ದೆಹಲಿಯ ಜಹಾಂಗೀರಪುರಿಯಲ್ಲಿ ಇತ್ತೀಚೆಗೆ ಸಂಭವಿಸಿದ ಕೋಮು ಘರ್ಷಣೆಗೂ ಮೊದಲು ನಡೆದ ಕಾನೂನುಬಾಹಿರ ಮೆರವಣಿಗೆಯನ್ನು ತಡೆಯದೆ ಇದ್ದಿದ್ದಕ್ಕಾಗಿ ಸ್ಥಳೀಯ ನ್ಯಾಯಾಲಯವು ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿದೆ. ಘಟನೆಯಲ್ಲಿನ ‘ಸಂಪೂರ್ಣ ವಿಫಲತೆ’ಯನ್ನು ಪೊಲೀಸ್ ಮುಖ್ಯಸ್ಥರು ತನಿಖೆ ನಡೆಸಬೇಕು ಎಂದಿರುವ ನ್ಯಾಯಾಲಯ ಘಟನೆಯಲ್ಲಿ ಒಳಗೊಂಡಿರುವ ಅಧಿಕಾರಿಗಳ ಹೊಣೆಗಾರಿಕೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದೆ.
ಕೋಮು ಘರ್ಷಣೆಯಲ್ಲಿ ಭಾಗಿಯಾದ ಎಂಟು ಜನರ ಜಾಮೀನನ್ನು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದೆ. ಆರೋಪಿಗಳು ಸ್ಥಳೀಯ ಕ್ರಿಮಿನಲ್‌ಗಳಾಗಿದ್ದು, ಅವರು ಬಿಡುಗಡೆಯಾದರೆ ಸಾಕ್ಷಿಗಳನ್ನು ಬೆದರಿಸಬಹುದು ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕಳೆದ ತಿಂಗಳು ರಾಮನವಮಿ ಮೆರವಣಿಗೆಯ ಸಂದರ್ಭ ವಾಯುವ್ಯ ದೆಹಲಿ ಪ್ರದೇಶದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಇಪ್ಪತ್ತು ಜನರನ್ನು ಬಂಧಿಸಲಾಗಿದೆ. ಗಲಭೆಯಲ್ಲಿ ಎಂಟು ಪೊಲೀಸರು ಮತ್ತು ನಾಗರಿಕರು ಗಾಯಗೊಂಡಿದ್ದಾರೆ. ಪೊಲೀಸರ ಅನುಮತಿಯಿಲ್ಲದೆ ಮೆರವಣಿಗೆ ನಡೆದಿದ್ದು ಮಾತ್ರವಲ್ಲದೆ, ಪೊಲೀಸರ ಸಮ್ಮುಖದಲ್ಲಿಯೇ ಅಲ್ಪಸಂಖ್ಯಾತ ಸಮುದಾಯದವರೊಂದಿಗೆ ವಾಗ್ವಾದ ನಡೆಸಲಾಗಿತ್ತು.
ಇದನ್ನೂ ಓದಿ: ಅಯೋಧ್ಯೆ: ಮಸೀದಿಗಳ ಮೇಲೆ ಆಕ್ಷೇಪಾರ್ಹ ಪೋಸ್ಟರ್ ಅಂಟಿಸಿ ಗಲಭೆಗೆ ಪ್ರಚೋದನೆ; 7 ದುಷ್ಕರ್ಮಿಗಳ ಬಂಧನ
ಅಕ್ರಮ ಮೆರವಣಿಗೆಯನ್ನು ನಿಲ್ಲಿಸಿ ಗುಂಪನ್ನು ಚದುರಿಸುವ ಬದಲು, ಪೊಲೀಸ್ ಅಧಿಕಾರಿಗಳು ದಾರಿಯಲ್ಲಿ ಅದರೊಂದಿಗೆ ಸಾಗುತ್ತಿರುವುದು ಕಂಡುಬಂದಿದೆ ಎಂದು ನ್ಯಾಯಾಲಯ ಹೇಳಿದೆ.
ದೆಹಲಿ ಗಲಭೆಗೂ ಮೊದಲು ಒಟ್ಟು ಮೂರು ಮೆರವಣಿಗೆ ನಡೆದಿದ್ದು, ಅದರಲ್ಲಿ ಕೊನೆಯ ಮೆರವಣೆಗೆಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಈ ಮೆರವಣಿಗೆಯನ್ನು ಬಿಜೆಪಿ ಬೆಂಬಲಿತ ವಿಹಿಂಪ ಮತ್ತು ಬಜರಂಗದಳ ಆಯೋಜಿಸಿತ್ತು.
“ಇನ್‌ಸ್ಪೆಕ್ಟರ್ ರಾಜೀವ್ ರಂಜನ್ ನೇತೃತ್ವದ ಜಹಾಂಗೀರ್‌ಪುರಿ ಪೊಲೀಸ್ ಠಾಣೆಯ ಸ್ಥಳೀಯ ಸಿಬ್ಬಂದಿ ಮತ್ತು ಇತರ ಅಧಿಕಾರಿಗಳು…ಆಪಾದಿತ ಅಕ್ರಮ ಮೆರವಣಿಗೆಯ ಜೊತೆಯಲ್ಲಿದ್ದರು ಎಂದು ಎಫ್‌ಐಆರ್‌ನಲ್ಲಿರುವ ವಿಷಯಗಳು ತೋರಿಸುತ್ತವೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಸಂಘರ್ಷ & ದೆಹಲಿ ಗಲಭೆಗಳ ಪ್ರಸಾರದ ಕುರಿತು ಟಿವಿ ಚಾನೆಲ್‌ಗಳಿಗೆ ‘ಸಲಹೆ’ ನೀಡಿದ ಒಕ್ಕೂಟ ಸರ್ಕಾರ!
“ಯಾವುದೇ ಅನುಮತಿಯಿಲ್ಲದೆ ನಡೆದ ಮೆರವಣಿಗೆಯನ್ನು ತಡೆಯುವಲ್ಲಿ ಸ್ಥಳೀಯ ಪೊಲೀಸರ ಸಂಪೂರ್ಣ ವೈಫಲ್ಯವನ್ನು ಇದು ಪ್ರಾಥಮಿಕವಾಗಿ ಪ್ರತಿಬಿಂಬಿಸುತ್ತದೆ” ಎಂದು ಅವರು ಹೇಳಿದ್ದಾರೆ.
“ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗದಂತೆ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಹೊಣೆಗಾರಿಕೆಯನ್ನು ಹೊರಿಸಬೇಕು” ಎಂದು ನ್ಯಾಯಾಧೀಶರು ಹೇಳಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಮುಖ್ಯಸ್ಥರಿಗೆ ಆದೇಶಿಸಿದ್ದಾರೆ.


