Homeಕರ್ನಾಟಕಮಾಧ್ಯಮಗಳ ಬುಲ್ಡೋಜರ್ ಸಂಸ್ಕೃತಿ

ಮಾಧ್ಯಮಗಳ ಬುಲ್ಡೋಜರ್ ಸಂಸ್ಕೃತಿ

- Advertisement -
- Advertisement -

ದಿ.27-28, ಮೇ 2022ರಂದು ದಾವಣಗೆರೆಯಲ್ಲಿ 8ನೇ ಮೇ ಸಾಹಿತ್ಯ ಸಮ್ಮೇಳನ ಜರುಗಿತು. ಲಡಾಯಿ ಪ್ರಕಾಶನ, ಕವಲಕ್ಕಿ ಪ್ರಕಾಶನ ಮತ್ತಿತರ ಪ್ರಗತಿಪರ ಗೆಳೆಯರು ನಡೆಸಿಕೊಂಡು ಬರುತ್ತಿರುವ ಲಿಟ್‌ಫೆಸ್ಟ್ ಇದು. ಇದರ ವೈಶಿಷ್ಟ್ಯವೇನೆಂದರೆ ಯಾವುದೇ ಕಾರ್ಪೊರೆಟ್ ಸಂಸ್ಥೆಗಳನ್ನು ಸಂಪರ್ಕಿಸದೆ, ಅವುಗಳಿಗೆ ಜಾಹಿರಾತು ನೀಡದೆ ತಮ್ಮ ಆಸಕ್ತ ಓದುಗ ವರ್ಗದಿಂದ ಮತ್ತು ಗೆಳೆಯರ ಬಳಗದಿಂದ ಚಂದಾ ಎತ್ತಿ ನಡೆಸುವ ಬೌದ್ಧಿಕ ಕೂಟ ಅದು. ಸಾಮಾಜಿಕ ಕಳಕಳಿಯುಳ್ಳ ಸಾಹಿತ್ಯಾಸಕ್ತರು ಮತ್ತು ಹೋರಾಟಗಾರರು ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ. ಇಂಥ ಒಂದು ಅಪರೂಪದ ಸಮ್ಮೇಳನವನ್ನು ಏರ್ಪಡಿಸುವ ಸಂಘಟಕರ ಪರಿಶ್ರಮ ಮತ್ತು ಕಾಳಜಿಯನ್ನು ಮೆಚ್ಚಲೇಬೇಕು. ಈ ಬಾರಿ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ನಾನು ಅಲ್ಲಿ ಪ್ರಸ್ತಾಪಿಸಿದ ಕೆಲವು ಮಾತುಗಳನ್ನು ಹಂಚಿಕೊಳ್ಳಬೇಕೆನಿಸುತ್ತಿದೆ.

ಕಳೆದ ಎಂಟು ವರ್ಷಗಳಲ್ಲಿ ಪ್ರಜಾಪ್ರಭುತ್ವ ಶಿಥಿಲಗೊಂಡಿದೆ ಮತ್ತು ಅವಹೇಳನಕ್ಕೊಳಗಾಗಿದೆ ಎಂಬುದಕ್ಕೆ ಪ್ರಸ್ತುತ ಸಂದರ್ಭದಲ್ಲಿ ಅನೇಕ ಉದಾಹರಣೆಗಳು ಕಣ್ಣಿಗೆ ರಾಚುತ್ತವೆ. ಮೊದಲಿನಿಂದಲೂ ಜಾತಿವ್ಯವಸ್ಥೆಯ ಸಮಾಜದಲ್ಲಿ ಪ್ರಜಾಪ್ರಭುತ್ವ ಭದ್ರನೆಲೆ ಕಾಣಲು ಸಾಧ್ಯವಾಗದಿರುವುದು ಬೇರೆಯ ಮಾತು. ಆದರೆ ಈಗ ಸಾಮಾಜಿಕ ಮೌಲ್ಯಗಳು ಅವನತಿಯ ಹಾದಿ ಹಿಡಿದಿವೆ. ಅದಕ್ಕೆ ಸರ್ಕಾರ ಮತ್ತು ಸಂಸ್ಥೆಗಳು ಒತ್ತಾಸೆಯಾಗಿ ನಿಂತಿವೆ. ವ್ಯವಸ್ಥೆ, ಮಾನವೀಯತೆಯನ್ನೆ ಕಳೆದುಕೊಂಡಿದ್ದು ಶೋಷಿತರು, ಬಡವರು, ಅಲ್ಪಸಂಖ್ಯಾತರು ಅನೇಕ ವಿಧದಲ್ಲಿ ಹಿಂಸೆ ಪಡುವುದನ್ನು ನೋಡಿ ವಿಕೃತಾನಂದ ಪಡೆಯುತ್ತಿದೆ. ಇತ್ತೀಚೆಗೆ ಒಂದಾದಮೇಲೊಂದರಂತೆ ಕೆಲವು ಬಲಪಂಥೀಯ ಸಂಘಟನೆಗಳು ಎತ್ತಿಕೊಂಡ ವಿಷಯಗಳು ಸರ್ವಜನಾಂಗದ ಶಾಂತಿಯ ತೋಟವೆಂದು ಭಾವಿಸಿದ್ದ ಕರ್ನಾಟಕದ ಚಹರೆಗೆ ಮಸಿ ಬಳಿಯುವಂತಿದ್ದವು. ಹಿಜಾಬ್, ಹಲಾಲ್, ಆಝಾನ್ ಮೇಲಿನ ನಿರ್ಬಂಧ, ದೇವಸ್ಥಾನದ ಆವರಣದಲ್ಲಿ ಮುಸ್ಲಿಮರು ವ್ಯಾಪಾರ ಮಾಡುವುದು ಬೇಡ, ಅವರ ಆಟೋ, ಟ್ಯಾಕ್ಸಿಗಳಲ್ಲಿ ಹಿಂದೂಗಳು ಹೋಗಬಾರದು; ಇವೆಲ್ಲ ಮುಸ್ಲಿಮರನ್ನು ಹಿಂಸಿಸುವ ಮಾರ್ಗಗಳು. ಇದು ಕ್ರೌರ್ಯದ ಪರಾಕಾಷ್ಠೆ. ಇಂತಹ ಒಂದು ವಿಷಯ ಸಿಗುತ್ತಿದ್ದಾಗಲೇ ದೃಶ್ಯ ಮಾಧ್ಯಮಗಳು ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಸ್ವಘೋಷಿತ ಚಿಂತಕರನ್ನು ಕರೆಸಿ ಗಂಟೆಗಟ್ಟಲೆ ಚರ್ಚೆಗಳನ್ನು ಆಯೋಜಿಸುತ್ತವೆ. ಮತ್ತೆಮತ್ತೆ ಮರುಪ್ರಸಾರ ಮಾಡುತ್ತವೆ. ಅವುಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುವ ಮತ್ತು ಫಾರ್ವರ್ಡ್‌ಗಳ ಮೂಲಕ ಅಪಾರ ಜನರನ್ನು ತಲುಪುತ್ತವೆ. ಇದೇ ಸತ್ಯ ಇರಬಹುದು ಎಂಬ ಭ್ರಮೆಗೆ ಜನರು ತಲುಪಿಬಿಡುತ್ತಾರೆ. ಇದನ್ನು ’ಮಾಧ್ಯಮದ ಬುಲ್ಡೋಜರ್ ಸಂಸ್ಕೃತಿ’ ಅಂತ ಕರೆಯದೆ ಬೇರೆ ದಾರಿಯಿಲ್ಲ. ಒಬ್ಬ ವ್ಯಕ್ತಿಯ ದುಡಿಮೆಯನ್ನು ಕಿತ್ತುಕೊಳ್ಳುವುದು, ಒಂದು ಕುಟುಂಬದ ಅನ್ನವನ್ನು ಕಿತ್ತುಕೊಂಡಹಾಗೆ ಎಂಬ ಅರಿವಿರುವುದಿಲ್ಲವೆ? ಬದುಕಿನ ಅನ್ನ ಕಿತ್ತುಕೊಂಡು ಅವರನ್ನು ಅಕ್ಷರಶಃ ಬೀದಿಪಾಲು ಮಾಡುವುದು ವ್ಯವಸ್ಥೆಯ ಉದ್ದೇಶವಾಗಿದೆ. ಎಲ್ಲರನ್ನೂ ಸಮಾನವಾಗಿ ನೋಡಬೇಕಾದ ಸರ್ಕಾರಗಳು ಹೀಗೆ ಒಂದು ಕೋಮಿನ ಮೇಲೆ ಮುಗಿಬೀಳುವುದು ಬೇಲಿಯೇ ಎದ್ದು ಹೊಲ ಮೇಯುವ ಕೆಲಸ ಮತ್ತು ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಕ್ರಿಯೆ.

ಹಿಂದೂ ಮನಸ್ಸುಗಳು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳಬೇಕು. ನಮ್ಮ ಧರ್ಮ ನಮಗೇನು ಕಲಿಸಿಕೊಟ್ಟಿದೆ? ಎಂದು. ಇದು ಹಿಂದೂರಾಷ್ಟ್ರ. ಇಲ್ಲಿ ಜೀವಿಸುವ ಹಕ್ಕು ಹಿಂದೂಗಳಿಗೆ ಮಾತ್ರ ಇದೆ. ಆದ್ದರಿಂದ ಅವರ ಇಂಗಿತ ಆಶಯ (wishful thinking) ಮುಸ್ಲಿಮರೆಲ್ಲರನ್ನೂ ಹಿಂದೂ ಧರ್ಮಕ್ಕೆ ಮತಾಂತರ ಮಾಡಿಬಿಡುವುದು! ಮತ್ತೆ ಅವರು ಯಾವ ಜಾತಿಗೆ ಸೇರುತ್ತಾರೆ? ನಾಲ್ಕು ವರ್ಣಗಳ ಯಾವುದೇ ಜಾತಿಯಲ್ಲಿಯೂ ಸೇರ್ಪಡೆಗೆ ಅವಕಾಶವಿಲ್ಲ. ಹಾಗಾಗಿ ಅವರು ನಿರ್ವಾಹವಿಲ್ಲದೆ ಅಸ್ಪೃಶ್ಯರಾಗುತ್ತಾರೆ. ಆ ವರ್ಗ ಸತತವಾಗಿ ಬೇಡುವ ಸ್ಥಿತಿಯಲ್ಲಿರಬೇಕು. ಅವಮಾನಗಳನ್ನು ಅನುಭವಿಸುತ್ತಿರಬೇಕು. ಹಲವು ರಾಜ್ಯಗಳಲ್ಲಿ ಈಗ ಚಾಲ್ತಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಯ ಉದ್ದೇಶವೂ ಅದೇ. ನೀವು ಇದ್ದಲ್ಲೇ ಇರಿ ಅನ್ನುವುದು. ನಿಮಗೆ ಸ್ವಾಭಿಮಾನ, ಆತ್ಮಗೌರವ, ಸ್ವಧರ್ಮ ಏನೂ ಬೇಡ. ನಮ್ಮ ಗುಲಾಮರಾಗಿರಿ ಅನ್ನುವುದೇ ಅದರ ಮರ್ಮ. ಅದು ಸಂವಿಧಾನ ವಿರೋಧಿ ಅಂತ ತಿಳಿದೂ ಹಲವು ರಾಜ್ಯಗಳಲ್ಲಿ ಆ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ಇತ್ತೀಚೆಗೆ ಪಠ್ಯಪುಸ್ತಕಗಳ ಪರಿಷ್ಕರಣೆಯ ಕುರಿತು ಭುಗಿಲೆದ್ದಿದೆ. ಶೇ.3ರಷ್ಟು ಬ್ರಾಹ್ಮಣರು ಶೇ.97ರಷ್ಟು ಜನರು ಏನು ಓದಬೇಕು ಎಂದು ನಿರ್ಧರಿಸುವುದು ನ್ಯಾಯವೆ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಕೇಳುತ್ತಿದ್ದಾರೆ. ನನ್ನ ಪ್ರಕಾರ ಶೇ. ಒಂದರಷ್ಟು ಬ್ರಾಹ್ಮಣರು ನಮ್ಮನ್ನು ಆಳುತ್ತಿದ್ದಾರೆ ಅರ್ಥಾತ್ ವ್ಯವಸ್ಥೆಯ ಬಹುಪಾಲು ನಿರ್ಧಾರಗಳಿಗೆ ಕಾರಣಕರ್ತರಾಗಿದ್ದಾರೆ. ಶೇ.3ರಷ್ಟು ಇರುವ ಬ್ರಾಹ್ಮಣರಲ್ಲಿ ಮೂರನೇ ಒಂದು ಭಾಗ ಮಂದಿ ಪ್ರಗತಿಪರರು. ಅವರು ನಮ್ಮ ಜೊತೆಯಲ್ಲಿಯೆ ಇದ್ದಾರೆ. ಪ್ರತಿಗಾಮಿ ವಿಷಯಗಳು ಮುನ್ನಲೆಗೆ ಬಂದಾಗ ಮೊದಲು ಖಂಡಿಸುವವರು ಅವರೆ. ಇನ್ನು ಮೂರನೇ ಒಂದು ಭಾಗದಷ್ಟು ಜನ ತಟಸ್ಥರು ಅಂದರೆ ಬೇಲಿಯ ಮೇಲೆ ಮಧ್ಯೆ ಕುಳಿತವರು. ಉಳಿದವರು ಮೂಲಭೂತವಾದೀ ಬಲಪಂಥೀಯರು. ಇವರೇ ಆಳ್ವಿಕೆಯ ಸೂತ್ರಧಾರರು. ಅಷ್ಟೇ ಜನರಿದ್ದರೆ ಅವರನ್ನು ಎದುರುಗೊಳ್ಳುವುದು ಕಷ್ಟವಾಗುತ್ತಿರಲಿಲ್ಲ. ಮೇಲ್ಜಾತಿ ಶೂದ್ರರಲ್ಲಿ ಕೆಲವು ಅನುಕೂಲಸ್ಥ ಜಾತಿಗಳಿವೆ. ಅವರು ಊಳಿಗಮಾನ್ಯ ಜಮೀನ್ದಾರಿ ಜಾತಿಗಳಿರಬಹುದು, ಬಂಡವಾಳಶಾಹಿಗಳು, ಉದ್ಯಮಿಗಳಿರಬಹುದು. ಅವರಿಗೆ ಬ್ರಾಹ್ಮಣ್ಯ ಬಹಳ ಅನುಕೂಲಕರವಾಗಿದೆ. ಅಂದರೆ ಕಡಿಮೆ ಕೂಲಿಗೆ ಸಿಗುವ ಬಡವರು, ಕಾರ್ಮಿಕರು, ಸೇವಾಕಾಯಕ ಜಾತಿಗಳ ಉತ್ಪಾದಕ ಶಕ್ತಿಯಿಂದ ಇವರ ಸಂಪತ್ತು ವೃದ್ಧಿಯಾಗುತ್ತದೆ. ಅವರ ಅಸ್ತಿತ್ವ ಇವರಿಗೆ ಬಹಳ ಮುಖ್ಯ. ಆದ್ದರಿಂದಲೇ ಅವರನ್ನು ನಾನು ಅನುಕೂಲಸ್ಥ ಜಾತಿಗಳು ಎಂದು ಕರೆಯುತ್ತೇನೆ. ಇತ್ತೀಚೆಗೆ ಎಲ್ಲ ಜಾತಿಗಳಲ್ಲೂ ಬ್ರಾಹ್ಮಣ್ಯದ ಕಪ್ಪು ಚುಕ್ಕೆಗಳನ್ನು ಗುರುತಿಸಬಹುದಾಗಿದೆ. ಮುಸಲ್ಮಾನರು, ಕ್ರೈಸ್ತರು ಕೂಡ ಅದರಿಂದ ಹೊರತಾಗಿಲ್ಲ. ಬ್ರಾಹ್ಮಣ್ಯವೆಂದರೆ ವಿಭಜಿಸುವುದು, ಕೀಳಾಗಿಸುವುದು ಮತ್ತು ಒಳಗೊಳ್ಳದಿರುವುದು ಎಂಬುದು ನನ್ನ ವ್ಯಾಖ್ಯೆ.

ಇಷ್ಟಕ್ಕೂ ಸಮಾನತೆ ಅಸಹಜವಾದದ್ದು ಎಂದು ನಂಬುವ ವೈದಿಕರಿಂದ ಶೂದ್ರಾದಿ ಕೆಳಜಾತಿ ಮಕ್ಕಳಿಗೆ ಸಮಾನತೆಯನ್ನು ಮೈಗೂಡಿಸಿಕೊಳ್ಳುವ ಪಾಠಗಳನ್ನು ನಿಗದಿಪಡಿಸುತ್ತಾರೆ ಎಂದು ನಿರೀಕ್ಷಿಸುವುದೇ ತಪ್ಪು. ಸಾವಿರಾರು ವರ್ಷಗಳಿಂದ ಬಹುಸಂಖ್ಯಾತ ಜನವರ್ಗಕ್ಕೆ ವಿದ್ಯೆಯನ್ನೆ ನಿರಾಕರಿಸಿದ್ದ ವೈದಿಕ ಧರ್ಮ ಇಂದು ಎಲ್ಲರಿಗೂ ವಿದ್ಯೆ ಲಭಿಸುತ್ತಿರುವುದರಿಂದ ತಳಮಳಗೊಂಡಿದೆ. ಸಂಘಪರಿವಾರದ ವಕ್ತಾರೆಯಾಗಿರುವ ಒಬ್ಬ ವಿದ್ವಾಂಸೆ ಮೆಕಾಲೆ ಹೆಸರು ಹೇಳುತ್ತಲೇ ’ಅವನನ್ನು ಇನ್ನುಮೇಲೆ ’ಲಾರ್ಡ್’ ಮೆಕಾಲೆ ಎಂದು ಕರೆಯಬೇಡಿ. ಬರೀ ಮೆಕಾಲೆ ಎನ್ನಿ, ಆತ ಈ ದೇಶವನ್ನು ನಾಶಮಾಡಿದ’ ಎಂದು ಒತ್ತಿ ಹೇಳುತ್ತಿದ್ದರು. ಪಾಪ, ಎಲ್ಲರಿಗೂ
ಸಮಾನ ವಿದ್ಯೆಯನ್ನು ಕಲ್ಪಿಸಿಕೊಟ್ಟದ್ದಕ್ಕಾಗಿ ಅವರು ಎಷ್ಟು ವಿಚಲಿತರಾಗಿದ್ದಾರೆ ಎಂದು ನನಗನ್ನಿಸಿತು. ಈ ಸಂದರ್ಭದಲ್ಲಿ ನಮ್ಮ ದಾರ್ಶನಿಕ ಕವಿ ಕುವೆಂಪು ಅವರ ಮಾತನ್ನು ನೆನಪಿಸಿಕೊಳ್ಳಲೇಬೇಕು: “ಬ್ರಿಟಿಷರು ಈ ದೇಶಕ್ಕೆ ಬರದಿದ್ದರೆ ನಾನು ಹಾರುವರ ಮನೆಯಲ್ಲಿ ಸಗಣಿ ಬಾಚುತ್ತಿರಬೇಕಾಗಿತ್ತು” ಎಂದು. ಇದು ಅವರು ತಮ್ಮ ಇಳಿವಯಸ್ಸಿನಲ್ಲಿ ಹೇಳಿದ ಮಾತು. ಇದು ವೈದಿಕರಿಗೆ ಪಥ್ಯವಾಗಲಿಲ್ಲ. ಇಂದಿಗೂ ಬಲಪಂಥೀಯ ವೈದಿಕರು ಕುವೆಂಪು ಎಂದರೆ ಹಲ್ಲು ಮಸೆಯುತ್ತಾರೆ. ಸರ್ವಮಾನ್ಯವಾದ ನಾಡಗೀತೆಯನ್ನು ಹಂಗಿಸುತ್ತಾರೆ. ಆದ್ದರಿಂದ ನನ್ನ ಸಲಹೆ ಇಷ್ಟೆ. ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಅಭಿಜಾತ ಕೃತಿ ’ಜಾತಿವಿನಾಶ’ವನ್ನು ಪ್ರೌಢಶಾಲೆಯ ಮಕ್ಕಳಿಗೆ ಪಠ್ಯವಾಗಿಸಬೇಕು. 8ನೆಯ ತರಗತಿಯಿಂದ ಹತ್ತರವರೆಗೆ ಮೂರು ಭಾಗಗಳಲ್ಲಿ ಓದಿಸಬೇಕು. ಎಲ್ಲ ಜಾತಿಯ ಮಕ್ಕಳೂ ಒಟ್ಟಿಗೆ ಕೂತು ಅದನ್ನು ಚರ್ಚಿಸುತ್ತಿರಬೇಕು. ಆಗ ಮಾತ್ರ ಅಸ್ಪೃಶ್ಯತೆಯೆಂಬ ಕುಷ್ಠರೋಗಕ್ಕೆ ಕೊಂಚ ಮದ್ದು ಸಿಗಬಹುದು. ಜಾತಿವ್ಯವಸ್ಥೆ ಅಂತರ್ಗತಗೊಳಿಸಿಕೊಂಡಿರುವ ಅನ್ಯರ ಬಗೆಗಿನ ಅಸಹನೆ, ವೈರತ್ವ ಸ್ವಲ್ಪ ತಗ್ಗಬಹುದು.

ಇವತ್ತಿನ ಮುಸಲ್ಮಾನರ ಮೇಲಿನ ಹಗೆ, ಕೋಪ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಚರಿತ್ರೆಯಿಂದ ಇಸ್ಲಾಂ ಯುಗವನ್ನು ಒಮ್ಮೆಲೆ ಅಳಿಸಿಹಾಕಿಬಿಡಬೇಕೆನ್ನುವ ಹಪಾಹಪಿ ಕಾಣಿಸುತ್ತಿದೆ. ದೆಹಲಿಯ ರಸ್ತೆಗಳ ಮರುನಾಮಕರಣವಾಗುತ್ತಿದೆ. ಉತ್ತರಪ್ರದೇಶದ ನೂರಾರು ಹಳ್ಳಿಗಳ ಹೆಸರುಗಳು ಈಗಾಗಲೇ ಗಾಯಬ್ ಆಗಿವೆ. ಸಾಲದೆಂಬಂತೆ ದೇಶದಾದ್ಯಂತ 36000 ಮಸೀದಿಗಳನ್ನು ಒಡೆದುಬೀಳಿಸಿ ದೇವಸ್ಥಾನ ನಿರ್ಮಿಸುವ ದುರಾಕಾಂಕ್ಷೆಯ ಹುನ್ನಾರವಿದೆ. ವೈದಿಕ ಧರ್ಮರಕ್ಷಕರಿಗೆ ಇದು ಹೊಸ ಪ್ರಯೋಗವೇನಲ್ಲ. ಒಂದು ಸಾವಿರ ವರ್ಷಗಳ ಬೌದ್ಧಯುಗವನ್ನು ಒಂದು ಕುರುಹೂ ಕಾಣಿಸದಂತೆ ಅಳಿಸಿಹಾಕಿದ್ದರು. ಕರ್ನಾಟಕದಲ್ಲಿ ಆಗತಾನೆ ಬೆಳಕು ನೀಡುತ್ತಿದ್ದ ಬಸವಣ್ಣನ ಕಾಯಕಕೇಂದ್ರಿತ ಲಿಂಗಾಯತ ಧರ್ಮವನ್ನು ಸುಮಾರು 800 ವರ್ಷಗಳ ಕಾಲ ಯಾರ ಕಣ್ಣಿಗೂ ಬೀಳದಂತೆ ಹುದುಗಿಬಿಟ್ಟಿದ್ದರು. ಇತಿಹಾಸವನ್ನು ಒಮ್ಮೆ ಹಿಂತಿರುಗಿ ನೋಡಿದರೆ ಭಾರತ ಸರಿಸುಮಾರು 300 ವರ್ಷಗಳ ಕಾಲ ಬ್ರಿಟಿಷರ ಆಡಳಿತದಲ್ಲಿತ್ತು, ಸುಮಾರು 800 ವರ್ಷಗಳು ಮೊಘಲರೂ ಸೇರಿದಂತೆ ಮುಸಲ್ಮಾನರ ಆಳ್ವಿಕೆಯಲ್ಲಿತ್ತು ಎಂದು ತಿಳಿಯುತ್ತದೆ. ಅದಕ್ಕಿಂತಲೂ ಹಿಂದೆ ಒಂದು ಸಾವಿರ ವರ್ಷಗಳು ಬೌದ್ಧರು ಒಂದು ವಿಶಾಲ ಭಾರತವನ್ನು ಆಳುತ್ತಿದ್ದರು ಎಂಬುದು ಬ್ರಿಟಿಷರು ಬರುವವರೆಗೆ ಭಾರತೀಯರಿಗೆ ತಿಳಿದೇ ಇರಲಿಲ್ಲ. ಏಷಿಯಾದ ಎಲ್ಲೆಡೆ ಹರಡಿಕೊಂಡಿದ್ದ ಬೌದ್ಧಧರ್ಮ, ಹುಟ್ಟಿದ ನೆಲದಲ್ಲಿ ಕಾಣೆಯಾಗಿರುವುದು ಎಲ್ಲರಿಗೂ ಸೋಜಿಗವೆನಿಸಿತ್ತು. ಪ್ರಾಚ್ಯವಸ್ತು ಇಲಾಖೆಗೆ ಬಂದ ಅಲೆಗ್ಸ್ಯಾಂಡರ್ ಕನ್ನಿಂಗ್ಯ್ಹಾಮ್ ಎಂಬ ಒಬ್ಬ ತರುಣ ಅಧಿಕಾರಿ ಸಾರಾನಾಥದಲ್ಲಿ ಬಿದಿರು ಮೆಳೆಯ ಪೊದೆಯಲ್ಲಿ ಹೂತುಹೋಗಿದ್ದ ಒಂದು ಬೃಹತ್ ಸ್ತೂಪವನ್ನು ನೋಡಿದ. ಅಲ್ಲಿಂದಾಚೆಗೆ ಒಂದೊಂದಾಗಿ ಬೌದ್ಧ ಇತಿಹಾಸ ತೆರಕೊಂಡಿತು. ನಾನು ಹೇಳಹೊರಟಿರುವುದು ಏನೆಂದರೆ ಸುಮಾರು ಐದು ಸಾವಿರ ವರ್ಷಗಳ ಗತ ಇತಿಹಾಸವನ್ನು ನೋಡಿದರೆ ಬ್ರಿಟಿಷರು ಮತ್ತು ಮುಸಲ್ಮಾನರ ಒಂದು ಸಾವಿರ ವರ್ಷಗಳು, ಬೌದ್ಧರ ಒಂದು ಸಾವಿರ ವರ್ಷಗಳು ಮಾನವ ಇತಿಹಾಸದಲ್ಲಿ ಸುದೀರ್ಘ ಚರಿತ್ರೆಯಲ್ಲವೆ? ಈ ಭೂಮಿ ಯಾರ ಸ್ವತ್ತು? ಕಾಲ ಮತ್ತು ದೇಶಗಳಲ್ಲಿ ಅವರಿಗೆ ಪಾಲಿಲ್ಲವೆ? ಆರ್ಯವೈದಿಕರು ಸಹ ಹರಪ್ಪಾ ಮೆಹೆಂಜೊದಾರೋ ನಾಗರಿಕತೆಯ ನಂತರ ಮಧ್ಯ ಏಷ್ಯಾದಿಂದ ವಲಸೆ ಬಂದವರು ತಾನೆ? ಈ ವಿಷಯಗಳನ್ನು ನಮ್ಮ ಮಕ್ಕಳು ಯಾಕೆ ತಿಳಿದುಕೊಳ್ಳಬಾರದು?

ಹಿಂದೆ ಟಿಪ್ಪೂ ಸುಲ್ತಾನ್ ಪೇಟ ತೊಟ್ಟು ಅವನನ್ನು ಹಾಡಿ ಹೊಗಳಿದವರೆ ಇಂದು ಅವನು ಕ್ರೂರಿ, ಮತಾಂಧ ಅನ್ನುತ್ತಿದ್ದಾರೆ. ಅವನು ಮಲಬಾರ್ ಪ್ರಾಂತ್ಯದಲ್ಲಿ ದಲಿತ ಹೆಣ್ಣುಮಕ್ಕಳು ಎದೆ ಮುಚ್ಚಿಕೊಳ್ಳಲು ಬಟ್ಟೆ ಕೊಟ್ಟು ಮಾನ ಕಾಪಾಡಿದ, ಶೃಂಗೇರಿ ದೇವಸ್ಥಾನವನ್ನು ಮರುನಿರ್‍ಮಾಣ ಮಾಡಿದ, ಮಠಗಳಿಗೆ ದಾನ ದತ್ತಿಗಳನ್ನು ಕೊಡುತ್ತಿದ್ದ- ಅವನ್ನೆಲ್ಲ ಮರೆಯುತ್ತಾರೆ. ಸುಳ್ಳುಗಳ ಪರದೆಯನ್ನು ಇಳಿಬಿಟ್ಟು ನೈಜ ಇತಿಹಾಸವನ್ನು ಮರೆಮಾಚುವುದು ಇಂದಿನ ಡಿಜಿಟಲ್ ಯುಗದಲ್ಲಿ ಅಸಾಧ್ಯದ ಮಾತು. ಆದರೂ ಇದು ಇಲ್ಲಿಗೆ ನಿಲ್ಲಲಾರದು. ಸಮಾನತೆಯನ್ನು ಬಯಸುವ, ಹೊಂದಿಕೊಂಡು ಬಾಳುವ ಪ್ರಗತಿಪರ ಮನಸ್ಸುಗಳು ಸದಾ ಎಚ್ಚರದಿಂದಿರಬೇಕಾದ ಕಾಲ ಇದು.

ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಡಾ. ಮೂಡ್ನಾಕೂಡು ಚಿನ್ನಸ್ವಾಮಿ
ಕನ್ನಡದ ಖ್ಯಾತ ಕವಿ. ದಲಿತ, ಬಂಡಾಯ ಮತ್ತು ಬೌದ್ಧ ಚಿಂತನೆಗಳನ್ನು ಸಾಹಿತ್ಯದ ಮೂಲಕ ಪ್ರಚುರಪಡಿಸಿದ ಪ್ರಮುಖರಲ್ಲಿ ಒಬ್ಬರು. ‘ಕೊಂಡಿಗಳು ಮತ್ತು ಮುಳ್ಳುಬೇಲಿಗಳು’, ‘ಚಪ್ಪಲಿ ಮತ್ತು ನಾನು’ ಮೂಡ್ನಾಕೂಡು ಅವರ ಕೆಲವು ಕವನಸಂಕಲನಗಳು. ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಅವರ ಆತ್ಮಕತೆ.


ಇದನ್ನೂ ಓದಿ: ಲಿಂಗಾಯತರು ಚುನಾವಣೆಯ ಸರಕೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...