ಮತ್ತೆ ಕೊರೊನಾ ಬೆದರುಬೊಂಬೆಯನ್ನು ತೋರಹೊರಟಿರುವ ಬಿಜೆಪಿ ನಡವಳಿಕೆಯನ್ನ ನೋಡಿದ ಕರ್ನಾಟಕದ ಜನ ಕೊರೊನಾಕ್ಕೂ ಬಿಜೆಪಿಗೂ ಶಾನೆ ಹೋಲಿಕೆ ಇದೆ ಎನ್ನತೊಡಗಿದ್ದಾರಲ್ಲಾ. ಕೊರೊನಾ ಅಲೆಗಳಂತೆಯೇ ಬಿಜೆಪಿ ಪಾರ್ಟಿಯ ಕಾರ್ಯಕ್ರಮಗಳು ಅಲೆಅಲೆಯಾಗಿ ಬಂದು ಮುಸ್ಲಿಮರ ಮೇಲೆ ಅಪ್ಪಳಿಸಿದವು. ಅದರ ಪರಿಣಾಮ ಮುಸ್ಲಿಮರು ಮತ್ತು ಹಿಂದೂಗಳೂ ತತ್ತರಿಸಿಹೋದರು. ಮುಸ್ಲಿಮರನ್ನು ಗುರಿಯಾಗಿಸಿ ಬಿಟ್ಟ ಬಾಣಗಳು ಹಿಂದೂಗಳಿಗೂ ತಾಗಿ, ರಂಜಾನ್ ಟೈಮಿನಲ್ಲಿ ಮುಸ್ಲಿಮರು ಕೂಡ ಹಿಂದೂ ಬಡವರಿಗೆ ಸಹಾಯ ಮಾಡುತ್ತ ಇಫ್ತಾರ್ ಕೂಟಗಳಿಗೆ ಹಿಂದೂಗಳನ್ನು ಕರೆಯುತ್ತ ಸಾಮರಸ್ಯಕ್ಕೆ ಕರೆಕೊಟ್ಟಿದ್ದನ್ನ ನೋಡಿದ ಬಿಜೆಪಿಗಳು ಬೇರೆ ತಂತ್ರ ಆಲೋಚಿಸುತ್ತಿರುವಾಗ ಕೊರೊನಾವೂ ಕೂಡ ಛದ್ಮವೇಶದಲ್ಲಿ ರೆಡಿಯಾಗುತ್ತಿದೆಯಂತಲ್ಲಾ. ಸಾಂಕ್ರಾಮಿಕ ಕಾಯಿಲೆಯೊಂದು ರಾಜಕೀಯ ಪಾರ್ಟಿಯ ಜೊತೆ ಕೈಜೋಡಿಸಿ ಕೆಲಸ ಮಾಡಿದ್ದು ಚರಿತ್ರೆಯಲ್ಲೇ ಇಲ್ಲವಂತಲ್ಲಾ. ಆದರೆ ಕರ್ನಾಟಕದ ಮಟ್ಟಿಗೆ ಆಡಳಿತವನ್ನೆ ನಡೆಸದೆ ದಿಕ್ಕು ದೆಸೆಯಿಲ್ಲದೆ ಮುನ್ನಡೆಯುತ್ತಿರುವ ಪಾರ್ಟಿಯ ಆಸರೆಗೆ ಕೊರೊನಾ ಬಂದಿರುವುದು ಅಚ್ಚರಿಯ ಸಂಗತಿಯಾಗಿದೆಯಲ್ಲಾ, ಥೂತ್ತೇರಿ.
******
ಮುಸ್ಲಿಂ ಧರ್ಮದ ಮೇಲೆ ಎಲ್ಲಾ ಬಗೆಯ ಹಗೆಯ ಪ್ರಯೋಗ ನಡೆದ ಮೇಲೆ ಈಗ ಮಸೀದಿಗಳಲ್ಲಿನ ಧ್ವನಿವರ್ಧಕದ ಮೇಲೆ ಮುತಾಲಿಕ್ ಬಿದ್ದಿದ್ದಾರಲ್ಲಾ. ಮುತಾಲಿಕ್ ಮತಿಗೆಟ್ಟು ಮಾತನಾಡುತ್ತಿದ್ದಾರೆಂದು ಪರಿಗಣಿಸುವಂತಿಲ್ಲ. ಆತನ ಒತ್ತಾಯದ ಹಿಂದೆ ಬಿಜೆಪಿ ದನಿ ಅಡಗಿದೆ. ಹಾಗೆ ನೋಡಿದರೆ ಈ ಹಿಂದೆ ಅನಂತಕುಮಾರ ಹೆಗಡೆ ಎಂಬಾತ ಪುರೋಹಿತಶಾಹಿ ಪಿತ್ತ ನೆತ್ತಿಗೇರಿಸಿಕೊಂಡು ನಾವು ಅಂಬೇಡ್ಕರ್ ಸಂವಿಧಾನವನ್ನು ಬದಲಿಸುತ್ತೇವೆ, ಅದಕ್ಕಾಗಿಯೇ ಬಂದಿರುವುದು ಎಂದಾಗ ಇಡೀ ದೇಶದ ಯಾವ ಬಿಜೆಪಿಗನೂ ಇದನ್ನ ಖಂಡಿಸಲಿಲ್ಲ. ಅಂತೆಯೇ ಕೆಂಪುಕೋಟೆಯ ಮೇಲೆ ಭಗವಾಧ್ವಜವನ್ನ ಮುಂದೆ ಹಾರಿಸುತ್ತೇವೆ ಎಂದು ಈಶ್ವರಪ್ಪ ಹೇಳಿದಾಗ ಯಾವ ಬಿಜೆಪಿ ’ದೇಶಪ್ರೇಮಿ’ಯೂ ಪ್ರತಿಹೇಳಲಿಲ್ಲ. ಅಲ್ಲಿ ಈಶ್ವರಪ್ಪನ ಮಾತು ಬಿಜೆಪಿಯ ಮಾತಾಗಿ ಉಳಿಯಿತು. ಹಾಗೆಯೇ ಮುತಾಲಿಕ್ ಮಾತೂ ಕೂಡ ಬಿಜೆಪಿಯ ಅಧಿಕೃತ ಘೋಷಣೆಯಿರಬಹುದೆಂದು ಚಿಂತಿಸುತ್ತಿರುವಾಗ, ರಂಜಾನ್ ಸಮಯದಲ್ಲಿಯೇ ಈಶ್ವರಪ್ಪನವರ ದುನಿಯ ಖತಂ ಆಯಿತಂತಲ್ಲಾ, ಥೂತ್ತೇರಿ.
*****
ಬಿಜೆಪಿಯೊಳಗಿನ ಗರ್ಭಗುಡಿಯ ಸಂಸ್ಕೃತಿ ಕಾರ್ಯಾಚರಣೆಗಳ ಸೂಚನೆ ಸಂತೋಷ್ ಮುಖಾಂತರ ಹೊರಬರುವ ಕಾರಣಕ್ಕೆ ಸಂಘಿಗಳಲ್ಲದ ಬಿಜೆಪಿ ಜನನಾಯಕರ ಜಂಘಾಬಲವೇ ಉಡುಗಿ ಹೋಗಿದೆಯಂತಲ್ಲಾ. ಬಿಜೆಪಿ ಗರ್ಭಗುಡಿಯ ಮಹಿಮೆ ತಿಳಿಯದವರು ದೀಢಿರಂಥ ಬಿಜೆಪಿ ಸೇರಿ, ಅಲ್ಲಿನ ಪಡಸಾಲೆಯಲ್ಲಿ ಕುಳಿತು ಗರ್ಭಗುಡಿಯಲ್ಲಿನ ಪಿಸುಮಾತಿಗೆ ಹೆದರಿ ಓಡಿ ಬಂದ ನೂರಾರು ಉದಾಹರಣೆಗಳಿವೆ. ಆ ಗರ್ಭಗುಡಿಯ ಪ್ರವೇಶ ಪಡೆಯಬೇಕಾದರೆ ಟೋಪಿ ಲಾಟಿ ಗಾಳಿಯಾಡುವ ಚಡ್ಡಿಯೊಂದಿಗೆ, ಸುರಕ್ಷಿತವಾದ ಮೈದಾನದಲ್ಲಿ ನಿಂತು, ’ನಮಸ್ತೇ ಸದಾವತ್ಸಲೇ ಮಾತೃಭೂಮಿ’ ಎಂದು ಎದೆ ಮೇಲೆ ಕೈಯಿಟ್ಟು ಭಗವಾಧ್ವಜಕ್ಕೆ ವಂದಿಸಿರಬೇಕು. ಅದೂ ವರ್ಷಾನುಗಟ್ಟಲೆ ನಡೆಯಬೇಕು. ಈ ಬೈಟಕ್‌ನ ವಿಷಯ ಕರಗತವಾದ ಮೇಲೆಯೇ ಗರ್ಭಗುಡಿಯ ಪ್ರವೇಶ ದಕ್ಕುವುದು. ಸದರಿ ಸರಕಾರದಲ್ಲಿ ಕಾಂಗ್ರೆಸ್ ದಳದಿಂದ ತುಡುಗು ದನಗಳು ಓಡಿಬಂದು ಮೈಮೇಲೆ ನೆದರಿಲ್ಲದೆ ಮೇಯುತ್ತಿವೆ. ಅವುಗಳನ್ನೆಲ್ಲಾ ಪಿಂಜರಾಪೋಲು ದೊಡ್ಡಿಗೆ ದೂಡಬೇಕಾದರೆ ಕೆಲವು ಮಾನದಂಡಗಳನ್ನ ಕಿಡಿಮಾಡಿಕೊಳ್ಳಬೇಕಾಗುತ್ತದೆ. ಅಂತಹ ಹತಾರಗಳನ್ನಾಗಲೇ ಮಸೆಯುತ್ತಿರುವ ಸಂತೋಷ್ ಎಂಬ ಸಂಘವೀರನ ಮಾತಿನಿಂದ ಮುಮಂ ಬಸವರಾಜ ಬೊಮ್ಮಾಯಿ ಬಸವಳಿದು ಹೋಗಿದ್ದಾರಂತಲ್ಲಾ, ಥೂತ್ತೇರಿ.
*****
ಪಿಎಸ್‌ಐ ಅಕ್ರಮದಿಂದ ರಾಜ್ಯದ ಬಿಜೆಪಿ ಸರಕಾರ ಭ್ರಷ್ಟತೆಯಲ್ಲಿ ನೂರು ಪರಸೆಂಟ್ ಗಡಿಯನ್ನು ಮುಟ್ಟಿತಂತಲ್ಲಾ. ಕರ್ನಾಟಕದಲ್ಲಿ ಯಾವುದೂ ನ್ಯಾಯವಾಗಿ ಸಿಗುವುದಿಲ್ಲ, ಎಲ್ಲದಕ್ಕೂ ಲಂಚ ಕೊಡಲೇಬೇಕೆಂಬ ನಿಯಮ ಜಾರಿಯಾದುದಕ್ಕೆ ಕಾರಣ ಹುಡುಕುತ್ತ ಹೋದರೆ, ಒಂದು ಕಾಲದಲ್ಲಿ ಅಷ್ಟೋಇಷ್ಟೋ ಪ್ರಾಮಾಣಿಕವಾಗಿದ್ದ ಅಂದರೆ, ಎ.ಕೆ ಸುಬ್ಬಯ್ಯ ಶಿವಪ್ಪನವರ ಕಾಲದಲ್ಲಿ ಇದ್ದದ್ದಕ್ಕಿಂತ ಇಂದು ಭ್ರಷ್ಟತೆಯ ವಿಷವೃಕ್ಷವಾಗಿ ಬೆಳೆಯಲು ಪಾರ್ಟಿಯ ಅಜೆಂಡಾವೆ ಕಾರಣವಂತಲ್ಲಾ. ಅಂದು ನಾಗಪುರದಿಂದ ಹೊರಟ ಆದೇಶದಂತೆ ಬಿಜೆಪಿ ಈ ದೇಶದಲ್ಲಿ ಬಲಿಷ್ಟವಾಗಿ ಬೇರೂರಬೇಕಾದರೆ ಹಣ ಬೇಕು. ಆ ಹಣ ಸರಕಾರದ ಖಜಾನೆಯಿಂದಲೇ ಬರಬೇಕು ಮತ್ತು ಸರಕಾರದ ಕಾರ್ಯಕ್ರಮಗಳಿಂದಲೇ ಕಟಾವಾಗಬೇಕು, ಹುದ್ದೆ ನೀಡುವಲ್ಲಿ ವಸೂಲಾಗಬೇಕು, ಆದ್ದರಿಂದ ಪಾರ್ಟಿಯ ಕಾರ್ಯಕರ್ತರು ಪಾರ್ಟಿಯವರ ಮೇಲೆ ಭ್ರಷ್ಟತೆ ಆಪಾದನೆ ಮಾಡಬಾರದು, ತಮ್ಮ ಪಾಲನ್ನು ಪ್ರಸಾದದಂತೆ ಪಡೆದು ಪಾರ್ಟಿ ಬೆಳೆಯಲು ಅನುಕೂಲ ಮಾಡಿಕೊಡಬೇಕು ಎಂಬ ಮೌಖಿಕ ಕಾನೂನು ಜಾರಿಯಾದ್ದುದರಿಂದ ಅವ್ಯಾಹತವಾಗಿ ಸರಕಾರದಿಂದಲೇ ಭ್ರಷ್ಟತೆ ನಡೆದಿದ್ದರಿಂದ, ಸದ್ಯಕ್ಕೆ ಕರ್ನಾಟಕ ಹಂಡ್ರೆಡ್ ಪರಸೆಂಟ್ ಭ್ರಷ್ಟತೆಯಲ್ಲಿ ಮುಳುಗಿದೆಯಂತಲ್ಲಾ, ಥೂತ್ತೇರಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಈಗ ಎತ್ತಿಗೆ ಲಾಳ ಕಟ್ಟೋರು ಯಾರು ಅಂತ