ್ಯಾಪಾರಿಗಳ ಮೇಲೆ ನಿರ್ಬಂಧ ಹೇರುವ ಅಭಿಯಾನವನ್ನು ಕೆಲವು ದುಷ್ಕರ್ಮಿಗಳು ಪ್ರಾರಂಭಿಸಿದರು. ಅದು ದಕ್ಷಿಣ ಕನ್ನಡದಲ್ಲಿ ದೊಡ್ಡಮಟ್ಟದಲ್ಲಿ ಹಬ್ಬುವ ಅಪಾಯ ತಲೆದೋರಿತು. ಉಡುಪಿಯಲ್ಲಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮಿಯವರನ್ನು ಭೇಟಿ ಮಾಡಿದ ಅಲ್ಪಸಂಖ್ಯಾತ ಧರ್ಮ ಸಮುದಾಯಗಳ ಪ್ರತಿನಿಧಿಗಳು, ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಒಡಕುಮೂಡಿಸುವ ಇಂತಹ ಅಮಾನವೀಯ ಕೃತ್ಯಗಳು ನಡೆಯದಂತೆ ಆಗ್ರಹಿಸಲು ಮನವಿ ಮಾಡಿಕೊಂಡಿದ್ದರು. ಆಧ್ಯಾತ್ಮಿಕವಾಗಿ ಉನ್ನತ ಸಾಧನೆಗೈದಿರುವ ಯಾವುದೇ ವ್ಯಕ್ತಿಯಾಗಿದ್ದರೆ ಅಥವಾ ಮಾನವೀಯ ಪರಂಪರೆಯಲ್ಲಿ ತಮ್ಮ ದಾರಿಯನ್ನು ಸವೆಸಿದವರಾಗಿದ್ದರೆ, ಈ ಪ್ರಕರಣಗಳಿಗೆ ಮರುಕ ವ್ಯಕ್ತಪಡಿಸಿ ಅವುಗಳು ಪುನರಾವರ್ತನೆಯಾಗದಂತೆ ತಡೆಯಲು ತಮಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಮುಂದಾಗುತ್ತಿದ್ದರು. ಆದರೆ ವಿಶ್ವಪ್ರಸನ್ನ ತೀರ್ಥ ಸ್ವಾಮಿ ಇದನ್ನು ವಿಶ್ಲೇಷಿಸಿದ ರೀತಿ, ಇದ್ದ ಒಡಕನ್ನು ಇನ್ನೂ ಹೆಚ್ಚಿಸುವಂತೆ ಇತ್ತು. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ವ್ಯಾಪಾರ ನಿರ್ಬಂಧಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಆ ಸಮರ್ಥನೆಗೆ ಅವರು ನೀಡಿದ ಕಾರಣಗಳು ವಿಚಿತ್ರವಾಗಿದ್ದವು!
“ಹಿಂದೂ ಸಮಾಜ ಈ ಹಿಂದೆ ಬಹಳ ನೋವುಗಳನ್ನು ಅನುಭವಿಸಿದೆ. ಕೆಲವು ಕೋಮಿನ ಧಾರ್ಮಿಕ ಮುಖಂಡರು ಮಾತನಾಡಿದರೆ ಸಾಲದು. ತಳಮಟ್ಟದಲ್ಲಿ ಇದು ಸರಿಯಾಗಿ ಹಿಂದೂ ಸಮಾಜಕ್ಕೆ ಭರವಸೆ ಮೂಡಬೇಕು” ಎನ್ನುವಂತಹ ಮಾತುಗಳನ್ನು ವಿಶ್ವಪ್ರಸನ್ನ ತೀರ್ಥ ಅವರು ಹೇಳಿದರೆಂದು ವರದಿಯಾಗಿದೆ. ಅಂದರೆ ಹಿಂದೂ ಸಮಾಜದ ನೋವುಗಳಿಗೆ ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳನ್ನು ದೂಷಿಸುವ ಮಾತುಗಳನ್ನಾಡಿದ್ದಾರೆ. ಇಂದಿಗೂ ಹಿಂದೂ ಮತದ ಅಡಿಯಲ್ಲಿ ಗುರುತಿಸಲಾಗುವ ಅಸಂಖ್ಯಾತ ತಳ ಸಮುದಾಯಗಳು ಮನುಧರ್ಮಶಾಸ್ತ್ರದ ಮೇಲು-ಕೀಳುಗಳಲ್ಲಿನ ವ್ಯವಸ್ಥೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ವಿಶ್ವಪ್ರಸನ್ನ ತೀರ್ಥ ಸ್ವಾಮಿಯವರು ಪ್ರತಿನಿಧಿಸುವ ಮಾಧ್ವ ಪರಂಪರೆ ಕೂಡ ಅತಿ ದೊಡ್ಡ ಕೊಡುಗೆಯನ್ನು ನೀಡಿದೆ ಎಂಬುದನ್ನು ಮರೆಮಾಚಿ ಹಿಂದೂ ಸಮಾಜಕ್ಕೆ ಆಗಿರುವ ನೋವಿಗೆ, ಬೇರೆ ಮತದ ಸಮುದಾಯಗಳನ್ನು ದೂರುವುದು, ಕೋತಿ ಮೊಸರು ತಿಂದು ಮೇಕೆ ಮೂತಿಗೆ ಒರೆಸಿದ ಕಥೆ ನೆನಪಿಸುತ್ತದೆ.

ಇತರ ಹಲವು ವೈದಿಕ ಪರಂಪರೆಗಳಂತೆಯೇ ಮಾಧ್ವ ಪರಂಪರೆ ಹೇಗೆ ಅಸಮಾನತೆಯನ್ನು ಉಸಿರಾಡಿದೆ ಮತ್ತು ಈಗಲೂ ಅದನ್ನು ಮುಂದುವರೆಸಿದೆ ಅನ್ನುವುದಕ್ಕೆ ಅಸಂಖ್ಯಾತ ಕಥೆಗಳಿವೆ. ಇದನ್ನು ಕುರಿತು ವಿಶ್ವಮಾನವ ಕವಿ ಕುವೆಂಪು ಹಲವು ವರ್ಷಗಳ ಹಿಂದೆಯೇ ಹೀಗೆಂದಿದ್ದರು: “..ಅದಕ್ಕೆ ನಮ್ಮ ದೊಡ್ಡ ದೊಡ್ಡ ಆಚಾರ್ಯವರ್ಗದವರು, ಹಿಂದಿನವರು ಮಾತ್ರವಲ್ಲ ಇಪ್ಪತ್ತನೆಯ ಶತಮಾನದ ಇಂದಿನವರೂ, ಸ್ವಜಾತಿ ಸ್ವಾರ್ಥದೃಷ್ಟಿಯಿಂದ ತಪ್ಪು ತಪ್ಪು ವ್ಯಾಖ್ಯಾನಗಳನ್ನೆಲ್ಲ ಮಾಡಿ, ತಮ್ಮ ಜಾತಿಶ್ರೇಷ್ಠತೆಯನ್ನು ರಕ್ಷಿಸಿಕೊಂಡು ಬಾಕಿಯವರನ್ನೆಲ್ಲ ಊಳಿಗದವರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಆ ರೀತಿ ಮಾಡಿಕೊಂಡು ಹೋಗಿದ್ದಾರೆ. ಒಬ್ಬ ಆಚಾರ್ಯರಂತೂ ಎಲ್ಲಿಯವರೆಗೆ ಹೋಗಿದ್ದಾರೆಂದರೆ, ಈಗಾಗಲೆ ಇರುವ ಜಾತಿಭೇದ ವರ್ಣಭೇದಗಳು ಸಾಲದೆಂದು ಅವರು ಜೀವಗಳನ್ನೆಲ್ಲ ಮುಕ್ತಿಯೋಗ್ಯರು, ನಿತ್ಯಸಂಸಾರಿಗಳು, ತಮೋಯೋಗ್ಯರು ಅಥವಾ ನಿತ್ಯನಾರಕಿಗಳು ಅಂತ ವಿಭಜಿಸಿ ಬಿಟ್ಟಿದ್ದಾರೆ..”.
ಇಷ್ಟು ಸಾಲದು ಎಂಬಂತೆ ಇದೇ ವಿಶ್ವಪ್ರಸನ್ನ ತೀರ್ಥ ಸ್ವಾಮಿ, ’40% ಕಮಿಷನ್ ದಂಧೆಯಿಂದ ಶೋಷಿತನಾಗಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್, ತಮ್ಮ ಸಾವಿಗೆ ಕಾರಣ ಎಂದು ಆರೋಪಿಸಿದ್ದ ಕಾರಣಕ್ಕಾಗಿ ರಾಜೀನಾಮೆ ನೀಡಬೇಕಾಗಿ ಬಂದ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಮಾಜಿ ಸಚಿವ ಈಶ್ವರಪ್ಪರಿಗೆ ಸಾಂತ್ವನ ಹೇಳಿಬರಲು ಅವರ ಮನೆಗೆ ಹೋಗಿದ್ದರು! ಅಲ್ಲಿ ಹೊರಗೆ ಮಾಧ್ಯಮಗಳ ಮುಂದೆ ಮತ್ತೆ ತಮ್ಮ ಅಸಂಬದ್ಧ ಪ್ರಲಾಪಗಳನ್ನು, ಈಶ್ವರಪ್ಪನವರನ್ನು ಮೀರಿಸುವಂತೆ ಮುಂದುವರೆಸಿದ್ದಾರೆ. “ಮಸೀದಿಯಲ್ಲಿ ಸತ್ಯನಾರಾಯಣ ಪೂಜೆ ನಡೆಯುತ್ತದೆಯೇ? ಇನ್ನೂ ತಲೆತಗ್ಗಿಸಿ ಇರಬೇಕೇ?” ಎಂಬಂತಹ ಪ್ರಚೋದನಕಾರಿ ಮಾತುಗಳನ್ನೂ ಆಡಿದ್ದಾರೆ. ತಮ್ಮ ಹಿಂದಿನ ಸ್ವಾಮೀಜಿಗಳನ್ನು ಉದಾಹರಿಸಿ, ಅವರು ಮುಸ್ಲಿಮರನ್ನು ಮಠಕ್ಕೆ ಕರೆದಿದ್ದರು ಎಂಬುದನ್ನು ಉದಾತ್ತವಾಗಿ ಬಿಂಬಿಸಿಕೊಂಡಿದ್ದಾರೆ. ಇಂದಿಗೂ ಉಡುಪಿ ಮಠದಲ್ಲಿ ಸಹಭೋಜನ ವ್ಯವಸ್ಥೆಯನ್ನು ಮಾಡದ ಬಗ್ಗೆ ಆರೋಪಗಳು ಕೇಳಿಬರುತ್ತವೆ. ಇಂದಿಗೂ ಮಡಿ ಮೈಲಿಗೆಗಳೆಂಬ ಅಸಹ್ಯದ ಶೋಷಣೆಯ ಅಸ್ತ್ರಗಳನ್ನು ಬೇಕಾದಂತೆ ಝಳಪಿಸುವ ಈ ವೈದಿಕ ಸೆಕ್ಟ್, ಮುಸಲ್ಮಾನರು ಸತ್ಯನಾರಾಯಣ ಪೂಜೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿರುವುದೇ ಹಾಸ್ಯಾಸ್ಪದ.
ಸಾವಿರಾರು ವರ್ಷಗಳ ಕಾಲ ಬ್ರಾಹ್ಮಣ ಸಮುದಾಯ ಹಿಂದುಳಿದ ಮತ್ತು ದಲಿತ ಸಮುದಾಯಗಳನ್ನು ದೇವಾಲಯಗಳಿಂದ ದೂರವಿಟ್ಟು, ಸಾಮಾಜಿಕವಾಗಿ ಆರ್ಥಿಕವಾಗಿ ಶೋಷಣೆ ಮಾಡಿದ ಕಾಲಘಟ್ಟವಿತ್ತು. ಸ್ವಾತಂತ್ರ್ಯಾನಂತರ ಪೂಜೆ ಪುನಸ್ಕಾರಗಳು ಲಾಭದಾಯಕವಾದಾಗ ಅವನ್ನು ಕೆಲ ಶೂದ್ರ ಮತ್ತು ಹಿಂದುಳಿದ ವರ್ಗಗಳಿಗೆ ವಿಸ್ತರಿಸಿ ಲಾಭದ ವೃತ್ತಿಯನ್ನು ತನ್ನ ಸುಪರ್ದಿಯಲ್ಲಿಯೇ ಇಟ್ಟುಕೊಂಡಿತು. ಸಂವಿಧಾನ ನೀಡಿರುವ ಹಕ್ಕುಗಳಿಗೆ ಮಣಿದು ಹಿಂದುಳಿದವರಿಗೆ ಮತ್ತು ದಲಿತರಿಗೆ ದೇವಾಲಯ ಪ್ರವೇಶವನ್ನು ನೀಡಲಾಗಿದೆಯೇ ಹೊರತು, ಈ ವೈದಿಕ ಸಮುದಾಯಗಳು ಮನಃಪೂರ್ವಕವಾಗಿ ಬದಲಾಗಿರುವುದು ಬಹುತೇಕ ಶೂನ್ಯ. ಹಿಂದೂ ಸಮುದಾಯದೊಳಕ್ಕೆ ರಾಜಕೀಯ ಕಾರಣಗಳಿಗಾಗಿ ಸೇರಿಸಿಕೊಂಡಿರುವ ಎಷ್ಟೋ ಹಿಂದುಳಿದ ಮತ್ತು ತಳ ಸಮುದಾಯಗಳಿಗೆ ’ಸತ್ಯನಾರಾಯಣ ಪೂಜೆ’ ಏಲಿಯನ್ ಆದ ಆಚರಣೆ. ಕೆಲವೇ ಕೆಲವು ವರ್ಷಗಳಿಂದ ಈ ಹಿಂದುಳಿದ ಕೆಲವು ಸಮುದಾಯಗಳು ಕೂಡ ಅದನ್ನು ಪಾಲಿಸುತ್ತಿರಬಹುದು. ಅದು ತಿಳಿವಳಿಕೆಯ ಕೊರತೆ ಮತ್ತು ಧಾರ್ಮಿಕ ಮ್ಯಾನಿಪುಲೇಶನ್‌ನಿಂದ ಸಾಧ್ಯವಾಗಿರುವಂತದ್ದು. ಇನ್ನು ಮುಸಲ್ಮಾನರು ಸತ್ಯನಾರಾಯಣ ಪೂಜೆ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ’ದ್ವೇಷಾಸೂಯೆ’ಗಳನ್ನು ಹೊರತುಪಡಿಸಿದ ಬೇರೆ ಯಾವುದೇ ಕಾಳಜಿ ಇದೆಯೇ? ಮೋದಿಗಿಂತ ಅಡ್ವಾನಿಯವರು ವಾಸಿ, ಬೊಮ್ಮಾಯಿಯವರಿಗಿಂತ ಯಡಿಯೂರಪ್ಪನವರು ವಾಸಿ ಎನ್ನುವಂತೆಯೇ, ವಿಶ್ವಪ್ರಸನ್ನ ತೀರ್ಥರಿಗಿಂತ ವಿಶ್ವೇಶ ತೀರ್ಥರು ವಾಸಿ ಎಂಬ ಹಂತಕ್ಕೆ ಬಂದುನಿಂತಿದೆ ಸದರಿ ಪೇಜಾವರ ಸ್ವಾಮೀಗಳ ವರ್ತನೆ ಮತ್ತು ಹೇಳಿಕೆಗಳು.

ಇರಲಿ, ಮುಸ್ಲಿಂ ಸಮುದಾಯ ಬ್ರಾಹ್ಮಣೀಯ-ವೈದಿಕ ಆಚರಣೆಗಳನ್ನು ತನ್ನದಾಗಿಸಿಕೊಂಡಿದೆಯೋ ಇಲ್ಲವೋ ಆದರೆ ಹಲವು ಅವೈದಿಕ ಸಂಪ್ರದಾಯಗಳ ಜೊತೆಗೆ ಮುಸಲ್ಮಾನರ ಆಚರಣೆಗಳು ಮಿಳಿತಗೊಂಡಿರುವುದಕ್ಕೆ ಅಸಂಖ್ಯಾತ ಉದಾಹರಣೆಗಳಿವೆ. ಇತ್ತೀಚೆಗೆ ತಿಗಳ ಸಮುದಾಯ ಮುಖ್ಯವಾಗಿ ಆಚರಿಸುವ ಪ್ರಖ್ಯಾತ ಬೆಂಗಳೂರು ಕರಗದ ತೇರು ಧರ್ಮರಾಯನ ದೇವಸ್ಥಾನದಿಂದ ಹೊರಟು, ಅಕ್ಕಿಪೇಟ್ಟೆಯಲ್ಲಿರುವ ಮುಸ್ಲಿಂ ಸಂತ ಹಜರತ್ ತೌಕ್ಕಲ್ ಮಸ್ತಾನ್ ಅವರ ದರ್ಗಾ-ಎ-ಷರೀಫ್ ಬಳಿ ಫತೆಹ್ ಅಥವಾ ಪ್ರಾರ್ಥನೆಯ ಸಮಾವೇಶಕ್ಕಾಗಿ ಬಂದು ನಿಂತಿತು. ಅಲ್ಲಿ ಮುಸಲ್ಮಾನ ಧಾರ್ಮಿಕ ಪ್ರತಿನಿಧಿಗಳು ತಮ್ಮ ಪೂಜೆಯನ್ನು ಅರ್ಪಿಸಿದರು. ಇದು ನಿನ್ನೆಮೊನ್ನೆಯದೇನಲ್ಲ. ನೂರಾರು ವರ್ಷಗಳ ಸಂಪ್ರದಾಯ. ತಮ್ಮ ಧಾರ್ಮಿಕ ಸಂಪ್ರದಾಯಗಳನ್ನು ಮೀರಿದ ಇಂತಹ ಸೌಹಾರ್ದ ಆಚರಣೆಗಳ ಬಗ್ಗೆ ವೈದಿಕರಿಗೆ ಅಸಹನೆಯಿದೆ. ವೈದಿಕವಲ್ಲದ ಎಷ್ಟೋ ಆಚರಣೆಗಳ ಬಗ್ಗೆಯೂ ಕೂಡ.
ಇದಿಷ್ಟೇ ಅಲ್ಲ, ನಾಡಿನಾದ್ಯಂತ ಎಷ್ಟೋ ಜಾತಿ ಸಮುದಾಯಗಳು ಮುಸಲ್ಮಾನ ಬಾಂಧವರೊಂದಿಗೆ ಕೂಡಿ ಆಚರಿಸುವ ಮೊಹರಂ ಹಬ್ಬವಿದೆ. ಧಾರ್ಮಿಕ ಆಚರಣೆಗಳಷ್ಟೇ ಅಲ್ಲದೆ ಜನಸಾಮಾನ್ಯರ ದಿನನಿತ್ಯದ ಆಚರಣೆಗಳಲ್ಲಿಯೂ ಇಲ್ಲಿನ ಎಷ್ಟೋ ಜಾತಿ ಜನಸಮುದಾಯಗಳ ಜಾನಪದ ಮುಸಲ್ಮಾನರ ಮೇಲೆ ಪ್ರಭಾವ ಬೀರಿರುವುದನ್ನು ಹಲವರು ಗುರುತಿಸುತ್ತಾರೆ. ಮಕ್ಕಳಿಗೆ ಜೋಗುಳ ಹಾಡುವ ಪದ “ಆಗೇ ಆಗೇ ಗೈಂಯ್, ಕಾಲೀ ಗೈಂಯಕ ಬಸುವಂತ ಪಾಡ, ಆಗೇ ಆಗೇ ಗೈಂಯ್” (ಬಾರೆ ಬಾರೇ ಹಸುವೆ, ಕಪ್ಪಾದ ಹಸುವಿನ ಬಸವನಂತಹ ಕರು, ಬಾರೇ ಬಾರೇ ಹಸುವೇ) ಎಂಬುದರಲ್ಲಿ ಮಗುವನ್ನು ಬಸವಣ್ಣನಿಗೆ ಹೋಲಿಸುವ ಪರಿ ಇಲ್ಲಿನ ಕೂಡುಸಂಸ್ಕೃತಿಗೆ ಉದಾಹರಣೆ ಎಂದು ಅಧ್ಯಯನಕಾರರು ಗುರುತಿಸಿದ್ದಾರೆ.
ಉಡುಗೆತೊಡುಗೆ, ಸಂಗೀತ, ಊಟ ಉಪಚಾರಗಳ ವಿಷಯದಲ್ಲಿಯೂ ಈ ಮಿಳಿತ ಸಾಧ್ಯವಾಗಿದೆ. ವೈದಿಕರ ಕೆಲವು ಸೆಕ್ಟ್‌ಗಳನ್ನು ಬಿಟ್ಟರೆ ಆಹಾರ ಕ್ರಮದಲ್ಲಿ ಇಲ್ಲಿನ ಬಹುತೇಕ ಜಾತಿ ಸಮುದಾಯಗಳು ಮತ್ತು ಮುಸಲ್ಮಾನರ ನಡುವೆ ಸಾಮ್ಯತೆಯಿದೆ ಹಾಗೂ ಕೊಡುಕೊಳ್ಳುವಿಕೆಯಾಗಿದೆ. ಇಂತಹ ನೂರಾರು ಸಂಗತಿಗಳನ್ನು ಈ ದೇಶದ ಉದ್ದಗಲಕ್ಕೂ ಹುಡುಕಿ ಕೆದಕಿ ತೆಗೆಯಬಹುದಾಗಿದೆ. ಅಲ್ಲಿಗೆ ಅವೈದಿಕ ಜನಸಮುದಾಯಗಳಿಗೆ ದಿನನಿತ್ಯದ ಆಚರಣೆ ಅಥವಾ ಧಾರ್ಮಿಕ ಮಟ್ಟದಲ್ಲಿ ಮುಸಲ್ಮಾನರ ಜೊತೆಗೆ ದ್ವೇಷ ಸಾಧಿಸಬೇಕಿರುವಂತಹ ದೊಡ್ಡ ಕಾರಣಗಳಿಲ್ಲ. ರಾಜಕೀಯ-ಆರ್ಥಿಕ ಕಾರಣಗಳಿಗಾಗಿ ಕೆಲವು ಭಿನ್ನಾಭಿಪ್ರಾಯಗಳು ಹಲವು ಕಾಲಘಟ್ಟಗಳಲ್ಲಿ ಬೆಳೆದಿರಬಹುದು. ಅಂತಹ ಭಿನ್ನಾಭಿಪ್ರಾಯಗಳು ಇಲ್ಲಿನ ಹಲವು ಜಾತಿ ಸಮುದಾಯಗಳ ನಡುವೆಯೂ ಬಹಳಷ್ಟಿವೆ. ಅವುಗಳನ್ನು ಬಗೆಹರಿಸಿಕೊಳ್ಳಲು ಸಾಂವಿಧಾನಕ ಮಾರ್ಗವೂ ಸೇರಿದಂತೆ ಹತ್ತುಹಲವು ಮಾರ್ಗಗಳನ್ನು ಭಾರತ ನೂರಾರು ವರ್ಷಗಳಿಂದ ಅನ್ವೇಷಿಸಿಕೊಂಡು ಬರುತ್ತಿದೆ.
ಇದೇ ನೂರು ವರ್ಷಗಳಿಂದ ಒಂದು ಸಣ್ಣ ಬ್ರಾಹ್ಮಣ ಸೆಕ್ಟ್ ಆದ ಚಿತ್ಪಾವನ್ ಬ್ರಾಹ್ಮಣರು ಎಂಬ ಸಮುದಾಯದ ಕೆಲವು ಮಂದಿ ರೂಪಿಸಿದ ಸಂಘಪರಿವಾರದ ಹಿಂದುತ್ವ ಸಿದ್ಧಾಂತ ಮುಸಲ್ಮಾನರನ್ನು ಶತ್ರುಗಳನ್ನಾಗಿ ಬಿಂಬಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡುಬಂದಿತು. ಮುಸಲ್ಮಾನರ ಜೊತೆಗೆ ದಿನನಿತ್ಯದ ಒಡನಾಟದಲ್ಲಿ, ಆಚರಣೆ, ವ್ಯಾಪಾರಗಳಲ್ಲಿ ಅಂತಹ ತೀವ್ರ ಬಿನ್ನಾಭಿಪ್ರಾಯ ಹೊಂದಿರದ ಎಷ್ಟೋ ಜನಸಮುದಾಯಗಳ ತಲೆಗೆ ಈ ದ್ವೇಷದ ಸಿದ್ಧಾಂತವನ್ನು ಸತತ ಪ್ರಪೋಗಾಂಡನ ಮೂಲಕ ತುಂಬಲಾಗಿದೆ. ಆಚರಣೆ, ನಂಬಿಕೆ, ಧಾರ್ಮಿಕ ವಿಷಯಗಳಲ್ಲಿ ಅಧಿಕಾರಯುತ ಹಿಡಿತ ಹೊಂದಿದ್ದ ಒಂದು ಸಣ್ಣ ಸಂಖ್ಯೆಯ ಸಮುದಾಯ ಮುಸ್ಲಿಮರನ್ನು ಅನ್ಯಗೊಳಿಸಿ, ಕೃತಕವಾಗಿ ಶತ್ರುಗಳನ್ನಾಗಿಸುವ ಯೋಜನೆಗೆ ಆ ಸಮುದಾಯದ ಮಠಾಧೀಶರುಗಳು ಕೊಟ್ಟ ಕೊಡುಗೆ ದೊಡ್ಡದು. ಇದು ಇಂದಿಗೂ ಮುಂದುವರೆದಿರುವುದು ದುರಂತ.
ಈ ಸಂಘಪರಿವಾರದವರ ಹಾದಿಯಲ್ಲಿ ಎಷ್ಟೋ ಅವೈದಿಕ ಮಠಾಧೀಶರುಗಳು ಕೂಡ ಹಾದಿ ತಪ್ಪಿಯಾಗಿದೆ. ಅವರು ಕೂಡ ಸಂಘಪರಿವಾರದ ದ್ವೇಷದ ಭಾಷೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರೀತಿಸುವುದನ್ನು, ಮಾನವೀಯತೆಯನ್ನು ಕಲಿಸಬೇಕಿರುವ ಆಧ್ಯಾತ್ಮ ಪರಂಪರೆ ಇಂದು ಅಡ್ಡದಾರಿ ಹಿಡಿಯುತ್ತಿರುವುದು ಬಿಕ್ಕಟ್ಟನ್ನು ತೀವ್ರಗೊಳಿಸಿದೆ. ಹಬ್ಬಗಳ ಮೆರವಣಿಗೆಗಳು, ಜಾತ್ರೆಗಳು ಇರುವ ಅಸಮಾನತೆಯನ್ನು ಒಂದು ಮಟ್ಟಕ್ಕಾದರೂ ತಗ್ಗಿಸಿ, ಸಣ್ಣ ಕಾಲಕ್ಕಾದರೂ ಅದನ್ನು ಮರೆತು, ಕೂಡುವ, ಹಾಡು ಹಸೆಗಳ ಮೂಲಕ ಕುಣಿದು ಸಂಭ್ರಮಿಸುವ, ಸಮುದಾಯದ ಒಳಿತಿಗಾಗಿ ಕೂಡಿ ಬೇಡಿಕೊಳ್ಳುವ ಸಾಮುದಾಯಿಕ ಅನುಭೂತಿಯಾಗಬೇಕಿತ್ತು. ಇಂದು ಅಂತಹ ಹಬ್ಬ, ಜಾತ್ರೆ ಮತ್ತು ಮೆರವಣಿಗೆಗಳನ್ನು, ಬೆದರಿಸುವ ಸಲುವಾಗಿ ಕತ್ತಿ ಝಳಪಿಸುವ, ಮತ್ತೊಂದು ಕೋಮನ್ನು ಪ್ರಚೋದಿಸುವ, ಗಲಭೆಗೆ ಹಾತೊರೆಯುವ, ಅವಾಚ್ಯ ಶಬ್ದಗಳ-ದ್ವೇಷದ ಮಾತುಗಳ ಘೋಷಣೆ ಕೂಗಿ ವಿಕಾರವನ್ನು ಪ್ರದರ್ಶಿಸುವ ರೂಪಕ್ಕೆ ಕೊಂಡೊಯ್ಯುವುದರಲ್ಲಿ ಮಠಾಧೀಶರ ಪಾತ್ರವೂ ಇದೆ. ಸಮಾಜವನ್ನು ಸಮಾನತೆಯೆಡೆಗೆ ಕರೆದೊಯ್ಯುವ ಬಾಬಾಸಾಹೇಬರ ಸಂವಿಧಾನ ಈ ಮಠಾಧೀಶರ ಎದೆಗೆ ಇಳಿಯದ ಹೊರತು ಅವರ ದ್ವೇಷದ ನಡೆನುಡಿಗಳು ಅಧರ್ಮದವು ಎಂಬುದನ್ನು ಮರೆಯದಿರೋಣ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಬಾಬಾಸಾಹೇಬರ ಚಿಂತನೆಗಳ ತಳಹದಿಯಲ್ಲಿ ರಾಷ್ಟ್ರವನ್ನು ಕಟ್ಟಿಕೊಳ್ಳದಿದ್ದರ ಪರಿಣಾಮ..


