Homeಅಂಕಣಗಳುಮಾತು ಮರೆತ ಭಾರತ; ಅರೆಊಳಿಗಮಾನ್ಯ ಸಮಾಜದಲ್ಲಿ ಅಸ್ಪೃಶ್ಯರು

ಮಾತು ಮರೆತ ಭಾರತ; ಅರೆಊಳಿಗಮಾನ್ಯ ಸಮಾಜದಲ್ಲಿ ಅಸ್ಪೃಶ್ಯರು

- Advertisement -
- Advertisement -

ಊಳಿಗಮಾನ್ಯ ಸಮಾಜದ ಭಾಗವಾಗಿ ಕ್ರಿ.ಶ 4ರಿಂದ 12ರವರೆಗೆ ಭಾರತೀಯ ಸಮಾಜ ವಿವಿಧ ಜಾತಿಗಳಾಗಿ ಛಿದ್ರಗೊಂಡಿತ್ತು. ಹಾಗೆಯೇ ಅಸ್ಪೃಶ್ಯರ ಸಂಖ್ಯೆಯೂ ಹೆಚ್ಚಾಯಿತು ಎಂಬುದನ್ನು ಕಳೆದ ಸಂಚಿಕೆಯಲ್ಲಿ ತಿಳಿದುಕೊಂಡೆವು. ಕ್ರಿ.ಶ 8ನೇ ಶತಮಾನದಷ್ಟೊತ್ತಿಗೆ ಅರಬ್ ದೇಶಗಳಿಂದ ವ್ಯಾಪಾರಿಗಳೊಂದಿಗೆ ಭಾರತವನ್ನು ತಲುಪಿದ ಇಸ್ಲಾಂ ಸೂಫಿಗಳು ಇಲ್ಲಿನ ತಳಸಮುದಾಯಗಳ ಮೇಲೆ ಪ್ರಭಾವ ಬೀರಿದರು. ಕ್ರಿ.ಶ 12ರ ನಂತರ ಸೂಫಿ ಪ್ರಭಾವದಿಂದಾಗಿ ಹಾಗೂ ಮುಸ್ಲಿಂ ರಾಜರುಗಳು ನಗರ ಕೇಂದ್ರಿತ ಆಡಳಿತಕ್ಕೆ ಹೆಚ್ಚು ಒತ್ತುಕೊಟ್ಟದ್ದರಿಂದ ಕುಶಲಕರ್ಮಿಗಳಿಗೆ ಹೆಚ್ಚು ಮನ್ನಣೆ ಸಿಕ್ಕಿತು. ಈ ಕಾರಣದಿಂದಾಗಿ ಚಮ್ಮಾರ, ಬೆಸ್ತ, ಅಗಸ, ಚಂಡಾಳ ಮುಂತಾದ ಅಸ್ಪೃಶ್ಯ ಜಾತಿಗಳಿಗೆ ಹೆಚ್ಚು ಕೆಲಸ ದಕ್ಕಿತು. ಆರ್ಥಿಕ ಮಟ್ಟ ತಕ್ಕಮಟ್ಟಿಗೆ ಸುಧಾರಿಸಿತು. ಆದರೆ ಭೂಮಿಯಲ್ಲಿ ಜೀತಗಾರಿಕೆ ಮಾಡುತ್ತಿದ್ದ ಅಸ್ಪೃಶ್ಯರ ಬವಣೆಯಲ್ಲಿ ಬದಲಾವಣೆಗಳಾಗಲಿಲ್ಲ. ಏಕೆಂದರೆ ಮುಸ್ಲಿಂ ರಾಜರುಗಳು ಬ್ರಾಹ್ಮಣಾದಿ ಮೇಲ್ಜಾತಿ ಭೂಮಾಲೀಕರ ಜೊತೆಗೆ ಶೂದ್ರ ಬಲಾಢರನ್ನು ಭೂಮಾಲೀಕರನ್ನಾಗಿಸಿದರೇ ಹೊರತು ಅಸ್ಪೃಶ್ಯರನ್ನಲ್ಲ. ಅಸ್ಪೃಶ್ಯರು ಎಂದಿನಂತೆ ಹೊಲಗಳಲ್ಲಿ ದುಡಿಯುವ ಜಾನುವಾರುಗಳಾಗಿಯೇ ಉಳಿದರು.

ಈ ಅರೆ ಊಳಿಗಮಾನ್ಯ ಕಾಲದಲ್ಲಿ ಅಸ್ಪೃಶ್ಯರ ಮೇಲೆ ಪ್ರಭಾವ ಬೀರಿದ ಬಹುಮುಖ್ಯ ಎರಡು ಬದಲಾವಣೆಗಳೆಂದರೆ 1. ಮತಾಂತರ 2. ನಾಯಂಕರ ಪದ್ಧತಿ.

ಈ ಹಿಂದೆ ಬ್ರಾಹ್ಮಣರ ಉಪಭೋಗಕ್ಕೆ ನೀಡುತ್ತಿದ್ದ ಬ್ರಹ್ಮಾದೇಯ, ದೇವಾದೇಯಗಳಿಗೆ ಮೊದಲ ಬಾರಿಗೆ ಟರ್ಕಿನ ಗುಲಾಮರ ಆಡಳಿತದಲ್ಲಿ ತಡೆಯನ್ನುಂಟುಮಾಡಲಾಯಿತು. ಈ ಮೂಲಕ ಅಲ್ಲಾವುದ್ದೀನನು ರಾಜ್ಯದ ಭೂಮಿಯ ಪಾಲನ್ನು ಹೆಚ್ಚು ಮಾಡಿ ರಾಜ್ಯಕ್ಕೆ ಸಹಾಯಕರಾದವರು ಮತ್ತು ಯೋಗ್ಯರಿಗೆ ಭೂಮಿಯನ್ನು ಹಂಚಿ ರಾಜ್ಯದ ಕಂದಾಯವನ್ನು ಅಧಿಕಗೊಳಿಸಿದನು. ಆಗ ಹಲವು ಕುಶಲಕರ್ಮಿಗಳಾದ ಶೂದ್ರರಿಗೆ ಭೂಮಿ ದಕ್ಕಿತು. ಹಾಗಾಗಿ ಚಮ್ಮಾರಿಕೆ ಮಾಡುತ್ತಿದ್ದ ಅಸ್ಪೃಶ್ಯರಿಗೂ ಭೂಮಿ ದಕ್ಕಿರಬಹುದೆಂದು ಅಂದಾಜಿಸಬಹುದಾಗಿದೆ. ಆದರೂ ಇದರ ಮೇಲೆ ಹೆಚ್ಚು ಸಂಶೋಧನೆ ನಡೆಯಬೇಕಿದೆ. ಟಿಪ್ಪು ಸುಲ್ತಾನ್ ಅಸ್ಪೃಶ್ಯರಿಗೆ ಕೆರೆಗಳ ನೀರುಗಂಟಿ ಕೆಲಸ ಕೊಟ್ಟು ತುಂಡು ಭೂಮಿಯನ್ನು ಸಂಬಳದ ಸಮೇತ ನೀಡಿದ್ದನ್ನಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ದೆಹಲಿ ಸುಲ್ತಾನರು ಸೂಫಿ ಸಂತರ ಪ್ರಭಾವಕ್ಕೆ ಒಳಗಾಗಿದ್ದರು. ಹಾಗೆಯೇ ಸೂಫಿ ಸಂತರ ಪ್ರಭಾವಕ್ಕೊಳಗಾದ ತಳಜಾತಿಯ ಜನರು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದರು. ಈ ಸಾಲಿನಲ್ಲಿ ಅಸ್ಪೃಶ್ಯರೂ ಬಹಳಷ್ಟಿದ್ದರು. ಇದಕ್ಕೆ ಸಾಕ್ಷಿ ಕ್ರಿ.ಶ 12ನೇ ಶತಮಾನದ ನಂತರ ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಅಸ್ಪೃಶ್ಯ ಜಾತಿಯ ಸಂತರು ಉದಯಿಸಿದ್ದಾಗಿದೆ. ಈ ಪ್ರಕ್ರಿಯೆಯಲ್ಲಿ ಇಸ್ಲಾಂ ಧರ್ಮದ ಪಾತ್ರ ಬಹಳಷ್ಟಿದೆ. ದೇವರ ಮುಂದೆ ಎಲ್ಲರೂ ಸಮಾನರು, ದೇವರೆಂದಿಗೂ ಮನುಷ್ಯರನ್ನು ಒಡೆದು ನೋಡುವುದಿಲ್ಲ ಎಂಬ ಕಲ್ಪನೆ ಅಸ್ಪೃಶ್ಯರಿಗೆ ಉಂಟಾಗಿದ್ದೇ ಇಸ್ಲಾಂ ಧರ್ಮದ ಪ್ರಭಾವದಿಂದಾಗಿದೆ. ಹಾಗಾಗಿ ವೈಷ್ಣವ ಪಂಥದ ಆಳ್ವಾರರಲ್ಲೂ, ಶೈವ ಪಂಥದ ನಾಯನಾರರಲ್ಲೂ ಸೂಫಿ ಪಂಥದ ಛಾಯೆಗಳನ್ನು ಕಾಣಬಹುದಾಗಿದೆ.

ಅದಷ್ಟೇ ಅಲ್ಲದೆ ಅಸ್ಪೃಶ್ಯ ಸಂತರು ಬ್ರಾಹ್ಮಣರ ಹಿರಿಮೆಯನ್ನು ಪ್ರಶ್ನಿಸುವಷ್ಟ ಮಟ್ಟಿಗೆ ಬೆಳೆದದ್ದು ಸಹ ದೇವರ ಮುಂದೆ ಯಾರೂ ದೊಡ್ಡವರಲ್ಲ ಎಂಬ ಸೂಫಿ ತತ್ವದ ಪ್ರಭಾವದಿಂದಾಗಿಯೇ. ಹಾಗಾಗಿ ಸೂಫಿ ಪಂಥದ ಪ್ರಭಾವ ಅಸ್ಪೃಶ್ಯ ಕುಶಲಕರ್ಮಿಗಳ ಮೇಲಾಗಿ ಹೆಚ್ಚಿನ ಸಂಖ್ಯೆಯಲ್ಲಾಗಿದ್ದು, ಅಸ್ಪೃಶ್ಯರು ಇಸ್ಲಾಂ ಧರ್ಮಕ್ಕೆ ಮತಾಂತರವಾದರು. ಕುತೂಹಲಕಾರಿ ವಿಚಾರವೆಂದರೆ ಶೂದ್ರರು ಹಾಗೂ ಬ್ರಾಹ್ಮಣರೂ ಸಹ ಇಸ್ಲಾಂ ಧರ್ಮಕ್ಕೆ ಮತಾಂತರವಾದರು. ಖಿಲ್ಜಿ ಸಂತತಿಯವರು ದೆಹಲಿ ಸುಲ್ತಾನರಾದ ಮೇಲೆ ನೋಬಲ್ ಪದವಿಯನ್ನು ಇತರ ಮುಸ್ಲಿಂ ಸಂತತಿಯವರಿಗೂ ಕೊಡಮಾಡಲ್ಪಟ್ಟಿತು. ಇವರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರವಾದ ಹಿಂದೂಗಳೂ ಇದ್ದರು. ಮಹಮದ್ ತುಘಲಕ್ ಒಂದು ಹೆಜ್ಜೆ ಮುಂದೆ ಹೋಗಿ ತಳಜಾತಿಯ ಕ್ಷೌರಿಕರು, ಅಡುಗೆ ಮಾಡುವವರು, ನೇಕಾರರು ಮುಂತಾದವರಿಗೂ ಹಲವು ಅಧಿಕಾರಿ ಹುದ್ದೆಗಳನ್ನು ನೀಡಿದ. ಬಹುತೇಕ ಇವರೆಲ್ಲರೂ ಇಸ್ಲಾಂ ಧರ್ಮಕ್ಕೆ ಮತಾಂತರವಾದವರಾಗಿದ್ದರು. ಜೊತೆಗೆ ಮತಾಂತರವಾಗದ ಹಿಂದೂಗಳೂ ಇದ್ದರು. ಹೀಗಾಗಿ ವೈದಿಕ ಬ್ರಾಹ್ಮಣಶಾಹಿ ಶ್ರೇಣೀಕರಣ ಸಮಾಜದಲ್ಲಿ ಮತ್ತೆ ಚಲನೆ ಉಂಟಾಯಿತು. ಕೇವಲ ತಳಸಮುದಾಯ ಮಾತ್ರವಲ್ಲ ಫಿರೋಜ್ ಶಾ ತುಘಲಕ್ ಆಸ್ಥಾನದ ಪ್ರಮುಖ ಅಧಿಕಾರಿ ವಜೀರ ಮಲಿಕ್ ಐ ಮಕ್ಬುಲ್‌ನು ಮತಾಂತರಗೊಂಡ ತೆಲಂಗಾಣ ಬ್ರಾಹ್ಮಣನಾಗಿದ್ದನು. ಮೊಘಲರ ಕಾಲದಲ್ಲಂತೂ ಬ್ರಾಹ್ಮಣರು, ಮರಾಠರು, ರಜಪೂತರು, ಕಾಯಸ್ಥರು ಸಹ ಮಂತ್ರಿಗಳ ಸ್ಥಾನದವರೆಗೂ ಏರಲ್ಪಟ್ಟರು. ಮೊಘಲರ ಜಮೀನ್ದಾರಿ ಪದ್ಧತಿಯು ಬಲಾಢ್ಯ ಜಾತಿಗಳನ್ನು ಜಾತಿಪದ್ಧತಿಯ ಏಣಿಶ್ರೇಣಿಯಲ್ಲಿ ಮೇಲೆಯೇ ಇಟ್ಟಿತು.

ಎರಡನೆಯದಾಗಿ ನಾಯಂಕರ ಪದ್ಧತಿ. ಕ್ರಿ.ಶ 12ನೇ ಶತಮಾನದ ನಂತರ ಊಳಿಗಮಾನ್ಯ ಸಮಾಜ ನಗರೀಕರಣಗೊಳ್ಳುತ್ತ ಅರೆಊಳಿಗದ ಕಡೆ ಮುಖ ಮಾಡಿದಾಗ ಹಲವು ಸ್ವತಂತ್ರ ರಾಜ್ಯಗಳೊಂದಿಗೆ ಗುರುತಿಸಿಕೊಂಡಿದ್ದ ಪಾಳೆಗಾರರು ಮತ್ತಷ್ಟು ಗಟ್ಟಿಯಾಗತೊಡಗಿದರು. ಇದು ಮತ್ತಷ್ಟು ಸಂಕೀರ್ಣ ಭೂಮಾಲೀಕ ಅಧಿಕಾರವನ್ನುಂಟುಮಾಡಿತು. ಹಾಗಾಗಿ ಮುಸ್ಲೀಮೇತರ ರಾಜ್ಯಗಳಲ್ಲಿ ನಾಯಂಕರ ಪದ್ಧತಿ ಕಾಣಿಸಿಕೊಂಡಿತು. ರಾಜನು ಒಬ್ಬ ನಾಯಕನಿಗೆ ಅಥವಾ ಪಾಳೆಗಾರನಿಗೆ ಸೈನಿಕ ಸೇನೆಯ ನೆರವಿನ ಷರತ್ತಿನ ಮೇಲೆ ಭೂಮಿಯನ್ನು ಕೊಡುತ್ತಿದ್ದುದೇ ನಾಯಂಕರ ಪದ್ಧತಿ. ಇದು ಮುಸ್ಲಿಮೇತರ ರಾಜ್ಯಗಳಲ್ಲಿ ನಡೆದ ಬೆಳವಣಿಗೆಯಾಗಿತ್ತು. ಈ ಕಾಲದ ಮುಸ್ಲಿಮೇತರ ರಾಜ್ಯಗಳು ಹೆಚ್ಚೂ ಕಡಿಮೆ ವಿಜಯನಗರ ಸಾಮ್ರಾಜ್ಯದಂತೆಯೇ ಇದ್ದವು. ಗ್ರಾಮದ ಮುಖಂಡರಿಗೆ ಗೌಡ ಮತ್ತು ಗಾವುಂಡ ಎಂಬ ಹೆಸರಿದ್ದಿತು. ಇವರ ಸಹಾಯಕ್ಕೆ ಸೇವಭೋವ ಅಥವಾ ಕುಲಕರಣಿ ಎಂಬ ಗ್ರಾಮಲೆಕ್ಕಿಗ ಇರುತ್ತಿದ್ದನು. ಇವನಲ್ಲದೆ ತಲಾರಿ, ಅಂಬಿಗ, ಬರಿಕ ಅಥವಾ ಕಾವಲುಗಾರ, ಕಲ್ಕುಟಿಕ, ಕಮ್ಮಾರ, ಅಕ್ಕಸಾಲಿಗ, ಕುಂಬಾರ, ಬಡಗಿ, ಕ್ಷೌರಿಕ, ಜ್ಯೋತಿಷಿ, ಪುರೋಹಿತ ಮೊದಲಾದ ಸೇವಕರಿದ್ದರು. ಗೌಡ ಗ್ರಾಮದ ಮೇಲ್ಜಾತಿ ವ್ಯಕ್ತಿಯಾಗುತ್ತಿದ್ದನು. ಹೆಚ್ಚಾಗಿ ಬ್ರಾಹ್ಮಣ, ಲಿಂಗಾಯತ ಮತ್ತು ಒಕ್ಕಲಿಗರೇ ಆಗುತ್ತಿದ್ದರಾದರೂ ಕೆಲವು ಭಾಗಗಳಲ್ಲಿ ಈಡಿಗರು ಮತ್ತು ಬೇಡರೂ ಆದ ಉದಾಹರಣೆಗಳಿವೆ. ಇನ್ನೂ ಕೆಲವು ಕಡೆಗಳಲ್ಲಿ ಅಸ್ಪೃಶ್ಯ ಜಾತಿಯ ಹೊಲೆಯ, ಮಾದಿಗರು ಉಪ ಪಾಳೆಯಗಾರರಾಗಿದ್ದ ಉದಾಹರಣೆಗಳೂ ಇವೆ. ಇದಕ್ಕೆ ಮುಖ್ಯ ಕಾರಣ ನಾಯಂಕರ ಪದ್ಧತಿ.

ಕುಶಲಕರ್ಮಿಗಳಲ್ಲದ ಅಸ್ಪೃಶ್ಯರ ಜೀವನ ಚಿಂತಾಜನಕವಾಗಿತ್ತು. ಈ ಕಾಲದಲ್ಲಿ ಮೂರು ರೀತಿಯ ಗುಲಾಮರು ಕಂಡುಬರುತ್ತಿದ್ದರೆಂದು ಇತಿಹಾಸಕಾರರು ಹೇಳುತ್ತಾರೆ. ಗುಲಾಮರ ಮಕ್ಕಳು ಒಂದನೇ ರೀತಿಯವರಾದರೆ, ಎರಡನೆಯವರು ಕೊಂಡುಕೊಂಡವರು, ಮೂರನೆಯವರು ಹಿಂದೂ ಶಾಸ್ತ್ರಗಳಲ್ಲಿ ಹೇಳಿದ ಶೂದ್ರರು ಮತ್ತು ಅಂತ್ಯಜರು. ಪಶ್ಚಿಮ ಏಶಿಯಾದಲ್ಲಿ ಕಂಡುಬರುವಂತೆ ಭಾರತದಲ್ಲಿಯೂ ಸಹ ಗುಲಾಮರನ್ನು ಮಾರುವ ಮಾರುಕಟ್ಟೆಗಳಿದ್ದವು. ಟರ್ಕ್, ಕಾಸ್ಪಿಯನ್, ಗ್ರೀಕ್ ಮತ್ತು ಭಾರತದ ಗುಲಾಮರನ್ನು ಇಲ್ಲಿ ಮಾರಲಾಗುತ್ತಿತ್ತು. ಕುಶಲ ಗುಲಾಮರು ಹೆಚ್ಚು ಬೆಲೆಗೆ ಮಾರಾಟ ಗೊಳ್ಳುತ್ತಿದ್ದರು. ಇವರಲ್ಲಿ ಗಂಡಸರು ಮತ್ತು ಹೆಂಗಸರೂ ಇರುತ್ತಿದ್ದರು. ಇವರಲ್ಲಿ ಕೆಲವರು ಐಬಕ್‌ನ ಕಾಲದಲ್ಲಿ ಉನ್ನತ ಅಧಿಕಾರಿಗಳ ಸ್ಥಾನದವರೆಗೂ ಏರಲ್ಪಟ್ಟರು. ಗುಲಾಮರು ಮದುವೆಯಾಗಬಹುದಿತ್ತು. ಸಂಪತ್ತನ್ನೂ ಗಳಿಸಬಹುದಿತ್ತು. ಆದರೂ ಗುಲಾಮಗಿರಿಯನ್ನು ಕೀಳು ವೃತ್ತಿಯೆಂದು ಪರಿಗಣಿಸಲಾಗಿತ್ತು. ಆದರೆ ಇದೇ ಸೌಲಭ್ಯ ಅಸ್ಪೃಶ್ಯ ಗುಲಾಮರಿಗೆ ದಕ್ಕಿದಕ್ಕೆ ಇತಿಹಾಸ ಪುಟಗಳಲ್ಲಿ ಸಾಕ್ಷಿ ಸಿಗುವುದಿಲ್ಲ. ಇದಕ್ಕೆ ನಮ್ಮ ಕರ್ನಾಟಕವೇ ಸಾಕ್ಷಿಯಾಗಿದೆ. ಡಾ. ಚಿದಾನಂದ ಮೂರ್ತಿಯವರ ’ಮಧ್ಯಕಾಲೀನ ಕರ್ನಾಟಕದಲ್ಲಿ ಅಸ್ಪೃಶ್ಯತೆ’ ಕೃತಿಯು ಇದರ ಮೇಲೆ ಬೆಳಕು ಚೆಲ್ಲುವ ಮಹತ್ವವಾದ ಸಂಶೋಧನೆಯಾಗಿದೆ.

ಇಷ್ಟಾದರೂ ಮುಸ್ಲಿಂ ರಾಜರನ್ನೂ ಇಲ್ಲಿನ ಜಾತಿವ್ಯವಸ್ಥೆ ಬಿಡಲಿಲ್ಲ. ಇದಕ್ಕೆ ಒಂದು ಉದಾಹರಣೆ ಬರಾನಿ ಬರೆದ ಫತ್ವ-ಎ-ಜಹನ್ದಾರಿ ಕೃತಿಯಲ್ಲಿ ಮುಸ್ಲಿಮರನ್ನು ವರ್ಗೀಕರಿಸಿರುವುದು. ಇದರ ಪ್ರಕಾರ ಮುಸ್ಲಿಮರನ್ನು ಅಷ್ರಫ್, ಅಜ್ಲಫ್ ಹಾಗೂ ಅರ್ಜಲ್ ಎಂದು ವರ್ಗೀಕರಿಸಲಾಯಿತು. ಅಷ್ರಫ್ ಎಂದರೆ ತುರ್ಕಿಸ್ಥಾನದಿಂದ ಬಂದವರು. ಅಜ್ಲಫ್ ಎಂದರೆ ಮತಾಂತರಗೊಂಡ ಕೆಳಜಾತಿಯವರು. ಅರ್ಜಲ್ ಎಂದರೆ ಮತಾಂತರಗೊಂಡ ಅಸ್ಪೃಶ್ಯರು. ಮತ್ತೊಂದೆಡೆ ಬರಾನಿಯು ’ಶರೀಯತ್ ಹಾಗೂ ಜಾತಿಪದ್ಧತಿ ನಡುವೆ ವೈರುಧ್ಯ ಎದುರಾದಲ್ಲಿ ಪ್ರಭುತ್ವವು ಶರೀಯತ್‌ಗಿಂತ ಸ್ಥಳೀಯ ಜಾತಿಪದ್ಧತಿಗೆ ಹೆಚ್ಚಿನ ಮಹತ್ವ ನೀಡಬೇಕು’ ಎಂದು ಹೇಳುತ್ತಾನೆ. ಹಲವು ಮುಸ್ಲಿಂ ಧಾರ್ಮಿಕರು ಹಿಂದೂಗಳ ಮೇಲೆಯೂ ಇಸ್ಲಾಂ ಕಾನೂನು ಅಥವಾ ಮರಣ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ತಿಳಿಸಬೇಕು ಎಂದು ಇಲ್ತಮಷ್‌ನಲ್ಲಿ ಕೇಳಿಕೊಂಡಾಗ ಅದನ್ನು ಆತನು ನಿರಾಕರಿಸಿದನು. ಆತನ ವಾಜಿರ್ ಹಿಂದೂಗಳ ಮೇಲೆ ಇಸ್ಲಾಂ ಕಾನೂನು ಹೇರುವುದು ಕಡಿಮೆ ಸಂಖ್ಯೆಯಲ್ಲಿರುವ ಮುಸ್ಲಿಮರಿಗೆ ಒಳ್ಳೆಯದು ಮಾಡದು ಎಂದು ಅಭಿಪ್ರಾಯ ಪಟ್ಟಿದ್ದನು. ನೆನಪಿರಲಿ ಇಸ್ಲಾಂ ಧರ್ಮ ಎಂದಿಗೂ ಧಾರ್ಮಿಕವಾಗಿ ಜಾತಿಪದ್ಧತಿಯನ್ನು ತತ್ವವನ್ನಾಗಿಸಿಕೊಳ್ಳಲಿಲ್ಲ. ಆದರೆ ಮುಸ್ಲಿಂ ರಾಜರುಗಳು ಸ್ಥಳೀಯ ಮೇಲ್ಜಾತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಆಡಳಿತ ಸುಲಲಿತಗೊಳಿಸಿಕೊಳ್ಳಲು ಜಾತಿಪದ್ಧತಿಯನ್ನು ವಿರೋಧಿಸುವ ಯಾವ ಕೆಲಸವನ್ನೂ ಮಾಡಲಿಲ್ಲ. ಸೂಫಿ ಸಂತರ ಪ್ರಭಾವ ಇದಕ್ಕೆ ಅಪವಾದವಾಗಿದೆ.

ವಿಜಯನಗರ ಸಾಮ್ರಾಜ್ಯವನ್ನುದ್ದೇಶಿಸಿ ಬಾರ್ಬೋಸಾ ಹೇಳುವಂತೆ ’ಸೈನ್ಯದಲ್ಲಿ ಎಲ್ಲಾ ವರ್ಗದ ಜನರೂ ಇದ್ದರು’ ಎಂದಿರುವುದು ಅಸ್ಪೃಶ್ಯರೂ ಸೈನಿಕರಾಗಿದ್ದರು ಎಂಬುದಕ್ಕೆ ಸಾಕ್ಷಿ ನೀಡುತ್ತದೆ. ಜೊತೆಗೆ ದೇವದಾಸಿ ಪದ್ಧತಿ ಮತ್ತು ವೇಶ್ಯಾವೃತ್ತಿಯೂ ಸಹ ಢಾಳಾಗಿ ಆಚರಣೆಯಲ್ಲಿತ್ತು. ವೇಶ್ಯಾವೃತ್ತಿ ಅಧಿಕೃತವಾಗಿ ಸರ್ಕಾರದ ಮನ್ನಣೆಯನ್ನು ಪಡೆದಿತ್ತಲ್ಲದೆ ಅದರ ಮೇಲೆ ತೆರಿಗೆ ವಿಧಿಸಿದ್ದರು. ಗುಲಾಮ ಪದ್ಧತಿಯೂ ಅಸ್ತಿತ್ವದಲ್ಲಿತ್ತು.

ಒಟ್ಟಾರೆ ಈ ಅರೆಊಳಿಗಮಾನ್ಯ ಕಾಲದಲ್ಲಿ ಸೂಫಿ-ನಾಥ-ದತ್ತ ಪಂಥಗಳ ಪ್ರಭಾವಕ್ಕೆ ಸಿಕ್ಕು ಅಸ್ಪೃಶ್ಯರು ಮೊಟ್ಟಮೊದಲ ಬಾರಿಗೆ ಸ್ಥಾಪಿತ ಆಧ್ಯಾತ್ಮದ ರುಚಿ ಕಂಡರು. ಬದಲಾಗುತ್ತಿದ್ದ ಚಾತುರ್ವರ್ಣ ಧರ್ಮ ಅಸ್ಪೃಶ್ಯರ ದೈವಗಳನ್ನು ತನ್ನ ತ್ರಿಮೂರ್ತಿ ದೇವಗಣಕ್ಕೆ ಸಮೀಕರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಅಸ್ಪೃಶ್ಯ ಸಂತರು ವೈಷ್ಣವ-ಶೈವ ಹಾಗೂ ಸೂಫಿ ಪಂಥದ ಪ್ರಭಾವದಿಂದಾಗಿ ಬ್ರಾಹ್ಮಣಶಾಹಿಯನ್ನು ಪ್ರಶ್ನಿಸುವ ಮಟ್ಟಕ್ಕೆ ಆಧ್ಯಾತ್ಮಿಕವಾಗಿ ಬೆಳೆದಿದ್ದರು. ಆದರೆ ಇದು ಅಸ್ಪೃಶ್ಯರ ವಿಮೋಚನೆಯ ಬದಲಿಗೆ ಅಸ್ಪೃಶ್ಯರು ಬ್ರಾಹ್ಮಣೀಕರಣಗೊಳ್ಳುವ ಪ್ರಕ್ರಿಯೆಗೆ ನಾಂದಿ ಹಾಡಿತು. ಸಾಮಾಜಿಕ ಹಾಗೂ ಆರ್ಥಿಕ ಸಂಗತಿಗಳ ದೃಷ್ಟಿಯಿಂದ ಸಾಮೂಹಿಕ
ಎಚ್ಚರಿಕೆಯನ್ನು ಅಸ್ಪೃಶ್ಯ ಸಂತ ಪರಂಪರೆ ನೀಡುವಲ್ಲಿ ಸೋತಿತು. ಆದರೆ ಸೂಫಿ ಪ್ರಭಾವದಿಂದಾಗಿ ಮತಾಂತರಗೊಂಡ ಅಸ್ಪೃಶ್ಯರು ಮೊದಲ ಬಾರಿಗೆ ಸಾಂಸ್ಥಿಕ ಧಾರ್ಮಿಕ ಕೇಂದ್ರ ಪ್ರವೇಶಿಸಿದ್ದು ಸುಳ್ಳಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ‘ಅಂಬೇಡ್ಕರ್ ಆ ಕಾಲದಲ್ಲಿ ಸಂವಿಧಾನ ಬರ್ದಿದ್ಕೋ, ನಮ್ಮಪ್ಪಾಮ್ಮ ಸ್ಕೂಲಿಗೆ ಕಳ್ಸಿದ್ಕೊ, ಇಷ್ಟೆಲ್ಲಾ ಜಗತ್ತು ತಿಳ್ಕೋಣಕ್ಕಾಯ್ತು’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆರ್‌ಟಿಐ ಕಾರ್ಯಕರ್ತ ಅಮಿತ್ ಜೇತ್ವಾ ಹತ್ಯೆ ಪ್ರಕರಣ: ಬಿಜೆಪಿಯ ಮಾಜಿ ಸಂಸದ ಸೇರಿ ಎಲ್ಲಾ...

0
ಆರ್‌ಟಿಐ ಕಾರ್ಯಕರ್ತ ಮತ್ತು ಪರಿಸರವಾದಿ ಅಮಿತ್ ಜೇತ್ವಾ ಹತ್ಯೆ ಪ್ರಕರಣದಲ್ಲಿ ಜುನಾಗಡದ ಬಿಜೆಪಿಯ ಮಾಜಿ ಸಂಸದ ದಿನು ಬೋಘಾ ಸೋಲಂಕಿ ಮತ್ತು ಇತರ ಆರು ಜನರನ್ನು ಗುಜರಾತ್ ಹೈಕೋರ್ಟ್‌ ಖುಲಾಸೆಗೊಳಿಸಿದೆ. ನ್ಯಾಯಮೂರ್ತಿಗಳಾದ ಎಎಸ್ ಸುಪೇಹಿಯಾ...