Homeಮುಖಪುಟಪತ್ರಿಕೋದ್ಯಮದ ಮೇಲೆ ಪ್ರಭುತ್ವದ ದಾಳಿ: 8 ವರ್ಷಗಳಲ್ಲಿ 18 ಪತ್ರಕರ್ತರ ಹತ್ಯೆ

ಪತ್ರಿಕೋದ್ಯಮದ ಮೇಲೆ ಪ್ರಭುತ್ವದ ದಾಳಿ: 8 ವರ್ಷಗಳಲ್ಲಿ 18 ಪತ್ರಕರ್ತರ ಹತ್ಯೆ

ವಿಚಾರಣಾಧೀನ ಕೈದಿಗಳಾಗಿ 7 ಜನ ಪತ್ರಕರ್ತರಿದ್ದು, ಈ ಪೈಕಿ ನಾಲ್ವರ ಮೇಲೆ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದೆ.

- Advertisement -
- Advertisement -

ಈ ವರ್ಷದ ಫೆಬ್ರವರಿಯಲ್ಲಿ ರೈಟ್ಸ್ ಅಂಡ್ ರಿಸ್ಕ್ ಅನಾಲಿಸಿಸ್ ಗ್ರೂಪ್ (ಆರ್‌ಆರ್‌ಎಜಿ) ಬಿಡುಗಡೆ ಮಾಡಿದ ಇಂಡಿಯಾ ಪ್ರೆಸ್ ಫ್ರೀಡಂ ರಿಪೋರ್ಟ್ 2021ರ ಪ್ರಕಾರ, ಕನಿಷ್ಠ ಆರು ಪತ್ರಕರ್ತರು ಒಂದೇ ವರ್ಷದಲ್ಲಿ ಕೊಲೆಯಾಗಿದ್ದಾರೆ. 2021ರಲ್ಲಿ ದೇಶದಲ್ಲಿ 108 ಪತ್ರಕರ್ತರನ್ನು, ಒಟ್ಟು 13 ಮಾಧ್ಯಮ ಸಂಸ್ಥೆಗಳನ್ನು ಟಾರ್ಗೆಟ್ ಮಾಡಲಾಗಿದೆ.

2021ರಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ತಲಾ ಇಬ್ಬರು ಪತ್ರಕರ್ತರು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಬ್ಬರು ಪತ್ರಕರ್ತರು ಕೊಲೆಯಾಗಿದ್ದಾರೆ.

ಒಟ್ಟು 121 ಭಾರಿ ಪತ್ರಕರ್ತರ ಮೇಲೆ ದಾಳಿಗಳಾಗಿದ್ದು, ಅವುಗಳಲ್ಲಿ ಕನಿಷ್ಠ 34 ಪ್ರಕರಣಗಳು ರಾಜಕೀಯ ಪಕ್ಷಗಳು, ಪಕ್ಷಗಳ ಕಾರ್ಯಕರ್ತರು ಮತ್ತು ಮಾಫಿಯಾಗಳಿಂದ ನಡೆದಿವೆ. ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯದಲ್ಲಿ ಅತಿ ಹೆಚ್ಚು ಪತ್ರಕರ್ತರನ್ನು ಟಾರ್ಗೆಟ್‌ (25) ಮಾಡಲಾಗಿದೆ. ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ (23) ರಾಜ್ಯವಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

2021ರಲ್ಲಿ ಕನಿಷ್ಠ 24 ಪತ್ರಕರ್ತರ ಮೇಲೆ  ಅಧಿಕಾರಶಾಹಿ ವರ್ಗ ಬೆದರಿಕೆ, ಕಿರುಕುಳ, ದೈಹಿಕ ಹಲ್ಲೆ ನಡೆಸಿದೆ ಮತ್ತು ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ. ಈ 24 ಮಂದಿಯಲ್ಲಿ 17 ಮಂದಿಯ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು ಅತಿ ಹೆಚ್ಚು ಕಿರುಕುಳ ನೀಡಿದ್ದಾರೆ.

2021ರಲ್ಲಿ 44 ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕೆಲವರ ವಿರುದ್ಧ ವಿವಿಧ ರಾಜ್ಯಗಳಲ್ಲಿ ಅನೇಕ ಎಫ್‌ಐಆರ್‌ಗಳು ಆಗಿವೆ ಎಂಬುದನ್ನು ವರದಿ ತಿಳಿಸಿದೆ. 9 ಎಫ್‌ಐಆರ್‌ಗಳನ್ನು ದಾಖಲಿಸುವ ಮೂಲಕ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ. ಜಮ್ಮು- ಕಾಶ್ಮೀರ ಮತ್ತು ದೆಹಲಿ ಎರಡನೇ ಸ್ಥಾನದಲ್ಲಿವೆ.

ಇದನ್ನೂ ಓದಿರಿ: ಮಧ್ಯಪ್ರದೇಶ: ಪತ್ರಕರ್ತರ ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ ಪೊಲೀಸರು

ಸರ್ಕಾರವನ್ನು ಕಟುವಾಗಿ ಟೀಕಿಸಿ ವರದಿ ಮಾಡುತ್ತಿರುವ ನ್ಯೂಸ್‌ಲಾಂಡ್ರಿ, ದೈನಿಕ್ ಭಾಸ್ಕರ್, ಭಾರತ್ ಸಮಾಚಾರ್, ನ್ಯೂಸ್‌ಕ್ಲಿಕ್‌ನಂತಹ ಮಾಧ್ಯಮ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ಮತ್ತು ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳು ರೈಡ್ ಮಾಡಿವೆ.

ಇಂಡಿಯಾ ಪ್ರೆಸ್ ಫ್ರೀಡಂ ರಿಪೋರ್ಟ್ 2021 ವಿವರಿಸಿರುವ ದೇಶದ ಮಾಧ್ಯಮ ಸ್ವಾತಂತ್ರ್ಯದ ಹೀನಾಯ ಸ್ಥಿತಿಯ ಕುರಿತು ‘ದಿ ಕ್ವಿಂಟ್‌’ ಜಾಲತಾಣದೊಂದಿಗೆ ಮಾತನಾಡಿರುವ ಮೇಘಾಲಯ ಮೂಲದ ಪತ್ರಕರ್ತರು, ಶಿಲ್ಲಾಂಗ್ ಟೈಮ್ಸ್‌ನ ಸಂಪಾದಕರಾದ ಪೆಟ್ರೀಷಿಯಾ ಮುಖಿಮ್, “ಸರ್ಕಾರವು ಮಾಡುತ್ತಿರುವ ತಪ್ಪುಗಳನ್ನು ವರದಿ ಮಾಡದಿದ್ದರೆ ನಮ್ಮ ಪಾತ್ರವೇನು?” ಎಂದು ಪ್ರಶ್ನಿಸಿದ್ದಾರೆ.

ದೀರ್ಘಾವಧಿಯ ಕಾನೂನು ಹೋರಾಟ, ಆರ್ಥಿಕ ಹೊರೆ ಸೇರಿದಂತೆ ದೇಶದಲ್ಲಿ ಪತ್ರಕರ್ತರಿಗೆ ನೀಡಲಾಗುವ ಕಿರುಕುಳದ ಬಗ್ಗೆಯೂ ಮಾತನಾಡಿರುವ ಮುಖಿಮ್, “ಪತ್ರಕರ್ತರು ತಾವು ಬರೆಯುವ ಅಥವಾ ಹೇಳುವ ವಿಷಯಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ನ್ಯಾಯಾಲಯ ತುಂಬಾ ದುಬಾರಿಯಾಗುತ್ತದೆ” ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿರಿ: ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಬರೆಹಗಳ ಸಂಕಲನ ‘ಬೇರೆಯೇ ಮಾತು’ ಪುಸ್ತಕ ಬಿಡುಗಡೆ

“ಹೆಚ್ಚಿನ ಸಂಖ್ಯೆಯ ಮಾಧ್ಯಮ ಸಂಸ್ಥೆಗಳು ಸರ್ಕಾರದೊಂದಿಗೆ ಹೆಜ್ಜೆ ಹಾಕುತ್ತಿವೆ. ಕೆಲವೇ ಕೆಲವು ಮಾಧ್ಯಮ ಸಂಸ್ಥೆಗಳು ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಪ್ರಯತ್ನಿಸುತ್ತಿವೆ” ಎಂದು ಅವರು ವಿಷಾದಿಸಿದ್ದಾರೆ.

1992ರಿಂದ ಭಾರತದಲ್ಲಿ 41 ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ: ಸಿಪಿಜೆ

1992 ರಿಂದ ಭಾರತದಲ್ಲಿ 41 ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ವರದಿ ಮಾಡಿದೆ. 41 ಪತ್ರಕರ್ತರ ಪೈಕಿ 18 ಮಂದಿ ಕಳೆದ 8 ವರ್ಷಗಳಲ್ಲಿ ಹತ್ಯೆಯಾಗಿದ್ದಾರೆ.

ಹಿಂದುತ್ವ ಉಗ್ರಗಾಮಿಗಳಿಂದ ಅತ್ಯಂತ ಭೀಕರವಾಗಿ 2017ರಲ್ಲಿ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಾದರು. ಹಿಂದುತ್ವ ಪಡೆಯನ್ನು ಕಟುವಾಗಿ ಟೀಕಿಸಿದ್ದಕ್ಕಾಗಿ ಅವರನ್ನು ಗುಂಡಕ್ಕಿ ಕೊಲ್ಲಲಾಯಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದೇ ರೀತಿಯಲ್ಲಿ ಹಿರಿಯ ಪತ್ರಕರ್ತ ಮತ್ತು ರೈಸಿಂಗ್ ಕಾಶ್ಮೀರದ ಸಂಪಾದಕ ಶುಜಾತ್ ಬುಖಾರಿ ಅವರನ್ನು ಜೂನ್ 2018ರಲ್ಲಿ ಶ್ರೀನಗರದಲ್ಲಿ 3-4 ಶಸ್ತ್ರಸಜ್ಜಿತ ದಾಳಿಕೋರರು ಗುಂಡಿಕ್ಕಿ ಕೊಂದರು. ಕಾಶ್ಮೀರದಲ್ಲಿನ ಸಂಘರ್ಷದ ಬಗೆಗಿನ ಅವರ ಮುಕ್ತ ದೃಷ್ಟಿಕೋನವೇ ಹತ್ಯೆಗೆ ಕಾರಣವಾಯಿತು ಎಂದು ಹಲವರು ಪ್ರತಿಪಾದಿಸುತ್ತಾರೆ.

ಇದನ್ನೂ ಓದಿರಿ: ಖ್ಯಾತ ಪತ್ರಕರ್ತೆ ರಾಣಾ ಅಯೂಬ್‌‌ಗೆ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದ ದೆಹಲಿ ಹೈಕೋರ್ಟ್

ರಾಷ್ಟ್ರೀಯ ಸ್ವರೂಪ್ ಎಂಬ ಹಿಂದಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ರಾಕೇಶ್ ಸಿಂಗ್ ಅವರು 2020ರಲ್ಲಿ ಕೊಲೆಯಾಗುತ್ತಾರೆ. ಯುಪಿಯ ಬಲರಾಮ್‌ಪುರ ಜಿಲ್ಲೆಯಲ್ಲಿ ರಾಕೇಶ್‌‌ ಮನೆಗೆ ಬೆಂಕಿ ಹಚ್ಚಲಾಗುತ್ತದೆ. ತೀವ್ರವಾಗಿ ಗಾಯಗೊಂಡ ಅವರು ಕೊನೆಯುಸಿರೆಳೆಯುತ್ತಾರೆ. ಸ್ಥಳೀಯ ಚುನಾವಣೆಗೆ ಮುನ್ನ ಗ್ರಾಮದ ಮುಖ್ಯಸ್ಥರನ್ನು ಟೀಕಿಸಿದ ಕಾರಣ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

2017ರ ಅಕ್ಟೋಬರ್‌‌ನಲ್ಲಿ ಇದೇ ಉತ್ತರ ಪ್ರದೇಶ ಜಿಲ್ಲೆಯಲ್ಲಿ ಮತ್ತೊಬ್ಬ ಪತ್ರಕರ್ತನನ್ನು ಹತ್ಯೆ ಮಾಡಲಾಗಿದೆ.  ಹಿಂದಿ ದೈನಿಕ್ ಜಾಗರಣ್‌ಗೆ ಗಾಜಿಪುರ ಜಿಲ್ಲೆಯಲ್ಲಿ ಅರೆಕಾಲಿಕ ವರದಿಗಾರರಾಗಿದ್ದ ರಾಜೇಶ್ ಮಿಶ್ರಾ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಅಕ್ರಮ ಮರಳು ಗಣಿಗಾರಿಕೆ ಮತ್ತು ಮದ್ಯ ಸಾಗಾಣೆಯ ಆರೋಪಿಯಾದ ಮಿಶ್ರಾ ಅವರ ಗ್ಯಾಂಗ್‌‌ನಲ್ಲಿದ್ದವರು ಈ ಕೊಲೆ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದರು.

ವಿಚಾರಣಾಧೀನ ಕೈದಿಗಳಾಗಿ 7 ಮಂದಿ ಪತ್ರಕರ್ತರು; ಅದರಲ್ಲಿ 4 ಮಂದಿಯ ಮೇಲೆ ಯುಎಪಿಎ ಪ್ರಕರಣ

2021ರಲ್ಲಿ ಅಥವಾ ಅದಕ್ಕೂ ಮೊದಲು ದೇಶದಲ್ಲಿ ಬಂಧನಕ್ಕೊಳಗಾದ ಐದು ಪತ್ರಕರ್ತರು ಇನ್ನೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಫಹಾದ್ ಶಾ ಮತ್ತು ಸಜಾದ್ ಗುಲ್ ಅವರನ್ನು 2022ರಲ್ಲಿ ಬಂಧಿಸಲಾಗಿದೆ. ಕಾಕತಾಳೀಯವಾಗಿ, ಅವರೆಲ್ಲರೂ ವಿಚಾರಣಾಧೀನ ಕೈದಿಗಳಾಗಿದ್ದಾರೆ. ಅಂದರೆ, ಅವರ ಮೇಲೆ ಹೊರಿಸಲಾಗಿರುವ ಆರೋಪಗಳು ಸಾಬೀತಾಗಿಲ್ಲ.

7 ಜನರಲ್ಲಿ ನಾಲ್ವರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿರಿ: ಬಾಯ್ಮುಚ್ಚು, ನಿನಗೆ ಒಳ್ಳೆಯದಾಗೊಲ್ಲ: ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದ ಪತ್ರಕರ್ತನಿಗೆ ಬಾಬಾ ರಾಮ್‌ದೇವ್ ಧಮಕಿ

ದೆಹಲಿ ಮೂಲದ ಪತ್ರಕರ್ತೆ ಸೀಮಾ ಚಿಶ್ತಿ ಅವರು ‘ದಿ ಕ್ವಿಂಟ್‌’ ಪ್ರತಿಕ್ರಿಯೆ ನೀಡಿದ್ದು, “ಇಂದು ಪತ್ರಕರ್ತರಿಗೆ ಆಗಿರುವಂತಹದ್ದು ಅಂತಿಮವಾಗಿ ದೇಶದ ಉಳಿದ ಭಾಗದಲ್ಲೂ ಆಗತೊಡಗಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ನಿಮ್ಮ ಮನಸ್ಸಿನಲ್ಲಿರುವುದನ್ನು ನೀವು ಮಾತನಾಡದಿದ್ದರೆ ಪರಿಣಾಮ ಬೀರಲಾರಂಭಿಸುತ್ತದೆ. ಇತರ ಪತ್ರಕರ್ತರು, ಹಾಸ್ಯನಟರು, ಚಲನಚಿತ್ರ ತಾರೆಯರು ಮತ್ತು ಸಮಾಜದ ಇತರ ವರ್ಗಗಳು ಸರ್ಕಾರವನ್ನು ವಿಮರ್ಶಿಸಬಾರದು, ಬಾಯಿ ಮುಚ್ಚಿರಬೇಕೆಂಬಲ್ಲಿಗೆ ಹೋಗುತ್ತೇವೆ” ಎಂದು ಚಿಶ್ತಿ ಅಭಿಪ್ರಾಯಪಡುತ್ತಾರೆ.

ಒಂದು ಕಾಲದಲ್ಲಿ ಪತ್ರಕರ್ತನ ಸುರಕ್ಷತೆಯನ್ನು ಖಾತರಿಪಡಿಸುತ್ತಿದ್ದ ಪ್ರೆಸ್ ಕಾರ್ಡ್ ಇಂದು ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು, ಪತ್ರಕರ್ತನನ್ನು ತೊಂದರೆಗೆ ಸಿಲುಕಿಸಬಹುದು ಎನ್ನುತ್ತಾರೆ ಚಿಶ್ತಿ. “ಮಾಧ್ಯಮಗಳು ಮುರಿದು ಬಿದ್ದಿರುವ ಈ ಯುಗದಲ್ಲಿ ಪ್ರೆಸ್ ಕಾರ್ಡ್ಅನ್ನು ಯಾವುದೇ ಸನ್ನಿವೇಶದಲ್ಲಿ ತೋರಿಸುವ ಮೊದಲು ಎಲ್ಲಾ ಪತ್ರಕರ್ತರು ಎರಡು ಬಾರಿ ಯೋಚಿಸುವಂತಾಗಿದೆ” ಎನ್ನುತ್ತಾರೆ ಚಿಶ್ತಿ.

ಜಮ್ಮು ಕಾಶ್ಮೀರದ ‘ಕಾಶ್ಮೀರ್‌ ನರೇಟರ್‌‌’ ನಿಯತಕಾಲಿಕದ ಪತ್ರಕರ್ತ ಆಸಿಫ್ ಸುಲ್ತಾನ್ ಅವರನ್ನು UAPA ಅಡಿಯಲ್ಲಿ 2018ರ ಆಗಸ್ಟ್‌ 27ರಂದು ಪೊಲೀಸರು ಬಂಧಿಸಿದರು.

ತೀವ್ರ ಉಗ್ರಗಾಮಿ ಗುಂಪು ಹಿಜ್ಬುಲ್ ಮುಜಾಹಿದ್ದೀನ್‌ನೊಂದಿಗೆ ಸುಲ್ತಾನ್‌ಗೆ ಸಂಬಂಧವಿದೆ ಎಂದು ಅಂದಿನ ರಾಜ್ಯ ಸರ್ಕಾರ ಆರೋಪಿಸಿತ್ತು. ಉಗ್ರಗಾಮಿ ಬುರ್ಹಾನ್ ವಾನಿ ಹತ್ಯೆಯ ಕುರಿತು ಭಯೋತ್ಪಾದಕ ಗುಂಪಿನ “ಯುದ್ಧೇತರ” ಸದಸ್ಯರ ಸಂದರ್ಶನಗಳನ್ನು ಒಳಗೊಂಡ ಲೇಖನವನ್ನು ‘ಕಾಶ್ಮೀರ ನರೇಟರ್‌’ನಲ್ಲಿ ಸುಲ್ತಾನ್‌ ಬರೆದ ಬಳಿಕ ಈ ಬೆಳವಣಿಗೆಯಾಯಿತು.

ಇದನ್ನೂ ಓದಿರಿ: ಹಿಜಾಬ್‌ ವಿಚಾರದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ: ಕ್ಷಮೆ ಕೇಳಿದ ಟಿವಿ ಚಾನೆಲ್‌ ಪತ್ರಕರ್ತರು

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295A (ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವುದು), 124A (ದೇಶದ್ರೋಹ) ಅಡಿಯಲ್ಲಿ 2020, ಅಕ್ಟೋಬರ್ 5ರಂದು ಕೇರಳ ಮೂಲದ ಸ್ವತಂತ್ರ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಕಪ್ಪನ್‌ ವಿರುದ್ಧ ಯುಎಪಿಎ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ.

ದಲಿತ ಮಹಿಳೆಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಕುರಿತು ವರದಿ ಮಾಡಲು ಉತ್ತರಪ್ರದೇಶದ ಹತ್ರಾಸ್‌ಗೆ ತೆರಳುತ್ತಿದ್ದಾಗ ಕಪ್ಪನ್‌ ಅವರನ್ನು ಬಂಧಿಸಿ, ಮಥುರಾ ಜೈಲಿನಲ್ಲಿ ಇರಿಸಲಾಗಿದೆ.

ಚೀನಾ ಸರ್ಕಾರಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಸ್ವತಂತ್ರ ಪತ್ರಕರ್ತ ರಾಜೀವ್ ಶರ್ಮಾ ಅವರನ್ನು ಜುಲೈ 2020ರಲ್ಲಿ ದೆಹಲಿ ಪೊಲೀಸರು ಬಂಧಿಸಿದರು. ರಾಜೀವ್‌ ಅಧಿಕೃತ ರಹಸ್ಯ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

ರಾಜೀವ್‌ ಅವರಿಗೆ ಜಾಮೀನು ನೀಡಿ, ಡಿಸೆಂಬರ್ 2020 ರಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಜುಲೈ 2021ರಲ್ಲಿ ಮನಿ ಲಾಂಡರಿಂಗ್ ಕಾಯ್ದೆಯ (PMLA) ಅಡಿ ಆರೋಪ ಮಾಡಿ ಜಾರಿ ನಿರ್ದೇಶನಾಲಯ ಬಂಧಿಸಿದೆ.

ಸರ್ಕಾರದ ಅನುಮೋದನೆಯಿಲ್ಲದೆ ಅಕ್ರಮವಾಗಿ ದಿನಪತ್ರಿಕೆಯನ್ನು ನಡೆಸುತ್ತಿರುವ ಆರೋಪದ ಮೇಲೆ ಮಧ್ಯಪ್ರದೇಶದ ‘ಪ್ರಭಾತ್ ಸಂಕೇತ್’ ಎಂಬ ಹಿಂದಿ ಪತ್ರಿಕೆಯ ಸಂಪಾದಕ ತನ್ವೀರ್ ವಾರ್ಸಿ ಅವರನ್ನು 22 ಜುಲೈ 2021ರಂದು ಭೋಪಾಲ್‌ನಲ್ಲಿ ಬಂಧಿಸಲಾಯಿತು.

ಕೋವಿಡ್‌ ಸಾಂಕ್ರಾಮಿಕ ಸಂದರ್ಭದಲ್ಲಿ ರಾಜ್‌ಗಢ್‌ದಲ್ಲಿನ ಆಡಳಿತ ನಿರ್ವಹಣೆ ಕುರಿತು ವಿಮರ್ಶಾತ್ಮಕ ವರದಿಗಳನ್ನು ಮಾಡಿದ ಕಾರಣಕ್ಕಾಗಿ ಟಾರ್ಗೆಟ್ ಮಾಡಲಾಗಿದೆ ಎಂದು ವಾರ್ಸಿ ಆರೋಪಿಸಿದ್ದಾರೆ.

ಮನನ್ ದಾರ್ ಎಂಬ ಹೆಸರಿನ ಮತ್ತೊಬ್ಬ ಸ್ವತಂತ್ರ ಪತ್ರಕರ್ತನನ್ನು 2021ರ ಅಕ್ಟೋಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ವಶಕ್ಕೆ ಪಡೆದರು. ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಅವರನ್ನು ಬಂಧಿಸಿದೆ.

ರಾಜ್ಯದಲ್ಲಿ ಭಯೋತ್ಪಾದಕ ದಾಳಿಗಳನ್ನು ಯೋಜಿಸಿದ ಆರೋಪಗಳನ್ನು ಹೊರಿಸಿ ದಾರ್ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಅವರನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

“ದೇಶ ವಿರೋಧಿ” ವಿಷಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ ನ್ಯೂಸ್ ಪೋರ್ಟಲ್ ‘ದಿ ಕಾಶ್ಮೀರ್ ವಾಲ್ಲಾ’ದ ಸಂಪಾದಕ ಫಹಾದ್ ಶಾ ಅವರನ್ನು 2022ರ ಫೆಬ್ರವರಿ 4ರಂದು ಬಂಧಿಸಲಾಯಿತು.

25ನೇ ಮಾನವ ಹಕ್ಕುಗಳ ಪತ್ರಿಕಾ ಪ್ರಶಸ್ತಿಯನ್ನು ಪಡೆದಿರುವ ಶಾ ಅವರ ವಿರುದ್ಧ ಪ್ರಸ್ತುತ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ ಮೂರು ಪ್ರಕರಣಗಳು ಯುಎಪಿಎ ಅಡಿಯಲ್ಲಿ ಬರುತ್ತವೆ. ಅವರ ವಿರುದ್ಧದ ಎರಡು ಪ್ರಕರಣಗಳಲ್ಲಿ ಜಾಮೀನು ನೀಡಲಾಯಿತು. ಆದರೆ ನಂತರ, ಮಾರ್ಚ್ 14 ರಂದು, ಸಾರ್ವಜನಿಕ ಭದ್ರತಾ ಕಾಯಿದೆ (ಪಿಎಸ್‌ಎ) ಅಡಿಯಲ್ಲಿ ಆರೋಪ ಹೊರಿಸಲಾಯಿತು. ಆರೋಪ ಸಾಬೀತಾಗದೆಯೂ ಎರಡು ವರ್ಷಗಳ ಕಾಲ ಇವರನ್ನು ಬಂಧನದಲ್ಲಿ ಇರಿಸುವ ಅವಕಾಶವನ್ನು ಅಧಿಕಾರಿಗಳಿಗೆ ಈ ಕಾಯ್ದೆ ನೀಡಿದೆ.

ಕಾಶ್ಮೀರ್ ವಾಲಾದಲ್ಲಿ ತರಬೇತಿ ಪಡೆದ ಪತ್ರಕರ್ತ ಸಜಾದ್ ಗುಲ್ ಅವರನ್ನು ಕಳೆದ ಜನವರಿ 6ರಂದು ಕ್ರಿಮಿನಲ್ ಪಿತೂರಿ ಆರೋಪದಡಿಯಲ್ಲಿ ಬಂಧಿಸಲಾಯಿತು. ಲಷ್ಕರ್-ಎ-ತೊಯ್ಬಾ ಕಮಾಂಡರ್ ಎಂದು ಹೇಳಲಾದ ಸಲೀಂ ಪರ್ರೆ ಹತ್ಯೆಯನ್ನು ವಿರೋಧಿಸಿ ಕುಟುಂಬವೊಂದು ಭಾರತ ವಿರೋಧಿ ಘೋಷಣೆಗಳನ್ನು ಕೂಗುವ ಮತ್ತು ಪ್ರತಿಭಟಿಸುವ ವೀಡಿಯೊವನ್ನು ಗುಲ್ ಪೋಸ್ಟ್ ಮಾಡಿದ್ದರು.

ಜನವರಿ 16ರಂದು, ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿಯಲ್ಲಿ ಗುಲ್‌ ಅವರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಇವರನ್ನು ಮೂರರಿಂದ ಆರು ತಿಂಗಳವರೆಗೆ ವಿಚಾರಣೆಯಿಲ್ಲದೆ ಬಂಧಿಸುವ ಅವಕಾಶವಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಭಾರತದಲ್ಲಿ ಮುಸ್ಲಿಂ ಪತ್ರಕರ್ತರ ಸ್ಥಿತಿ

ಭಾರತದಲ್ಲಿನ ದ್ವೇಷ ಪ್ರಕರಣಗಳು ಮತ್ತು ಕೋಮು ಹಿಂಸಾಚಾರದ ಬಗ್ಗೆ ವರದಿ ಮಾಡುವ ಲಕ್ನೋ ಮೂಲದ ಸ್ವತಂತ್ರ ಪತ್ರಕರ್ತ ಅಲಿಶನ್ ಜಾಫ್ರಿ ಅವರು, ದಿ ಕ್ವಿಂಟ್‌ ಜೊತೆ ಮಾತನಾಡಿ, ದೇಶದಲ್ಲಿ ಮುಸ್ಲಿಂ ವರದಿಗಾರನಾಗಿ ಎದುರಿಸಿರುವ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

“ನನ್ನದೇ ರೀತಿಯಲ್ಲಿ ಕೆಲಸ ಮಾಡುತ್ತಿರುವ ಭಾರತದಲ್ಲಿನ ಮುಸ್ಲಿಂ ಪತ್ರಕರ್ತರು ತಮ್ಮ ಅಸ್ತಿತ್ವವನ್ನು ನಿರ್ದೇಶಿಸುವ ಅಸಹನೀಯ ಹಿಂಸಾಚಾರಕ್ಕೆ ಸಾಕ್ಷಿಯಾಗುತ್ತಾ ಜೀವವನ್ನೇ ಮುಡಿಪಾಗಿಟ್ಟಿದ್ದಾರೆ” ಎಂದಿದ್ದಾರೆ ಜಾಫ್ರಿ.

ಕಳೆದ ತಿಂಗಳು 28ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದ ಅಖ್ಲಾದ್ ಖಾನ್ ಎಂಬ ಮತ್ತೊಬ್ಬ ಮುಸ್ಲಿಂ ಪತ್ರಕರ್ತನ ಉದಾಹರಣೆಯನ್ನು ಜಾಫ್ರಿ ಉಲ್ಲೇಖಿಸಿದ್ದಾರೆ. “ಇದು ಅವರಿಗಾದ ಎರಡನೇ ಬಾರಿಯ ಹೃದಯಾಘಾತವಾಗಿತ್ತು. ತನ್ನ ಕೆಲಸದ ಬಗ್ಗೆ ಅಖ್ಲಾದ್‌ ಅಪಾರ ನೋವು ಮತ್ತು ಆತಂಕವನ್ನು ಅನುಭವಿಸುತ್ತಿದ್ದರು” ಎಂದಿದ್ದಾರೆ ಜಾಫ್ರಿ.

ಪತ್ರಿಕಾ ಸ್ವಾತಂತ್ರ್ಯವನ್ನು ಉತ್ತೇಜಿಸಲು ಅಗತ್ಯವಾದ ಸುರಕ್ಷತೆಗಳ ಕುರಿತು ಮಾತನಾಡಿದ ಜಾಫ್ರಿ, “ವಿಶೇಷವಾಗಿ ಅಲಕ್ಷಿತ ಸಮುದಾಯಗಳಿಗೆ ಅಗತ್ಯವಾದ ಸಂಪನ್ಮೂಲಗಳು, ಮಾರ್ಗದರ್ಶನ ದೊರೆತು ಮುಕ್ತವಾಗಿ ವರದಿಗಳನ್ನು ಬರೆಯುವ ಅವಕಾಶ ಸಿಕ್ಕರೆ ಮಾಧ್ಯಮವು ಹೆಚ್ಚು ಡೆಮಾಕ್ರಟಿಕ್‌ ಆಗುತ್ತವೆ” ಎಂದು ಅಭಿಪ್ರಾಯಪಡುತ್ತಾರೆ.

ಮೂಲ: ದಿ ಕ್ವಿಂಟ್ (Sakshat Chandok)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...