Homeದಲಿತ್ ಫೈಲ್ಸ್ದಲಿತ ನಾಯಕ ಜಿಗ್ನೇಶ್‌ ಸೇರಿದಂತೆ ಹತ್ತು ಮಂದಿಗೆ ಜೈಲು ಶಿಕ್ಷೆ: ಕೋರ್ಟ್ ತೀರ್ಪು

ದಲಿತ ನಾಯಕ ಜಿಗ್ನೇಶ್‌ ಸೇರಿದಂತೆ ಹತ್ತು ಮಂದಿಗೆ ಜೈಲು ಶಿಕ್ಷೆ: ಕೋರ್ಟ್ ತೀರ್ಪು

- Advertisement -
- Advertisement -

2017ರ ಜುಲೈನಲ್ಲಿ ಮೆಹ್ಸಾನಾ ಪಟ್ಟಣದಿಂದ ಪೊಲೀಸ್ ಅನುಮತಿಯಿಲ್ಲದೆ ರ್‍ಯಾಲಿ ನಡೆಸಿದ ಆರೋಪದ ಮೇಲೆ ದಲಿತ ನಾಯಕ, ವಡ್ಗಾಮ್‌ ಶಾಸಕ ಜಿಗ್ನೇಶ್ ಮೇವಾನಿ, ಕಾಂಗ್ರೆಸ್ ಪಕ್ಷದ ನಾಯಕರಾದ ರೇಷ್ಮಾ ಪಟೇಲ್‌ ಸೇರಿದಂತೆ ಒಟ್ಟು ಹತ್ತು ಮಂದಿಗೆ ಗುಜರಾತ್‌ನ ಮೆಹ್ಸಾನಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.

ಕಾನೂನು ಬಾಹಿರವಾಗಿ ಸಭೆ ನಡೆಸಲಾಗಿದೆ ಎಂಬ ಆರೋಪವನ್ನು ಎತ್ತಿ ಹಿಡಿದಿರುವ ಕೋರ್ಟ್, ಎಲ್ಲಾ ಅಪರಾಧಿಗಳಿಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ತಲಾ 1,000 ರೂ. ದಂಡ ವಿಧಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಜೆಎ ಪರ್ಮಾರ್ ಅವರು ತೀರ್ಪು ನೀಡಿದ್ದು, “ರ್‍ಯಾಲಿ ನಡೆಸುವುದು ಅಪರಾಧವಲ್ಲ. ಆದರೆ ಅನುಮತಿಯಿಲ್ಲದೆ ರ್‍ಯಾಲಿ ನಡೆಸುವುದು ಅಪರಾಧ” ಎಂದು ಅಭಿಪ್ರಾಯಪಟ್ಟಿದ್ದಾರೆ. “ಅವಿಧೇಯತೆಯನ್ನು ಎಂದಿಗೂ ಸಹಿಸಲಾಗುವುದಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ.

ದಲಿತರ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಖಂಡಿಸಿ ಊನಾದಲ್ಲಿ ನಡೆದ ಬೃಹತ್‌ ಆಂದೋಲನದ ಕರಾಳ ನೆನಪಿಗಾಗಿ ಜುಲೈ 12, 2017ರಂದು ಮೇವಾನಿ ಮತ್ತು ಅವರ ಸಹಚರರು ಮೆಹ್ಸಾನಾದಿಂದ ನೆರೆಯ ಬನಸ್ಕಾಂತ ಜಿಲ್ಲೆಯ ಧನೇರಾಗೆ ‘ಆಜಾದಿ ಕೂಚ್’ ಕಾರ್ಯಕ್ರಮ ನಡೆಸಿದರು.

ಮೇವಾನಿಯವರ ಸಹಚರರಲ್ಲಿ ಒಬ್ಬರಾದ ಕೌಶಿಕ್ ಪರ್ಮಾರ್ ಅವರು, ಮೇವಾನಿ ಅವರು ಸ್ಥಾಪಿಸಿದ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ ಸಂಘಟನೆಯ ಬ್ಯಾನರ್ ಅಡಿಯಲ್ಲಿ ರ್‍ಯಾಲಿ ನಡೆಸುವುದಾಗಿ ಮೆಹ್ಸಾನಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ ಅವರಿಂದ ಅನುಮತಿ ಕೋರಿದ್ದರು. ಆರಂಭದಲ್ಲಿ ಅನುಮತಿ ನೀಡಲಾಯಿತು. ಬಳಿಕ ಅದನ್ನು ಪ್ರಾಧಿಕಾರ ಹಿಂಪಡೆದರೂ ಸಂಘಟಕರು ರ್‍ಯಾಲಿ ನಡೆಸಿದರು.

10 ಆರೋಪಿಗಳಿಗೆ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ತೀರ್ಪು ಪ್ರಕಟಿಸಿದ ನ್ಯಾಯಾಲಯ, “ಆರೋಪಿಗಳು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆದೇಶವನ್ನು ಸೂಕ್ತ ಉನ್ನತ ಅಧಿಕಾರಿಗಳ ಮುಂದೆ ಪ್ರಶ್ನಿಸಿ ನಂತರ ಸರಿಯಾದ ಅನುಮತಿ ಪಡೆದು ರ್‍ಯಾಲಿ ನಡೆಸಬೇಕಿತ್ತು” ಎಂದಿದೆ.

ಮೆಹ್ಸಾನಾ ಪೊಲೀಸರು ಮೆರವಣಿಗೆ ನಡೆಸಲು ಅನುಮತಿ ನೀಡದ ಕಾರಣ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 143ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 12 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿರಿ: ಜಿಗ್ನೇಶ್‌ ಜಾಮೀನು: ಅಸ್ಸಾಂ ಪೊಲೀಸರನ್ನು ಕುಟುಕಿದ ಕೆಳ ನ್ಯಾಯಾಲಯದ ನಡೆಗೆ ಹೈಕೋರ್ಟ್ ಅಸಮ್ಮತಿ

ರ್‍ಯಾಲಿಯಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಅಂದಿನ ನಾಯಕ, ಈಗ ಕಾಂಗ್ರೆಸ್‌ ಸೇರಿರುವ ಕನ್ಹಯ್ಯಾ ಕುಮಾರ್ ಭಾಗವಹಿಸಿದ್ದರು. ಪ್ರಕರಣದ ಆರೋಪಿಗಳಲ್ಲಿ ಇವರೂ ಒಬ್ಬರಾಗಿದ್ದಾರೆ.

ಆದರೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಆರೋಪಿಗಳ ವಿರುದ್ಧ ನ್ಯಾಯಾಲಯವು ವಿಚಾರಣೆ ನಡೆಸುವಾಗ ಕನ್ಹಯ್ಯ ಗೈರುಹಾಜರಾಗಿದ್ದರು. ಅವರು ನ್ಯಾಯಾಲಯಕ್ಕೆ ಹಾಜರಾದಾಗ ಅವರ ವಿರುದ್ಧ ಪ್ರತ್ಯೇಕ ವಿಚಾರಣೆ ನಡೆಸಲು ನ್ಯಾಯಾಲಯ ತೀರ್ಮಾನಿಸಿತು.

ಒಬ್ಬ ಆರೋಪಿ ಸಾವಿಗೀಡಾಗಿದ್ದಾರೆ. ಸಾವಿಗೀಡಾದ ವ್ಯಕ್ತಿ ಹಾಗೂ ಕನ್ಹಯ್ಯ ಕುಮಾರ್‌ ಅವರನ್ನು ಹೊರತುಪಡಿಸಿ ಕಳೆದ ವರ್ಷ ಎಪ್ರಿಲ್‌ನಲ್ಲಿ ಮೇವಾನಿ ಸೇರಿದಂತೆ 10 ಜನರ ವಿರುದ್ಧ ನ್ಯಾಯಾಲಯವು ವಿಚಾರಣೆಯನ್ನು ಪ್ರಾರಂಭಿಸಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...