Homeಕರ್ನಾಟಕಸಿ.ಟಿ.ರವಿಯ ಮಾಂಸ ಭಕ್ಷಣೆಯೂ ಭಟ್ಕಳ ಬಿಜೆಪಿಯ ಬಣ ಬಡಿದಾಟವೂ!

ಸಿ.ಟಿ.ರವಿಯ ಮಾಂಸ ಭಕ್ಷಣೆಯೂ ಭಟ್ಕಳ ಬಿಜೆಪಿಯ ಬಣ ಬಡಿದಾಟವೂ!

- Advertisement -
- Advertisement -

ತಳ ಸಮುದಾಯದ ಆಹಾರ ಪದ್ಧತಿ ಪ್ರಶ್ನಿಸುವ, ಗೇಲಿ ಮಾಡುವ ಧರ್ಮಕಾರಣದ ಈ ಕಾಲಘಟ್ಟದಲ್ಲಿ ಮಾಂಸಾಹಾರ ಉಂಡು ದೇಗುಲ ಪ್ರವೇಶಿಸುವ ’ಅಪಚಾರ’ ವಿವಾದ, ಹಿಂದುತ್ವ ಓಟ್ ಬ್ಯಾಂಕ್ ರಾಜಕಾರಣದ ಒಂದು ವರಸೆ ಎಂಬುದರಲ್ಲಿ ಈಗ ಯಾವ ಸಂಶಯವೂ ಉಳಿದಿಲ್ಲ. ಕ್ಷುಲ್ಲಕ ಸಂಗತಿಗಳನ್ನು ವಾಟ್ಸ್‌ಪ್-ಯೂಟ್ಯೂಬ್ ಯೂನಿವರ್ಸಿಟಿಯ ಮೂಲಕ ಹಬ್ಬಿಸಿ, ಅದನ್ನು ರಾತ್ರೋರಾತ್ರಿ ಮತ ಧ್ರುವೀಕರಣಕ್ಕೆ ದಾಳವಾಗಿಸುವ ಕುತ್ಸಿತ ಮುತ್ಸದ್ಧಿಗಳು ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಚುರುಕಾಗಿದ್ದವು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿ ಧರ್ಮದ್ರೋಹ ಮಾಡಿದ್ದಾರೆಂದು ಹುಯಿಲೆಬ್ಬಿಸಿದ್ದರು.

ಇದಿಲ್ಲಿಗೇ ನಿಲ್ಲಲಿಲ್ಲ; ಕೆಲ ತಿಂಗಳ ಹಿಂದೆ ಸಿದ್ದರಾಮಯ್ಯ ಕೊಡಗಿನ ದೇಗುಲವೊಂದಕ್ಕೆ ಮಾಂಸ ಉಂಡು ಪ್ರವೇಶಿಸಿದ್ದಾರೆ ಎಂದು ಕೇಸರಿ ಪಡೆ ಬೊಬ್ಬೆಹೊಡೆದಿತ್ತು. ವಿಪರ್ಯಾಸವೆಂದರೆ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಾಬಾ ಬುಡನ್‌ಗಿರಿ-ದತ್ತ ಪೀಠ ವಿವಾದದ ಹಿರೇಮಣಿ, ಕಟ್ಟರ್ ಹಿಂದುತ್ವ ಪ್ರತಿಪಾದಕ ಸಿ.ಟಿ.ರವಿ ಇಂತಹದ್ದೇ ’ಮಾಂಸಾಹಾರ ಮತ್ತು ದೇವರು’ ಪ್ರಹಸನದಲ್ಲಿ ಸಿಲುಕಿ ’ಮಿಂಚು’ತ್ತಿರುವುದು; ಜೇಡ ತಾನೆ ಹೆಣೆದ ಬಲೆಯಲ್ಲಿ ಸಿಕ್ಕಿಬಿದ್ದು ಒದ್ದಾಡಿದಂತಿದೆ ಸಿ.ಟಿ.ರವಿ ಪೀಕಲಾಟ ಎಂದು ಬಿಜೆಪಿಯ ಶೂದ್ರ ಸಮೂಹ ಆಡಿಕೊಳ್ಳುವಂತಾಗಿದೆ.

ಕಾರವಾರದಲ್ಲಿ ಕಳೆದ ರವಿವಾರ (19.2.2023) ಜರುಗಿದ ಶಿವಾಜಿ ಜಯಂತಿಗೆ ಹೋಗಿದ್ದ ಸಿ.ಟಿ.ರವಿ ವಾಪಸ್ ಬರುವಾಗ ಭಟ್ಕಳದ ಬಿಜೆಪಿ ಶಾಸಕ ಸುನೀಲ್ ನಾಯ್ಕ್ ಮನೆಗೆ ಕರಾವಳಿಯ ಸ್ವಾದಿಷ್ಠ ಬಾಡೂಟ-ಮೀನೂ ಸವಿಯಲೆಂದು ಹೋಗಿದ್ದರು. ಅಲ್ಲಿ ಅವರಿಗಾಗಿ ವಿಶೇಷ ಆಸಕ್ತಿಯಿಂದ ಇಸ್ವೋಣ (ಎಂಜಲ್) ಮತ್ತಿತರ ’ಪ್ರತಿಷ್ಠಿತ’ ಮೀನು ಹಾಗು ಅರಬ್ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಚಿಕನ್ ಆಲ್‌ಫಾಮ್ ಖಾದ್ಯ ತರಿಸಲಾಗಿತ್ತು. ಭಟ್ಕಳದಲ್ಲಿ ಪ್ರಸಿದ್ಧವಾಗಿರುವ ನವಾಯತ ಮುಸ್ಲಿಮರ “ಆಲ್ ಖಲೀಜ್” ಹೋಟೆಲ್ ಆಲ್‌ಫಾಮ್ ಚಿಕನ್‌ಗೆ ಹೆಸರುವಾಸಿ; ಅಲ್ಲಿಂದಲೇ ಅದನ್ನು ತರಿಸಲಾಗಿತ್ತು ಎಂಬುದು ಈಗ ಎಲ್ಲರಿಗೂ ತಿಳಿದ ಸಂಗತಿ. ಸಂಘಿ ಸರದಾರರ ಕೆಂಗಣ್ಣಿಗೆ ಗುರಿಯಾಗಿರುವ ಶಾಸಕ ಸುನೀಲ್ ನಾಯ್ಕ್ ಬಿಜೆಪಿಯ ಆಯಕಟ್ಟಿನ ಮುಖಂಡ ರವಿಯವರನ್ನು ಸಂಪ್ರೀತಗೊಳಿಸಲು ಭೂರಿ ಭೋಜನ ವ್ಯವಸ್ಥೆ ಮಾಡಿದ್ದರು; ತನ್ನ ಅಧ್ವರ್ಯದಲ್ಲಿ ಜೀರ್ಣೋದ್ಧಾರವಾದ ಭಟ್ಕಳದ ’ಮತೀಯ ಸೂಕ್ಷ್ಮ’ ಧಾರ್ಮಿಕ ಸ್ಥಳ ನಾಗಬನಕ್ಕೆ ಕರೆದೊಯ್ದು ಚುನಾವಣೆ ಹೊತ್ತಲ್ಲಿ ಮೈಲೇಜು ಪಡೆಯುವ ಯೋಜನೆ-ಯೋಚನೆ ಶಾಸಕ ಸುನೀಲ್ ನಾಯ್ಕರದಾಗಿತ್ತೆಂಬುದು ಭಟ್ಕಳದಲ್ಲಿ ’ಟಾಕ್ ಆಫ್ ದಿ ತಾಲೂಕ್’ ಆಗಿದೆ.

ರವಿ ಶಾಸಕ ಸುನೀಲ್ ಮನೆ ತಲುಪಿದಾಗ ಊಟದ ಸಮಯ ಮೀರಿ ಮಧ್ಯಾಹ್ನ ನಾಲ್ಕು ಗಂಟೆ ಸಮೀಪಿಸಿತ್ತು. ತರತರದ ಮತ್ಸ್ಯ-ಮಾಂಸದ ಭಕ್ಷ-ಭೋಜನ ಸವಿದ ನಂತರ ರವಿ ಒಡ್ಡೋಲಗ ಸೀದ ನಾಗಬನ ಮತ್ತು ಕರಿಬಂಟ ಹನುಮ ದೇವಾಲಯಕ್ಕೆ ತೆರಳಿತು. ನಾಗಬನಕ್ಕೆ ಸುತ್ತಲೂ ಕಬ್ಬಿಣದ ಗ್ರಿಲ್ ಅಳವಡಿಸಲಾಗಿದೆ. ಪೂಜೆ-ಪುರಸ್ಕಾರದ ಹೊತ್ತಲ್ಲಷ್ಟೆ ಇದರ ಬಾಗಿಲು ತೆರೆಯುತ್ತದೆ. ಬಾಗಿಲಲ್ಲಿ ಕೈಮುಗಿದು ನಿಂತ ರವಿಯವರಿಗೆ ಅಲ್ಲೆ ಹಾರ-ತುರಾಯಿಯ ಸನ್ಮಾನವೂ ಆಗಿದೆ.

ಹತ್ತಿರದಲ್ಲೆ ಇರುವ ಕರಿಬಂಟ ಹನುಮ ದೇವಾಲಯಕ್ಕೂ ರವಿ ಹೋಗಿದ್ದಾರೆ. ಆವರಣ ಪ್ರವೇಶಿಸಿ ಕೈಜೋಡಿಸಿ ಕಣ್ಮುಚ್ಚಿ ಭಕ್ತಿಯಿಂದ ಒಂದು ಕ್ಷಣ ನಿಂತಿದ್ದಾರೆ. ರವಿ ಬಾಡೂಟ-ಮೀನೂಟ ಮಾಡಿದ್ದು, ನಾಗಬನದ ಮುಂದೆ ಸನ್ಮಾನ ಸ್ವೀಕರಿಸಿದ್ದು ಮತ್ತು ಕರಿಬಂಟ ದೇವಸ್ಥಾನದ ಒಳಗೆ ಸುತ್ತಾಡಿದ್ದೆಲ್ಲ ಬಿಜೆಪಿಯ ಕಾರ್ಯಕರ್ತರ ಮೊಬೈಲ್‌ಗಳಲ್ಲಿ ಸೆರೆಯಾಗಿದೆ; ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಾರ್ತಾ ವಾಹಿನಿಗಳಲ್ಲಿ ಬಿತ್ತರವಾಗಿದೆ. ಸಿದ್ದರಾಮಯ್ಯ ಮೀನು ಭಕ್ಷ್ಯ ತಿಂದು ಗುಡಿ-ಗುಂಡಾರ ಸುತ್ತುವ ’ಕಾಫಿರ್’ ಎಂದು ಸುಳ್ಳಿನ ಮೇಲೆ ನಿಂತ ಧರ್ಮಸೂಕ್ಷ್ಮದ ವಿವಾದ ಸೃಷ್ಟಿಸುವ ಕೆಲಸಕ್ಕೆ ಕೈಹಾಕಿದ್ದ ಕೇಸರಿ-ಕಮಲ ಪಡೆಯ ಮುಂಚೂಣಿ ನಾಯಕ ಸಿ.ಟಿ.ರವಿಯವರೆ ಧರ್ಮ ಸಂಕಟಕ್ಕೆ ಸಿಲುಕಿದ್ದು ದೊಡ್ಡ ಸುದ್ದಿ-ಸದ್ದಾಯಿತು!

ಈ ’ಮಾಂಸ ಮತ್ತು ದೇವರು’ ಪ್ರಕರಣದ ಬಗ್ಗೆ ಸ್ಪಷ್ಟೀಕರಣ ಕೊಟ್ಟ ರವಿ, ತಾನು ನಾಗಬನಕ್ಕೆ ಹೋಗೇ ಇಲ್ಲ; ರೋಡಲ್ಲೆ ನಿಂತು ಕೈಮುಗಿದು ಬಂದಿದ್ದೇನೆ… ಮಾಂಸ ತಿನ್ನುವ ಜಾತಿಯಲ್ಲಿ ಹುಟ್ಟಿದ್ದೇನೆ… ತಿಂದಿದ್ದು ನಿಜ… ಹಾಗಂತ ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೇನೆ ಏನೀಗ ಎಂದು ಕೇಳಲು ನಾನೇನೂ ಸಿದ್ದರಾಮಯ್ಯ ಅಲ್ಲ… ದತ್ತ ವ್ರತ ಮಾಡುವ ಧರ್ಮನಿಷ್ಠ ನಾನು…” ಎಂದು ಮಾಮೂಲಿಯಾಗಿ ಅಸಂಬದ್ಧ ವರಸೆ ಪ್ರದರ್ಶಿಸಿದ್ದಾರೆ. ರವಿ ಹೇಳಿದ್ದು ಹಸಿ ಸುಳ್ಳು; ಶಾಸಕ ಸುನೀಲ್ ನಾಯ್ಕ್ ಮನೆಯ ಊಟದ ಕೋಣೆಯಿಂದ ನಾಗಬನದ ಕಬ್ಬಿಣದ ಗ್ರಿಲ್ ಬಾಗಿಲಿನ ತನಕ, ಅಲ್ಲಿಂದ ಕರಿಬಂಟ ದೇವಸ್ಥಾನಕ್ಕೆ ತೆರಳಿ, ಗರ್ಭಗುಡಿ ಮುಂದೆ ಕೈ ಮುಗಿದು ಹೊರಡುವವರೆಗಿನ ರವಿ ತಿರುಗಾಟವನ್ನು ಚಿತ್ರೀಕರಿಸಿ ಬಿಜೆಪಿಗರೆ ಹೊರಬಿಟ್ಟ ದೃಶ್ಯಾವಳಿಗಳು ಅಂದಿನ ಘಟನಾವಳಿಗಳನ್ನು ನಿಸ್ಸಂಶಯವಾಗಿ ಸಾಬೀತುಪಡಿಸುತ್ತಿವೆ; ಸಿದ್ದರಾಮಯ್ಯ ಪ್ರಕರಣದಲ್ಲಿ ಹಿಂದೆ ಆಡಿದ ಮಾತುಗಳಿಗೂ ಈಗ ತಾವು ಮಾಡಿದ ಕೆಲಸಕ್ಕೂ ಇರುವ ವೈರುಧ್ಯವನ್ನು ಹೇಗೋ ಸಮರ್ಥಿಸಿಕೊಳ್ಳುವ ಭರದಲ್ಲಿ ರವಿ ಮಾಂಸಾಹಾರ ತಿಂದು ತಾನು ದೇಗುಲಕ್ಕೆ ಹೋದರೆ ’ನಿವೇದನೆ’, ಸಿದ್ದರಾಮಯ್ಯ ಮೀನು ತಿಂದು ಗುಡಿ ಪ್ರವೇಶಿಸಿದರೆ ಅದು “ದಾಷ್ಟ್ರ್ಯ ” ಎಂದು ’ಮಾಂಸ ಮತ್ತು ದೇವರು’ ಪ್ರಹಸನವನ್ನು ವಿಂಗಡಿಸುವುದು ಹಾಸ್ಯಾಸ್ಪದ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಸಿ.ಟಿ ರವಿಯವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ: ಸಿದ್ದರಾಮಯ್ಯ

ಧರ್ಮಾಧಾರಿತ ಲಾಭ ತರಬಲ್ಲುದೆಂದು ತೀರಾ ಸಣ್ಣ ಘಟನೆಯನ್ನೂ ಬಿಡದೆ ದೊಡ್ಡ ಗಂಟಲಲ್ಲಿ ಮಾತಾಡುವ ಸಿ.ಟಿ.ರವಿಯಂಥ ಬಡಾ ಲೀಡರ್‌ರನ್ನೇ ಧರ್ಮ ಸಂಕಟಕ್ಕೆ ಸಿಲುಕಿಸಿ ಸತಾಯಿಸಿ ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದ ಭಟ್ಕಳ ಶಾಸಕರ ಮನೆಯ ಔತಣಕೂಟದ ಕತೆಯ ಜಾಡುಹಿಡಿದು ಹೊರಟರೆ ಸ್ಥಳೀಯ ಬಿಜೆಪಿಯೊಳಗಿನ ಬಣ ಬಡಿದಾಟ ಗೋಚರಿಸುತ್ತದೆ. ಹಿಂದುತ್ವದ ಚಟುವಟಿಕೆಯಿಂದ ಸದಾ ಸದ್ದುಮಾಡುವ ಸಿ.ಟಿ.ರವಿಯವರನ್ನು ನಾಗಬನ-ಕರಿಬಂಟ ದೇವಸ್ಥಾನಕ್ಕೆ ಕರೆದೊಯ್ದು ಪ್ರಚಾರ ಪಡೆದರೆ ಹಿಂದು ಮತ ಕ್ರೋಢೀಕರಣಕ್ಕೆ ಅನುಕೂಲ ಆಗುತ್ತದೆಂಬ ಎಣಿಕೆ ಶಾಸಕ ಸುನೀಲ್ ನಾಯ್ಕ್‌ರದ್ದಾಗಿದ್ದರೆ, ಸ್ವಪಕ್ಷದ ಹಿತ ಶತ್ರುಗಳು ಎಮ್ಮೆಲ್ಲೆ ಕಾಲೆಳೆಯಲು ಸನ್ನದ್ಧರಾಗಿದ್ದರೆನ್ನಲಾಗಿದೆ.

ಈ ನಾಗಬನದ ಹಿನ್ನೆಲೆ ಗೊತ್ತಾಗದಿದ್ದರೆ ರವಿಯವರ ಮಾಂಸಾಹಾರ ಮತ್ತು ದೇಗುಲ ಪುರಾಣ ಸರಿಯಾಗಿ ಅರ್ಥವಾಗುವುದಿಲ್ಲ. ಕಳೆದ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಸಂಘಪರಿವಾರ ಗಂಭೀರವಾಗಿ ರಣತಂತ್ರ ಹೆಣೆಯುತ್ತಿದ್ದಾಗ ಭಟ್ಕಳ ನಗರದ ಹಳೆ ಬಸ್ ನಿಲ್ದಾಣದ ಪಕ್ಕದ ರಾಜಾಂಗಣ ನಾಗಬನ ಆವರಣದಲ್ಲಿ ದನದ ಮಾಂಸದ ಪ್ಲಾಸ್ಟಿಕ್ ಚೀಲವೊಂದು ರಾತ್ರಿ ಬೆಳಗಾಗುವುದರಲ್ಲಿ ಬಿದ್ದಿತ್ತು. ಗೋಮಾಂಸವನ್ನು ನಾಗಬನದಲ್ಲಿ ಎಸೆಯಲಾಗಿದೆ ಎಂಬ ಸಮಾಚಾರ ನವಾಯತ ಮುಸ್ಲಿಮರು ಜಾಸ್ತಿಯಿರುವ ಭಟ್ಕಳದಲ್ಲಿ ಹಬ್ಬುತ್ತಿದ್ದಂತೆಯೆ ಕೋಮು ಸಂಘರ್ಷ ಶುರುವಾಗಿತ್ತು. ಹಿಂದೂಗಳ ನಾಯಕತ್ವವನ್ನು ಶಾಸಕಗಿರಿ ಕನಸು ಕಾಣುತ್ತಿದ್ದ ಸುನೀಲ್ ನಾಯ್ಕ್ ವಹಿಸಿಕೊಂಡಿದ್ದರು.

ಸುನೀಲ್ ನಾಯ್ಕ್

ಈ ಗೋಮಾಂಸ ನಾಗಬನಕ್ಕೆ ಎಸೆಯಲ್ಪಟ್ಟ ಪ್ರಕರಣದ ರೂವಾರಿ ಸುನೀಲ್ ನಾಯ್ಕ್ ಎಂಬುದು ಬಹಿರಂಗವಾಗಲು ತಡವೇನೂ ಆಗಲಿಲ್ಲ. ಅಂದಿನ ಭಟ್ಕಳ ಎಎಸ್‌ಪಿ ಹಾಗು ಮಹಿಳಾ ಪಿಎಸ್‌ಐ ನಡುವಿನ ಕಾದಾಟ ಇದನ್ನು ಸಾಬೀತುಪಡಿಸಿತ್ತು. ಹಿಂದುತ್ವದ ಪ್ರಯೋಗ ಶಾಲೆ ಎನ್ನಲಾಗುತ್ತಿರುವ ದಕ್ಷಿಣ ಕನ್ನಡ ಮೂಲದ ಎಎಸ್‌ಪಿ ಸಂಘ ಪರಿವಾರದ ದಾಂಧಲೆಕೋರರಿಗೆ ನೆರವಾಗುತ್ತಿದ್ದಾರೆಂಬ ಆರೋಪವಿತ್ತು. ಅಂದಿನ ಪಿಎಸ್‌ಐ ರೇವತಿ ಮೇಲಾಧಿಕಾಗರಿಳಿಗೆ ಎಎಸ್‌ಪಿ ವಿರುದ್ಧ ದೂರಿನಲ್ಲಿ “ಸುನೀಲ್ ನಾಯ್ಕ್ ಮತಿಭ್ರಮಿತನೊಬ್ಬನ ಕೈಗೆ ದನದ ಮಾಂಸ ತುಂಬಿದ ಚೀಲ ಕೊಟ್ಟು ನಾಗಬನದಲ್ಲಿ ಎಸೆಯುವಂತೆ ಹೇಳಿಕಳಿಸಿದ್ದರು” ಎಂದು ವಿವರಿಸಿದ್ದರು! ಶಾಸಕನಾಗಿ ಆಯ್ಕೆಯಾದ ನಂತರ ಸುನೀಲ್ ನಾಯ್ಕ್ ಕುಮಟಾದಲ್ಲಿರುವ ಆರೆಸ್ಸೆಸ್‌ನ ಸರ್ವೋಚ್ಚ ನಾಯಕರೊಬ್ಬರ ಕಾಲಿಗೆರಗಿ ಆಶೀರ್ವಾದ ಪಡೆದಾಗ “ನೀನು ನಾಗಬನದ ವಿವಾದ ಭುಗಿಲೆಬ್ಬಿಸಿದಾಗಲೆ ನಿನಗೆ ಟಿಕೆಟ್ ಕೊಡುವ ನಿರ್ಧಾರವನ್ನು ಸಂಘ ಮಾಡಿತ್ತು” ಎಂದು ಹೇಳಿದ್ದರೆಂಬ ಮಾತು ಇವತ್ತಿಗೂ ಸಂಘಿ ವಲಯದಲ್ಲಿ ಚಾಲ್ತಿಯಲ್ಲಿದೆ.

ಮುಂಬರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಶಾಸಕ ಸುನೀಲ್ ನಾಯ್ಕ್ ಈ ನಾಗಬನವನ್ನು ಈಚೆಗೆ ಸ್ವಂತ ಖರ್ಚಿನಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಸಿ.ಟಿ.ರವಿಯನ್ನು ನಾಗಬನಕ್ಕೆ ಕರೆದೊಯ್ದು ಸನ್ಮಾನ ಮಾಡಲು ಸುನೀಲ್ ನಾಯ್ಕ್ ಯೋಚಿಸುತ್ತಿರುವುದು ಗೊತ್ತಾಗುತ್ತಿದ್ದಂತೆ ವಿರೋಧಿ ಪಡೆ ಎಚ್ಚೆತ್ತಿದೆ. ಕಳೆದ ಇಲೆಕ್ಷನ್ ಸಂದರ್ಭದಲ್ಲಿ ಶಾಸಕ ನಾಯ್ಕರ ಕಟ್ಟಾ ಬೆಂಬಲಿಗರಾಗಿದ್ದ ಕೆಲವರು ಈಗ ಕಡು ಶತ್ರುಗಳಾಗಿದ್ದಾರೆ. ವಾಟ್ಸ್‌ಪ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣ ಬಳಸಿ ಅಂದಿನ ಶಾಸಕ ಮಂಕಾಳ ವೈದ್ಯರ ಹೆಡೆಮುರಿ ಕಟ್ಟಿ ಸುನೀಲ್ ನಾಯ್ಕರನ್ನು ಪ್ರಮೋಟ್ ಮಾಡಲು ಹವಣಿಸಿದ್ದ ತಂಡವೀಗ ಬೂಮರಾಂಗ್ ಆಗಿದೆ! ಹಿಂದೆ ಮಾಜಿ ಶಾಸಕ ವೈದ್ಯ “ನವಾಯತ ಮುಸ್ಲಿಮರಿಗೆ ಕಸಾಯಿಖಾನೆ ಮತ್ತು ಮಾಂಸದ ಮಾರುಕಟ್ಟೆಗೆ ಪರವಾನಗಿ ಕೊಡಿಸಿದ್ದಾರೆ; ನವಾಯತರ ಸರ್ವೋಚ್ಚ ಧಾರ್ಮಿಕ ಸಂಸ್ಥೆ ’ತಂಜೀಮ್’ಗೆ  ಸಾವಿರಾರು ಕೋಟಿ ರೂ. ಅನುದಾನ ಕೊಡಿಸಿದ್ದಾರೆ” ಎಂದೆಲ್ಲ ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ ಮಾಡಿ ಹಿಂದೂ ಮತದಾರರ ದಿಕ್ಕುತಪ್ಪಿಸಿದ್ದ ತಂಡವೀಗ ಶಾಸಕ ಸುನೀಲ್ ನಾಯ್ಕ್ ವಿರುದ್ದ ತಿರುಗಿಬಿದ್ದಿದೆ.

ಕಳೆದ ಚುನಾವಣೆಯ ಹೊತ್ತಲ್ಲಿ ಮಾಜಿ ಶಾಸಕ ಮಂಕಾಳ್ ವೈದ್ಯರ ಮೇಲೆ ಪ್ರಯೋಗಿಸಿದ ಅಸ್ತ್ರಗಳನ್ನೇ ಈಗ ಸುನೀಲ್ ನಾಯ್ಕರತ್ತ ಎಸೆಯಲಾಗುತ್ತಿದೆ. ಕಳೆದ ನಾಲ್ಕೂವರೆ ವರ್ಷದಿಂದ ಧರ್ಮ ಮತ್ತು ಅಭಿವೃದ್ಧಿ ಹೆಸರಲ್ಲಿ ಭಟ್ಕಳ ಕ್ಷೇತ್ರದಲ್ಲಿ ಆಗುತ್ತಿರುವ ಭ್ರಷ್ಟಾಚಾರ-ಅವ್ಯವಹಾರ-ಅವಾಂತರಗಳನ್ನು ವಾಟ್ಸಪ್ ಗ್ರೂಪ್ ಮತ್ತು ಯೂಟ್ಯೂಬ್ ವಾಹಿನಿಗಳಲ್ಲಿ ಕಳೆದ ಒಂದೆರಡು ತಿಂಗಳಿಂದ ಬಿಚ್ಚಿಡಲಾಗುತ್ತಿದೆ; ಶಾಸಕ ಸುನೀಲ್ ನಾಯ್ಕರನ್ನು ಹೆಜ್ಜೆಹೆಜ್ಜೆಗೆ ಗೇಲಿ ಮಾಡಲಾಗುತ್ತಿದೆ. ಸುನೀಲ್ ನಾಯ್ಕ್ ಬಿಟ್ಟು ಬೇರೆ ಯಾರಿಗಾದರೂ ಕೇಸರಿ ಟಿಕೆಟ್ ಕೊಡಿ ಎಂದು ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹಾಕಲಾಗುತ್ತಿದೆ. ಸುನೀಲ್ ಬಿಜೆಪಿ ಅಭ್ಯರ್ಥಿಯಾದರೆ ಸೋಲಿಸುವ ಹಠ ತೊಟ್ಟಿದೆ. ಸ್ಥಳೀಯ ಬಿಜೆಪಿಯ ಒಳಸುಳಿಯ ಅರಿವಿಲ್ಲದೆ ಶಾಸಕ ಸುನೀಲ್ ನಾಯ್ಕರ ಮನೆಗೆ ಅರಬ್ ದೇಶಗಳ ವಿಶಿಷ್ಟ ರುಚಿಯ ಕೋಳಿ ಮಾಂಸದ ಅಡುಗೆ ಉಣ್ಣಲು ಬಂದಿದ್ದ ಸಿ.ಟಿ.ರವಿ ತಮ್ಮದೇ ವ್ಯಾಖ್ಯಾನದ ’ಧರ್ಮದ್ರೋಹ’ದ ವಿವಾದಕ್ಕೆ ಸಿಲುಕಿದರು; ಶತ್ರು ಪಡೆ ಸುನೀಲ್ ನಾಯ್ಕರ ಮುಖಭಂಗಕ್ಕೆ ಹಾಕಿದ ಸ್ಕೆಚ್‌ನಿಂದ ಸಿ.ಟಿ.ರವಿಯ ಅಸಲಿ ಅವತಾರ ಅನಾವರಣವಾಯಿತು ಎಂದೀಗ ವ್ಯಾಖ್ಯಾನಿಸಲಾಗುತ್ತಿದೆ.

– ವರದಿಗಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...