ಸಂತೆಗೆ ಹೋದ ಮಾದಣ್ಣ ಮಡದಿ ಹೇಳಿದ ಸಾಮಾನುಗಳನ್ನ ಬಿಟ್ಟು ಬೆಕ್ಕಿನ ಮರಿ ತಂದನಂತಲ್ಲಾ. ಅದನ್ನು ನೋಡಿದ ಮದಡಿ, “ಅಯ್ಯೊ ನಿನ್ನ ಮನಿಮಾರತ್ತ, ಮನಿಗೆ ಬೇಕಾದ ಸಾಮಾನು ತರದು ಬುಟ್ಟು ಕೊತ್ತಿಮರಿ ತಂದಿದ್ದಿಯಲ್ಲಾ, ನಿನ್ನ ಮರುಳು ಬುದ್ದಿಗೇನೆಳನಾ” ಎಂದು ಜಗಳಾ ತೆಗೆದಳಂತಲ್ಲಾ. ಆಗ ಬೆಕ್ಕಿನ ತಲೆ ಸವರಿದ ಮಾದಣ್ಣ, “ಮನೆಲಿ ಇಲಿ ಜಾಸ್ತಿಯಾಗ್ಯವೆ” ಅಂತ ನೀನೆ ಹೇಳಿದಲ್ಲಾ ಎಂದಾಗ, “ಇಲಿ ಜಾಸ್ತಿಯಾಗ್ಯವೆ ಸರಿ ಇಲಿ ಅವುಸ್ತಿ ತರಕ್ಕೇನಾಗಿತ್ತು? ಈ ಬೆಕ್ಕಿನ ಮರಿ ಸಾಕಕ್ಕೆ ಹಾಲು ಬೇಕು, ಹಾಲು ಬೇಕಾದ್ರೆ ಹಸ ತರಬೇಕು, ಅದಕೆ ಹುಲ್ಲು ಹಾಕಬೇಕು, ಸಗಣಿ ತಗಿಬೇಕು, ಗಂಜಲ ಬಳಿಬೇಕು, ಇದನ್ಯಲ್ಲ ಮಾಡೋಳು ನಾನು” ಎಂದು ಗೊಣಗುತ್ತಿರುವಾಗ ಮಾದಣ್ಣ, ಬೆಕ್ಕಿನ ಮರಿಯನ್ನ ವಿವಿಧ ಭಂಗಿಯಲ್ಲಿ ನಿಲ್ಲಿಸಿ ’ವಾಹ್ ಏನು ಭಂಗಿ, ಆ ಕಣ್ಣೇನು, ಆ ಮೀಸೆಯೇನು’ ಎಂದು ವರ್ಣಿಸುತ್ತ ಕಣ್ಣಿನಲ್ಲೇ ಫೋಟೋ ಕ್ಲಿಕ್ಕಿಸುತ್ತಿದ್ದನಂತಲ್ಲಾ, ಥೊತ್ತೇರಿ.
*****
ಈ ಬೆಕ್ಕಿನ ಕತೆ ಟೈಮಿನಲ್ಲೇ ನೆನಪಿಗೆ ಬಂದಿದ್ದೇನೆಂದರೆ, ಮುಸ್ಲಿಮ್ ದೊರೆಗಳು ಈ ದೇಶಕ್ಕೆ ದಾಳಿಯ ಮುಖಾಂತರ ಬಂದವರು; ಧನ ಕನಕ ವಸ್ತುಗಳನ್ನು ಲೂಟಿ ಮಾಡುವ ಮನಸ್ಸಿನಿಂದ ರೂಪುಗೊಂಡದ್ದು ದಾಳಿ. ಹಾಗೆ ಬಂದ ಮುಸ್ಲಿಮರು ದಾಳಿ ಮಾಡಿಕೊಂಡು ಓಡಲಿಲ್ಲ, ಬದಲಿಗೆ ಇಲ್ಲೇ ನಿಂತರು. ಆಗ ನಮ್ಮ ಪುರೋಹಿತಶಾಹಿಗಳು ದೇವಸ್ಥಾನದ ಗರ್ಭಗುಡಿಯಲ್ಲಿ ಭದ್ರವಾಗಿ ಕುಳಿತು ಭಜನೆ ಮಾಡುತ್ತಿದ್ದರು. ನಂತರ ಪ್ರಸಾದ ಪಾನಕ ಪಡೆಯುತ್ತಿದ್ದರು. ಹೊರಬಂದು ನೋಡಿದಾಗ ಮುಸಲ್ಮಾನ ದೊರೆಗಳು ಊರನ್ನೇ ಅಕ್ರಮಿಸಿ ರಾಜರುಗಳಾಗಿ ಮೆರೆಯುತ್ತಿದ್ದರು. ತಡಮಾಡದೆ ಪುರೋಹಿತಶಾಹಿಗಳು ಮುಸ್ಲಿಂ ರಾಜರ ಆಸ್ಥಾನಕ್ಕೆ ನುಗ್ಗಿ ಕರಣಿಕರಾದರು, ಮಂತ್ರಿಗಳಾದರು, ರಾಜನನ್ನು ನಗಿಸುವ ವಿಧೂಷಕರಾದರು, ಸಂಗೀತಗಾರರಾದರು. ಇದು ಸುಮಾರು ಆರುನೂರು ವರ್ಷಗಳು ಸತತವಾಗಿ ನಡೆಯಿತು. ಈ ಪುರೋಹಿತರು ತಮ್ಮ ಬುದ್ಧಿಯನ್ನು ಶೂದ್ರರಿಗೂ ಅಂಟಿಸಿದ ಫಲವಾಗಿ, ಅವರನ್ನಾಳುತ್ತಿರುವ ನಾಯಕ, ಪ್ರವಾಹದಿಂದ ಉತ್ತರ ಭಾರತವೇ ನಲುಗಿಹೋಗುತ್ತಿರುವ ಸಮಯದಲ್ಲಿ ತಲೆಕೆಡಿಸಿಕೊಳ್ಳದೆ, ನಮೀಬಿಯಾದಿಂದ ಚೀತಾ ತಂದು, ಬೋನಿನಿಂದ ಹೊರಬಿಟ್ಟು, ಎಲ್ಲರೂ ಕೈ ಎತ್ತಿ ಚಿರತೆಗಳನ್ನು ಸ್ವಾಗತಿಸಿ ಚಪ್ಪಾಳೆ ಹೊಡೆಯಿರಿ ಎಂದರಂತಲ್ಲಾ. ಆ ಕೂಡಲೇ ಜನಸ್ತೋಮ ಅಂಗೈ ಉರಿಯುವಂತೆ ಚಪ್ಪಾಳೆ ತಟ್ಟಿ ಗಾಳಿ ಹಾಕಿಕೊಂಡವಂತಲ್ಲಾ, ಥೂತ್ತೇರಿ
*****
ಭಾರತದಿಂದ ಚೀತಾ ಕಣ್ಮರೆಯಾದ ನಂತರ ಹುಟ್ಟಿದ ಮೋದಿಯವರು, ಹಾಗೆಯೇ ವಿರಳವಾಗುತ್ತಿರುವ ಗುಳ್ಳೆ ನರಿಗಳ ಬಗ್ಗೆ ತಲೆಕೆಡಿಸಿಕೊಳ್ಳುವರೆಂದು ಆಶಿಸುವ ಸಮಯದಲ್ಲೇ ಕಿಡಿಗೇಡಿಗಳು, ಗುಳ್ಳೆನರಿಗಳ ಗುಣವನ್ನು ವಿಶ್ಲೇಷಣೆ ಮಾಡಿದ್ದಾರಲ್ಲಾ. ಗುಳ್ಳೆ ನರಿ ಎಂದೂ ಶ್ರಮವಹಿಸಿ ಭೇಟೆಯಾಡಿದ್ದಿಲ್ಲ. ದೊಡ್ಡಪ್ರಾಣಿ ಮಾಡುವ ಬೇಟೆಯನ್ನು ಕದಿಯುವ ಸಂಚುರೂಪಿಸುತ್ತದೆ. ಬಲಿಯಾದ ನಂತರ ಪೊದೆಮರೆಯಿಂದ ಓಡಿಬಂದು ಬೇಕಾದ ಖಂಡವನ್ನು ಬಾಯಿಗಾಕಿಕೊಂಡು ಹೊಟ್ಟೆಹೊರಿಯುತ್ತದೆ. ಈ ಪ್ರಾಣಿಗೆ ಹೋಲುವ ಮನುಷ್ಯರು ಹೇರಳವಾಗಿದ್ದು, ಅದೂ ಮೋದಿ ಸುತ್ತಲೂ ಇರುವುದರಿಂದ, ಗುಳ್ಳೆನರಿ ತರುವುದು ಬೇಡವೆಂದು ಬುದ್ಧೀಜೀವಿಗಳು ವಾದಿಸುತ್ತಿದ್ದಾರಲ್ಲಾ, ಥೂತ್ತೇರಿ
*****
ಮೋದಿ ತಂದಿರುವ ಚೀತಾಗಳು ಒಂದು ಕಾಲದಲ್ಲಿ ನಾಯಿಗಳಂತಿದ್ದವು ಎಂದು ಭಾರತಕ್ಕೆ ಬಂದ ಪ್ರವಾಸಿಗರು ದಾಖಲಿಸಿ ಹೋಗಿದ್ದಾರೆ. ಇವುಗಳ ಸಂಖ್ಯೆಯ ಹೆಚ್ಚಳದಿಂದ ಕಾಡಿನಲ್ಲಿ ಜಿಂಕೆ, ಕಡವೆ, ಮೊಲ ಮತ್ತು ಹಂದಿಗಳ ಸಂಖ್ಯೆ ನಿರ್ನಾಮವಾಗುತ್ತದೆಂದು ಕಾಡಿನ ಮಾಂಸ ಪ್ರಿಯರು ಇದರ ನಿರ್ನಾಮಕ್ಕೆ ಕಾರಣರಾದರು. ಇದನ್ನ ಮರಳಿ ತರಬೇಕಾದರೆ ಎಪ್ಪತ್ತು ವರ್ಷಗಳ ಹಿಂದಿದ್ದ ಕಾಡು ಈಗಿದೆಯೆ? ಅಂದಿನ ಪ್ರಾಣಿಗಳು ಈಗಿವೆಯೇ? ಎಂಟು ಚೀತಾಗಳು ಮುಂದೆ ಸಂತಾನೋತ್ಪತ್ತಿ ಮಾಡಿ, ಪ್ರತಿದಿನ ಅವುಗಳು ಬೇಟಿಯಾಡಿದರೆ ಇನ್ಯಾವ ಪ್ರಾಣಿ ಸಂಕುಲ ನಿರ್ನಾಮವಾಗುತ್ತದೊ ಹೇಳಲು ಬರುವುದಿಲ್ಲ. ಯಾವ ಮುಂದಾಲೋಚನೆಯೂ ಇಲ್ಲದ ಜನ ನಾಯಕರು ಮತ್ತು ಚೀತಾಗಳು ಬಂದ ಕೂಡಲೇ ಮೋದಿ ಆಜ್ಞೆಯಂತೆ ಚಪ್ಪಾಳೆ ಹೊಡೆದ ಜನಸ್ತೋಮದ ಸಂಭ್ರಮ ನೋಡಿದ ಕಾಂಗೈಗಳು, ಚೀತಾಗಳನ್ನ ಮತ್ತೆ ತಂದು ನಮ್ಮ ಕಾಡಿಲ್ಲದ ನಾಡಿಗೆ ಬಿಡುವ ಯೋಜನೆ ನಮ್ಮದು. ಈಗ ಬಂದಿರುವ ಚೀತಾಗಳು ನಮಗೆ ಕೃತಜ್ಞತೆ ಸಲ್ಲಿಸಬೇಕೆಂದು ಹೇಳಿದ್ದಾರಂತಲ್ಲಾ, ಥೂತ್ತೇರಿ.
*****
ಅಂಬೇಡ್ಕರ್‌ರವರ ನಿಜವಾದ ಅನುಯಾಯಿ ಮೋದೀಜಿಯವರು ಎಂದು ಮಾಜಿ ರಾಷ್ಟಪತಿಗಳಾದ ಕೋವಿಂದಣ್ಣನವರು ಹೇಳಿ ಸಾಮಾನ್ಯ ಜನರನ್ನ ದಂಗುಬಡಿಸಿದ್ದಾರಲ್ಲಾ. ಈ ಶತಮಾನದ ತಮಾಷೆಯೆಂದರೆ ಇದೇ. ಕೋವಿಂದ್ ಅವರು ರಾಷ್ಟಪತಿ ಸ್ಥಾನ ಅಲಂಕರಿಸಬೇಕಾದರೆ, ಆ ಪರಂಪರೆಯನ್ನ ತಿಳಿದವರು, ನಮ್ಮ ಗ್ರಹಿಕೆಗೆ ನಿಲುಕದ ಯಾವುದೋ ವಿದ್ವತ್ತು ಕೋವಿಂದರಲ್ಲಿರಬಹುದೆಂದು ಭಾವಿಸಿದ್ದರು. ಏಕೆಂದರೆ ಭಾರತದ ಹಿಂದಿನ ಹಲವು ರಾಷ್ಟ್ರಪತಿಗಳು ವಿದ್ವತ್ತಿನ ಪಂಡಿತರಾಗಿದ್ದರು. ಬಾಬು ರಾಜೇಂದ್ರ ಪ್ರಸಾದ್, ಡಾ. ಸರ್ವಪಲ್ಲಿ ರಾಥಾಕೃಷ್ಣ, ವಿ.ವಿ ಗಿರಿ ಇವರೆಲ್ಲಾ ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವದ ದೇಶಕ್ಕೆ ಕಳಸವಿಟ್ಟಂತೆ ಕಂಡರು. ಆ ಸ್ಥಾನ ಕೆಳಗಿಳಿದದ್ದು ಫಕ್ರುದ್ದೀನ್ ಆಲಿ ಅಹಮದ್ ಕಾಲದಲ್ಲಿ. ಯಾಕೆಂದರೆ ಅವರು ತುರ್ತುಪರಿಸ್ಥಿತಿ ಬಿಲ್ಲಿಗೆ ಸಹಿಮಾಡಿದರು. ಆದರೂ ಆ ನಂತರ ಬಂದವರೆಲ್ಲಾ ಆ ಸ್ಥಾನಕ್ಕೆ ಗೌರವ ತಂದಿದ್ದರು. ಈಗಿನ ವಿಪರ್ಯಾಸವೆಂದರೆ ಅಂಬೇಡ್ಕರ್ ಮತ್ತು ಮೋದಿಯನ್ನು ಒಂದೇ ತಕ್ಕಡಿಯಲ್ಲಿ ತೂಗಿ ನೋಡಿರುವ ಕೋವಿಂದಣ್ಣ ಮುಂದೆ ಯಾರ್‍ಯಾರನ್ನು ಹೋಲಿಕೆ ಮಾಡುತ್ತಾರೆಂದು ಜನಕ್ಕೆ ದಿಗಿಲಾಗಿದೆಯಂತಲ್ಲಾ. ಏಕೆಂದರೆ ಕೋವಿಂದ್ ಅವರು ಅಡಿರುವ ಮಾತು ಆದಿತ್ಯನಾಥರಿಂದಲೋ ಚಕ್ರವರ್ತಿ ಸೂಲಿಬೆಲೆ ಅಥವಾ ಸಿ.ಟಿ ರವಿ ಬಾಯಿಂದಲೊ ಬರುವ ಮಾತು. ಸಂವಿಧಾನ ರಚನೆ ಮಾಡಿದ ಅಂಬೇಡ್ಕರನ್ನ ಸಂವಿಧಾನವನ್ನೇ ಮೂಲೆಗುಂಪು ಮಾಡ ಹೊರಟ ಮೋದಿಗೆ ಹೋಲಿಸಿದ್ದು ಅಜ್ಞಾನದ ಪರಮಾವಧಿ ಎಂದು ಹೇಳಲು ಭಯವಾಗುತ್ತಿದೆಯಲ್ಲಾ, ಥೂತ್ತೇರಿ..
ಇದನ್ನೂ ಓದಿ: ಚಕ್ರತೀರ್ಥನ ರೋಗ ಜೋಷಿಗೂ ಬಡಿಯಿತಂತಲ್ಲಾ..
ಥೂತ್ತೇರಿ