13 ವರ್ಷದ ಅತ್ಯಾಚಾರ ಸಂತ್ರಸ್ತೆ ಬಾಲಕಿಯು ದೂರು ನೀಡಲು ಠಾಣೆಗೆ ಹೋದಾಗ ಪೊಲೀಸ್ ಠಾಣೆಯಲ್ಲಿಯೇ ಮತ್ತೆ ಪೊಲೀಸ್ ಅಧಿಕಾರಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಆಘಾತಕಾರಿ ಘಟನೆಯು ಉತ್ತರ ಪ್ರದೇಶದ ಲಲಿತ್‌ಪುರ್‌ನಲ್ಲಿ ವರದಿಯಾಗಿದೆ.
ನಾಲ್ಕು ಜನರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಬಾಲಕಿಯು ತನ್ನ ಸಂಬಂಧಿಕರೊಂದಿಗೆ ದೂರು ನೀಡಲು ಲಲಿತ್‌ಪುರ್ ಪೊಲೀಸ್ ಠಾಣೆಗೆ ಹೋಗಿದ್ದರು. ಆಗ ಅಲ್ಲಿನ ಸ್ಟೇಷನ್ ಹೌಸ್ ಆಫೀಸರ್ ತಿಲಕ್‌ಧಾರಿ ಸರೋಜ್ ಎಂಬಾತ ಮತ್ತೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿಯ ದೂರಿನ ಆಧಾರದಲ್ಲಿ ಆರೋಪಿ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿ, ಆತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಸ್ಟೇಷನ್ ಹೌಸ್ ಆಫೀಸರ್ ತಿಲಕ್‌ಧಾರಿ ಸರೋಜ್ ಸದ್ಯ ಪರಾರಿಯಾಗಿದ್ದು, ಆತನ ಪತ್ತೆಗೆ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ, ಉಳಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಗಳ ಹೇಳಿಕೆ ಆಧರಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಘಟನೆಯ ವಿವರ
ಬಾಲಕಿಯ ತಂದೆ ನೀಡಿದ ದೂರಿನಲ್ಲಿ, ಏಪ್ರಿಲ್ 22 ರಂದು ಸಂತ್ರಸ್ತ ಬಾಲಕಿಯನ್ನು ನಾಲ್ವರು ಅಪಹರಿಸಿ ಭೋಪಾಲ್‌ಗೆ ಕರೆದೊಯ್ದಿದ್ದರು. ಅಲ್ಲಿ ಅಮಾನವೀಯವಾಗಿ ಅತ್ಯಾಚಾರವೆಸಗಿ ವಾಪಸ್ ಲಲಿತ್‌ಪುರ್‌ಗೆ ತಂದು ಬಿಟ್ಟಿದ್ದರು. ಸಂತ್ರಸ್ತೆಯು ಪೊಲೀಸ್ ಠಾಣೆಗೆ ತೆರಳಿದಾಗ ಪೊಲೀಸರು ದೂರು ದಾಖಲಿಸಿಕೊಂಡು ಅವರ ಚಿಕ್ಕಮ್ಮನಿಗೆ ಬಾಲಕಿಯನ್ನು ತಲುಪಿಸಿದ್ದರು. ಅದರ ಮಾರನೇ ದಿನ ಹೇಳಿಕೆ ಪಡೆದುಕೊಳ್ಳಲು ಮತ್ತೆ ಪೊಲೀಸ್ ಠಾಣೆಗೆ ಬರುವಂತೆ ಹೇಳಿದ್ದರು. ಆ ದಿನ ಆರೋಪಿ ಸ್ಟೇಷನ್ ಹೌಸ್ ಆಫೀಸರ್ ಪೊಲೀಸ್ ಠಾಣೆಯಲ್ಲಿಯೇ ಬಾಲಕಿಯನ್ನು ಆಕೆಯ ಚಿಕ್ಕಮ್ಮನ ಎದುರೇ ಅತ್ಯಾಚಾರಗೈದಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಆರೋಪಿಗಳ ಪಟ್ಟಿಯಲ್ಲಿ ಆಕೆಯ ಚಿಕ್ಕಮ್ಮನ ಹೆಸರನ್ನೂ ಸೇರಿಸಲಾಗಿದೆ.
ಇದನ್ನೂ ಒದಿ: ಅತ್ಯಾಚಾರ ತಡೆಗಟ್ಟಲು ಸಾಧ್ಯ! ಅದರ ಮೂಲಬೇರುಗಳನ್ನು ಅರಿತಾಗ ಮಾತ್ರ…
ಆರೋಪಿಗಳ ಮೆಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ಆತನನ್ನು ಬಂಧಿಸಲು ಪೊಲೀಸರು ಹುಡುಕಾಡುತ್ತಿದ್ದಾರೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ನಿಖಿಲ್ ಪಾಠಕ್ ಹೇಳಿದ್ದಾರೆ.
ಅತ್ಯಾಚಾರವೆಂಬ ಮನುಷ್ಯವಿರೋಧಿ, ಅಮಾನವೀಯ ಘಟನೆಗಳು ಉತ್ತರ ಪ್ರದೇಶದಲ್ಲಿ ಹೆಚ್ಚು ಹೆಚ್ಚು ವರದಿಯಾಗುತ್ತಿವೆ. ಉನ್ನಾವೋ, ಹತ್ರಾಸ್‌ನಂತಹ ಭೀಕರ ಘಟನೆಗಳು ನಡೆದ ನಂತರವೂ ಸರ್ಕಾರ ಈ ವಿಷಯದಲ್ಲಿ ಗಂಭೀರವಾಗಿಲ್ಲ ಎಂಬುದುನ್ನು ಈ ಪ್ರಕರಣಗಳು ಸಾಬೀತುಪಡಿಸುತ್ತಿವೆ. ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಅತ್ಯಾಚಾರದ ಆರೋಪ ಕೇಳಿ ಬಂದಿರುವುದು ದೇಶವೇ ತಲೆತಗ್ಗಿಸಬೇಕಾದ ಸಂಗತಿಯಾಗಿದೆ. ಈ ಕುರಿತು ಪ್ರತಿಯೊಬ್ಬರೂ ಯೋಚಿಸಬೇಕಾದ ಮತ್ತು ದನಿ ಎತ್ತಬೇಕಾದ ಜರೂರು ಎದುರಾಗಿದೆ.


