“ಭಾಷಾ ಪಠ್ಯದಲ್ಲಿ ಸಾಮಾಜಿಕ ನ್ಯಾಯ ಹಾಗೂ ಲಿಂಗ ಸಮಾನತೆಯ ವಿಷಯಗಳನ್ನು ತುರುಕಬಾರದು” ಎಂಬ ಅಭಿಪ್ರಾಯವನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ತಾಳಿರುವುದು ಪರಿಷ್ಕೃತ ಪಠ್ಯ ಪುಸ್ತಕದ ಟಿಪ್ಪಣಿಗಳಿಂದ ತಿಳಿದುಬಂದಿದೆ.
ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ರಚಿತವಾದ ಪಠ್ಯಪುಸ್ತಕಗಳ ಪರಿಶೀಲನೆಯನ್ನು ಬಲಪಂಥೀಯ ವಿಚಾರಗಳ ಪ್ರತಿಪಾದಕ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಗೆ ವಹಿಸಲಾಗಿತ್ತು. ಈಗ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಪಠ್ಯದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
2022-23ನೇ ಸಾಲಿನ ಹತ್ತನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಭಾಷಣ, ಬಲಪಂಥೀಯ ಲೇಖಕ ಶತಾವಧಾನಿ ಗಣೇಶ್ ಲೇಖನ, ಬನ್ನಂಜೆ ಗೋವಿಂದಚಾರ್ಯರ ಬರಹಗಳನ್ನು ಸೇರಿಸಲಾಗಿದೆ. ಪಿ.ಲಂಕೇಶ್, ಸಾ.ರಾ.ಅಬುಬೂಕರ್, ಡಾ.ಜಿ.ರಾಮಕೃಷ್ಣ ಅವರ ಬರಹಗಳನ್ನು ಕೈಬಿಡಲಾಗಿದೆ. ಅದರಲ್ಲೂ ‘ಭಗತ್‌ಸಿಂಗ್’ ಕುರಿತ ಪಠ್ಯವನ್ನು ಕೈಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ದಕ್ಷಿಣ ಕನ್ನಡದ ಸರ್ಕಾರಿ ಶಾಲೆಯಲ್ಲಿ ‘ಗಣಹೋಮ’: ಶಿಕ್ಷಣ ಇಲಾಖೆಯ ನಿರ್ದೇಶನ ಉಲ್ಲಂಘನೆ?
ಭಗತ್‌ಸಿಂಗ್ ಪಠ್ಯ ಕೈಬಿಟ್ಟಿಲ್ಲ ಎಂದು ಸರ್ಕಾರ ಹೇಳುತ್ತಿದೆಯಾದರೂ ಈಗ ಲಭ್ಯವಾಗಿರುವ ಪರಿಷ್ಕೃತ ಪಠ್ಯದ ಪಿಡಿಎಫ್‌ನಲ್ಲಿ ಭಗತ್‌ಸಿಂಗ್ ಪಾಠವನ್ನು ತೆಗೆದಿರುವುದು ಕಂಡು ಬರುತ್ತಿದೆ. ಇದೆಲ್ಲದರ ಜೊತೆಗೆ ಪಠ್ಯ ಪುನರ್ ಪರಿಶೀಲನೆಯ ಕುರಿತು ಮಾಡಿರುವ ಟಿಪ್ಪಣಿಯೂ ಸಮಿತಿಯ ಧೋರಣೆಯನ್ನು ಎತ್ತಿ ತೋರಿಸುತ್ತದೆ.
ಪುನರ್ ಪರಿಶೀಲನೆ ಕುರಿತು ಪುಠ್ಯಪುಸ್ತಕಗಳ ಪರಿಶೀಲನಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಎಂ.ಪಿ.ಮಾದೇಗೌಡ ಅವರು ಟಿಪ್ಪಣಿ ಬರೆದಿದ್ದು, “ಕನ್ನಡ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿರುವ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ” ಕುರಿತು ಕ್ಷುಲ್ಲಕವಾಗಿ ಮಾತನಾಡಿರುವುದು ಕಂಡುಬರುತ್ತದೆ.
”2014ರಲ್ಲಿ ಪರಿಷ್ಕರಣೆಗೆ ಒಳಗಾಗಿದ್ದ ಭಾಷಾ ಪಠ್ಯಗಳಲ್ಲಿ ನಮಗೆ ಅನೇಕ ಸಮಸ್ಯೆಗಳು ಕಂಡುಬಂದವು. ಅವುಗಳನ್ನು ಸರಿಪಡಿಸಲು ಪಠ್ಯಪುಸ್ತಕಗಳ ಪರಿಶೀಲನೆ, ಪರಿಷ್ಕರಣೆಗಳಲ್ಲಿ ನಾವು ನಮ್ಮದೇ ಆದ ಚೌಕಟ್ಟನ್ನು ನಿರ್ಮಿಸಿಕೊಂಡೆವು. ಭಾಷಾಪಠ್ಯವು ಇರುವುದು ವಿದ್ಯಾರ್ಥಿಯಲ್ಲಿ ಅಭಿವ್ಯಕ್ತಿಯ ಸಾಮರ್ಥ್ಯವನ್ನು ಉತ್ತಮಪಡಿಸುವುದಕ್ಕೆ, ಭಾಷಾಪಠ್ಯಗಳನ್ನು ಅಧ್ಯಯನ ಮಾಡಿದ ವಿದ್ಯಾರ್ಥಿಯಲ್ಲಿ ಭಾಷೆಯ ಬಗ್ಗೆ ಅಭಿಮಾನ ಮೂಡಬೇಕು; ಆತನ ಭಾಷಾಪ್ರೌಢಿಮೆ ಗಣನಾತ್ಮಕವಾಗಿ ಹೆಚ್ಚಬೇಕು. ಓದುವ, ಆಲಿಸುವ, ಮಾತಾಡುವ ಮತ್ತು ಬರೆಯುವ ಸಾಮರ್ಥ್ಯಗಳು ಸುಧಾರಿಸಬೇಕು. ಸ್ವತಂತ್ರವಾಗಿ ವಿದ್ಯಾರ್ಥಿಯು ತನ್ನ ಅಭಿಪ್ರಾಯ, ಅನಿಸಿಕೆಗಳನ್ನು ಅತ್ಯಂತ ಶಕ್ತಿಶಾಲಿಯಾಗಿ ಹೇಳುವುದಕ್ಕೆ ಸಾಧ್ಯವಾಗಬೇಕು. 2014ರಲ್ಲಿ ಪರಿಷ್ಕರಣೆಗೆ ಒಳಗಾದ ಪಠ್ಯಪುಸ್ತಕಗಳಲ್ಲಿ ಭಾಷೆಯ ಈ ಬಗೆಯ ಕಲಿಕೆಗೆ ಹಿನ್ನಡೆಯಾಗಿ ಕೇವಲ ಸಿದ್ದಾಂತಪ್ರಚಾರವೇ ಮುನ್ನೆಲೆಗೆ ಬಂದಿದ್ದುದನ್ನು ಗಮನಿಸಿದೆವು. ಆ ಪಠ್ಯಗಳ ಮರುಪರಿಷ್ಕರಣೆಯ ಹೊತ್ತಿನಲ್ಲಿ ಈ ನಿಯಮಗಳನ್ನು ಹೇರಿಕೊಂಡೆವು” ಎನ್ನುವ ಸಮಿತಿ ಆರು ಅಂಶಗಳನ್ನು ಪಟ್ಟಿ ಮಾಡಿದೆ.
ಇದನ್ನೂ ಓದಿ: ಸಾವರ್ಕರ್‌ಗೆ ಮೆಚ್ಚುಗೆ ಸೂಚಿಸಿದ ಸಿಎಂಗೆ ರಾಜ್ಯದ ಜನತೆಯಿಂದ ಇತಿಹಾಸ ಪಾಠ!
ಸಮಿತಿ ಹೇರಿಕೊಂಡ ಅಂಶಗಳು
(1) ಭಾಷಾ ಪಠ್ಯವಿರುವುದು ಅತ್ಯುತ್ತಮವಾದ ಪ್ರಾತಿನಿಧಿಕ ಪಠ್ಯವನ್ನು ಕೊಡುವುದಕ್ಕಾಗಿಯೇ ಹೊರತು ಸಾಮಾಜಿಕನ್ಯಾಯ, ಲಿಂಗಸಮಾನತೆ ಇತ್ಯಾದಿ ಅಂಶಗಳನ್ನು ತುರುಕುವುದಕ್ಕಲ್ಲ. ಹಾಗಾಗಿ ಭಾಷೆಯ ವೈವಿಧ್ಯ ಹಾಗೂ ವಿಶೇಷಗಳನ್ನು ಹೆಚ್ಚು ಕಾಣಿಸುವ ಗದ್ಯ/ಪದ್ಯ ಭಾಗಗಳನ್ನು ಆರಿಸಿಕೊಳ್ಳಬೇಕು.
(2) ಭಾಷೆಯ ಪಠ್ಯದ ಹೆಸರಿನಲ್ಲಿ ಸಿದ್ದಾಂತಪ್ರಚಾರಕ್ಕೆ ಅವಕಾಶವಾಗಬಾರದು.
(3) ಗ್ರಾಂಥಿಕ ಭಾಷೆಯಲ್ಲದೆ ಮೌಖಿಕ ಪರಂಪರೆಯ ಹಾಗೂ ಹಲವು ಪ್ರಕಾರದ ಸಾಹಿತ್ಯಗಳಿಗೆ ಅವಕಾಶ ಕೊಡಬೇಕು.
(4) ಬಳಸಿದ ಭಾಷೆ, ಭಾಷಾಸೊಗಡು, ಪ್ರತಿಪಾದಿಸಿರುವ ವಿಚಾರ, ಹೊಸ ಚಿಂತನೆಗಳನ್ನು ಹುಟ್ಟಿಸುವ ಸಾಧ್ಯತೆ, ಸಾಹಿತ್ಯ ಪ್ರಕಾರದ ವೈಶಿಷ್ಟ್ಯ ಇತ್ಯಾದಿ ಎಲ್ಲ ಬಗೆಯಲ್ಲೂ ಪಾಠಗಳ ಗುಣಮಟ್ಟ ಅತ್ಯುತ್ತಮವಾಗಿರಬೇಕು.
(5) ಕವಿ/ಲೇಖಕರ ಪುನರಾವರ್ತನೆಯನ್ನು ಕಡಿಮೆ ಮಾಡಿ ಹೊಸ ಕವಿ/ಲೇಖಕರ ಬರಹಗಳಿಗೆ ಅವಕಾಶ ಮಾಡಿಕೊಡಬೇಕು.
(6) ಭಾಷೆಯ ಸೊಬಗನ್ನು ಪರಿಚಯಿಸುವ ಭಾಗಗಳನ್ನು ಪ್ರತಿ ಅಧ್ಯಾಯದ ಜೊತೆ ಸೇರಿಸಬೇಕು.
ಈ ಹೀಗೆ ಟಿಪ್ಪಣಿ ಮಾಡಿರುವ ಸಮಿತಿಯು ತನ್ನದೇ ಮಾತುಗಳನ್ನು ಉಲ್ಲಂಘಿಸಿರುವುದು ಕಂಡು ಬರುತ್ತಿದೆ. ಉದಾಹರಣೆಗೆ ಹೆಡಗೇವಾರ್ ಪಾಠದಲ್ಲಿ ‘ಕೃತಿಕಾರನ ಪರಿಚಯ’ ಮಾಡಿಕೊಡುತ್ತಾ, ಆರ್‌ಎಸ್‌ಎಸ್ ಕುರಿತು ವೈಭವೀಕರಣ ಮಾಡಲಾಗಿದೆ.
“ಕೇಶವ ಬಲಿರಾಮ ಹೆಡಗೇವಾರರು ವಿಶ್ವದ ಅತಿದೊಡ್ಡ ಸ್ವಯಂ ಸೇವಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕದ ಸಂಸ್ಥಾಪಕರು” ಎಂದು ಒಂದು ಕಡೆ ಪರಿಚಯಿಸಿದರೆ, ಮತ್ತೊಂದು ಕಡೆ, “ಆರ್‌ಎಸ್‌ಎಸ್ ಇಂದು 60 ಲಕ್ಷ ಸದಸ್ಯರನ್ನು ಒಳಗೊಂಡಿದೆ” ಎಂದು ಬರೆಯಲಾಗಿದೆ.
ಇದನ್ನೂ ಓದಿ: ಹೆಡ್ಗೆವಾರ್ ಸಂಘಪರಿವಾರದವರಿಗೆ ಮಾತ್ರ ಆದರ್ಶ, ರಾಜ್ಯದ ಜನತೆ ಅಲ್ಲ: ಭಗತ್ ಸಿಂಗ್ ಪಾಠ ಕೈ ಬಿಟ್ಟ ಸರ್ಕಾರದ ವಿರುದ್ದ…
ಮತ್ತೊಂದೆಡೆ ತಮ್ಮ ಟಿಪ್ಪಣಿಯಲ್ಲಿ ಸಮಿತಿಯು, “ಇಂದಿನ ಮಕ್ಕಳೇ ಮುಂದಿನ ಜನಾಂಗವೆಂಬ ಮಾತಿದೆ. ಶಾಲೆಗಳಲ್ಲಿ ಓದುವ ಇಂದಿನ ಮಕ್ಕಳಿಗೆ ನಾವು ಎಂಥ ಪಠ್ಯಗಳನ್ನು ಬೋಧಿಸುತ್ತೇವೆಂಬುದರ ಮೇಲೆ ಸಮಾಜದ ಭವಿಷ್ಯ ನಿಂತಿದೆ. ವಿದ್ಯಾರ್ಥಿಗಳು ಓದುವ ಪಠ್ಯಗಳು ಆರೋಗ್ಯಕರ ಚಿಂತನೆಗಳನ್ನು ಒಳಗೊಂಡಿರಬೇಕು. ಸಮಾಜದ ವಿವಿಧ ವರ್ಗ-ಸಮುದಾಯಗಳಲ್ಲಿ ಪರಸ್ಪರ ಅಪನಂಬಿಕೆ, ದ್ವೇಷ, ತಾತ್ಸಾರಗಳನ್ನು ಹರಡುವಂತಿರಬಾರದು. ಅವರಲ್ಲಿ ರಾಷ್ಟ್ರೀಯತೆಯನ್ನೂ ದೇಶಪ್ರೇಮವನ್ನೂ ಉದ್ದೀಪಿಸುವಂತಿರಬೇಕು. ರಾಜ್ಯ ದೇಶಗಳಲ್ಲಿ ಆಗಿಹೋದ ಸಂಗತಿಗಳ ಬಗ್ಗೆ ನಿಖರವಾದ, ವಸ್ತುನಿಷ್ಠವಾದ ಮಾಹಿತಿ ದೊರೆಯುವಂತಿರಬೇಕು. ಅವರಿಗೆ ಸ್ಥಳೀಯ ಸಂಸ್ಕೃತಿ, ಭಾಷೆ, ಜನಪದಗಳ ಪರಿಚಯವಾಗುವಂತಿರಬೇಕು. ಒಟ್ಟಾರೆಯಾಗಿ ಪಠ್ಯಗಳು ವಿದ್ಯಾರ್ಥಿಗಳನ್ನು ಉತ್ತಮ, ಜವಾಬ್ದಾರಿಯುತ, ಪ್ರಜ್ಞಾವಂತ, ಮುಕ್ತ ಮನಸ್ಸಿನ, ಸಭ್ಯ ನಾಗರಿಕರನ್ನಾಗಿ ಮಾಡಬೇಕು. ಆ ಜವಾಬ್ದಾರಿಯನ್ನು ಗಮನದಲ್ಲಿರಿಸಿಕೊಂಡು ಪಾಠಗಳನ್ನು ಪರಿಷ್ಕರಣೆ ಮಾಡಬೇಕಾಯಿತು” ಎಂದು ಅಭಿಪ್ರಾಯ ತಾಳಲಾಗಿದೆ.
ಮುಂದುವರಿದು, “ಅತ್ಯುತ್ತಮ ಪಠ್ಯಪುಸ್ತಕ ಎಂಬುದು ಒಂದು ಆದರ್ಶಸ್ಥಿತಿ, ಅದರತ್ತ ನಡೆಯುವುದು ನಮ್ಮ ಆಶಯವೇ ಹೊರತು ನೂರಕ್ಕೆ ನೂರು ಅತ್ಯುತ್ತಮವಾದ ಪಠ್ಯಪುಸ್ತಕವನ್ನು ರಚಿಸುವುದು ಸಾಧ್ಯವಿಲ್ಲ. ಆ ವಿನಯದಿಂದಲೇ ನಾವು ಈ ಪುನರ್ ಪರಿಶೀಲನೆಯ ಕಾರ್ಯವನ್ನು ಮುಗಿಸಿ ಪಠ್ಯಗಳನ್ನು ನಿಮ್ಮ ಕೈಗಿಡುತ್ತಿದ್ದೇವೆ. ಇದು ಕೇವಲ ಮರುಪರಿಷ್ಕರಣೆಯೇ ಹೊರತು ಸಮಗ್ರ ಪುನಾರಚನೆಯಲ್ಲ. ಈಗಾಗಲೇ 2014ರಲ್ಲಿ ರಚಿತವಾಗಿದ್ದ ಪಠ್ಯಪುಸ್ತಕದ ಆಶಯ ಮತ್ತು ಸ್ವರೂಪಕ್ಕೆ ಎಲ್ಲಿಯೂ ಧಕ್ಕೆಯುಂಟುಮಾಡಿಲ್ಲ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ಅದನ್ನನುಸರಿಸಿ ಬಂದ ರಾಜ್ಯ ಪಠ್ಯಕ್ರಮ ಚೌಕಟ್ಟುಗಳನ್ನು ಮುಂದಿಟ್ಟುಕೊಂಡೇ ಇಡಿಯ ಮರುಪರಿಷ್ಕರಣೆಯ ಕಾರ್ಯ ನಡೆದಿದೆ. ಜೊತೆಗೆ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲಾಗಿದೆ. ಪರಿಷ್ಕರಣೆಯ ಕೆಲಸವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿರುವ ಪರಿಶೀಲನಾ ಸಮಿತಿಯ ನನ್ನ ಎಲ್ಲ ಸಹೋದ್ಯೋಗಿಗಳಿಗೆ ನಾನು ಕೃತಜ್ಞ, ಅಂತೆಯೇ ಸಮಿತಿಯ ಕೆಲಸ ಸುಗಮವಾಗಿ ನಡೆಯಲು ಸಹಕರಿಸಿದ ಪಠ್ಯಪುಸ್ತಕ ಸಂಘದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಆಭಾರಿ. ಈ ಪರಿಷ್ಕರಣೆಯು ಈಗಷ್ಟೇ ಬಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳನ್ನು ಹೆಚ್ಚು ಪ್ರತಿಫಲಿಸುತ್ತ, ಮುಂದೆ ಬರಲಿರುವ ಸಮಗ್ರ ಪುನಾರಚಿತ ಪಠ್ಯಗಳಿಗೆ ಪ್ರವೇಶಿಕೆಯಾಗಲಿದೆ ಎಂಬ ಭರವಸೆ ನಮ್ಮದು” ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಸರ್ಕಾರ ಹೊರಗಿಟ್ಟಿರುವ ಕ್ರಾಂತಿಕಾರಿ ‘ಭಗತ್‌ಸಿಂಗ್’ ಪಾಠದಲ್ಲಿ ಇರುವುದೇನು? ಆ ಪುಟ್ಟ ಪಠ್ಯ ಇಲ್ಲಿದೆ
“ಸಾಮಾಜಿಕ ನ್ಯಾಯ, ಲಿಂಗ ಸಮಾನತೆ” ಸಂವಿಧಾನದ ಭಾಗವಲ್ಲವೇ? ಎಂಬ ಪ್ರಶ್ನೆಯನ್ನು ಸಮಿತಿ ಕೇಳಿಕೊಳ್ಳಬೇಕಾಗಿರುವುದು ಅಗತ್ಯವಾಗಿದೆ.
ಪಠ್ಯಪರಿಶೀಲನೆಯಲ್ಲಿನ ದ್ವಂದ್ವಗಳ ಕುರಿತು ಪ್ರತಿಕ್ರಿಯೆ ಪಡೆಯಲು ರೋಹಿತ್ ಚಕ್ರತೀರ್ಥ ಅವರನ್ನು ‘ನಾನುಗೌರಿ.ಕಾಂ’ ಪ್ರಯತ್ನಿಸಿದೆ. ಆದರೆ ಅವರು ದೂರವಾಣಿ ಕರೆಯನ್ನು ಸ್ವೀಕರಿಸಿಲ್ಲ ಎಂದು ವಿಷಾದಿಸುತ್ತೇವೆ.



ಮೂರ್ಕರ ಕೈಗೆ ಅದಿಕಾರ ಕೊಟ್ಟಮೇಲೆ ಇದಕ್ಕಿಂತಲೂ ಹೆಚ್ಚಿನದನ್ನು ನಿರೀಕ್ಷಿಸುವುದು, ಬಹುಶಃ ಮೂರ್ಕತನದ ಪರಮಾವದಿ.