ಅಯೋಧ್ಯೆಯ ಹಲವು ಮಸೀದಿಗಳ ಮೇಲೆ ಆಕ್ಷೇಪಾರ್ಹ ಪೋಸ್ಟರ್ ಹಾಕಿ ಹಾಗೂ ವಸ್ತುಗಳನ್ನು ಎಸೆದು ನಗರದ ಶಾಂತಿಯನ್ನು ಕದಡಲು ಯತ್ನಿಸಿದ ಆರೋಪದ ಮೇಲೆ ಏಳು ಜನರನ್ನು ಅಯೋಧ್ಯೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಹೇಶ್ ಕುಮಾರ್ ಮಿಶ್ರಾ, ಪ್ರತ್ಯೂಷ್ ಶ್ರೀವಾಸ್ತವ, ನಿತಿನ್ ಕುಮಾರ್, ದೀಪಕ್ ಕುಮಾರ್ ಗೌರ್ ಅಲಿಯಾಸ್ ಗುಂಜನ್, ಬ್ರಿಜೇಶ್ ಪಾಂಡೆ, ಶತ್ರುಘ್ನ ಪ್ರಜಾಪತಿ ಮತ್ತು ವಿಮಲ್ ಪಾಂಡೆ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಅಯೋಧ್ಯೆಯ ನಿವಾಸಿಗಳಾಗಿದ್ದಾರೆ.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಅಯೋಧ್ಯೆ) ಶೈಲೇಶ್ ಕುಮಾರ್ ಪಾಂಡೆ ವಿವರಣೆ ನೀಡಿದ್ದು, “ಘಟನೆಯನ್ನು 11 ಜನರು ನಡೆಸಿದ್ದು, ಅದರಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ. ನಾಲ್ವರು ತಲೆಮರೆಸಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮಹೇಶ್ ನೇತೃತ್ವದಲ್ಲಿ ನಾಲ್ಕು ದ್ವಿಚಕ್ರವಾಹನಗಳಲ್ಲಿ ಬಂದ ಒಟ್ಟು ಎಂಟು ಮಂದಿ ಮಸೀದಿಗಳ ಹೊರಗೆ ಆಕ್ಷೇಪಾರ್ಹ ಪೋಸ್ಟರ್‌ಗಳು ಮತ್ತು ವಸ್ತುಗಳನ್ನು ಹಾಕಿದ್ದಾರೆ. ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳಿಂದ ಹಲವು ವಸ್ತುಗಳು, ಮೊಬೈಲ್ ಫೋನ್ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
“ನಾವು ಏಳು ಜನರನ್ನು ಬಂಧಿಸಿದ್ದೇವೆ, ನಾಲ್ವರು ತಲೆಮರೆಸಿಕೊಂಡಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ. ದರೋಡೆಕೋರರ ಕಾಯಿದೆ ಮತ್ತು ಎನ್‌ಎಸ್‌ಎ ಅಡಿಯಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು” ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.
ದೆಹಲಿಯ ಜಹಾಂಗೀರ್ಪುರಿಯಲ್ಲಿ ಇತ್ತೀಚೆಗೆ ನಡೆದ ಘಟನೆಗೆ ವಿರೋಧವಾಗಿ ಪ್ರಮುಖ ಸಂಚುಕೋರ ಮಹೇಶ್ ಕುಮಾರ್ ಮಿಶ್ರಾ ಮತ್ತು ಆತನ ಇತರ ಸಹಚರರೊಂದಿಗೆ ಬ್ರಿಜೇಶ್ ಪಾಂಡೆ ಮನೆಯಲ್ಲಿ ಸಂಚು ರೂಪಿಸಲಾಗಿದೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ.
ಬುಧವಾರ ರಾತ್ರಿ ಆರೋಪಿಗಳು ಮೊದಲು ಬೆನ್ನಿಗಂಜ್ ತಿರಾಹಾಕ್ಕೆ ಹೋಗಿದ್ದರು. ಅಲ್ಲಿ ಪೊಲೀಸ್ ರೆಸ್ಪಾನ್ಸ್ ವೆಹಿಕಲ್ (ಪಿಆರ್‌ವಿ) ನೋಡಿದರು. ಹೀಗಾಗಿ ಬೆಣಿಗಂಜ್ ಮಸೀದಿಯ ಬಳಿ ದುಷ್ಕೃತ್ಯ ನಡೆಸಲು ಸಾಧ್ಯವಾಗಲಿಲ್ಲ. ಆನಂತರ ಇತರ ಮಸೀದಿಗಳಿಗೆ ತೆರಳುತ್ತಾರೆ. ದುಷ್ಕರ್ಮಿಗಳು ಅಯೋಧ್ಯೆಯ ಮಸೀದಿ ಕಾಶ್ಮೀರಿ ಮೊಹಲ್ಲಾ, ತತ್ಶಾ ಮಸೀದಿ, ಘೋಸಿಯಾನ ರಾಮನಗರ ಮಸೀದಿ, ಈದ್ಗಾ ಸಿವಿಲ್ ಲೈನ್ ಮಸೀದಿ ಮತ್ತು ದರ್ಗಾ ಜೈಲಿನ ಹಿಂಭಾಗದಲ್ಲಿರುವ ಗುಲಾಬ್ ಶಾ ದರ್ಗಾದಲ್ಲಿ ಆಕ್ಷೇಪಾರ್ಹ ಪೋಸ್ಟರ್‌ಗಳು ಮತ್ತು ವಸ್ತುಗಳನ್ನು ಹಾಕಿದ್ದಾರೆ.
ಇದನ್ನೂ ಓದಿರಿ: ಗುಜರಾತ್ ಶಾಸಕ, ದಲಿತ ನಾಯಕ ಜಿಗ್ನೇಶ್ ಮೇವಾನಿಗೆ ಜಾಮೀನು ಮಂಜೂರು
ಬಂಧಿತ ಏಳು ಮಂದಿಯ ಪೈಕಿ ಮೂವರು ಆರೋಪಿಗಳು ಈ ಹಿಂದೆ ಹಲವು ಕೃತ್ಯಗಳಲ್ಲಿ ಭಾಗಿಯಾಗಿರುವ ಇತಿಹಾಸವನ್ನು ಹೊಂದಿದ್ದಾರೆ.
“ಆರೋಪಿ ಮಹೇಶ್ ವಿರುದ್ಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಅಯೋಧ್ಯೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ಆರೋಪಿಗಳಾದ ನಿತಿನ್ ಮತ್ತು ವಿಮಲ್ ಅವರ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಲ್ಲಾ ಏಳು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 295 (ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳಗಳನ್ನು ಅಪವಿತ್ರಗೊಳಿಸುವುದು), ಮತ್ತು 295-ಎ (ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


