ಕ್ರಿ.ಶ 4ನೇ ಶತಮಾನದಿಂದಲೂ ಅಸ್ಪೃಶ್ಯರ ಸಂಖ್ಯೆ ಹೆಚ್ಚಾಗುತ್ತಲೇ ಬಂದಿತು. ಧರ್ಮಶಾಸ್ತ್ರಗಳ ಕಾನೂನುಕಟ್ಟಲೆಗಳು ವಿವಿಧ ರಾಜಮನೆತನಗಳಲ್ಲಿ ಬಿಗಿಗೊಂಡಂತೆ ಅಸ್ಪೃಶ್ಯತೆ ಎಂಬ ಕರಾಳ ಆಚರಣೆಯ ವಿಧಗಳು ಹೆಚ್ಚಾದವು. ಇಸ್ಲಾಂ ಧರ್ಮದ ಆಗಮನದ ಬಳಿಕ ಅಸ್ಪೃಶ್ಯರಿಗೆ ಬೇರೊಂದು ಧರ್ಮದ ಆಯ್ಕೆ ಹೆಚ್ಚಾದದ್ದು ಒಂದು ಮಟ್ಟಕ್ಕೆ ಸಮಾಧಾನಕರ ಸಂಗತಿಯಾಗಿತ್ತು. ಇದಾದ ಬಳಿಕ ಕ್ರೈಸ್ತ ಧರ್ಮವೂ ಭಾರತಕ್ಕೆ ಕಾಲಿಟ್ಟಿದ್ದು ಅಸ್ಪೃಶ್ಯರಿಗೆ ಮತ್ತಷ್ಟು ಬಿಡುಗಡೆಯ ದಾರಿಗಳನ್ನು ತೆರೆದುಕೊಳ್ಳಲು ಸಹಾಯ ಮಾಡಿತು. ಆದರೆ
ಹಿಂದೂ ಧರ್ಮದ ಅಸ್ಪೃಶ್ಯತೆ ಹಾಗೂ ಜಾತಿಪದ್ಧತಿಗಳು ಇಸ್ಲಾಂ ಹಾಗೂ ಕ್ರೈಸ್ತ ಧರ್ಮಗಳ ಮೇಲೆಯೂ ಪ್ರಭಾವ ಬೀರಿತ್ತು. ಆದರೂ ಹಿಂದೂ ಧರ್ಮದೊಳಗಿದ್ದ ಅಸ್ಪೃಶ್ಯತೆಯ ಕಠಿಣತೆ ಅಲ್ಲಿ ಕಾಣಲಿಲ್ಲ. ಏಕೆಂದರೆ ಅಸ್ಪೃಶ್ಯತೆ ಎಂಬುದು ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಧಾರ್ಮಿಕ ಆಚರಣೆಗಳಾಗಿರಲಿಲ್ಲ ಬದಲಾಗಿ ಪ್ರಾದೇಶಿಕತೆಯ ಭಾಗವಾಗಿ ಅನುಕರಣೆಯ ಆಚರಣೆಯಾಗಿತ್ತು. ನಂತರದಲ್ಲಿ ಸ್ಥಾಪನೆಗೊಂಡ ಸಿಖ್ ಧರ್ಮವೂ ಸಹ ಇದರಿಂದ ಹೊರತಾಗಲಿಲ್ಲ.
ಕ್ರಿ.ಶ 18ನೇ ಶತಮಾನದಷ್ಟೊತ್ತಿಗೆ ಅಸ್ಪೃಶ್ಯತೆ ಹಾಗೂ ಜಾತಿಪದ್ಧತಿಯನ್ನು ಪ್ರಶ್ನಿಸುವ ಭಕ್ತಿ ಹಾಗೂ ಸಂತಪರಂಪರೆ ಆಗಿಹೋಗಿತ್ತು. ಕರ್ನಾಟಕದ ವಚನ ಚಳವಳಿ ಆ ನಿಟ್ಟಿನಲ್ಲಿ ಕಟುವಾಗಿಯೇ ಹಿಂದೂ ಧರ್ಮದ ಜಾತಿಪದ್ಧತಿಯನ್ನು ವಿಮರ್ಶಿಸಿದೆ. ಬ್ರಿಟಿಷರ ಆಗಮನದಿಂದ ಭಾರತದ ವೇದಶಾಸ್ತ್ರ ಸ್ಮೃತಿಗಳು ಇಂಗ್ಲಿಷಿಗೆ ಅನುವಾದ ಆದವು. ಬ್ರಾಹ್ಮಣರಿಗಷ್ಟೇ ತಿಳಿದಿದ್ದ ವೇದ-ಶಾಸ್ತ್ರ-ಸ್ಮೃತಿಗಳೊಳಗಿನ ತಾರತಮ್ಯಗಳು, ಅಮಾನವೀಯ ನೀತಿಗಳು ಭಾರತದ ಶೂದ್ರ-ದಲಿತ ಯುವಜನತೆಯ ಅರಿವಿಗೆ ಬಂದಿತು. ಈ ನಿಟ್ಟಿನಲ್ಲಿ ಇಂಗ್ಲಿಷ್ ಶಿಕ್ಷಣ ಭಾರತದ ತಳಸಮುದಾಯಗಳಿಗೆ ದೊಡ್ಡ ಕೊಡುಗೆಯನ್ನು ನೀಡಿದೆ. ಈ ಕಾರಣದಿಂದಲೇ ಕುವೆಂಪುರವರು ’ಇಂಗ್ಲಿಷ್ ಶಿಕ್ಷಣ ದೊರೆಯದಿದ್ದರೆ ನಾನು ಭೂಮಾಲೀಕರ ಮನೆಯಲ್ಲಿ ಸೆಗಣಿ ಬಾಚುತ್ತಿರುತ್ತಿದ್ದೆ’ ಎಂದು ಹೇಳಿರುವುದು. ಇಂಗ್ಲಿಷ್ ಶಿಕ್ಷಣ ದೊರೆತದ್ದರಿಂದಲೇ ಜ್ಯೋತಿಬಾ ಫುಲೆ, ಸಾವಿತ್ರಿ ಬಾಯಿ ಫುಲೆ, ಫಾತಿಮಾ ಶೇಖ್, ಅಯ್ಯಂಕಾಳಿ, ಅಯೋಥಿದಾಸ್, ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ಪೆರಿಯಾರ್, ನಾರಾಯಣ ಗುರು, ಡಾ. ಬಿ.ಆರ್. ಅಂಬೇಡ್ಕರ್ ಮುಂತಾದವರು ರೂಪುಗೊಂಡದ್ದು. ಹಾಗಾಗಿ ಈ ಇಂಗ್ಲಿಷ್ ಶಿಕ್ಷಣದ ಭಾಗವಾಗಿ-ಇಂಗ್ಲಿಷ್ ಬರೆಹಗಾರರ ಬರೆಹಗಳ ಭಾಗವಾಗಿಯೇ ಈ ಕಾಲದ ಅಸ್ಪೃಶ್ಯತೆಯ ವಿವಿಧ ಚಹರೆಗಳು ನಮಗೆ ತಿಳಿಯುತ್ತವೆ.
ಬ್ರಿಟಿಷರು ಭಾರತಕ್ಕೆ ಆಗಮಿಸುವ ಮುಂಚಿನ ಭಾರತದಲ್ಲಿ ಅಸ್ಪೃಶ್ಯತೆ ಹೇಗಿತ್ತು ಎಂಬುದರ ಬಗ್ಗೆ ಸ್ವಲ್ಪ ಮೆಲುಕು ಹಾಕೋಣ. ಇದನ್ನು ತಿಳಿಯಲು ಮರಾಠ ಸಾಮ್ರಾಜ್ಯದ ಭಾಗವಾಗಿದ್ದ ಪೇಶ್ವೆಗಳ ಆಡಳಿತದಲ್ಲಿ ಅಸ್ಪೃಶ್ಯರನ್ನು ನಡೆಸಿಕೊಳ್ಳುತ್ತಿದ್ದರ ಬಗ್ಗೆ ಉಲ್ಲೇಖಿಸಬಹುದಾಗಿದೆ. ಅಂಬೇಡ್ಕರ್ ಅವರು ವಿವರಿಸುವಂತೆ ಪೇಶ್ವೆಗಳ ಆಡಳಿತದಲ್ಲಿ ಅಸ್ಪೃಶ್ಯರ ಸ್ಥಿತಿ ಬಹಳ ಚಿಂತಾಜನಕವಾಗಿತ್ತು. ಒಂದು ಹಳ್ಳಿಯ ಅಥವಾ ನಗರದ ವಸತಿ ಪ್ರದೇಶಗಳನ್ನು ಸ್ಪಷ್ಟವಾಗಿ ಸ್ಪೃಶ್ಯರಿಗೆ ಹಾಗೂ ಅಸ್ಪೃಶ್ಯರಿಗೆ ಎಂದು ಪ್ರತ್ಯೇಕಿಸಲಾಗಿತ್ತು. ಕೊಳಕು ಪ್ರದೇಶಗಳಲ್ಲಿ ವಾಸಿಸುವಂತೆ ಅಸ್ಪೃಶ್ಯರನ್ನು ಕಟ್ಟಿಹಾಕಲಾಗಿತ್ತು. ಅಸ್ಪೃಶ್ಯರು ಸ್ಪೃಶ್ಯರು ವಾಸಿಸುವ ಊರಿನ ಒಳಗೆ ಪ್ರವೇಶಿಸಲು ಹಲವು ನಿರ್ಬಂಧಗಳಿದ್ದವು. ಊರಿನ ಸ್ವಚ್ಛ ಕಾರ್ಯಗಳಿಗೆ, ನಾಯಿ, ಬೆಕ್ಕು, ಇಲಿ, ಹೆಗ್ಗಣ, ಹಸು, ಎಮ್ಮೆಗಳು ಸತ್ತಾಗ ಅವುಗಳ ಕಳೇಬರವನ್ನು ಹೊರಗೆ ಎಳೆದೊಯ್ಯುವುದಕ್ಕೆ, ಊರೊಳಗಿನವರು ಸತ್ತ ಸುದ್ದಿಯನ್ನು ಸಂಬಂಧಿಕರಿಗೆ ತಿಳಿಸುವುದಕ್ಕೆ, ಸತ್ತ ಶವಗಳನ್ನು ಹೂಳಲು ಗುಂಡಿ ತೋಡುವುದಕ್ಕೆ ಮುಂತಾದ ಕೆಲಸಗಳಿಗೆ ಮಾತ್ರ ಊರಿನೊಳಗೆ ಅಸ್ಪೃಶ್ಯರ ಪ್ರವೇಶವಿತ್ತು. ಸ್ಮಶಾನಗಳೂ ಸಹ ಅಸ್ಪೃಶ್ಯರ ಕೇರಿಯ ಪಕ್ಕದಲ್ಲಿಯೇ ಇರುತ್ತಿದ್ದವು. ದಕ್ಷಿಣ ದಿಕ್ಕು ಅಪಶಕುನವಾದ್ದರಿಂದ ಆ ದಿಕ್ಕಿನಲ್ಲಿ ಅಸ್ಪೃಶ್ಯರ ವಾಸಸ್ಥಾನ ಇರಬೇಕೆಂಬ ಕಾನೂನನ್ನೇ ಮಾಡಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇಂತಹ ಕ್ರೂರ ಆಚರಣೆಗೆ ಒಳಗಾಗಿದ್ದ ಅಸ್ಪೃಶ್ಯರು ಊರ ಒಳಗೆ ಹೋಗಬೇಕಾದರೆ ಮಧ್ಯಾಹ್ನದ ಸಮಯದಲ್ಲಿಯೇ ತೆರಳಬೇಕು. ಏಕೆಂದರೆ ಆ ಸಮಯದಲ್ಲಿ ಅಸ್ಪೃಶ್ಯರ ನೆರಳು ಅವರ ಕಾಲ ಕೆಳಗೇ ಇರುತ್ತದೆ. ಅಸ್ಪೃಶ್ಯರ ನೆರಳೂ ಸಹ ಮೇಲ್ಜಾತಿಯವರ ಮೇಲೆ ಬೀಳಬಾರದು ಎಂಬುದು ಅದರ ಉದ್ದೇಶ. ಇನ್ನು ಊರೊಳಗೆ ಪ್ರವೇಶಿಸುವ ಅಸ್ಪೃಶ್ಯರು ಕೈಯಲ್ಲೊಂದು ದೊಡ್ಡ ಕೋಲನ್ನು (ಸಂಬಳಿಗೋಲು) ಹಿಡಿದು ’ಸಂಭೋಳಿ.. ಸಂಭೋಳಿ’ ಎಂದು ಕೂಗುತ್ತಾ ಊರವರನ್ನು ಎಚ್ಚರಿಸುತ್ತಾ ತೆರಳಬೇಕು. ಕುತ್ತಿಗೆಗೆ ಒಂದು ಮಡಿಕೆಯನ್ನು ಹಾಗೂ ಸೊಂಟಕ್ಕೆ ಒಂದು ಕಸಪೊರಕೆಯನ್ನು ಕಟ್ಟಿಕೊಳ್ಳಬೇಕಿತ್ತು. ಬಾಯಿಯ ಎಂಜಲನ್ನು ಉಗಿದುಕೊಳ್ಳಲು ಮಡಿಕೆ, ನಡೆದ ಹೆಜ್ಜೆಗಳನ್ನು ಅಳಿಸಲು ಪೊರಕೆ ಕಟ್ಟಿಕೊಳ್ಳಬೇಕಿತ್ತು. ಅಸ್ಪೃಶ್ಯರ ಎಂಜಲು ಮತ್ತು ಹೆಜ್ಜೆಯೂ ಸಹ ಮೇಲ್ಜಾತಿಗಳ ನೆಲವನ್ನು ಮೈಲಿಗೆಗೊಳಿಸುತ್ತದೆ ಎಂಬ ಕಾರಣದಿಂದ ಈ ಅಮಾನವೀಯ ಆಚರಣೆ
ಜಾರಿಯಲ್ಲಿತ್ತು. ಅಸ್ಪೃಶ್ಯರು ಸೇವಿಸಿದ ಗಾಳಿ ಕತೆಯೇನು ಎಂದು ಕೇಳಬೇಡಿ.
ಇಂತಹವರ ನಡುವೆ ಟಿಪ್ಪು ಸುಲ್ತಾನ್ ಭಿನ್ನವಾಗಿ ನಿಲ್ಲುತ್ತಾನೆ. ಈತನ ಆಡಳಿತದಲ್ಲಿ ಹಳೆ ಮೈಸೂರು ಪ್ರಾಂತ್ಯದ ಅಸ್ಪೃಶ್ಯರಿಗೆ ಆರ್ಥಿಕ ಸವಲತ್ತನ್ನು ನೀಡುವ ಕ್ರಾಂತಿಕಾರಿ ಬದಲಾವಣೆ ಉಂಟಾಗುತ್ತದೆ. ಸುಮಾರು 30,000 ಕೆರೆಗಳನ್ನು ನಿರ್ಮಿಸಿದ ಟಿಪ್ಪು ಸುಲ್ತಾನ್ ಅದರ ಮೇಲುಸ್ತುವಾರಿಯನ್ನು ಅಸ್ಪೃಶ್ಯರಿಗೆ ವಹಿಸುತ್ತಾನೆ. ಇದರ ಜೊತೆಗೆ ತುಂಡು ಭೂಮಿಯನ್ನೂ ನೀಡಿ ಸಂಬಳವನ್ನೂ ಪೂರೈಸುವುದರ ಮೂಲಕ ಇತಿಹಾಸದಲ್ಲಿ ಅಸ್ಪೃಶ್ಯರು ಘನತೆಯಿಂದ ಬದುಕುವ ವಾತಾವರಣ ನಿರ್ಮಿಸಿದವರಲ್ಲಿ ಅಗ್ರಗಣ್ಯನಾಗಿ ನಿಲ್ಲುತ್ತಾನೆ. ಮಲಬಾರಿನ ಅಸ್ಪೃಶ್ಯ ಮಹಿಳೆಯರ ಮೇಲೆ ಹೇರಿದ್ದ ಸ್ತನ ತೆರಿಗೆ ರದ್ದು ಮಾಡಿದ್ದನ್ನೂ ನಾವಿಲ್ಲಿ ಸ್ಮರಿಸಬಹುದಾಗಿದೆ.
19ನೇ ಶತಮಾನದಷ್ಟೊತ್ತಿಗೆ ಅಸ್ಪೃಶ್ಯರ ಮೇಲೆ ನಡೆಯುತ್ತಿದ್ದ ಅಮಾನವೀಯತೆಯನ್ನು ದಾಖಲಿಸುವ ಪರಿಪಾಠ ಆರಂಭವಾಯಿತು. ಇದನ್ನು ಡಾ. ಅಂಬೇಡ್ಕರ್ ಆರಂಭಿಸಿದರು. ಕರ್ನಾಟಕ ಸರ್ಕಾರ ಪ್ರಕಟಿಸಿರುವ ಅಂಬೇಡ್ಕರ್ ಬರೆಹಗಳು ಮತ್ತು ಭಾಷಣಗಳ ಸಂಪುಟ 4ರಲ್ಲಿ ಅಂಬೇಡ್ಕರ್ ಅವರು ದಾಖಲಿಸಿರುವ ಅಸ್ಪೃಶ್ಯರ ಮೇಲಿನ ಇಂತಹ ಹಲವು ದೌರ್ಜನ್ಯಗಳ ಬಗೆಗೆ ವರದಿ-ಬರೆಹಗಳು ಸಿಗುತ್ತವೆ. ಅವುಗಳಲ್ಲಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಅಸ್ಪೃಶ್ಯರಿಗೆ ವಿಧಿಸಿದ್ದ ನಿಯಮಗಳನ್ನು ಪಟ್ಟಿ ಮಾಡಲಾಗಿದೆ. ಅದನ್ನಿಲ್ಲಿ ನೀಡಿದ್ದೇನೆ. ಒಮ್ಮೆ ನೋಡಿ.
1927ನೆಯ ಮೇ ತಿಂಗಳಲ್ಲಿ ಇಂದೋರ್ ಜಿಲ್ಲೆಗೆ ಸೇರಿದ ಕನಾರಿಯ, ಬಿಚೋಲಿ ಹಳ್ಳಿ, ಮರ್ದನ ಮತ್ತು ಇತರ ಹದಿನೈದು ಗ್ರಾಮಗಳ ಸವರ್ಣಿಯ ಹಿಂದೂಗಳಾದ ಕಲೋಟರು, ರಜಪೂತರು, ಬ್ರಾಹ್ಮಣರು, ಪಟೇಲರು ಮತ್ತು ಪಟ್ವಾರಿಗಳು ತಮ್ಮತಮ್ಮ ಹಳ್ಳಿಗಳಲ್ಲಿದ್ದ ಬಲಾಯಿಗಳನ್ನು (ಅಸ್ಪೃಶ್ಯರು) ಉದ್ದೇಶಿಸಿ ಇನ್ನು ಮುಂದೆ ಆಯಾ ಹಳ್ಳಿಗಳಲ್ಲಿ ನೆಲೆಸಬೇಕೆಂದರೆ ಈ ನಿಯಮಗಳನ್ನು ಪಾಲಿಸಬೇಕೆಂದು ಹೇಳಿದ್ದರು.
- ಬಲಾಯಿಗಳು ಚಿನ್ನದ ಅಂಚುಗಳುಳ್ಳ ಬಟ್ಟೆಗಳನ್ನು ಧರಿಸಬಾರದು.
- ಬಲಾಯಿಗಳು ಬಣ್ಣದ ಅಥವಾ ಆಕರ್ಷಕವಾದ ಅಂಚುಳ್ಳ ಪಂಚೆಗಳನ್ನು ಧರಿಸಬಾರದು.
- ಹಿಂದೂಗಳು ಯಾರಾದರೂ ಸತ್ತರೆ ಆ ವಾರ್ತೆಯನ್ನು ಅವರ ಬಂಧುಗಳಿಗೆ, ಅವರು ಆದೆಷ್ಟೇ ದೂರವಿರಲಿ, ಅವರಿಗೆ ತಲುಪಿಸುವ ಕರ್ತವ್ಯ ಬಲಾಯಿಗಳಿಗೆ ಸೇರಿದ್ದು.
- ಹಿಂದೂಗಳ ಮದುವೆಗಳಲ್ಲಿ, ಉತ್ಸವಗಳಲ್ಲಿ ಬಲಾಯಿಗಳು ವಾದ್ಯ ನುಡಿಸಬೇಕು
- ಬಲಾಯಿ ಹೆಂಗಸರು ಚಿನ್ನ ಬೆಳ್ಳಿಯ ಆಭರಣಗಳನ್ನು ಧರಿಸಬಾರದು ಮತ್ತು ಅವರು ಆಕರ್ಷಕವಾದ ನಿಲುವಂಗಿ ಅಥವಾ ಕುಪ್ಪುಸಗಳನ್ನು ಧರಿಸಬಾರದು.
- ಹಿಂದೂ ಹೆಂಗಸರ ಹೆರಿಗೆ ಕಾಲದಲ್ಲಿ ಬಲಾಯಿ ಹೆಂಗಸರು ಸೇವೆ ಮಾಡಬೇಕು.
- ಬಲಾಯಿಗಳು ಯಾವ ಸಂಭಾವನೆಯನ್ನೂ ಕೇಳದೆ ಹಿಂದೂಗಳ ಸೇವೆ ಮಾಡಬೇಕು; ಅವರು ಪ್ರೀತಿಯಿಂದ ಏನನ್ನು ಕೊಡುತ್ತಾರೋ ಅದನ್ನು ಸ್ವೀಕರಿಸಬೇಕು
- ಈ ಕರಾರುಗಳಿಗೆ ಒಪ್ಪದ ಬಲಾಯಿಗಳು ಹಳ್ಳಿಯಿಂದ ಹೊರಟುಹೋಗಬೇಕು.
ಅಲ್ಲಿನ ಬಲಾಯಿಗಳು ಈ ನಿಬಂಧನೆಗಳನ್ನು ಸರಿಯಾಗಿ ಪಾಲಿಸದೇ ಇದ್ದದ್ದರಿಂದಾಗಿ ಅವರೆಲ್ಲರನ್ನೂ ಬಹಿಷ್ಕರಿಸಲಾಯಿತು. ನಂತರ ತಲೆತಲಾಂತರದಿಂದ ಬದುಕಿ ಬಾಳಿದ ತಮ್ಮ ಹಳ್ಳಿಗಳನ್ನು ತೊರೆದು ಬಲಾಯಿಗಳು ಬೇರೆಡೆಗೆ ವಲಸೆ ಹೋದರು.
ಮತ್ತೊಂದು ತಮಿಳುನಾಡಿನ ರಾಮನಾಡಿನ ಘಟನೆ. ಇಲ್ಲಿಯೂ ಸಹ 1931ರಲ್ಲಿ ಹಿಂದೂ ಮೇಲ್ಜಾತಿಯಾದ ಕಲ್ಲರ್ ಸಮುದಾಯವು ಅಲ್ಲಿನ ಅಸ್ಪೃಶ್ಯರಿಗೆ ಈ ಕೆಳಗಿನ ನಿಯಮಗಳನ್ನು ರೂಪಿಸಿತ್ತು.
- ಆದಿದ್ರಾವಿಡರು ಮತ್ತು ದೇವೇಂದ್ರ ಕುಲದ ವೆಲ್ಲಲಾರುಗಳು ತಮ್ಮ ಮೊಣಕಾಲಿನ ಕೆಳಕ್ಕೆ ಪಂಚೆ ಉಡಬಾರದು.
- ಮೇಲೆ ಹೇಳಿದ ಅಸ್ಪೃಶ್ಯ ಜನಾಂಗದ ಸ್ತ್ರೀ ಪುರುಷರು ಚಿನ್ನದ ಆಭರಣಗಳನ್ನು ಧರಿಸಬಾರದು.
- ಹೆಂಗಸರು ಮಣ್ಣಿನ ಗಡಿಗೆಯಲ್ಲಿ ನೀರು ತರಬೇಕೇ ಹೊರತು ತಾಮ್ರ ಅಥವಾ ಹಿತ್ತಾಳೆ ಬಿಂದಿಗೆಯಲ್ಲಿ ನೀರು ತರಬಾರದು. ನೀರಿನ ಕೊಡಗಳನ್ನು ಹೊತ್ತು ತರಲು ಹುಲ್ಲಿನ ಸಿಂಬಿಯನ್ನು ಬಳಸಬೇಕೇ ಹೊರತು ಬಟ್ಟೆಯ ಸಿಂಬಿಯನ್ನು ಬಳಸಬಾರದು.
- ಅವರ ಮಕ್ಕಳು ಓದು ಬರಹ ಕಲಿತು ಅಕ್ಷರಸ್ಥರಾಗಬಾರದು.
- ಅವರ ಮಕ್ಕಳು ಜಮೀನ್ದಾರರ ದನಕರುಗಳನ್ನು ಕಾಯಬೇಕು.
- ಅವರ ಹೆಂಗಸರು ಗಂಡಸರೆಲ್ಲರೂ ಜಮೀನ್ದಾರರ ಬಳಿ ಗುಲಾಮರಾಗಿ ಅವರ ಜಮೀನುಗಳಲ್ಲಿ ದುಡಿಯಬೇಕು.
- ಜಮೀನ್ದಾರರಿಂದ ವಾರಕ್ಕಾಗಲೀ ಅಥವಾ ಗುತ್ತಿಗೆಗಾಗಲೀ ಜಮೀನುಗಳನ್ನು ಪಡೆದು ಅವರು ಬೇಸಾಯ ಮಾಡಬಾರದು.
- ಅವರು ತಮ್ಮ ಜಮೀನನ್ನೆಲ್ಲಾ ಜಮೀನ್ದಾರರಿಗೆ ಕಡಿಮೆ ಬೆಲೆಗೆ ಮಾರಬೇಕು. ಅವರು ಹಾಗೆ ಮಾಡದಿದ್ದರೆ ಅವರ ಜಮೀನಿಗೆ ನೀರನ್ನು ಬಿಡದಂತೆ ತಡೆಯಲಾಗುವುದು. ಮಳೆ ನೀರಿನಿಂದಲೇ ಅವರು ಯಾವುದಾದರೂ ಬೆಳೆಯನ್ನು ಬೆಳೆದರೆ ಅದು ಫಸಲಿಗೆ ಬಂದಾಗ ಅದನ್ನು ಲೂಟಿ ಮಾಡಲಾಗುವುದು.
- ಅವರು ಬೆಳಿಗ್ಗೆ ಏಳು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಜಮೀನ್ದಾರರ ಜಮೀನಿನಲ್ಲಿ ದುಡಿಯಬೇಕು. ಅವರಲ್ಲಿ ಗಂಡಸರಿಗೆ ದಿನಕ್ಕೆ ನಾಲ್ಕಾಣೆ ಕೂಲಿಯಾದರೆ ಹೆಂಗಸರಿಗೆ ಎರಡಾಣೆ
- ಮೇಲೆ ಹೇಳಲಾದ ಅಸ್ಪೃಶ್ಯ ಜನ ತಮ್ಮ ಮನೆಯ ಮದುವೆಗಳಲ್ಲಿ ಮತ್ತಿತರ ಸಮಾರಂಭಗಳಲ್ಲಿ ವಾದ್ಯಗಳನ್ನು ಬಾರಿಸಬಾರದು.
- ಅವರು ಮದುವೆಯಲ್ಲಿ ಮಾಂಗಲ್ಯಧಾರಣೆಗೆ ಮುನ್ನ ಮದುಮಗನನ್ನು ಕುದುರೆಯ ಮೇಲೆ ಉತ್ಸವದಲ್ಲಿ ಕೊಂಡೊಯ್ಯಬಾರದು ಮತ್ತು ಅವರ ಮನೆಯ ಬಾಗಿಲನ್ನೇ ಮೆರವಣಿಗೆಯ ಪಲ್ಲಕ್ಕಿಯಂತೆ ಬಳಸಬೇಕೇ ಹೊರತು ಯಾವ ವಿಧದ ವಾಹನವನ್ನು ಬಳಸಬಾರದು.
ಇವೆರಡೂ ನಿಯಮಗಳು 19ನೇ ಶತಮಾನದಲ್ಲಿ ಹಿಂದೂ ಮೇಲ್ಜಾತಿಗಳು ಅಸ್ಪೃಶ್ಯರ ಮೇಲೆ ವಿಧಿಸಿದ್ದಂತಹವು. ಮುಸ್ಲೀಂ ಹಾಗೂ ಬ್ರಿಟಿಷರ ಕೆಲವು ನೀತಿಗಳು ಅಸ್ಪೃಶ್ಯರ ಆರ್ಥಿಕ ಸ್ಥಿತಿಯಲ್ಲಿ ಕೆಲವು ಬದಲಾವಣೆಗಳನ್ನು ತಂದವೇ ಹೊರತು ಜಾತಿಪದ್ಧತಿ ಹಾಗೂ ಅಸ್ಪೃಶ್ಯತೆ ನಿಷೇಧಿಸುವಲ್ಲಿ ಗಟ್ಟಿಯಾದ ಯಾವ ಕ್ರಮವನ್ನೂ ಅವು ಜರುಗಿಸಲಿಲ್ಲ. ಹಾಗಾಗಿ ಅಸ್ಪೃಶ್ಯತೆಯ ಕರಾಳತೆ ಸ್ವತಂತ್ರ ಭಾರತದ ನಂತರವೂ ಮುಂದುವರೆದಿದೆ. ಭಾರತದ ಸಂವಿಧಾನವು ಅಸ್ಪೃಶ್ಯತೆಯನ್ನು ನಿಷೇಧಿಸುತ್ತದೆ ಆದರೂ ಆಳುವ ವರ್ಗಗಳು ದಲಿತೇತರರೇ ಆಗಿರುವುದರಿಂದ ಅಸ್ಪೃಶ್ಯತೆ ಇಂದಿಗೂ ಜೀವಂತವಾಗಿದೆ.
ಒಟ್ಟಾರೆ ಮಧ್ಯಕಾಲೀನ ಭಾರತಕ್ಕೆ ಹೋಲಿಸಿಕೊಂಡರೆ 18ನೇ ಶತಮಾನದಲ್ಲಿ ಅಸ್ಪೃಶ್ಯರು ಸ್ವತಃ ಪಾಪ-ಪುಣ್ಯಗಳಲ್ಲಿ ನಂಬಿಕೆ ಹೊಂದುವಂತೆ ಮಾಡಿ ಅಸ್ಪೃಶ್ಯತೆಯನ್ನು ದೇವರೇ ಅವರಿಗೆ ನೀಡಿರುವ ಶಾಪವೆಂದು ನಂಬಿಸಲಾಗಿತ್ತು.
ಈ ಜನ್ಮದಲ್ಲಿ ಅಸ್ಪೃಶ್ಯರಾಗಿ ಮೇಲ್ಜಾತಿಗಳ ಸೇವೆ ಮಾಡಿದರೆ ಮುಂದಿನ ಜನ್ಮದಲ್ಲಿ ಉತ್ತಮ ಜಾತಿಯಲ್ಲಿ ಹುಟ್ಟುತ್ತೇವೆ ಎಂಬ ಕಲ್ಪನೆಯನ್ನೂ ಬಿತ್ತಲಾಗಿತ್ತು ಹಾಗೂ ಅದನ್ನು ಅಸ್ಪೃಶ್ಯರು ಬಲವಾಗಿ ನಂಬುವಂತೆ ಮಾಡಲಾಗಿತ್ತು. ಈ ನಂಬಿಕೆ ಈಗಲೂ ಹಳ್ಳಿಗಳ ಹಳೆತಲೆಮಾರುಗಳಲ್ಲಿ ಜೀವಂತವಿದೆ. ಹಿಂದೂಗಳು ಅಸ್ಪೃಶ್ಯತೆ ಕಳಂಕದಿಂದಾಗಿ ವಿಶ್ವಮಟ್ಟದಲ್ಲಿ ತಲೆತಗ್ಗಿಸುವಂತೆ ಆಗಿದ್ದರೂ ಸಹ ಅಸ್ಪೃಶ್ಯತೆ ಆಚರಣೆಯು ಹಿಂದೂ ಮೇಲ್ಜಾತಿಗಳಿಗೆ ಇದುವರೆವಿಗೂ ಒಂದು ರೀತಿಯ ವಿಕೃತ ಆನಂದವನ್ನು ನೀಡುತ್ತಾ ಬಂದಿದೆ. ಅಂಬೇಡ್ಕರ್ ಅದೆಷ್ಟೇ ಎಚ್ಚರಿಸಿದರೂ ಸಹ ಬಹುಸಂಖ್ಯಾತ ದಲಿತರಿಗೂ ಸಹ ತಾವು ಕೀಳೆಂದು ಬದುಕುವ ವಿಕೃತಿ ಆನಂದವೂ ಸಹ ಮೈಗೂಡಿಕೊಂಡಿದೆ.
ಇಷ್ಟಿದ್ದಾಗಿಯೂ ಮಹಾರ್, ಮಾಂಗ್, ಚಂಬಾರ್, ಪರಯ್ಯಾ, ಪುಲಯನ್ನಂತಹ ಅಸ್ಪೃಶ್ಯ ಜಾತಿಗಳು ಹಲವು ರಾಜರುಗಳ ಸೇನೆಯಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸಿದ್ದೂ ಉಂಟು. ಈ ಕ್ಷೇತ್ರದ ಬಗ್ಗೆ ಮುಂದಿನ ದಿನಗಳಲ್ಲಿ ಸಂಶೋಧನೆಗಳಾದರೆ ಅಸ್ಪೃಶ್ಯರ ಸ್ಥಿತಿಗತಿಗಳ ಮೇಲೆ ಮತ್ತಷ್ಟು ಬೆಳಕು ಚೆಲ್ಲಿದಂತಾಗುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಮಾತು ಮರೆತ ಭಾರತ; ಅರೆಊಳಿಗಮಾನ್ಯ ಸಮಾಜದಲ್ಲಿ ಅಸ್ಪೃಶ್ಯರು


