Homeಮುಖಪುಟಸಿದ್ದರಾಮಯ್ಯ ಮತ್ತು ರಂಭಾಪುರಿ ಪೀಠಾಧೀಶ್ವರರ ಭೇಟಿ; ಮತ್ತೆ ಭುಗಿಲೆದ್ದ ಲಿಂಗಾಯತ ಧರ್ಮ ಚರ್ಚೆ

ಸಿದ್ದರಾಮಯ್ಯ ಮತ್ತು ರಂಭಾಪುರಿ ಪೀಠಾಧೀಶ್ವರರ ಭೇಟಿ; ಮತ್ತೆ ಭುಗಿಲೆದ್ದ ಲಿಂಗಾಯತ ಧರ್ಮ ಚರ್ಚೆ

- Advertisement -
- Advertisement -

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ರಂಭಾಪುರಿ ಪೀಠಾಧೀಶ್ವರರ ನಡುವೆ ನಡೆದ ಚರ್ಚೆಯಿಂದು ಮಾಧ್ಯಮಗಳಲ್ಲಿ ಪ್ರಮುಖ ವಿಷಯವಾಗಿ ಚರ್ಚೆಯಾಗುತ್ತದೆ. ರಾಜಕಾರಣಿಗಳು ಮತಬೇಟೆಗಾಗಿ ದೇವಸ್ಥಾನ, ಮಸೀದಿ, ಚರ್ಚುಗಳಿಗೆ ಹೋಗಿ ಮತಯಾಚಿಸುವದು ಸಾಮಾನ್ಯ ವಿಷಯ. ಅವರು ಅಂತಹ ಸ್ಥಳಗಳಿಗೆ ಹೋದಾಗ ಸಂಬಂಧಪಟ್ಟವರ ಅಹವಾಲುಗಳನ್ನು ಸ್ವೀಕರಿಸಿ ಸಾಂತ್ವನದ ಮಾತುಗಳನ್ನು ಹೇಳುವದೂ ಸಾಮಾನ್ಯ. ಬರಲಿರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮಾಜಿ ಮುಖ್ಯಮಂತ್ರಿಯವರು ರಂಭಾಪುರಿ ಪೀಠಕ್ಕೆ ಹೋಗಿದ್ದಾರೆ. ವೀರಶೈವ ಪೀಠಾಧಿಪತಿಗಳೊಂದಿಗೆ ಲಿಂಗಾಯತ ಧರ್ಮದ ಬಗ್ಗೆ ಮಾತಾಡಿದ್ದಾರೆ. ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಲು ಅಂದಿನ ಕಾಂಗ್ರೆಸ್ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದು, ತಮ್ಮದಲ್ಲದ ಲಿಂಗಾಯತ ಧರ್ಮಕ್ಕೆ ಶತಶತಮಾನಗಳಿಂದ ತಳಕುಹಾಕಿಕೊಂಡು, ಈ ಧರ್ಮಕ್ಕೆ ಕಂಟಕಪ್ರಾಯವಾಗಿ ಮಾರ್ಪಟ್ಟಿರುವ ವೀರಶೈವರ ಹೊಟ್ಟೆಯ ಹಿಟ್ಟನ್ನು ಕಸಿದುಕೊಂಡಂತಾಗಿತ್ತು. ಅದಕ್ಕೆ ಕಾರಣೀಭೂತರಾದ ಸಿದ್ದರಾಮಯ್ಯ ತಮ್ಮ ಮಠಕ್ಕೆ ಬಂದಾಗ ಈ ವಿಷಯ ಚರ್ಚೆಗೆ ಬಂದಿರಲೂಬಹುದು.

ಇಬ್ಬರ ಮಧ್ಯದಲ್ಲಾದ ಮಾತುಕತೆಗಳ ಗೌಪ್ಯತೆಯನ್ನು ಪ್ರಜ್ಞಾವಂತರು ಕಾಪಾಡಿಕೊಳ್ಳುತ್ತಾರೆ. ಆದರೆ ತಮ್ಮಿಬ್ಬರ ಮಧ್ಯದಲ್ಲಾದ ಮಾತುಕತೆಗಳ ವಿವರಗಳನ್ನು ಏಕಪಕ್ಷೀಯವಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಮಾಧ್ಯಮಗಳಿಗೆ ಹೇಳಿಕೆ ನೀಡಿದವರು ಪಂಚಪೀಠಾಧಿಪತಿಗಳು. ’ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡುವುದಕ್ಕೆ ಶಿಫಾರಸ್ಸು ಮಾಡಿ ತಪ್ಪುನಿರ್ಧಾರ ಕೈಗೊಂಡಿದ್ದೆ, ಅದರಿಂದ ಪಶ್ಚಾತ್ತಾಪವಾಗಿದೆ, ತಾವು ಕ್ಷಮಾಪಣೆ ನೀಡಿ’ ಎಂದು ಸಿದ್ದರಾಮಯ್ಯನವರು ಕೇಳಿದರು ಎಂದು ಮಾಧ್ಯಮ ವರದಿಗಾರರಿಗೆ ಪಂಚಪೀಠಾಧಿಪತಿಗಳು ತಿಳಿಸಿದರು. ಆದರೆ, ’ಅದು ಸತ್ಯಕ್ಕೆ ದೂರವಾಗಿದೆ’ ಎಂದು ಮರುದಿವಸವೆ ಸ್ವತಃ ಸ್ಪಷ್ಟಪಡಿಸಿದ ಸಿದ್ದರಾಮಯ್ಯನವರು, ತಾವು ಅಂದು ಎದುರಿಸಿದ ಸನ್ನಿವೇಶಗಳನ್ನು ಚರ್ಚಿಸಿದ್ದೇನೆಯೇ ಹೊರತು ಕ್ಷಮಾಪಣೆ ಕೇಳಿಲ್ಲ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದರು. ಈ ರೀತಿಯಾಗಿ ಮಠಕ್ಕೆ ಬಂದ ಅತಿಥಿಯ ಮಾನ ಹರಣಮಾಡುವುದು, ಹಾಗೂ ನಾಡಿನ ಜನತೆಗೆ ತಪ್ಪು ಸಂದೇಶ ನೀಡುವುದು ಪೂಜ್ಯರ ಘನತೆಗೆ ತಕ್ಕುದಲ್ಲ. ಹಾಗೇನಾದರು ಮಾಜಿ ಮುಖ್ಯಮಂತ್ರಿಗಳು ಕ್ಷಮಾಪಣೆ ಕೇಳಿದ್ದೆ ಆಗಿದ್ದರೆ ಸಿದ್ದರಾಮಯ್ಯನವರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಗಳನ್ನು ನೀಡಬಹುದಿತ್ತಲ್ಲವೆ? ಹಾಗಾದಾಗ ಸ್ವಾಮೀಜಿಗಳ ಘನತೆ ಇನ್ನೂ ಹೆಚ್ಚಾಗಬಹುದಿತ್ತಲ್ಲವೆ?

ಮತ್ತೊಮ್ಮೆ 2017ಕ್ಕೆ ಹೋಗೋಣ. ಯಾವುದೇ ಪಕ್ಷದ ಸರಕಾರವಾದರು ಮತದಾರನ ಬೇಡಿಕೆಗೆ ಚರ್ಚಿಸಿ ಸ್ಪಂದಿಸುವದು ಕರ್ತವ್ಯ. ಅದರಂತೆ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಲಿಂಗಾಯತರ ಬೇಡಿಕೆಯನ್ನೂ ಕಾರ್ಯಗತಗೊಳಿಸಲು ಪ್ರಯತ್ನಿಸಿದ್ದರು. ಲಿಂಗಾಯತ ಬೇಡಿಕೆ ಎಂದರೆ ಸಾಮಾಜಿಕ ನ್ಯಾಯದ ಬೇಡಿಕೆ. ಅದು ತುಳಿತಕ್ಕೊಳಗಾದ ನೂರಾರು ಸಮಾಜಗಳ ಬೇಡಿಕೆಯಾಗಿತ್ತು. ಅದು ಲಿಂಗಾಯತರ ಅಸ್ಮಿತೆಯ ಬೇಡಿಕೆಯಾಗಿತ್ತು. ಅಂತಹ ಬೇಡಿಕೆಗೆ ಅಡ್ಡಗಾಲಾಗಿದ್ದವರು ಲಿಂಗಾಯತರ ಗುರುಗಳೆಂದು ಪ್ರತಿನಿಧಿಸುವ ಈ ವೀರಶೈವ ಪೀಠಾಧಿಪತಿಗಳು. ತಾನೇ ಸಲ್ಲಿಸಿದ ಬೇಡಿಕೆಗೆ ತಾನೇ ವಿರೋಧ ವ್ಯಕ್ತಪಡಿಸಿತ್ತು ವೀರಶೈವ ಲಿಂಗಾಯತ ಮಹಾಸಭಾ. ಅದು ಆರ್.ಎಸ್.ಎಸ್. ಒಳ ಒಪ್ಪಂದದಂತೆ ಕಾರ್ಯ ಮಾಡುತ್ತಿದೆ ಎಂದು ಸತ್ಯವನ್ನು ಪ್ರಜ್ಞಾವಂತ ನಾಗರಿಕರ ಸೂಕ್ಷ್ಮ ನೋಟದಿಂದ ಮುಚ್ಚಿಡಲಾಗಲಿಲ್ಲ.

ಸಿದ್ದರಾಮಯ್ಯ ಕರ್ನಾಟಕ ಕಂಡ ಒಬ್ಬ ಪ್ರಜ್ಞಾವಂತ ರಾಜಕಾರಣಿ. ಸಮಾಜವಾದದ ಸಿದ್ಧಾಂತದಲ್ಲಿ ರಾಜಕೀಯ ಪ್ರವೇಶ ಪಡೆದ ಇವರು ಸಾಮಾಜಿಕ ಹರಿಕಾರನಾದ ಬಸವಣ್ಣನವರ ಸಿದ್ಧಾಂತದಲ್ಲಿ ನಂಬಿಕೆ ಹೊಂದಿರುವ ಒಬ್ಬ ರಾಜಕೀಯ ಮುತ್ಸದ್ಧಿ. ಲಿಂಗಾಯತರ ಬೇಡಿಕೆ ನ್ಯಾಯವಾದ ಬೇಡಿಕೆ ಎಂದು ಈ ಜನಪ್ರತಿನಿಧಿಗೆ ಮನದಟ್ಟಾಗಿತ್ತು. ಅವರು ಅಂದು ನೀಡಿದ ಪತ್ರಿಕಾ ಸಂದರ್ಶನ ಇದಕ್ಕೆ ಕನ್ನಡಿ ಹಿಡಿಯುತ್ತದೆ.

“ಪ್ರತ್ಯೇಕ ಲಿಂಗಾಯತ ಧರ್ಮ ಘೋಷಿಸುವದಾಗಿ ಸರ್ಕಾರ ಎಂದೂ ಹೇಳಿಲ್ಲ, ನಾನೂ ಎಲ್ಲೂ ಆ ಬಗ್ಗೆ ಪ್ರತಿಪಾದನೆ ಮಾಡಿಲ್ಲ. ವೀರಶೈವ ಮಹಾಸಭಾದವರು ಬಂದು ’ವೀರಶೈವ-ಲಿಂಗಾಯತ’ ಪ್ರತ್ಯೇಕ ಧರ್ಮ ಘೋಷಣೆ ಮಾಡುವಂತೆ ಸರ್ಕಾರವನ್ನು ಕೇಳಿಕೊಂಡರು. ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿಯವರು ’ಲಿಂಗಾಯತ ಧರ್ಮ’ ಘೋಷಿಸಿ ಎಂದು ಮನವಿ ಮಾಡಿದರು. ಅವರಾಗಿಯೆ ನಮ್ಮ ಬಳಿ ಬಂದಿದ್ದಾರೆ; ಒಟ್ಟಾಗಿ ಬಂದರೆ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಎರಡೂ ಕಡೆಯವರಿಗೆ ಹೇಳಿದ್ದೇನೆ. ಆದರೆ ಇದುವರೆಗೂ ಅವರು ಒಟ್ಟಾರೆಯಾಗಿ ಬಂದಿಲ್ಲ. ಪ್ರತ್ಯೇಕ ಧರ್ಮ ಘೋಷಿಸಲು ಸಂವಿಧಾನದಲ್ಲಿ ಅವಕಾಶ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಸಂವಿಧಾನದ ಚೌಕಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಗುವದು” ಎಂದು ಹೇಳುತ್ತ, ’ಸಿದ್ದರಾಮಯ್ಯ ಸಮಾಜ ಒಡೆಯುತ್ತಿದ್ದಾರೆಯೇ?’ ಎಂಬ ಪ್ರಶ್ನೆಗೆ “ಸಮಾಜ ಒಡೆಯುವ ಕೆಲಸವನ್ನು ಬಿ.ಜೆ.ಪಿ.ಯವರು ಮಾಡುತ್ತಿದ್ದಾರೆ. ನಮ್ಮದು ಏನಿದ್ದರೂ ಸಮಾಜ ಕಟ್ಟುವ ಕೆಲಸ” ಎಂದು ಉತ್ತರಿಸಿದ್ದರು. (ಉಲ್ಲೇಖ ಪ್ರಜಾವಾಣಿ ಜುಲೈ 30. 2017)

ಇನ್ನು ಧರ್ಮ ಒಡೆದ ವಿಷಯಕ್ಕೆ ಬರೋಣ.

ಧರ್ಮಗಳು ಮಾನವನ ಏಳಿಗೆ ಬಯಸುವ ಮಾರ್ಗೋಪಾಯಗಳು. ’ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು’ ಎಂಬುದು ಎಲ್ಲ ಧರ್ಮಗಳ ಸಿದ್ಧಾಂತ. ಆದರೆ ಅದು ಹಿಂದೂ ಧರ್ಮದಲ್ಲಿಲ್ಲದ ಕಾರಣ ಬಸವಣ್ಣನವರು ಸಿಡಿದೆದ್ದು ಆ ಧರ್ಮವನ್ನು ದಿಕ್ಕರಿಸಿ ಹೊರಬಂದರು.

ಲಿಂಗ, ವರ್ಣ, ವರ್ಗಗಳ ವಿಂಗಡನೆಯನ್ನು ವಿರೋಧಿಸಿ ಮಾನವರೆಲ್ಲರೂ ಸಮಾನರೆಂದರು ಶರಣರು. ಹಿಂದೂ ಧರ್ಮದಲ್ಲಿ ಮಹಿಳೆಯ ನೈಸರ್ಗಿಕ ಋತುಚಕ್ರವನ್ನೂ ಸಹ ಮೈಲಿಗೆ-ಸೂತಕವನ್ನಾಗಿ ಪರಿಗಣಿಸುತ್ತಾರೆ. ಹಿಂದೂಗಳ ಪವಿತ್ರ ದೇವಸ್ಥಾನವಾದ ಕೇರಳದ ಅಯ್ಯಪ್ಪಸ್ವಾಮಿ ದೇವಸ್ಥಾನ ಇಂದಿಗೂ ಅದನ್ನು ಕಾಪಾಡಿಕೊಂಡು ಬರುತ್ತಿದೆ. ಈ ಅಸಮಾನತೆಯ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಆದೇಶ ಪಡೆದರೂ ಅದನ್ನು ಪಾಲಿಸಲು ಇಂದಿಗೂ ಒಪ್ಪುತ್ತಿಲ್ಲ ಹಿಂದೂ ಧರ್ಮಿಷ್ಟರು. ಆದರೆ ಲಿಂಗ ಅಸಮಾನತೆಯನ್ನು ಹನ್ನೆರಡನೆಯ ಶತಮಾನದಲ್ಲಿಯೇ ಹೋಗಲಾಡಿಸಿದವರು ಬಸವಾದಿ ಶರಣರು. ಕರ್ಮಸಿದ್ಧಾಂತದಿಂದ ಮಾನವನ ಏಳಿಗೆ ಅಸಾಧ್ಯ ಎಂದರಿತ ಬಸವಣ್ಣನವರು ಕಾಯಕ ಸಿದ್ಧಾಂತದಲ್ಲಿ ನಂಬುಗೆ ಇಟ್ಟರು. ಸತ್ಯಶುದ್ಧ ಕಾಯಕ ಮಾಡಿ ಉಣ್ಣು. ಕಾಯಕದಲ್ಲಿ ಪಡೆದಿದ್ದನ್ನು ನೀನೊಬ್ಬನೆ ಅನುಭವಿಸಬೇಡ, ಅದನ್ನು ಹಂಚಿಕೊಂಡು ತಿನ್ನು ಎಂದು ತಿಳಿಸಿದರು (ದಾಸೋಹ). ಅಂದು ಶಿಕ್ಷಣವು ವಿಪ್ರರ ಸೊತ್ತಾಗಿತ್ತು. ’ವೇದವ ನುಡಿವಲ್ಲಿ ವಿಪ್ರರು, ಮತ್ತಾರೂ ಶೂದ್ರಜಾತಿ ಕೇಳದಂತೆ ನುಡಿವುದೇತಕ್ಕೆ?’ ಎಂದು ಕೇಳಿದ್ದರು ಶರಣರಾದ ಅರಿವಿನ ಮಾರಿತಂದೆ. ಅಕ್ಷರ ಎಲ್ಲರ ಸ್ವತ್ತು ಎಂದು ಹೇಳಿ ಅದನ್ನು ದೊರಕಿಸಿಕೊಳ್ಳುವ ಹಕ್ಕನ್ನು ತಳಸಮುದಾಯಕ್ಕೂ ನೀಡಿತ್ತು ಲಿಂಗಾಯತ ಧರ್ಮ.

ರಂಭಾಪುರಿ ಶ್ರೀ

ಹಿಂದೂ ಧರ್ಮದ ಮೂಲವಾದ ಚಾತುರ್ವರ್ಣ, ದೇವಸ್ಥಾನ, ಬಹುದೇವೋಪಾಸನೆಗಳನ್ನು ತಿರಸ್ಕರಿಸಿತ್ತು ಲಿಂಗಾಯತ ಧರ್ಮ. ಹಿಂದೂ ಧರ್ಮ ಆಲಯ ಸಿದ್ಧಾಂತ ಪ್ರತಿಪಾದಿಸಿದರೆ ಲಿಂಗಾಯತ ಬಯಲನ್ನು ಪ್ರತಿಪಾದಿಸುತ್ತದೆ. ಹಿಂದೂ ಧರ್ಮ ಚಾತುರ್ವರ್ಣ ಪದ್ಧತಿಯ ಶ್ರೇಣಿಕೃತವರ್ಗಗಳನ್ನು ಸೃಷ್ಟಿಸಿ ಮಾನವರನ್ನು ವಿಭಜಿಸುತ್ತದೆ. ಆದರೆ ಇವನಾರವ ಇವನಾರವ ಎಂದು ಮಾನವನಲ್ಲಿ ಭೇದ ಎಣಿಸದೆ ಇವ ನಮ್ಮವನೆಂದು ಎಲ್ಲರನ್ನೂ ಅಪ್ಪಿಕೊಳ್ಳಿ ಎನ್ನುತ್ತಾರೆ ಬಸವಣ್ಣನವರು. ಸೂತಕ, ಗೋತ್ರ, ಮೌಢ್ಯ, ಬಹುದೇವೋಪಾಸನೆ ಹಿಂದು ಧರ್ಮದ ಆಚಾರಗಳಾದರೆ, ಮಾನವನಿಗೆ ಅವನ ಹುಟ್ಟಿನಿಂದ ಗೋತ್ರ ಬರದು, ಅವನ ಕೌಶಲ್ಯ ಕಾಯಕದಿಂದ ಶ್ರೇಷ್ಠತೆಯನ್ನು ಸಾಧಿಸಬೇಕೆಂದರು ಬಸವಣ್ಣನವರು. ದೇವರು ದೇವಸ್ಥಾನದಲ್ಲಿ ಮಾತ್ರವಿಲ್ಲ ಅವನು ಜಗದಗಲ ಮಿಗೆಯಗಲ ಮುಗಿಲಗಲ ಎಂದರು ಶರಣರು. ಅವನು ಪ್ರತಿಯೊಬ್ಬನ ಹೃದಯದಲ್ಲಿ ಇರುವನು, ಅವನಿರುವ ದೇವಸ್ಥಾನವೆ ನನ್ನ ಶರೀರ ಎಂದರು. ಎನ್ನ ಕಾಲೆ ಕಂಬ ಶಿರವೆ ಹೊನ್ನ ಕಳಸವೆಂದು ಶೋಷಣೆಯ ಮೂಲವಾದ ದೇವಸ್ಥಾನದ ಸಂಸ್ಕೃತಿಯನ್ನು ದಿಕ್ಕರಿಸಿದರು. ದೇವಾಲಯದಿಂದ ದೇವರನ್ನು ಕಿತ್ತುತಂದು ಭಕ್ತನ ಕೈಯಲ್ಲಿಟ್ಟು ಅವನನ್ನು ಇಷ್ಟಲಿಂಗದ ರೂಪದಲ್ಲಿ ಪೂಜಿಸೆಂದರು. ದೇವರು ಹಾಗೂ ಭಕ್ತನ ಮಧ್ಯ ದಲ್ಲಾಳಿಯು ಏಕೆ ಬೇಕೆಂದರು. ಸಾಮಾನ್ಯರು ಮಾತನಾಡುವ ಭಾಷೆಯಲ್ಲಿಯೇ ದೇವರನ್ನು ಒಲಿಸಿಕೊಳ್ಳಬಹುದು ಎಂದು ಕನ್ನಡದಲ್ಲಿ ಲಿಂಗಾಯತ ಧರ್ಮ ಸಿದ್ಧಾಂತಗಳನ್ನು ತಿಳಿಸಿದರು. ಎಲ್ಲ ಬಲ್ಲವನಾದ ದೇವರಿಗೆ ಸಾಮಾನ್ಯರ ಭಾಷೆ ಬಾರದೆ? ದೇವರಿಗೇಕೆ ಸಂಸ್ಕೃತ ಭಾಷೆ ಎಂದರು.

ಅನೇಕ ಮೂಲ ವ್ಯತ್ಯಾಸಗಳಿರುವ ಲಿಂಗಾಯತ ಸಿದ್ಧಾಂತ ಹಿಂದೂ ಧರ್ಮದ ಭಾಗ ಹೇಗಾಗುತ್ತದೆ? ಇದನ್ನೆಲ್ಲ ಪ್ರಶ್ನಿಸಿ, ಖಂಡಿಸಿ ಅದರಿಂದ ಹೊರಬಂದವರಲ್ಲಿ ಬಸವಣ್ಣರೇ ಮೊದಲಿಗರೇನಲ್ಲ. ಅವರ ಪೂರ್ವದಲ್ಲಿ ಹಿಂದು ಧರ್ಮದಿಂದ ಸಿಡಿದಿದ್ದವರು ಜೈನ ತೀರ್ಥಂಕರರು ಮತ್ತು ಬೌದ್ಧ ಧರ್ಮ ಸ್ಥಾಪಕ ಬುದ್ಧ. ಹನ್ನೆರಡನೆಯ ಶತಮಾನದಲ್ಲಿ ಹಿಂದೂ ಧರ್ಮವನ್ನು ಬಸವಣ್ಣ ಒಡೆದಿದ್ದರೆ, ಹದಿನಾರನೆಯ ಶತಮಾನದಲ್ಲಿ ಗುರು ನಾನಕರು ಸಿಖ್ ಧರ್ಮ ಸ್ಥಾಪಿಸಿ ಹಿಂದೂ ಧರ್ಮ ಒಡೆದಿಲ್ಲವೆ? ಒಡೆದುಹೋಗಿರುವ ಹಿಂದೂ ಧರ್ಮವನ್ನು ಸಿದ್ಧರಾಮಯ್ಯನವರು ಮತ್ತೊಮ್ಮೆ ಹೇಗೆ ಒಡೆಯಲು ಸಾಧ್ಯ. ಅವರದ್ದೇನಿದ್ದರೂ ಒಡೆದುಹೋದ ಜಾತಿಗಳನ್ನು ಕೂಡಿಸುವ, ಜಾತಿರಹಿತ ಸಮಾಜದ ಕನಸುಕಂಡ ಬಸವಣ್ಣನ ಕನಸುಗಳನ್ನು ಇಂದು ಸಾಕಾರಗೊಳಿಸುವ ನಿಟ್ಟಿನಲ್ಲಿ ಲಿಂಗಾಯತ ಮಕ್ಕಳಿಗೆ ಕಲ್ಯಾಣವಾಗಲಿ ಎಂದಿದ್ದರು.

ವೀರಶೈವರು ಯಾರು?

ನೀಲಕಂಠ ಶಿವಾಚಾರ್ಯರ ಕ್ರಿಯಾಸಾಗರದ ಭಾಗ ಒಂದರ ಪ್ರಕಾರ; ’ವಿ’ಎಂದರೆ ’ವಿಕಲ್ಪ,’ ’ರ’ ಎಂದರೆ ’ರಹಿತ’ ಹೀಗೆ ವಿಕಲ್ಪರಹಿತವಾದ ಶೈವವೇ ವೀರಶೈವ ಎಂದು ಹೇಳುತ್ತಾರೆ. ವೀರಶೈವ ಸಿದ್ಧಾಂತದ ಮೂಲ ಆಗಮಗಳು ಎನ್ನುತ್ತಾರೆ. ಆದರೆ ಆಗಮಗಳ ಸಂಖ್ಯೆ ನಿಖರವಾಗಿಲ್ಲ. 28-29ಕ್ಕಿಂತ ಅಧಿಕ ಇರಬಹುದು ಎನ್ನುತ್ತಾರೆ. ಆಗಮಗಳ ರಚನೆಯ ಕಾಲವನ್ನು ವೇದಕಾಲಕ್ಕಿಂತ ಪೂರ್ವದ್ದು ಎನ್ನುತ್ತಾರೆ. ಆಗಮಗಳನ್ನು ಶಿವನು ಮೊದಲು ಪಾರ್ವತಿಗೆ ಅನಂತರ ಕುಮಾರನಿಗೆ ಬೋಧಿಸಿದನೆಂದು ಹೇಳುತ್ತಾರೆ. ಆದರೆ ವಿದ್ವಾಂಸರ ಅಭಿಪ್ರಾಯ ಬಿನ್ನವಾಗಿದೆ. ಆಗಮಗಳ ರಚನೆಯು ಬಿನ್ನಭಿನ್ನ ಕಾಲದಲ್ಲಿ ಭಿನ್ನಭಿನ್ನ ವ್ಯಕ್ತಿಗಳಿಂದ ರಚಿಸಲ್ಪಟ್ಟಿವೆ ಎನ್ನುತ್ತಾರೆ. ಶೈವರಲ್ಲಿ ಅವರು ಏಳು ಶೈವ ಪ್ರಭೇದಗಳನ್ನು ಗುರುತಿಸುತ್ತಾರೆ.

1) ಆನಾದಿಶೈವ 2) ಆದಿಶೈವ 3) ಅನುಶೈವ 4) ಮಹಾಶೈವ 5) ಯೋಗಶೈವ 6) ಜ್ಞಾನಶೈವ ಹಾಗು 7)ವೀರಶೈವ.

ಶೈವ ಸಂಪ್ರದಾಯವನ್ನು ವಚನಕಾರರು ಸಹ ಗುರುತಿಸಿದ್ದಾರೆ. ಶರಣೆ ಅಕ್ಕಮಹಾದೇವಿ ಜಾತಿಶೈವ, ಅಜಾತಿಶೈವ ಎಂದು ಹೇಳಿದರೆ, ಚನ್ನಬಸವಣ್ಣ ಶೈವ, ಭವಿಶೈವ, ಜಡಶೈವ, ಶುದ್ಧಶೈವ ಎಂದು ಶೈವದಲ್ಲಿ ನಾಲ್ಕು ಭೇದಗಳನ್ನು ಉಲ್ಲೇಖಿಸುತ್ತಾನೆ. ಮೊಳಿಗೆ ಮಾರಯ್ಯನು ಶುದ್ಧಶೈವ, ಪೂರ್ವಶೈವ, ಮಾರ್ಗಶೈವ ಮತ್ತು ಆದಿಶೈವಗಳನ್ನು ತನ್ನ ವಚನಗಳಲ್ಲಿ ಕಾಣಿಸಿದ್ದಾನೆ. ಆದರೆ ವೀರಶೈವವಾದಿಗಳ ವಾದದಂತೆ ವೀರಶೈವವು ವಚನಸಾಹಿತ್ಯದ ರಚನೆಯ ಕಾಲದ ಪೂರ್ವದಲ್ಲಿ ಇತ್ತೆಂಬ ಹೇಳಿಕೆಗೆ ಸಾಕ್ಷ್ಯ ಸಿಕ್ಕಿಲ್ಲವೆಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. ಕ್ರಿ.ಶ.1260ಕ್ಕಿಂತ ಮುಂಚಿನ ಶಾಸನಗಳಲ್ಲಿ ವೀರಶೈವ ಪದ ದೊರೆತಿಲ್ಲ ಎಂದು ಹೇಳುತ್ತ, ಅರ್ಜುನವಾಡ ಶಾಸನದಲ್ಲಿ ’ವೀರಮಾಹೇಶ್ವರ’ ಪದ ದೊರೆತಿದ್ದು ಅಂದಿನ ಹಾಲಬಸವಿ ದೇವನನ್ನು ವೀರಮಾಹೇಶ್ವರ ಎಂದು ಕರೆದಿದ್ದಿದ್ದರು ಎನ್ನುತ್ತಾರೆ. ಬಹುತೇಕ ಸಂಶೋಧಕರು ವೀರಶೈವರ ಇತಿಹಾಸ ಪ್ರಾರಂಭವಾಗಿದ್ದೇ 15ನೆಯ ಶತಮಾನದ ನಂತರ ಎನ್ನುತ್ತಾರೆ.

ಬಸವ ಸ್ಥಾಪಿತ ಲಿಂಗಾಯತ ಧರ್ಮದಲ್ಲಿ ಇಷ್ಟಲಿಂಗಕ್ಕಿಂತ ಧರ್ಮ ಪ್ರಚಾರಕ ಜಂಗಮನಿಗೆ ಅಧಿಕ ಸ್ಥಾನ ನೀಡಿದ್ದಾರೆ. ಬಸವಣ್ಣನವರು ಬಯಲಲ್ಲಿ ಬಯಲಾದ ನಂತರ ಪೂಜ್ಯ ಜಂಗಮನ ಸ್ಥಾನವನ್ನು ಆಕ್ರಮಿಸಿಕೊಂಡು ಜಂಗಮನ ಹೆಸರಿನ ಲಾಭ ಪಡೆಯಲು ಬಂದವರು ಆಂಧ್ರ ಪ್ರದೇಶದ ಲಿಂಗೀ ಬ್ರಾಹ್ಮಣರು ಎನ್ನುತ್ತಾರೆ ಅನೇಕ ಸಂಶೋಧಕರು. ಆರಾಧ್ಯ ಬ್ರಾಹ್ಮಣರಾದ ಇವರು ಬಸವಣ್ಣ ಬಹಿಷ್ಕರಿಸಿದ ಸ್ಥಾವರವನ್ನು ಮರುಸ್ಥಾಪಿಸಿ ಮಠ ಸಂಸ್ಕೃತಿಯನ್ನು ಹುಟ್ಟುಹಾಕಿದರು. ಹರಿವ ನೀರಾಗಿದ್ದ ಜಂಗಮನನ್ನು ಕಟ್ಟಿಹಾಕಿ ಸ್ಥಾವರಗೊಳಿಸಿದರು. ತಮ್ಮ ಹಕ್ಕನ್ನು ಜಮಾಯಿಸಲು ಹದಿನೈದನೆಯ ಶತಮಾನದಲ್ಲಿ ’ಸಿದ್ಧಾಂತ ಶಿಖಾಮಣಿ’ ಎಂಬ ಗ್ರಂಥ ರಚಿಸಿ ಅದನ್ನು ಅನಾದಿಕಾಲದ ರಚನೆ ಎಂದರು. ಆಗಮಗಳು ವೇದಗಳಷ್ಟೇ ಪೂರ್ವ ಕಾಲದವು, ಅವುಗಳು ದೇವವಾಚಕ ಎಂದರು. ತಮ್ಮ ಗುರುಗಳಾದ ಕಾಲ್ಪನಿಕ ರೇಣುಕಾಚಾರ್ಯರು ಸಾಮಾನ್ಯ ಮಾನವರಂತೆ ಯೋನಿ ಜನಕರಲ್ಲ, ಅವರು ಶಿಲೋದ್ಭವರೆಂದರು. ಅವರ ಕಾಲಮಾನವನ್ನು ತ್ರೇತಾಯುಗಕ್ಕೆ ಒಯ್ದರು. ರಾಮಾಯಣದ ವಿಭೀಷಣನ ಮೂಲಕ ಅವರು ಲಂಕೆಯಲ್ಲಿ ಮೂರು ಕೋಟಿ ಸ್ಥಾವರ ಲಿಂಗಗಳನ್ನು ಸ್ಥಾಪಿಸಿದನೆಂದರು. ಅವರ ಚರಿತ್ರೆ ಹೇಳಲು ಹನ್ನೆರಡು ಪುರಾಣಗಳನ್ನು ರಚಿಸಿದರು. ಹದಿನೈದು ಹದಿನಾರನೆಯ ಶತಮಾನದಲ್ಲಿ ರಚಿತವಾದ ಸಾಹಿತ್ಯಕ್ಕೆ ಪ್ರಾಚೀನವಾದ ವೇದಕಾಲದ ಸಾಹಿತ್ಯವೆಂದರು.

ಇದರ ಮೂಲ ಉದ್ದೇಶ ಮುಗ್ಧ ಜನತೆಯ ಶೋಷಣೆ ಮಾಡುವದಾಗಿತ್ತು. ಶೈವ ಧರ್ಮದೊಂದಿಗೆ ಲಿಂಗಾಯತ ಧರ್ಮ ಬೆರೆಸಿ ದೇವಸ್ಥಾನಗಳನ್ನು ಮರುನಿರ್ಮಾಣ ಮಾಡಿದರು. ದೇವರ ಪೂಜೆಗೆ ಅರ್ಚಕರನ್ನು ನೇಮಿಸಿದರು. ಶೈವ ಸಿದ್ಧಾಂತದೊಂದಿಗೆ ವೀರ ಜೋಡಿಸಿ ಅದಕ್ಕೊಂದು ಹೊಸ ನಾಮಕರಣ ಮಾಡಿ ಅವರಿಗೆ ವೀರಶೈವರೆಂದರು. ಅಂದು ಲಭ್ಯವಿದ್ದ ಶರಣರ ವಚನಗಳನ್ನು ನಕಲು ಮಾಡುವ ನೆಪದಲ್ಲಿ ಅವುಗಳನ್ನು ಪ್ರಕ್ಷುಬ್ಧಗೊಳಿಸಿದರು. ವೀರಶೈವ ಪದಗಳನ್ನು ಮತ್ತು ಸಂಸ್ಕೃತ ವಾಕ್ಯಗಳನ್ನು ವಚನಗಳಲ್ಲಿ ತುರುಕಿದರು.

ಮಾತೆ ಮಹಾದೇವಿ

ಇಂತಹ ಸಿದ್ಧಾಂತದ ಹಿನ್ನೆಲೆಯ ಸ್ವಾಮೀಜಿಯನ್ನು ಕಾಣುವದು ಸಿದ್ದರಾಮಯ್ಯನಂತಹ ಮುತ್ಸದ್ದಿಗೆ ಶೋಭೆ ತರುವದಿಲ್ಲ. ಈ ನಾಡಿನಲ್ಲಿ ಕೆಲವು ಸಮಾಜಗಳು ರಾಜಕೀಯ ಪಕ್ಷಗಳಿಗೆ ಮಾರಿಕೊಂಡುಬಿಟ್ಟಿವೆ. ಅವುಗಳಲ್ಲಿ ವೀರಶೈವವೂ ಒಂದು. ದೇಶದ ಜನರ ಹಿತಕ್ಕಿಂತ ಸ್ವಹಿತವೆ ಮುಖ್ಯವೆಂಬ ಪಟ್ಟಭದ್ರರನ್ನು ಕಾಣುವದು ನಿರರ್ತಕ.

ಇಂದಿನ ಸರಕಾರಕ್ಕೆ ಜನರ ಸಮಸ್ಯೆಗಳು, ಅವರ ಕಲ್ಯಾಣ ಮುಖ್ಯವಲ್ಲ. ಅವರಿಗೆ ಅಧಿಕಾರ ಮಾತ್ರವೇ ಮುಖ್ಯವಾಗಿ ದೇಶವನ್ನು ಜಾತಿಜಾತಿಗಳಲ್ಲಿ ವಿಭಜಸಿ, ಅಲ್ಪಸಂಖ್ಯಾತ ಧರ್ಮಗಳನ್ನು ವಿರೋಧಿಸಿ, ಧರ್ಮಧರ್ಮಗಳಲ್ಲಿ ವಿಷಬೀಜ ಬಿತ್ತಿ ಭಾವನಾತ್ಮಕ ಲಾಭ ಪಡೆದು ಮರಳಿ ಅಧಿಕಾರದ ಚುಕ್ಕಾಣಿ ಹಿಡಿಯುವದು ಅವರಿಗೆ ಮುಖ್ಯ. ಇಂತಹ ಚಿಲ್ಲರೆ ವಿಷಯಗಳನ್ನು ಮುನ್ನೆಲೆಗೆ ತಂದು ಜನರ ನಿಜವಾದ ಸಮಸ್ಯೆಗಳನ್ನು ಮರೆಮಾಚುವುದು ಇಂದಿನ ಡಬಲ್ ಎಂಜಿನ್ ಸರಕಾರಗಳ ಚುನಾವಣಾ ನೀತಿ. ಮಾರಿಕೊಂಡ ಮಾಧ್ಯಮಗಳಿಗೆ ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಕೋಮುಗಲಭೆ, ಬೆಲೆ ಏರಿಕೆ, ನಿರುದ್ಯೋಗ, ರೈತನ ಬವಣೆ, ದೇಶದ ಸಂಪತ್ತು ಶ್ರೀಮಂತರಿಗೆ ಪರಭಾರೆಯಾಗುತ್ತಿರುವ ವಿಷಯ ’ಬ್ರೇಕಿಂಗ್ ನ್ಯೂಸ್’ ಆಗದು. ಅವಕ್ಕೆನೀದ್ದರು ಶಾಲೆಯ ಮಕ್ಕಳ ತಲೆವಸ್ತ್ರ, ರಾಜಕಾರಣಿಗಳ ಮಾಂಸದೂಟ, ದೇವರುಗಳ ಮೆರವಣಿಗೆ, ದೇವಸ್ಥಾನಗಳ ಮರುನಿರ್ಮಾಣ, ಮಠಮಾನ್ಯಗಳ ಅಭಿವೃದ್ಧಿ ಮಾತ್ರ ಮುಖ್ಯವಾಗುತ್ತವೆ. ನೈಜ ಸಮಸ್ಯೆಗಳು ಅವುಗಳಿಗೆ ಕಾಣದೆ ಹೋಗುತ್ತದೆ.

ಲಿಂಗಾಯತ ಧರ್ಮಕ್ಕೆ ರಾಜಾಶ್ರಯದ ಅವಶ್ಯಕತೆ ಇದೆಯೇ?

ಧರ್ಮಗಳಿಗೆ ರಾಜಾಶ್ರಯ ಸಿಕ್ಕಲ್ಲಿ ಧರ್ಮಪ್ರಚಾರ ಬಹುಬೇಗನೆ ಪಸರಿಸಿ ಜನಪ್ರಿಯವಾಗುತ್ತವೆ ಎಂದು ಇತಿಹಾಸ ಪುಟಗಳು ಸಾರುತ್ತವೆ. ಭಾರತದಲ್ಲಿ ಜನ್ಮತಳೆದ ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳಿಗೆ ರಾಜಾಶ್ರಯ ದೊರಕಿತ್ತು.

ಬೌದ್ಧ ಧರ್ಮದ ಸ್ಥಾಪಕ ಗೌತಮ ಬುದ್ಧನು ಸ್ವತಃ ರಾಜನಾಗಿದ್ದ. ಅವನ ಕಾಲಾವಧಿಯೂ ದೀರ್ಘವಾಗಿತ್ತು. ಅದು ಭಾರತದ ಗಡಿಯಾಚೆ ಪಸರಿಸಲು ಅಂದಿನ ಚಕ್ರವರ್ತಿ ಸಾಮ್ರಾಟ್ ಅಶೋಕನು ಪ್ರಮುಖ ಕಾರಣೀಕರ್ತನು. ಇಡೀ ಏಷ್ಯಾ ಖಂಡದಲ್ಲಿ ಪಸರಿಸಿದ ಬಹು ದೊಡ್ಡ ಧರ್ಮವದು.

ಜೈನ ಧರ್ಮದ ಕೊನೆಯ ತೀರ್ಥಂಕರನಾದ ಮಹಾವೀರನು ಸಹ ರಾಜಮನೆತನದವ. ಅವನ ಹಿಂದಿದ್ದ ಇಪ್ಪತ್ತಮೂರು ತೀರ್ಥಂಕರರು ಒಂದಿಲ್ಲೊಂದು ಪ್ರತಿಷ್ಠಿತ ಮನೆತನದವರಾಗಿದ್ದರು. ವೈದಿಕ ಧರ್ಮದೊಂದಿಗೆ ಸೆಣಸಾಡಿ ಸಾವಿರಾರು ವರ್ಷಗಳವರೆಗೆ ರಾಜಾಶ್ರಯ ಪಡೆದ ಧರ್ಮವಾಗಿತ್ತದು. ಅಲ್ಲದೆ ಇಂದಿನ ಪಾಕಿಸ್ತಾನ, ಬಾಂಗ್ಲಾದೇಶ, ಬರ್ಮಾ, ನೇಪಾಳ, ಭೂತಾನ ದೇಶಗಳಲ್ಲಿ ಅಲ್ಲದೆ ಭಾರತದಾದ್ಯಂತ ಪಸರಿಸಿದ ಧರ್ಮವಾಗಿತ್ತು.

ಲಿಂಗಾಯತ ಧರ್ಮ ಸ್ಥಾಪಿಸಿದ ಬಸವಣ್ಣನವರು ಕೂಡ ಬಿಜ್ಜಳನ ಆಸ್ಥಾನದಲ್ಲಿ ಅಮಾತ್ಯರಾಗಿದ್ದವರು. ಆದರೆ ಅವರ ಜೀವಿತಾವಧಿ ತುಂಬ ಕಡಿಮೆ ಇರುವ ಕಾರಣ ಇದು ದಕ್ಷಿಣ ಮಧ್ಯ ಭಾರತವನ್ನು ಬಿಟ್ಟು ಆಚೆ ಹೋಗಲಿಲ್ಲವೆಂದು ಹೇಳಬಹುದು. ಒಳಪಿತೂರಿ, ಅನ್ಯ ಧರ್ಮಗಳೊಂದಿಗಿನ ಹೋರಾಟವು ಈ ಧರ್ಮ ಪ್ರಸರಣಕ್ಕೆ ಅಡ್ಡಗಾಲಾಯಿತು. ಈ ಧರ್ಮಕ್ಕೂ ಕೆಲಕಾಲ ಸಾಮಂತ ರಾಜರೂ, ದೇಸಾಯಿಗಳು ರಾಜಾಶ್ರಯ ನೀಡಿದ್ದರು.

ಇನ್ನು ಹದಿನಾರನೆಯ ಶತಮಾನದಲ್ಲಿ ಉದಯವಾದ ಸಿಖ್ ಧರ್ಮವನ್ನು ಸ್ಥಾಪಿಸಿದವರು ಗುರುನಾನಕರು. ಅವರು ಅದನ್ನು ಸ್ಥಾಪಿಸಿದಾಗ ಅದು ಇಂದಿನ ಪಂಜಾಬಿನ ಕೆಲ ಪ್ರದೇಶಗಳನ್ನು ಬಿಟ್ಟು ಹೊರಹೋಗಲಿಲ್ಲ. ಸಿಖ್ಖರ ಪರಾಕ್ರಮಿ ಹತ್ತು ಗುರುಗಳಲ್ಲಿ ಮೂವರು ಗುರುಗಳು ಮೊಘಲ ಸಾಮ್ರಾಜ್ಯದೊಂದಿಗೆ ಸಂಘರ್ಷಕ್ಕೆ ಇಳಿದು ಹತರಾದರು. ಅಂತಿಮವಾಗಿ ಸಿಖ್ಖರು ತಮ್ಮ ಧಾರ್ಮಿಕ ಪ್ರಾಬಲ್ಯವನ್ನು ಮೆರೆದಿದ್ದು ರಾಜಾ ರಂಜೀತಸಿಂಘನ ಕಾಲದಲ್ಲಿ. ಇದು ಇಂದಿನ ಪಾಕಿಸ್ತಾನ ಹಾಗು ಭಾರತದ ಪಂಜಾಬ್ ಹರಿಯಾಣಾ ರಾಜ್ಯಗಳಲ್ಲಿ ಪಸರಿಸಿದೆ. ಅದಕ್ಕೆ ರಾಜಾ ರಂಜೀತ ಸಿಂಘನ ರಾಜಾಶ್ರಯವೇ ಕಾರಣ ಎನ್ನಬಹುದು.

ರಾಜಾಶ್ರಯವಿಲ್ಲದ ಲಿಂಗಾಯತ ಧರ್ಮ ಬೇಳದೀತೆ? ಲಿಂಗಾಯತ ಧರ್ಮ ಸ್ಥಾಪನೆಗೊಂಡು ಎಂಟು ಶತಮಾನಗಳ ತರುವಾಯವೂ ಅದು ಕರ್ನಾಟಕ, ಮಹಾರಾಷ್ಟ್ರ ಮತ್ತು ಅಲ್ಪಸ್ವಲ್ಪವಾಗಿ ದಕ್ಷಿಣದ ರಾಜ್ಯಗಳಲ್ಲಿ ಪಸರಿಸಿದೆ.

ಕಳೆದ ಒಂಬತ್ತು ಶತಮಾನಗಳ ಕಾಲದಲ್ಲಿ ಆಂತರಿಕ ಹಾಗೂ ಬಾಹ್ಯ ಹೊಡೆತಗಳನ್ನು ತಿಂದು ಈ ಧರ್ಮ ಇನ್ನೂ ಉಸಿರಾಡುತ್ತಿದೆ ಎಂದರೆ ಅದಕ್ಕಿರುವ ಬಲವಾದ ಸಿದ್ಧಾಂತವೇ ಕಾರಣ. ಲಿಂಗಾಯತ ಧರ್ಮ ಅತ್ಯಂತ ವೈಜ್ಞಾನಿಕ ಮತ್ತು ಸರಳ ಧರ್ಮ. ಇದು ಮಾನವ ಸಹಜ ಧರ್ಮ. ಇದಕ್ಕೆ ಪೂರಕವಾದ ಅವಕಾಶ ಸಿಕ್ಕರೆ ಜಗತ್ತಿನ ಎಲ್ಲ ಮಾನವರನ್ನು ಒಗ್ಗೂಡಿಸುವ ಧರ್ಮವಾಗುವದರಲ್ಲಿ ಯಾವದೇ ಸಂದೇಹವಿಲ್ಲ. ರಾಜಾಶ್ರಯ ಸಿಗಲಿ ಸಿಗದೇ ಹೋಗಲಿ ಇದೊಂದು ಸರ್ವತಂತ್ರ ಸ್ವತಂತ್ರ ಧರ್ಮವಾಗಿ ಬೆಳೆದು ಮುಂದೊಂದು ದಿನ ಜಗತ್ತಿನಾದ್ಯಂತ ಪಸರಿಸಿ ಮಾನವ ಕಲ್ಯಾಣ ಮಾಡುವುದರಲ್ಲಿ ಯಾವದೇ ಸಂಶಯವಿಲ್ಲ.

ಜಿ ಬಿ ಪಾಟೀಲ

ಜಿ ಬಿ ಪಾಟೀಲ
ಬಸವನಬಾಗೇವಾಡಿಯ ಜಿ.ಬಿ.ಪಾಟೀಲ್ ಅವರು ಬೆಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿದ್ದೂ, ಸಾಮಾಜಿಕ ಹಾಗೂ ರಾಜಕೀಯ ಸಂಗತಿಗಳಲ್ಲಿ ನಿರಂತರ ಆಸಕ್ತಿ ಹೊಂದಿದ್ದವರು. ಸದ್ಯ ಜಾಗತಿಕ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: ಎಲ್ಲಾ ರೀತಿ ವಿಫಲವಾಗಿರುವ ಬಿಜೆಪಿ ಅಧಿಕಾರಕ್ಕಾಗಿ ಮಾತ್ರ ಸಾವರ್ಕರ್ ಹೆಸರು ಬಳಸುತ್ತಿದೆ: ಹಿಂದೂ ಮಹಾಸಭಾ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...