Homeಮುಖಪುಟಬೆಂಗಳೂರು ಲ್ಯಾಂಡ್‌ಮಾರ್ಕ್ಸ್; ’ಬ್ಲಾಸಂ ಬುಕ್ ಹೌಸ್'ಗೆ 20ರ ಪ್ರಾಯ: ಪುಸ್ತಕಗಳ ಸುಗಂಧ ಪಸರಿಸಿದ ಮಾಯಿಗೌಡ

ಬೆಂಗಳೂರು ಲ್ಯಾಂಡ್‌ಮಾರ್ಕ್ಸ್; ’ಬ್ಲಾಸಂ ಬುಕ್ ಹೌಸ್’ಗೆ 20ರ ಪ್ರಾಯ: ಪುಸ್ತಕಗಳ ಸುಗಂಧ ಪಸರಿಸಿದ ಮಾಯಿಗೌಡ

- Advertisement -
- Advertisement -

ನಾವು ಇಂದು ಆನ್‌ಲೈನ್ ಕಾಲದಲ್ಲಿದ್ದೇವೆ. ಬಹುತೇಕ ಯಾವುದೇ ಪುಸ್ತಕವನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ಆದರೂ ನಾನು ಪುಸ್ತಕದ ಅಂಗಡಿಗಳಿಗೆ ಎಡತಾಕುವುದೇಕೆ? ಕಳೆದು ಇಪ್ಪತ್ತು ವರುಷಗಳಿಂದ ನಾನು ಬೆಂಗಳೂರಿನಲ್ಲಿರುವ ಎಲ್ಲ ಬಗೆಯ ಪುಸ್ತಕದ ಅಂಗಡಿಗಳಿಗೆ ಅಲೆದಿದ್ದೇನೆ. ಸೆಕೆಂಡ್‌ಹ್ಯಾಂಡ್ ಪುಸ್ತಕಗಳಿಗಾಗಿ ಓಡಾಡಿದ್ದೇ ಹೆಚ್ಚು. ಇಪ್ಪತ್ತು ವರುಷಗಳ ಹಿಂದೆ ಅವೆನ್ಯೂ ರಸ್ತೆ, ಉಪ್ಪಾರ ಪೇಟೆ, ಬಳೆಪೇಟೆಯ ಫುಟ್‌ಪಾತುಗಳ ಮೇಲೆ ಅಪರೂಪದ ಹಳೆಯ ಪುಸ್ತಕಗಳು ಸಿಗುತ್ತಿದ್ದವು. ಈಗಲ್ಲಿ ಕೇವಲ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳೇ ತುಂಬಿ ಹೋಗಿವೆ. ನಾನು ಬೆಂಗಳೂರಿನಲ್ಲಿ ಅತಿಹೆಚ್ಚು ಜಾಲಾಡುವ ಅಂಗಡಿಗಳೆಂದರೆ ರಾಜಾಜಿನಗರದಲ್ಲಿರುವ ’ಲಾವಣ್ಯ ಪುಸ್ತಕ’, ’ಆಕೃತಿ ಪುಸ್ತಕ’, ಮಲ್ಲೇಶ್ವರಂನ ’ಸೂರ್ಯ ಬುಕ್ಸ್’, ಬ್ರಿಗೇಡ್ ರಸ್ತೆಯ ’ಸೆಲೆಕ್ಟ್ ಬುಕ್ಸ್’, ಚರ್ಚ್ ಸ್ಟ್ರೀಟ್‌ನ ’ಬುಕ್‌ವರ್ಮ್’, ’ಬುಕ್ ಹೈವ್’ ಹಾಗೂ ’ಬ್ಲಾಸಂ ಬುಕ್ ಹೌಸ್’. ಪ್ರತಿಯೊಂದು ಪುಸ್ತಕದ ಅಂಗಡಿಗಳು ತಮ್ಮದೇ ಬಗೆಯಲ್ಲಿ ವಿಶಿಷ್ಟವಾಗಿರುತ್ತವೆ. ಒಂದು ಅಂಗಡಿಯಲ್ಲಿ ಸಿಗುವ ಪುಸ್ತಕಗಳು ಮತ್ತೊಂದು ಅಂಗಡಿಯಲ್ಲಿ ಸಿಗುವುದಿಲ್ಲ. ಆದರೆ ಮಾಯಿಗೌಡ ಅವರ ’ಬ್ಲಾಸಂ’ನ ಎರಡು ಬೃಹತ್ ಮಳಿಗೆಗಳು ಪುಸ್ತಕಪ್ರಿಯರನ್ನು ದೊಡ್ಡ ಪ್ರಮಾಣದಲ್ಲಿ ಸೆಳೆದುಕೊಂಡಿರುವುದು ದಿಟ. ಕೇವಲ ಎರಡು ದಶಕಗಳ ಅವಧಿಯಲ್ಲಿ ’ಬ್ಲಾಸಂ’ ಬೆಳೆದಿರುವ ಪರಿಯನ್ನು ಕಂಡರೆ ಯಾರಿಗಾದರೂ
ಅಚ್ಚರಿಯಾಗದಿರದು. ಪುಸ್ತಕ ಪ್ರೇಮಿಗಳ ಪಾಲಿಗೆ ಇದು ಸ್ವರ್ಗವೇ ಸರಿ.

2002ರಲ್ಲಿ ಬೆಂಗಳೂರಿನ ಚರ್ಚ್ ಸ್ಟ್ರೀಟಿನಲ್ಲಿ ಆರಂಭವಾದ ’ಬ್ಲಾಸಂ ಬುಕ್ ಹೌಸ್’ಗೆ ಈಗ ಇಪ್ಪತ್ತು ವರ್ಷಗಳ ಸಂಭ್ರಮ. ಜಗತ್ತಿನ ವೈವಿಧ್ಯಮಯ ಪುಸ್ತಕಗಳ ಓದಿನ ರುಚಿಯನ್ನು ಹೊಂದಿದವರಿಗೆ ಹಾಗೂ ಅಪರೂಪದ ಕ್ಲಾಸಿಕ್ ಪುಸ್ತಕಗಳನ್ನು ಸಂಗ್ರಹಿಸುವ ಹವ್ಯಾಸದವರಿಗೆ ಈ ’ಬ್ಲಾಸಂ’ ಪುಸ್ತಕದ ಅಂಗಡಿ ಅತ್ಯಂತ ನೆಚ್ಚಿನ ತಾಣವಾಗಿದೆ. ಜಗತ್ತಿನ ಹೆಸರಾಂತ ಲೇಖಕ/ಲೇಖಕಿಯರ ಬಹುತೇಕ ಪುಸ್ತಕಗಳು ಸಿಗುತ್ತವೆ ಎಂಬ ನಂಬಿಕೆಯಿಂದಲೇ ಜನರು ಇಲ್ಲಿಗೆ ಬರುತ್ತಾರೆ. ಈ ಬೃಹತ್ ಮಳಿಗೆ ಐದು ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿದೆ. ಇಲ್ಲಿ ನೂರಾರು ಪ್ರಕಾರಗಳಲ್ಲಿ ಹಳೆಯ, ಬಳಸಿದ ಹಾಗೂ ಇತ್ತೀಚೆಗೆ ಪ್ರಕಟವಾಗಿರುವ ಹೊಸ ಪುಸ್ತಕಗಳು ಕೂಡ ಲಭ್ಯವಿರುತ್ತವೆ. ಈ ’ಬ್ಲಾಸಂ’ ಬೆಂಗಳೂರಿಗೆ ಒಂದು ಸಾಂಸ್ಕೃತಿಕ ಮೆರಗನ್ನು ನೀಡಿದೆ. ಇದು ಬೆಂಗಳೂರು ಅಥವಾ ಕರ್ನಾಟಕ ಮಾತ್ರವಲ್ಲ; ಇಡೀ ಭಾರತದಲ್ಲಿಯೇ ಅತಿ ದೊಡ್ಡ ಪುಸ್ತಕ ಮಾರಾಟ ಕೇಂದ್ರವಾಗಿ ಹೊರಹೊಮ್ಮಿದೆ. ಇಂತಹ ಸಾಹಸಕ್ಕೆ ಕೈಹಾಕಿದವರು ಹಾಗೂ ’ಬ್ಲಾಸಂ’ ಎಂಬ ಬ್ರ್ಯಾಂಡ್ ಅನ್ನು ನಿರ್ಮಿಸಿದವರು ಮಾಯಿಗೌಡ ಎಂಬ ಶ್ರಮಜೀವಿ. ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಪುಸ್ತಕ ವ್ಯಾಪಾರದ ಜೊತೆಯಲ್ಲಿ ಪುಸ್ತಕ ಸಂಸ್ಕೃತಿಯನ್ನು ಹಬ್ಬಿಸುವುದರಲ್ಲಿ ಕೂಡ ಅವರ ಪಾತ್ರ ಮಹತ್ವದ್ದಾಗಿದೆ.

’ಬ್ಲಾಸಂ’ ಎಂಬ ಅದ್ಭುತ ಸಂಸ್ಥೆಯ ಹಿಂದಿನ ಚಾಲಕಶಕ್ತಿಯೇ ಸರಳ ಸಜ್ಜನಿಕೆಯ ನಲವತ್ತೇಳರ ಕ್ರಿಯಾಶೀಲ ತರುಣ ಮಾಯಿಗೌಡ. ಅದ್ಯಾವ ಮಾಯಾಶಕ್ತಿಯಿಂದ ಈ ಪುಸ್ತಕ ಉದ್ಯಮವನ್ನು ಕಟ್ಟಿದರು ಎಂಬುದರ ಹಿನ್ನೆಲೆಯು ಕುತೂಹಲಕಾರಿಯಾಗಿದೆ. ಮಾಯಿಗೌಡ ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನ ರಂಗಸಮುದ್ರ ಎಂಬ ಹಳ್ಳಿಯವರು. ಮೈಸೂರಲ್ಲಿ ಡಿಪ್ಲೋಮಾ ಓದಿದರು. ರಾಜ್ಯಕ್ಕೆ ಏಳನೇ ರ್‍ಯಾಂಕ್ ಪಡೆದುಕೊಂಡಿದ್ದರು. ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಜಿನಿಯರಿಂಗ್ ಶಿಕ್ಷಣ ಪಡೆಯಲು 1995ರಲ್ಲಿ ಬೆಂಗಳೂರಿಗೆ ಬಂದರು. ಹಗಲು ಹೊತ್ತಿನಲ್ಲಿ ಕಾಲೇಜಿಗೆ ಹೋಗುತ್ತಿದ್ದರು. ಆರ್ಥಿಕ ದುಸ್ಥಿತಿಯಿಂದಾಗಿ
ಫ್ಯಾಕ್ಟರಿಯೊಂದರಲ್ಲಿ ರಾತ್ರಿ ಪಾಳಿಯ ಕೆಲಸಕ್ಕೆ ಸೇರಿಕೊಂಡಿದ್ದರು.

ಮಾಯಿಗೌಡ ಅವರ ವಿದ್ಯಾರ್ಥಿನಿಲಯವು ಮೆಜೆಸ್ಟಿಕ್ ಸಮೀಪದಲ್ಲಿಯೇ ಇತ್ತು. ಉಪ್ಪಾರಪೇಟೆ ಪೊಲೀಸ್ ಠಾಣೆಯ ಹತ್ತಿರ ಪಾದಚಾರಿಗಳ ರಸ್ತೆಯ ಮೇಲೆ ಹಳೆಯ ಪುಸ್ತಕಗಳ ಮಾರಾಟವು ಮಾಯಿಗೌಡರ ಕಣ್ಣಿಗೆ ಬಿತ್ತು. ಒಂದು ದಿನ ಅಲ್ಲಿಯ ಪುಸ್ತಕಗಳನ್ನು ತೆಗೆದುಕೊಂಡು ಎಂ.ಜಿ. ರಸ್ತೆಯ ಹಿಗ್ಗಿನ್ ಭಾಥಮ್ಸ್ ಅಂಗಡಿಯ ಮುಂದಿನ ರಸ್ತೆಯಲ್ಲಿ ಮಾರಾಟ ಮಾಡಿದರು. ಇದು ಅವರ ಮುಂದಿನ ಗುರಿ ಮತ್ತು ಕನಸಿಗೆ ದಾರಿ ಮಾಡಿಕೊಟ್ಟಿತು. ಅವರ ಭವಿಷ್ಯದ ದಿಕ್ಕನ್ನು ಬದಲಿಸಿತು. ಆದರೆ ಅದು ಸುಲಭದ ದಾರಿಯಾಗಿರಲಿಲ್ಲ. ಆರು ವರ್ಷಗಳ ಕಾಲ ಅವರು ಎಂ.ಜಿ. ರಸ್ತೆಯ ಬೀದಿಗಳಲ್ಲಿಯೇ ಪುಸ್ತಕ ಮಾರಾಟ ಮಾಡಿದರು. ಚರ್ಚ್ ಸ್ಟ್ರೀಟಿನ ಜನನಿಬಿಡ ಪ್ರದೇಶದಲ್ಲಿ 2002ರಲ್ಲಿ ಪುಸ್ತಕದ ಅಂಗಡಿ ತೆರೆದರು. 200 ಚದುರಡಿಯಲ್ಲಿ 1500 ಪುಸ್ತಕಗಳೊಂದಿಗೆ ’ಬ್ಲಾಸಂ ಬುಕ್ ಹೌಸ್’ಗೆ ಅಡಿಪಾಯ ಹಾಕಿದರು. ಅಂದು ಮಾರಾಟ ಮಾಡಿದ ಮೊದಲ ಪುಸ್ತಕ ಡೇಲ್ ಕಾರ್ನೆಗಿಯವರ ’ಹೌ ಟು ವಿನ್ ಫ್ರೆಂಡ್ಸ್ ಅಂಡ್ ಇನ್‌ಫ್ಲುಯೆನ್ಸ್ ಪೀಪಲ್’ ಎಂದು ಮಾಯಿಗೌಡ ಇಂದು ನೆನಪಿಸಿಕೊಳ್ಳುತ್ತಾರೆ. ಅವರು ತಮ್ಮ ಅಂಗಡಿಯಲ್ಲಿ ’ಕ್ಯಾಚರ್ ಇನ್ ದಿ ರೈ’, ’ಎನಿಮಲ್ ಫಾರ್ಮ್’, ’ಇಲಿಯಡ್’, ’ಔಟ್‌ಸೈಡರ್’ ’ಪ್ಲೇಗ್’ ಹಾಗೂ ’ಕ್ಯಾಚ್ 22’ ಪುಸ್ತಕಗಳು ಹೆಚ್ಚು ಮಾರಾಟವಾಗಿವೆ ಎನ್ನುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮಾಯಿಗೌಡ ಅವರು ಬೆಂಗಳೂರಿನಲ್ಲಿ ಒಂದು ನೆಲೆಯನ್ನು ಕಂಡುಕೊಳ್ಳಲು ಅನುಭವಿಸಿದ ಕಷ್ಟಕೋಟಲೆಗಳನ್ನು ಹಾಗೂ ತಾನು ಪುಸ್ತಕಗಳನ್ನು ಮಾರುತ್ತಿದ್ದ ಸಂಗತಿಯನ್ನು ತಮ್ಮ ತಂದೆ ತಾಯಿಗೆ ಹೇಳಿರಲಿಲ್ಲ. ಅವರಿಗೆ ತಮ್ಮ ಮಗ ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂಬ ಆಸೆಯಿತ್ತು. ಆದರೆ
ಮಾಯಿಗೌಡ ಅವರು ಪುಸ್ತಕಗಳನ್ನು ಮಾರುವುದರಲ್ಲಿ ಅತಿಯಾದ ಸಂತೋಷ ಹಾಗೂ ಆತ್ಮತೃಪ್ತಿಯನ್ನು ಕಂಡುಕೊಂಡಿದ್ದರು. ಕೃಷಿ ಕುಟುಂಬದಿಂದ ಬಂದಿರುವ ಅವರು ಇಂಜಿನಿಯರ್ ಆಗಿ ವೃತ್ತಿಯನ್ನು ಆಯ್ದುಕೊಂಡಿದ್ದರೆ ಬೆಂಗಳೂರಿನಲ್ಲಿ ’ಬ್ಲಾಸಂ’ ಎಂಬ ಸಾಂಸ್ಕೃತಿಕ ಹೆಗ್ಗುರುತು ಇರುತ್ತಿರಲಿಲ್ಲ.

ಬೆಂಗಳೂರಿನ ಚರ್ಚ್ ಸ್ಟ್ರೀಟ್ ಎಂದರೆ ಮೊದಲೆಲ್ಲ ’ಫುಡ್ ಸ್ಟ್ರೀಟ್’ ಎಂದೇ ಕರೆಯಲಾಗುತ್ತಿತ್ತು. ನಂತರದಲ್ಲಿ ಕುಡಿಯುವವರ ಪಾಲಿಗೆ ’ಪಬ್ ಸ್ಟ್ರೀಟ್’ ಎಂಬ ಖ್ಯಾತಿಯನ್ನು ಪಡೆದುಕೊಂಡಿತು. ಆದರೆ ಈಗ ಅದನ್ನು ’ಬುಕ್ಸ್ ಸ್ಟ್ರೀಟ್’ ಎಂದು ಕರೆದರೆ ಅತಿಶಯೋಕ್ತಿಯಲ್ಲ. ಯಾಕೆಂದರೆ ಈ ಬೀದಿಯಲ್ಲಿಯೇ ಹೆಚ್ಚು ಪುಸ್ತಕದ ಅಂಗಡಿಗಳಿವೆ. ಕಾಫಿ ಹೌಸ್ ಎದುರಲ್ಲಿ ’ಬ್ಲಾಸಂ ಬುಕ್ ಹೌಸ್’ ಮೂರು ಮಹಡಿಗಳಲ್ಲಿ ಆವರಿಸಿಕೊಂಡಿದೆ. ಮೆಟ್ರೋದಿಂದ ಇಳಿದು ಚರ್ಚ್ ಸ್ಟ್ರೀಟಿಗೆ ಇಳಿದರೆ ಎದುರಿನಲ್ಲಿ ’ಬ್ಲಾಸಂ ಬುಕ್ ಹೌಸ್’ (2016ರಲ್ಲಿ ತೆರೆದಿದ್ದು) ಎರಡನೆಯ ಅಂಗಡಿಯು ಇದೆ. ಇದರ ಎಡಭಾಗದಲ್ಲಿ ’ಬುಕ್ ವರ್ಲ್ಡ್’ ಹಾಗೂ ಬಲಭಾಗದಲ್ಲಿ ’ಗಂಗಾರಾಮ್ಸ್’ ಇದೆ. ಇತ್ತೀಚೆಗೆ ಇದರ ಎದುರಲ್ಲಿಯೇ ’ಬುಕ್ ಹೈವ್’ ಶುರುವಾಗಿದೆ. ಕಾಫಿ ಹೌಸ್ ಸಮೀಪದಲ್ಲಿಯೇ ಕೃಷ್ಣೇಗೌಡ ಅವರ ’ಬುಕ್ ವರ್ಮ್’ ಕೂಡ ಸಾಕಷ್ಟು ದೊಡ್ಡ ಪ್ರಮಾಣದ ಪುಸ್ತಕಗಳನ್ನು ಹೊಂದಿದೆ. ಚರ್ಚ್ ಸ್ಟ್ರೀಟಿನ ಪಕ್ಕದ ಬ್ರಿಗೇಡ್ ರಸ್ತೆಯಲ್ಲಿ 1945ರಲ್ಲಿ ಆಂಧ್ರ ಮೂಲದ ವಕೀಲರಾದ ಕೆ.ಬಿ.ಕೆ. ರಾವ್ ಅವರಿಂದ ಆರಂಭವಾದ ’ಸೆಲೆಕ್ಟ್ ಬುಕ್ಸ್’ ಅಂಗಡಿ ಇದೆ. ಅವರ ಮಗ ಕೆ.ಕೆ.ಎಸ್. ಮೂರ್ತಿ (90 ವರ್ಷ ದಾಟಿದೆ) ಅವರು ಇಂದಿಗೂ ಮುಂದುವರೆಸಿದ್ದಾರೆ. ಅವರ ಮಗ ಸಂಜಯ್ ಅವರು ಮೂರನೆಯ ತಲೆಮಾರಿನಲ್ಲಿ ಈ ಅಂಗಡಿಯನ್ನು ಮುನ್ನಡೆಸಿದ್ದಾರೆ. ಆದರೆ ಕಾಲದ ಅಗತ್ಯ ಹಾಗೂ ಓದುಗರ ಅಭಿರುಚಿ, ಬೇಡಿಕೆಗೆ ತಕ್ಕ ಹಾಗೆ ಬೃಹತ್ ಪ್ರಮಾಣದಲ್ಲಿ ಪುಸ್ತಕ ಉದ್ಯಮವನ್ನು ಕಟ್ಟಿದವರಲ್ಲಿ ಮಾಯಿಗೌಡ ಮುಖ್ಯರಾಗಿದ್ದಾರೆ.

ಇಂದು ’ಬ್ಲಾಸಂ’ ಅಂಗಡಿಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಿದೆ. ಎಲ್ಲ ಬಗೆಯ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಮಾಯಿಗೌಡ ಅವರು ತಮ್ಮ ಅಂಗಡಿಯಲ್ಲಿ 25 ಜನರಿಗೆ ಉದ್ಯೋಗ ನೀಡಿದ್ದಾರೆ. ಹಾಗಾಗಿ ಅವರೊಬ್ಬ ಯಶಸ್ವಿ ಪುಸ್ತಕೋದ್ಯಮಿಯಾಗಿ ಬೆಳೆದಿದ್ದಾರೆ. ಅತ್ಯಂತ ವಿಶಾಲವಾದ ಮಹಡಿಗಳಲ್ಲಿ ಕ್ಲಾಸಿಕ್ ಪುಸ್ತಕಗಳನ್ನು ಲೇಖಕರ ಅಕಾರಾದಿಯಲ್ಲಿ ಪುಸ್ತಕಗಳನ್ನು ಜೋಡಿಸಲಾಗಿದೆ. ಇದರಿಂದಾಗಿ ಪುಸ್ತಕ ಪ್ರಿಯರು ತಮ್ಮ ನೆಚ್ಚಿನ ಲೇಖಕರ ಪುಸ್ತಕಗಳನ್ನು ಹುಡುಕಲು ಪರದಾಡಬೇಕಾಗಿಲ್ಲ. ಅಲ್ಲಲ್ಲಿಯೇ ಕುಳಿತುಕೊಂಡು ಪುಸ್ತಕದ ಪುಟಗಳನ್ನು ತಿರುವಿ ಹಾಕಬಹುದು. ಇಂತಹದ್ದೇ ನಿರ್ದಿಷ್ಟ ಪುಸ್ತಕ ಅಥವಾ ಲೇಖಕರ ಹೆಸರನ್ನು ಹೇಳಿದರೆ ಕೆಲವೇ ನಿಮಿಷಗಳಲ್ಲಿ ಅದರ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ ಅಲ್ಲಿ ಕೆಲಸ ಮಾಡುವ ಸಂಗಾತಿಗಳು.

ಪ್ರತಿನಿತ್ಯ ’ಬ್ಲಾಸಂ’ಗೆ 200 ರಿಂದ 300 ಜನ ಭೇಟಿ ನೀಡುತ್ತಾರೆ. ವಾರಾಂತ್ಯದ ಶನಿವಾರ ಹಾಗೂ ಭಾನುವಾರಗಳಂದು ಕಾಲಿಡಲು ತೆರಪಿಲ್ಲದಷ್ಟು ಜನರಿಂದ ಅಂಗಡಿಯು ತುಂಬಿ ಹೋಗಿರುತ್ತದೆ. ಮಾಯಿಗೌಡರು ಹೇಳುವ ಹಾಗೆ ಇಂದಿಗೂ ಕಮು, ಕಾಫ್ಕ, ಜಾರ್ಜ್ ಆರ್ವೆಲ್, ಅರ್ನೆಸ್ಟ್ ಹೆಮಿಂಗ್ವೆ, ಮಾರ್ಕ್ ಟ್ವೇನ್, ಜೆ.ಡಿ. ಸ್ಯಾಲಿಂಜರ್, ಚಿನುವಾ ಅಚೀಬೆ, ಮುರಾಕಾಮಿ, ಟಾಲ್‌ಸ್ಟಾಯ್-ಇವರ ಪುಸ್ತಕಗಳು ಅತಿ ಹೆಚ್ಚು ಮಾರಾಟವಾಗುತ್ತಿವೆ. ಸೆಲ್ಪ್ ಹೆಲ್ಪ್ ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹತ್ತು ವರ್ಷಗಳ ಹಿಂದೆ ಚೇತನ್ ಭಗತ್ ಹಾಗೂ ಅಯನ್ ರ್‍ಯಾಂಡ್ ಅವರ ಪುಸ್ತಕಗಳನ್ನು ಹೆಚ್ಚಿನ ಜನ ಕೊಂಡುಕೊಳ್ಳುತ್ತಿದ್ದರು. ಆದರೆ ಇಂದು ಓದುಗರು ಕೂಡ ಬೌದ್ಧಿಕವಾಗಿ ಬೆಳೆದಿದ್ದಾರೆ; ಅವರು ಕ್ಲಾಸಿಕ್ ಪುಸ್ತಕಗಳನ್ನು ಕೊಳ್ಳುತ್ತಿದ್ದಾರೆ ಎಂದರು ಮಾಯಿಗೌಡ. ಓದುಗರು ತಮ್ಮಲ್ಲಿ ಕೊಂಡ ಪುಸ್ತಕಗಳನ್ನು ವಾಪಸ್ಸು ಮಾರಬಹುದು; ಅವುಗಳ ಬದಲಿಗೆ ಬೇರೆ ಪುಸ್ತಕಗಳನ್ನು ಕೂಡ ಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.

ನಾನು ಹಲವು ಬಾರಿ ಮಕ್ಕಳನ್ನು ಬ್ಲಾಸಂಗೆ ಕರೆದುಕೊಂಡು ಹೋಗಿದ್ದೇನೆ. ನನ್ನ ಅಪ್ಪನನ್ನು ಒಂದು ಸಲ ಕರೆದುಕೊಂಡು ಹೋದಾಗ ಅವರು ಇಷ್ಟೊಂದು ಪುಸ್ತಕಗಳನ್ನು ಕಂಡು ದಂಗಾಗಿ ಹೋಗಿದ್ದರು. ನನ್ನ ಹಲವು ಸ್ನೇಹಿತರನ್ನು ಕರೆದುಕೊಂಡು ಹೋಗಿದ್ದೇನೆ. ಆದರೆ ಪುಸ್ತಕದ ಅಂಗಡಿಗೆ ಒಬ್ಬಂಟಿಗನಾಗಿಯೇ ಹೋಗುವುದು ಸರಿಯಾದ ನಿಯಮ ಎಂಬುದು ನನಗೆ ಖಾತ್ರಿಯಾಗಿದೆ. ಯಾಕೆಂದರೆ ಪುಸ್ತಕಗಳನ್ನು ನೋಡಲು, ಹುಡುಕಲು, ಅಲ್ಲಲ್ಲಿ ಓದುವುದಕ್ಕೆ ಭಂಗ ಬರಬಾರದು. ಇದಕ್ಕೆ ಕನಿಷ್ಟ ಒಂದು ಗಂಟೆಯ ಸಮಯವಾದರೂ ಬೇಕಾಗುತ್ತದೆ. ನನಗೆ ವೈಯಕ್ತಿಕವಾಗಿ ಬ್ಲಾಸಂ ಹೆಚ್ಚು ಖುಷಿಯನ್ನು ನೀಡುವ ಜಾಗವಾಗಿದೆ. ನಾನು ಮೊದಲು ಹೋಗುವುದೇ ಕನ್ನಡ ಪುಸ್ತಕಗಳ ರ್‍ಯಾಕ್ ಬಳಿಗೆ. ಇಂಗ್ಲಿಷ್ ಪುಸ್ತಕಗಳಿಗೆ ಹೋಲಿಸಿದರೆ ಕನ್ನಡ ಪುಸ್ತಕಗಳು ತೀರ ಕಡಿಮೆಯೇ. ಆದರೂ ಕೆಲವೊಮ್ಮೆ ಹಳೆಯ ಕ್ಲಾಸಿಕ್‌ಗಳು ಸಿಕ್ಕಿವೆ.

’ಬ್ಲಾಸಂ’ಗೆ ಭೇಟಿ ನೀಡುವ ಎಷ್ಟೋ ಜನರಿಗೆ ಮಾಯಿಗೌಡ ಇವರೇ ಅಂತ ಗೊತ್ತಿರುವುದಿಲ್ಲ. ಅವರು ’ಬ್ಲಾಸಂ’ ಅಂಗಡಿಯನ್ನು ಹುಡುಕಿಕೊಂಡು ಬಂದಿರುತ್ತಾರೆ. ಆದರೆ ಮಾಯಿಗೌಡ ಅವರು ಕೆಲಸಗಾರರೊಂದಿಗೆ ಒಬ್ಬ ಸಾಮಾನ್ಯ ವ್ಯಕ್ತಿಯಾಗಿಯೇ ಪುಸ್ತಕಗಳನ್ನು ಜೋಡಿಸುವುದರಲ್ಲಿ ಹಾಗೂ ಬಿಲ್ ಹಾಕುವುದರಲ್ಲಿ ನಿರತರಾಗಿರುತ್ತಾರೆ. ಅವರಿಗೆ ತಾನೊಬ್ಬ ಈ ಬೃಹತ್ ಮಳಿಗೆಯ ಸ್ಥಾಪಕ ಹಾಗೂ ಮಾಲಿಕನೆನ್ನುವ ಯಾವ ಹಮ್ಮು ಬಿಮ್ಮು ಕೂಡ ಇಲ್ಲ. ಮಾಯಿಗೌಡರು ಸದಾ ಗಂಭೀರವಾಗಿಯೇ ಇರುವಂತೆ ಕಂಡರೂ, ಪರಿಚಯದವರನ್ನು ಕಂಡಾಕ್ಷಣ ಅವರ ಮುಖದಲ್ಲಿ ಮುಗ್ಧ ನಸುನಗು ಮೂಡಿ ಮಾಯವಾಗುತ್ತದೆ; ಅವರದ್ದು ಹಿತಮಿತ ಮೃದು ವಚನ. ಆದರೆ ಅವರು ಸೂಕ್ಷ್ಮವಾಗಿ ಎಲ್ಲರನ್ನು ಗಮನಿಸುತ್ತಾರೆ. ದಿನಕ್ಕೆ ನೂರಾರು ಜನ ಈ ಪುಸ್ತಕದ ಅಂಗಡಿಗೆ ಭೇಟಿ ನೀಡುತ್ತಾರೆ. ಎಷ್ಟೋ ಸಲ ಅವರಾಗಿಯೇ ನನ್ನ ಬಳಿ ಬಂದು ಟಾಲ್‌ಸ್ಟಾಯ್, ಟರ್ಗೆನೀವ್, ದಾಸ್ತೋವ್‌ಸ್ಕಿಯ ಪುಸ್ತಕಗಳು ರೆಡ್ ಹಾರ್ಡ್‌ಬೌಂಡ್‌ನಲ್ಲಿ ಬಂದಿವೆ ಅಂತ ಹೇಳಿದ್ದಿದೆ. ಕೆಲವು ಸಲ ಅವರಾಗಿಯೇ ಬಂದು ಹುಡುಕಿ ಕೊಟ್ಟಿರುವ ಪ್ರಸಂಗಗಳು ಇವೆ.

’ಬ್ಲಾಸಂ’ ಎಂದರೆ ಮೊಗ್ಗು ಹೂವಾಗಿ ಸುಗಂಧವನ್ನು ಬೀರುತ್ತ ಅರಳುವುದು ಎಂದರ್ಥ. ಹೂವುಗಳಂತೆ ಪುಸ್ತಕಗಳಿಗೂ ಬಣ್ಣ, ಆಕಾರ, ರೂಪ ಹಾಗೂ ವಾಸನೆಗಳಿವೆ. 25 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಿಂದ ಬೆಂಗಳೂರಿಗೆ ಬಂದ ಹುಡುಗನೊಬ್ಬ ಕೇವಲ ಎರಡು ದಶಕಗಳಲ್ಲಿ ನಾಡಿನಾದ್ಯಂತ ಪುಸ್ತಕಗಳ ಸುಗಂಧವನ್ನು ಬೀರುವಂತೆ ಮಾಡಿದ್ದು ಸಾಮಾನ್ಯ ಸಂಗತಿಯೇನಲ್ಲ; ಇದು ಮಾಯಿಗೌಡರ ಸತತ ಪರಿಶ್ರಮ, ಅಚಲ ನಂಬಿಕೆ ಹಾಗೂ ಪ್ರೀತಿ ವಿಶ್ವಾಸಗಳಿಂದ ಸಾಧ್ಯವಾಗಿದೆ. ನನ್ನ ನಂತರವೂ ಬ್ಲಾಸಂ ಅರಳುತ್ತಲೇ ಇರಬೇಕೆಂದು ಆಶಿಸುತ್ತಾರೆ ಮಾಯಿಗೌಡ.

ಡಾ. ಸುಭಾಷ್ ರಾಜಮಾನೆ

ಡಾ. ಸುಭಾಷ್ ರಾಜಮಾನೆ
ಬೆಂಗಳೂರಿನ ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಬಲ್ಲ ಇವರು, ಸಿನಿಮಾ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ರಾಜಾರಾಂ ತಲ್ಲೂರು ಅವರ ’ಕರಿಡಬ್ಬಿ ಪುಸ್ತಕದಿಂದ ಆಯ್ದ ಅಧ್ಯಾಯ; #WHOCARES

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...