ಮೇ 16ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ, 32 ವರ್ಷದ ನಿತ್ಯಾ ಅವರು ವಾಯುವ್ಯ ದೆಹಲಿಯ ರೋಹಿಣಿ ಪ್ರದೇಶದಲ್ಲಿನ ತನ್ನ ಅತ್ತೆಯ ಮನೆಯಿಂದ ಹೊರಬರುತ್ತಾರೆ. “ನನಗೆ ಅವಕಾಶ ಸಿಕ್ಕ ಕ್ಷಣ, ನಾನು ನನ್ನ ಮಗನ ಕೈ ಹಿಡಿದು ಓಡಿಬಂದೆ” ಎನ್ನುವ ನಿತ್ಯಾ, “ನಾನು ಇನ್ನೂ ಇದನ್ನೆಲ್ಲ ಸಹಿಸಲು ಸಾಧ್ಯವಿಲ್ಲ” ಎಂದು ಹೇಳುತ್ತಾರೆ.
ಕೆಲವೇ ಕಿಲೋಮೀಟರ್ ದೂರದಲ್ಲಿರುವ ತನ್ನ ಪೋಷಕರ ಮನೆಗೆ ಬಂದ ತಕ್ಷಣ ಬೇಗಂಪುರ ಪೊಲೀಸ್ ಠಾಣೆಗೆ ತೆರಳಿದ ನಿತ್ಯಾ, “ನನ್ನ ಅತ್ತೆಯ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಪದೇ ಪದೇ ಅತ್ಯಾಚಾರಕ್ಕೊಳಗಾಗಿದ್ದೇನೆ” ಎಂದು ದೂರು ನೀಡುತ್ತಾರೆ.
ನಿತ್ಯಾ ಅವರು ನೀಡಿದ ದೂರಿನ ಆಧಾರದ ಮೇಲೆ, ಆಕೆಯ ಗಂಡ, ಮೈದುನ, ಮಾವ ಮತ್ತು ಅತ್ತೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ ಮತ್ತು ಜೀವ ಹಾನಿಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ಆಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸೇವ್ ಇಂಡಿಯಾ ಫೌಂಡೇಶನ್‌ನ ಸಂಸ್ಥಾಪಕ ಪ್ರೀತ್ ಸಿಂಗ್‌ನನ್ನು ವಿವಾಹವಾದವರು ನಿತ್ಯಾ. ದ್ವೇಷ ಭಾಷಣಗಳಿಗೆ ಹೆಸರಾದ ಯತಿ ನರಸಿಂಗಾನಂದ ಮತ್ತು ಸುದರ್ಶನ್ ನ್ಯೂಸ್‌ನ ಸುರೇಶ್ ಚವ್ಹಾಂಕೆ ಅವರನ್ನು ಒಳಗೊಂಡ ಹಿಂದೂ ಮಹಾಪಂಚಾಯತ್‌ನಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಇದೇ ಸೇವ್ ಇಂಡಿಯಾ ಫೌಂಡೇಷನ್! ಕಳೆದ ವರ್ಷ ಆಗಸ್ಟ್‌ನಲ್ಲಿ ಜಂತರ್ ಮಂತರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದ್ವೇಷ ಪ್ರಚೋದಿತ ಭಾಷಣ ಮಾಡಿದ ಪ್ರಕರಣದಲ್ಲಿ ಸಿಂಗ್ ಜಾಮೀನಿನ ಮೇಲೆ ಹೊರಗಿದ್ದಾರೆ.
ಸಿಂಗ್ ಮತ್ತು ಅವರ ತಂದೆ ಸುಂದರ್ ಪಾಲ್ ಈಗ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಅರೆಸ್ಟ್ ವಾರಂಟ್ ಹೊರಡಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಎಂದು ತನಿಖಾಧಿಕಾರಿ ಮೀನಾಕ್ಷಿ ಸಿಂಗ್ ಮಾಹಿತಿ ನೀಡಿದ್ದಾರೆ.

“ನಾವು ಅವರನ್ನು ಸಂಪರ್ಕಿಸಲು ಸಾಧ್ಯವಾಗದ ಕಾರಣ ಇನ್ನೂ ಯಾರನ್ನೂ ವಿಚಾರಣೆಗೆ ಒಳಪಡಿಸಿಲ್ಲ. ಅವರು ತನಿಖೆಗೆ ಸಹಕರಿಸುತ್ತಾರೆಂದು ನಾನು ಖಚಿತಪಡಿಸಿಕೊಳ್ಳುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿರಿ: ಮಹಿಳೆ ತನ್ನ ತಲೆ ಮುಚ್ಚುವುದು, ಮುಚ್ಚದೇ ಇರುವುದು ಅವರ ಆಯ್ಕೆ; ಅದನ್ನು ಪ್ರಶ್ನಿಸದಿರಿ: ಕವಿತಾ…
ಪ್ರೀತ್ ಸಿಂಗ್‌ನ ಸಹೋದರ ಯೋಗೇಂದರ್ ಮತ್ತು ಆತನ ತಾಯಿ ಹೇಮಲತಾ ಅವರು ಮೇ 25ರಂದು ನಿರೀಕ್ಷಣಾ ಜಾಮೀನು ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಿತ್ಯಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಪ್ರಾಥಮಿಕ ವರದಿಯ ಪ್ರಕಾರ ನಿತ್ಯಾ ಆಂತರಿಕ ವೈದ್ಯಕೀಯ ಪರೀಕ್ಷೆಗೆ ಸಿದ್ಧರಿಲ್ಲ. ಆದರೆ ನಿತ್ಯಾ ಅವರ ತೋಳುಗಳು, ಎದೆ ಮತ್ತು ಬೆನ್ನಿನ ಮೇಲೆ ಗಾಯಗಳನ್ನು ಗುರುತಿಸಲಾಗಿದೆ. ಫೋರೆನ್ಸಿಕ್ ವರದಿ ಬಂದ ನಂತರ ಪರೀಕ್ಷಕರು ತಮ್ಮ ಅಭಿಪ್ರಾಯಗಳನ್ನು ಹೇಳಲಿದ್ದಾರೆ.
‘ನಾನು ಬೇಡ ಎಂದಾಗಲೆಲ್ಲಾ ಅವರು ನನ್ನನ್ನು ಹೊಡೆಯುತ್ತಿದ್ದರು’ ಎಂದಿದ್ದಾರೆ ನಿತ್ಯಾ.
ಪ್ರೀತ್ ಸಿಂಗ್ 2009ರಲ್ಲಿ ನಿತ್ಯಾ ಅವರನ್ನು ವಿವಾಹವಾಗುತ್ತಾನೆ. ಆದರೆ ಆಕೆ 2013ರಲ್ಲಿ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ ಆತ ಹೊರ ನಡೆಯುತ್ತಾನೆ. “ನೀನು ಇನ್ನು ನನಗೆ ಬೇಡ” ಎನ್ನುತ್ತಾನೆ ಪ್ರೀತ್. ತನ್ನ ಅತ್ತೆಯೊಂದಿಗೆ ನಿತ್ಯಾ ಉಳಿದುಕೊಳ್ಳುತ್ತಾರೆ. ಕಳೆದ ಡಿಸೆಂಬರ್‌ನಲ್ಲಿ ವಿಚ್ಛೇದನಕ್ಕೆ ಆತ ಅರ್ಜಿ ಸಲ್ಲಿಸಿದ್ದನು.
“ಕಳೆದ ಮೂರು ವರ್ಷಗಳಿಂದ ತನ್ನ ಪೋಷಕರ ಬಳಿಗೆ ಹೋಗಲು ಅಥವಾ ನೆರೆಹೊರೆಯವರೊಂದಿಗೆ ಮಾತನಾಡಲು ಪ್ರೀತ್ ನನ್ನನ್ನು ಬಿಡುತ್ತಿರಲಿಲ್ಲ” ಎಂದು ನಿತ್ಯಾ ಆರೋಪಿಸಿದ್ದಾರೆ.
ಕೋವಿಡ್ ಲಾಕ್‌ಡೌನ್ ಪ್ರಾರಂಭವಾದಾಗ, ಏಪ್ರಿಲ್‌ನಲ್ಲಿ ಸಿಂಗ್ ಮನೆಗೆ ವಾಪಸ್ ಬರುತ್ತಾನೆ. “ಆಗ ಅವನು ನನ್ನನ್ನು ಬಲವಂತ ಪಡಿಸಿದನು” ಎಂದು ನಿತ್ಯಾ ‘ನ್ಯೂಸ್‌ಲಾಂಡ್ರಿ’ಗೆ ತಿಳಿಸಿದ್ದಾರೆ. “ಇದು ತನ್ನ ಗಂಡನ ಹಕ್ಕು ಎಂದು ಭಾವಿಸಿ ಮೌನವಾಗಿದ್ದೆ” ಎಂದು ಹೇಳುತ್ತಾರೆ ನಿತ್ಯಾ.
ಕೆಲವು ವಾರಗಳ ನಂತರ, ಪ್ರೀತ್ ಒಂದು ರಾತ್ರಿ ತನ್ನ ಸ್ನೇಹಿತನನ್ನು ಕರೆದುಕೊಂಡು ಮನೆಗೆ ಬರುತ್ತಾನೆ. “ಅವರು ನನ್ನ ಮಗನನ್ನು ಕೋಣೆಯಿಂದ ಹೊರಗೆ ಕಳುಹಿಸಿದರು. ಪ್ರೀತ್ ಕೊಠಡಿಯಲ್ಲೇ ಉಳಿದುಕೊಂಡ. ಆತನ ಸ್ನೇಹಿತ ಕೂಡ ನನ್ನ ಮೇಲೆ ಅತ್ಯಾಚಾರವೆಸಗಿದ” ಎಂದಿದ್ದಾರೆ ಸಂತ್ರಸ್ತೆ.
ಇದನ್ನೂ ಓದಿರಿ: ಮತ್ತೆ ನಾಲಗೆ ಹರಿಬಿಟ್ಟ ಯತಿ ನರಸಿಂಗಾನಂದ; ಎಫ್‌ಐಆರ್
ನಂತರದ ದಿನಗಳಲ್ಲಿ ನಡೆದ ಘಟನೆ. ನಿತ್ಯಾ ಬಟ್ಟೆಗಳನ್ನು ಒಣಗಿಸಲು ಪ್ರತಿ ಬಾರಿ ಟೆರೇಸ್‌ಗೆ ಹೋದಾಗ, ಆಕೆಯ ಮಾವ ನಿತ್ಯಾಳನ್ನು ಹಿಂಬಾಲಿಸುತ್ತಿದ್ದನು.
“ಪ್ರೀತ್ ತನ್ನ ಸ್ನೇಹಿತನನ್ನು ಕರೆತರುತ್ತಿದ್ದನು. ನನ್ನನ್ನು ಲಾಭ ಮಾಡಿಕೊಳ್ಳಬಹುದೆಂದು ಊಹಿಸಿದ್ದನು” ಎನ್ನುತ್ತಾರೆ ನಿತ್ಯಾ.
ಇದನ್ನೆಲ್ಲಾ ನೋಡುತ್ತಿದ್ದ ಪ್ರೀತ್‌ನ ಕಿರಿಯ ಸಹೋದರ ಯೋಗೇಂದರ್ ಕೂಡ ತನ್ನ ಮೇಲೆ ಅತ್ಯಾಚಾರ ಎಸಗಲು ಪ್ರಾರಂಭಿಸಿದನು ಎಂದು ನಿತ್ಯಾ ಆರೋಪಿಸಿದ್ದಾರೆ. ಆದರೆ ಈ ನಿರ್ದಿಷ್ಟ ಆರೋಪವು ಬೇಗಂಪುರ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿಲ್ಲ.
“ನಿತ್ಯಾ ತಮ್ಮ ಹೇಳಿಕೆಯನ್ನು ದಾಖಲಿಸುವ ಆತುರದಲ್ಲಿ, ಯೋಗೇಂದರ್ ಸಿಂಗ್ ತನ್ನ ಮೇಲೆ ಅತ್ಯಾಚಾರವೆಸಗುತ್ತಿದ್ದನೆಂದು ಹೇಳುವುದನ್ನು ಮರೆತಿದ್ದಾಳೆ. ಆದರೆ ಯೋಗೇಂದರ್, ನಿತ್ಯಾ ಅವರನ್ನು ಬೆಲ್ಟ್‌ನಿಂದ ಹೊಡೆಯುತ್ತಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ” ಎಂದು ಸಂತ್ರಸ್ತೆಯ ವಕೀಲ ರಘುವೀರ್ ಸರನ್ ಹೇಳಿದ್ದಾರೆ. ಪ್ರೀತ್‌ನ ತಾಯಿ ಮತ್ತು ಸಹೋದರ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.
“ನಾನು ಬೇಡ ಎಂದಾಗಲೆಲ್ಲಾ ಅವರು ನನ್ನನ್ನು ಹೊಡೆಯುತ್ತಿದ್ದರು. ಯೋಗೇಂದ್ರ ಅತ್ಯಂತ ಕೆಟ್ಟವನು. ಅವನು ನನ್ನನ್ನು ಕೋಣೆಯಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಹೊಡೆಯುತ್ತಿದ್ದನು’’ ಎಂದು ಆರೋಪಿಸಿದ್ದಾರೆ ನಿತ್ಯಾ.
ಮೂರು ತಿಂಗಳ ಹಿಂದೆ, ನಿತ್ಯಾ ಅವರ 11 ವರ್ಷದ ಮಗ ತನ್ನ ತಾಯಿಯ ದೇಹದ ಮೇಲಿನ ಗುರುತುಗಳನ್ನು ಗಮನಿಸಿ ಅಜ್ಜಿಗೆ (ನಿತ್ಯಾ ಅವರ ಅತ್ತೆಗೆ) ಹೇಳುತ್ತಾನೆ. “ಎಲ್ಲದರ ಬಗ್ಗೆ ತಿಳಿದ ನನ್ನ ಅತ್ತೆ, ನಮಗೆ ಚಾಕು ತೋರಿಸಿ ಬೆದರಿಸಿದರು. ಯಾರಿಗಾದರೂ ಹೇಳಿದರೆ, ಮಗುವನ್ನು ಕೊಲ್ಲುತ್ತೇನೆ ಎಂದರು” ಎನ್ನುತ್ತಾರೆ ನಿತ್ಯಾ.
ಇದನ್ನೂ ಓದಿರಿ: ಸಂವಿಧಾನ, ಸುಪ್ರೀಂ ಕೋರ್ಟ್ ಮೇಲೆ ನಂಬಿಕೆ ಇಲ್ಲ: ಮತ್ತೆ ನಾಲಿಗೆ ಹರಿಬಿಟ್ಟ ಯತಿ ನರಸಿಂಗಾನಂದ
ಪ್ರೀತ್ ಸಿಂಗ್ ಅವರ ಹಿರಿಯ ಸಹೋದರ ಜೀತ್ ಸಿಂಗ್ ಅವರನ್ನು ಮದುವೆಯಾಗಿ ಅದೇ ಮನೆಯಲ್ಲಿ ವಾಸಿಸುತ್ತಿದ್ದ ತನ್ನ ಸಹೋದರಿಯಲ್ಲಿ ಎಲ್ಲವನ್ನೂ ಹೇಳಿಕೊಳ್ಳಲು ನಿತ್ಯಾ ನಿರ್ಧರಿಸಿದ್ದರು. “ನನಗೆ ಏನೂ ತಿಳಿದಿರಲಿಲ್ಲ. ಏಕೆಂದರೆ ರಾತ್ರಿ ವೇಳೆ ನಾನು, ನನ್ನ ಮಕ್ಕಳು ಮತ್ತು ಪತಿಯೊಂದಿಗೆ ಕೋಣೆಯಲ್ಲಿ ಮಲಗಿದ್ದಾಗ ಅಥವಾ ನಿತ್ಯಾ ಒಬ್ಬಂಟಿಯಾಗಿರುವಾಗ ಟೆರೇಸ್‌ನಲ್ಲಿ ಈ ಘಟನೆಗಳು ನಡೆಯುತ್ತಿದ್ದವು” ಎನ್ನುತ್ತಾರೆ ನಿಶಾ.
“ನನ್ನ ಸಹೋದರಿ ಒಬ್ಬಳೇ ಎಲ್ಲಿಗೂ ಹೋಗಲು ಹೊರಗೆ ಬರುವಂತಿರಲಿಲ್ಲ” ಎಂದು ನಿಶಾ ಹೇಳಿದ್ದಾರೆ. “ಏನಾಗುತ್ತಿದೆ ಎಂದು ನಾನು ನನ್ನ ಪತಿಗೆ ಕೇಳಿದಾಗ, ಅವರು ನನಗೆ ಕಪಾಳಕ್ಕೆ ಹೊಡೆದರು. ನಾವು ಅದರ ಬಗ್ಗೆ ಮತ್ತೆ ಮಾತನಾಡಬಾರದು ಎಂದು ಹೇಳಿದರು” ಎಂದಿದ್ದಾರೆ.
ಮನೆ ಬಿಟ್ಟು ಹೊರ ಬಂದು ಕೇಸು ದಾಖಲು
ಮೇ 16ರಂದು ನಿತ್ಯ ಹೊರಬರಲು ನಿರ್ಧರಿಸಿದಾಗ ತನ್ನ ಸಹೋದರಿಗೆ ಹೇಳಿರಲಿಲ್ಲ. “ಅವಳು ನನ್ನನ್ನು ಇಲ್ಲಿ ಒಬ್ಬಂಟಿಯಾಗಿ ಬಿಟ್ಟಿದ್ದಾಳೆ ಎಂದು ನಾನು ಹೆದರುತ್ತಿದ್ದೆ. ಆದರೆ ಅವಳು ತಪ್ಪಿಸಿಕೊಳ್ಳಬೇಕೆಂದು ನನಗೆ ತಿಳಿದಿದೆ” ಎನ್ನುತ್ತಾರೆ ನಿಶಾ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಅವಕಾಶ ಸಿಕ್ಕಾಗ ತಪ್ಪಿಸಿಕೊಳ್ಳದಿದ್ದರೆ ನಾನು ಆ ಮನೆಯಿಂದ ಜೀವಂತವಾಗಿ ಹೊರಬರುತ್ತಿರಲಿಲ್ಲ” ಎನ್ನುತ್ತಾರೆ ನಿತ್ಯಾ.
ಕಳೆದ 10 ದಿನಗಳಲ್ಲಿ ಸಿಂಗ್ ಅವರ ಸ್ನೇಹಿತರಿಂದ ತನಗೆ ಬೆದರಿಕೆಗಳು ಬಂದಿದ್ದು, ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹೇರಿದ್ದಾರೆ ಎಂದು ನಿತ್ಯಾ ಆರೋಪಿಸಿದ್ದಾರೆ. “ಅವರು ಬೈಕುಗಳಲ್ಲಿ ಬರುತ್ತಾರೆ” ಎಂದಿದ್ದಾರೆ. “ನಾನು ಈಗ ಒಬ್ಬಂಟಿಯಾಗಿ ಎಲ್ಲಿಯೂ ಹೋಗುವುದಿಲ್ಲ. ನನ್ನ ಕಣ್ಣೆದುರಲ್ಲೇ ನನ್ನ ಮಗನನ್ನು ಇರಿಸಿಕೊಂಡಿದ್ದೇನೆ. ನನ್ನ ಸಹೋದರಿಯ ಸ್ಥಿತಿ ನೆನೆದು ನನಗೆ ಭಯವಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಿಂಗ್ ಅವರ ಫೋನ್ ಸ್ವಿಚ್ ಆಫ್ ಆಗಿದೆ.
ಸೇವ್ ಇಂಡಿಯಾ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಮಾರ್ ತ್ಯಾಗಿ ಅವರು ಫೋನ್ ಸ್ವೀಕರಿಸಿದರೂ ಪ್ರೀತ್ ಸಿಂಗ್ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ಸೇವ್ ಇಂಡಿಯಾ ಫೌಂಡೇಶನ್‌ನೊಂದಿಗೆ ಕೆಲಸ ಮಾಡುವ ವಕೀಲ ನೀರಜ್ ಚೌಹಾಣ್ ಕೂಡ ಪ್ರತಿಕ್ರಿಯಿಸದಿರಲು ನಿರ್ಧರಿಸಿದ್ದಾರೆ.
ಪ್ರೀತ್ ಸಿಂಗ್ ತನ್ನ ಹೆಂಡತಿ ಮತ್ತು ಪೋಷಕರನ್ನು ತೊರೆದು ಏಳು ವರ್ಷಗಳ ನಂತರ, ಆತ ಕಷ್ಟಪಟ್ಟು ಮನೆಗೆ ಹಿಂತಿರುಗಿದನು ಎಂದು ಅವರ ಸಹೋದರ ಜೀತ್ ಕಳೆದ ತಿಂಗಳು ನ್ಯೂಸ್‌ಲಾಂಡ್ರಿಗೆ ತಿಳಿಸಿದ್ದನು. “ಅವನು ಹುಚ್ಚನಾಗಿರಲು ಬಯಸಿದರೆ ನಾವು ಏನು ಮಾಡಲು ಸಾಧ್ಯ? ನಾವು ಅವನೊಂದಿಗೆ ಮಾತನಾಡಲು ಪ್ರಯತ್ನಿಸಿದ್ದೇವೆ. ಆದರೆ ಆತ ಕಿವಿಗೊಡುವುದಿಲ್ಲ” ಎಂದಿದ್ದಾನೆ.
ಒಂದು ತಿಂಗಳ ಹಿಂದೆ, ನ್ಯೂಸ್‌ಲಾಂಡ್ರಿ ಜಾಲತಾಣವು ಹಿಂದೂ ಮಹಾಪಂಚಾಯತ್ ವಿವಾದದ ಕುರಿತ ವರದಿಗಾಗಿ ಪ್ರೀತ್ ಸಿಂಗ್‌ನನ್ನು ಭೇಟಿಯಾದಾಗ, “ತಾನು ಮದುವೆಯಾಗಿಲ್ಲ. ಸಾಮಾನ್ಯ ಜೀವನವನ್ನು ನಡೆಸಲು ನಾನು ಎಂದಿಗೂ ಉದ್ದೇಶಿಸಿಲ್ಲ. ಕುಟುಂಬ ಮತ್ತು ಸಂಬಂಧಗಳಲ್ಲಿ ಸಿಲುಕುವುದಕ್ಕೆ ಬಯಸುವುದಿಲ್ಲ” ಎಂದಿದ್ದನು.
ಟಿಪ್ಪಣಿ: ವ್ಯಕ್ತಿಗಳ ಗುರುತುಗಳನ್ನು ರಕ್ಷಿಸಲು ಸಂತ್ರಸ್ತೆ ಸೇರಿದಂತೆ ಕೆಲವು ಹೆಸರುಗಳನ್ನು ವರದಿಯಲ್ಲಿ ಬದಲಾಯಿಸಲಾಗಿದೆ.
ವರದಿ: ನ್ಯೂಸ್ ಲಾಂಡ್ರಿ


