ನಿನ್ನೆ ಸಂಜೆ ನನ್ನ ನಿವಾಸಕ್ಕೆ ಸಿಐಡಿ ಅಧಿಕಾರಿಗಳು ನೋಟೀಸ್ ತಲುಪಿಸಿದ್ದು, ಈ ನೋಟೀಸ್ ಸರ್ಕಾರ ಹಾಗೂ ಗೃಹ ಇಲಾಖೆಯ ಕಾರ್ಯವೈಖರಿ, ಅಸಮರ್ಥತೆಗೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಪ್ರಿಯಾಂಕ್, ಅಧಿಕಾರಿಗಳು ನೋಟಿಸ್‌ನಲ್ಲಿ ‘ತಾವು ದಿನಾಂಕ 23-04-2022ರಂದು ಪತ್ರಿಕಾಗೋಷ್ಠಿ ನಡೆಸಿ 3-10-2021ರಂದು ನಡೆದ 541 ಸಿವಿಲ್ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ತಮ್ಮ ಬಳಿ ಸಾಕ್ಷ್ಯವಿರುವುದಾಗಿ ಮಾಹಿತಿ ನೀಡಿದ್ದೀರಿ. ಈ ಪ್ರಕರಣ ಬಹಳ ಸೂಕ್ಷ್ಮ ಹಾಗೂ ಗಂಭೀರವಾಗಿದೆ. ಲಭ್ಯವಿರುವ ಎಲ್ಲ ಮಾಹಿತಿ ತ್ವರಿತಗತಿಯಲ್ಲಿ ಸಂಗ್ರಹಿಸುವ ಅಗತ್ಯವಿರುವುದರಿಂದ ತಮ್ಮ ಬಳಿ ಇರುವ ಸಾಕ್ಷಿ ಹಾಗೂ ದಾಖಲೆ ಪರಿಶೀಲಿಸಿ ತನಿಖೆ ಕೈಗೊಳ್ಳುವುದು ಅತಿ ಅವಶ್ಯವಾಗಿದೆ. ತನಿಖಾಧಿಕಾರಿಗಳು ದಾಖಲೆ ಸಂಗ್ರಹಿಸಲು ಸೂಚಿಸಿದ್ದು, ತಾವು ಇಂದು 11.30ಕ್ಕೆ ಹಾಜರಾಗಬೇಕು’ ಎಂದು ತಿಳಿಸಿದ್ದಾರೆ. ಇದು ಸರ್ಕಾರದ ಅಸಮರ್ಥತೆಗೆ ಸಾಕ್ಷಿಯಾಗಿದೆ ಎಂದರು.
ಸರ್ಕಾರ ಹಾಗೂ ತನಿಖಾಧಿಕಾರಿಗಳು ನಾನು ಇದುವರೆಗೂ ಈ ವಿಚಾರವಾಗಿ ನಡೆಸಿರುವ ಪತ್ರಿಕಾಗೋಷ್ಠಿಯನ್ನು ಕಣ್ಣು ತೆರೆದು, ಕಿವಿಗೊಟ್ಟಿ ನೋಡಬೇಕು ಎಂದು ಹೇಳಲು ಬಯಸುತ್ತೇನೆ. ನಾನು ಯಾವುದೇ ತನಿಖೆ ಮಾಡಿ, ಸಾರ್ವಜನಿಕ ವಲಯಕ್ಕೆ ಹೊರತುಪಡಿಸಿ ನನ್ನ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಹೇಳಿಕೊಂಡಿಲ್ಲ. ನಾನು ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ಸಾಕ್ಷ್ಯಾಧಾರಗಳನ್ನಷ್ಟೇ ಮಾಧ್ಯಮಗಳ ಮುಂದಿಟ್ಟಿದ್ದೇನೆ. ಸಾರ್ವಜನಿಕ ವಲಯಗಳಲ್ಲಿ ಇರುವ ಮಾಹಿತಿ ಅವರ ಬಳಿ ಇಲ್ಲ ಎಂದು ಹೇಳುತ್ತಿರುವುದು ಬಹಳ ಆಶ್ಚರ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ.
ಜ.1ರಂದು ಅಭ್ಯರ್ಥಿಗಳು ಗೃಹ ಸಚಿವರನ್ನು ಭೇಟಿ ಮಾಡಿರುವ ಮಾಹಿತಿಯನ್ನು ಸಚಿವರೇ ಟ್ವೀಟ್ ಮಾಡಿದ್ದಾರೆ. ಜ.22ರಂದು ಗೃಹ ಸಚಿವರು ಶಿವಮೊಗ್ಗದಲ್ಲಿ ಈ ಪರೀಕ್ಷೆ ಪಾಸ್ ಮಾಡಲಾಗದವರು ಅಸೂಯೆಯಿಂದ ಅಕ್ರಮ ನಡೆದಿರುವ ಆರೋಪ ಮಾಡಿದ್ದಾರೆ ಎಂದು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ. ಜ.29ರಂದು ಆರ್ಟಿಕಲ್ 371 ಮೀಸಲಾತಿ ವಿಚಾರವಾಗಿ ಸರ್ಕಾರಕ್ಕೆ ವರದಿ ಬಂದಿತ್ತು. ಫೆ.7ರಂದು ನೇಮಕಾತಿಯನ್ನು ಗೃಹ ಇಲಾಖೆಯೇ ತಡೆ ಹಿಡಿದಿದೆ ಎಂದು ನೆನಪಿಸಿದ್ದಾರೆ.
3-2-2022ರಲ್ಲಿ ಸಚಿವ ಪ್ರಭು ಚೌಹಾಣ್ ಅವರು ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುತ್ತಾರೆ. 10-3-2022ರಂದು ಸುಶೀಲ್ ನಮೋಶಿ ಅವರಿಗೆ ಹಾಗೂ ರವಿ ಅವರ ಪ್ರಶ್ನೆಗಳಿಗೆ ಗೃಹ ಸಚಿವರು ಮೇಲ್ಮನೆಯಲ್ಲಿ ಭಿನ್ನ ಉತ್ತರ ಕೊಟ್ಟಿದ್ದಾರೆ. ಮಾರ್ಚ್ 24ರಂದು ಯು.ಬಿ ವೆಂಕಟೇಶ್ ಅವರ ಪ್ರಶ್ನೆಗೆ ಈ ನೇಮಕಾತಿ ಸುಗಮವಾಗಿ ಸಾಗುತ್ತಿದೆ ಎಂದು ಗೃಹ ಸಚಿವರು ಉತ್ತರ ಕೊಟ್ಟಿದ್ದೀರಿ. ಏ.9ರಂದು ಚೈಕ್ ಪೋಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿದ್ದರು. ಇವಿಷ್ಟು ನಾನು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೊಟ್ಟ ದಾಖಲೆಗಳು. ಇದ್ಯಾವುದೂ ಸರ್ಕಾರದ ಬಳಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸಂಭಾವ್ಯ ಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿ ಇನ್ನು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಪೊಲೀಸ್ ಸಮವಸ್ತ್ರ ಧರಿಸಿಕೊಂಡು ಓಡಾಡುತ್ತಿರುವ ಮಾಹಿತಿ ಇಲಾಖೆ ಬಳಿ ಇಲ್ಲವೇ? ಎಬಿವಿಪಿ ಕಾರ್ಯಕರ್ತ ಅರುಣ್ ಅಂತಿಮ ಪಟ್ಟಿಯಲ್ಲಿ ಹೆಸರು ಬಂದಿರುವ ಮಾಹಿತಿ ನಮಗೆ ಲಭ್ಯವಾಗಿದ್ದು, ನಿಮಗೆ ಲಭ್ಯವಾಗಿಲ್ಲವೇ? ನನಗೆ ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳ ಮೂಲಕ ಈ ಎಲ್ಲ ದಾಖಲೆಗಳು, ಪರೀಕ್ಷೆಯ ಒಎಂಆರ್ ಪತ್ರಿಕೆಗಳು ಲಭ್ಯವಾಗುತ್ತಿದ್ದು, ನಿಮಗೆ ಲಭ್ಯವಾಗಿಲ್ಲವೇ? ಎಂದು ಕೇಳಿದ್ದಾರೆ.
ಈ ಪ್ರಕರಣದಲ್ಲಿ ದಿವ್ಯಾ ಹಾಗರಗಿ ಅವರ ಹೆಸರು ಕೇಳಿಬಂತು, ನಂತರ ಮಾಹಂತೇಶ್ ಪಾಟೀಲ್, ಆರ್.ಡಿ ಪಾಟೀಲ್ ಬಂಧನವಾದರು. ನಾವು ಬಿಡುಗಡೆ ಮಾಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿತ್ತು. ಅಲ್ಲದೇ ನಾವು ಬಿಡುಗಡೆಗೂ ಮುನ್ನ ಅಂದಿನ ಕನ್ನಡ ಪ್ರಭ ಪತ್ರಿಕೆಯಲ್ಲಿ ಆ ಬಗ್ಗೆ ವರದಿ ಬಂದಿತ್ತು. ಆಮೂಲಕ ಆ ವಿಚಾರ ಸಾರ್ವಜನಿಕ ವಲಯದಲ್ಲಿತ್ತು. ನಾನು ಈ ಆಡಿಯೋವನ್ನು ರಹಸ್ಯ ಕಾರ್ಯಾಚರಣೆ ಮೂಲಕ ಮಾಡಿಲ್ಲವಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಜಾಮೀನು ದೊರೆತ ಬಳಿಕ ಮತ್ತೊಮ್ಮೆ ಜಿಗ್ನೇಶ್ ಮೇವಾನಿಯ ಬಂಧನ
ಆ ಆಡಿಯೋದಲ್ಲಿ ಒಬ್ಬ ಅಭ್ಯರ್ಥಿ ನಾವು ಇದರಲ್ಲಿ ಸಿಕ್ಕಿಕೊಳ್ಳುವುದಿಲ್ಲವಲ್ಲವೇ ಎಂದು ಕೇಳಿದಾಗ, ಮಧ್ಯವರ್ತಿ, ಇದರಲ್ಲಿ ಮೇಲಿಂದ ಕೆಳಗಿನವರೆಗೂ ಎಲ್ಲ ಪ್ರಭಾವಿವ್ಯಕ್ತಿಗಳಿದ್ದು, ಸಿಕ್ಕಿಬೀಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. 545 ನೇಮಕಾತಿಯಲ್ಲಿ ಪರೀಕ್ಷೆ ನಡೆಸುವವರು ಭಾಗಿಯಾಗಿದ್ದಾರೆ ಎಂಬ ಮಾತುಗಳಿವೆ. ಇದೆಲ್ಲವೂ ರಾಜ್ಯ ಗುಪ್ತಚರ ಇಲಾಖೆ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಸಾಕ್ಷಿ. ಈ ಹಿಂದೆ ಗುಪ್ತಚರ ಇಲಾಖೆಗೆ ತನ್ನದೇ ಆದ ಮೂಲ, ಸೂತ್ರಗಳಿರುತ್ತಿದ್ದವು. ಆದರೆ ಈಗ ಪತ್ರಿಕೆ ವರದಿ, ಮಾಧ್ಯಮ ವರದಿ ನೋಡಿ ಸರ್ಕಾರಕ್ಕೆ ಮಾಹಿತಿ ನೀಡುತ್ತಿವೆ. ಇವರಿಗೆ ಸಾಮಾನ್ಯ ಪ್ರಜ್ಞೆಯೂ ಇಲ್ಲವಾಗಿದೆ ಎಂದು ಕುಟುಕಿದ್ದಾರೆ.
ಆಡಿಯೋದಲ್ಲಿ ಶ್ರೀಶೈಲ ಬಿರಾದಾರ್ ಎಂಬ ಅಭ್ಯರ್ಥಿ ಮಧ್ಯವರ್ತಿ ಜತೆ ಮಾತನಾಡಿದ್ದಾರೆ ಎಂಬ ಮಾಹಿತಿ ಸರ್ಕಾರದ ಬಳಿ ಇಲ್ಲವೇ? ಇವರು ಕಣ್ಣಮುಂದೆ ಇರುವ ಸಾಕ್ಷಿಗಳನ್ನು ನೋಡಲು ತಯಾರಿಲ್ಲ. ಹೀಗಾಗಿ ನಾನು ಕಾಲಾನುಕ್ರಮವಾಗಿ ಸರ್ಕಾರಿ ದಾಖಲೆ, ಸಚಿವರ ಹೇಳಿಕೆ, ಅಧಿಕಾರಿಗಳ ಹೇಳಿಕೆಯನ್ನು ಜನರ ಮುಂದೆ ಇಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.


