Homeಕರ್ನಾಟಕಮತಾಂತರ ನಿಷೇಧ ಕಾಯ್ದೆ: ಅಸಹಾಯಕರ ಮೇಲೆ ಪ್ರಹಾರ; ಲಿಂಗಾಯತರಿಗೂ ಗಂಡಾಂತರ

ಮತಾಂತರ ನಿಷೇಧ ಕಾಯ್ದೆ: ಅಸಹಾಯಕರ ಮೇಲೆ ಪ್ರಹಾರ; ಲಿಂಗಾಯತರಿಗೂ ಗಂಡಾಂತರ

- Advertisement -
- Advertisement -

ಕರ್ನಾಟಕ ಸರಕಾರ ’ಮತಾಂತರ ನಿಷೇಧ ಕಾಯ್ದೆ’ ಎಂಬ ಕರಾಳ ವಿಧೇಯಕವನ್ನು ಶಾಸನಸಭೆಯ ಮೇಲ್ಮನೆಯಲ್ಲಿ ಅಂಗೀಕರಿಸಿತು. ಕಳೆದ ಬೆಳಗಾವಿ ಅಧಿವೇಶನದಲ್ಲಿ ಕೆಳಮನೆಯಲ್ಲಿ ಬಹುಮತದಿಂದ ಪಾಸಾಗಿದ್ದ ಈ ವಿಧೇಯಕವನ್ನು ಮೇಲ್ಮನೆಯ ಅಂಗೀಕಾರಕ್ಕಾಗಿ ಸೆಪ್ಟೆಂಬರ್ 15ರಂದು ವಿಧಾನಪರಿಷತ್ತಿನಲ್ಲಿ ಮಂಡಿಸಲಾಗಿತ್ತು. ರಾಜ್ಯದ ಗೃಹ ಮಂತ್ರಿಗಳು ಇದು ಧರ್ಮವನ್ನು ಉಳಿಸುವ ಐತಿಹಾಸಿಕ ವಿಧೇಯಕವೆಂದು ಮಂಡಿಸಿ ಸಭೆಯ ಮುಂದೆ ಚರ್ಚೆಗೆ ಇಟ್ಟರು. ಬೆನ್ನೆಲುಬು ಇಲ್ಲದ ಆಳುವ ಪಕ್ಷದ ಸದಸ್ಯರು ಕೋಲೆತ್ತುಗಳಂತೆ ತಲೆ ಅಲ್ಲಾಡಿಸಿದರು. ವಿರೋಧ ಪಕ್ಷಗಳು ಅದರ ಸಾಧಕಬಾಧಕಗಳನ್ನು ಅಭ್ಯಾಸ ಮಾಡದೆ (ಸಭಾನಾಯಕರನ್ನು ಹೊರತುಪಡಿಸಿ) ಕಾಯ್ದೆಯನ್ನು ಎಳೆಎಳೆಯಾಗಿ ಬಿಡಿಸದೆ ’ವಿರೋಧಕ್ಕಾಗಿ ವಿರೋಧ’ ಎಂಬ ಶಾಸ್ತ್ರದ ಅಡಿಯಲ್ಲಿ ವಿರೋಧಿಸಿ ಐದು ಗಂಟೆಗಳ ಕಾಲ ಸದನದ ಸಮಯವನ್ನು ವ್ಯರ್ಥಮಾಡಿದರು. ಚರ್ಚೆ ಕೂಲಂಕಷವಾಗಿತ್ತು ಎನ್ನುತ್ತಾ, ಸಭೆ ವಿಧೇಯಕವನ್ನು ಬಹುಮತದಿಂದ ಅಂಗೀಕರಿಸಿದೆ ಎಂದು ಸಭಾಧ್ಯಕ್ಷರು ಸದಸ್ಯರಿಗೆ ತಿಳಿಸಿದರು.

ಮತ್ತೊಮ್ಮೆ ಗೆದ್ದ ವೈದಿಕರು

ಇನ್ನೊಂದು ಕಡೆ ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ’ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ಕಾಯ್ದೆಯ ಸುಗ್ರೀವಾಜ್ಞೆ’ಯನ್ನು ನಮ್ಮ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯೆಂದು, ದೆಹಲಿ ಮೂಲದ ’ಇವಾನೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾ ಮತ್ತು ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್’ರವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದರು. ಅದರ ವಿಚಾರಣೆಯನ್ನು ಕೈಗೆತ್ತಿಕೊಂಡ ಕರ್ನಾಟಕ ಉಚ್ಚ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನೋಟಿಸನ್ನು ಜಾರಿ ಮಾಡಿದೆ. ಇಷ್ಟೊಂದು ರಾಡಿ ಎರಚುತ್ತಿರುವ ಈ ವಿಧೇಯಕದ ಕರಾಳತೆಯಾದರೂ ಏನು?

ಏನಿದು ಮತಾಂತರ ನಿಷೇಧ ಕಾಯ್ದೆ?

ಆಮಿಷ ಮತ್ತು ಒತ್ತಾಯದ ಧಾರ್ಮಿಕ ಮತಾಂತರವನ್ನು ತಡೆಯುವುದಕ್ಕಾಗಿ ಈ ಕಾಯ್ದೆಯ ಅವಶ್ಯಕತೆಯಿದೆ ಎನ್ನುತ್ತದೆ ರಾಜ್ಯ ಸರ್ಕಾರ. ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆಯನ್ನು (ಮತಾಂತರ ನಿಷೇಧ) ಉಭಯ ಸದನಗಳಲ್ಲಿ ಅಂಗೀಕರಿಸುವ ಮುನ್ನವೆ ರಾಜ್ಯಪಾಲರಿಂದ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸರಕಾರ ಉದ್ದೇಶಿಸಿತ್ತು. ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕಾನೂನುಬಾಹಿರವಾಗಿ ಮತಾಂತರವಾಗುವುದನ್ನು ತಡೆಯುವುದಕ್ಕಾಗಿ ರೂಪಗೊಂಡಿರುವದೇ ಈ ಮತಾಂತರ ನಿಷೇಧ ಕಾಯ್ದೆ. ಯಾವ ಬಗೆಯ ಮತಾಂತರಕ್ಕೆ ನಿಷೇಧವಿದೆ ಈ ಕಾಯ್ದೆಯಲ್ಲಿ? ಉದ್ಯೋಗದ ಭರವಸೆ, ಉಚಿತ ಶಿಕ್ಷಣದ ಆಮಿಷ, ನಗದು ನೀಡುವ ಆಮಿಷ, ಉತ್ತಮ ಜೀವನ ಶೈಲಿಯ ಭರವಸೆ, ದೈವಿಕ ಅಸಂತೋಷ, ಒತ್ತಾಯದಿಂದ ಮತಾಂತರ ಅಲ್ಲದೆ ವಂಚನೆ ಮೂಲಕವಾಗಿ ಮತಾಂತರ ಮಾಡುವುದಕ್ಕೂ ಇದರಡಿಯಲ್ಲಿ ನಿಷೇಧವಿದೆ. ಮತಾಂತರಕ್ಕೆ ಪೂರಕವಾಗಿ ಯಾವುದೆ ಧರ್ಮದ ಆಚರಣೆಗಳನ್ನು ಅವಹೇಳನ ಮಾಡುವುದು ಸಹ ಆಮಿಷ ಎಂದೇ ಪರಿಗಣಿಸಲಾಗುವದು.

ಆದರೆ ಸ್ವಇಚ್ಛೆಯಿಂದ ಮತಾಂತರವಾಗಿ ವಿವಾಹವಾದರೆ ಈ ಕಾಯ್ದೆಯಲ್ಲಿ ಬಂಧನವಿಲ್ಲ. ಆದರೆ ವಿವಾಹವಾಗಲಿಕ್ಕಾಗಿಯೇ ಮತಾಂತರವಾಗುವುದನ್ನು ಇಲ್ಲಿ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಇಂತಹ ಮದುವೆಯನ್ನು ಸಹ ಅಸಿಂಧು ಎಂದು ಘೋಷಿಸಬಹುದಾಗಿದೆ.

ಸ್ವಇಚ್ಛೆಯಿಂದ ಮತಾಂತರವಾಗಬಯಸುವವರು ಕನಿಷ್ಠ ಮೂವತ್ತು ದಿನಗಳ ಮುಂಚಿತವಾಗಿ ತನ್ನ ವಾಸದ ಜಿಲ್ಲೆ ಅಥವಾ ತನ್ನ ಜನ್ಮಸ್ಥಳದ ಜಲ್ಲೆಯ ದಂಡಾಧಿಕಾರಿ ಅಥವಾ ಜಿಲ್ಲಾ ಅಪರ ದಂಡಾಧಿಕಾರಿಗೆ ಮಾಹಿತಿ ಸಲ್ಲಿಸಬೇಕು. ಇಂತಹ ಮನವಿಯನ್ನು ಪಡೆದ ಅಧಿಕಾರಿಯು ತನ್ನ ಕಚೇರಿಯ ಸೂಚನಾ ಫಲಕದಲ್ಲಿ ಮತಾಂತರವಾಗುವವರ ವಿವರ ಪ್ರಚುರಪಡಿಸಬೇಕು. ಮತಾಂತರವಾಗುವವರ ಹಿನ್ನೆಲೆ ಹಾಗೂ ಕಾರಣಗಳ ಬಗ್ಗೆ ಸಾರ್ವಜನಿಕರು ಆಕ್ಷೇಪಣೆಗಳನ್ನು ತಮ್ಮ ಕಚೇರಿಗೆ ನೀಡಬಹುದೆಂಬ ಮಾಹಿತಿಯನ್ನೂ ಸಹ ಆ ಅಧಿಕಾರಿ ಪ್ರಚಾರ ಮಾಡಬೇಕು. ಒಂದು ವೇಳೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಬಂದಲ್ಲಿ ಮತಾಂತರದ ನೈಜ ಆಶಯ, ಉದ್ದೇಶ ಮತ್ತು ಕಾರಣಗಳ ಬಗ್ಗೆ ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ವಿಚಾರಣೆಯನ್ನು ನಡೆಸಬೇಕು. ಆಮಿಷ ಅಥವಾ ಒತ್ತಡಗಳಿಗೆ ಬಲಿಯಾಗಿ ಮತಾಂತರ ಹೊಂದಲಾಗುತ್ತಿದೆ ಎಂದು ವಿಚಾರಣೆಯ ಸಮಯದಲ್ಲಿ ಬೆಳಕಿಗೆ ಬಂದಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಅಂತಹವರ ವಿರುದ್ಧ ಕ್ರಿಮಿನಲ್ ದೂರನ್ನು ದಾಖಲಿಸಬಹುದು.

ಬಲವಂತವಾಗಿ ಮತಾಂತರಗೊಂಡ ವ್ಯಕ್ತಿಯ/ವ್ಯಕ್ತಿಗಳ ಬಗ್ಗೆ ಯಾರು ದೂರನ್ನು ದಾಖಲಿಸಬಹುದು? ಮತಾಂತರಗೊಂಡ ವ್ಯಕ್ತಿಯ ಪೋಷಕರು, ಸಹೋದರ, ಸಹೋದರಿ, ಸಹವರ್ತಿ ಅಥವಾ ಸಹೋದ್ಯೋಗಿ ಕೂಡ ಮತಾಂತರಗೊಂಡ ವ್ಯಕ್ತಿಯ ಬಗ್ಗೆ ದೂರನ್ನು ನೀಡಬಹುದು. ಆಗ ಪೊಲೀಸರು ಅಂತಹ ದೂರಿಗೆ ಸ್ಪಂದಿಸಿ ಎಫ್‌ಐಆರ್ ದಾಖಲಿಸಬಹುದು.

ವಿಚಾರಣೆಯಲ್ಲಿ ಬಲವಂತದಿಂದ ಮತಾಂತರ ಹೊಂದಿದ್ದಾನೆಂದು ಕಂಡುಬಂದಾಗ ಮೂರು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಇಪ್ಪತ್ತೈದು ಸಾವಿರ ರೂಪಾಯಿಗಳ ದಂಡ ವಸೂಲಿ ಮಾಡಲು ಈ ಕಾನೂನಿನಲ್ಲಿ ಅವಕಾಶವಿದೆ.

ಅಲ್ಲದೆ ಅಪ್ರಾಪ್ತ ವ್ಯಕ್ತಿ, ಮಹಿಳೆ ಮತ್ತು ಎಸ್‌ಸಿ-ಎಸ್‌ಟಿ ಸಮುದಾಯಗಳಿಗೆ ಸೇರಿದ ವ್ಯಕ್ತಿಯನ್ನು ಬಲವಂತದಿಂದ ಮತಾಂತರಗೊಳಿಸಿದವನಿಗೆ ಮೂರು ವರ್ಷದಿಂದ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಈ ಕಾಯ್ದೆಯ ಅಡಿಯಲ್ಲಿ ನೀಡಬಹುದು. ಶಿಕ್ಷೆಯೊಂದಿಗೆ ಐವತ್ತು ಸಾವಿರ ದಂಡವನ್ನೂ ಸಹ ವಸೂಲಿ ಮಾಡಲು ಅವಕಾಶವಿದೆ.

ಕಾನೂನಿನ ಅವಶ್ಯಕತೆ ಹಾಗು ಸಿಂಧುತ್ವ

ಭಾರತದ ಸಂವಿಧಾನದ ಅನುಚ್ಛೇದ 25ರಿಂದ 30ರವರೆಗೆ ಧಾರ್ಮಿಕ ಹಕ್ಕಗಳನ್ನು ಚರ್ಚಿಸಲಾಗಿದೆ. ಧಾರ್ಮಿಕ ಹಕ್ಕನ್ನು ಸಂವಿಧಾನದ ಅನುಚ್ಛೇದ 25ರಲ್ಲಿ ವೈಯಕ್ತಿಕ ಹಕ್ಕನ್ನಾಗಿ ನೀಡಿದ್ದರೆ, ಧಾರ್ಮಿಕ ಸಮುದಾಯಗಳಿಗೂ ಕೂಡ ಇಂತಹದೆ ಹಕ್ಕನ್ನು ಅನುಚ್ಛೇದ 26ರಲ್ಲಿ ನೀಡಲಾಗಿದೆ. ಅನುಚ್ಛೇದ 29 ಮತ್ತು 30ಗಳನ್ನು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳ ರಕ್ಷಣೆಗಾಗಿ ಮೀಸಲಾಗಿರಿಸಲಾಗಿದೆ. ಆಲ್ಪಸಂಖ್ಯಾತ ಧರ್ಮಗಳ ಧಾರ್ಮಿಕ ಸಂಸ್ಥೆಗಳು ಧಾರ್ಮಿಕ ಉದ್ದೇಶಗಳಿಗಾಗಿ ಸಂಸ್ಥೆಗಳನ್ನು ಕಟ್ಟಿ ಅವುಗಳನ್ನು ಬೆಳಸಿ ನಿರ್ವಹಿಸಿಕೊಂಡು ಹೋಗುವ ಹಕ್ಕನ್ನು ಸಹ ಅನುಚ್ಛೇದ 26ರಲ್ಲಿ ನೀಡಲಾಗಿದೆ.

ಹೀಗಿದ್ದರೂ ಕೂಡ ನಮ್ಮ ದೇಶದ ಕಾನೂನಿನಲ್ಲಿ ಕೆಲ ಅಂಶಗಳು ಅಲ್ಪಸಂಖ್ಯಾತ ಧರ್ಮಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿಲ್ಲ.

ಧರ್ಮಾಧಾರಿತದೇಶವಿಭಜನೆಯ ಹಿನ್ನೆಲೆಯ ಟ್ರಾಮಾದ ಕಾರಣವೂ ಸೇರಿದಂತೆ, ಕೆಲವೊಮ್ಮೆ ವೈದಿಕ ಹುನ್ನಾರವೂ ಆಗಿ ಮತ್ತೆ ಕೆಲವೊಮ್ಮೆ ತಿಳಿವಳಿಕೆಯ ಕೊರತೆಯಾಗಿ, ಈ ದೇಶದಲ್ಲಿ ಜನ್ಮತಾಳಿದ ಜೈನ, ಬೌದ್ಧ, ಸಿಖ್, ವೀರಶೈವ, ಲಿಂಗಾಯತ, ಬ್ರಹ್ಮಸಮಾಜ, ಆರ್ಯ ಸಮಾಜ, ಪ್ರಾರ್ಥನಾ ಸಮಾಜದಂತ ಧರ್ಮಗಳನ್ನು ಹಿಂದೂ ಧರ್ಮದ ಭಾಗಗಳೆಂದೇ ಗುರುತಿಸಲಾಗಿದೆ. ಇವುಗಳ ಸಿದ್ಧಾಂತಗಳು ಹಿಂದೂ ಧರ್ಮದ ಸಿದ್ಧಾಂತಗಳಿಗಿಂತ ವಿಭಿನ್ನವಾಗಿದ್ದರೂ, ಇವುಗಳನ್ನು ಹಿಂದೂ ಧರ್ಮವೆಂದೇ ಪರಿಗಣಿಸಲಾಗಿದೆ. ಅದಕ್ಕೆ ಒತ್ತಾಸೆಯಾಗುವಂತೆ ಭಾರತದಲ್ಲಿ ಜನಿಸಿದ ಎಲ್ಲ ಧರ್ಮಗಳು, 1955 ಮತ್ತು 56ರಲ್ಲಿ ರಚಿತವಾದ ನಾಲ್ಕು ಕಾಯ್ದೆಗಳನ್ವಯ (Hindu marriage act 1955, Hindu adoption and maintenance act 1956, The Hindu minority and guardianship Act 1956, Hindu succession act 1956) ಹಿಂದೂ ಧರ್ಮವನ್ನಾಗಿಯೇ ಪರಿಗಣಿಸಿ ಅನ್ಯಾಯ ಎಸಗಲಾಗಿದೆ. ನಾಲ್ಕು ಹಿಂದೂ ಕಾನೂನುಗಳಲ್ಲಿ ಹಿಂದೂ ಧರ್ಮವನ್ನು ವ್ಯಾಖ್ಯಾನಿಸುವಾಗ ಲಿಂಗಾಯತವನ್ನು ಆ ಕಾನೂನುಗಳ ಕಲಂ 2ರ(1)(ಬಿ)ಯಲ್ಲಿ ಕಾಣಿಸುವ ಬದಲಾಗಿ ಅದನ್ನು ಕಲಂ 2(1)(ಎ)ನಲ್ಲಿ ಕಾಣಿಸಿದ್ದರಿಂದ ಲಿಂಗಾಯತರಿಗೆ ಘೋರ ಅನ್ಯಾಯವಾಗಿದೆ. ಇದರಿಂದ ಜೈನ ಬೌದ್ಧ ಹಾಗೂ ಸಿಖ್‌ರಿಗೆ ಸಿಕ್ಕ ಧರ್ಮ ಮಾನ್ಯತೆ ಲಿಂಗಾಯತರಿಗೆ ಸಿಗಲು ತೊಡಕಾಗಿ ಪರಿಣಮಿಸಿದೆ.

ಧಾರ್ಮಿಕ ಸ್ವಾತಂತ್ರ್ಯ ನಮ್ಮ ದೇಶದ ನಾಗರಿಕನ ಮೂಲಭೂತ ಹಕ್ಕುಗಳಲ್ಲೊಂದು. ನಮ್ಮದು ಧರ್ಮ ನಿರಪೇಕ್ಷ ದೇಶ. ತನಗೆ ಇಷ್ಟಬಂದ ಧರ್ಮವನ್ನು ಹೊಂದುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ನಮ್ಮ ದೇಶದ ಸಂವಿಧಾನ ತನ್ನ ನಾಗರಿಕನಿಗೆ ನೀಡಿದೆ. ಬಲವಂತವಾಗಿ ಮತಾಂತರ ನಿಷೇಧ ಈಗಾಗಲೇ ನಮ್ಮ ಕಾನೂನುಗಳ ಅಡಿಯಲ್ಲಿ ಜಾರಿಯಲ್ಲಿದೆ.

ಇತಿಹಾಸದ ಪುಟಗಳಲ್ಲಿ ಮತಾಂತರ

ಒಂದು ಧರ್ಮ ತ್ಯಜಿಸಿ ಇನ್ನೊಂದು ಧರ್ಮವನ್ನು ಅಪ್ಪಿಕೊಳ್ಳುವದು ಬಲವಂತದ ಮತಾಂತರ ಎಂದು ವ್ಯಾಖ್ಯಾನಿಸಿದ್ದಲ್ಲಿ ಜಗತ್ತಿನಲ್ಲಿ 4200 ಧರ್ಮಗಳೇ ಇರುತ್ತಿರಲಿಲ್ಲ. ಅತೀ ಪುರಾತನ ಎರಡು ಮೂರು ಧರ್ಮಗಳು ಮಾತ್ರ ಜಗತ್ತಿನಾದ್ಯಂತ ಇರಬಹುದಾಗಿತ್ತು. ಸಮಾಜ ನಿಂತನೀರಿನ ಹೊಂಡವಲ್ಲ, ಅದು ಸ್ವಚ್ಛಂದವಾಗಿ ಹರಿಯುವ ನದಿಯಿದ್ದಂತೆ.

ಕ್ರಿ.ಪೂ 5ನೆಯ ಶತಮಾನದಲ್ಲಿ ವೈದಿಕ ಧರ್ಮದ ಕಂದಾಚರಣೆಯ ವಿರುದ್ಧವಾಗಿ ಬೌದ್ಧಧರ್ಮ ರೂಪುಗೊಂಡಿತು. ಶೋಷಣೆಯನ್ನು ಧಿಕ್ಕರಿಸುವ ಯೋಚನೆ ಕೆನೆಗಟ್ಟುವ ಸಂದರ್ಭದಲ್ಲಿ ಜನರ ಇಚ್ಛೆಗೆ ದಾರಿ ಕಾಣಿಸಿದವರು ಮಹಾತ್ಮ ಬುದ್ಧ. ಅವರ ಪಂಚಶೀಲಗಳು 700-800 ವರ್ಷಗಳವರೆಗೆ ಜನರನ್ನು ಪ್ರಗತಿಯ ಪಥದಲ್ಲಿ ಸಾಗಿಸಿದವು. ಸ್ವಯಂಕೃತಾಪರಾಧ ಮತ್ತು ವೈದಿಕರ ಹುನ್ನಾರದಿಂದ ಬುದ್ಧನ ಸಿದ್ಧಾಂತವೂ ಸಹ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳಲಾರಂಭಿಸಿತು. ಆಗ ಮತ್ತೊಮ್ಮೆ ತಲೆ ಎತ್ತಿದರು ವೈದಿಕರು. ಅವರ ಕೈ ಬಲಪಡಿಸಿದವನು, ಮೌರ್ಯರನ್ನು ಕೊಂದು ಆವರಿಂದ ರಾಜ್ಯ ಕಸಿದುಕೊಂಡ ಪುಶ್ಯಮಿತ್ರ ಶುಂಗನೆಂಬ ವೈದಿಕರ ಸಾಮ್ರಾಟ. ಆಗ ವೈದಿಕರು ಮತ್ತೊಮ್ಮೆ ವಿಜೃಂಭಿಸಲಾರಂಭಿಸಿದರು. ಇದೇ ಸಮಯದಲ್ಲಿ ಬ್ರಾಹ್ಮಣ ಶ್ರೇಷ್ಠ ಎಂದು ಸಾರುವ ವೈದಿಕ ಸಾಹಿತ್ಯಗಳು ರಚಿಸಲ್ಪಟ್ಟವು. ಅಂತಹ ಸಾಹಿತ್ಯಕ್ಕೆ ಪೂರಕವಾಗಿ ದೇವಸ್ಥಾನಗಳೆಂಬ ಶೋಷಣಾ ಕೇಂದ್ರಗಳು ಮತ್ತೆ ತಲೆಎತ್ತಿದವು. ಹನ್ನೆರಡನೆಯ ಶತಮಾನದವರೆಗೆ ಈ ಪರಿಸ್ಥಿತಿ ಮುಂದುವರಿಯಿತು. ಸಮಾಜ ಮತ್ತೆ ಬದಲಾವಣೆ ಬಯಸಿತು. ಮತ್ತೊಮ್ಮೆ ವೈದಿಕ ಆಚರಣೆಯ ವಿರುದ್ಧ ಸಿಡಿದೆದ್ದವರು ಕಾಯಕ ಜೀವಿ ಶರಣರು; ಅವರಿಗೆ ದನಿಯಾಗಿ ನಿಂತವರು ಬಸವಣ್ಣನವರು. ಅವರ ಅನುಭಾವದ ಸಪ್ತ ಶೀಲಗಳು ಲಿಂಗಾಯತ ಧರ್ಮದ ಸಿದ್ಧಾಂತ.

ವೈದಿಕರಿಗೆ ಮುಸ್ಲಿಂಮರು, ಕ್ರೈಸ್ತರು ಬಾಹ್ಯ ವಿರೋಧಿಗಳಾದರೆ ಲಿಂಗಾಯತರು ಅಂತರಂಗದ ವಿರೋಧಿಗಳು. ಕಾರಣ ಲಿಂಗಾಯತ ಧರ್ಮದ ಸಮಾನತೆಯ ಧೋರಣೆ. ಜಾತಿರಹಿತ, ಲಿಂಗಭೇದರಹಿತ, ಉಚ್ಚ ನೀಚ ರಹಿತ, ಗುಡಿ ಗುಂಡಾರ ಹಾಗೂ ಪುರೋಹಿತಶಾಹಿರಹಿತ ಸಮಾಜ ಲಿಂಗಾಯತ ಧರ್ಮದ ಸಿದ್ಧಾಂತ. ಈ ಸಿದ್ಧಾಂತಗಳು ಪಟ್ಟಭದ್ರ ಪುರೋಹಿತರಿಗೆ ಅಪ್ರಿಯ. ಅವರ ಆದಾಯದ ಮೂಲವೇ ದೇವಸ್ಥಾನ ಹಾಗೂ ಮೌಢ್ಯಾಚರಣೆಗಳು. ದೇವನೊಬ್ಬನೆ, ಅವನ ಸ್ಥಾನ ನಿಮ್ಮ ಹೃದಯದಲ್ಲಿದೆ ದೇವಾಲಯದಲ್ಲಿಲ್ಲ, ಎಂದು ಸ್ಥಾವರವನ್ನು ಅಲ್ಲಗಳೆಯುವುದು ಲಿಂಗಾಯತ ಸಿದ್ಧಾಂತ. ಈ ಸಿದ್ಧಾಂತ ವ್ಯಾಪಕವಾಗಿ ಅನುಷ್ಠಾನಗೊಂಡರೆ ವೈದಿಕರಿಗೆ ಮೌಢ್ಯಾಚರಣೆಗಳಿಂದ ಬರುತ್ತಿರುವ ಆದಾಯದ ಒಂದು ಭಾಗ ಕುಸಿದುಹೋಗುತ್ತದೆ. ಈ ಕಾರಣದಿಂದ ಶತಶತಮಾನಗಳಿಂದ ಅವರು ಈ ಧರ್ಮವನ್ನು ಹತ್ತಿಕ್ಕುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. ಸ್ಥಾವರದಿಂದ ಹೊರಬಂದ ಲಿಂಗಾಯತರನ್ನು ಮತ್ತೊಮ್ಮೆ ಗುಡಿಗುಂಡಾರಗಳೆಂಬ ಸ್ಥಾವರದತ್ತ ತಿರುಗಿಸುವ ಪ್ರಯತ್ನ ಹದಿನಾಲ್ಕನೆಯ ಶತಮಾನದಿಂದ ನಿರಂತರವಾಗಿ ಸಾಗಿಕೊಂಡು ಬಂದಿದೆ. ಚಲನಶೀಲನಾದ ಲಿಂಗಾಯತ ಜಂಗಮನನ್ನು ಸ್ಥಾವರಗೊಳಿಸುವ ಪ್ರಕ್ರಿಯೆಯನ್ನು ಹಿಂದೂಗಳ ಭಾಗವೆಂದು ಹೇಳುತ್ತಲಿರುವ ವೀರಶೈವರಿಂದ ಮಾಡಿಸುತ್ತಲಿದ್ದಾರೆ. ಅಲ್ಲದೆ ಲಿಂಗಾಯತ ಧರ್ಮೀಯರ ಕಾಯಕ ವರ್ಗದವರನ್ನು ಜಾತಿಗಳಲ್ಲಿ ಗುರುತಿಸಿ, ಮತ್ತೆ ಅವುಗಳಲ್ಲಿ ಶ್ರೇಷ್ಠ ಮತ್ತು ಕನಿಷ್ಠ ಎಂಬ ಭೇದವನ್ನು ಸೃಷ್ಟಿ ಮಾಡಿ ಶ್ರೇಣಿಕೃತ ವ್ಯವಸ್ಥೆಯನ್ನು ಮರುಸ್ಥಾಪಿಸಿ, ಮೂಲಭೂತವಾದಕ್ಕೆ ತಳ್ಳುವ ಹುನ್ನಾರ ಶತಮಾನಗಳಿಂದ ನಡೆದುಬರುತ್ತಿದೆ. ಅಲ್ಲದೆ ಸ್ವತಂತ್ರ ಸಿದ್ಧಾಂತವುಳ್ಳ ಧರ್ಮವನ್ನು ಹಿಂದೂ ಧರ್ಮದ ಒಂದು ಜಾತಿಯನ್ನಾಗಿ ಇಂದು ಮಾರ್ಪಡಿಸಲ್ಪಟ್ಟಿದೆ.

ಈಗೇಕೆ ಈ ಕಾನೂನು?

ಇಂದಿನ ಸರಕಾರ ಈ ಕಾನೂನು ಹಿಂದೂಗಳನ್ನು ಬಲವಂತವಾಗಿ ಮತ ಪರಿವರ್ತನೆ ಮಾಡುವ ವಿದೇಶಿ ಧರ್ಮಗಳ ವಿರುದ್ಧ ಎಂದು ಹೇಳುತ್ತದೆ. ಕುಚೋದ್ಯವೆಂದರೆ ಮತ ಪರಿವರ್ತನೆ ಆದವರ ಸಂಖ್ಯೆಯನ್ನು ಸಹ ಸರಕಾರ ಬಹಿರಂಗಪಡಿಸುತ್ತಿಲ್ಲ. ಇದರಿಂದ ಲಿಂಗಾಯತರ ಮನದಲ್ಲಿ ಒಂದು ಸಂದೇಹ ಬಲವಾಗಿ ಹರಳುಗಟ್ಟುತ್ತದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಲಿಂಗಾಯತರ ಸಂಖ್ಯೆ ಗಣನೀಯವಾಗಿದೆ. ಇಲ್ಲಿರುವ ಎಲ್ಲ ಲಿಂಗಾಯತರ ಜನಸಂಖ್ಯೆಯನ್ನು ಲೆಕ್ಕಕ್ಕೆ ತಗೆದುಕೊಂಡರೆ ಕೋಟಿಗಳ ಸಂಖ್ಯೆಯಲ್ಲಿ ಲಿಂಗಾಯತ ಧರ್ಮವನ್ನು ಅನುಸರಿಸುವ ಜನರು ಈ ರಾಜ್ಯಗಳಲ್ಲಿ ಸಿಗುತ್ತಾರೆ. ಲಿಂಗಾಯತ ಧರ್ಮೀಯರು ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲವಾದ ಸಮಾಜ. ಅಲ್ಲದೆ ಇವನಾರವ ಇವನಾರವ ಎನ್ನದೆ ಎಲ್ಲರೂ ತನ್ನವರೆಂದು ಅಪ್ಪಿಕೊಳ್ಳುವ ಸಿದ್ಧಾಂತವನ್ನುಳ್ಳವರು. ಇಂತಹ ಒಂದು ಜನಪ್ರಿಯ ಮುಂದೆಂದಾದರೂ ಸರಿ, ಧರ್ಮ ಹಿಂದೂ ಧರ್ಮದ ಪರ್ಯಾಯ ಧರ್ಮವಾಗುವದರಲ್ಲಿ (ಅಧಿಕೃತ ಮಾನ್ಯತೆಯೊಂದಿಗೆ) ಯಾವದೇ ಸಂಶಯವಿಲ್ಲ. ಇದು ವೈದಿಕಧರ್ಮಕ್ಕೆ ಆಘಾತ ನೀಡುವ ವಿಷಯ. ಆದುದರಿಂದ, ಇದರ ಪ್ರಸರಣವನ್ನು ಮೊಳಕೆಯಲ್ಲಿಯೇ ಚಿವುಟಿಹಾಕುವ ಮುಂದಾಲೋಚನೆ ಈ ಕಾಯ್ದೆಯ ಉದ್ದೇಶ ಎಂದು ಎಂತಹವನಿಗಾದರೂ ಅರ್ಥವಾಗುವ ವಿಷಯ.

ಈ ಕಾಯ್ದೆ ಮತಾಂತರಕ್ಕೆ ಪ್ರಲೋಭನೆ ನೀಡುತ್ತಿರುವ ವಿದೇಶಿ ಧರ್ಮಗಳಿಗೆ ಮಾತ್ರ ಕುಟುಕುತ್ತದೆ ಎಂದು ಮೌಖಿಕವಾಗಿ ಬಲಪಂಥೀಯ ಸರಕಾರ ಹೇಳುತ್ತಿದೆ. ಹಾಗಿದ್ದಲ್ಲಿ ಕಾಯ್ದೆಯಲ್ಲಿ ಇದು ಇಂತಹದೇ ಧರ್ಮಗಳ ವಿಷಯವಾಗಿ ಎಂದು ಸ್ಪಷ್ಟಪಡಿಸಬಹುದಿತ್ತಲ್ಲವೆ?

ಸದ್ಯಕ್ಕೆ ಈ ಕಾಯದೆ ಲಿಂಗಾಯತ ಧರ್ಮಕ್ಕೆ ಗಂಡಾಂತರವಾಗಿ ಕಾಣದೆಹೋಗಬಹುದು. ಕಾರಣ ಪ್ರಬಲ ಸಮಾಜವನ್ನು ಇಂದು ಎದುರು ಹಾಕಿಕೊಳ್ಳುವ ಮನಸ್ಥಿತಿಯಲ್ಲಿ ಈ ಸರಕಾರ ಇರಲಿಕ್ಕಿಲ್ಲ. ಆದರೆ ಕೆಲದಿನಗಳ ನಂತರ ಲಿಂಗಾಯತರ ಕೊರಳಿಗೆ ಇದು ಉರುಳಾಗುವ ಗಂಡಾಂತರ ಇದ್ದೇ ಇದೆ. ಕಾರಣ ಈ ಕಾಯ್ದೆ ಅನ್ವಯ ಯಾವುದೇ ಧರ್ಮವನ್ನು ಅವಹೇಳನ ಮಾಡುವುದು ಕಾನೂನುಬಾಹಿರ. ಹಿಂದೂ ಧರ್ಮದ ಕಂದಾಚಾರಗಳನ್ನು ಟೀಕಿಸಿಯೇ ಜನ್ಮತಳೆದಿಲ್ಲವೆ ಭಾರತದಲ್ಲಿ ಹುಟ್ಟಿದ ಜೈನ, ಬೌದ್ಧ, ಲಿಂಗಾಯತ ಹಾಗೂ ಸಿಖ್ ಧರ್ಮಗಳು?

ಲಿಂಗಾಯತ ಧರ್ಮ ಪ್ರಚಾರಕರು ಹಾಗೂ ಲಿಂಗಾಯತಜಂಗಮರು ಹಿಂದೂ ಧರ್ಮದಲ್ಲಿ ಲಿಂಗ ಸಮಾನತೆಯಿಲ್ಲ ಎಂದು ಹೇಳುವಂತಿಲ್ಲ, ಅನೇಕ ದೇವರುಗಳನ್ನು ಪೂಜಿಸಬೇಡಿ, ದೇವರೊಬ್ಬನೆ ಎಂದು ಹೇಳುವಂತಿಲ್ಲ. ಜಾತಕ, ಸೂತಕ, ವಾಸ್ತು, ಮರುಜನ್ಮ, ಸ್ವರ್ಗ-ನರಕಗಳಿಲ್ಲ ಎನ್ನುವಂತಿಲ್ಲ!

ವೈದಿಕ ವ್ಯವಸ್ಥೆಯ ಜಾತಿಪದ್ಧತಿಯನ್ನು ದೂರುವಂತಿಲ್ಲ. ಇದನ್ನೆಲ್ಲವನ್ನು ಜನರಿಗೆ ತಿಳಿಸಿದರೆ ಹಿಂದೂಧರ್ಮದ ದೂಷಣೆ ಎಂದು ಈ ಕಾಯ್ದೆ ಅಡಿಯಲ್ಲಿ ಯಾರಾದರೂ ದೂರು ದಾಖಲಿಸಬಹುದು.

ಲಿಂಗಾಯತ ಧರ್ಮ ಇಂದಿಗೂ ಸಾಂವಿಧಾನಿಕ ಮಾನ್ಯತೆ ಪಡೆಯದ ಧರ್ಮ. ಇದು ಪರವಾನಗಿ ಪಡೆಯದ ವಾಹನ ಚಾಲಕನಂತಿರುವ ಧರ್ಮ. ಚಾಲಕ ನೈಪುಣ್ಯತೆ ಪಡೆದ ಚಾಲಕನಾಗಿರಬಹುದು, ದಡ ಮುಟ್ಟಿಸುವ ವಿಶ್ವಾಸವು ಅವನಲ್ಲಿರಬಹುದು ಆದರೆ ಅವನು ಅಧಿಕೃತವಾಗಿ ಸರಕಾರದಿಂದ ಮಾನ್ಯತೆ ಪಡೆಯದ ಚಾಲಕ. ಹಿಂದೂ ಧರ್ಮದ ಒಂದು ಜಾತಿ ಎಂದು ಬಿಂಬಿತವಾಗಿರುವ ಲಿಂಗಾಯತಧರ್ಮದ ಪ್ರಚಾರ ಆಥವಾ ಧಾರಣವೂ ಅನಧಿಕೃತವಾಗಬಹುದು.

 

ತಳ ಸಮುದಾಯಕ್ಕೆ ವಿರೋಧವಾದ ಶಾಸನ

ಹಿಂದೂ ಧರ್ಮದ ಸಾಮಾಜಿಕ ಸ್ಥಾನದಲ್ಲಿ ತಳಸಮುದಾಯದವರು ಎರಡನೆಯ ದರ್ಜೆಯ ನಾಗರಿಕ. ಸ್ವಾತಂತ್ರ್ಯ ಪಡೆದು 75 ವರ್ಷ ಕಳೆದರೂ ಅವನು ಇಂದಿಗೂ ಅಸ್ಪೃಶ್ಯ. ಆದರೆ ಅವನು ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧನಾದರೆ ಸ್ಪೃಶ್ಯಕ್ಕೆ ಅರ್ಹ. ಚಾತುರ್ವರ್ಣದಲ್ಲಿ ಅವನ ಸ್ಥಾನ ಕೊನೆಯದು. ವೈದಿಕ ಧರ್ಮದ ಮನುಸಿದ್ಧಾಂತದಂತೆ ಅವನು ಮೇಲ್‌ವರ್ಗದವರ ಸೇವಕ. ಕರ್ತವ್ಯ ಹಾಗೂ ಶ್ರದ್ಧೆಯಿಂದ ಕಾಯಕ ಮಾಡಿದಾಗ ಮಾತ್ರ ಅವನು ಮರುಜನ್ಮ ಹೊಂದಬಹುದು. ಆಗ ಅವನ ಅಂತಸ್ತು ಹೆಚ್ಚುವದು.

ಜಾತಿ ಜನನದಿಂದ ಬಂದರೆ ಧರ್ಮ ಧಾರಣದಿಂದ ಬರುವದು. ಮಾನವರೆಲ್ಲರೂ ಸಮಾನರು ಎನ್ನುವ ಧರ್ಮದತ್ತ ಅವನು ವಾಲುವದು ಅದನ್ನು ಧಾರಣೆ ಮಾಡುವದು ಇಂದಿನ ವಿದ್ಯಾವಂತ ತಳಸಮುದಾಯದ ನಾಗರಿಕನ ಅವಶ್ಯಕತೆ ಹಾಗು ಅಸ್ಮಿತೆ.

ಈ ದೇಶದಲ್ಲಿ ಇಂತಹ ಮತಾಂತರ ಇಂದಿನದೇನಲ್ಲ. ಸಾವಿರಾರು ವರ್ಷಗಳಿಂದ ಜನ ನಿರಂತರವಾಗಿ ಮತಾಂತರಗೊಳ್ಳುತ್ತಲೇ ಬಂದಿದ್ದಾರೆ. ಅವರಲ್ಲಿ ಪ್ರಮುಖರಾದವರು ಚಾರ್ವಾಕರು, ಮಹಾವೀರ, ಬುದ್ಧ, ಬಸವ, ಗುರುನಾನಕ; ಇವರೊಂದಿಗೆ ಇವರ ಅಸಂಖ್ಯಾತ ಅನುಯಾಯಿಗಳು. ಇದು ಅವ್ಯಾಹತವಾಗಿ ಇಪ್ಪತ್ತನೆಯ ಶತಮಾನದವರೆಗೂ ಮುಂದುವರಿದಿದೆ. ಭಾರತದ ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬರು ಹೇಳಿದ್ದರು “ನಾನು ಹಿಂದುವಾಗಿ ಹುಟ್ಟಿದ್ದೇನೆ ಆದರೆ ಹಿಂದುವಾಗಿ ಸಾಯಲಾರೆ” ಎಂದು. ಅವರೊಬ್ಬ ಭಾರತ ಕಂಡ ಶ್ರೇಷ್ಠ ಚಿಂತಕ. ’ಭಾರತದ ಸಾಮಾಜಿಕ ಪರಿಸ್ಥಿತಿಯಲ್ಲಿ ಒಬ್ಬ ದಲಿತ ಸುಶಿಕ್ಷಿತನಾಗಿ, ಹಣವಂತನಾದರೂ ಆತನಿಗೆ ಧಾರ್ಮಿಕವಾಗಿ ಸೂಕ್ತ ಸ್ಥಾನಮಾನ ಮೇಲ್ ಜಾತಿಯವರು ನೀಡುವದಿಲ್ಲ’ ಎಂದಿದ್ದರು ಬಾಬಾಸಾಹೇಬರು. ಅವರು ಬೆಲ್ ಪೋರರ ಮಾತನ್ನು ಉಲ್ಲೇಖಿಸುತ್ತ ಬರೆಯುತ್ತಾರೆ ’ಹಿಂದೂ ಧರ್ಮವು ಸಾಮಾನ್ಯ ಮಾನವಕೋಟಿಯನ್ನು ಒಳಹೊಕ್ಕು (ನೋಡಿದರು) ಪಾರದರ್ಶಕವಾಗಿ ಕಾಣಿಸಲಾರದು. ಹಾಗೇನಾದರೂ ಕಾಣಿಸಿದರೆ ಅದು ನಿಸ್ಸತ್ವಗೊಳಿಸುತ್ತದೆ. ಹಿಂದೂ ಧರ್ಮದಲ್ಲಿ ಸಾಮಾನ್ಯ ಮಾನವನ ಜೀವಕ್ಕೆ ಯಾವುದೇ ಪುಷ್ಟಿಯಿಲ್ಲ; ಸಾಮಾನ್ಯನ ದುಃಖಕ್ಕೆ ಯಾವುದೇ ಸಾಂತ್ವನವಿಲ್ಲ; ಮನುಷ್ಯನ ಬಲಹೀನತೆಗೆ ಯಾವುದೇ ನೆರವಿಲ್ಲ. ಅದು ಮನುಷ್ಯನನ್ನು ಅಂಧಕಾರದ ನಿಸರ್ಗದಲ್ಲಿ ಅಚಿಂತ್ಯ ಶಕ್ತಿಗಳಿಗೆ ಮುಖಾಮುಖಿಯಾಗಿ ನಿಲ್ಲಿಸುತ್ತದೆ; ನಿಷ್ಪಲವಾದ ಕೆಲವು ಹೋರಾಟಗಳ ಬಳಿಕ, ಅವರು ಸೋತು ಹೋಗುತ್ತಾರೆ. ಅತ್ಯಂತ ಬರ್ಬರ ಧರ್ಮಕ್ಕಿಂತ ಕಡಿಮೆಯಿಲ್ಲದ ಕ್ರೌರ್ಯದಿಂದ ದೇವರೊಂದಿಗೆ ಯಾವುದೇ ಸಂಸರ್ಗವಾಗದಂತೆ ಅದು ಮನುಷ್ಯನನ್ನು ವಿಚ್ಛೇದಗೊಳಿಸುತ್ತದೆ’. ಮುಂದುವರಿದು ಅವರು ಅದೆ ಪುಟದಲ್ಲಿ ಬರೆಯುತ್ತಾರೆ: ’ಹೀಗಿದೆ ಹಿಂದೂ ಧರ್ಮದ ತತ್ವಜ್ಞಾನ. ಅದು ಅತಿಮಾನವನಿಗೆ ಸ್ವರ್ಗವಾದರೆ, ಸಾಮಾನ್ಯ ಮನುಷ್ಯನಿಗೆ ನರಕವಾಗಿದೆ’. (ಡಾ.ಬಿ.ಆರ್.ಅಂಬೇಡ್ಕರ್ ಸಮಗ್ರ ಬರಹಗಳು- ಪು.ಸಂ. 82. ಸಂಪುಟ 3)

ವರ್ಗ ವರ್ಣವನ್ನು ಖಂಡಿಸುವ ಯಾವದೇ ನಾಗರಿಕನು ಸಾಮಾಜಿಕವಾಗಿ ಸಬಲನಾಗಲು ಪ್ರಯತ್ನಿಸುತ್ತಾನೆ. ಅದು ಮಾನವನ ಗುಣಧರ್ಮವೂ ಹೌದು. ತಳ ಸಮುದಾಯದ ನಾಗರಿಕ ತನ್ನ ಅಂತರಂಗದ ಅಸ್ಮಿತೆಯನ್ನು ಸಾರ್ವಜನಿಕಗೊಳಿಸಿ ಮತಾಂತರಗೊಳ್ಳುವದು ಅವನ ಗೌಪ್ಯತೆಯ ಹಕ್ಕನ್ನು ಕಿತ್ತುಕೊಳ್ಳುತ್ತದೆ. ಕಾರಣ ಈ ಕಾನೂನು ನಾಗರಿಕಹಕ್ಕುಗಳ ವಿರೋಧಿಯಾಗಿದೆ.

ಒತ್ತಾಯದ ಮತಾಂತರ

ಒತ್ತಾಯದ ಮತಾಂತರ ಒಂದು ಸಾಮಾಜಿಕ ಪಿಡಗು. ಎಲ್ಲರೂ ಒಪ್ಪುವ ಮಾತೇ. ಆದರೆ ನಾಗರಿಕನೊಬ್ಬನಿಗೆ ’ನೀನು ನಿನ್ನ ನಂಬಿಕೆಯನ್ನು ಪಾಲಿಸಬೇಡ ನನ್ನ ನಂಬಿಕೆಯನ್ನು ಮಾತ್ರ ನೀನು ಪಾಲಿಸು’ ಎಂಬುದು ಕೂಡ ಬಲವಂತದ ಮತಾಂತರವಾಗಲಾರದೆ? ಬಲವಂತವಾಗಿ ಮತಾಂತರ ಮಾಡುವದು ತಪ್ಪಾದರೆ ಬಲವಂತವಾಗಿ ಮತಾಂತರವನ್ನು ತಡೆಯುವದು ಸಹ ತಪ್ಪೇ ಅಲ್ಲವೆ? ಈ ಕಾಯ್ದೆಯ ಉದ್ದೇಶ ಅತ್ಮಸಾಕ್ಷಿಯಾಗಿ ಧರ್ಮ ಪಾಲಿಸುವವನಿಗೆ ಅಂಕುಷ ಹೇರುವುದಾಗಿದೆ.

ಎಂಟನೂರು ವರ್ಷಗಳ ಕಾಲ ರಾಜ್ಯಭಾರ ಮಾಡಿದ ಮುಸ್ಲಿಂ ದೊರೆಗಳು ಭಾರತದ ಜನಸಂಖ್ಯೆಯ ಎಷ್ಟು ಭಾಗ ಮತಾಂತರ ಗೊಳಿಸಿದ್ದಾರೆ? ಮುಸ್ಲಿಂ ಆಳ್ವಿಕೆಯಲ್ಲಿ ನಿರಂತರವಾಗಿ ಬಲವಂತದ ಮತಾಂತರ ಕೈಗೊಂಡಿದ್ದರೆ ಇಂದು ಇಡೀ ಭಾರತ ದೇಶವೆ ಮುಸ್ಲಿಂ ರಾಷ್ಟ್ರವಾಗಿರುತ್ತಿತ್ತು. ಎರಡುನೂರು ವರ್ಷ ಅಧಿಕಾರ ಮಾಡಿದ ಕ್ರೈಸ್ತರು ಬಲವಂತವಾಗಿ ಮತಾಂತರಗೊಳಿಸಿದವರ ಸಂಖ್ಯೆ ಎಷ್ಟು? ಬಲವಂತದ ಮಾತು ಅತ್ತೊಟ್ಟಿಗಿರಲಿ, ಎರಡನೂರು ವರ್ಷಗಳಲ್ಲಿ ಅವರು ಮತಾಂತರಗೊಳಿಸಿದ್ದು ಭಾರತದ ಒಟ್ಟು ಜನಸಂಖ್ಯೆಯ 2.4% ಮಾತ್ರ. ಸಾವಿರಾರು ವರ್ಷಗಳಲ್ಲಿ ಸಾಧಿಸಲಾಗದ್ದನ್ನು ಅವರು ಇಂದು ಸಾಧಿಸಬಲ್ಲರೆ? ಅದೂ ಒಂದು ಬಲಿಷ್ಠ ಹಿಂದುದೇಶ ಎಂದು ಹೇಳಿಕೊಳ್ಳುವ ನೂರು ಕೋಟಿ ಹಿಂದೂಗಳಿರುವ ದೇಶದಲ್ಲಿ! ಎಲ್ಲ ಶ್ರೀಮಂತಿಕೆ ಹೊಂದಿರುವ ಪಾಶ್ಚಿಮಾತ್ಯ ದೇಶಗಳಲ್ಲಿ ಇಂದು ಕ್ರಿಶ್ಚಿಯನ್ ಧರ್ಮ ತೊರೆದು ಎಷ್ಟೋ ಜನ ಹಿಂದೂಗಳಾಗುತ್ತಿಲ್ಲವೆ?

ಮತಾಂತರದ ಮೂಲಕಾರಣ ಹುಡುಕಿ, ಅದಕ್ಕೆ ಕಾರಣವಾಗುತ್ತಿರುವ ದೋಷಗಳನ್ನು ಕಂಡು ಸರಿಪಡಿಸಬೇಕಾದ್ದು ಆ ಧರ್ಮ ಸಮಾಜದ ಕೆಲಸ. ಮೂಲ ಸಿದ್ಧಾಂತದಲ್ಲಿ ದೋಷ ಇಟ್ಟುಕೊಂಡು ಮೇಲೆ ತಿಪ್ಪೆ ಸಾರಿಸಿದರೆ ಮೂಲರೋಗ ವಾಸಿಯಾಗದು. ಜಗತ್ತಿನಲ್ಲಿ ಎಲ್ಲೂ ಇರದ ಜಾತಿ ಪದ್ಧತಿ, ಚಾತುರ್ವರ್ಣದಲ್ಲಿರುವ ಮೇಲುಕೀಳು ಎಂಬ ಶೋಷಣೆಯ ಸಿದ್ಧಾಂತದ ಕಾರಣದಿಂದ ಇಂದು ಹಿಂದೂ ಧರ್ಮದಿಂದ ಹಲವರು ಮತಾಂತರವಾಗುತ್ತಿರುವುದನ್ನು ಹಲವು ಅಧ್ಯಯನಗಳು ಗುರುತಿಸಿವೆ.

’ಅಚ್ಛೇ ದಿನ್’ ಕೊಡುತ್ತೇವೆ ಎಂದು ಹೇಳಿ ಎಷ್ಟು ಸಾಧ್ಯವೋ ಅಷ್ಟು ಕೆಟ್ಟ ದಿನಗಳನ್ನು ದಯಪಾಲಿಸುತ್ತಿರುವ ಈ ವೈದಿಕ ಸರಕಾರಗಳು ತಮ್ಮ ವೈಫಲ್ಯವನ್ನು ಮುಚ್ಚಿಹಾಕಿಕೊಳ್ಳಲು ಮತ್ತು ಮತದಾರನ ಗಮನ ಬೆರೇಡೆ ಸೆಳೆಯುವ ಉದ್ದೇಶದಿಂದ ಮಾಡಿದ ಮತ್ತೊಂದು ಷಢ್ಯಂತ್ರವೆ ಈ ಕಾನೂನು?

ಇದನ್ನು ಬರೆಯುವಾಗ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರನ್ನು ಸಂಪರ್ಕಿಸುವ ಮನಸ್ಸಾಯಿತು. ’ಸರ್ ಈ ಕಾಯ್ದೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದೆ’. ಆಗ ನ್ಯಾಯಮೂರ್ತಿಗಳು “ಇದೊಂದು ಸಂವಿಧಾನಬಾಹಿರ, ಮನುಷ್ಯ ವಿರೋಧಿ, ಮತ್ತು ನಾಗರಿಕ ಹಕ್ಕುಗಳ ವಿರೊಧಿ ಕಾನೂನು” ಎಂದರು. ಇದು ಲಿಂಗಾಯತರಿಗೆ ಗಂಡಾಂತರಕಾರಿಯೇ ಎಂದು ಮರುಪ್ರಶ್ನೆ ಮಾಡಿದೆ. “ಖಂಡಿತವಾಗಿ” ಎಂದುತ್ತರಿಸಿದರು. ಆಗ ಅವರೇ ಬರೆದ ಪುಸ್ತಕ ’ಸಂವಿಧಾನ ಓದು’ ಪುಸ್ತಕದ ಪುಟಗಳನ್ನು ತೆರೆದೆ. ಅದರಲ್ಲಿ ನಮ್ಮ ಸಂವಿಧಾನ ನಮಗೆ ನೀಡಿದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಈ ರೀತಿಯಾಗಿ ಹೇಳಲಾಗಿದೆ.

1) ತಮ್ಮ ಆತ್ಮಸಾಕ್ಷಿಯಂತೆ ಯಾವದೇ ಧರ್ಮವನ್ನು ಅವಲಂಬಿಸಿ, ಆಚರಿಸಿ, ಪ್ರಚಾರ ಮಾಡುವ ಸ್ವಾತಂತ್ರ್ಯ.

2) ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸಿ, ನಿರ್ವಹಿಸುವ ಸ್ವಾತಂತ್ರ್ಯ.

3) ಧರ್ಮ ಹಾಗೂ ಧಾರ್ಮಿಕ ಸಂಸ್ಥೆಗಳ ಪೋಷಣೆಗೆ ತೆರಿಗೆ ವಿನಾಯತಿಯ ಸ್ವಾತಂತ್ರ್ಯ.

ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾದ ಮಾತುಗಳಲ್ಲಿ ಇಂತಹ ಕಾನೂನು ಇರುವಾಗ ಈ ಕಾಯ್ದೆಯ ಸಿಂಧುತ್ವದ ಬಗ್ಗೆ ಯಾರಾದರು ಪ್ರಶ್ನಿಸಬಹುದು. ಭಾರತೀಯ ನಾಗರಿಕನ ಹಕ್ಕನ್ನು ಮೊಟಕುಗೊಳಿಸುವ ಸಂವಿಧಾನದ ಆಶಯಗಳನ್ನು ಮೂಲೆಗುಂಪು ಮಾಡುವುದೇ ಬಲಪಂಥೀಯ ಆಡಳಿತದ ಷಡ್ಯಂತ್ರವಲ್ಲವೇ?

ಈ ವೈದಿಕ ಡಬಲ್ ಎಂಜಿನ್ ಸರಕಾರಗಳು ಪ್ರಜಾ ವಿರೋಧಿ, ರೈತ ವಿರೋಧಿ, ಸಮಾಜ ವಿರೋಧಿ, ಸಂವಿಧಾನ ವಿರೋಧಿ ಕಾಯ್ದೆಗಳನ್ನು ಯಾಕೆ ಮತ್ತು ಯಾರನ್ನು ಮೆಚ್ಚಿಸಲು ತರುತ್ತವೆ? ತಲೆ ಕೆರೆದುಕೊಂಡೆ; ಏನೋ ಹೊಳೆಯಿತು, ಮೂರು ಪರ್ಸೆಂಟ್ ಜನರಿಗಾಗಿ ಎಂದಿತು ಒಂದು ಮನಸ್ಸು. ಸಾವಿರಾರು ವರ್ಷಗಳಿಂದ ಗುಲಾಮರಾಗಿ ಆಳಿಸಿಕೊಳ್ಳುತ್ತ ಬಂದ ನಮಗೆ ಇದನ್ನು ಸಹಿಸುವ ಶಕ್ತಿ ಕೊಡಲಿ ಎಂದು ಅವರು ಪೂಜಿಸುವ ಕಲ್ಲು, ಮಣ್ಣು, ಮತ್ತು ಮರದ ದೇವರನ್ನು ಕೇಳಿಕೊಳ್ಳಲು ಹೇಳಿತು ಆ ಮನಸ್ಸು; ಮೂರ್ಖ ಪ್ರತಿಭಟಿಸು ನಿನ್ನ ಬೆನ್ನಿಗೆ ’ಸಂವಿಧಾನ’ವೆಂಬ ಬಲಾಢ್ಯ ಅಸ್ತ್ರವಿದೆ ಎಂದಿತು ಇನ್ನೊಂದು ಮನಸ್ಸು.

ಜಿ ಬಿ ಪಾಟೀಲ

ಜಿ ಬಿ ಪಾಟೀಲ
ಬಸವನಬಾಗೇವಾಡಿಯ ಜಿ.ಬಿ.ಪಾಟೀಲ್ ಅವರು ಬೆಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿದ್ದೂ, ಸಾಮಾಜಿಕ ಹಾಗೂ ರಾಜಕೀಯ ಸಂಗತಿಗಳಲ್ಲಿ ನಿರಂತರ ಆಸಕ್ತಿ ಹೊಂದಿದ್ದವರು. ಸದ್ಯ ಜಾಗತಿಕ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: ಪೇ ಸಿಎಂ ಪೋಸ್ಟರ್ ಅನ್ನು ಸರ್ಕಾರಿ ಕಚೇರಿಗಳಲ್ಲಿ ಅಂಟಿಸುತ್ತೇವೆ: ಡಿ.ಕೆ ಶಿವಕುಮಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...