Homeಪುಸ್ತಕ ವಿಮರ್ಶೆನಾಲ್ಕು ಪುಸ್ತಕಗಳ ಬಗ್ಗೆ ಕಿರು ಟಿಪ್ಪಣಿ

ನಾಲ್ಕು ಪುಸ್ತಕಗಳ ಬಗ್ಗೆ ಕಿರು ಟಿಪ್ಪಣಿ

- Advertisement -
- Advertisement -

1. ದ ಎವೊಲ್ಯೂಶನ್ ಆಫ್ ಪ್ರಾಗ್ಮಾಟಿಸಂ ಇನ್ ಇಂಡಿಯಾ (ಎನ್ ಇಂಟಲೆಕ್ಚುಯಲ್ ಬಯೋಗ್ರಫಿ ಆಫ್ ಅಂಬೇಡ್ಕರ್)

ಇಂಗ್ಲಿಷ್‌ನಲ್ಲಿ ಬಾಬಾಸಾಹೇಬರ ಬಗ್ಗೆ ಹಲವು ಜೀವನಚರಿತ್ರೆಗಳು ಜನಪ್ರಿಯವಾಗಿವೆ. ಧನಂಜಯ ಕೀರ್, ನರೇಂದ್ರ ಜಾಧವ್, ಕ್ರಿಸ್ಟಾಫ್ ಜಫರ್ಲೋ, ಗೇಲ್ ಓಮ್ವೆಟ್, ಎಲಿನೊರ್ ಜೆಲಿಯಟ್ -ಹೀಗೆ ಹಲವರು ಬರೆದ ಬಯೋಗ್ರಫಿಗಳು ಇವೆಯಾದರೂ, ಅಂಬೇಡ್ಕರ್ ಅವರನ್ನು ಬಹಳವಾಗಿ ಪ್ರಭಾವಿಸಿದ ಒಂದು ಆಯಾಮದ ಜಾಡು ಹಿಡಿದು, ಅದರ ಸುತ್ತ ಆಳವಾದ ಅಧ್ಯಯನ ಮಾಡಿ ಸ್ಕಾಟ್ ಆರ್. ಶ್ರೌಡ್ ಅವರು ಈ ಪುಸ್ತಕ ರಚಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ತಮಗೆ ಬೋಧಿಸಿದ ಪ್ರೊ. ಜಾನ್ ಡ್ಯೂಯಿ ಬಗ್ಗೆ ಡಾ. ಅಂಬೇಡ್ಕರ್ ಅವರು ಸವಿತಾ ಅಂಬೇಡ್ಕರ್ ಅವರಿಗೆ ಬರೆದ ಪತ್ರವೊಂದರಲ್ಲಿ ಹೀಗೆ ಹೇಳಿದ್ದವರು: “ನನ್ನೆಲ್ಲ ಬೌದ್ಧಿಕ ಜೀವನಕ್ಕೆ ಅವರೇ ಕಾರಣ. ಅವರು ಅದ್ಭುತ ಮನುಷ್ಯ” ಎಂದು. ತತ್ವಶಾಸ್ತ್ರಜ್ಞ ಮತ್ತು ಉಪನ್ಯಾಸಕರಾಗಿದ್ದ ಜಾನ್ ಡ್ಯೂಯಿ “ಪ್ರಾಗ್ಮಾಟಿಸಂ” ಎನ್ನುವ ತತ್ವ ಚಿಂತನೆಯನ್ನು ಜನಪ್ರಿಯಗೊಳಿಸಿದವರು.

ಈ ಪ್ರಾಗ್ಮಾಟಿಸಂ ಅಥವಾ ವಾಸ್ತವಿಕವಾದ ಅಂಬೇಡ್ಕರ್ ಚಿಂತನೆಗಳನ್ನು ಹೇಗೆ ಪ್ರಭಾವಿಸಿತು; ಅಂಬೇಡ್ಕರ್ ಕೈಗೊಂಡ ಕೆಲಸಗಳಲ್ಲಿ, ಚಳವಳಿಗಳಲ್ಲಿ ಮತ್ತು ಅವರ ಬರಹಗಳಲ್ಲಿ ಈ ಪ್ರಾಗ್ಮಾಟಿಸಂನ ಪಾತ್ರವೇನು ಎಂಬೆಲ್ಲಾ ಸಂಗತಿಗಳ ಬಗ್ಗೆ ಈ ಪುಸ್ತಕ ಅಧ್ಯಯನವನ್ನು ಕೈಗೊಂಡಿದೆ.

“ಡ್ಯೂಯಿ ಅವರ ಪ್ರಾಗ್ಮಾಟಿಸಂ ಜೊತೆಗೆ, ಭಾರತದ ಅತ್ಯಂತ ದೊಡ್ಡ ಧೀಮಂತ ವ್ಯಕ್ತಿ ಅಂಬೇಡ್ಕರ್ ಅವರ ಚಿಂತನೆ ಯಾವ ಐತಿಹಾಸಿಕ ಸಂಬಂಧ ಹೊಂದಿತ್ತು ಎಂಬುದರ ಮೊದಲ ಸುದೀರ್ಘವಾದ ಮತ್ತು ಆಳವಾದ ಅಧ್ಯಯನ ಈ ಪುಸ್ತಕ. ಅಂಬೇಡ್ಕರ್ ಅವರ ಹೊಸ ರೂಪದ ಪ್ರಾಗ್ಮಾಟಿಸಂ ಸೃಷ್ಟಿ ಆಗುವುದರೊಂದಿಗೆ ಭಾರತದಲ್ಲಿ ಆದ ಪ್ರಾಗ್ಮಾಟಿಸಂನ ಐತಿಹಾಸಿಕ ವಿಕಾಸವನ್ನು ಶೋಧಿಸುವ ಮೊದಲ ಪುಸ್ತಕ ಕೂಡ ಇದು” ಎಂದು ಲೇಖಕರು ಪರಿಚಯ ಅಧ್ಯಾಯದಲ್ಲಿ ಬರೆದುಕೊಳ್ಳುತ್ತಾರೆ.

ಆಸ್ಟಿನ್‌ನ ಯೂನಿವರ್ಸಿಟಿ ಆಫ್ ಟೆಕ್ಸಾಸ್‌ನಲ್ಲಿ ಸ್ಕಾಟ್ ಆರ್. ಶ್ರೌಡ್ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಸಾವತ್ರಿ ಫುಲೆ ಪುಣೆ ವಿಶ್ವವಿದ್ಯಾಲಯದಲ್ಲಿ ಭಾರತದ ಮೊದಲ ಡ್ಯೂಯಿ ಅಧ್ಯಯನ ಕೇಂದ್ರದ ಸಹ ಸಂಸ್ಥಾಪಕರು ಕೂಡ ಇವರು. ಅಂಬೇಡ್ಕರ್ ಬೌದ್ಧಿಕ ಚಿಂತನೆಯ ಸಾಹಿತ್ಯಕ್ಕೆ ಹೊಸ ಕೊಡುಗೆ ನೀಡಿರುವ ಈ ಪುಸ್ತಕವನ್ನು ಹಾರ್ಪರ್ ಕಾಲಿನ್ಸ್ ಪ್ರಕಟಿಸಿದೆ. ಬೆಲೆ: 599 ರೂ.

2. ಬಿಕಮಿಂಗ್ ಬಾಬಾಸಾಹೇಬ್: ಬರ್ಥ್ ಟು ಮಹಾಡ್ (1891-1929); ದ ಲೈಫ್ ಅಂಡ್ ಟೈಮ್ಸ್ ಆಫ್ ಭೀಮರಾವ್ ರಾಮ್‌ಜಿ ಅಂಬೇಡ್ಕರ್

2023ರ ಅಂಬೇಡ್ಕರ್ ಜಯಂತಿಯಂದು ಬಿಡುಗಡೆಗೊಂಡ ಬಾಬಾಸಾಹೇಬರ ಬಗೆಗಿನ ಮತ್ತೊಂದು ಜೀವನಚರಿತ್ರೆಯ ಪುಸ್ತಕವಿದು. ಇದರ ಲೇಖಕ ಆಕಾಶ್ ಸಿಂಗ್ ರಾಥೋರ್ ಕೆಲವು ವರ್ಷಗಳ ಹಿಂದೆ ’ಅಂಬೇಡ್ಕರ್‍ಸ್ ಪ್ರಿಯಾಂಬಲ್: ಎ ಸಿಕ್ರೆಟ್ ಹಿಸ್ಟರಿ ಆಫ್ ಕಾನ್ಸ್ಟಿಟ್ಯೂಷನ್’ ಎಂಬ ಪುಸ್ತಕದಲ್ಲಿ ಭಾರತ ಸಂವಿಧಾನದ ಪೀಠಿಕೆಯ ಇತಿಹಾಸವನ್ನು ಅಧ್ಯಯನ ಮಾಡಿ ಜನಪ್ರಿಯ ಶೈಲಿಯಲ್ಲಿ ಬರೆದವರು. ’ಬಿ. ಆರ್. ಅಂಬೇಡ್ಕರ್‍ಸ್ ಬುದ್ಧ ಅಂಡ್ ಧಮ್ಮ: ಎ ಕ್ರಿಟಿಕಲ್ ಎಡಿಷನ್’ ಕೂಡ ಸಂಪಾದಿಸಿದ್ದಾರೆ. ಈಗ ಅಂಬೇಡ್ಕರ್ ಅವರ ಹೊಸ ಜೀವನಚರಿತ್ರೆಯನ್ನು ಬರೆಯಲು ಕೈಹಾಕಿದ್ದು ಅದರ ಮೊದಲ ಭಾಗವನ್ನು ಬಿಡುಗಡೆ ಮಾಡಿದ್ದಾರೆ.

“ಈ ಪುಸ್ತಕದಲ್ಲಿ, ಅಂಬೇಡ್ಕರ್ ಅವರನ್ನು ಒಬ್ಬ ವ್ಯಕ್ತಿಯಾಗಿ ಹಿಡಿಯಲು ಪ್ರಯತ್ನಿಸಿದ್ದೇನೆ- ಅವರ ವ್ಯಕ್ತಿತ್ವ, ಮತ್ತು ಅದು ಹೇಗೆ ಅಂಬೇಡ್ಕರ್ ಅವರು ಅಂಬೇಡ್ಕರ್ ಆಗಲು ಸಹಾಯ ಮಾಡಿತು ಎಂಬುದನ್ನು. ಇದು ಅವರ ಬೌದ್ಧಿಕ ಜೀವನ ಚರಿತ್ರೆಯಲ್ಲ” ಎನ್ನುವ ಲೇಖಕರು, ಈಗ ಬರೆಯಲಾಗಿರುವ ಹಲವು ಜೀವನಚರಿತ್ರೆಗಳಲ್ಲಿ ನುಸುಳಿರುವ ಕೆಲವು ತಪ್ಪುಗಳ ಬಗ್ಗೆ ’ದೇರ್ ವಿಲ ಬಿ ಬ್ಲಡ್’ ಎಂಬ ಮುನ್ನುಡಿಯಲ್ಲಿಯೇ ಚರ್ಚಿಸುತ್ತಾರೆ.

ಉದಾಹರಣೆಗೆ ಕೀರ್ ಅವರ ಬಯೋಗ್ರಫಿಯ ಬಗ್ಗೆ ಬರೆಯುತ್ತಾ ಆಕಾಶ್ ಹೀಗೆ ಹೇಳುತ್ತಾರೆ: “ಅಂಬೇಡ್ಕರ್‌ರ ಈ ’ಅಧಿಕೃತ’ ಜೀವನಚರಿತ್ರೆಯಲ್ಲಿ, ಸಾವರ್ಕರ್‌ನನ್ನು ಕನಿಷ್ಟ 50 ಸಾರಿಯಾದರೂ ನೆನಪಿಸಿಕೊಳ್ಳಲಾಗುತ್ತದೆ, ಅವರನ್ನು ’ಅದ್ಭುತ ಮನುಷ್ಯ’, ’ಅದ್ಭುತ ನಾಯಕ’ ಎಂದೆಲ್ಲಾ ಕರೆದು, ಅಸ್ಪೃಶ್ಯರ ಉದ್ಧಾರಕ್ಕೆ ಕಟಿಬದ್ಧರಾಗಿದ್ದವರು ಎಂದು ಹೇಳುತ್ತದೆ. ಜೀವನಚರಿತ್ರೆಯುದ್ದಕ್ಕೂ ಸಾವರ್ಕರ್ ಹೆಸರನ್ನು ಸುಖಾಸುಮ್ಮನೆ ಅತಿಯಾಗಿ ಎಳೆದುತಂದಿರುವುದು ಮಾತ್ರವಲ್ಲ, ಸಾವರ್ಕರ್ ಮತ್ತು ಅಂಬೇಡ್ಕರ್ ನಡುವೆ ನಡೆಯಲಾಯಿತು ಎನ್ನುವ ಕಾಲ್ಪನಿಕ ಭೇಟಿಗಳ ಸಂಭಾಷಣೆಯನ್ನೂ ಕೀರ್ ಅದರಲ್ಲಿ ಸೇರಿಸುತ್ತಾರೆ; ಇದನ್ನು ಬೇರೆ ಯಾವ ಮೂಲಗಳಿಂದಲೂ ದೃಢೀಕರಿಸಲು ಸಾಧ್ಯವಾಗಿಲ್ಲ- ಕೀರ್ ಅವರಿಗೆ ಅವರ ಇಬ್ಬರು ಹೀರೋಗಳನ್ನು ಬೆಸೆಯುವ ಉದ್ದೇಶವಿತ್ತು, ಆದಕಾರಣ ಐತಿಹಾಸಿಕ ದಾಖಲೆಗಳ ಗೋಜಿಗೆ ಹೋಗದೆ, ಕಾಲ್ಪನಿಕ ಸಂಗತಿಗಳನ್ನು ತುಂಬಿದ್ದಾರೆ” ಎನ್ನುತ್ತಾರೆ.

ಈ ಜೀವನ ಚರಿತ್ರೆಯ ಮೊದಲ ಭಾಗದಲ್ಲಿ 15 ಅಧ್ಯಾಯಗಳಿದ್ದು 1928ರ ಅಂಬೇಡ್ಕರ್ ಜೀವನದವರೆಗೆ ಬಂದು ನಿಂತಿದೆ. ಮಹಾಡ್ ಮತ್ತು ದುಂಡುಮೇಜಿನ ಸಭೆಯ ನಡುವಿನ ಅವಧಿಯ (1928-29) ಸಂಗತಿಗಳು ಕೊನೆಯ ಅಧ್ಯಾಯಕ್ಕೆ ನಿಲ್ಲುತ್ತವೆ. ಇದನ್ನೂ ಕೂಡ ಹಾರ್ಪರ್ ಕಾಲಿನ್ಸ್ ಪ್ರಕಟಿಸಿದ್ದು, ಬೆಲೆ 699 ರೂ.

ಇದನ್ನೂ ಓದಿ: ಪ್ರೊ. ಕಾರ್ಲೋಸರ ‘ಶಂಬಾಲ’ ಎಂಬ ರಾಜಕೀಯ ಕಾದಂಬರಿ

3. ’ವಾಟರ್ ಇನ್ ಎ ಬ್ರೋಕನ್ ಪಾಟ್’- ನೆನಪಿನ ಗುಚ್ಚ

ಯೋಗೇಶ್ ಮೈತ್ರೆಯಾ ಜಾತಿ ವಿರೋಧಿ-ಅಂಬೇಡ್ಕರ್‌ವಾದಿ ಕವಿ. ದಲಿತ-ಬಹುಜನ ಲೇಖಕರ ಕೃತಿಗಳನ್ನು ಪ್ರಕಟಿಸುವ ’ಪ್ಯಾಂಥರ್ಸ್ ಪಾ’ ಪ್ರಕಾಶನ ಸಂಸ್ಥೆಯನ್ನು ಹುಟ್ಟಿಹಾಕಿದ ಯೋಗೇಶ್ ಅನುವಾದಕ ಕೂಡ. ಯೋಗೇಶ್ ಅವರ ಕೆಲವು ಕವನಗಳ ಕನ್ನಡಾನುವಾದ ’ಓದುವುದೆಂದರೆ ಸ್ಪರ್ಶಿಸಿದಂತೆ’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಸದರಿ ಪುಸ್ತಕ ಯೋಗೇಶ್ ಅವರ ಆತ್ಮಕಥೆಗಳ ಸಂಗ್ರಹ.

ಪುಸ್ತಕದ ಜಾಕೆಟ್‌ನಲ್ಲಿ ಪ್ರೋತ್ಸಾಹದ ನುಡಿಗಳನ್ನು ಬರೆದಿರುವ ಚಿಂತಕಿ-ಕವಿ ಮೀನಾ ಕಂದಸ್ವಾಮಿಯವರು “ಈ ಮಾಸ್ಟರ್‌ಪೀಸ್ ಆದ ಸುಂದರ ಆತ್ಮಕತೆಯನ್ನು ಓದುವ ನಾವು ಓದುಗರು ನಿಜವಾಗಿಯೂ ಅದೃಷ್ಟವಂತರು. ಆಳವಾದ ಒಳನೋಟಗಳು ಮತ್ತು ಸಂಪೂರ್ಣ ಸೂಕ್ಷ್ಮತೆಯೊಂದಿಗೆ ಜೀವನ, ಮನೆ, ರಾಜಕೀಯ ಮತ್ತು ಸಿನಿಮಾವನ್ನು ಯೋಗೇಶ್ ಮೈತ್ರೆಯ ಅವರ ಪುಸ್ತಕ ಹಿಡಿದಿಡುತ್ತದೆ” ಎನ್ನುತ್ತಾರೆ.

ಯೋಗೇಶ್ ಅವರ ಈ ಪುಸ್ತಕದ ಮೊದಲ ಅಧ್ಯಾಯ “ಲರ್ನಿಂಗ್ ಟು ಸೀ”ನಲ್ಲಿನ ಮೊದಲ ಮಾತುಗಳು ಹೀಗಿವೆ: “ದಲಿತ ವ್ಯಕ್ತಿಗೆ, ಆತ ಮನೆಯಿಂದ ಹೊರಗೆ ಕಾಲಿಟ್ಟಾಕ್ಷಣ ಅವನ ಅಸ್ಮಿತೆ ಬದಲಾಗುತ್ತಲೇ ಇರುತ್ತದೆ. ಹೇಗೆ ಕಪ್ಪು ವ್ಯಕ್ತಿ ಅವರ ಸಮುದಾಯದೊಳಗೆ ಕಪ್ಪು ಆಗದೆ ಮತ್ತೊಬ್ಬ ಮನುಷ್ಯ ಸಹಜೀವಿಯಾಗಿರುತ್ತಾನೋ, ದಲಿತ ಕೂಡ ದಲಿತರ ಮಧ್ಯೆ ಉಸಿರಾಡಿಕೊಂಡು ಇರುವವರೆಗೆ ಆತ ಕೂಡ ಮನುಷ್ಯ ಸಹಜೀವಿ. ದಲಿತನಾಗಿರುವುದೆಂದರೆ ತನ್ನ ಸ್ವಂತದ ಬಗ್ಗೆ ಸದಾ ಶೋಧಿಸುವ ಪ್ರಕ್ರಿಯೆಯಲ್ಲಿರುವುದು. ದಲಿತ ಯಾರು? ನನ್ನ ಪ್ರಕಾರ, ದಲಿತನೆಂದರೆ, ಸಮಾಜ ಆತನ ವಿರುದ್ಧ ಅನುಸರಿಸಿಕೊಂಡು ಬಂದಿರುವ ಅಸ್ಪೃಶ್ಯತೆಯಿಂದ ಅಸ್ಮಿತೆ ರೂಪುಗೊಂಡಿರುವ ವ್ಯಕ್ತಿ. ಭಾರತದ ಜೀವನದ ಎಲ್ಲ ಆಯಾಮಗಳಲ್ಲೂ ಅವನನ್ನು ಮುಟ್ಟಿಸಿಕೊಳ್ಳುವುದಿಲ್ಲ. ಕಲ್ಪನೆಯಲ್ಲಿ ಕೂಡ ಅವನನ್ನು ಮುಟ್ಟಿಸಿಕೊಳ್ಳುವುದಿಲ್ಲ. ಉಳಿದುಕೊಳ್ಳಬೇಕಿರುವ ಕಾರಣಕ್ಕೆ ಗುಲಾಮಿಯಾಗಿ ಸಮಾಜದ ಸೇವೆ ಸಲ್ಲಿಸುವುದನ್ನು ಹೊರತುಪಡಿಸಿ, ಸಮಾಜದಲ್ಲಿ ಒಬ್ಬನ ಅಸ್ತಿತ್ವ ಇರದೆ ಹೋದಾಗ, ಅವನು ಬೆಟ್ಟದಂತಹ ಸಂದಿಗ್ಧತೆಗಳು, ಕೀಳರಿಮೆಗಳು, ವಿರೋಧಾಭಾಸಗಳು ಮತ್ತು ಭ್ರೂಣಾವಸ್ಥೆಯಲ್ಲಿರುವ ಜ್ವಾಲಾಮುಖಿಯ ಹೊಗೆಯ ಆಗರವಾಗುತ್ತಾನೆ. ಈ ಸಂದಿಗ್ಧತೆಗಳು, ಕೀಳರಿಮೆಗಳು, ವಿರೋಧಾಭಾಸಗಳನ್ನು ಮೀರುವುದರಲ್ಲಿ ದಲಿತ ವ್ಯಕ್ತಿಯ ವಿಮೋಚನೆ ಅಡಗಿದೆ ಮತ್ತು ನಂತರ ಆತ ನಿಧಾನಕ್ಕೆ ಜ್ವಾಲಾಮುಖಿಯ ತರ ಮುಕ್ತವಾಗಿ, ಚಿಂತೆಯಿಲ್ಲದೆ ಸ್ಪೋಟಿಸುತ್ತಾನೆ. ದಲಿತ ವ್ಯಕ್ತಿಗೆ ಹೀಗೆ ಬಿಡಿಸಿಕೊಂಡು ಮುಕ್ತನಾಗುವುದು, ಅವನ್ನು ರೂಪಿಸಿದ ಈ ದೇಶದ ಜಾತೀಯತೆಯ ಆತ್ಮಕ್ಕೆ ಸವಾಲೆಸೆಯುವ ನಡೆಯಾಗುತ್ತದೆ…”

ಹೀಗೆ ತನ್ನ ಕಾವ್ಯಾತ್ಮಕ ಭಾಷೆ ಮತ್ತು ನೇರ ಅಭಿವ್ಯಕ್ತಿಯಿಂದ ಆರಂಭದಲ್ಲೇ ಓದುಗನನ್ನು ಹಿಡಿದಿಟ್ಟುಕೊಳ್ಳುವ ಈ ಆತ್ಮಕತೆಯನ್ನು ಪೆಂಗ್ವಿನ್ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ಬೆಲೆ 400 ರೂ.

4. ಕ್ಯಾಸ್ಟ್ ಪ್ರೈಡ್ – ಬ್ಯಾಟಲ್ಸ್ ಫಾರ್ ಇಕ್ವಾಲಿಟಿ ಇನ್ ಹಿಂದೂ ಇಂಡಿಯಾ

ಮನೋಜ್ ಮಿತ್ತ ದೆಹಲಿ ಮೂಲದ ಪತ್ರಕರ್ತರು. ಹೈದರಾಬಾದಿನಿಂದ ಕಾನೂನು ಪದವಿ ಪಡೆದಿರುವ ಅವರು ಕಾನೂನು, ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ತಮ್ಮ ಪತ್ರಿಕೋದ್ಯಮವನ್ನು ಕೇಂದ್ರೀಕರಿಸಿದ್ದಾರೆ. ಇಂದಿರಾ ಗಾಂಧಿ ಅವರ ಕೊಲೆಯ ನಂತರ ಸಿಖ್ಖರ ಮೇಲಾದ ಮಾರಣಹೋಮದ ಬಗ್ಗೆ ಎಚ್.ಎಸ್. ಫೂಕ್ಲಾ ಅವರ ಜೊತೆಗೂಡಿ ’ವೆನ್ ಎ ಟ್ರೀ ಶುಕ್ ದೆಹಲಿ: 1984 ಕಾರ್ನೇಜ್ ಅಂಡ್ ಇಟ್ಸ್ ಆಫ್ಟರ್‌ಮಾಥ್’ ಹಾಗೂ ಗೋಧ್ರಾ ನಂತರದ ಗುಜರಾತ್ ಗಲಭೆಗಳು ಮತ್ತು ನರಮೇಧದ ಬಗ್ಗೆ “ದ ಫಿಕ್ಷನ್ ಆಫ್ ಫ್ಯಾಕ್ಟ್ ಫೈಂಡಿಂಗ್: ಮೋದಿ ಅಂಡ್ ಗೋಧ್ರ” ಎಂಬ ಪುಸ್ತಕಗಳನ್ನು ರಚಿಸಿದ್ದಾರೆ. ಕ್ಯಾಸ್ಟ್ ಪ್ರೈಡ್ ಅವರ ಇತ್ತೀಚಿನ ಪುಸ್ತಕ.

ಹಿಂದೂ ಜಾತೀಯ ಸಮಾಜದಲ್ಲಿ ನಡೆದ ಹಿಂಸಾಚಾರ ಮತ್ತು ಸಹಿಷ್ಣುತೆಯನ್ನು ಈ ಪುಸ್ತಕ ಶೋಧಿಸುತ್ತದೆ ಎನ್ನುತ್ತದೆ ಈ ಪುಸ್ತಕದ ರಕ್ಷಾಕವಚದಲ್ಲಿರುವ ಒಂದು ಟಿಪ್ಪಣಿ ಹೇಳುತ್ತದೆ. ಆರಂಭದಲ್ಲಿಯೇ ಸುಮಾರು ಎಂಟು ಪುಟಗಳ ’ಜಾತಿರ ವಿರುದ್ಧದ ಕಾನೂನು ಹೋರಾಟಗಳ ಮೈಲಿಗಲ್ಲುಗಳನ್ನು ಕಾಲಾನುಕ್ರಮಣಿಕೆಯಲ್ಲಿ ಪುಸ್ತಕ ಪಟ್ಟಿ ಮಾಡುತ್ತದೆ. ಸುಮಾರು 18 ಅಧ್ಯಾಯಗಳಲ್ಲಿ, ಲೇಖಕರು ತಮ್ಮ ಅಧ್ಯಯನವನ್ನು ಸುಮಾರು 500ಕ್ಕೂ ಹೆಚ್ಚು ಪುಟಗಳಲ್ಲಿ ಓದುಗರಿಗೆ ಮಂಡಿಸುತ್ತಾರೆ.

ಮುನ್ನುಡಿಯ ಕೊನೆಯಲ್ಲಿ ಮನೋಜ್ ಅವರು ಬರೆಯುವಂತೆ: “ಕಾನೂನು ಸುರಕ್ಷತೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವಾದರೆ, ಇದಕ್ಕೆ ಸ್ಪಷ್ಟ ಕಾರಣ ಜಾತಿಯಿಂದ ಹುಟ್ಟುವ ಅಸಮಾನತೆಯ ಅಂತರಂಗದಲ್ಲಿ ಹಿಂಸೆ ಉಳಿದಿರುವುದು. ಈ ವ್ಯವಸ್ಥಿತ ಹಿಂಸೆಯ ಮುಖ ನಿರ್ಭಯವಲ್ಲದೇ ಬೇರೇನಲ್ಲ. ಅದರ ಅವತಾರ ಏನೇ ಆಗಿರಲಿ ಮತ್ತು ಅದು ಎಷ್ಟೇ ಅಡಗಿ ಕುಳಿತಿರಲಿ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಇನ್ನೂ ಜಾತಿಯಲ್ಲಿ ಮುಳುಗಿದೆ” ಎನ್ನುತ್ತಾರೆ.

2023ರ ಏಪ್ರಿಲ್‌ನಲ್ಲಿ ಪ್ರಕಟವಾದ ಈ ಪುಸ್ತಕವನ್ನು ಕಾಂಟಕ್ಸ್ಟ್ ಪ್ರಕಾಶನ ’ದ ನ್ಯೂಇಂಡಿಯಾ ಫೌಂಡೇಶನ್’ ಸಹಯೋಗದೊಂದಿಗೆ ಪ್ರಕಟಿಸಿದೆ. ಬೆಲೆ: 999 ರೂ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...