Homeಅಂಕಣಗಳುಸನ್ಯಾಸಿಗಳೆಂದರೆ ನಿಮಗೇನು ಗೊತ್ತಯ್ಯಾ

ಸನ್ಯಾಸಿಗಳೆಂದರೆ ನಿಮಗೇನು ಗೊತ್ತಯ್ಯಾ

- Advertisement -
- Advertisement -

ಅಧಿಕಾರಕ್ಕೆ ಆಸೆಪಡುವ ವಿಷಯದಲ್ಲಿ ನಮ್ಮ ರಾಜಕಾರಣಿಗಳು ’ನಾನೇನು ಸನ್ಯಾಸಿಯಲ್ಲ’ ಎಂಬ ಜನಪ್ರಿಯ ಮಾತನ್ನು ಸಲೀಸಾಗಿ ಬಳಸಿ ತಮ್ಮ ಅಜ್ಞಾನ ಪ್ರದರ್ಶಿಸುತ್ತಲೇ ಬಂದಿದ್ದಾರಲ್ಲಾ. ಸದರಿ ಮಾತನ್ನು ಮಾಧ್ಯಮದ ಕೆಲ ಮಂದಮತಿಗಳು ಬಿತ್ತರಿಸುತ್ತಿರುವಾಗ ಅವರ ಕಣ್ಣು ತೆರೆಸುವುದು ನಮ್ಮ ಜವಾಬ್ದಾರಿ ಅಲ್ಲವೆ.

ಸನ್ಯಾಸಿಯೆಂದರೆ ಸರ್ವಸಂಗ ಪರಿತ್ಯಾಗಿ, ಸಂಸಾರಕ್ಕೆ ಹೆದರಿದವನು, ಮೈಗಳ್ಳ, ದುಡಿದು ಬದುಕಲಾರದವನು, ಇತರರಿಗೆ ಅನ್ನ ಇಕ್ಕದವನು. ಸಂಸಾರಕ್ಕೆ ಹೆದರಿ ಸನ್ಯಾಸಿಯಾದವನನ್ನು ಪಾಪ ಸಂಸಾರಿಗಳೇ ಸಾಕಬೇಕು. ಹಾಗೆಂದು ಈತ ಲೈಂಗಿಕ ತೃಷೆಯಿಂದ ಮುಕ್ತನಾದವನೆಂದು ಹೇಳಲು ಬರುವುದಿಲ್ಲ. ಅವನ ಖಾಸಗಿ ವಿಷಯ ಅವನಿಗೆ ಗೊತ್ತು. ನಮ್ಮ ಪುರಾಣಗಳಲ್ಲಿ ಋಷಿಮುನಿಗಳಿಗೆ ಪತ್ನಿಯರಿದ್ದರು. ಅವರು ಋಷಿಗಳ ಯಜ್ಞಯಾಗದ ಪರಿಕರಗಳನ್ನ ಒದಗಿಸುತ್ತಾ, ಮುನಿಗಳಿಗೆ ನೀರು ತರುತ್ತ, ಗೆಡ್ಡೆಗೆಣಸು ಬೇಯಿಸಿಕೂಡುತ್ತ ಇದ್ದರು. ಗರ್ಮಿ ಪದಾರ್ಥ ತಿಂದ ಸನ್ಯಾಸಿ ಅರ್ಧರಾತ್ರಿಯಲ್ಲಿ ಹಠಾತ್ತನೆ ಎದ್ದುಬಂದು ಎರಗಿದರೆ ಯಾವ ಆಕ್ಷೇಪವನ್ನೂ ವ್ಯಕ್ತಪಡಿಸದೆ ಅರ್ಪಿಸಿಕೊಂಡು ಸೇವೆ ಮಾಡುತ್ತಿದ್ದರಂತಲ್ಲಾ, ಥೂತ್ತೇರಿ.

*****

ಈ ಪುರಾಣದ ಸನ್ಯಾಸಿಗಳ ಕತೆಯ ಮುಂದುವರಿಕೆ ನೋಡುವುದಾದರೆ: ಪುರಾಣದವರು ಆತ್ಮವಂಚಕರಾಗಿರಲಿಲ್ಲ. ನಯವಂಚಕರೂ ಆಗಿರಲಿಲ್ಲ. ಗಂಟುಗಳ್ಳರಾಗಿರಲಿಲ್ಲ. ತಾವು ಕಟ್ಟಿಕೊಂಡ ಕುಟೀರ ತಮ್ಮ ನಂತರ ನಾಶವಾಗುವಂತೆ ಮಾಡಿ ಸರಳವಾಗಿ ಬದುಕುತ್ತಿದ್ದರು. ಇಂತ ಸನ್ಯಾಸಿಗಳಿಗೆ ಇಂದಿನ ಸನ್ಯಾಸಿಗಳನ್ನ ಹೋಲಿಸುವುದಾದರೆ ಇವರಿಗೆ ಪತ್ನಿಯರಿಲ್ಲ ನಿಜ. ಆದರೆ ಪ್ರೇಯಸಿಯರಿದ್ದಾರೆ. ಆಕಸ್ಮಾತ್ ಮಗುವಾದರೆ ಅದನ್ನ ಫಾರಿನ್ನಿಗೆ ಕಳಿಸುವ ಪ್ರಭಾವಿಗಳು ಇವರು. ಲೈಂಗಿಕ ಹಗರಣದಲ್ಲಿ ಸಿಕ್ಕಿಬಿದ್ದರೆ ಒತ್ತಾಯದ ಸಂಭೋಗವನ್ನ ಒಪ್ಪಿತ ಸಂಭೋಗವೆಂದು ಬದಲಾಯಿಸಿ ತೀರ್ಪು ಪಡೆಯಬಲ್ಲರು. ಇವರು ಹಚ್ಚಿಕೊಳ್ಳುವ ಸೆಂಟುಗಳು ಮತ್ತು ಬರಿಸುವಂತಿರುತ್ತದೆ. ಕೆಲವು ಸನ್ಯಾಸಿಗಳು ಫೇರ್ ಅಂಡ್ ಲವ್ಲಿ ಹಚ್ಚದೆ ಸಭೆಗಳಿಗೆ ಬರುವುದಿಲ್ಲ. ಇನ್ನ ಕೈಯ್ಯ ಉಂಗರಗಳು ಕೊರಳ ಚೈನು ನೋಡಿದರೆ ಹೋರಿಯ ಶೃಂಗಾರ ನೋಡಿದಂತಾಗುತ್ತದೆ. ಇನ್ನ ನಾನೇ ದೇವರೆಂದು ಹೇಳಿಕೊಂಡು ಕಾಯಿಲೆಯಿಂದ ನರಳುತ್ತಿದ್ದ ದೇವಮಾನವನೊಬ್ಬ ತನ್ನ ಖಾಸಗಿ ಕೋಣೆಯಲ್ಲಿ ಚಿನ್ನದ ಕಮೋಡ್ ಹೊಂದಿದ್ದ. ಆದರೇನು ಪಾಯಿಖಾನೆ ವಾಸನೆ ಬದಲಿಸಲಾಗಲಿಲ್ಲವಂತಲ್ಲಾ, ಥೂತ್ತೇರಿ.

*****

’ನಾನು ಸನ್ಯಾಸಿಯಲ್ಲ’ ಎಂದು ಹೇಳುವ ರಾಜಕಾರಣಿಗಳಾಗಲಿ, ಅವರ ಮಾತನ್ನು ಕೊಂಡಾಡುತ್ತ ಪ್ರಕಟಿಸುವ ಕೆಲ ಮಾಧ್ಯಮದ ಮಂದಮತಿಗಳಾಗಲು, ಇನ್ನು ಮುಂದೆ ಆ ಮಾತುಗಳನ್ನು ಬಳಸುವ ಮುನ್ನ ಯೋಚಿಸಬೇಕಾಗುತ್ತದಲ್ಲ. ಸನ್ಯಾಸಿ ಎಂದು ಹೇಳಿಕೊಂಡು ಗದ್ದುಗೆ ಏರಿದವರು ಮಠದ ಸಂವಿಧಾನದಂತೆ ನಿವೃತ್ತಿ ಪಡೆಯದೆ ಹಠದಿಂದ ಮುಂದುವರೆಯುತ್ತಾರೆ. ಮಠದ ಆಸ್ತಿಯನ್ನ ಟ್ರಸ್ಟು ಮಾಡಿ ತಾವೇ ಅಧ್ಯಕ್ಷರಾಗುತ್ತಾರೆ. ಇದನ್ನ ದಕ್ಕಿಸಿಕೊಳ್ಳಲು ಗೂಂಡಾ ಪಡೆ ನಿರ್ಮಿಸುತ್ತಾರೆ. ಇವರ ನಿರ್ವಹಣೆಗೆ ತಾವೇ ತಾತ್ವಿಕವಾಗಿ ವಿರೋಧಿಸಿದ್ದ ಮದ್ಯವನ್ನ ಸರಬರಾಜು ಮಾಡುವಂತೆ ಆಜ್ಞಾಪಿಸುತ್ತಾರೆ. ತಮ್ಮ ಕಾಲಾನಂತರ ಭವ್ಯ ಸಮಾಧಿ ನಿರ್ಮಾಣದ ಬಗ್ಗೆ ಗಂಭೀರವಾಗಿ ಯೋಚಿಸುತ್ತಾರೆ. ಕಂಡುಕೇಳರಿಯದ ಇಂತಹ ಸವಲತ್ತು ನೋಡಿದ ರಾಜಕಾರಣಿಗಳು ಈ ಹಾಳು ರಾಜಕಾರಣಕ್ಕಿಂತ ಸನ್ಯಾಸಿಯಾಗಿದ್ದರೆ ಬದುಕು ಬಂಗಾರವಾಗುತಿತ್ತು ಎಂದು ಯೋಚಿಸಿ, ರಾಜಕಾರಣ ಬಿಟ್ಟು ಸನ್ಯಾಸಿಯಾದ ಉದಾಹರಣೆಯೂ ನಮ್ಮ ಮುಂದಿದೆ. ಇನ್ನ ಮದುವೆಯಾಗಿ ಮಕ್ಕಳು ಪಡೆದು ಸಂಸಾರ ಸಾಕಲಾರದೆ ರುಷಿಕುಮಾರರಾದ ಉದಾಹರಣೆಯೂ ನಮ್ಮ ಕಣ್ಣ ಮುಂದಿದೆ. ಬದುಕಲು ಚಿಕನ್ ಶಾಪ್ ಕೂಡ ತೆರೆಯಬಲ್ಲೆ ಎಂದು ಕೋಳಿ ಕಟ್ ಮಾಡಿದ ಅಹಿಂಸಾವಾದಿ ಸನ್ಯಾಸಿಯು ಇಲ್ಲೇ ಬದುಕಿದ್ದಾನಂತಲ್ಲಾ, ಥೂತ್ತೇರಿ.

*****

ಈ ಜಾಗತೀಕರಣದ ಬಂಡವಾಳಶಾಹಿ ಹೂಡೆತಕ್ಕೆ ಸಿಕ್ಕಿ ಭಾರತ ಅಲ್ಲೋಲಕಲ್ಲೋಲವಾಗುತ್ತ ಅದರಲ್ಲಿ ಸಂಸಾರಿಗಳು ಸನ್ಯಾಸಿಗಳಾಗುತ್ತ ಹೂರಟಿದ್ದಾರಂತಲ್ಲಾ. ಅದಕ್ಕಿಂತ ಮುಖ್ಯವಾಗಿ ಸ್ಥಾಪಿತ ಮೌಲ್ಯಗಳು ಪತನಗೊಂಡು ಜಾತಿ ಗಡಿರೇಖೆಗಳು ಅಳಿಸಿಹೋಗುತ್ತ ದುಡ್ಡಿದ್ದವರದೊಂದು ಜಾತಿ ಇಲ್ಲದವರದೊಂದು ಜಾತಿಯಾಗಿ ಬೇರ್ಪಡುತ್ತಿರುವಾಗ ಸನ್ಯಾಸಿ ಎಂಬ ಪದ ಸಮೃದ್ಧ ಪದವಾಗಿ ಕಾಣುತ್ತಿದೆಯಲ್ಲಾ. ಈ ಸಮೃದ್ಧತೆಯ ಬದುಕಿನ ಎಲ್ಲ ಐಭೋಗಗಳು ತುಂಬಿಕೊಂಡು ಅದು ಜನಸಾಮಾನ್ಯರಿಗೂ ಅರಿವಾಗಿ ಅವರ ಭಕ್ತಿಭಾವಗಳು ಮೊದಲಿಗಿಂತಲೂ ಇಮ್ಮಡಿಗೂಂಡಿವೆಯಂತಲ್ಲಾ. ಇದು ನಮ್ಮ ಪುರೋಹಿತಶಾಹಿಗಳಿಗೆ ಬಹು ಸಂತೋಷಕರ ಸಂಗತಿಯಾಗಿ ತಮ್ಮ ಅಜೆಂಡಾಗಳನ್ನೆಲ್ಲಾ ನಮ್ಮ ಬಹು ಸಂಸ್ಕೃತಿಯೊಳಕ್ಕೆ ತುರುಕುತ್ತ, ಮುಖ್ಯವಾಗಿ ಮಕ್ಕಳ ಮನಸ್ಸಿನ ಮೇಲೆ ಲಗ್ಗೆಯಿಟ್ಟಿದ್ದಾರಂತಲ್ಲಾ. ಈ ಪೈಕಿ ಗರ್ಭಗುಡಿಯಲ್ಲಿ ಕಸಹೊಡೆದು ಕ್ಲೀನ್ ಮಾಡಿ ಗಂಧದಕಡ್ಡಿ ಜೋಡಿಸಿ ಕರ್ಪೂರ ಹಚ್ಚಿ, ಹೂಗಳನ್ನ ವಿಂಗಡಿಸಿ ಕಟ್ಟಿ ಪ್ರಧಾನ ಅರ್ಚಕರು ಬರುವವರೆಗೆ ಕಾಯುತ್ತಿದ್ದಂತವನೊಬ್ಬ ಮಕ್ಕಳ ಶಿಕ್ಷಣ ಸಂಸ್ಥೆಯಲ್ಲಿ ಮಂಚೂಣಿಯಲ್ಲಿದ್ದಾನಂತಲ್ಲಾ, ಥೂತ್ತೇರಿ.

******

ನಮ್ಮ ಶಿಕ್ಷಣ ಸಂಸ್ಥೆಯೊಳಕ್ಕೆ ವಿಪ್ರೋತ್ತಮರು ಸೇರಿಕೂಂಡು ಮಾಡುತ್ತಿರುವ ಅನಾಹುತಕ್ಕೆ ಇಡೀ ಕರ್ನಾಟಕವೇ ಕೋಲಾಹಲಗೊಂಡಿರುವಾಗ ನಮ್ಮ ಮುಖ್ಯಮಂತ್ರಿ ಶಿಕ್ಷಣ ಇಲಾಖೆಯ ಪರಂಪರೆಯನ್ನ ಗ್ರಹಿಸಬೇಕಿತ್ತಲ್ಲಾ. ಅಲ್ಲಿ ಶಿಕ್ಷಣ ಸಚಿವರಾಗಿದ್ದ ಶಂಕರೇಗೌಡರ ಹೆಸರು ಚಿರಸ್ಥಾಯಿಯಾಗಿದೆ. ಗೋವಿಂದೇಗೌಡರ ಹೆಸರು ಅಜರಾಮರವಾಗಿದೆ. ಇನ್ನು ಕಳೆದ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಪ್ರಾಮಾಣಿಕತೆಯಲ್ಲಿ ಗೋವಿಂದೇಗೌಡರನ್ನ ಸರಿಗಟ್ಟಿದ್ದಲ್ಲದೆ, ಅವರ ಬಳಿಹೋದ ಶಿಕ್ಷಕರಿಗೆ ಅವರ ಸಬ್ಜೆಕ್ಟ್‌ನ ಬಗ್ಗೆ ಪ್ರಶ್ನೆ ಕೇಳಿ ತಬ್ಬಿಬ್ಬುಗೇಳಿಸುತ್ತಿದ್ದು ಈಗ ಇತಿಹಾಸ. ಆದರೆ ಈಗಿನ ಶಿಕ್ಷಣ ಸಚಿವರ ತಲೆ ತುಂಬಾ ಪುರೋಹಿತಶಾಹಿ ಪ್ರಶ್ನೆಗಳೇ ತುಂಬಿಕೊಂಡು ಅವನ್ನೆಲ್ಲಾ ಜಾರಿಮಾಡಲು ಹೊರಟಿದ್ದಾರಲ್ಲಾ. ಇದಕ್ಕೆಲ್ಲಾ ಅಂತವರಿಗೆ ಶಿಕ್ಷಣ ಖಾತೆ ಕೂಟ್ಟ ಮುಖ್ಯಮಂತ್ರಿಗಳೆ ಹೊಣೆಗಾರರಾಗಬೇಕಾಗುತ್ತದೆ. ಆದರೇನು ಅವರ ಎಡ ಮಂಡಿ ನೋವಿನ ಮುಂದೆ ಇನ್ಯಾವ ಸಮಸ್ಯೆಗಳೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ತಿಪಟೂರು ಶಾಲಾಮೈದಾನದಲ್ಲಿ ಅವುಡುಗಚ್ಚಿ ಲಾಠಿ ಬೀಸುತ್ತಿದ್ದ ಆಸಾಮಿಗೆ ಶಿಕ್ಷಣ ಖಾತೆ ಕೂಟ್ಟವರು ಮುಖ್ಯಮಂತ್ರಿಗಳಲ್ಲ. ಕೇಶವಕೃಪದಿಂದ ಬಂದ ಪಟ್ಟಿಯನ್ನು ಜಾರಿಮಾಡಿದರಂತಲ್ಲಾ, ಥೂತ್ತೇರಿ…


ಇದನ್ನೂ ಓದಿ: ದಶಕದ ನಂತರ ಗೆದ್ದ ಅಗ್ರಹಾರದ ಜಟ್ಟಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...