Homeಅಂಕಣಗಳುಪುಸ್ತಕ ವಿಮರ್ಶೆ; ಉಪ್ಪುಚ್ಚಿ ಮುಳ್ಳು: ಅಂತಃಕರಣಕ್ಕೆ ಕಿವಿಯಾದ ಕತೆಗಳು

ಪುಸ್ತಕ ವಿಮರ್ಶೆ; ಉಪ್ಪುಚ್ಚಿ ಮುಳ್ಳು: ಅಂತಃಕರಣಕ್ಕೆ ಕಿವಿಯಾದ ಕತೆಗಳು

- Advertisement -
- Advertisement -

ದಯಾ ಗಂಗನಘಟ್ಟ ಅವರು ತಮ್ಮ ಮೊದಲ ಕಥಾಸಂಕಲನ ’ಉಪ್ಪುಚ್ಚಿ ಮುಳ್ಳು’ ಮೂಲಕ ಕನ್ನಡ ಸಣ್ಣ ಕಥಾಲೋಕವನ್ನು ಪ್ರವೇಶಿಸಿದ್ದಾರೆ. ಕತೆ ಹೇಳುವ ತೋಂಡಿ ಪರಂಪರೆಯ ಧಾಟಿಯಿಂದಾಗಿ ಕತೆಗಳು ಥಟ್ಟನೆ ಗಮನ ಸೆಳೆಯುತ್ತವೆ. ಇಲ್ಲಿಯ ಕತೆಗಳು ತುಮಕೂರು ಜಿಲ್ಲೆಯ ತಿಪಟೂರು ಸೀಮೆಯ ಗ್ರಾಮೀಣ ಬದುಕಿನ ವಿವಿಧ ಚಹರೆಗಳನ್ನು ಸಮರ್ಥವಾಗಿ ಹಿಡಿದಿಟ್ಟಿವೆ. ಇವು ಭಾಷಿಕವಾಗಿ ಕನ್ನಡದ ಪ್ರಾದೇಶಿಕ ಆಡುಭಾಷೆಯೊಂದರ ಸಶಕ್ತ ಲಯಗಳಿಂದ ಸಮೃದ್ಧವಾಗಿವೆ. ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶ ಹಾಗೂ ಅಲ್ಲಿಯ ಸಾಮಾಜಿಕ ಜೀವನ ಕ್ರಮಗಳೇ ಇಲ್ಲಿಯ ಕತೆಗಳನ್ನು ರೂಪಿಸಿವೆ. ಹೀಗೆ ಜೀವ ಪಡೆಯುವ ಕತೆಗಳು ಅಲ್ಲಿಯ ಮನುಷ್ಯ ಬದುಕಿನ ವ್ಯಾಪಾರಗಳನ್ನು ಹಾಗೂ ಸಾಮಾಜಿಕ ಸ್ಥಿತ್ಯಂತರಗಳನ್ನು ಸಮರ್ಥವಾಗಿ ಚಿತ್ರಿಸಿವೆ. ಇವು ಸಾಮಾಜಿಕವಾಗಿ, ಸಾಹಿತ್ಯಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಭಿನ್ನವಾದ ಮೀಮಾಂಸೆಯನ್ನು ಕಟ್ಟುವ ತುಡಿತವನ್ನು ಒಳಗೊಂಡಿವೆ.

ಕತೆಗಳೆಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ; ಎಲ್ಲರನ್ನು ಒಂದಲ್ಲ ಒಂದು ರೀತಿಯಲ್ಲಿ ಕತೆಗಳು ಆವರಿಸಿಕೊಂಡಿರುತ್ತವೆ. ಅದರಲ್ಲಿಯೂ ಹಳ್ಳಿಗಾಡು ಜನರಿಗೆ ಕತೆಗಳು ಉಸಿರಾಡಿದಷ್ಟೇ ಸಹಜವಾಗಿ ಅಂಟಿಕೊಂಡಿರುತ್ತವೆ. ಎಲ್ಲ ಸಮುದಾಯಗಳು ಕೂಡ ಕತೆಗಳನ್ನು ಕಟ್ಟಿಕೊಂಡಿರುತ್ತವೆ. ಹೀಗೆ ಹುಟ್ಟಿಕೊಳ್ಳುವ ಕತೆಗಳು ಸಾಮಾಜಿಕ ಮೌಲ್ಯಗಳನ್ನು, ಆಚರಣೆಗಳನ್ನು, ತಾರತಮ್ಯಗಳನ್ನು ಹಾಗೂ ಅಸಮಾನತೆಯ ನೆಲೆಗಳನ್ನು ತಮ್ಮ ಒಡಲಿನಲ್ಲಿ ಇಟ್ಟುಕೊಂಡಿರುತ್ತವೆ. ’ಉಪ್ಪುಚ್ಚಿ ಮುಳ್ಳು’ ಸಂಕಲನದ ಕತೆಗಳನ್ನು ಓದುವಾಗ ಇಂತಹ ಹಲವು ಸಂಗತಿಗಳು ಕಣ್ಣಿಗೆ ರಾಚುತ್ತವೆ. ಆದರೆ ದಯಾ ಗಂಗನಘಟ್ಟ ಅವರ ಬರಹದಲ್ಲಿ ಯಾರಿಗೂ ಗೊತ್ತಿಲ್ಲದ ಘನಂಧಾರಿ ಕತೆಗಳನ್ನು ಹೇಳುತ್ತಿದ್ದೇನೆ ಎನ್ನುವ ಅಹಂಕಾರ ಇಲ್ಲ. ’ಶ್ರೇಷ್ಠ’ತೆಯ ಕಡೆಗಿನ ವ್ಯಸನವು ಮೊದಲೇ ಇಲ್ಲ. ಕತೆಗಾರ್ತಿ ತನಗೆ ಈ ಮೊದಲೇ ಗೊತ್ತಿರುವ ಸಂಗತಿಗಳನ್ನು ಒಂದು ಚೌಕಟ್ಟಿಗೆ ಒಳಪಡಿಸಿ ಬರೆಯುತ್ತಿರುವಂತೆ ತೋರುವುದಿಲ್ಲ. ತಾನು ಬದುಕುತ್ತಿರುವ ಸಮಾಜದೊಂದಿಗೆ ಹೆಜ್ಜೆ ಹಾಕುತ್ತಲೇ ಅದರ ಆಂತರ್ಯದಲ್ಲಿ ತಣ್ಣಗೆ ಪ್ರವಹಿಸುತ್ತಿರುವ ಪಿಸುದನಿಗಳಿಗೆ, ಸದ್ದುಗಳಿಗೆ ಕಿವಿಯಾಗಿದ್ದಾರೆ ಅನ್ನಿಸುತ್ತದೆ. ತನ್ನ ಅಂತಃಕರಣಕ್ಕೆ ತಾಕಿದ್ದನ್ನು ಹಾಗೂ ಕಣ್ಣಳತೆಗೆ ಗೋಚರಿಸಿದ್ದನ್ನು ಪ್ರಾಮಾಣಿಕವಾಗಿ ನಿರೂಪಿಸಲು ಯತ್ನಿಸಿದ್ದಾರೆ. ಇವು ಹಟಕ್ಕೆ ಬಿದ್ದು ತಿಣುಕಾಡಿ ಬರೆದ ಕತೆಗಳಲ್ಲ; ಸರಳತೆ, ಪ್ರಾಮಾಣಿಕತೆ ಹಾಗೂ ಜೀವಂತಿಕೆಯಿಂದ ಪುಟಿಯುವ ಈ ಕತೆಗಳು ಓದುಗರ ಅಂತರಂಗವನ್ನು ಕಲಕುತ್ತವೆ; ಹಲವು ಆಯಾಮಗಳಿಂದ ಆಲೋಚಿಸುವಂತೆ ಮಾಡುತ್ತವೆ.

ಈ ಸಂಕಲನದ ಕತೆಗಳನ್ನು ಅವುಗಳ ಸಂರಚನೆಯ ದೃಷ್ಟಿಯಿಂದ ನೋಡುವುದಾದರೆ, ಇಲ್ಲಿ ಎರಡು ಮಾದರಿಯ ಕಥನ ನಿರೂಪಣೆಗಳಿವೆ. ಮೊದಲನೆಯದಾಗಿ, ನಿರೂಪಕಿಯು ತಾನಾಗಿಯೇ ಒಡನಾಟವನ್ನು ಹೊಂದಿರುವ ವ್ಯಕ್ತಿಗಳನ್ನು ಕುರಿತ ನೆನಪುಗಳನ್ನು ಕಥನವನ್ನಾಗಿ ಹೆಣೆದಿರುವುದು. ಇಂತಹ ಕತೆಗಳಲ್ಲಿ ನಿರೂಪಕಿಯು ಕಥಾಲೋಕದೊಂದಿಗೆ ಭಾವನಾತ್ಮಕ ಬಾಂಧವ್ಯ ಹೊಂದಿರುವುದನ್ನು ಓದುಗರು ಗಮನಿಸಬಹುದು. ನಿರೂಪಕಿಯು ಅದರಲ್ಲಿಯೂ ಪಾತ್ರಗಳೊಂದಿಗೆ ಗುರುತಿಸಿಕೊಳ್ಳುವುದು ಎದ್ದು ಕಾಣುತ್ತದೆ. ಎರಡನೆಯದಾಗಿ, ನಿರೂಪಕಿಯು ತಾನು ನೋಡಿದ, ಕೇಳಿದ, ತನ್ನ ಊರು ಹಾಗೂ ಅಲ್ಲಿಯ ಕತೆಗಳನ್ನು ಹೇಳುವಾಗ ಕೆಲವು ಸಲ ಆ ಪಾತ್ರಗಳಿಂದ ಒಂದಿಷ್ಟು ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಅಂತಹ ಕಥನದ ಘಟನೆ ಮತ್ತು ಸನ್ನಿವೇಶಗಳು ಬಹುತೇಕವಾಗಿ ಪಾತ್ರಗಳ ಮುಖಾಂತರವೇ ತೆರೆದುಕೊಳ್ಳುತ್ತವೆ.

ದಯಾ ಗಂಗನಘಟ್ಟ

ದಯಾ ಗಂಗನಘಟ್ಟ ಅವರ ಕತೆಗಳಲ್ಲಿ ಮನುಷ್ಯರಲ್ಲಿರುವ ಒಳ್ಳೆಯತನವು ಸಾಮಾಜಿಕವಾಗಿ ಅನಾದರಕ್ಕೆ ಒಳಗಾಗುವುದನ್ನು ನೋಡಬಹುದು. ಕತೆಗಳಲ್ಲಿ ಬರುವ ರೂಡಣ್ಣ, ರಾಜಣ್ಣ, ಅಬ್ದುಲಣ್ಣ, ನಿಂಗತೋಡ, ರಾಜಿ, ಗಂಗಮಾಳಕ್ಕ- ಈ ಪಾತ್ರಗಳು ತಮ್ಮ ಬದುಕಿನಲ್ಲಿ ಮತ್ತೊಬ್ಬರಿಗೆ ಕೇಡನ್ನು ಬಯಸಿದ್ದಿಲ್ಲ. ಆದರೂ ಈ ಪಾತ್ರಗಳು ತಮ್ಮ ಬದುಕಿನಲ್ಲಿ ಎದುರಾಗುವ ಪರಿಣಾಮಗಳಿಗೆ ತಾವಾಗಿಯೇ ಹೊಣೆಯನ್ನು ಹೊರುತ್ತವೆ. ಸಂದಿಗ್ಧ ಪರಿಸ್ಥಿತಿಗಳಿಂದ ಪಾರಾಗುವ ದಾರಿಗಳನ್ನು ಕಂಡುಕೊಳ್ಳುತ್ತವೆ. ಇಲ್ಲಿ ರೂಡಣ್ಣ ತನ್ನ ನಪುಂಸಕತ್ವದಿಂದ ಮಾನಸಿಕವಾಗಿ ವ್ಯಥೆ ಪಡುತ್ತಾನೆ ಹಾಗೂ ಹೆಣ್ಣೊಬ್ಬಳ ತಿರಸ್ಕಾರದಿಂದ ಅವಮಾನಿತನಾಗುತ್ತಾನೆ. ತನ್ನ ಮೇಲೆ ಬಂದ ಆಪಾದನೆಗಳಿಂದ ನೊಂದುಕೊಂಡು ಆಧ್ಯಾತ್ಮಿಕತೆಯ ಮೊರೆ ಹೋಗುತ್ತಾನೆ. ಇನ್ನು ರಾಜಣ್ಣ ತಾನು ಯಾರಿಗೂ ಹೊರೆ ಆಗಬಾರದೆಂದು ಕುಟುಂಬದಿಂದ ದೂರವಾದವನು; ಆತ ತನ್ನದೇ ನೈತಿಕ ದಾರಿಯಲ್ಲಿ ಬದುಕಿದವನು. ಹಾಗೆ ನೋಡಿದರೆ ರೂಡಣ್ಣ ಮತ್ತು ರಾಜಣ್ಣ ತಮ್ಮದೇ ಆದ ನೈತಿಕತೆಯನ್ನು ಹಾಗೂ ಆಧ್ಯಾತ್ಮಿಕತೆಯನ್ನು ಕಟ್ಟಿಕೊಂಡವರು. ಆದರೂ ಕೂಡ ಸಮಾಜ ಇವರನ್ನು ಗುಮಾನಿಯಿಂದ ನೋಡುತ್ತದೆ. ಇವರಿಗೆ ಸಮಾಜದೊಂದಿಗೆ ಸಂಹವನವೇ ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೋ ಏನೋ ನಿರೂಪಕಿಯು ಈ ಪಾತ್ರಗಳಗಳೊಂದಿಗೆ ಆಪ್ತವಾದ ಸಂವಾದವನ್ನು ನಡೆಸುತ್ತಾಳೆ. ಅವರ ಎದೆಯಾಳದ ಮಾತುಗಳಿಗೆ ಅಂತಃಕರಣದ ಕಿವಿಯಾಗುತ್ತಾಳೆ.

ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಸ್ತ್ರೀವಾದಿ ಚಿಂತನೆಗಳಿಂದ ಪ್ರೇರಣೆಯನ್ನು ಪಡೆದುಕೊಂಡ ಕೆಲವು ಕತೆಗಾರ್ತಿಯರು ಹೆಣ್ಣಿನ ಶೋಷಣೆ, ದಮನ, ಪರಾಧೀನತೆಗೆ ಗಂಡಸರೇ ಕಾರಣೀಭೂತರೆಂದು ತಮ್ಮ ಕತೆಗಳಲ್ಲಿ ಚಿತ್ರಿಸಿದರು. ಹೆಣ್ಣಿನ ಸಕಲ ಸಮಸ್ಯೆಗಳಿಗೂ ಪುರುಷರೇ ಮೂಲವೆಂದು ಪರಿಭಾವಿಸಿ ಅವರನ್ನು ದುಷ್ಟರನ್ನಾಗಿಸಿ ಕಟಕಟೆಯಲ್ಲಿ ನಿಲ್ಲಿಸಿದರು. ಈ ನಿಟ್ಟಿನಿಂದ ನೋಡುವುದಾದರೆ ದಯಾ ಗಂಗನಘಟ್ಟರವರ ಕತೆಗಳಲ್ಲಿ ಬರುವ ಹೆಣ್ಣು ಅಥವಾ ಗಂಡು ಪಾತ್ರಗಳನ್ನು ಯಾವುದೋ ಒಂದು ಚೌಕಟ್ಟಿಗೆ ಕಟ್ಟಿ ಹಾಕಿಲ್ಲ ಎಂಬುದನ್ನು ಗಮನಿಸಬಹುದು. ಕತೆಗಳಲ್ಲಿ ಬರುವ ಗಂಗಕ್ಕ, ತಾಯಣ್ಣಿ, ಜಮುನ, ರಾಜಿ, ಗಂಗಮಾಳಕ್ಕ, ಇಂದ್ರಾಣಿ, ನೀಲಿ, ತನುಜಾ- ಈ ಮಹಿಳಾ ಪಾತ್ರಗಳು ಗಂಡಸರಷ್ಟೇ ಸಮರ್ಥವಾಗಿ ಬದುಕನ್ನು ಎದುರಿಸುತ್ತವೆ. ಇವರು ಗ್ರಾಮಭಾರತದ ಮೂಲಸೌಕರ್ಯಗಳಿಂದ ಹಾಗೂ ಅವಕಾಶಗಳಿಂದ ವಂಚಿತರಾದವರೇ ಆಗಿದ್ದಾರೆ. ಇಲ್ಲಿ ನೀಲಿಯಂತಹ ಹೆಣ್ಣು ತನ್ನ ಸ್ವಂತ ಅಪ್ಪನಿಂದಲೇ ಆಗುವ ಅನ್ಯಾಯವನ್ನು ಪ್ರತಿರೋಧಿಸಿ ನಿಲ್ಲುತ್ತಾಳೆ. ಇನ್ನುಳಿದ ಮಹಿಳೆಯರು ತಮಗಾಗುವ ಅನ್ಯಾಯ ಹಾಗೂ ದಮನಗಳನ್ನು ಸಹಿಸಿಕೊಳ್ಳುತ್ತಾರೆ. ಇವರು ಸಾಮಾಜಿಕ ವ್ಯವಸ್ಥೆಯನ್ನು ದೂಷಿಸುವುದಿಲ್ಲ. ತಮ್ಮ ದೈನಂದಿನ ಬದುಕಿನಲ್ಲಿ ಎದುರಾಗುವ ಅಗ್ನಿಕೊಂಡಗಳನ್ನು ದಿಟ್ಟವಾಗಿಯೇ ಹಾಯುತ್ತಾರೆ.

ಇದನ್ನೂ ಓದಿ: ನಾಲ್ಕು ಪುಸ್ತಕಗಳ ಬಗ್ಗೆ ಕಿರು ಟಿಪ್ಪಣಿ

ಕನ್ನಡ ಕಥನ ಲೋಕದಲ್ಲಿ ಎರಡು ಮಾದರಿಗಳನ್ನು ಗುರುತಿಸಬಹುದಾಗಿದೆ. ಮೊದಲನೆಯದಾಗಿ, ಭಾರತದಲ್ಲಿ ಗಾಂಧೀಜಿಯವರು ಕಲ್ಪಿಸಿಕೊಂಡಿದ್ದ ’ಆದರ್ಶ ಗ್ರಾಮ’ಗಳ ಮಾದರಿ. ಈ ಪರಿಕಲ್ಪನೆಯು ಕೇವಲ ಆದರ್ಶವಾಗಿಯೇ ಉಳಿದುಕೊಂಡಿದೆ. ಎರಡನೆಯದಾಗಿ, ಅಂಬೇಡ್ಕರ್ ಅವರು ವಾಸ್ತವವಾಗಿ ತೆರೆದಿಟ್ಟ ಗ್ರಾಮ ಭಾರತದ ಮಾದರಿ. ಇದರಲ್ಲಿ ಎಲ್ಲ ಬಗೆಯ ಜಾತಿ ತಾರತಮ್ಯ, ಊಳಿಗಮಾನ್ಯ ವ್ಯವಸ್ಥೆ ಹಾಗೂ ಲಿಂಗಭೇದ ರಾಜಕಾರಣವು ಜೀವಂತವಾಗಿರುತ್ತದೆ. ಗ್ರಾಮಗಳೆಂದರೆ ಬಲಿಷ್ಠ ಜಾತಿವರ್ಗಗಳ ಯಜಮಾನಿಕೆಯೇ ಆಗಿರುತ್ತದೆ. ದಯಾ ಗಂಗನಘಟ್ಟರವರ ಬಹುತೇಕ ಕತೆಗಳ ವಸ್ತು ಮತ್ತು ಆಶಯಗಳು ಅಂಬೇಡ್ಕರ್ ಅವರ ಮಾದರಿಯನ್ನು ಪ್ರತಿನಿಧಿಸುತ್ತವೆ. ಹಳ್ಳಿಯ ಜನರ ಮಾನವೀಯತೆ, ಸಾಮರಸ್ಯತೆ, ಸಹೋದರತೆ, ಬಹುತ್ವದ ಮೌಲ್ಯಗಳನ್ನು ಆದರ್ಶೀಕರಣಗೊಳಿಸುವುದಿಲ್ಲ. ಮಹಿಳೆಯರ ಹೊಂದಾಣಿಕೆ ಮತ್ತು ಸಹಬಾಳ್ವೆಯ ಗುಣಧರ್ಮವನ್ನು ಹೇಳುವ ಕತೆಗಳು ಹಳ್ಳಿಯ ವಿಕಾರಗಳನ್ನು ಮರೆಮಾಚುವುದಿಲ್ಲ. ಇದಕ್ಕೆ ’ಜಗತ್ತಿನ ಸ್ವಲ್ಪ ಆ ಕಡೆಗೆ’ ಕತೆಯು ಒಂದು ಒಳ್ಳೆಯ ನಿದರ್ಶನವಾಗಿದೆ. ಗ್ರಾಮೀಣ ಪ್ರದೇಶದ ಪಾತ್ರಗಳು ಜಾತಿಯತೆ, ಧರ್ಮಾಂಧತೆ, ಕೌಟುಂಬಿಕ ಹಿಂಸೆ, ಕ್ರೌರ್ಯಗಳಿಂದ ಉಸಿರುಗಟ್ಟಿಸುವ ವಾತಾವರಣದಲ್ಲಿ ಒದ್ದಾಡುತ್ತವೆ; ಒಂದೇ ಜಾತಿಯ ಒಳ ಶ್ರೇಣೀಕರಣದಿಂದ ಬಲಿಪಶುಗಳಾಗುತ್ತವೆ. ಇದಕ್ಕೆ ’ಹಲ್ಲೆ ಸಿದ್ಧನೂ, ಉರ್ಲಾಡಿ ಲಚ್ಚಿಯೂ’ ಕತೆಯನ್ನು ನೋಡಬಹುದು.

ಈಗ ಕನ್ನಡ ಸಾಹಿತ್ಯದಲ್ಲಿ ಅತಿಹೆಚ್ಚು ಉತ್ಪಾದನೆಯಾಗುವ ಪ್ರಕಾರವೆಂದರೆ ಸಣ್ಣ ಕತೆಗಳೇ. ಕತೆಗಳಿಲ್ಲದ ಪತ್ರಿಕೆಗಳೇ ಇಲ್ಲ. ಪತ್ರಿಕೆಗಳ ಬೇಡಿಕೆಯೂ ಇದಕ್ಕೆ ಕಾರಣವಾಗಿರಬಹುದು. ಇರಲಿ. ಆದರೆ ದಯಾ ಗಂಗನಘಟ್ಟ ಅವರು ಈ ಕತೆಗಳನ್ನು ಯಾವುದೇ ಪತ್ರಿಕೆಗಳಿಗೆ ಬರೆದಂತೆ ತೋರುವುದಿಲ್ಲ. ಯಾವುದೇ ಕಥಾ ಸ್ಪರ್ಧೆಗೂ ತಮ್ಮ ಕತೆಗಳನ್ನು ಕಳಿಸಿದಂತೆ ಕಾಣುವುದಿಲ್ಲ. ಅದಕ್ಕಾಗಿಯೋ ಏನೋ ಇವರ ಕತೆಗಳು ವೈವಿಧ್ಯಮಯ ವಸ್ತು, ತಂತ್ರ, ಸಹಜ ಭಾಷೆ, ಸರಳ ನಿರೂಪಣೆಯ ಶೈಲಿಗಳಿಂದ ನಳನಳಿಸುತ್ತವೆ. ಇವೆಲ್ಲ ಸಂಗತಿಗಳು ಕಥನದಲ್ಲಿ ಒಂದರೊಳಗೊಂದು ಏಕತ್ರಗೊಂಡಿರುತ್ತವೆ.

ದಯಾ ಗಂಗನಘಟ್ಟ ಅವರು ತಮ್ಮ ಚೊಚ್ಚಲ ಕಥಾಸಂಕಲನ ’ಉಪ್ಪುಚ್ಚಿ ಮುಳ್ಳು’ಗೆ 2022ನೇ ಸಾಲಿನ ’ಬೆಸಗರಗಳ್ಳಿ ರಾಮಣ್ಣ ಕಥಾ ಪ್ರಶಸ್ತಿ’ಯನ್ನು ಪಡೆದುಕೊಂಡಿದ್ದಾರೆ. ಇದು ಕಥಾ ಸಾಹಿತ್ಯಕ್ಕೆ ನೀಡುವ ಕನ್ನಡದ ಅತ್ಯಂತ ಪ್ರತಿಷ್ಠಿತ ಹಾಗೂ ಮಹತ್ವದ ಪ್ರಶಸ್ತಿಯಾಗಿದೆ. ’ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ’ವು ಹೊಸ ಕಥನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ದಯಾ ಗಂಗನಘಟ್ಟ ಅವರ ’ಉಪ್ಪುಚ್ಚಿ ಮುಳ್ಳು’ ಸಂಕಲನವು ಕನ್ನಡಕ್ಕೆ ಒಂದು ಮಹತ್ವದ ಕೊಡುಗೆಯಾಗಿದೆ. ಇವರ ’ಜಗತ್ತಿನ ಸ್ವಲ್ಪ ಆ ಕಡೆಗೆ’, ’ರೂಡಣ್ಣನ ಸಲ್ಲೇಖನ’ ’ಉಪ್ಪುಚ್ಚಿ ಮುಳ್ಳು’, ’ಒಂದು ಪಯಣದ ಅಸ್ವಸ್ಥತೆ’ ಹಾಗೂ ’ಕುರ್ಚಿ’ ಕನ್ನಡದ ಅತ್ಯುತ್ತಮ ಕತೆಗಳಾಗಿವೆ. ಸೂಕ್ಷ್ಮ ಸಂವೇದನೆಯ ಈ ಕತೆಗಳು ಸಾಹಿತ್ಯಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮಹತ್ವದ್ದಾಗಿವೆ.

ಡಾ. ಸುಭಾಷ್ ರಾಜಮಾನೆ

ಡಾ. ಸುಭಾಷ್ ರಾಜಮಾನೆ
ಬೆಂಗಳೂರಿನ ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಬಲ್ಲ ಇವರು, ಸಿನಿಮಾ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಚುನಾವಣೆ ಪ್ರಚಾರದಲ್ಲಿ ಪದೇ ಪದೇ ಸುಳ್ಳು ಹೇಳುತ್ತಿರುವುದರಿಂದ…..’,: ಮೋದಿಗೆ ಕಾಂಗ್ರೆಸ್‌ ಪ್ರಣಾಳಿಕೆಯನ್ನು ವಿವರಿಸಿ ಪತ್ರ...

0
ಕಾಂಗ್ರೆಸ್‌ ಪ್ರಣಾಳಿಕೆಯ ಬಗ್ಗೆ ಮೋದಿ, ಅಮಿತ್‌ ಶಾ ಚುನಾವಣಾ ಭಾಷಣದಲ್ಲಿ ಸುಳ್ಳು ಆಪಾದನೆ ಮಾಡುತ್ತಿರುವ ಮಧ್ಯೆ ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಚರ್ಚೆಗೆ ನರೇಂದ್ರ ಮೋದಿ ಅಥವಾ ಅವರಿಂದ ನಿಯೋಜಿಸಲ್ಪಟ್ಟ ಯಾರಾದರು ಬನ್ನಿ ಎಂದು...