ರಾಜ್ಯವನ್ನು ಅಭಿವೃದ್ದಿ ಮಾಡಲು ಎಲ್ಲಾ ಹಂತಗಳಲ್ಲಿ ವಿಫಲವಾಗಿರುವ ಬಿಜೆಪಿ ಪಕ್ಷವು ಚುನಾವಣೆ ಹತ್ತಿರ ಬಂದಿರುವುದರಿಂದ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಮಾತ್ರ ಸಾವರ್ಕರ್ ಹೆಸರು ಬಳಸುತ್ತಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿಗೆ ಸಾವರ್ಕರ್ ಹೆಸರು ಬಳಸುವ ಯಾವುದೇ ನೈತಿಕತೆಯಿಲ್ಲ. ಏಕೆಂದರೆ ಬಿಜೆಪಿ ರೀತಿ ಸಾವರ್ಕರ್ ಜಾತಿಗಳನ್ನು ಸಂಘಟಿಸಲಿಲ್ಲ. ಬದಲಿಗೆ ಕೇವಲ ಧರ್ಮ ಪ್ರಚಾರ ಮಾಡಿದರು. ಆದರೆ ಬಿಜೆಪಿ ಕಾಂಗ್ರೆಸ್‌ಗಿಂತಲೂ ಹೀನಾಯವಾಗಿ ಧರ್ಮ ಒಡೆಯಲು ಮುಂದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, “ಬಿಜೆಪಿಗೆ ಅಖಂಡ ಭಾರತದ ಕಲ್ಪನೆಯೊಂದಿಗೆ ಸಾವರ್ಕರ್ ಸ್ಥಾಪಿಸಿದ ಅಖಿಲ ಭಾರತ ಹಿಂದೂ ಮಹಾಸಭಾ ಬೇಕಿಲ್ಲ. ಬದಲಿಗೆ ಮುಂದಿನ ಚುನಾವಣೆಗಾಗಿ ಅವರ ಹೆಸರು ಮತ್ತು ಫೋಟೊ ಮಾತ್ರ ಬೇಕಿದೆ” ಎಂದು ಟೀಕಿಸಿದರು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಬಿಜೆಪಿಗೆ ನಿಜವಾಗಿಯೂ ಸಾವರ್ಕರ್ ಬಗ್ಗೆ ಪ್ರೀತಿಯಿದ್ದರೆ ಅವರ ಜನ್ಮದಿನವನ್ನು ರಾಷ್ಟ್ರೀಯ ಹಬ್ಬ ಎಂದು ಘೋಷಿಸಲಿ. ಆದರೆ ಟಿಪ್ಪು ಜಯಂತಿ ಆಚರಿಸುವಾಗ ಬಿಜೆಪಿ ಸಾವರ್ಕರ್‌ರನ್ನು ಮರೆತಿತ್ತು ಎಂದಿದ್ದಾರೆ.
ಸಾವರ್ಕರ್ ವಿರುದ್ಧ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ ಹೇಡಿ ಸ್ವಭಾವದವರು ಎಂದು ಟೀಕಿಸಿದ ಧರ್ಮೇಂದ್ರ ಅವರು ವಿರುದ್ಧ ದೂರು ದಾಖಲಿಸಿ ಕಾಂಗ್ರೆಸ್ ವಿರುದ್ಧ ಹೋರಾಡುವುದಾಗಿ ಹೇಳಿದರು. ಅದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋದರು ಎಂದು ಬಿಜೆಪಿ ಅನಗತ್ಯವಾಗಿ ವಿವಾದವೆಬ್ಬಿಸುತ್ತಿದೆ. ಏಕೆಂದರೆ ಬಿಜೆಪಿಗೆ ಬೇರೆ ವಿಷಯಗಳೇ ಇಲ್ಲ. ಬಿಜೆಪಿಯವರು ಎಂದೂ ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲವೇ ಎಂದರು. ಜೊತೆಗೆ ನಾನು ವಿಷಯದಲ್ಲಿ ಸಿದ್ದರಾಮಯ್ಯನವರನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಇದೇ ಧರ್ಮೇಂದ್ರರವರು ಈ ಹಿಂದೆ ಗಾಂಧಿಯನ್ನು ಕೊಂದವರು ನಾವು ಎಂಬ ಹೇಳಿಕೆ ನೀಡಿ ಬಂಧನಕ್ಕೆ ಒಳಗಾಗಿದ್ದರು. ಪತ್ರಿಕಾಗೋಷ್ಟಿಯಲ್ಲಿ “ನಾವು ಗಾಂಧೀಜಿಯನ್ನೆ ಬಿಟ್ಟಿಲ್ಲ ಸ್ವಾಮಿ, ಇನ್ನು ನೀವು ಯಾವ ಲೆಕ್ಕ ನಮಗೆ? ಹಿಂದೂಗಳ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿ ಗಾಂಧೀಜಿಯನ್ನೇ ಹತ್ಯೆ ಮಾಡಿದವರಿಗೆ ನಿಮ್ಮ ವಿಚಾರದಲ್ಲಿ ಆಲೋಚನೆ ಮಾಡಲ್ಲಿಕ್ಕೆ ಸಾಧ್ಯವಿಲ್ಲ ಎನ್ನುತ್ತೀರಾ?” ಎಂಬ ಹೇಳಿಕೆ ನೀಡಿದ್ದರು.
ದೇಗುಲ ಧ್ವಂಸ ವಿರೋಧಿಸಿ ಹೇಳಿಕೆ ನೀಡಿದ್ದ ಅವರು, ಬಿಜೆಪಿ, ಸಂಘಪರಿವಾರ ಮತ್ತು ಸಹಪರಿವಾರಗಳಾದ ಹಿಂದೂ ಜಾಗರಣ ವೇದಿಕೆ, ಭಜರಂಗದಳ, ವಿಹಿಂಪ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿವೆ. ಸ್ವಾಮಿ ನಾನು ಕೇಳುತ್ತೇನೆ ರಾಜ್ಯದಲ್ಲಿ ಯಾರ ಸರ್ಕಾರ ಇದೆ? ಒಂದು ವೇಳೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದಿದ್ರೆ ಪರಿಸ್ಥಿತಿ ಏನಾಗ್ತಿತ್ತು..? ಕರ್ನಾಟಕ ಹೀಗೆ ಇರುತ್ತಿತ್ತೆ? ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದನ್ನೂ ಓದಿ; ಗಾಂಧೀಜಿಯನ್ನೆ ಹತ್ಯೆ ಮಾಡಿದವರು ನಾವು, ಇನ್ನು ನೀವು ಯಾವ ಲೆಕ್ಕ?: ಹಿಂದೂ ಮಹಾಸಭಾ ಮುಖಂಡನ ಪ್ರಚೋದನಾಕಾರಿ ಹೇಳಿಕೆ!