Homeಅಂಕಣಗಳುದಿಲ್ಬರ್ಟ್, ರೋಲ್ಡ್ ಡಾಲ್ ಮತ್ತು ಎಚ್ಚೆತ್ತ ಮಾಧ್ಯಮಗಳ ಸುತ್ತ...

ದಿಲ್ಬರ್ಟ್, ರೋಲ್ಡ್ ಡಾಲ್ ಮತ್ತು ಎಚ್ಚೆತ್ತ ಮಾಧ್ಯಮಗಳ ಸುತ್ತ…

- Advertisement -
- Advertisement -

ಮಾಧ್ಯಮ ಮತ್ತು ಪ್ರಕಾಶನ ಲೋಕಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಯುಕೆಗಳಲ್ಲಿ ಕಳೆದ ವಾರ ಎರಡು ಪ್ರಮುಖ ವಿದ್ಯಮಾನಗಳು ಭಾರಿ ಚರ್ಚೆ, ವಾದವಿವಾದಗಳಿಗೆ ಎಡೆಮಾಡಿಕೊಟ್ಟವು. ಜಗತ್ತಿನೆಲ್ಲೆಡೆ ಎಚ್ಚೆತ್ತ ಹಲವರು ಲೈಂಗಿಕ-ಜನಾಂಗೀಯ-ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಹೆಚ್ಚು ಸೂಕ್ಷ್ಮತೆಗಳನ್ನು ಬೆಳೆಸಿಕೊಳ್ಳುತ್ತಾ ಮುಂದುವರಿಯುತ್ತಿರುವ ಸಮಯದಲ್ಲಿ ಈ ವಿದ್ಯಮಾನಗಳು ಮಹತ್ವ ಪಡೆದುಕೊಂಡಿವೆ. ಹೆಚ್ಚು ಕಡಿಮೆ ಇಂತಹದ್ದೇ ಸಂಗತಿಗಳ ಬಗ್ಗೆ ಇಲ್ಲಿನ ಮಾಧ್ಯಮ ಲೋಕ ತಳೆಯುವ ನಿಲುವುಗಳಿಗೆ ಹೋಲಿಸಿದರೆ, ಭಾರತದಲ್ಲಿ ಹಲವು ವರ್ಷಗಳಿಂದ ನೂರಾರು ಅಲ್ಪಸಂಖ್ಯಾತ ಸಮುದಾಯಗಳು ಅನುಭವಿಸಿದ ಶೋಷಣೆ ಮತ್ತು ಅವಮಾನದ ನೋವುಗಳಿಗೆ ಸ್ಪಂದಿಸುವ ರೀತಿಯಲ್ಲಿ ಅಮೂಲಾಗ್ರ ಬದಲಾವಣೆಯ ತುರ್ತು ಅಗತ್ಯವನ್ನು ಮನಗಾಣಬಹುದು.

ದಿಲ್ಬರ್ಟ್ ಎಂಬುದು ಜಗತ್ತಿನಾದ್ಯಂತ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗುವ ಜನಪ್ರಿಯ ಕಾರ್ಟೂನ್ ಸ್ಟ್ರಿಪ್. ಕಾರ್ಪೊರೆಟ್ ಕಚೇರಿ ಸಂಸ್ಕೃತಿಯನ್ನು ವಿಮರ್ಶೆಗೊಡ್ಡಿ ವ್ಯಂಗ್ಯ ಮಾಡುವ ಈ ಕಾರ್ಟೂನ್ ಕಥೆಗಳಿಗೆ ಜಗತ್ತಿನಾದ್ಯಂತ ಅತ್ಯಧಿಕ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಆ ಕಾರ್ಟೂನ್ ಸ್ಟ್ರಿಪ್‌ಗಳ ಸಂಗ್ರಹಗಳು ಪುಸ್ತಕಗಳಾಗಿ ಮೂಡಿಬಂದು ಲಕ್ಷಾಂತರ ಪ್ರತಿಗಳು ಬಿಕರಿಯಾಗಿವೆ. ದಿಲ್ಬರ್ಟ್ ಸೃಷ್ಟಿಕರ್ತ ಸ್ಕಾಟ್ ಆಡಮ್ಸ್ ಇತ್ತೀಚಿಗೆ ಯುಟ್ಯೂಬ್ ವಿಡಿಯೋ ಒಂದರಲ್ಲಿ ಕಪ್ಪು ಜನರ ಮೇಲೆ ಮಾಡಿದ ಜನಾಂಗೀಯ ನಿಂದನೆ, ಅವರ ವಿರುದ್ಧ ಮಾಧ್ಯಮಗಳು ತಿರುಗಿಬೀಳಲು ಕಾರಣವಾಗಿದೆ. “ಕಪ್ಪು ಜನರಿಂದ ಬಿಳಿಯರು ದೂರವಿರಬೇಕು” ಎಂದಿರುವುದಲ್ಲದೆ ತಮ್ಮ ಅಭಿಪ್ರಾಯಗಳನ್ನು ಆನ್‌ಲೈನ್ ಪೋಲ್ ಒಂದರಲ್ಲಿ ಒಪ್ಪದ ಕಪ್ಪು ಜನರನ್ನು ’ದ್ವೇಷದ ಗುಂಪು’ ಎಂದಿದ್ದಾರೆ. ಇಂತಹ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವುದರಲ್ಲಿ ಸ್ಕಾಟ್ ಮೊದಲಿನಿಂದಲೂ ಸಿದ್ಧಹಸ್ತರು ಎನ್ನುತ್ತವೆ ಹಲವು ವರದಿಗಳು. ಈ ಹೇಳಿಕೆಯ ನಂತರ, ’ದ ನ್ಯೂಯಾರ್ಕ್ ಟೈಮ್ಸ್’, ’ದ ವಾಷಿಂಗ್ಟನ್ ಪೋಸ್ಟ್’ ಹಾಗೂ ಸುಮಾರು 200 ಪತ್ರಿಕೆಗಳನ್ನು ಹೊರತರುವ ’ಯುಎಸ್‌ಎ ಟುಡೆ ನೆಟ್‌ವರ್ಕ್’ ಸೇರಿದಂತೆ ನೂರಾರು ಪತ್ರಿಕೆಗಳು ಇನ್ನುಮುಂದೆ ದಿಲ್ಬರ್ಟ್ ಕಾಮಿಕ್ ಸ್ಟ್ರಿಪ್ ಪ್ರಕಟಿಸುವುದಿಲ್ಲವೆಂದು ದೂರ ಸರಿದಿವೆ. ಆದರೆ, ತನ್ನ ಮಾತುಗಳನ್ನು ಸಮರ್ಥಿಸಿಕೊಂಡಿರುವ ಸ್ಕಾಟ್ ವಿಷಾದವನ್ನು ವ್ಯಕ್ತಪಡಿಸುವ ಗೋಜಿಗೂ ಹೋಗಿಲ್ಲ.

ಜಗತ್ತಿನ ಕೆಲವು ದೇಶಗಳಲ್ಲಾದರೂ ಜನಾಂಗೀಯ, ಲಿಂಗತ್ವ ಅಲ್ಪಸಂಖ್ಯಾತರ ನಿಂದನೆ-ಅಪಮಾನಗಳನ್ನು ಗಂಭೀರವಾಗಿ ಪರಿಗಣಿಸಿ, ಅಂತಹ ಅಪರಾಧವೆಸಗುವವರನ್ನು ಹಲವು ರೀತಿಯಲ್ಲಿ ತರಾಟೆಗೆ ತೆಗೆದುಕೊಳ್ಳುವ ಕೆಲಸ ನಡೆಯುತ್ತಿದೆ. ಇದು ಕನಿಷ್ಠಪಕ್ಷ ಮುಂದಿನ ಪೀಳಿಗೆಯನ್ನು ಮತ್ತಷ್ಟು ಸೂಕ್ಷ್ಮವಾಗಿಸುವ, ದಮನಿತ ಸಮುದಾಯಗಳ ನೋವನ್ನು ಅರ್ಥ ಮಾಡಿಕೊಳ್ಳಲು, ಸವಲತ್ತಿನ ತಾರತಮ್ಯದ ತಿಳಿವಳಿಕೆಗೆ ಸಹಾಯ ಮಾಡಲಿದೆ. ಆದರೆ ಇಂತಹ ಕೆಲಸವನ್ನು ’ಕ್ಯಾನ್ಸಲ್ ಕಲ್ಚರ್’ ಎಂಬ ಹೆಸರಿನಲ್ಲಿ ನಿರಾಕರಿಸುವ ಪಡೆಗೂ ಕಮ್ಮಿಯೇನಿಲ್ಲ. ಅಂತಹ ಪಡೆಯ ಅಧಿನಾಯಕನಾಗಿ ಇತ್ತೀಚೆಗೆ ಅವತರಿಸಿರುವ ವ್ಯಕ್ತಿ ಇಲಾನ್ ಮಸ್ಕ್. ಈತ ಟ್ವಿಟ್ಟರ್‌ನಲ್ಲಿ ದಿಲ್ಬರ್ಟ್ ಕಾಮಿಕ್ಸ್‌ಅನ್ನು ಪ್ರಕಟಿಸುವುದಿಲ್ಲವೆಂದ ಮಾಧ್ಯಮಗಳನ್ನೇ ’ರೇಸಿಸ್ಟ್’ ಅಂದಿರುವುದಲ್ಲದೆ, ’ಬಹಳ’ ಕಾಲದವರೆಗೆ ಯುಎಸ್ ಮಾಧ್ಯಮ ಬಿಳಿಯೇತರರ ವಿರುದ್ಧ ಜನಾಂಗೀಯ ನಿಂದಕನಾಗಿತ್ತು, ಈಗ ಬಿಳಿಯರು ಮತ್ತು ಏಶಿಯನ್ನರ ವಿರುದ್ಧ ರೇಸಿಸ್ಟ್ ಆಗಿದೆ ಎಂದು ಪ್ರಲಾಪಿಸಿದ್ದಾರೆ. ತಾನು ಫ್ರೀ ಸ್ಪೀಚ್ ಸಮರ್ಥಕ ಎಂದು ಬಿಂಬಿಸಿಕೊಳ್ಳುವ ಈತ, ಇತ್ತೀಚೆಗಷ್ಟೇ ದ್ವೇಷ ಕಾರುವ ಹಲವು ಬಲಪಂಥೀಯರ ಟ್ವಿಟ್ಟರ್ ಅಕೌಂಟ್‌ಗಳನ್ನು ಮರುಸ್ಥಾಪಿಸಿ ಚರ್ಚೆಗೆ ಗ್ರಾಸವಾಗಿದ್ದರು. ಯಾವುದು ಅಭಿವ್ಯಕ್ತಿ ಸ್ವಾತಂತ್ರ್ಯ, ಯಾವುದು ಜನಾಂಗೀಯ ನಿಂದನೆ ಎಂಬುದ ನಡುವಿನ ವ್ಯತ್ಯಾಸವನ್ನು ಮರೆಮಾಚುವ ಇಂತಹವರಿಗೆ, ಜಗತ್ತು ಮಾನವೀಯ ಮೌಲ್ಯಗಳೊಂದಿಗೆ ಸಹನೀಯವಾಗಿ ಬೆಳೆಯುವುದು ಬೇಕಿಲ್ಲ. ತಮ್ಮ ಪ್ರಿವಿಲೆಜ್‌ಗಳಿಗೆ ಎಂದಿಗೂ ಕುಂದುಕೊರತೆಯಾಗದಂತೆ ಕಾಯುವುದೇ ಇಂತಹ ’ಫ್ರೀ ಸ್ಪೀಚ್’ನ ಕುಖ್ಯಾತ ವ್ಯಾಖ್ಯಾನಗಳ ಉದ್ದೇಶ.

ಇದನ್ನೂ ಓದಿ: ಸಿಸೋಡಿಯಾ, ಜೈನ್ ಬಿಜೆಪಿ ಸೇರಿದರೆ ನಾಳೆಯೇ ಜೈಲಿನಿಂದ ಹೊರಬರುತ್ತಾರೆ: ಅರವಿಂದ್ ಕೇಜ್ರಿವಾಲ್

ಇರಲಿ, ಕೆಲವು ತಿಂಗಳುಗಳ ಹಿಂದೆ, ನವೆಂಬರ್ 2022ರ ಕೊನೆಯಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ’ಪತಿಯ ಆಜ್ಞೆ ಪಾಲಿಸಬೇಕು’ ಎಂಬ ಶೀರ್ಷಿಕೆಯಡಿಯಲ್ಲಿ ಮಹಿಳೆಯರನ್ನು ನಿಂದಿಸುವ ಒಂದು ಅಂಕಣ ’ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ’ ಎಂಬುವವರು ಬರೆದರು. ಜಾರಿಣಿ, ಕೆಟ್ಟ ಕೆಲಸದಲ್ಲಿ ಪ್ರವೃತ್ತಳಾದವಳು, ಕೆಟ್ಟ ಹೆಂಗಸು – ಹೀಗೆ ಪುರುಷಪ್ರಧಾನ ಮಹಿಳಾ ನಿಂದಕ ಗುಣವಾಚಕಗಳಿಂದ ತುಂಬಿದ್ದ ಆ ಬರಹದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆ ಕೇಳಿಬಂತು. ಬೇರೆ ಎಲ್ಲಿಯಾದರೂ ಆಗಿದ್ದರೆ, ಇಂತಹವರ ಅಂಕಣವನ್ನು ಇನ್ನು ಮುಂದೆ ಯಾವುದೇ ಪತ್ರಿಕೆಗಳಲ್ಲಿ ಪ್ರಕಟಿಸಲು ಹಿಂಜರಿಯುವ ವಾತಾವರಣ ಉಂಟಾಗಬೇಕತ್ತು. ಆದರೆ ಮುಂದಿನ ದಿನ ಒಂದು ಉಡಾಫೆಯ ’ವಿಷಾದ’ವನ್ನು ಪ್ರಕಟಿಸುವುದರೊಂದಿಗೆ ಅವರ ಅಂಕಣ ಬರಹ ಅದೇ ಪತ್ರಿಕೆಯಲ್ಲಿ ಮುಂದುವರಿಯಿತು. ಇಲ್ಲಿನ ಮುಖ್ಯವಾಹಿನಿ ಮಾಧ್ಯಮಗಳು ಅಲ್ಪಸಂಖ್ಯಾತ ಸಮುದಾಯಗಳ ನಿಂದನೆಯ ವಿರುದ್ಧ ಗಟ್ಟಿ ನಿಲುವು ತೆಗೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಲು ನಾವಿನ್ನು ಎಷ್ಟು ಹೆಜ್ಜೆ ಸವೆಸಬೇಕೋ! ಇದು ಇಲ್ಲಿನ ಶೋಚನೀಯ ಸ್ಥಿತಿಗೆ ಕನ್ನಡಿ ಹಿಡಿದಂತಿದೆ.

ಇಲಾನ್ ಮಸ್ಕ್

ಈ ಬರಹದ ಮೊದಲಿನಲ್ಲಿ ಹೆಸರಿಸದೇ ಹೇಳಿದ ಮತ್ತೊಂದು ವಿದ್ಯಮಾನ ರೋಲ್ಡ್ ಡಾಲ್ ಎಂಬ ಮಕ್ಕಳ ಕಥೆ-ಕಾದಂಬರಿ ಬರೆಯುವ ಜನಪ್ರಿಯ ಲೇಖಕನ ಬರಹಗಳಿಗೆ ಸಂಬಂಧಿಸಿದ್ದು. ಮಕ್ಕಳ ಬರವಣಿಗೆಯಲ್ಲಿ ದೊಡ್ಡ ಹೆಸರಾದ ಡಾಲ್ ಅವರ ಪುಸ್ತಕಗಳ ಪ್ರತಿಗಳು (ಇಂಗ್ಲಿಷ್ ಭಾಷೆಯಲ್ಲಿ ಮುಖ್ಯವಾಗಿ) ಜಗತ್ತಿನಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಮಾರಾಟವಾಗಿವೆ. ಲಕ್ಷಾಂತರ ಮಕ್ಕಳು ಅವುಗಳನ್ನು ಓದಿ ಬೆಳೆದಿದ್ದಾರೆ. ಅಭಿರುಚಿಗಳನ್ನು ಕೂಡ ಆ ಓದಿನಿಂದ ಬೆಳೆಸಿಕೊಂಡಿರುವ ಸಾಧ್ಯತೆಯಿದೆ. ’ಮೆಟಿಲ್ಡಾ’, ’ಬಿಎಫ್‌ಜಿ’, ’ಚಾರ್ಲಿ ಅಂಡ್ ಚಾಕಲೆಟ್ ಫ್ಯಾಕ್ಟರಿ’ ಮುಂತಾದ ಅವರ ಕಥೆಗಳು ಸಿನಿಮಾಗಳಾಗಿವೆ. ಇಂತಹ ಜನಪ್ರಿಯ ಕಥೆಗಾರನ ಕಥೆಗಳಲ್ಲಿ ಬಾಡಿ ಶೇಮಿಂಗ್ ಮಾಡುವ, ಜನಾಂಗೀಯ ನಿಂದನೆಯ, ಸ್ತ್ರೀಯರನ್ನು ಅವಮಾನಿಸುವ ಪದಪುಂಜಗಳು ಯಥೇಚ್ಛವಾಗಿವೆ. ಇಂತಹ ಪದಪುಂಜಗಳನ್ನು ಬದಲಿಸಿದ ತಿದ್ದುಪಡಿಯನ್ನು ಅವರ ಕಥೆಗಳಲ್ಲಿ ತಂದು ಮರುಪ್ರಕಟಣೆ ಮಾಡುವ ಕೆಲಸಕ್ಕೆ ’ಪಫಿನ್’ ಪ್ರಕಾಶನ ಸಂಸ್ಥೆ ಮುಂದಾಗಿದೆ. ಉದಾಹರಣೆಗೆ ’ಫ್ಯಾಟ್ & ಎನಾರ್ಮಸ್’ ಎಂಬ ಕಡೆಯಲ್ಲಿ ಫ್ಯಾಟ್ ಅಥವಾ ದಡಿಯ ಎಂಬುದನ್ನು ತೆಗೆದು ’ಎನಾರ್ಮಸ್’ (ಬೃಹದಾಕಾರದ) ಅನ್ನು ಉಳಿಸಿಕೊಳ್ಳಲಾಗಿದೆಯಂತೆ. ’ಅಗ್ಲಿ ಅಂಡ್ ಬೀಸ್ಟ್ಲಿ’ ಎಂಬ ಕಡೆಗೆ ಅಗ್ಲಿ ಅಥವಾ ಕುರೂಪ ಅನ್ನುವುದನ್ನು ಕೈಬಿಟ್ಟು ಬೀಸ್ಟ್ಲಿ ಅಥವಾ ಅಹಿತಕರ ಎಂಬುದನ್ನು ಉಳಿಸಿಕೊಳ್ಳಲಾಗಿದೆ. ಕೆಲವು ಕಡೆ ಲಿಂಗತ್ವ ತಟಸ್ಥತೆಯನ್ನು ತರಲು ಪ್ರಯತ್ನಿಸಲಾಗಿದೆ. ಇನ್ನೂ ಕೆಲವು ಕಡೆ ಜನಾಂಗೀಯ ನಿಂದನೆಯ ರೂಪ ಪಡೆಯುವ ಪದಗಳನ್ನು ಬದಲಿಸಲಾಗಿದೆಯಂತೆ. ಇದು ಸಮಗ್ರವಾದ ಬದಲಾವಣೆ ಅಲ್ಲದಿದ್ದರೂ, ಜನಪ್ರಿಯ ಕಲೆಯೊಂದು ಮಕ್ಕಳ ಮನಸ್ಸಿನಲ್ಲಿ ಸುಲಭವಾಗಿ ಬಿತ್ತುಬಿಡಬಹುದಾದ ನಿಂದನಾತ್ಮಕ ಮನೋಧೋರಣೆಯ ಬಗ್ಗೆ ಕನಿಷ್ಠ ಪಕ್ಷ ಎಚ್ಚರಿಕೆ ಮೂಡಿಸುವ ದಿಟ್ಟಹೆಜ್ಜೆಯಾಗಿದೆ. ಆದರೆ ಇದನ್ನೂ ಸೆನ್ಸಾರ್‌ಶಿಪ್ ಎಂದು ಕರೆದು, ಈ ಕ್ರಮವನ್ನು ವಿರೋಧಿಸುವ ಕೂಗು ಎದ್ದಿದೆ.

ಬ್ರಿಟನ್‌ನ ಪ್ರಧಾನ ಮಂತ್ರಿ ರಿಶಿ ಸುನಕ್ ಅವರು ಕೂಡ ಈ ತಿದ್ದುಪಡಿಯನ್ನು ವಿರೋಧಿಸಿದ್ದಾರೆ. ಜನಪ್ರಿಯ ಕಾದಂಬರಿಕಾರ ಸಲ್ಮಾನ್ ರಶ್ದಿ ಇದನ್ನು ಸೆನ್ಸಾರ್‌ಶಿಪ್ ಎಂದಿದ್ದಾರೆ. ಆದರೆ, ಸೆನ್ಸಾರ್‌ಶಿಪ್‌ನಲ್ಲಿ ಸಾಮಾನ್ಯವಾಗಿ ಎದ್ದುಕಾಣುವ ಅಧಿಕಾರ ದುರ್ಬಳಕೆ ಇಲ್ಲಿ ಎಲ್ಲಿದೆಯೋ ದೇವರೇ ಬಲ್ಲ. ಈಗಾಗಲೇ ಹಳೆಯ ಆವೃತ್ತಿಯ ಲಕ್ಷಾಂತರ ಪ್ರತಿಗಳು ಜಗತ್ತಿನಾದ್ಯಂತ ಪಸರಿಸಿಯಾಗಿದೆ. ಇಂತಹ ಸಮಯದಲ್ಲಿ ಹಲವು ದಮನಿತ ಸಮುದಾಯಗಳ ಸೂಕ್ಷ್ಮ ಓದುಗರ ಸ್ಪಂದನೆಗೆ ಓಗೊಟ್ಟು (ಈ ಪ್ರಯತ್ನ ಪ್ರಾಮಾಣಿಕವಾದದ್ದು ಎಂಬ ನಂಬಿಕೆಯೊಂದಿಗೆ) ಈ ತಿದ್ದುಪಡಿಯ ಕೆಲಸ ವಿನಯಪೂರ್ವಕವಾದ ನಡೆಯಂತೆ ಕಾಣುತ್ತದೆ. ಶೋಷಕ ಸಮುದಾಯಗಳಿಗೆ ತಮ್ಮ ನಡೆ ಮತ್ತು ಮಾರ್ಗಗಳನ್ನು ಸರಿಪಡಿಸಿಕೊಳ್ಳುವ ಅವಕಾಶವೆಂಬಂತೆ ಈ ಕ್ರಮ ಕಾಣುತ್ತದೆ. ಇದನ್ನು ಸೆನ್ಸಾರ್‌ಶಿಪ್ ಎಂದು ಕರೆಯುವವರಿಗೆ ಅಧಿಕಾರ ಸಂಬಂಧಗಳ ಕುರುಡು ಆವರಿಸಿರುವುದು ಮೇಲ್ನೋಟಕ್ಕೇ ಗೋಚರವಾಗುತ್ತದೆ.

ಡಾಲ್ ಅವರ ಕೃತಿಗಳ ಸಿನಿಮಾ ಅಡವಳಿಕೆಗಾಗಿ ನೆಟ್‌ಫ್ಲಿಕ್ಸ್‌ನಂತ ದೈತ್ಯ ಒಟಿಟಿ ವೇದಿಕೆ ಹಕ್ಕುಗಳನ್ನು ವಶಪಡಿಸಿಕೊಂಡಿದೆ. ಈಗ ತೆಗೆದುಕೊಳ್ಳಲಾಗುತ್ತಿರುವ ತಿದ್ದುಪಡಿ ಕ್ರಮ ಬಹಳ ಸೂಪರ್‌ಫಿಶಿಯಲ್ ಆದಂತದ್ದು. ತಾವು ಒಳಗೊಳ್ಳುವ ಹೊಸಹೊಸ ಕಾರ್ಯಕ್ರಮಗಳಲ್ಲಿ ಇಂತಹ ಸಂವೇದನೆಯನ್ನು ಈ ಒಟಿಟಿ ವೇದಿಕೆಗಳು ತೋರಿಸಬೇಕು. ಪ್ರಕಾಶನ ಸಂಸ್ಥೆಗಳು ಹೊಸ ಜಗತ್ತಿಗೆ ಹೊಸ ಕಥೆಗಳನ್ನು ಹೇಳುವಲ್ಲಿ ಇಂತಹ ಸಂವೇದನೆಯನ್ನು ಅಳವಡಿಸಿಕೊಳ್ಳಬೇಕು ಎಂಬ ಟೀಕೆಗಳಲ್ಲಿ ಹುರುಳಿದ್ದರೂ, ಡಾಲ್ ಪುಸ್ತಕಗಳಲ್ಲಿ ತಿದ್ದುಪಡಿ ಮಾಡುತ್ತಿರುವ ಕ್ರಮದಲ್ಲಿ ಯಾವುದೇ ರೀತಿಯ ಸೆನ್ಸಾರ್‌ಶಿಪ್ ಅಂತೂ ಕಾಣಸಿಗುವುದಿಲ್ಲ. ನಮ್ಮಲ್ಲಿ ಕೂಡ ಮಕ್ಕಳ ಕಥೆಗಳು ಬುಡಕಟ್ಟು-ದಮನಿತ ಸಮುದಾಯದ ವ್ಯಕ್ತಿಗಳನ್ನು ವಿಚಿತ್ರವಾಗಿ, ನಿಂದನಾತ್ಮಕವಾಗಿ ಚಿತ್ರಿಸುವ ನೂರಾರು ಕಥೆಗಳಿವೆ. ಅಂತಹವನ್ನು ಕೊನೇ ಪಕ್ಷ ಮುರಿದು ಮರುಕಟ್ಟಿ ಹೇಳುವ ಕೆಲಸವಾದರೂ ಪರಿಣಾಮಕಾರಿಯಾಗಿ ಆಗಬೇಕಲ್ಲವೇ?

ಇದನ್ನೂ ಓದಿ: ‘ನಾನಲ್ಲ, ನೀವೇ ಅವರ ಟಾರ್ಗೆಟ್’: ದೆಹಲಿ ಸಿಎಂ ಕೇಜ್ರಿವಾಲ್‌ಗೆ ಸಿಸೋಡಿಯಾ ಪತ್ರ

ಯುಎಸ್‌ನಲ್ಲಿನ ಘಟಿಸಿದ ಮತ್ತೊಂದು ಆಶಾದಾಯಕ ವಿದ್ಯಮಾನದಲ್ಲಿ, ಸಿಯಾಟೆಲ್ ನಗರ ಜಾತಿಯನ್ನೂ ಜನಾಂಗವೆಂದು ಪರಿಗಣಿಸಿ ಜಾತಿ ತಾರತಮ್ಯವನ್ನು ನಿಷೇಧಿಸಿ ಕಾನೂನು ಜಾರಿಗೊಳಿಸಿದೆ. ಆದರೆ, ನಮ್ಮಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ನಿಂದಿಸಿ, ದಲಿತರು ಮತ್ತು ತಳ ಸಮುದಾಯಗಳಿಗೆ ಅವಮಾನ ಮಾಡುವ ಕಿರು ಹಾಸ್ಯ ನಾಟಕವನ್ನು ’ಪ್ರತಿಷ್ಠಿತ’ ಕಾಲೇಜೊಂದರಲ್ಲಿ ಪ್ರದರ್ಶಿಸಲಾಗುತ್ತದೆ. ಒಂದು ಕಾಲೇಜಿನಲ್ಲಿ ಅದಕ್ಕೆ ಪ್ರಶಸ್ತಿಯನ್ನೂ ನೀಡಲಾಗುತ್ತದೆ. ಜಗತ್ತಿನಲ್ಲಿ ಹಲವೆಡೆ ಮಾಧ್ಯಮಗಳು, ಪ್ರಕಾಶನ ಸಂಸ್ಥೆಗಳು, ಕಾಲೇಜು-ವಿಶ್ವವಿದ್ಯಾಲಯಗಳು ಜನಾಂಗೀಯ ನಿಂದನೆಯ ವಿರುದ್ಧ ಕಠಿಣ ನಿಲುವುಗಳನ್ನು ತಳೆದು, ಪ್ರಾತಿನಿಧ್ಯ ಸರಿಪಡಿಸಿದ ಸಮಸಮಾಜಕ್ಕೆ ಬುನಾದಿ ಹಾಕಲು ಪ್ರಯತ್ನಿಸುವಾಗ ನಾವೆಲ್ಲೋ ಹಿಂದಕ್ಕೆ ಚಲಿಸುತ್ತಿರುವಂತೆ ಭಾಸವಾಗುತ್ತಿದೆ. ಇನ್ನಾದರೂ ಎಚ್ಚೆತ್ತುಕೊಳ್ಳುವ ಕೆಲಸಕ್ಕೆ ಪ್ರಾಮಾಣಿಕವಾಗಿ ಶ್ರಮಿಸಬೇಕಿದೆ. ’ವೋಕ್’ ಸಂಸ್ಕೃತಿ ಇದೆಂದು ಅದನ್ನು ತುಚ್ಛವಾಗಿ ಕಾಣುವವರ ನಡುವೆಯೂ ಅಲ್ಪಸಂಖ್ಯಾತ ಮತ್ತು ತಳ ಸಮುದಾಯಗಳ ಆಗ್ರಹಗಳ ಬಗ್ಗೆ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳುವುದನ್ನು ನಾವಿಲ್ಲಿ ಕಲಿಯಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...