Homeಮುಖಪುಟಬಾಯ್ಮುಚ್ಚು, ನಿನಗೆ ಒಳ್ಳೆಯದಾಗೊಲ್ಲ: ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದ ಪತ್ರಕರ್ತನಿಗೆ ಬಾಬಾ ರಾಮ್‌ದೇವ್ ಧಮಕಿ

ಬಾಯ್ಮುಚ್ಚು, ನಿನಗೆ ಒಳ್ಳೆಯದಾಗೊಲ್ಲ: ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದ ಪತ್ರಕರ್ತನಿಗೆ ಬಾಬಾ ರಾಮ್‌ದೇವ್ ಧಮಕಿ

ಜನರು ಹೆಚ್ಚು ಕಷ್ಟಪಟ್ಟು ಕೆಲಸ ಮಾಡಬೇಕು. ಇಂಧನ ಬೆಲೆ ಕಡಿಮೆ ಮಾಡಿದರೆ ತೆರಿಗೆ ಇಲ್ಲದೆ ಸರ್ಕಾರ ದೇಶವನ್ನು ನಡೆಸುವುದು ಹೇಗೆ? ಎಂದು ರಾಮ್‌ದೇವ್ ಹೇಳಿದ್ದಾರೆ.

- Advertisement -
- Advertisement -

ಪೆಟ್ರೋಲ್ ಬೆಲೆ ಏರುತ್ತಿರುವುದರ ಕುರಿತು ಪ್ರಶ್ನಿಸಿದ ಪತ್ರಕರ್ತನಿಗೆ ಬಾಯ್ಮುಚ್ಚು, ಹೀಗೆ ಪ್ರಶ್ನೆ ಕೇಳಿದರೆ ನಿನಗೆ ಒಳ್ಳೆಯದಾಗೊಲ್ಲ ಎಂದು ಬಾಬಾ ರಾಮ್‌ದೇವ್ ಧಮಕಿ ಹಾಕಿರುವ ಘಟನೆ ಹರಿಯಾಣದ ಕರ್ನಾಲ್‌ನಲ್ಲಿ ನಡೆದಿದೆ.

ಸರ್ಕಾರಗಳು ಜನರಿಗೆ 30 ರೂಗೆ ಒಂದು ಲೀಟರ್ ಪೆಟ್ರೋಲ್ ಮತ್ತು 300 ರೂಗೆ ಗ್ಯಾಸ್ ಸಿಲಿಂಡರ್ ವಿತರಿಸಬೇಕೆಂದು ಹಿಂದೊಮ್ಮೆ ನೀವು ಹೇಳಿದ್ದೀರಿ ಎಂದು ಪತ್ರಕರ್ತನೊಬ್ಬ ಬಾಬಾ ರಾಮ್‌ದೇವ್‌ರವರನ್ನು ಪ್ರಶ್ನಿಸಿದರು. ಆಗ ಪ್ರತಿಕ್ರಿಯಿಸಿದ ರಾಮ್‌ದೇವ್ “ಹೌದು ನಾನು ಹಾಗೆ ಹೇಳಿದ್ದೆ. ಈಗ ನೀನು ಏನು ಮಾಡ್ತೀಯ? ಈ ರೀತಿಯ ಪ್ರಶ್ನೆಗಳನ್ನು ಕೇಳಬೇಡ. ನಿನ್ನ ಪ್ರಶ್ನೆಗಳಿಗೆ ಉತ್ತರಿಸಿಲು ನಾನು ನಿನ್ನ ಗುತ್ತಿಗೆದಾರನಲ್ಲ” ಎಂದು ಉತ್ತರಿಸಿದ್ದಾರೆ.

ಈಗ ಪೆಟ್ರೋಲ್ ಬೆಲೆ ಗಗನಕ್ಕೆ ಏರಿಕೆ ಎಂದು ಪತ್ರಕರ್ತ ಪ್ರಶ್ನಿಸಿದಾಗ ಕೆಂಡಮಂಡಲವಾದ ರಾಮ್‌ದೇವ್ “ಬಾಯ್ಮುಚ್ಚು, ಇದೇ ರೀತಿ ಪ್ರಶ್ನಿಸಿದರೆ ನಿನಗೆ ಒಳ್ಳೆಯದಾಗುವುದಿಲ್ಲ. ಈ ರೀತಿ ಮಾತನಾಡಬೇಡ. ನೀನು ಒಳ್ಳೇಯ ಕುಟುಂಬದವನಾಗಿರಬೇಕು” ಎಂದು ಪರೋಕ್ಷವಾಗಿ ಧಮಕಿ ಹಾಕಿದ್ದಾರೆ.

ನಂತರ ಮಾತನಾಡಿದ ರಾಮ್‌ದೇವ್, “ಈ ಕಷ್ಟಕರ ಸಮಯದಲ್ಲಿ ಜನರು ಹೆಚ್ಚು ಕಷ್ಟಪಟ್ಟು ಕೆಲಸ ಮಾಡಬೇಕು. ಇಂಧನ ಬೆಲೆ ಕಡಿಮೆ ಮಾಡಿದರೆ ಸರ್ಕಾರಕ್ಕೆ ತೆರಿಗೆ ಸಂಗ್ರಹವಾಗುವುದಿಲ್ಲ. ಹಾಗಾದರೆ ದೇಶವನ್ನು ನಡೆಸುವುದು ಹೇಗೆ? ಜನರಿಗೆ ಸಂಬಳ ಕೊಡಬೇಕು, ರಸ್ತೆಗಳನ್ನು ನಿರ್ಮಿಸಬೇಕು ಅಲ್ಲವೆ. ಹೌದು, ಹಣದುಬ್ಬರ ಕಡಿಮೆಯಾಗಬೇಕೆಂದು ನಾನು ಒಪ್ಪುತ್ತೇನೆ. ಆದರೆ ಜನರು ಕಷ್ಟಪಟ್ಟು ಕೆಲಸ ಮಾಡಬೇಕು. ನಾನು ಕೂಡ ಬೆಳಿಗ್ಗೆ 4 ಗಂಟೆಗೆ ಎದ್ದು ರಾತ್ರಿ 10 ಗಂಟೆಯವರೆಗೂ ಕೆಲಸ ಮಾಡುತ್ತೇನೆ” ಎಂದು ಹೇಳಿದಾಗ ಅವರ ಸುತ್ತ ನೆರೆದಿದ್ದ ಬೆಂಬಲಿಗರು ಚಪ್ಪಾಳೆ ತಟ್ಟಿ ಬೆಂಬಲಿಸಿದ್ದಾರೆ.

ಈ ಹಿಂದೆ ಯುಪಿಎ ಸರ್ಕಾರವಿದ್ದಾಗ ಬಾಬಾ ರಾಮ್‌ದೇವ್ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಕುರಿತು ಸತತ ಟೀಕೆ ಮಾಡುತ್ತಿದ್ದರು. ಸರ್ಕಾರದ ಭ್ರಷ್ಟಾಚಾರದ ಕಾರಣದಿಂದ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ. ಬ್ರಿಟೀಷ್ ಮನಸ್ಥಿತಿಯ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ. ಸರ್ಕಾರದ ಕೆಟ್ಟ ಆರ್ಥಿಕ ನೀತಿಯಿಂದಾಗಿ ಬಡತನ ಹೆಚ್ಚುತ್ತಿದೆ ಅದಕ್ಕೆ ನೇರವಾಗಿ ಸರ್ಕಾರವೇ ಕಾರಣವಾಗಿದೆ ಎಂದು ಕಟುವಾಗಿ ಟೀಕಿಸಿದ್ದರು.

ಕಪ್ಪು ಹಣ ವಾಪಸ್ ತಂದರೆ 30 ರೂಗೆ ಒಂದು ಲೀಟರ್ ಪೆಟ್ರೋಲ್ ನೀಡಬಹುದು ಎಂದು ರಾಮ್‌ದೇವ್ ಹೇಳಿದ್ದರು. ಯುಪಿಎ ಸರ್ಕಾರ ಇಂಧನಗಳ ಮೇಲೆ 50% ತೆರಿಗೆ ವಿಧಿಸುವ ಮೂಲಕ ಜನರ ಕೈಯಲ್ಲಿನ ಹಣವನ್ನು ಕಿತ್ತುಕೊಳ್ಳುತ್ತಿದೆ ಎಂದು ಟೀಕಿಸಿದ್ದರು. ಈಗ ಬಿಜೆಪಿ ಸರ್ಕಾರ ಬಂದ ನಂತರ ಅವರು ಪೆಟ್ರೋಲ್ ಡೀಸೆಲ್ ಬೆಲೆ ದುಪ್ಪಟ್ಟಾದರೂ ತುಟಿ ಬಿಚ್ಚುತ್ತಿಲ್ಲ. ಪ್ರಶ್ನಿಸಿದ ಪತ್ರಕರ್ತನಿಗೆ ಧಮಕಿ ಹಾಕಿದ್ದಲ್ಲದೆ, ಜನರು ಕಷ್ಟಪಟ್ಟು ದುಡಿಯಬೇಕೆಂದು ಉಪದೇಶ ನೀಡಿದ್ದಾರೆ.

ಕೇಂದ್ರ ಸರ್ಕಾರ ಕಳೆದ 10 ದಿನಗಳಿಂದ ಸತತವಾಗಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಸುತ್ತಲೇ ಇದೆ. ಬೆಂಗಳೂರಿನಲ್ಲಿ 9 ಬಾರಿ ಬೆಲೆ ಏರಿಕೆಯಾಗಿದ್ದು ಲೀಟರ್ ಪೆಟ್ರೋಲ್ ಬೆಲೆ 107.30 ರೂಗೆ ತಲುಪಿದೆ. ಡೀಸೆಲ್ ದರ 91.27 ರೂ ಆಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿ; ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ನಿಂತಿಲ್ಲ: ಏಕೆ ಗೊತ್ತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...