ಹರುಕಿ ಮುರಕಮಿ ಕಥಾಲೋಕಕ್ಕೆ ನನ್ನ ಪರಿಚಯವಾದದ್ದು ಕೆಲವು ವರ್ಷಗಳ ಹಿಂದೆ ನಾನು ಜಪಾನ್ ಪ್ರವಾಸ ಮಾಡಿದ ತರುವಾಯ. ಜಪಾನ್ ಪ್ರವಾಸಕ್ಕೂ ಮೊದಲು ಆ ದೇಶದ ಬಗ್ಗೆ ಸಾಕಷ್ಟು ಕುತೂಹಲಕಾರಿಯಾದ ಸಂಗತಿಗಳನ್ನು ಕೇಳಿದ್ದ ನನಗೆ, ಆ ಪ್ರವಾಸದ ಅನುಭವ ಊಹೆಗೂ ಮೀರಿದಷ್ಟು
ಅಚ್ಚರಿಯನ್ನುಂಟುಮಾಡಿತ್ತು. ಈಗಾಗಲೇ ಸಂಪೂರ್ಣವಾಗಿ ಕೈಗಾರಿಕೀಕರಣಗೊಂಡಿರುವ ಜಪಾನ್ ಸಮಾಜದ ಬಗ್ಗೆ ಪಾಶ್ಚಾತ್ಯ ದೇಶದ ಜನರಲ್ಲೂ ಸಾಕಷ್ಟು ಸಕಾರಣವಾದ ಕುತೂಹಲವಿದೆ. ಜಪಾನಿನ ನಗರಗಳ ಸಂರಚನೆ, ಅವರ ಪಾಪ್ಯುಲರ್ ಕಲ್ಚರ್, ಯಥೇಚ್ಛವಾದ ಇಲೆಕ್ಟ್ರಾನಿಕ್ ಉಪಕರಣಗಳ ಗೀಳು, ಮುಂತಾದವುಗಳ ಬಗ್ಗೆ. ಆರ್ಥಿಕವಾಗಿ ಆಧುನಿಕ ಬಂಡವಾಳಶಾಹಿ ವ್ಯವಸ್ಥೆಗೆ ಸಂಪೂರ್ಣವಾಗಿ ಶರಣಾಗತವಾದ ಏಷ್ಯಾದ ಮೊದಲ ದೇಶವಾಗಿರುವ ಜಪಾನ್, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ತನ್ನತನ ಉಳಿಸಿಕೊಂಡಿದೆಯೇ? ಮೇಲ್ನೋಟಕ್ಕೆ ಬಹಳ ಸೌಮ್ಯ ಸ್ವಭಾವದ, ವೈಯಕ್ತಿಕ ಭಾವನೆಗಳನ್ನು ಹೊರತೋರಿಸಿಕೊಳ್ಳದ ಅಲ್ಲಿನ ಜನರ ಅಂತರಂಗದ ಜಗತ್ತು ಹೇಗಿರಬಹುದು ಎಂದು ತಿಳಿಯಲು ಹುಡುಕಿಹೊರಟಾಗ ಮುಖಾಮುಖಿಯಾಗಿದ್ದು ಹರುಕಿ ಮುರಕಮಿ.
ಜಪಾನ್ ಪ್ರವಾಸದಿಂದ ಮರಳಿಬಂದ ಮೇಲೆ, ಆಧುನಿಕ ಜಪಾನಿನ ಇತಿಹಾಸದ ಬಗ್ಗೆ, ಜಪಾನಿನ ಸಾಮಾಜಿಕ ಸಂರಚನೆಯ ಬಗ್ಗೆ ಓದಲು ಶುರುಮಾಡಿದಾಗ ಮುರಕಮಿ ಕಥೆಗಳು ನನಗೆ ಎದುರಾದವು. ಆತನ ಕಥೆಯ
ಆವರಣ, ಪಾತ್ರಗಳ ಸ್ವರೂಪ, ಈ ಎಲ್ಲವುಗಳಿಂದ, ನನ್ನ ಜಪಾನಿನ ಭೇಟಿಯಲ್ಲಿ ನಾನು ಗಮನಿಸದ ವ್ಯಕ್ತಿಗಳು, ಜಾಗಗಳು, ತಮ್ಮ ಅಂತರಂಗದ ವಿವರಗಳೊಂದಿಗೆ ನನ್ನ ಮುಂದೆ ಅನಾವರಣಗೊಂಡು, ತಮ್ಮ ಅಂತರಂಗದಲ್ಲಿ ಅಡಗಿರುವ ಕಥೆಗಳನ್ನು ಹೇಳತೊಡಗಿದವು. ಟೋಕಿಯೋ ನಗರದ ಮೆಟ್ರೋ ರೈಲುಗಳಲ್ಲಿ, ಜನನಿಬಿಡ ಜಾಗಗಳಲ್ಲಿ, ಸಣ್ಣಸಣ್ಣ ಮೂಲೆಗಳಲ್ಲಿ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ, ವಿಡಿಯೋ ಗೇಮ್‌ಗಳಲ್ಲಿ ಕಳೆದುಹೋದ, ಕಾಫಿ ಶಾಪ್‌ಗಳಲ್ಲಿ ಒಬ್ಬಂಟಿ ದ್ವೀಪಗಳಾಗಿ ತಮ್ಮದೇ ಲೋಕದಲ್ಲಿ ಕಾಫಿ ಹೀರುತ್ತಾ ಕೂತ, ಸಂಜೆ ಆಫೀಸ್ ಕೆಲಸದ ನಂತರ ಟೋಕಿಯೋ ನಗರದ ಪ್ರತಿಷ್ಠಿತ ಏರಿಯಾಗಳಲ್ಲಿ ಮನರಂಜನೆಗಾಗಿ ಹುಡುಕುತ್ತಾ ಓಡಾಡುತ್ತಿರುವ ಜನರ ವೈಯಕ್ತಿಕ ಬದುಕಿನ ವಿವರಗಳೇನು? ಕುರಾಸೋವಾ ಚಲನಚಿತ್ರಗಳಲ್ಲಿ ಕಾಣಸಿಗುವ, ಎರಡನೇ ವಿಶ್ವಯುದ್ಧದ ಮುಂಚಿನ ಪಾರಂಪರಿಕ ಜಪಾನ್ ಇಷ್ಟು ತೀವ್ರತರವಾದ ಆಧುನಿಕತೆಯ ಕಡೆ ಹೊರಳಲು ರಾಜಕೀಯ, ಸಾಮಾಜಿಕ ಕಾರಣಗಳೇನು ಎನ್ನುವುದಕ್ಕೆ ಉತ್ತರ ನನಗೆ ಮುರಕಮಿಯ ವಿಲಕ್ಷಣ ಕಥಾ ಜಗತ್ತಿನಲ್ಲಿ ದೊರೆಯಲು ಶುರುವಾಯಿತು.

ಹಾಗಿದ್ದರೆ ಮುರಕಮಿ ಕಥಾಲೋಕದ ಸ್ವರೂಪ ಎಂತಹದ್ದು? ಆತನ ಕಥೆಗಳು ಮತ್ತು ಪಾತ್ರಗಳು, ನಾನು ಮೇಲೆ ಹೇಳಿದ ಹಾಗೆ ನೇರಾನೇರ ಸಾಮಾಜಿಕ ರಾಜಕೀಯ ಸನ್ನಿವೇಶಗಳ ಬಗ್ಗೆ ಮಾತನಾಡುತ್ತವೆಯೇ ಎಂದರೆ, ಉತ್ತರ ಖಂಡಿತ ಇಲ್ಲ. ಆತನದು ’ಆಧುನಿಕ ಮಾಂತ್ರಿಕ ವಾಸ್ತವ’ದ ಕಥಾ ನಿರೂಪಣೆಯ ಶೈಲಿ. ಆತನ ಕಥೆಗಳಲ್ಲಿ
ಆನೆಯ ಕಣ್ಮರೆ ಮಾಂತ್ರಿಕವಾಗಿ ಆಗುತ್ತೆ, ಕಥಾನಾಯಕನಿಗೆ ಬಣ್ಣಬಣ್ಣದ ಹಾವುಗಳು ಮುಂಬರುವ ಸನ್ನಿವೇಶದ ಸುಳಿವು ನೀಡುತ್ತವೆ, ಮಂಗಗಳು ಸ್ವತಃ ತಪ್ಪೊಪ್ಪಿಗೆ ನೀಡುತ್ತವೆ, ಮಾಯಾ ಕನ್ನಡಿ ಬೇರೊಂದು ಲೋಕಕ್ಕೆ ಬಾಗಿಲಾಗುತ್ತದೆ. ಹೀಗೆ ಹತ್ತುಹಲವು ಪ್ರತಿಮಾ ಸ್ವರೂಪದ ಕಥಾಲೋಕ ನಮಗಾಗಿ ಕಾದಿರುತ್ತದೆ. ಅತ್ಯಂತ ಸಾಮಾನ್ಯ ಮನುಷ್ಯರ ಬದುಕಿನ ಯಾವುದೋ ಒಂದು ವಿಶಿಷ್ಟ ಘಟ್ಟದ ವಿಲಕ್ಷಣ ಕಥೆಯೊಂದನ್ನು ಅತ್ಯಂತ ಸರಳ ಭಾಷೆಯಲ್ಲಿ ತಮ್ಮ ಒಡಲೊಳಗೆ ಅಡಗಿಸಿಟ್ಟುಕೊಂಡಿರುತ್ತದೆ. ಆದರೆ ಆ ಕಥೆ ಹೇಳುವ ಹಾದಿಯಲ್ಲಿ ಆತ ಕಟ್ಟಿಕೊಡುವ ಸಮಾಜದ ವಿವರಗಳು ಆ ಕಥೆಯ ಕಾಲಘಟ್ಟದ ಸಾಮಾಜಿಕ ರಾಜಕೀಯ ಸನ್ನಿವೇಶಗಳ ಅನಾವರಣ ಮಾಡುತ್ತವೆ. ಉದಾಹರಣೆಗೆ ಈ ಕಥಾಸಂಕಲನದ ’ಹುಡುಕಾಟ’ ಕಥೆಯಲ್ಲಿ ಬರುವ ಷೇರು ಮಾರಾಟಗಾರನ ಬದುಕಿನ ಸನ್ನಿವೇಶ ಹೇಗೆ ಅಧುನಿಕ ಬಂಡವಾಳಶಾಹಿ ಚೌಕಟ್ಟಿನಲ್ಲಿ ನಲುಗಿದೆ ಎನ್ನುವುದು, ’ಆನೆಯೊಂದರ ಕಣ್ಮರೆ’ ಕಥೆಯಲ್ಲಿ ಬರುವ ರಾಜಕೀಯ ಸನ್ನಿವೇಶಗಳು, ’ನ್ಯೂಯಾರ್ಕ್ ಗಣಿ ದುರಂತ’ ಕಥೆಯ ವ್ಯಕ್ತಿಯೊಬ್ಬನ ಅಸ್ತಿತ್ವದ ಗೊಂದಲದ ಮೂಲಕ ಸಮಾಜದ ನಿರ್ಲಕ್ಷಿತರ ಮೇಲಿನ ಒಳನೋಟಗಳು ಹೀಗೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನನ್ನ ಗ್ರಹಿಕೆಯ ಪ್ರಕಾರ, ಮುರಕಮಿಯ ಕಥಾಜಗತ್ತು ಜಪಾನಿನ ಹಿನ್ನೆಲೆಯಲ್ಲಿ ಎರಡು ಪ್ರಮುಖ ಕಾಲಘಟ್ಟದ ವಿವರಗಳನ್ನು ಕಟ್ಟಿಕೊಡುತ್ತವೆ. ಮೊದಲನೆಯದಾಗಿ ಎರಡನೆಯ ಮಹಾಯುದ್ಧದ ಸೋಲಿನ ನಂತರ ಜಪಾನ್ ಅಮೆರಿಕಾಗೆ ಶರಣಾಗಿ, ಆರ್ಥಿಕವಾಗಿ ಮಿತ್ರರಾಷ್ಟ್ರವಾಗಿ ಮತ್ತು ಅತ್ಯಂತ ಕ್ಷಿಪ್ರ ವೇಗದಲ್ಲಿ ಬಂಡವಾಳಶಾಹಿ ಮಾರುಕಟ್ಟೆಯಾಗಿ ಬದಲಾಗಿ ವಿಶ್ವದ ಮುಂಚೂಣಿಯ ಆರ್ಥಿಕ ಕೇಂದ್ರವಾಗಿ ಮಾರ್ಪಾಡಾಗುತ್ತದೆ. ಈ ಬದಲಾವಣೆಯ ಕಾಲಘಟ್ಟದಲ್ಲಿ ಜಪಾನಿನಾದ್ಯಂತ ಎಡ ಮತ್ತು ಬಲಪಂಥೀಯ ಗುಂಪುಗಳ ನಡುವೆ ಸಂಘರ್ಷ ಏರ್ಪಟ್ಟು ತದನಂತರ ಎಡರಂಗಗಳು ಸಂಪೂರ್ಣವಾಗಿ ನೇಪಥ್ಯಕ್ಕೆ ಸರಿಯುತ್ತವೆ. ಮುರಕಮಿಯ ಕಥಾ ನಾಯಕರು ಈ ಸಂಘರ್ಷದ ನಂತರ ಸೃಷ್ಟಿಯಾದ ನಿರ್ವಾತದಲ್ಲಿ ಹುಟ್ಟಿಬರುತ್ತಾರೆ. ಈ ಪಾತ್ರಗಳು ಸಂಪೂರ್ಣವಾಗಿ ಭ್ರಮನಿರಸನರಾಗಿದ್ದಾರೆ, ಹಾಗಾಗಿ ಅವರ ಮುಖ್ಯ ಗುಣಲಕ್ಷಣ ನಿರ್ಲಿಪ್ತತೆ, ಎಲ್ಲ ರೀತಿಯ ರಾಜಕೀಯದಿಂದ ಅಂತರ ಕಾಯ್ದುಕೊಂಡವರು. ಎರಡನೆಯದಾಗಿ, ಸಂಪೂರ್ಣವಾಗಿ ಬಂಡವಾಳಶಾಹಿ ಅರ್ಥವ್ಯವಸ್ಥೆಯಾಗಿ ಬದಲಾದ ಜಪಾನಿನ ಯುವಜನತೆ ತಮ್ಮದೇ ಅಸ್ತಿತ್ವದ ಹುಡುಕಾಟದಲ್ಲಿದ್ದಾರೆ. ಹಳೆಯ ಜೀವನಕ್ರಮದ ಬದಲಾಗಿ ಹುಟ್ಟಿಕೊಂಡ ಹೊಸ ಜಗತ್ತಿನಲ್ಲಿ ತಮ್ಮ ಅಸ್ಮಿತೆ ಅರಸುತ್ತಿದ್ದಾರೆ. ಅಮೆರಿಕದ ಜತೆಗಿನ ಒಡನಾಟದ ಬಳುವಳಿಗಾದ ಪಾಪ್ ಸಂಗೀತ, ಸಾಹಿತ್ಯ, ಉಡುಗೆತೊಡುಗೆಗಳ ಬದಲಾವಣೆ, ತೀವ್ರವಾದ ವೈಯಕ್ತಿಕೀಕರಣ, ಮುರಕಮಿ ಕಟ್ಟಿಕೊಡುವ ಪಾತ್ರಗಳ ಅತಿ ಮುಖ್ಯ ಲಕ್ಷಣಗಳು.

ಜಪಾನ್ ಆರ್ಥಿಕ ಬಂಡವಾಳಶಾಹಿಯಾಗಿ ಶರವೇಗದಲ್ಲಿ ಮುಂದುವರಿದಂತೆಲ್ಲ, ನಗರೀಕರಣವೂ ತೀವ್ರವಾಗಿ, ನಗರೀಕರಣದ ಬಳುವಳಿಗಳಾದ urban alienation, ರಾಜಕಾರಣದ ಕಡೆಗಿನ ನಿರಾಸಕ್ತಿ, ಧಾರ್ಮಿಕ ಅಧ್ಯಾತ್ಮದ ಅನುಪಸ್ಥಿತಿ ಉಂಟಾಗಿ ತನ್ನ ಸಹಜೀವಿಗಳ ಜತೆ ಹೊಸ ಸಂಬಂಧಗಳ ಹುಡುಕಾಟದಲ್ಲಿ ನಿರತವಾಗಿರುವ ಪಾತ್ರಗಳು ಇಲ್ಲಿನ ಕತೆಗಳಲ್ಲಿ ಯಥೇಚ್ಛವಾಗಿ ಕಾಣಸಿಗುತ್ತವೆ. ಕೈಗಾರಿಕೀರಣಗೊಂಡ ನಂತರದ ಸಮಾಜವೊಂದರ ಎಲ್ಲ ಗುಣಲಕ್ಷಣಗಳು, ಸಾಮಾಜಿಕ ಬಿಕ್ಕಟ್ಟುಗಳು, ಮುರಕಮಿ ಕತೆಗಳ ಜೀವಾಳ.
ಹಾಗಿದ್ದರೆ ಇಷ್ಟು ತೀವ್ರತರವಾಗಿ ಆಧುನೀಕರಣಗೊಂಡ, ಸಮಾಜವೊಂದರ ಕಥೆಗಳು ಕನ್ನಡಕ್ಕೆ ಏಕೆ ಅನುವಾದವಾಗಬೇಕು? ನಾನು ಮುರಕಮಿಯ ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಲು ನಿರ್ಧರಿಸಲು ಮುಖ್ಯ ಕಾರಣ, ಆತ ನನ್ನ ತಲೆಮಾರಿನ ತಲ್ಲಣಗಳ ಕಥೆಗಳನ್ನು ಹೇಳುತ್ತಿದ್ದಾನೆ ಎನ್ನಿಸಿದ್ದರಿಂದ. ಅಂದರೆ, ಭಾರತದ ಸಂದರ್ಭದಲ್ಲಿ, 1990ರ ನಂತರದಲ್ಲಿ ಜರುಗಿದ ಬಾಬ್ರಿ ಮಸೀದಿ ಕೆಡವಿದ ಘಟನೆ, ತದನಂತರದ ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿ ಆರ್ಥಿಕ ಉದಾರೀಕರಣಕ್ಕೆ ತೆರೆದುಕೊಂಡದ್ದು, ನಂತರದಲ್ಲಿ ಜರುಗಿದ ವಿದ್ಯಮಾನಗಳು ಭಾರತ ಒಂದು ದೊಡ್ಡ ತಿರುವು ಕಾಣಲು ಕಾರಣವಾಯಿತು. ಆರ್ಥಿಕ ಉದಾರೀಕರಣ ನೀತಿಯಿಂದ ಸೃಷ್ಟಿಯಾದ ಮೇಲ್ಮಧ್ಯಮ ವರ್ಗ, ನೆಲಮಟ್ಟದ ರಾಜಕೀಯದಿಂದ ಸಂಪೂರ್ಣ ವಿಮುಖವಾಗಿ, ತಮ್ಮದೇ ವೈಯಕ್ತಿಕ ಆಸಕ್ತಿಗಳಲ್ಲಿ ಕಳೆದುಹೋದವು. ಇವಕ್ಕೆ ಉದಾಹರಣೆಯಾಗಿ ಆ ಕಾಲದ ಪಾಪ್ಯುಲರ್ ಸಿನಿಮಾಗಳು, ಸಂಗೀತದ ಐಕಾನ್‌ಗಳು, ಕ್ರಿಕೆಟ್ ಐಕಾನ್‌ಗಳನ್ನ ನೋಡಿದರೆ ಸ್ಪಷ್ಟವಾಗುತ್ತದೆ. ಈ ಎಲ್ಲಾ ವಿದ್ಯಮಾನಗಳು 70-80ರ ದಶಕದ ಜಪಾನಿನಲ್ಲಿ ಉಂಟಾದ ಪಲ್ಲಟಗಳಿಗೆ ಒಂದು ಮಟ್ಟದಲ್ಲಿ ಸಮಾನಾಂತರವಾಗಿಯೂ, ಪ್ರತಿರೋಧಗಳನ್ನು ಮಟ್ಟಹಾಕುತ್ತಿರುವ ಇಂದಿನ ನಮ್ಮ ರಾಜಕೀಯಕ್ಕೂ, ಅಂದಿನ ಜಪಾನಿನ ರಾಜಕೀಯಕ್ಕೂ ಒಂದು ಮಟ್ಟದ ಹೋಲಿಕೆ ನನ್ನ ಗ್ರಹಿಕೆಗಂತೂ ಕಾಣಸಿಕ್ಕಿದೆ.

2000ದ ನಂತರದ ನಮ್ಮ ದೇಶದಲ್ಲಿನ ಬದಲಾವಣೆಗಳಿಂದ ದೈನಂದಿನ ರಾಜಕೀಯದಲ್ಲಿ ನಂಬಿಕೆ ಕಳೆದುಕೊಂಡ ತಲೆಮಾರೊಂದು, ತನ್ನದೇ ಅಸ್ತಿತ್ವದ ಹುಡುಕಾಟದಲ್ಲಿದ್ದಾಗ ಅದಕ್ಕೆ ಪೂರಕವಾಗಿ ಸೃಷ್ಟಿಸಲಾದ ಕೆಲವೊಂದು ಐಡೆಂಟಿಟಿ ರಾಜಕೀಯಕ್ಕೆ, ಸುಳ್ಳು ಸುದ್ದಿಗಳಿಗೆ ಬಲಿಯಾಗಿ ರಾಜಕೀಯ ಸ್ವರೂಪವೇ ಬದಲಾಗಿಹೋಗಿದೆ. ಆದರೆ ಈ ಎಲ್ಲಾ ಪಲ್ಲಟಗಳಿಂದ ನಗರ-ಪಟ್ಟಣಗಳಲ್ಲಿ ಸೃಷ್ಟಿಯಾದ ತಲೆಮಾರಿಗೆ ಈ ಬದಲಾವಣೆಯ ಪ್ರಕ್ರಿಯೆಯಲ್ಲಿ ತಮ್ಮ ಭಾಷೆಯ ಮೇಲೆ, ಉಡುಗೆ ತೊಡುಗೆ, ಆಹಾರ ಕ್ರಮಗಳ ಮೇಲೆ ಉಂಟಾದ ಪಲ್ಲಟಗಳು, ಅವರ ಚಿಂತನಕ್ರಮದ ಮೇಲೆ, ಅಂತರಂಗದ ಭಾವಪ್ರಪಂಚದ ಮೇಲೆ ಉಂಟುಮಾಡಿದ ಪರಿಣಾಮಗಳನ್ನು ಕಥೆಗಳಲ್ಲಿ ಹಿಡಿದಿಡುವ ಪ್ರಯತ್ನಗಳು ನನ್ನ ಸೀಮಿತ ಓದಿನ ಮಟ್ಟಿಗಂತೂ ಕನ್ನಡ ಕಥಾಲೋಕದಲ್ಲಿ ಕಾಣಸಿಕ್ಕಿಲ್ಲ. ಅಸಂಖ್ಯಾತ ಯುವಕರು ನಗರಗಳಿಗೆ ಸೇರಿ ತಮ್ಮತಮ್ಮ ಖಾಸಗಿ ಕೆಲಸಗಳಲ್ಲಿ ತಮ್ಮ ಜೀವನ ಕಂಡುಕೊಂಡು, ಅವರ ಬದುಕಿನಲ್ಲಾದ ಸಾಂಸ್ಕೃತಿಕ, ಸಾಮಾಜಿಕ ಪಲ್ಲಟಗಳಿಗೆ ಹೇಗೆ ಹೊಂದುಕೊಳ್ಳುತ್ತಿದ್ದಾರೆ ಎಂದು ಹುಡುಕಾಡುವ ಕಥೆಗಳು ನಮ್ಮ ಇಂದಿನ ತುರ್ತು. ಯಾಕೆಂದರೆ ಇದೇ ತಲೆಮಾರು ಇಂದು ತನ್ನ ಹಿಂದಿನ ತಲೆಮಾರು ಸವೆಸಿದ ಹಾದಿಯ ಅರಿವಿಲ್ಲದೆ, ತನ್ನದೇ ಅಸ್ಮಿತೆಯ ಹುಡುಕಾಟದಲ್ಲಿ ತೀವ್ರ ಬಲಪಂಥೀಯ ರಾಜಕೀಯದ ಗಾಳಕ್ಕೆ ಸಿಲುಕಿದೆ.
ಈ ಕಥಾಸಂಕಲನದ ಹೆಚ್ಚಿನ ಪಾತ್ರಗಳು ಯುವಕರು ಮತ್ತು ನಡು ವಯಸ್ಕರು. ಮಾರ್ಕೆಟಿಂಗ್, ಬ್ಯಾಂಕಿಂಗ್ ಕ್ಷೇತ್ರಗಳಂತಹ ಹಲವು ಖಾಸಗಿ ವಲಯದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರು. ಈ ಪಾತ್ರಗಳು ನೇರಾನೇರ ತಮ್ಮ ಅಸ್ತಿತ್ವ ಪ್ರತಿನಿಧಿಸುವ ಸಾಮಾಜಿಕ ರಾಜಕೀಯ ಸನ್ನಿವೇಶಕ್ಕೆ ಎದುರಾಗುವುದಿಲ್ಲ, ಬದಲಾಗಿ ಓದುಗನಿಗೆ ಈ ಪಾತ್ರಗಳು ಸೃಷ್ಟಿಯಾದ ಪರಿಸರದ ಬೇರೆಬೇರೆ ಆಯಾಮಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಅಂದರೆ ಮುರಕಮಿಯ ಕಥಾಜಗತ್ತು ನೇರಾನೇರ ರಾಜಕೀಯ ಸಾಮಾಜಿಕ ಸಂಘರ್ಷಗಳಲ್ಲಿ ತೊಡಗುವುದಿಲ್ಲ. ಆತನ ಪಾತ್ರಗಳು ಮೇಲ್ನೋಟಕ್ಕೆ ರಾಜಕೀಯ ನಿರ್ಲಿಪ್ತತೆ ತೋರುತ್ತಾ, ತಮ್ಮದೇ ವೈಯಕ್ತಿಕ ಭಾವನಾತ್ಮಕ ಜಂಜಾಟಗಳಲ್ಲಿ ಸಿಲುಕಿರುವ ಹಾಗೆ ಕಾಣುತ್ತವೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಮನುಷ್ಯ ಏಕಾಂಗಿಯಾದ ಹಾಗೆ ವ್ಯಕ್ತಿ ತನ್ನ ಅಸ್ತಿತ್ವದ ಉಳಿವಿಗಾಗಿ ಎಷ್ಟು ಗುದ್ದಾಡಬೇಕಾಗುತ್ತದೆ ಎನ್ನುವ ಆತನ ಪಾತ್ರಗಳ ಪರಿಸ್ಥಿತಿ ಓದುಗನಿಗೆ ಅರ್ಥ ಮಾಡಿಸುತ್ತದೆ. ಉದಾ: ಹುಡುಕಾಟ ಕಥೆಯ ಕಳೆದುಹೋದ ಷೇರು ಮಾರಾಟಗಾರ, ಆನೆಯ ಕಣ್ಮರೆ ಕಥೆಯ ನಾಯಕ, ನಿನ್ನೆ ಕಥೆಯ ಕಿಟಾರು, ಹೀಗೆ.
ಇವತ್ತು ನಾವೆಲ್ಲಾ ಕಾಣುತ್ತಿರುವ ಮಾರುಕಟ್ಟೆ ಆಧಾರಿತ ಕೊಳ್ಳುಬಾಕ ಸಂಸ್ಕೃತಿಯ, ಕಲ್ಪಿಸಿಕೊಟ್ಟಿರುವ ರಾಷ್ಟ್ರೀಯತೆಯ ದೂರಗಾಮಿ ಪರಿಣಾಮಗಳೇನು? ಪ್ರತಿರೋಧ ರಾಜಕೀಯ ಚಿಂತನೆಗಳಿಲ್ಲದ ಈ ಶೂನ್ಯದಲ್ಲಿ ಸಮಾಜ ಎಲ್ಲಿಗೆ ಹೋಗಿ ಮುಟ್ಟಬಹುದು? ಎನ್ನುವಂತಹ ವಿಷಯಗಳ ಬಗ್ಗೆ ಮುರಕಮಿ ಕಥೆಗಳು ಓದುಗರನ್ನು ಪ್ರೇರೇಪಿಸುತ್ತವೆ ಎನ್ನುವುದು ನನ್ನ ನಂಬಿಕೆ.
ವ್ಯಾಪಕವಾಗಿ ಯಂತ್ರ ನಾಗರಿಕತೆಯತ್ತ, ಬಂಡವಾಳಶಾಹಿ ಅರ್ಥ ವ್ಯವಸ್ಥೆಯಾಗುವತ್ತ ಸಾಗುತ್ತಿರುವ ನಮ್ಮಂತಹ ದೇಶಗಳಲ್ಲಿ identity crisisನಿಂದ ಸಂಕಷ್ಟಕ್ಕೀಡಾದ ಯುವಜನತೆ, ಸರಿಯಾದ ರಾಜಕೀಯ ಶಿಕ್ಷಣ ಸಿಗದೆ, ತಮಗೆ ಸಾಮಾಜಿಕ ಮಾಧ್ಯಮಗಳಲ್ಲಿ ದೊರೆಯುತ್ತಿರುವ ಸುಳ್ಳು ಸುದ್ದಿಯಿಂದಲೇ ವಾಸ್ತವದ ಚಿತ್ರಣ ಕಟ್ಟಿಕೊಂಡು, ಹಿಂಸಾತ್ಮಕ ಘಟನೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆನ್ನುವುದನ್ನ ನಾವೇ ಕಾಣಬಹುದು. ಇವತ್ತಿನ ಸಾಹಿತ್ಯ ಏನಾದರೂ ಒಂದು ಸಂಗತಿಯ ಮೇಲೆ ಧ್ಯಾನಸ್ಥ ಸ್ಥಿತಿಯಲ್ಲಿ ತೊಡಗಿಸಿಕೊಳ್ಳಬೇಕಿದ್ದರೆ ಅದು ಇವತ್ತಿನ ಸಮಾಜದ ರಚನೆಯ ಸ್ವರೂಪಗಳನ್ನು ತನ್ನ ಕಥನಗಳಲ್ಲಿ ಹಿಡಿದಿಡಬೇಕು ಮತ್ತು ವರ್ತಮಾನದ ಜತೆ ಕೊಂಡಿ ಏರ್ಪಡಿಸಿಕೊಳ್ಳಬೇಕು. ಅಂದರೆ ಅದು ಈ ಸಂಗತಿಗಳ ಜತೆಗಿನ ಮುಖಾಮುಖಿಯಿಂದ ಮಾತ್ರ ಸಾಧ್ಯ ಎನ್ನುವುದು ನನ್ನ ನಂಬಿಕೆ.
ಮುರಕಮಿಯ ಕಥಾನಾಯಕರು ’ಏಕಾಂಗಿ’. ಅವರಿಗೆ ಒಂದು ’ಪ್ರೊಫೆಷನಲ್ ಜಾಬ್’ ಇದ್ದರೂ ಅವರ ಸಾಮಾಜಿಕ ಬದುಕು ಇಲ್ಲವೇ ಇಲ್ಲ ಅನ್ನಿಸುವಷ್ಟು ಕಡಿಮೆ. ಅವರ ಒಡನಾಟ ತಮ್ಮತಮ್ಮ ಸಣ್ಣ ಕುಟುಂಬಗಳೊಂದಿಗೆ ಮಾತ್ರ. ಈ ‘micronisation’ ಅಥವಾ ವಿಘಟನೆ ಜಗತ್ತಿನಾದ್ಯಂತ ನಡೆಯುತ್ತಿರುವ ಪ್ರಕ್ರಿಯೆ. ಈ ಕಥೆಗಳಲ್ಲಿ ಬರುವ ಪಾತ್ರಗಳು ಯಾವುವೂ ’ಅಸಾಮಾನ್ಯ’ ಅಲ್ಲ. ನಮ್ಮನಿಮ್ಮ ಹಾಗೆ ಸರ್ವೇ ಸಾಮಾನ್ಯರು. ಆದರೆ ತಮ್ಮೆಲ್ಲ ರಾಜಕೀಯ ನಿರ್ಲಿಪ್ತತೆಯ ಹೊರತಾಗಿಯೂ ಅವರಿಗೆ ತಮ್ಮದೇ ಆದ ಸರಿ-ತಪ್ಪುಗಳ ಅರಿವಿದೆ, ತನ್ನ ಸುತ್ತಲಿನ ಸನ್ನಿವೇಶಕ್ಕೆ ತನ್ನದೇ ರೀತಿಯಲ್ಲಿ ಸ್ಪಂದಿಸುತ್ತಾರೆ ಮತ್ತು ಅವು ತನ್ನದೇ ಆದ ಹೋರಾಟದ ಹಾದಿಯ ಹುಡುಕಾಟದಲ್ಲಿರುವುದು ನಾವು ಈ ಪಾತ್ರಗಳ ರಚನೆಯಲ್ಲಿ ಕಾಣಬಹುದು. ಹಾಗೆಯೇ ವರ್ತಮಾನದ ನಮ್ಮ ಮುಂದಿರುವ ಸಮಸ್ಯೆಗಳನ್ನು ಎದುರಿಸಲು, ಆ ಪಾತ್ರಗಳು ಇತಿಹಾಸದ ಅಥವಾ
ಪುರಾಣದ ಯಾವುದೋ ಕಲ್ಪಿತ ಜಗತ್ತನ್ನು ಹಂಬಲಿಸುತ್ತಾ ಹಿಮ್ಮುಖ ಚಲನೆ ಮಾಡುವುದಿಲ್ಲ. ಬದಲಿಗೆ ನಮ್ಮ ಕಣ್ಣ ಮುಂದಿರುವ ವಾಸ್ತವವನ್ನು ಹಸನಾಗಿಸುವ ಕಡೆಗಷ್ಟೇ ಅವುಗಳ ಒಲವು.
ನಾನು ಈ ಮೇಲಿನ ಸಾಲುಗಳಲ್ಲಿ ಮುರಕಮಿಯ ಈ ಕಥಾ ಸಂಕಲನದಲ್ಲಿರುವ ಕಥೆಗಳ ಬಗ್ಗೆಯಷ್ಟೇ ಅಲ್ಲದೆ ಒಟ್ಟು ಆತನ ಕಥಾ ಜಗತ್ತಿನ ಬಗೆಗೆ ಗ್ರಹಿಸಿ ಬರೆದಿದ್ದೇನೆ. ಹಾಗಾಗಿ ನಾನು ಮೇಲೆ ಹೇಳಿರುವ ಸಾಲುಗಳಿಗೆ ಪೂರಕವಾದ ಬಹುತೇಕ ಸಂಗತಿಗಳು ಕಾಣಸಿಕ್ಕರೂ ಕೆಲವು ಸಂಗತಿಗಳು ಸಿಗದೇ ಹೋಗಬಹುದು. ಇನ್ನೂ ಹೊಸದೇನೋ ಹೊಳೆಯಬಹುದು ಕೂಡ. ಈ ಕಥೆಗಳನ್ನು ಓದಿದ ಓದುಗರು ಮುರಕಮಿಯ ಕಥೆಗಳು ಕಾದಂಬರಿಗಳನ್ನು ಓದಲಿ ಎಂಬುದು ಈ ಕಥಾಸಂಕಲನದ ಮುಖ್ಯ ಆಶಯಗಳಲ್ಲೊಂದು.

ಮಂಜುನಾಥ ಚಾರ್ವಾಕ
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಮಂಜುನಾಥ ಫೋಟೋಗ್ರಾಫರ್ ಕೂಡ. ಸಾಹಿತ್ಯ, ಸಿನಿಮಾ ಸಮಾಜಕ್ಕೆ ಕನ್ನಡಿಯಾಗಬೇಕು ಎಂದು ನಂಬಿದ್ದು ಅಂತಹ ಸಾಹಿತ್ಯದ ಕನ್ನಡ ಅನುವಾದಕ್ಕೆ ತೊಡಗಿಸಿಕೊಂಡಿದ್ದಾರೆ. ಜಪಾನಿ ಸಾಹಿತಿ ಹರುಕಿ ಮುರಕಮಿಯ ’ಕಿನೊ ಮತ್ತು ಇತರ ಕತೆಗಳು’ ಅವರ ಅನುವಾದದ ಚೊಚ್ಚಲ ಕಥಾಸಂಕಲನ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ’ಕಲ್ಲು ಹೂವಿನ ನೆರಳು’: ತಾಜಾ ನಿರೂಪಣೆಯ ಮತ್ತು ಸಂವೇದನೆಯುಳ್ಳ ಗ್ರಹಿಕೆಯ ಕಥೆಗಳು


