’ಎರಡೂವರೆ ಸಾವಿರ ಕೋಟಿ ಕೊಟ್ಟರೆ ನಿಮ್ಮನ್ನ ಮುಖ್ಯಮಂತ್ರಿ ಮಾಡುತ್ತೇವೆ’ ಎಂದು ದೆಹಲಿಯಿಂದ ಮಧ್ಯವರ್ತಿಗಳು ಬಂದಿದ್ದರೆಂದು ನಂಬಲನರ್ಹವಾದ, ಆದರೆ ಸದ್ಯದ ಬಿಜೆಪಿ ನೋಡಿದರೆ ನಂಬಬಹುದಾದ ಬಾಂಬನ್ನು ವಿಜಯಪುರದ ಯತ್ನಾಳ್ ಬಿಜೆಪಿ ಮೇಲೆ ಎಸೆದಿದ್ದಾರಲ್ಲಾ. ಕೂಡಲೇ ಆ ಪಾರ್ಟಿಯ ಅಧ್ಯಕ್ಷ ಕಟೀಲು ಯಕ್ಷಗಾನದ ಮಾತುಗಳನ್ನು ನೆನಪಿಸುವಂತೆ, ಯತ್ನಾಳ್ ಮಾತಿಗೂ ಬಿಜೆಪಿಗೂ ಸಂಬಂಧವಿಲ್ಲವೆಂದು ಹಾಸ್ಯ ಮಾಡಿದ್ದಾರಲ್ಲಾ. ಹಾಗದರೆ ಯತ್ನಾಳ್ ಯಾವ ಪಾರ್ಟಿಯಲ್ಲಿದ್ದಾರೆ? ದೆಹಲಿಯಿಂದ ಬಂದ ದಲ್ಲಾಳಿಗಳು ನಿಮ್ಮನ್ನ ಜೆಡಿಎಸ್‌ನಿಂದ ಮುಖ್ಯಮಂತ್ರಿ ಮಾಡುತ್ತೇವೆ ಅಥವಾ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಮಾಡುತ್ತೇವೆ ಎಂದಿದ್ದರೆ ಯತ್ನಾಳ್ ಮಾತಿಗೂ ನಮ್ಮ ಪಾರ್ಟಿಗೂ ಸಂಬಂಧವಿಲ್ಲ ಅನ್ನಬಹುದಿತ್ತು. ಇದಕ್ಕಿಂತ ತಮಾಷೆಯ ಮಾತ್ಯಾವುದೆಂದರೆ ಅಷ್ಟು ಹಣವನ್ನು ಹೇಗೆ ಇಡುವುದು, ಸಂಗ್ರಹಿಸುವುದು ಎಂಬ ದೂಡ್ಡ ಪ್ರಶ್ನೆ ಯತ್ನಾಳ್‌ರಿಂದ ಹೊರಬಿದ್ದಿದೆ. ನುರಿತ ರಾಜಕಾರಣಿಗಳ ಪ್ರಕಾರ 2500 ಸಾವಿರ ಕೋಟಿ ವಸೂಲಿ ಹಲವಾರು ಕಂತಿನಿಂದ ಸಂದಾಯವಾಗುತ್ತದೆ. ಪಿ.ವಿ ನರಸಿಂಹರಾಯ ವಿಶ್ವಾಸ ಮತ ಗಳಿಸಲು ಕರ್ನಾಟಕದಿಂದ ತರಿಸಿಕೂಂಡ ಹಣದ ಬಗ್ಗೆ ಕೇಳಿದ್ದರೆ ಯತ್ನಾಳ್‌ಗೆ ಉತ್ತರ ಸಿಗುತ್ತಿತ್ತಂತಲ್ಲಾ ಥೂತ್ತೇರಿ.
******
ಯತ್ನಾಳರ ಮಾತಿಗೆ ಮತ್ತೂಂದು ಕುಚ್ಯೋದ್ಯದ ಸಾಕ್ಷಿ ಒದಗಿಸುವುದಾದರೆ, ಸರ್ಕಾರಿ ಹುದ್ದೆ ನೀಡಲು ಸರಕಾರದ ಕೆಲವು ಪ್ರಮುಖರಿಂದಲೇ ಕೋಟಿಕೋಟಿ ಹಣ ಸಂಗ್ರಹ ಮಾಡಿದ ಹಗರಣ ಇಡೀ ಕರ್ನಾಟಕವನ್ನೇ ಅಲ್ಲೋಲ ಕಲ್ಲೋಲ ಮಾಡಿದೆಯಂತಲ್ಲಾ. ಈ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ, ಹಿಂದಿ ಸಿನಿಮಾದಲ್ಲಿ ಸಮುದ್ರ ದಡದಲ್ಲಿ ಹೆಲಿಕಾಪ್ಟರಲ್ಲಿ ಇಳಿಯುವ ಡಾನ್ ಒಬ್ಬ, ಮತ್ತೊಂದು ಕಡೆಯಿಂದ ಬಂದವನಿಂದ ಸೂಟ್‌ಕೇಸ್ ಪಡೆದು ಮತ್ತೆ ಹೆಲಿಕಾಪ್ಟರ್ ಹತ್ತಿ ಮಾಯವಾದ ದೃಶ್ಯವನ್ನ ನೆನಪಿಸಿದರಂತಲ್ಲಾ. ಕರ್ನಾಟಕದ ಹಗರಣದ ಬಗ್ಗೆ ಒಂದಾದರೂ ಮಾತನಾಡಿದ್ದರೆ ಶಾ ಭೇಟಿ ಸಂಶಯಕ್ಕೊಳಪಡುತ್ತಿರಲಿಲ್ಲವೆಂಬುದು
ಒಂದಾಣಿಯಷ್ಟು ಮಾನವನ್ನು ಇನ್ನೂ ಉಳಿಸಿಕೂಂಡಿರುವ ಬಿಜೆಪಿ ಹಿರಿಯರ ಮಾತಾಗಿರುವಾಗಲೆ, ಜೆಡಿಎಸ್‌ನ ಕುಮಾರಸ್ವಾಮಿಯವರು ಪಿಎಸ್‌ಐ ನೇಮಕಾತಿ ಅವ್ಯವಹಾರದ ಕಿಂಗ್‌ಪಿನ್ ಯಾರೆಂದು ನಾನು ಹೇಳಿದರೆ ಕ್ಷಣಮಾತ್ರದಲ್ಲಿ ಬಾಬರಿ ಮಸೀದಿ ಉರುಳಿಸಿದಂಗೆ ಬಿಜೆಪಿ ಸರಕಾರ ಉರುಳಿಹೋಗುತ್ತದೆ ಎಂದುಬಿಟ್ಟಿದ್ದಾರಲ್ಲಾ. ಆದರೆ ಕುಮಾರಣ್ಣ ಎಂದಿನಂತೆ ಕಿಂಗ್‌ಪಿನ್ ಹೆಸರೇಳಲ್ಲ, ಕೇಳಿದರೆ ಸಮಯ ಬಂದಾಗ ಹೇಳುತ್ತೇನೆ ಎನ್ನುತ್ತಾರೆ. ಆ ಸಮಯ ಬರುವುದು ಸರಕಾರದ ಅವಧಿ ಮುಗಿದ ಮೇಲೆ, ಬಹುಶಃ ಚುನಾವಣಾ ಭಾಷಣದಲ್ಲಿ ಅಥವ ಅದೂ ಮುಗಿದ ಮೇಲೆ ಬರಬಹುದು. ಆದ್ದರಿಂದ ಕುಮಾರಣ್ಣನ ಕಿಂಗ್‌ಪಿನ್ ಬೆದರಿಕೆಗೆ ಯಾರೂ ಹೆದರಿಲ್ಲವಂತಲ್ಲಾ ಥೂತ್ತೇರಿ
******
ಯತ್ನಾಳ್ ಆರೋಪಕ್ಕೆ ಎಡೂರಪ್ಪನವರ ಮಗ ಎಗರಿಬಿದ್ದರಂತಲ್ಲಾ. ಅಲ್ಲದೆ, ಆಡಳಿತ ಮತ್ತು ವಿರೋಧ ಪಕ್ಷದ ಮಾತಿಗೆ ಮಣಿದು ಸದ್ಯದ ಹಗರಣಗಳಿಂದ ಕರ್ನಾಟಕದ ಗಮನವನ್ನು ಡೈವರ್ಟು ಮಾಡಲು ಸರಕಾರ ಯತ್ನಾಳ್ ಹೇಳಿಕೆಯನ್ನು ತನಿಖೆ ಮಾಡಲು ಆಯೋಗವೊಂದು ರಚನೆಯಾದರೆ, ಅದರ ಮುಂದೆ ಹಾಜರಾಗಿ ಹೇಳಿಕೆ ಕೊಡುವುದಕ್ಕೆ ಕಿಂಚಿತ್ತೂ ಅಂಜಿಕೆ ಯತ್ನಾಳ್‌ರಿಗಿಲ್ಲಾವಂತಲ್ಲಾ. ಒಂದು ವೇಳೆ ತನಿಖಾ ತಂಡ ರಚನೆಗೂಂಡು ವಿಜಯಪುರಕ್ಕೆ ಬಂದು ಎಮ್ಮೆ ಕೊಟ್ಟಿಗೆಯಲ್ಲಿ ಹಾಲಿಂಡುತ್ತಿರುವ ಯತ್ನಾಳರನ್ನ ಹಿಗ್ಗಾಮುಗ್ಗಾ ಪ್ರಶ್ನಿಸಿತು ಅನ್ನಿ ಆಗ,
“ತಮ್ಮ ಹೆಸರೇನ್ರಿ?”.
“ಬಸನಗೌಡ ಪಾಟೀಲ್ ಯತ್ನಾಳ್ ಅಂತ, ಯಮ್ಮಿ ಬೇಕಿತ್ತೇನ್ರಿ?”.
“ಇಲ್ಲ”.
“ಮತ್ತ ಕ್ವಾಣ ಬೇಕಿತ್ತೆನ?”.
“ಇಲ್ಲ”.
“ಗಬ್ಬದ ಯಮ್ಮಿ ಬೇಕಿದ್ರ ನೋಡ್ರಿ, ಅದೈತಿ. ಲಕ್ಷದ ಮ್ಯಾಲಾಕ್ಯತಿ. ಒಂದ ಹೂತ್ತಿಗೆ ಹತ್ತ ಲೀಟ್ರು ಹಾಲು ಕರಿತೈತೆ. ಆಂದ್ರ ದಿನ ಇಪತ್ತ ಲೀಟ್ರು. ಒಂದು ಲೀಟ್ರು ಹಾಲು ಮುವ್ವತ್ತು ರೂಪಾಯಂದ್ರ ಇಪ್ಪತ್ತು ಇಂಟು ಮೂವ್ವತ್ತು ಏಟಾತು ಮತ್ತ ಡೈರಿ ಹಾಲಿಗ ಲೀಟ್ರಗ ನಲವತ್ರ ಮಟ ಐತಿ”.
“ರೀ ನಾವು ಹಾಲಿನ ವ್ಯಾಪಾರದೊರಲ್ಲ”.
“ಮತ್ತ ಯಾರಂತ ಹೇಳ್ರಿ ಲಗೂನ, ಯಮ್ಮಿಗೆ ಹಿಂಡಿ ಹಾಕಬೇಕು”.
“ನಾವು ತನಿಖಾಧಿಕಾರಿಗಳು”.
“ದನ, ಯಮ್ಮಿ, ಕೊಟಗಿ ಹಿಂಡಿ ತನಿಖ ಮಾಡುವುರೇನು”.
“ನಿಮ್ಮನ್ನೆ ತನಿಖೆ ಮಾಡಕ್ಕೆ ಬಂದಿದ್ದೀವಿ”.
“ನನ್ನನ್ನು ತನಿಖೆ ಮಾಡ್ತಿರೇನು, ಬಪ್ಪರ ಮಕ್ಕಳ, ಮಾಡ್ರಲ”.
“ನಾವು ಸಿಐಡಿ ಅಧಿಕಾರಿಗಳು”.
“ನನಗ ಗುರುತಿಲ್ಲೇನು, ಏನ ತನಿಖಿ ಮಾಡುವುರದಿರಿ ಹೇಳ್ರಲ”.
“ನಿಮ್ಮನ್ನ ಮುಖ್ಯಮಂತ್ರಿ ಮಾಡ್ತಿವಿ. ಎರಡೂವರೆ ಸಾವಿರ ಕೋಟಿ ಕೂಡಿ ಅಂತ ನಿಮ್ಮನ್ನ ಕೇಳಿದ್ರ?”
“ಹೌದ್ರಿ”.
“ಯಾರವುರು?”.
“ಯಾರಿಗೊತ್ತರಿ”.
“ಎಲ್ಲಿಂದ ಬಂದಿದ್ರು?”.
“ಡೆಲ್ಲಿಯಿಂದ ಅಂತ ಹೇಳಿದ್ರು”.
“ಹೆಸರೇನವುರದು”.
“ಗೊತ್ತಿಲ್ರಿ”.
“ನಿಮ್ಮತ್ರಕೇ ಯಾಕೆ ಬಂದ್ರು?”.
“ನಾನು ವಾಜಪೇಯಿ ಸಂಪುಟದಾಗ ಮಂತ್ರಿಯಾಗಿದ್ನಿ. ನಾನು ಎತ್ತರಕ್ಕೆ ಕೆಂಪಗೆ ಸಿಂದೂರ ಲಕ್ಷ್ಮಣನಂಗಿದ್ದಿನಿ. ಅದೂ ಅಲ್ದೆ ಹಿಂದೂವಾದಿ ಭಾಷಣಕಾರ. ಬಿಜಾಪುರದ ಸುಲ್ತಾನರ ನಾಡಿನಿಂದ ಬಂದವ. ನನ್ನ ನೋಡಿದ್ರೆ ಸಾಬರಿಗೆ ಅಂಜಿಕಿ ಬರತೈತಿ. ನಾನು ಕೇಂದ್ರ ಮಂತ್ರಿಯಾಗಕ್ಕೆ ಇವೆಲ್ಲ ಕಾರಣದಾವು. ಅಂಗ ರಾಜ್ಯದ ಮುಖ್ಯಮಂತ್ರಿಯಾಗಕ್ಕು ಬೇಷದಿನಿ ಅಂತ ಯಾರೊ ಕೇಳಿಕೂಂಡು ಬಂದಿದ್ರು”.
“ಏನು ಕೇಳಿದ್ರು?”
“ನಿಮ್ಮನ್ನ ರಾಜ್ಯದ ಮುಖ್ಯಮಂತ್ರಿ ಮಾಡ್ತಿವಿ ಅಂದ್ರು”.
“ಅದಕೆ ನೀವೇನೇಳಿದ್ರಿ?”.
“ಮಾಡ್ರಲ ಅಂದ್ನಿ”.
“ಅದಕವುರೇನೇಳಿದ್ರು?”.
“ಎರಡೂವರೆ ಸಾವಿರ ಕೋಟಿ ಕೂಡಿ ಅಂದ್ರು.
“ಅದಕ್ಕೆ ನೀವೇನಂದ್ರಿ?”.
“ಅಲ್ಲಲೇ ಮಕ್ಕಳ ಎರಡೂವರೆ ಸಾವಿರ ಕೋಟಿ ಅಂದ್ರೆ ಏನು ಹುಣುಸಿ ಪಿಕ್ಕ ಅನಕೊಂಡಿರೇನು? ಅಷ್ಟು ರ್‍ವಕ್ಕ ಯಂಗ ತುಗಂಡೋಕ್ಕಿ? ಎಲ್ಲಿ ಮಡಗತಿರೀ? ಗೋದಾಮೆಲೆ ಸಿಕ್ಕಿಬಿದ್ರ ಯಾವ ರ್‍ವಕ್ಕ ಅಂತ ಹೇಳತಿ. ಯಾರದು ಅಂತ ಹೇಳತಿರಿ? ಅಂತ ಪ್ರಶ್ನಿ ಮ್ಯಾಲೆ ಪ್ರಶ್ನಿ ಹಾಕಿದಿನ್ರಿ. ಅವತ್ತು ಹೋದ ಮಕ್ಕಳು ಮತ್ತ ವಳ್ಳಿ ನನ್ನ ಸನೇಕ ಬರಲಿಲ್ಲರಿ. ಆ ನಂತರ ಎರಡೂವರಿ ಸಾವಿರ ಕೋಟಿ ಯಾರು ಕೊಟ್ರು, ಯಾರು ಮುಖ್ಯಮಂತ್ರಿಯಾದ್ನೊ, ನನಗೆನ ಖರಿ ಗೊತ್ತಿಲ್ರಾ ಎಂದಾಗ ಅಲ್ಲಿಗೆ ತನಿಖೆ ಮುಗಿಯಿತಂತಲ್ಲಾ.
ಥೂಥೂ ಥೂತ್ತೇರಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಕೊರೊನಾ ಅಲೆ ಬಿಜೆಪಿ ಒಂದೇ ತರ ಕಾಣುತ್ತಿವೆಯಲ್ಲಾ