ಅತಿಕ್ರಮಣ ವಿರೋಧಿ ಕಾರ್ಯಾಚರಣೆಯ ಹೆಸರಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಘಟನೆಗಳಿಗೆ ಆಮ್ ಆದ್ಮಿ ಪಕ್ಷ (ಎಎಪಿ) ಪ್ರತಿಕ್ರಿಯೆ ನೀಡಿದೆ. “ಬಿಜೆಪಿ ಬುಲ್ಡೋಜರ್ ರಾಜಕೀಯ ಮಾಡುತ್ತಿದ್ದು, ಇದರಿಂದ ಇಡೀ ದೆಹಲಿಯೇ ಧ್ವಂಸವಾಗಲಿದೆ” ಎಂದು ಎಚ್ಚರಿಸಿದ್ದಾರೆ.
“ದೆಹಲಿಯಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಮೊದಲು ಅನುಮತಿ ನೀಡಿದ ಕೌನ್ಸಿಲರ್‌ಗಳಿಗೂ ನೋಟಿಸ್ ಜಾರಿ ಮಾಡಬೇಕು” ಎಂದು ಎಎಪಿ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಮಶೀಶ್ ಸಿಸೋಡಿಯಾ, “1,750 ಅನಧಿಕೃತ, ನಿಯಮಿತವಲ್ಲದೆ ಕಾಲೋನಿಗಳಿಗೆ ನೋಟಿಸ್ ಕಳುಹಿಸಲಾಗಿದೆ. ಇಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇದು ಬುಲ್ಡೋಜರ್ ರಾಜಕಾರಣ. ಈ ಜನರನ್ನು ನಿರಾಶ್ರಿತರನ್ನಾಗಿ ಮಾಡಲು ಬಿಜೆಪಿ ಬಯಸುತ್ತಿದೆ. ಜೊತೆಗೆ 10 ಲಕ್ಷ ಜನರು ವಾಸಿಸುವ ಜೆಜೆ ಕ್ಲಸ್ಟರ್‌ಗಳ 860 ಕಾಲೋನಿಗಳಿಗೂ ನೋಟಿಸ್‌ಗಳನ್ನು ಕಳುಹಿಸಲಾಗಿದೆ. ಈ ರೀತಿಯಾಗಿ ಇಡೀ ದೆಹಲಿಯನ್ನು ಧ್ವಂಸ ಮಾಡಲು ಬಿಜೆಪಿ ಹೊರಟಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವುದನ್ನು ಉಲ್ಲೇಖಿಸಿ ಮಾತನಾಡಿರುವ ಅವರು, “ಬಿಜೆಪಿಯ 17 ವರ್ಷಗಳ ಅಧಿಕಾರಾವಧಿಯಲ್ಲಿ ಕೌನ್ಸಿಲರ್‌ಗಳು, ಎಂಜಿನಿಯರ್‌ಗಳು ಮತ್ತು ಇತರ ಹಲವಾರು ಅಧಿಕಾರಿಗಳು ಭ್ರಷ್ಟಾಚಾರದ ಮೂಲಕ ಹಣ ಸಂಪಾದಿಸಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
“ತುಚ್ಚಿ (ಅಗ್ಗದ) ರಾಜಕೀಯವನ್ನು ನಡೆಸದಂತೆ ನಾನು ಬಿಜೆಪಿಯಲ್ಲಿ ಒತ್ತಾಯಿಸುತ್ತೇನೆ. ನೀವು ಏನನ್ನಾದರೂ ಮಾಡಲು ಬಯಸಿದರೆ, ಈ ನಿರ್ಮಾಣಗಳು ಯಾರ ಅಧಿಕಾರಾವಧಿಯಲ್ಲಿ ನಡೆದಿವೆಯೋ ಆ ಪಾರ್ಷದ್‌ಗಳನ್ನು (ಕೌನ್ಸಿಲರ್‌ಗಳು), ಎಂಜಿನಿಯರ್ ಹಾಗೂ ಮೇಯರ್‌ಗಳನ್ನು ಹೊಣೆಗಾರರನ್ನಾಗಿ ಮಾಡಿ” ಎಂದು ಸಿಸೋಡಿಯಾ ಆಗ್ರಹಿಸಿದ್ದಾರೆ.
ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಫ್ಲಾಟ್‌ಗಳಲ್ಲಿ ಹೆಚ್ಚುವರಿ ಬಾಲ್ಕನಿ ಅಥವಾ ಕೊಠಡಿಯನ್ನು ನಿರ್ಮಿಸಿದ ಜನರಿಗೆ ನೋಟಿಸ್ ನೀಡಲಾಗಿದೆ ಎಂದು ಸಿಸೋಡಿಯಾ ತಿಳಿಸಿದ್ದು, “ಕಳೆದ ಎರಡು ವರ್ಷಗಳಲ್ಲಿ ಸುಮಾರು ಮೂರು ಲಕ್ಷ ಜನರು ಇಂತಹ ನೋಟಿಸ್‌ಗಳನ್ನು ಸ್ವೀಕರಿಸಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
“ನಾವು ಜನರಿಗೆ ಮನೆ ನೀಡಲು ಪ್ರಯತ್ನಿಸುತ್ತಿದ್ದೇವೆ ಮತ್ತು ಬಿಜೆಪಿ ಬುಲ್ಡೋಜರ್ ಮೂಲಕ ಅವುಗಳನ್ನು ಉರುಳಿಸುತ್ತದೆ” ಎಂದು ಕಟುವಾಗಿ ಟೀಕಿಸಿದ್ದಾರೆ.
ಇದನ್ನೂ ಓದಿರಿ: ಮೊಘಲ್ ಕಾಲದ ಹೆಸರುಳ್ಳ 40 ಗ್ರಾಮಗಳ ಮರುನಾಮಕರಣಕ್ಕೆ ದೆಹಲಿ ಬಿಜೆಪಿ ಆಗ್ರಹ
ದೆಹಲಿಯ ಜಹಾಂಗೀರ್‌ಪುರಿ ಕೋಮು ಸಂಘರ್ಷ ನಡೆದ ಬಳಿಕ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಬಿಜೆಪಿ ಆರಂಭಿಸಿತು. ಸುಪ್ರೀಂ ಕೋರ್ಟ್ ತಡೆಯಾಜ್ಞೆಯ ನಡುವೆಯೂ ಕಾರ್ಯಾಚರಣೆಯನ್ನು ನಡೆಸಿದ್ದು ಚರ್ಚೆಗೆ ಗ್ರಾಸವಾಗಿತ್ತು.
“ಸುಪ್ರೀಂಕೋರ್ಟ್ ತೀರ್ಪನ್ನು ಮೇಯರ್‌ಗೆ ತಿಳಿಸಿದ ನಂತರವೂ ನಡೆದ ಎಲ್ಲಾ ಉರುಳಿಸುವಿಕೆ ಕಾರ್ಯಾಚರಣೆಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ” ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಎರಡು ವಾರಗಳ ನಂತರ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿತ್ತು.
ಜಹಾಂಗೀರ್‌ಪುರಿ ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ದುಶ್ಯಂತ್ ದವೆ, “ದೆಹಲಿ ಬಿಜೆಪಿ ಮುಖ್ಯಸ್ಥರು ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಮೇಯರ್‌ಗೆ ದೂರು ನೀಡಿದ ನಂತರ ಹಿಂಸಾಚಾರ ಪೀಡಿತ ಪ್ರದೇಶದಿಂದ ಅತಿಕ್ರಮಣಗಳನ್ನು ತೆಗೆದುಹಾಕಲು ರಾತ್ರೋರಾತ್ರಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಯಾವುದೆ ಸೂಚನೆಯಿಲ್ಲದೆ ಕಾರ್ಯಾಚರಣೆ ಪ್ರಾರಂಭಿಸಲಾಯಿತು” ಎಂದು ವಾದಿಸಿದ್ದರು.
ಇದನ್ನೂ ಓದಿರಿ: ದೆಹಲಿ: ಲೈಂಗಿಕ ದೌರ್ಜನ್ಯದ ಕುರಿತು ದೂರು ಹೇಳಿದ ವಿದ್ಯಾರ್ಥಿನಿಯರಿಗೆ ‘ಮರೆತುಬಿಡಿ’ ಎಂದ ಪ್ರಾಂಶುಪಾಲರು
ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದೆಹಲಿಯಂತಹ ರಾಜ್ಯಗಳಲ್ಲಿ ಮುಸ್ಲಿಮರ ಕಟ್ಟಡಗಳನ್ನು ನೆಲಸಮಗೊಳಿಸಲಾಗುತ್ತಿದೆ ಎಂದು ಜಮಿಯತ್ ಉಲಾಮಾ-ಇ-ಹಿಂದ್ ಸಲ್ಲಿಸಿದ ಮನವಿಯನ್ನು ಗಮನಿಸಿದ ಸುಪ್ರೀಂಕೋರ್ಟ್, ಅತಿಕ್ರಮಣ ವಿರೋಧಿ ಅಭಿಯಾನವನ್ನು ಸ್ಥಗಿತಗೊಳಿಸಿತ್ತು.
ಸುಪ್ರೀಂಕೋರ್ಟ್ ಆದೇಶ ಇದ್ದರೂ ಬುಲ್ಡೋಜರ್‌ಗಳು ಮಸೀದಿ ಹೊರಗಿನ ಅಂಗಡಿಗಳು, ಕಟ್ಟಡಗಳನ್ನು ಸುಪ್ರೀಂಕೋರ್ಟ್ ಎರಡನೇ ಬಾರಿಗೆ ಹಸ್ತಕ್ಷೇಪ ಮಾಡುವವರೆಗೂ ಧ್ವಂಸಗೊಳಿಸಲಾಯಿತು. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಅಂತಿಮವಾಗಿ ಕಾರ್ಯಚರಣೆಯನ್ನು ನಿಲ್ಲಿಸುವಂತೆ ಆದೇಶ ನೀಡಿದ್ದರು.
ಬುಲ್ಡೋಝರ್‌ಗಳು ಧ್ವಂಸಗೊಳಿಸುತ್ತಿರುವ ಪ್ರದೇಶಕ್ಕೆ ತೆರಳಿದ್ದ ಸಿಪಿಐಎಂ ನಾಯಕಿ ಬೃಂದಾ ಕಾರಟ್ ಹಾಗೂ ಅವರ ತಂಡ ಬುಲ್ಡೋಝರ್ ಮುಂದೆ ನಿಂತು ಪ್ರತಿಭಟಿಸಿದ್ದರು.



ಯಾರು ಕಾನೂನನ್ನು ಕೈಗೆ ತಗೋತಾರೋ ಅವರಿಗೆ ಶಿಕ್ಷೇ ಆದರೆ ಈ ಎಎಪಿಗೆ ಏನು ತೊಂದರೆ,ಹಾಗಾದರೆ ಎಎಪಿ ಕಾನೂನನ್ನು ಕೈಗೆ ತಗೋಳ್ಳೋರ ಪರವೋ ಅಥವಾ ಸಂವಿಧಾನದ ಪರವೋ ಸ್ಪಷ್ಟ ಪಡಿಸಬೇಕಿದೆ