Homeಕರ್ನಾಟಕಲಿಂಗಾಯತರು ಚುನಾವಣೆಯ ಸರಕೇ?

ಲಿಂಗಾಯತರು ಚುನಾವಣೆಯ ಸರಕೇ?

- Advertisement -
- Advertisement -

ವಿಧಾನಸಭಾ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಧರ್ಮ ಹಾಗು ಜಾತಿ ರಾಜಕಾರಣ ಗರಿಗೆದರುತ್ತಿದೆ. ಈ ದೇಶದಲ್ಲಿ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಜಾತಿ ಸಂಘಟನೆಗಳನ್ನು, ಜಾತಿ-ಮತಗಳ ಸ್ವಾಮಿಗಳನ್ನು ಬಳಸಿಕೊಳ್ಳುವುದು ಸಾಮಾನ್ಯವೆಂಬಂತಾಗಿದ್ದು, ಇದು ಈ ದೇಶದಲ್ಲಿ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿರುವುದಕ್ಕೆ ಸಂಕೇತದಂತಿದೆ ಮತ್ತು ಸಾಕ್ಷಿಯೂ ಆಗಿದೆ. ಇಂತಹ ರಾಜಕೀಯ ಬಲೆಯಲ್ಲಿ ಲಿಂಗಾಯತ ಸಂಸ್ಥೆಗಳು ಸಹ ಸಿಕ್ಕಿ ಹಾಕಿಕೊಂಡಿರುವುದು ಇನ್ನೂ ದೊಡ್ಡ ದುರಂತ.

ಲಿಂಗಾಯತರು ಮತ್ತು ವೀರಶೈವರು ಒಂದೇ ಎಂದು ಹೇಳುವ ಎಡಬಿಡಂಗಿ ಸಂಸ್ಥೆ ವೀರಶೈವ ಮಹಾಸಭಾ. ನೂರು ವರ್ಷಗಳ ಹಿಂದೆ ಕೇವಲ ವೀರಶೈವರ ಹಿತ ಕಾಪಾಡಲು ಹುಟ್ಟಿಕೊಂಡ ಸಂಸ್ಥೆ ಇದು. ಟೊಳ್ಳು ಸಿದ್ಧಾಂತದ ಆಧಾರದ ಮೇಲೆ, ಮಾನವನನ್ನು ಮಾನವನನ್ನಾಗಿ ಕಾಣದೆ, ಸಮಾಜವನ್ನು ವಿಭಜಿಸಿ, ಕೇವಲ ಉಚ್ಚ ವರ್ಗದ ಹಿತ ಕಾಪಾಡುವ ಇಚ್ಛೆಯೊಂದಿಗೆ ಪ್ರಾರಂಭವಾದ ಸಂಸ್ಥೆ ಇದು. ತೋರಿಕೆಗಾಗಿ ಮಾತ್ರ ಶರಣ ಸಿದ್ಧಾಂತವನ್ನು ಎರವಲು ಪಡೆದು, ಲಿಂಗಾಯತರು ಹಾಗೂ ವೀರಶೈವರು ಒಂದೇ ಎಂದು ಪ್ರತಿಪಾದಿಸಿ ಲಿಂಗಾಯತರನ್ನು ತಪ್ಪು ದಾರಿಗೆ ದೂಡುವ ಸಂಸ್ಥೆ ಇದಾಗಿದೆ.

ಜಾತಿರಹಿತ ಸಮಾಜ ಕಟ್ಟುವುದು ಲಿಂಗಾಯತ ಧರ್ಮದ ಸಿದ್ಧಾಂತ. ಸಮಾಜವನ್ನು ಜಾತಿಗಳಲ್ಲಿ ವಿಂಗಡಿಸುವುದು ಹಿಂದೂ/ವೀರಶೈವ ಸಿದ್ಧಾಂತ. ಎಂಟುನೂರು ವರ್ಷಗಳ ಹಿಂದೆ ಜಾತಿ ತಾರತಮ್ಯವನ್ನು ನಿರ್ಮೂಲನೆ ಮಾಡುವ ಉದ್ದೇಶಕ್ಕಾಗಿ ವೈದಿಕ ಧರ್ಮದಿಂದ ಸಿಡಿದೆದ್ದು ಹೊರಬಂದವರು ಶರಣರು. ಅವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿ ಸ್ವತಂತ್ರ ಧರ್ಮವೆಂದು ಘೋಷಣೆ ಮಾಡಲು ಒತ್ತಾಯಿಸಿದ್ದರು ಲಕ್ಷಲಕ್ಷ ಲಿಂಗಾಯತರು. ಲಿಂಗಾಯತ ಮತ್ತು ವೀರಶೈವ ಇವೆರಡು ಸಮಾನಾಂತರ ಪದಗಳು ಎಂದು ಹೇಳಿಕೊಳ್ಳುತ್ತ ವೀರಶೈವ ಮಹಾಸಭಾ ಸಂಸ್ಥೆಯು ಲಿಂಗಾಯತ ಧರ್ಮದ ಮಾನ್ಯತೆಯನ್ನು ವಿರೋಧಿಸಿದ್ದೇಕೆ? ಇಂತಹ ಸಂಸ್ಥೆ ಇಂದು ವೀರಶೈವ/ಲಿಂಗಾಯತ ಸಮಾಜದ ಒಂದುನೂರು ಜಾತಿಗಳಿಗೆ ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸ್ಥಾನ ಕೊಡಲು ಕೇಳಲಿದೆಯಂತೆ.

ಸ್ವತಂತ್ರ ಭಾರತದಲ್ಲಿ ಕೇವಲ ಕೇಳುವುದರಿಂದ ಮೀಸಲಾತಿಯಂತಹ ಸೌಲಭ್ಯಗಳು ಸಿಗುವುದಿಲ್ಲ. ಅದಕ್ಕಾಗಿ ನಿರಂತರ ಅಭ್ಯಾಸ, ಇತಿಹಾಸದ ಶೋಧ, ದಾಖಲೆಗಳ ಕ್ರೋಢೀಕರಣಗಳೊಂದಿಗೆ ಸಮರ್ಥವಾಗಿ ವಾದ ಮಂಡಿಸಬೇಕಾಗುತ್ತದೆ. ಮೇಲಾಗಿ ಅಭೇದ ಇಚ್ಛಾಶಕ್ತಿಯ ಅವಶ್ಯಕತೆ ಇರುತ್ತದೆ. ಇಂತಹ ಇಚ್ಛಾಶಕ್ತಿಯನ್ನು ಕಳೆದ ನೂರು ವರ್ಷಗಳಲ್ಲಿ ವೀರಶೈವ ಮಹಾಸಭಾ ಎಂದೂ ಪ್ರದರ್ಶಿಸಿಲ್ಲ. ಚುನಾವಣಾ ಸಮಯದಲ್ಲಿ ಜನರ ಕಣ್ಣೊರೆಸುವ ತಂತ್ರವಾಗಿ ಕೇವಲ ಒಂದು ಅರ್ಜಿ ಗುಜರಾಯಿಸುವ ಕೆಲಸ ಮಾತ್ರ ಮಾಡುತ್ತ ಬಂದಿದೆ.

ಲಿಂಗಾಯತರನ್ನು ಚುನಾವಣೆಯಲ್ಲಿ ರಾಜಕೀಯ ಸರಕುಗಳಾಗಿ ಬಳಸಬಹುದೆಂಬ ಇವರ ಧೋರಣೆಯು ಲಿಂಗಾಯತ ಧರ್ಮಕ್ಕೆ ಮಾಡುವ ಅವಮಾನವೆಂದು ಖಂಡಿತವಾಗಿ ಹೇಳಲೇಬೇಕಾಗುತ್ತದೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿಯೂ ಇಂತಹದೆ ನಾಟಕ ಆಡಿತ್ತು ವೀರಶೈವ ಮಹಾಸಭಾ. ಬರಲಿದ್ದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 2017ರಲ್ಲೇ ತನ್ನ ತಾಲೀಮನ್ನು ಪ್ರಾರಂಭಿಸಿತ್ತು. ಅಂದಿನ ಕಾಂಗ್ರೆಸ್ ಸರಕಾರದಲ್ಲಿದ್ದ ಆರು ಲಿಂಗಾಯತ ಸಚಿವರಲ್ಲಿ ಮೂವರು ವೀರಶೈವ ಮಹಾಸಭಾದ ಕೃಪಾಶೀರ್ವಾದಕ್ಕೆ ಒಳಗಾಗಿದ್ದವರು. ಅವರೆಲ್ಲರಿಗೂ ಬರಲಿರುವ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೊಮ್ಮೆ ಅಧಿಕಾರ ಹಿಡಿಯುವ ಹೆಬ್ಬಯಕೆ ಇತ್ತು. ಆಗ ಅವರಿಗೆ ಅಡ್ಡಗಾಲಾಗಿದ್ದರು ಲಿಂಗಾಯತರ ಪರಮೋಚ್ಛ ನಾಯಕ ಯಡಿಯೂರಪ್ಪನವರು. ಲಿಂಗಾಯತ ಧರ್ಮೀಯರಾದರೂ ಇವರು ಲಿಂಗಾಯತ ಸಿದ್ಧಾಂತ ಅರಿತವರಲ್ಲ. ಆರ್‌ಎಸ್‌ಎಸ್. ಕಾರ್ಯಕರ್ತರಾದ ಇವರು ಲಿಂಗಾಯತ ’ಜಾತಿ’ಯು ಹಿಂದೂ ಧರ್ಮದ ಭಾಗವೆಂದೇ ಪ್ರತಿಪಾದಿಸುತ್ತಿದ್ದವರು. ಆದರೂ ತಮ್ಮ ಚುನಾವಣಾ ಗಿಮಿಕ್ಕುಗಳ ಮೂಲಕ ಬಹುಸಂಖ್ಯಾತ ಲಿಂಗಾಯತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. 2008ರಲ್ಲಿ ಲಿಂಗಾಯತರನ್ನು ಒಟ್ಟುಗೂಡಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು. ತಮ್ಮದೇ ಪಕ್ಷದಲ್ಲಿ ತಮ್ಮ ಮಾತಿಗೆ ಮನ್ನಣೆ ಸಿಗದಿದ್ದಾಗ ಈ ಭಾವನಾಜೀವಿ ಪಕ್ಷದಿಂದ ಹೊರಬಂದು, 2013ರಲ್ಲಿ ಕೆ.ಜೆ.ಪಿ.ಯನ್ನು ಕಟ್ಟಿ, ಲಿಂಗಾಯತರನ್ನು ನಂಬಿ ಕೈಸುಟ್ಟುಕೊಂಡಿದ್ದರು. ಆದರೆ ಅವರ ಹೊಸ ಪಕ್ಷ ಕೆ.ಜೆ.ಪಿ.ಯು ಬಿ.ಜೆ.ಪಿ.ಯನ್ನು ಸೋಲಿಸುವಲ್ಲಿ ಭರ್ಜರಿ ಯಶಸ್ಸನ್ನು ಸಾಧಿಸಿತ್ತು.

ಬಿ.ಜೆ.ಪಿ.ಯ ಪರಾಭವದ ಕಾರಣ ಕಾಂಗ್ರೆಸ್ಸಿಗರಿಗೆ ಕೆ.ಜೆ.ಪಿ. ಎಂಬುದು ಗೋಡೆ ಬರಹದಂತೆ ಕಣ್ಣಿಗೆ ರಾಚುತ್ತಿತ್ತು. ಇದನ್ನೇ ದಾಳವಾಗಿ ಪ್ರಯೋಗಿಸಲು ಅವರು ಮುಂದಾದರು. ಇವರ ಹೊಸ ತಂತ್ರದ ಪ್ರಕಾರ ತಮ್ಮ ತೆಕ್ಕೆಯಲ್ಲಿರುವ ಅಹಿಂದ ಮತಗಳೊಂದಿಗೆ ಲಿಂಗಾಯತರ 2-3% ಮತಗಳು ತಮ್ಮ ಕಡೆಗೆ ವಾಲಿದರೆ ವಿಧಾನಸೌಧದ ಮೂರನೆ ಮಹಡಿಯಲ್ಲಿ ಮತ್ತೊಮ್ಮೆ ಠಿಕಾಣಿ ಹೂಡಬಹುದೆಂದಿತ್ತು. ಆಗ ಲಿಂಗಾಯತ ಸಚಿವರಿಗೆ ನೆನಪಾಗಿದ್ದು ಇದೇ ವೀರಶೈವ ಮಹಾಸಭಾ. ವಿಶ್ವವಿದ್ಯಾಲಯವೊಂದಕ್ಕೆ ಅಕ್ಕ ಮಹಾದೇವಿ ಹೆಸರಿಡುವುದು, ಬಸವಣ್ಣನವರ ಪಟಗಳನ್ನು ಸರಕಾರಿ ಗೋಡೆಗಳಿಗೆ ಏರಿಸುವುದನ್ನು ಮಾಡಿ “ಲಿಂಗಾಯತ ಧರ್ಮದ ಮಾನ್ಯತೆ”ಯನ್ನು ಕೊಡುತ್ತೇವೆಂದು ವಾಗ್ದಾನ ನೀಡಿದರು. ಇವರ ಕಾರ್ಯಸೂಚಿಯ ಅನುಗುಣವಾಗಿ ಇದೇ ವೀರಶೈವ ಮಹಾಸಭಾದವರು ಸಿದ್ದರಾಮಯ್ಯನವರಿಗೆ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಮನವಿ ಸಲ್ಲಿಸಿದರು. ಸಮಾಜವಾದಿ ಸಿದ್ದರಾಮಯ್ಯನವರಿಗೆ ಇದೊಂದು ಒಳ್ಳೆಯ ಅವಕಾಶವೆಂಬಂತೆ ಕಂಡಿತು. ಮನವಿಯನ್ನು ಪುರಸ್ಕರಿಸುವ ಭರವಸೆಯನ್ನೂ ಕೊಟ್ಟುಬಿಟ್ಟರು. ಆಗ ಎಚ್ಚೆತ್ತುಕೊಂಡರು ಮಹಾಸಭಾದಲ್ಲಿದ್ದ ವೀರಶೈವ ಮೂಲಭೂತವಾದಿಗಳು.

ಮಹಾಸಭಾ ಸ್ಥಾಪನೆಯ ಸಮಯದಲ್ಲಿ ಈ ಮೂಲಭೂತವಾದಿಗಳು ಒಳ ನುಸುಳಿದ್ದರು. ಲಿಂಗಾಯತ ಸಾಮಾಜಿಕ ಸ್ಥಾನಮಾನಕ್ಕಾಗಿ ಮತ್ತು ಅವರ ಏಳಿಗೆಗಾಗಿ ಸಂಸ್ಥೆಯೊಂದನ್ನು ಕಟ್ಟೋಣ ಎಂದು ಹೇಳಿ ಆದರೆ ಸಂಸ್ಥೆಯ ಹೆಸರು ಪ್ರಮುಖವಲ್ಲ ಎಂಬ ವಾದ ಮಂಡಿಸಿ ತಮ್ಮ ’ಹಿಡನ್ ಅಜೆಂಡಾ’ ಜಾರಿಗೊಳಿಸಿ ವೀರಶೈವ ಮಹಾಸಭಾ ಎಂದು ನಾಮಕರಣ ಮಾಡಿದರು.

ವೀರಶೈವವು ಹಿಂದು ಧರ್ಮದ ಒಂದು ಭಾಗ ಎನ್ನುವ ಇವರು ಬಸವಣ್ಣನವರ ಸಿದ್ಧಾಂತಗಳನ್ನು ಗಾಳಿಗೆ ತೂರಿದರೂ ಅವರ ಹೆಸರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡವರು. ಶರಣರ ಸಿದ್ಧಾಂತಗಳನ್ನು ಸರಿಯಾಗಿ ಅರ್ಥೈಸದೆ ಲಿಂಗಾಯತ, ವೀರಶೈವ ಎರಡೂ ಒಂದೇ, ಅವುಗಳು ಕೇವಲ ಪರ್ಯಾಯ ಪದಗಳು ಎಂದು ತಿಪ್ಪೇಸಾರಿಸುತ್ತಲಿರುವರು. ಹಿಂದೂಗಳ ಮೂಲಭೂತ ಸಿದ್ಧಾಂತಗಳನ್ನು ವಿರೋಧ ಮಾಡಿ ವೈದಿಕ ಧರ್ಮದಿಂದ ಸಿಡಿದೆದ್ದು ಹೊರಬಂದ ಶರಣರು ಸಹ ವೈದಿಕರೆನ್ನುವದು ಇತಿಹಾಸಕ್ಕೆ ಹಾಗೂ ಲಿಂಗಾಯತ ಧರ್ಮಕ್ಕೆ ಮಾಡುವ ಅವಮಾನವೆಂದು ಅರ್ಥಮಾಡಿಕೊಳ್ಳದವರು. ಈ ಮೂಲಭೂತವಾದಿಗಳ ಉಡದಂತಹ ಹಿಡಿತಕ್ಕೆ ಸಿಲುಕಿಕೊಂಡಿರುವ ಮಹಾಸಭಾ ಎಂಥಾ ದುಸ್ಥಿತಿ ತಲುಪಿದೆಯೆಂದರೆ ವಿರುದ್ಧ ದಿಕ್ಕಿನಲ್ಲಿ ಚಲಿಸುವ ಎರಡು ರೈಲುಗಳನ್ನು ಏಕಕಾಲಕ್ಕೆ ಹಿಡಿಯುವ ದುಸ್ಸಾಸಹಕ್ಕೆ ಕೈ ಹಾಕಿದಂತಿದೆ. ಪರಿಣಾಮವಾಗಿ ಈಗ ಅಪಹಾಸ್ಯಕ್ಕೆ ಗುರಿಯಾಗಿದೆ.

ವೀರಶೈವ ಪದದ ಇತಿಹಾಸ

ಸರಕಾರಿ ದಾಖಲೆಗಳಲ್ಲಿ ವೀರಶೈವ ಶಬ್ದ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಮೈಸೂರು ಸಂಸ್ಥಾನದ 1891 ಜನಗಣತಿಯಲ್ಲಿ. ಅದಕ್ಕೂ ಮುಂಚೆ ಬ್ರಿಟಿಷರ ಆಡಳಿತದಲ್ಲಿ 1871ರಲ್ಲಿ ನಡೆದ ಮೈಸೂರು ಪ್ರಾಂತದ ಜನಗಣತಿಯಲ್ಲಿ ಲಿಂಗಾಯತವು ಸ್ವತಂತ್ರ ಧರ್ಮ ಎಂದು ದಾಖಲಾಗಿದೆ. ಲಿಂಗಾಯತರ ಕಾರಣದಿಂದ (ಜಂಗಮ ಕ್ರಾಂತಿ) ಅಧಿಕಾರ ವಂಚಿತರಾಗಿದ್ದ ಮೈಸೂರು ಅರಸರು 50 ವರ್ಷಗಳ ನಂತರ 1881ರಲ್ಲಿ ಮರಳಿ ಆಡಳಿತದ ಚುಕ್ಕಾಣಿ ಹಿಡಿಯುವ ಸಂದರ್ಭದಲ್ಲಿ ಎರಡನೆಯ ಜನಗಣತಿ (1881) ಕೈಗೊಳ್ಳಲಾಯಿತು. ಈ ಜನಗಣತಿಯಲ್ಲಿ ಲಿಂಗಾಯತರನ್ನು ಹಿಂದೂಗಳೆಂದು ಪರಿಗಣಿಸಿ ಇವರನ್ನು ಶೂದ್ರವರ್ಗದಲ್ಲಿ ಸೇರಿಸಿ ತಮ್ಮ ಕೋಪವನ್ನು ತಣಿಸಿಕೊಂಡರು ಎನ್ನುತ್ತಾರೆ ಇತಿಹಾಸಕಾರರು.

ಇದರಿಂದ ಅಸಮಾಧಾನಗೊಂಡ ಮೈಸೂರು ಭಾಗದ ಲಿಂಗಾಯತರು ತಮ್ಮ ಸಾಮಾಜಿಕ ಸ್ಥಾನಮಾನಕ್ಕಾಗಿ ಹೋರಾಟ ಪ್ರಾರಂಭಿಸಿದರು. ಅದರ ನೇತೃತ್ವವನ್ನು ವಹಿಸಿದ ಮೈಸೂರ ಅರಮನೆಯ ಆಸ್ಥಾನ ಪಂಡಿತರಾಗಿದ್ದ ವಿದ್ವಾನ್ ಪಿ.ಆರ್. ಕರಿಬಸವ ಶಾಸ್ತ್ರಿಯವರು, ’ಲಿಂಗಾಯತರು ಬ್ರಾಹ್ಮಣರಷ್ಟೇ ವೇದ ಪಾರಾಯಣ ಮಾಡಿದವರು ಅವರು ಶೂದ್ರರಲ್ಲ, ಅವರು ಲಿಂಗಧರಿಸಿದ ಲಿಂಗೀ ಬ್ರಾಹ್ಮಣರೆಂದು’ ಹೊಸವಾದ ಮಂಡಿಸಿದರು. ಮಾನವರೆಲ್ಲರೂ ಸಮಾನರು ಎಂದು ಪ್ರತಿಪಾದಿಸಿದ ಬಸವಣ್ಣ ಲಿಂಗಾಯತರ ಧರ್ಮಗುರುವಲ್ಲ ಅವರು ಹಿಂದೂ ಧರ್ಮ ಸುಧಾರಕರು ಎಂದು ಬಿಂಬಿಸಿದರು.

ಹಿಂದೂ ಧರ್ಮದ ಜೀವಾಳವಾದ ಜಾತಿ ಪದ್ಧತಿ, ವರ್ಣಾಶ್ರಮ ಲಿಂಗಾಯತರಲ್ಲೂ ಇದೆ ಎಂದು ಪ್ರತಿಪಾದಿಸುತ್ತ, ಗುರು ವರ್ಗದಲ್ಲಿದ್ದ ಜಂಗಮರನ್ನು ಲಿಂಗಾಯತ ಬ್ರಾಹ್ಮಣರೆಂದರು. ಆಡಳಿತಗಾರರಾಗಿದ್ದ ಸಾಮಂತ ಅರಸರು, ಚಿಕ್ಕಚಿಕ್ಕ ಸಂಸ್ಥಾನಗಳನ್ನು ಹೊಂದಿದ್ದ ದೇಸಾಯಿಗಳನ್ನು, ಜಮೀನುದಾರರಾಗಿದ್ದ ಊರ ಗೌಡರನ್ನು ಲಿಂಗಾಯತ ಕ್ಷತ್ರಿಯರೆಂದರು. ವ್ಯಾಪಾರ ವಹಿವಾಟುಗಳಲ್ಲಿ ತೊಡಗಿದ್ದ ಬಣಿಜಿಗರು ಹಾಗೂ ಗಾಣಿಗರನ್ನು ವೈಶ್ಯರೆಂದು ಗುರುತಿಸಬೇಕೆಂದರು. ಉಳಿದ ವೃತ್ತಿ ನಿರತ ಪಂಗಡಗಳನ್ನು ಶೂದ್ರರೆಂದರು.

ಗುಡಿ ಗುಂಡಾರ ಸಂಸ್ಕೃತಿ, ಬಹು ದೇವೋಪಾಸನೆ, ವೇದ ಉಪನಿಷತ್ತುಗಳಲ್ಲಿ ನಂಬಿಕೆ, ಸ್ವರ್ಗ-ನರಕ,
ಪುನರ್ಜನ್ಮ, ಧರ್ಮರಕ್ಷಣೆಗಾಗಿ ನಾಲ್ಕು ಯುಗಗಳಲ್ಲಿ ಲಿಂಗದಿಂದ ಉದ್ಭವಿಸುವ ಗುರುಗಳ ಕಲ್ಪನೆ ವೀರಶೈವರದು. ಇವುಗಳೆಲ್ಲ ಲಿಂಗಾಯತ ಧರ್ಮದ ಕಲ್ಪನಾತೀತ ವಿಷಯಗಳು. ಶರಣ ಸಿದ್ಧಾಂತದ ವಿರೋಧಿ ಸಿದ್ಧಾಂತವನ್ನು ಪ್ರತಿಪಾದಿಸುವ ವೀರಶೈವ ಮತವು ಲಿಂಗಾಯತ ಹೇಗಾಗುತ್ತದೆ? ಇಂತಹ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರಿಸಲಾರದು ಈ ವೀರಶೈವ ಮಹಾಸಭಾ. ಆದರೆ ಇಂದು ಅದು ತನ್ನ ಸಂಸ್ಥೆಯ ಹೆಸರನ್ನು ವೀರಶೈವ/ಲಿಂಗಾಯತ ಎಂದು ಬದಲಾಯಿಸಿ ಸೇರಿಸಿಕೊಂಡಿದೆ. ಹೆಸರು ಬದಲಾಯಿಸಿದ ಮಾತ್ರಕ್ಕೆ ಮೂಲ ಸಿದ್ಧಾಂತ ಬದಲಾಗುವುದೆ? ಲಿಂಗಾಯತ ಧರ್ಮಕ್ಕಾಗಿ ಲಿಂಗಾಯತರ ಸರ್ವತೋಮುಖ ಅಭಿವೃದ್ಧಿಗಾಗಿ ವೀರಶೈವ ಮಹಾಸಭಾ ಕಟ್ಟಿದ ವಿಶಾಲ ಮನೋಭಾವದ ಅರಟಾಳ ರುದ್ರಗೌಡರ, ಶಿರಸಂಗಿ ಲಿಂಗರಾಜರ, ರಾಜಾ ಲಖಮಗೌಡರ, ವಾರದ ಮಲ್ಲಪ್ಪನವರ, ಕೆ.ಪಿ.ಪುಟ್ಟಣ್ಣ ಚೆಟ್ಟಿಯವರ, ಹಾಲಭಾವಿ ವೀರಭದ್ರಪ್ಪನವರ, ಸಿದ್ಧರಾಮಪ್ಪ ಪಾವಟೆಯವರ, ಶಾಂತವೀರಪ್ಪ ಮೆಣಸಿನಕಾಯಿಯವರ ಕನಸು ಇಂದು ಭಗ್ನಗೊಂಡಿದೆ. ಹಿಂದೂ ಮೂಲಭೂತವಾದಿಗಳಾಗಿದ್ದ, ತಮ್ಮ ’ಹಿಡನ್ ಅಜೆಂಡಾ’ ಸಾಧಿಸಲು ಲಿಂಗಾಯತ ಪ್ರಾತಃಸ್ಮರಣೀಯರೊಂದಿಗೆ ಕೈಜೋಡಿಸಿದ್ದ ಪಿ.ಆರ್.ಕರಿಬಸವ ಶಾಸ್ತ್ರಿಯವರ, ಯಜಮಾನ ವೀರಸಂಗಪ್ಪನವರ; ಲಿಂಗಾಯತರು ಲಿಂಗೀ ಬ್ರಾಹ್ಮಣರೆಂಬ ಕಲ್ಪನೆ ಮೈದುಂಬಿಕೊಂಡಿದೆ.

ವೃತ್ತಿನಿರತ ನೂರಾರು ಸಮಾಜಗಳ ಬಹುಸಂಖ್ಯಾತ ಲಿಂಗಾಯತ ಧರ್ಮ ಅಲ್ಪಸಂಖ್ಯಾತ ವೀರಶೈವರ ಹಿಡಿತದಲ್ಲಿ ಸಿಕ್ಕಿ, ತತ್ವ, ಸಿದ್ಧಾಂತ, ಆಚಾರ, ವಿಚಾರಗಳನ್ನು ಮರೆಯುತ್ತದೆ.

ಜಿ ಬಿ ಪಾಟೀಲ

ಜಿ ಬಿ ಪಾಟೀಲ
ಬಸವನಬಾಗೇವಾಡಿಯ ಜಿ.ಬಿ.ಪಾಟೀಲ್ ಅವರು ಬೆಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿದ್ದೂ, ಸಾಮಾಜಿಕ ಹಾಗೂ ರಾಜಕೀಯ ಸಂಗತಿಗಳಲ್ಲಿ ನಿರಂತರ ಆಸಕ್ತಿ ಹೊಂದಿದ್ದವರು. ಸದ್ಯ ಜಾಗತಿಕ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: ಸನ್ಯಾಸಿಗಳೆಂದರೆ ನಿಮಗೇನು ಗೊತ್ತಯ್ಯಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಲಿಂಗಾಯಿತ ಅಘೋರಿ ಮಾಂತ್ರಿಕ ಮಂತೇಶ್ ಬಾಬು ಮತ್ತು ಪ್ರಸಾದ್ ಬಂಗಾರಿ ತುಮಕೂರು ಇವರುಗಳಿಂದ ಜನರಿಗೆ ತೊಂದರೆ ಹಾಗೆ ಲಿಂಗಾಯಿತ ಹೆಣ್ಣು ಮಕ್ಕಳು ಮುಂದೆ ಸಮಸ್ಯೆ ಗೆ ಬಿಳಿಸುವ ಕಲ್ಪನೆ ಸಂಕಲ್ಪ ಮಾಡಿ ದ್ದಾರೆ ಈ ಮಾಂತ್ರಿಕರು ಎಲ್ಲಾ ನಾಶಕ್ಕೆ ಮತ್ತು ಸಮಾಜದ ಸಮಸ್ಯೆ ಗೆ ಕಾರಣರು ಅಗಿದ್ದಾರೆ ಲಿಂಗಾಯಿತ ಮಾಂತ್ರಿಕ ರು ಕೆಡೂ ಮಾಡುವರನ್ನು ಹುಡುಕಿ ಅವರನ್ನು ತೇಗೆದು ಶಿಕ್ಷೆ ಕೋಡುವು ಲಿಂಗಾಯಿತ ಸಮುದಾಯ ಕ್ಕೆ ಇದೆಯಾ ಗುರುತಿಸಬೇಕು ಆಗ ಸಿಗುತ್ತಾರೆ ತಪ್ಪು ಸರಿಯಾನ್ನು ತಿಳಿಯದೆ ಯಾರೋ ನಿರಪರಾದಿಗಳಿಗೆ ಸಮಸ್ಯೆ ಕೋಡುವ ಬುದ್ದಿ ಬಿಟ್ಟಾರೆ ಸಾಕು..

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...