Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿವಮೊಗ್ಗ: ಮತೋನ್ಮತ್ತ ರಣಕಣದಿಂದ ಈಶ್ವರಪ್ಪ ಕಡ್ಡಾಯ ನಿವೃತ್ತಿ?!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿವಮೊಗ್ಗ: ಮತೋನ್ಮತ್ತ ರಣಕಣದಿಂದ ಈಶ್ವರಪ್ಪ ಕಡ್ಡಾಯ ನಿವೃತ್ತಿ?!

- Advertisement -
- Advertisement -

ಶಿವಮೊಗ್ಗ ನಿಸರ್ಗ ಸೌಂದರ್ಯ-ಸಮೃದ್ಧಿಯ ಮಲೆನಾಡಿನ ಹೆಬ್ಬಾಗಿಲು; ಕಾಂಕ್ರೀಟು ಕಾಡಿನಲ್ಲಿರುವ ಶಿವಮೊಗ್ಗ ನಗರ ಹಚ್ಚಹಸುರಿನ ಜೀವವೈವಿಧ್ಯದ ಪಶ್ಚಿಮ ಘಟ್ಟಗಳ ಗುಡ್ಡಗಾಡು ಪ್ರದೇಶಕ್ಕೆ ಗೇಟ್ ವೇ. ಅಡಿಕೆ ವ್ಯವಹಾರ, ಶಿಕ್ಷಣ ಮತ್ತು ಫೌಂಡ್ರಿ ಅಟೋಮೊಬೈಲ್ ಪಾರ್ಕ್‌ಗೆ ಪ್ರಸಿದ್ಧವಾಗಿರುವ ಶಿವಮೊಗ್ಗ ರಾಜ್ಯದ ನಿರ್ಣಾಯಕ ಮಧ್ಯವರ್ತಿ ಪ್ರದೇಶವೆಂದೇ ಪರಿಗಣಿಸಲ್ಪಟ್ಟಿದೆ. 2007ರ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ಸ್ಥಳೀಯ ಮಹಾನಗರ ಪಾಲಿಕೆಯ 25 ವಾರ್ಡುಗಳಲ್ಲಿ 23ನ್ನು ಸೇರಿಸಿ ಶಿವಮೊಗ್ಗ (ನಗರ) ಕ್ಷೇತ್ರ ರಚಿಸಲಾಗಿದೆ. ಪೊಲೀಸ್ ಫೈಲ್‌ನಲ್ಲಿ ’ಕೋಮು ಸೂಕ್ಷ್ಮ ಪ್ರದೇಶ’ ಎಂದು ನಮೂದಾಗಿರುವ ಶಿವಮೊಗ್ಗ ಹಿಂದುತ್ವದ ಎರಡನೆ ಪ್ರಯೋಗ ಶಾಲೆಯಾಗಿದೆ ಎಂಬ ಆತಂಕ ಜನರಲ್ಲಿ ವ್ಯಾಪಕವಾಗಿದೆ!

ರಾಜ್ಯದ ದಕ್ಷಿಣ ಕನ್ನಡ ಬಿಟ್ಟರೆ ಆರ್‌ಎಸ್‌ಎಸ್‌ನ ಹಿಡನ್ ಅಜೆಂಡಾ ಹೆಚ್ಚು ಬಳಕೆಯಾಗುವುದು ಶಿವಮೊಗ್ಗದಲ್ಲಿ; ಹಿಂದು ಮತ್ತು ಮುಸ್ಲಿಮ್ ಫ್ರಿಂಜ್ ಪಡೆಗಳು ರಹಸ್ಯ ಕಾರ್ಯಾಚರಣೆ ನಡೆಸುವುದರಿಂದ ಈ ವಾಣಿಜ್ಯ ನಗರ ಆಗಾಗ ಕೋಮು ಕಲಹ-ಕೊಲೆಯಂಥ ಕ್ರೂರ ಕಾರಣಕ್ಕೆ ಸುದ್ದಿಯಾಗುತ್ತಿರುತ್ತದೆ; ಮುಸ್ಲಿಮರ ನಂತರ ಬ್ರಾಹ್ಮಣ ಬಾಹುಳ್ಯ ಹೆಚ್ಚಾಗಿರುವ ಶಿವಮೊಗ್ಗದಲ್ಲಿ ಲಾಗಾಯ್ತಿನಿಂದ ಹಿಂದೂ ಮಹಾಸಭಾ, ಆರ್‌ಎಸ್‌ಎಸ್, ಜನ ಸಂಘದ ಚಟುವಟಿಕೆ ನಾಜೂಕಾಗಿ ನಡೆಯುತ್ತಿದೆಯಾದರೂ ಇದು ಸಮ ಸಮಾಜ ನಿರ್ಮಾಣ ಆಶಯದ ಗಾಂಧಿವಾದಿ-ಸಮಾಜವಾದಿಗಳ ಕಾರ್ಯಕ್ಷೇತ್ರವಾಗಿತ್ತು; ಬಾಬರಿ ಮಸೀದಿ ಧ್ವಂಸದ ಬಳಿಕ ಶಿವಮೊಗ್ಗ ಈಶ್ವರಪ್ಪನಂಥ ಉಗ್ರ ಮತಾಂಧ ಮಾತುಗಾರ ಎಮ್ಮೆಲ್ಲೆಯ ಮತ್ತು ವ್ಯಗ್ರ ಗುಂಪು ದಾಳಿಕೋರರ ಆಡೊಂಬಲವಾಗಿರುವುದು ದಿಗಿಲು ಮೂಡಿಸುತ್ತದೆಂದು ಸಾಮಾಜಿಕ ಕಾರ್ಯಕರ್ತರೊಬ್ಬರು ’ನ್ಯಾಯಪಥ’ಕ್ಕೆ ತಿಳಿಸಿದರು.

ಇತಿಹಾಸ-ಸಮಾಜ-ಸಂಸ್ಕೃತಿ

ಜೀವನದಿ ತುಂಗಾ ದಂಡೆಯಲ್ಲಿರುವ ಶಿವಮೊಗ್ಗ ವಿಭಿನ್ನ ಜನ-ಜಾತಿ, ಸಂಸ್ಕೃತಿ-ಭಾಷೆಯ ಕಾಸ್ಮೋಪಾಲಿಟನ್ ನಗರ. ಮುಸ್ಲಿಮ್, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ಕುರುಬ, ಮಾದಿಗ, ಲಂಬಾಣಿ, ಬೋವಿ, ಕ್ರೈಸ್ತ, ಜೈನರೇ ಮುಂತಾದ ಸ್ಥಳೀಯರೊಂದಿಗೆ ಹೊರ ರಾಜ್ಯ-ಜಿಲ್ಲೆಗಳಿಂದ ಬಂದು ನೆಲೆಸಿರುವ ಮರಾಠಿ, ತಮಿಳು, ತೆಲುಗು, ತುಳು ಇನ್ನಿತರ ಜನಾಂಗದವರು ಸಾಮರಸ್ಯದಿಂದ ಬದುಕು ಕಟ್ಟಿಕೊಂಡಿದ್ದಾರೆ. ಜಿಲ್ಲಾ ಕೇಂದ್ರವಾಗಿರುವುದರಿಂದ ಸರಕಾರಿ ನೌಕರರು, ಬ್ಯಾಂಕರ್‌ಗಳು, ಖಾಸಗಿ ಉದ್ಯಮದ ಕರ್ಮಚಾರಿಗಳು ಗಣನೀಯವಾಗಿದ್ದಾರೆ. ಕನ್ನಡ ಪ್ರಮುಖ ಆಡಳಿತ ಮತ್ತು ಆಡು ಭಾಷೆಯಾದರೂ ಹಲವು ಸಮುದಾಯ ಭಾಷೆಗಳೂ ಕೇಳಿಬರುತ್ತದೆ. ಮಲೆನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯ ಶಿವಮೊಗ್ಗದಲ್ಲಿ ಸಿನೆಮಾ-ಯಕ್ಷಗಾನ-ಸಾಹಿತ್ಯದ ಪ್ರಭಾವವಿದೆ. ಸಿನೆಮಾ ನಟ ಸುದೀಪ್, ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಶಿವಮೊಗ್ಗದ ಪ್ರತಿಭೆಗಳಲ್ಲಿ ಕೆಲವರು.

ಶಿವ-ಮೊಗ(ಮುಖ) ಪದಪುಂಜದಿಂದ ಶಿವಮೊಗ್ಗ ಹುಟ್ಟಿಕೊಂಡಿದೆ ಎಂಬುದು ಭಾಷಾಶಾಸ್ತ್ರದ ಸ್ಥಳನಾಮ ತರ್ಕ. ಶಿವನು ಬಾಯಾರಿ ಬಂದಾಗ ಮೊಗ್ಗೆಯಿಂದ (ಮಡಿಕೆ) ತುಂಗಾ ನದಿಯ ನೀರು ಕುಡಿದಿದ್ದರಿಂದ ಶಿವಮೊಗವಾಗಿ, ಅದು ಕಾಲಕ್ರಮೇಣ ಶಿವಮೊಗ್ಗವಾಯಿತು ಎನ್ನಲಾಗುತ್ತಿದೆ. ಸಿಹಿ-ಮೊಗೆ (ಸಿಹಿಯಾದ ಮೊಗ್ಗು) ಶಿವಮೊಗ್ಗ ಆಯಿತೆಂಬ ಇನ್ನೊಂದು ಕತೆಯಿದೆ ಶಿವಮೊಗ್ಗಕ್ಕೆ ಮೂಲ ’ಸಿಹಿ-ಪಾತ್ರೆ’ ಎನ್ನುವ ದಂತಕಥೆಯೂ ಒಂದಿದೆ. ಕ್ರಿ.ಪೂ. 3ನೇ ಶತಮಾನದಲ್ಲಿ ಸಾಮ್ರಾಟ ಅಶೋಕ ಮೌರ್ಯ ಸಾಮ್ರಾಜ್ಯದ ದಕ್ಷಿಣ ತುದಿಯಾಗಿದ್ದ ಶಿವಮೊಗ್ಗವನ್ನು ಆ ನಂತರ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ಅರಸರು ಆಳಿದ್ದಾರೆ ಎಂದು ಇತಿಹಾಸ ಹೇಳುತ್ತದೆ. 16ನೇ ಶತಮಾನದ ಕೆಳದಿ ನಾಯಕರ ಯುಗದಲ್ಲಿ ಸ್ವತಂತ್ರ ಅಸ್ತಿತ್ವ ಪಡೆದುಕೊಂಡ ಶಿವಮೊಗ್ಗ 17ನೇ ಶತಮಾನದಿಂದ ಸ್ವಾತಂತ್ರ್ಯದವರೆಗೆ ಮೈಸೂರು ಸಂಸ್ಥಾನದಲ್ಲಿತ್ತು.

ಹಲವು ಐತಿಹಾಸಿಕ, ಧಾರ್ಮಿಕ ಮತ್ತು ಪ್ರಾಕೃತಿಕ ಮಹತ್ವದ ಆಕರ್ಷಕ ತಾಣಗಳು ಶಿವಮೊಗ್ಗದ ಸುತ್ತಲಿನಲ್ಲಿವೆ. ಭಾರತದಲ್ಲೇ ಎರಡನೆ ಅತಿ ದೊಡ್ಡ ಚರ್ಚ್ ’ಸೆಕ್ರೆಡ್ ಹಾರ್ಟ್’ ಮತ್ತು ಕೆಳದಿ ಸಂಸ್ಥಾನದ ಅರಸ ಶಿವಪ್ಪ ನಾಯಕ ಅರಮನೆ ಶಿವಮೊಗ್ಗ ನಗರದ ಹೃದಯ ಭಾಗದಲ್ಲಿದೆ. ಗುಡ್ಡದ ಮೇಲಿರುವ ಸುಂದರ ಶಿಲ್ಪ ಕೆತ್ತನೆಯ ಅಘೋರೇಶ್ವರ ದೇವಸ್ಥಾನ ಮತ್ತು ಕೋಟೆ ಸೀತಾರಾಮಾಂಜನೇಯ ಸ್ವಾಮಿ ಆಸ್ತಿಕರ ಶ್ರದ್ಧಾಕೇಂದ್ರಗಳಾದರೆ ನಿಸರ್ಗ ರಮಣೀಯತೆಯ ಮತ್ತೂರು ಕೆರೆ, ಗಾಜನೂರು ಆಣೆಕಟ್ಟೆ, ತ್ಯಾವರೆಕೊಪ್ಪ ಸಿಂಹ ಧಾಮ, ಆನೆಗಳನ್ನು ಪಳಗಿಸುವ ಸಕ್ರೆಬೈಲ್ ಆನೆ ಬಿಡಾರ ಪ್ರಮುಖ ಪ್ರವಾಸಿ ಸ್ಥಳಗಳಾಗಿವೆ.

ಅಡಿಕೆ ಆಧಾರಿತ ಆರ್ಥಿಕತೆ!

ರಾಜ್ಯದ ಪ್ರಮುಖ ವ್ಯಾಪಾರೋದ್ಯಮ ಮಹಾನಗರ ಎನಿಸಿರುವ ಶಿವಮೊಗ್ಗದ ಆರ್ಥಿಕತೆಯ ಜೀವ ಜೀವಾಳ ಅಡಿಕೆ ವಹಿವಾಟು. ಮಲೆನಾಡಿನಲ್ಲಿ ಬೆಳೆಯುವ ಲಕ್ಷಾಂತರ ಟನ್ ಅಡಿಕೆಯ ಕ್ರಯ-ವಿಕ್ರಯದ ಬೃಹತ್ ಮಾರುಕಟ್ಟೆ ಶಿವಮೊಗ್ಗ ನಗರ! ಇಲ್ಲಿ ಸುಮಾರು ಒಂದೂಕಾಲು ಸಾವಿರ ಅಡಿಕೆ ವ್ಯಾಪಾರದ ಮಂಡಿಗಳಿವೆ ಎಂದು ಅಂದಾಜಿಸಲಾಗಿದೆ. ಎಪಿಎಂಸಿ, ಮ್ಯಾಮ್ಕೊಸ್‌ನಂಥ ಕೋಟ್ಯಂತರ ರೂ. ಅಡಿಕೆ ವಹಿವಾಟು ಮಾಡುವ ಸಹಕಾರ ಸಂಸ್ಥೆಗಳಿವೆ. ಅಡಿಕೆ ಸುತ್ತ ಶಿವಮೊಗ್ಗದ ಆರ್ಥಿಕ ವಲಯ ಸೃಷ್ಟಿಯಾಗಿದೆ. ಒಂದು ಕಾಲದಲ್ಲಿ ಭತ್ತ ಅತಿ ಹೆಚ್ಚು ಬೆಳೆಯುತ್ತಿದ್ದ ಶಿವಮೊಗ್ಗ ಜಿಲ್ಲೆಯನ್ನು ’ಅನ್ನದ ಬಟ್ಟಲು’ ಎನ್ನಲಾಗುತ್ತಿತ್ತು. ಆದರೆ ಇತ್ತೀಚಿನ ದಶಕದಲ್ಲಿ ಭತ್ತದ ಗದ್ದೆಗಳನ್ನು ವಾಣಿಜ್ಯ ಬೆಳೆಯಾದ ಅಡಿಕೆಯ ತೋಟಗಳು ಆಕ್ರಮಿಸುತ್ತಿವೆ. ಹೀಗಾಗಿ ಅಡಿಕೆ ವ್ಯಾಪಾರ ಶಿವಮೊಗ್ಗದ ಆರ್ಥಿಕ ಮಾರುಕಟ್ಟೆಯ ಏರಿಳಿತ ಅವಲಂಬಿಸಿದೆ. ಏನಿಲ್ಲದಿದ್ದರೂ ನಡೆದೀತು; ಅಡಿಕೆ ಒಂದಿಲ್ಲದಿದ್ದರೆ ಶಿವಮೊಗ್ಗಕ್ಕೆ ಅಸ್ತಿತ್ವವೇ ಇಲ್ಲ ಎಂಬ ಅಭಿಪ್ರಾಯ ಆರ್ಥಿಕ ತಜ್ಞರದಾಗಿದೆ. ಜತೆಗೆ ಕಾಳು ಮೆಣಸು, ಏಲಕ್ಕಿ, ಜಾಯಿಕಾಯಿಯಂಥ ಆರ್ಥಿಕ-ಸಾಂಬಾರ ಬೆಳೆಗಳ ಮಹತ್ವದ ಮಾರುಕಟ್ಟೆಯೂ ಶಿವಮೊಗ್ಗ. ಈಗಿತ್ತಲಾಗಿ ಶುಂಠಿ ವ್ಯಾಪಾರ ಜೋರಾಗಿದ್ದು ಶಿವಮೊಗ್ಗದ ಆರ್ಥಿಕತೆಯ ಗ್ರಾಫ್ ಏರಿಸಿದೆ ಎಂಬ ಮಾತು ಕೇಳಿಬರುತ್ತಿದೆ.

ಶಿವಮೊಗ್ಗ ವಾಣಿಜ್ಯ, ವಿದ್ಯೆ ಮತ್ತು ವೈದ್ಯಕೀಯ ವ್ಯವಹಾರದ ನಗರ. ಇಲ್ಲಿ ಎರಡು ಮೆಡಿಕಲ್, ಎರಡು ಇಂಜಿನಿಯರಿಂಗ್, ಒಂದು ಡೆಂಟಲ್ ಕಾಲೇಜು ಮತ್ತಿತರ ವೃತ್ತಿಪರ ಕೋರ್ಸ್‌ಗಳ ಶೈಕ್ಷಣಿಕ ಸಂಸ್ಥೆಗಳಿವೆ. ಯಡಿಯೂರಪ್ಪ ಮತ್ತು ಈಶ್ವರಪ್ಪ ಪೈಪೋಟಿಗೆ ಬಿದ್ದು ಕ್ಯಾಪಿಟೇಷನ್-ಡೊನೇಷನ್ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿದ್ದಾರೆ; ಯಡಿಯೂರಪ್ಪ ಉಪಮುಖ್ಯಮಂತ್ರಿಯಾದಾಗ ಶಿವಮೊಗ್ಗದ ಭೂಮಿಗೆ ಚಿನ್ನಕ್ಕಿಂತ ಹೆಚ್ಚು ರೇಟು ಬಂದು ಅಕ್ರಮ ಭೂದಂಧೆ ಚಿಗಿತುಕೊಂಡಿತು; ಈಶ್ವರಪ್ಪ ಉಪಮುಖ್ಯಮಂತ್ರಿಯಾದಾಗ ಬಿಲ್ಡರ್‍ಸ್, ರಿಯಲ್ ಎಸ್ಟೇಟ್ ಮಾಫಿಯಾ ಹಾವಳಿ ಹಚ್ಚಾಯಿತು. ಇದರಿಂದ ಯಡಿಯೂರಪ್ಪ ಮತ್ತು ಈಶ್ವರಪ್ಪ ಕುಟುಂಬದ ವಾಣಿಜ್ಯ ಸಾಮ್ರಾಜ್ಯ ವಿಸ್ತಾರ ಆಯಿತೆ ವಿನಃ ನಿರುದ್ಯೋಗಿಗಳಿಗೇನೂ ಅನುಕೂಲವಾಗಲಿಲ್ಲ. ಯಡಿಯೂರಪ್ಪರ ಮಗ ಸಂಸದ ರಾಘವೇಂದ್ರ ಮತ್ತು ಈಶ್ವರಪ್ಪರ ಪುತ್ರ ಜಿಪಂ ಸದಸ್ಯ ಕಾಂತೇಶ್ ರಿಯಲ್ ಎಸ್ಟೇಟ್ ಧಣಿಗಳಾಗಿದ್ದಾರೆ ಎಂಬದು ಟಾಕ್ ಆಫ್ ದಿ ಟೌನ್.

ಕೇವಲ 20 ಕಿಮೀ. ದೂರದ ಭದ್ರಾವತಿಯಲ್ಲಿದ್ದ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಕಾಗದ ಕಾರ್ಖಾನೆ, ಸಕ್ಕರೆ ಕಾರ್ಖಾನೆ ಮತ್ತಿತರ ಕೈಗಾರಿಕೆಗಳಿಂದ ಸೃಷ್ಟಿಯಾಗುತ್ತಿದ್ದ ಆರ್ಥಿಕ ಸಂಪನ್ಮೂಲ ನೇರವಾಗಿ ಶಿವಮೊಗ್ಗ ಮಾರುಕಟ್ಟೆಯನ್ನು ಪ್ರಭಾವಿಸುತ್ತಿತ್ತು. ಈ ಕೈಗಾರಿಕೆಗಳು ಈಗ ಒಂದೊಂದಾಗಿ ಮುಚ್ಚಿರುವುದರಿಂದ ಶಿವಮೊಗ್ಗದ ಆರ್ಥಿಕತೆಯಲ್ಲಿ ಹಿಂಜರಿತ ಆಗಿದೆ ಎನ್ನಲಾಗುತ್ತಿದೆ. ಏಷ್ಯಾದಲ್ಲೆ ಹೆಸರುವಾಸಿಯಾದ ಫೌಂಡ್ರಿ ಅಟೋಮೊಬೈಲ್ ಪಾರ್ಕ್ ಮತ್ತು ಗಾರ್ಮೆಂಟ್ ಉದ್ಯಮ, ಸಣ್ಣ-ಪುಟ್ಟ ಕೈಗಾರಿಕೆಗಳು ಇವೆಯಾದರೂ ಅಲ್ಲೆಲ್ಲ ಸೀಮಿತ ಉದ್ಯೋಗಾವಕಾಶ. ವಿಮಾನ ನಿಲ್ದಾಣ ಮರೀಚಿಕೆಯಂತಾಗಿದೆ ಎಂದು ಶಿವಮೊಗ್ಗದ ಮಂದಿ ಬೇಸರಿಸುತ್ತಾರೆ.

ಕ್ಷೇತ್ರ ಆಕಾರ

ಶಿವಮೊಗ್ಗ ವಿಧಾನಸಭಾ ಕ್ಷೇತ್ರ ಧರ್ಮ ದಂಗಲ್ ಅಖಾಡ! ಅಸಂಸದೀಯ ಮಾತುಗಾರಿಕೆ ಮತ್ತು ಅತಿರೇಕದ ಹಿಂದುತ್ವದ ಭಾಷಣಗಳಿಂದ ರಾಜ್ಯ ಬಿಜೆಪಿಯ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗುತ್ತಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕಳೆದೆರಡು ದಶಕದಿಂದ ಕೇಸರಿ ಶಾಲು ಮತ್ತು ಕಡು ಕೆಂಪು ಕುಂಕುಮಾಂಕಿತರನ್ನು ಮುಂದಿಟ್ಟುಕೊಂಡು ಹಿಂದುತ್ವದ ರಾಜಕಾರಣ ಮಾಡುತ್ತಿದ್ದಾರೆಂಬ ಮಾತು ಶಿವಮೊಗ್ಗದಲ್ಲಿ ಸಾಮಾನ್ಯವಾಗಿದೆ. ಈಶ್ವರಪ್ಪರ ಚುನಾವಣಾ ಸಮರವೆಂದರೆ ಅಭಿವೃದ್ಧಿಯ ಹಂಗು ಅಥವಾ ಮನುಷ್ಯತ್ವದ ಮುಲಾಜಿಲ್ಲದ ಕಟ್ಟರ್ ವಿಭಜಕ ತಂತ್ರಗಾರಿಕೆ. ಈಶ್ವರಪ್ಪ ಶಾಸಕತ್ವದ ಹೊಣೆಗಾರಿಕೆ ಅದೆಷ್ಟು ನಿಭಾಯಿಸಿದ್ದಾರೆ ಅಥವಾ ಕೈಬಾಯಿ ಅದೆಷ್ಟು ಶುದ್ಧವಾಗಿಟ್ಟುಕೊಂಡಿದ್ದಾರೆ ಎಂಬುದು ಶಿವಮೊಗ್ಗದ ಇಲೆಕ್ಷನ್‌ನಲ್ಲಿ ಗಣನೆಗೆ ಬರುತ್ತಿಲ್ಲ; ಈಶ್ವರಪ್ಪ ಮುಸ್ಲಿಮರನ್ನು ಯಾವ ಮಟ್ಟದಲ್ಲಿ ಮೂದಲಿಸಿ ಹಿಂದುತ್ವದ ಕಾಲಾಳುಗಳನ್ನು ಪ್ರಚೋದಿಸುತ್ತಾರೆ ಎಂಬುದಷ್ಟೇ ಮುಖ್ಯವಾಗುತ್ತಿರುವುದು ಶಿವಮೊಗ್ಗದ ಘೋರ ದುರಂತ ಎಂದು ಪ್ರಜ್ಞಾವಂತರು ಆತಂಕಪಡುತ್ತಾರೆ!

ಯಡಿಯೂರಪ್ಪ

ಶಿವಮೊಗ್ಗ (ಶಿವಮೊಗ್ಗ ನಗರ) ವಿಧಾನಸಭಾ ಕ್ಷೇತ್ರ ಬ್ರಾಹ್ಮಣರ ಹಿಡಿತದಲ್ಲಿದೆ ಎಂಬ ವಿಶ್ಲೇಷಣೆಗಳು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿದೆ. 1957ರಿಂದ 2018ರ ತನಕದ 14 ಚುನಾವಣೆಯಲ್ಲಿ 8 ಬಾರಿ ಬ್ರಾಹ್ಮಣರೇ ಶಾಸಕರಾಗಿದ್ದಾರೆ. ಶಿವಮೊಗ್ಗ ನಗರ 1985 ಚುನಾವಣೆ ತನಕ ಒಂಥರಾ ಬ್ರಾಹ್ಮಣ ಮೀಸಲು ಕ್ಷೇತ್ರದಂತಾಗಿತ್ತು. ಒಟ್ಟು 2,56,373 ಮತದಾರರಿರುವ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮರು 58 ಸಾವಿರ, ಎಸ್‌ಸಿ ಮತ್ತು ಎಸ್‌ಟಿ 50 ಸಾವಿರ, ಬ್ರಾಹ್ಮಣರು 41 ಸಾವಿರ, ಲಿಂಗಾಯತರು 32 ಸಾವಿರ, ಕುರುಬರು 14 ಸಾವಿರ, ಮರಾಠರು ಮತ್ತು ಒಕ್ಕಲಿಗರು ತಲಾ 13 ಸಾವಿರ, ಕ್ರೈಸ್ತರು ಹಾಗು ತಮಿಳರು ತಲಾ 11 ಸಾವಿರ ಗಣನೀಯ ಸಂಖ್ಯೆಯಲ್ಲಿರುವ ಸಮುದಾಯಗಳು ಎಂದು ಅಂದಾಜಿಸಲಾಗಿದೆ.

ಬ್ರಾಹ್ಮಣ ಎಮ್ಮೆಲ್ಲೆಗಳು

1957ರಲ್ಲಾದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಬ್ರಾಹ್ಮಣ ಸಮುದಾಯದ ರತ್ನಮ್ಮ ಮಾಧವರಾವ್‌ರನ್ನು ಅಭ್ಯರ್ಥಿ ಮಾಡಿತ್ತು. ಎದುರಾಳಿಯಾಗಿದ್ದ ಜನಸಂಘದ ಸಿ.ಎಲ್.ರಾಮಣ್ಣ ಕೇವಲ 5,849 ಮತ ಪಡೆದರು. ರತ್ನಮ್ಮ 7,343 ಮತದಂತರದಿಂದ ಗೆದ್ದು ಶಿವಮೊಗ್ಗದ ಪ್ರಥಮ ಚುನಾಯಿತ ಶಾಸಕಿ ಎನಿಸಿಕೊಂಡರು. 1962ರಲ್ಲಿ ರತ್ನಮ್ಮ ಮಾಧವರಾವ್ (14,087) ಸಮಾಜವಾದಿ ಪಕ್ಷದ ಜಿ.ಎಂ.ಚನ್ನಪ್ಪರನ್ನು (9,011) ಸೋಲಿಸಿ ಎರಡನೆ ಬಾರಿ ಎಮ್ಮೆಲ್ಲೆಯಾದರು. 1967ರಲ್ಲಿ ಕಾಂಗ್ರೆಸ್ ಆ ಹೊತ್ತಿಗೆ ಬ್ರಾಹ್ಮಣ ಸಮುದಾಯದಲ್ಲಿ ವರ್ಚಸ್ವಿ ಮುಂದಾಳೆನಿಸಿದ್ದ ಎ.ಆರ್. ಬದರಿನಾರಾಯಣರನ್ನು ಅಖಾಡಕ್ಕಿಳಿಸಿತು. ಪ್ರಜಾ ಸೋಷಲಿಸ್ಟ್ ಪಕ್ಷದ ಹುರಿಯಾಳಾಗಿದ್ದ ವೈ.ಆರ್.ಪರಮೇಶ್ವರಪ್ಪರನ್ನು (11,598) ಬದರಿನಾರಾಯಣ (18,659) ಪರಾಭವಗೊಳಿಸಿ ಅಸೆಂಬ್ಲಿಗೆ ಪ್ರವೇಶ ಪಡೆದರು.

1972ರ ಅಸೆಂಬ್ಲಿ ಚುನಾವಣೆಯಲ್ಲಿ ಬದರಿನಾರಾಯಣ ಸ್ಪರ್ಧಿಸದೆ ಪಾರ್ಲಿಮೆಂಟ್ ಸದಸ್ಯರಾದರು. ಕಾಂಗ್ರೆಸ್ ಜಾತಿ ಲೆಕ್ಕಾಚಾರ ಹಾಕಿ ಬ್ರಾಹ್ಮಣರಿಗೆ ಟಿಕೆಟ್ ಕೊಡುವ ತಂತ್ರಗಾರಿಕೆ ಮುಂದುವರೆಸಿತು. ಎ.ಬಿ.ಬಿ.ನಾರಾಯಣ ಅಯ್ಯಂಗಾರ್ ಕಾಂಗ್ರೆಸ್ ಉಮೇದುವಾರರಾದರೆ, 1967ರಲ್ಲಿ ಸೋತಿದ್ದ ವೈ.ಆರ್.ಪರಮೇಶ್ವರಪ್ಪ ಸಂಯುಕ್ತ ಸೋಷಲಿಸ್ಟ್ ಪಕ್ಷದ ಎದುರಾಳಿಯಾದರು. ಆ ಸಂದರ್ಭದಲ್ಲಿ ಬೀಸಿದ್ದ ಇಂದಿರಾ ಗಾಂಧಿ ಬಿರುಗಾಳಿಯಲ್ಲಿ ಅಯ್ಯಂಗಾರ್ 18,259 ಮತಗಳ ಭರ್ಜರಿ ಅಂತರದಲ್ಲಿ ಚುನಾಯಿತರಾದರು. ದೇವರಾಜ ಅರಸರ ಸಾಮಾಜಿಕ ನ್ಯಾಯದ ಸಂಕ್ರಮಣ ಕಾಲದಲ್ಲೂ (1978ರ ಚುನಾವಣೆ ಸಮಯ) ಶಿವಮೊಗ್ಗೆಯ ಕಾಂಗ್ರೆಸ್ ಟಿಕೆಟ್ ಬ್ರಾಹ್ಮಣರಿಗೆ ಕೊಡಲಾಯಿತು. 1967ರಲ್ಲಿ ಸಾಗರ ಕಾಂಗ್ರೆಸ್ ಶಾಸಕ-ಸಜ್ಜನ ರಾಜಕಾರಣಿ ಎನಿಸಿದ್ದ ಕೆ.ಎಚ್.ಶ್ರೀನಿವಾಸ್‌ರನ್ನು ಕಾಂಗ್ರೆಸ್ ಹೈಕಮಾಂಡ್ 1978ರಲ್ಲಿ ಶಿವಮೊಗ್ಗೆಗೆ ಸ್ಥಳಾಂತರಿಸಿತು. ಜನಸಂಘ ಮೂಲದ ಡಿ.ಎಚ್.ಶಂಕರಮೂರ್ತಿ ಜನತಾ ಪಾರ್ಟಿಯ ಹುರಿಯಾಳಾದರು. ಈ ಜಿದ್ದಾಜಿದ್ದಿಯಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ್ 11,674 ಮತಗಳಂತರದಿಂದ ಗೆದ್ದರು.

ಇಂದಿರಾ ಹಾಗು ಅರಸು ನಡುವೆ ಭಿನ್ನಾಭಿಪ್ರಾಯ ಬಂದಾಗ ಶಾಸಕ ಶ್ರೀನಿವಾಸ್, ಅರಸುರಿಗೆ ನಿಷ್ಠರಾಗಿ ಉಳಿದರು. ಬ್ರಾಹ್ಮಣರಿಗೆ 1983ರ ಇಲೆಕ್ಷನ್‌ನಲ್ಲಿ ಕಾಂಗ್ರೆಸ್ ಟಿಕೆಟ್ ಮೊದಲ ಸಲ ತಪ್ಪಿತು. ಆದರೆ ಬಿಜೆಪಿ ಬ್ರಾಹ್ಮಣ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿತು. ಕಾಂಗ್ರೆಸ್ ಕ್ಷೇತ್ರದ ಪ್ರಥಮ ಬಹುಸಂಖ್ಯಾತರಾದ ಮುಸ್ಲಿಮ್ ಜನಾಂಗಕ್ಕೆ ಅವಕಾಶ ಕಲ್ಪಿಸಿತು. ಕಾಂಗ್ರೆಸ್‌ನ ಗುಲ್ಮಾ ಅಬೀದ್ (17,732), ಜನತಾ ಪಕ್ಷದ (ರಂಗ) ಕೆ.ಸಿ.ಮಹೇಶ್ವರಪ್ಪ (22,211) ಮತ್ತು ಬಿಜೆಪಿಯ ಎಂ.ಆನಂದರಾವ್ (25,475) ನಡುವೆ ನಿಕಟ ತ್ರಿಕೋನ ಕಾಳಗ ಜರುಗಿತು. ಜಿಲ್ಲೆಯಲ್ಲಿ ಪ್ರಭಾವ ಹೊಂದಿದ್ದ ಬಂಗಾರಪ್ಪ ಕಾಂಗ್ರೆಸ್‌ಗೆ ತಿರುಗಿಬಿದ್ದು ಮತ್ತು ಜನತಾರಂಗದ ಮುಂಚೂಣಿಯಲ್ಲಿ ಇದ್ದದ್ದು ಮತ್ತು ಮುಸ್ಲಿಮ್ ಮತ ಬ್ಯಾಂಕ್ ಕಾಂಗ್ರೆಸ್-ಜನತಾ ಪಕ್ಷದಲ್ಲಿ ಹಂಚಿಕೆಯಾಗಿದ್ದು ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿತು. ಸ್ವಜಾತಿ ಬ್ರಾಹ್ಮಣರ ಓಟು ಇಡುಗಂಟಾಗಿ ಪಡೆದ ಬಿಜೆಪಿಯ ಆನಂದರಾವ್ ಅನಿರೀಕ್ಷಿತವಾಗಿ ಗೆಲುವು ಕಂಡರೆಂದು ಅಂದಿನ ಹಣಾಹಣಿ ಕಂಡವರು ಹೇಳುತ್ತಾರೆ.

ಬಿಜೆಪಿ ಹಂಗಿನಲ್ಲಿ ಸರಕಾರ ನಡೆಸುವುದಕ್ಕೆ ಸಾಧ್ಯವಾಗದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಸೆಂಬ್ಲಿ ವಿಸರ್ಜನೆಗೆ ರಾಮಕೃಷ್ಟ ಹೆಗಡೆ ಮುಂದಾದ್ದರಿಂದ ಎರಡೇ ವರ್ಷಕ್ಕೆ ನಡುಗಾಲ ಚುನಾವಣೆ (1985) ಎದುರಾಯಿತು. ಆ ಚುನಾವಣೆಯಲ್ಲಿ ಬ್ರಾಹ್ಮಣ ಅಭ್ಯರ್ಥಿಯನ್ನು ಹೂಡುವ ಹಳೆಯ ಟ್ಯಾಕ್ಟಿಕ್‌ಗೆ ಕಾಂಗ್ರೆಸ್ ಮರಳಿತು. ಆಗ ಕಾಂಗ್ರೆಸ್‌ನಲ್ಲಿದ್ದ ಶ್ರೀನಿವಾಸ್‌ರಿಗೆ ಅವಕಾಶ ಸಿಕ್ಕಿತು. ಬಿಜೆಪಿಯಿಂದ ಶಾಸಕ ಆನಂದರಾವ್ ಅಖಾಡಕ್ಕಿಳಿದರು. ಕಾಂಗ್ರೆಸ್‌ನ ಶ್ರೀನಿವಾಸ್(31,472) ಹಾಗು ಜನತಾ ಪಕ್ಷದ ಜಿ.ಮಾದಪ್ಪರ (21,650) ಮೇಲಾಟದಲ್ಲಿ ಬಿಜೆಪಿಯ ಆನಂದರಾವ್(14,241) ಠೇವಣಿ ಕಳೆದುಕೊಂಡರು. ಬ್ರಾಹ್ಮಣ ಮತದಾರರಿಗೆ ಶಾಸಕ ಆನಂದರಾವ್‌ಗಿಂತ ಮಾಜಿ ಶಾಸಕ ಶ್ರೀನಿವಾಸ್ ಬೆಟರ್ ಅನಿಸಿದ್ದರಿಂದ ಅವರು 9,822 ಮತದಿಂದ ಮೂರನೆ ಬಾರಿ ಶಾಸಕನಾದರೆಂದು ತರ್ಕಿಸಲಾಗುತ್ತಿದೆ.

ಈಶ್ವರಪ್ಪ ರಂಗಪ್ರವೇಶ!

1980ರ ದಶಕದ ಅಂತ್ಯದಲ್ಲಿ ಶಿವಮೊಗ್ಗ ನಗರದಲ್ಲಿ ಮತೀಯ ರಾಜಕಾರಣದ ದಾಳಗಳು ನಾಜೂಕಾಗಿ ಉರುಳತೊಡಗಿದ್ದವು; ಅದೇ ಹೊತ್ತಿಗೆ ಬೆಂಗಳೂರಿನ ಕೇಶವಕೃಪಾದಲ್ಲಿ ಆಶ್ರಯದಾತರನ್ನು ಕಂಡುಕೊಂಡಿದ್ದ ಶಿವಮೊಗ್ಗ ನಗರದ ಆರ್‌ಎಸ್‌ಎಸ್ ಕಟ್ಟಾಳು ಕೆ.ಎಸ್.ಈಶ್ವರಪ್ಪ ಸ್ಥಳೀಯ ಬಿಜೆಪಿಯಲ್ಲಿ ಮುನ್ನಲೆಗೆ ಬರಲಾರಂಭಿಸಿದ್ದರು ಎನ್ನಲಾಗುತ್ತಿದೆ. ರಾಜ್ಯ ಬಿಜೆಪಿಯಲ್ಲಿ ಪ್ರಭಾವಿಯಾಗಿದ್ದ ಯಡಿಯೂರಪ್ಪರಿಗೆ ನಿಷ್ಟರಾಗಿದ್ದ ಕುರುಬ ಜನಾಂಗದ ಈಶ್ವರಪ್ಪರಿಗೆ 1989ರ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಲಾಯಿತು; ಶಾಸಕ ಕೆ.ಎಚ್.ಶ್ರೀನಿವಾಸ್ ಕಾಂಗ್ರೆಸ್ ಕ್ಯಾಂಡಿಡೇಟಾದರೆ, ಜೆಡಿಎಸ್ ಮುಸ್ಲಿಮ್ ಜನಾಂಗದ ಎ.ಪಿ.ಅನ್ವರ್‌ರನ್ನು ಸ್ಪರ್ಧೆಗಿಳಿಸಿತು. ಸಂಘ ಪರಿವಾರದ ಮತೀಯ ಧ್ರುವೀಕರಣ ತಂತ್ರಗಾರಿಕೆ ಒಂಚೂರು ವರ್ಕ್‌ಔಟ್ ಆಗಿತ್ತು. ಆದರೆ ಅಕ್ಕಿಂತ ಹೆಚ್ಚಾಗಿ ಜೆಡಿಎಸ್ (16,439) ಮತ್ತು ಕಾಂಗ್ರೆಸ್ (30,987) ನಡುವೆ ಮುಸ್ಲಿಮ್ ಮತಗಳು ಪಾಲಾಗಿದ್ದರಿಂದ ಬಿಜೆಪಿಗೆ (32,289) ಲಾಭವಾಯಿತು ಎನ್ನುವುದು ಆ ಚುನಾವಣೆಯ ಅಂಕಿ-ಅಂಶದ ಮೇಲೆ ಕಣ್ಣಾಡಿಸಿದರೆ ಅರ್ಥವಾಗುತ್ತದೆ. 1,302 ಮತಗಳಿಂದ ಅಚಾನಕ್ ಶಾಸಕನಾಗಿದ್ದು ಖುದ್ದು ಈಶ್ವರಪ್ಪನವರೇ ಬೆಚ್ಚಿಬೀಳುವ ಅಚ್ಚರಿಯ ಫಲಿತಾಂಶ ಆಗಿತ್ತೆಂದು ಚುನಾವಣಾ ಪಂಡಿತರು ತರ್ಕಿಸುತ್ತಾರೆ.

ಕಾಂತೇಶ್

ಬಾಬರಿ ಮಸೀದಿ ಪತನದ ಬಳಿಕ ಶಿವಮೊಗ್ಗ ನಗರ ಮತೋನ್ಮತ್ತಗೊಂಡಿದ್ದರಿಂದ 1994ರ ಇಲೆಕ್ಷನ್ ಹೋರಾಟ ಬಿಜೆಪಿ ಶಾಸಕ ಈಶ್ವರಪ್ಪರಿಗೆ ಸುಲಭವಾಯಿತು ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತದೆ. ಕಾಂಗ್ರೆಸ್‌ನ ಕೆ.ಎಚ್.ಶ್ರೀನಿವಾಸ್‌ರಿಗೆ ಸ್ವಜಾತಿ ಬ್ರಾಹ್ಮಣರ ಮತಗಳು ನಿರೀಕ್ಷಿತ ಪ್ರಮಾಣದಲ್ಲಿ ಬರಲಿಲ್ಲ; ಬ್ರಾಹ್ಮಣರು ಕೇಸರೀಕರಣದತ್ತ ಒಲವು ಹೊಂದಿದ್ದೇ ’ಅರ್ಹ ಜನ ಪ್ರತಿನಿಧಿ’ಯಾಗುವ ಸಕಲ ಗುಣಲಕ್ಷಣವಿದ್ದ ಸಂಯಮದ ಶ್ರೀನಿವಾಸ್ (41,219), 16,166 ಮತಗಳ ದೊಡ್ಡ ಅಂತರದಲ್ಲಿ ಸೋತು ’ವಿಕ್ಷಿಪ್ತ’ ಈಶ್ವರಪ್ಪ ನಿರಾಯಾಸವಾಗಿ ಮತ್ತೆ ಎಮ್ಮೆಲ್ಲೆಯಾಗಿದ್ದು ಶಿವಮೊಗ್ಗದ ದುರಂತವೆಂದು ಹಿರಿಯ ಪತ್ರಕರ್ತರೊಬ್ಬರು ’ನ್ಯಾಯಪಥ’ಕ್ಕೆ ಹೇಳಿದರು!

1999ರಲ್ಲಿ ಅಸೆಂಬ್ಲಿ ಹಾಗು ಪಾರ್ಲಿಮೆಂಟ್ ಚುನಾವಣೆ ಏಕಕಾಲಕ್ಕೆ ಎದುರಾಗಿತ್ತು. ಬಂಗಾರಪ್ಪ ಕಾಂಗ್ರೆಸ್‌ನಲ್ಲಿ ತಮ್ಮ ಕೆಸಿಪಿ ವಿಲೀನಗೊಳಿಸಿ ಪಾರ್ಲಿಮೆಂಟಿಗೆ ಸ್ಪರ್ಧಿಸಿದರು. ಶಿವಮೊಗ್ಗ ನಗರದಲ್ಲಿ ಹೆಚ್ಚು ಮತ ತಾನು ಪಡೆಯುವುದರೊಂದಿಗೆ ಅಲ್ಲಿ ಕಾಂಗ್ರೆಸ್ ಶಾಸಕನನ್ನು ತಯಾರು ಮಾಡಲು ಬಂಗಾರಪ್ಪ ಹೊಸ ಸ್ಟ್ರಾಟರ್ಜಿ ಹೆಣೆದರು. ಬ್ರಾಹ್ಮಣರ ಬದಲಿಗೆ ಲಿಂಗಾಯತ ಕೋಮಿನ ಎಚ್.ಎಂ.ಚಂದ್ರಶೇಖರಪ್ಪರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದರು. ಬಿಜೆಪಿ ಅಭ್ಯರ್ಥಿ ಈಶ್ವರಪ್ಪರ ಹಿಂದುತ್ವದ ಲೆಕ್ಕಾಚಾರ ಉಲ್ಟಾ ಹೊಡೆಯಿತು. ಕ್ಷೇತ್ರದಲ್ಲಿ ಮೂರನೆ ಬಹುಸಂಖ್ಯಾತರಾದ ಲಿಂಗಾಯತರು ಕಾಂಗ್ರೆಸ್‌ನ ಚಂದ್ರಶೇಖರಪ್ಪರನ್ನು ಇಡಿಯಾಗಿ ಬೆಂಬಲಿಸಿದರು. ಬಿಜೆಪಿಯ ಈಶ್ವರಪ್ಪ(52,916), 6,574 ಮತಗಳಿಂದ ಸೋಲು ಅನುಭವಿಸಬೇಕಾಗಿಬಂತು. ಶಾಸಕನಾಗಲು ವಿಫಲನಾದರೂ ಸಂಘ ಸರದಾರರ ನಿಷ್ಠಾವಂತರಾದ ಈಶ್ವರಪ್ಪನವರಿಗೆ ಅಂದು ಕೇಂದ್ರದಲ್ಲಿದ್ದ ಎನ್‌ಡಿಎ ಸರಕಾರ ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷತೆ ಕೊಟ್ಟು ಪುನರ್ವಸತಿ ಕಲ್ಪಿಸಿತು ಎಂಬ ವಿಶ್ಲೇಷಣೆ ಕ್ಷೇತ್ರದಲ್ಲಿದೆ.

2004ರಲ್ಲಿ ಈಶ್ವರಪ್ಪರಿಗೆ ಮತ್ತೆ ಲಾಟರಿ ಹೊಡೆಯಿತು; ಬಂಗಾರಪ್ಪ ಕಾಂಗ್ರೆಸ್ ಬಿಟ್ಟು ನೇರ ಬಿಜೆಪಿಗೆ ಸೇರಿದ್ದು, ಶಾಸಕ ಚಂದ್ರಶೇಖರಪ್ಪರಿಗೆ ಸುತ್ತಿಕೊಂಡಿದ್ದ ಆಂಟಿ ಇನ್‌ಕಂಬೆನ್ಸ್ ಹಾಗು ಯಡಿಯೂರಪ್ಪರ ಪ್ರಭಾವದಲ್ಲಿ ಲಿಂಗಾಯತರ ಹೆಚ್ಚಿನ ಮತಗಳು ಬಿಜೆಪಿಗೆ ಬಂದಿದ್ದರಿಂದ ಈಶ್ವರಪ್ಪ 69,015 ಓಟು ಪಡೆದು, 19,249 ಮತಗಳ ದೊಡ್ಡ ಅಂತರದಲ್ಲಿ ಗೆಲ್ಲಲು ಸಾಧ್ಯವಾಯಿತು ಎನ್ನಲಾಗುತ್ತಿದೆ. ಕುಮಾರಸ್ವಾಮಿ-ಯಡಿಯೂರಪ್ಪ ಸಮ್ಮಿಶ್ರ ಸರಕಾರದಲ್ಲಿ ಈಶ್ವರಪ್ಪ ಸಂಪದ್ಭರಿತ ಜಲ ಸಂಪನ್ಮೂಲ ಇಲಾಖೆಯ ಮಂತ್ರಿಯಾದರು.

2008ರ ಚುನಾವಣೆಯಲ್ಲಿ ಯಡಿಯೂರಪ್ಪರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿ ಗದ್ದುಗೆಯಿಂದ ವಂಚಿಸಿದರೆಂಬ ಹಿನ್ನೆಲೆಯಲ್ಲಿ ಅನುಕಂಪ ಸೃಷ್ಟಿಯಾಗಿದ್ದು ಬಿಜೆಪಿಗೆ ಅನಕೂಲಕರವಗಿತ್ತು. ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಮುಸ್ಲಿಮ್ ಸಮುದಾಯದವರಾಗಿದ್ದನ್ನು ವಿಭಜಕ ತಂತ್ರಗಾರಿಕೆ ಬಳಸಿಕೊಂಡ ಈಶ್ವರಪ್ಪ ಕ್ಷೇತ್ರವನ್ನು ಅನುಕೂಲಕರವಾಗಿ ಹದಗೊಳಿಸಿಕೊಂಡರೆನ್ನಲಾಗಿದೆ. ಆ ಹೊತ್ತಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪರ ಮಧ್ಯೆ ಶೀತಲ ಸಮರವಿತ್ತಾದರೂ ಸಂಬಂಧ ತೀರಾ ಹದಗೆಟ್ಟಿಲಿಲ್ಲ. ಹೀಗಾಗಿ ಲಿಂಗಾಯತರ ಓಟು ದಂಡಿಯಾಗಿ ಪಡೆದ ಈಶ್ವರಪ್ಪ ಮತೀಯ ಧ್ರುವೀಕರಣದ ಸಹಾಯದಿಂದ ನಾಲ್ಕನೆ ಬಾರಿ ಶಾಸಕರಾದರೆಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲದೆ. ಆ ಕದನ ಕುತೂಹಲದಲ್ಲಿ ಬಿಜೆಪಿಯ ಈಶ್ವರಪ್ಪ 58,982 ಮತ ಗಳಿಸಿದರೆ ಕಾಂಗ್ರೆಸ್‌ನ ಇಸ್ಮಾಯಿಲ್ ಖಾನ್‌ಗೆ 26,563 ಓಟು ಪಡೆಯಲಷ್ಟೇ ಸಾಧ್ಯವಾಯಿತು; ಜೆಡಿಎಸ್ ಹುರಿಯಾಳು ಶ್ರೀಕಾಂತ್ 19,232 ಮತ ಪಡೆದರು.

ಸ್ವಂತ ಅಸ್ತಿತ್ವವಿಲ್ಲದ ಈಶ್ವರಪ್ಪ!

2008ರಲ್ಲಿ ಯಡಿಯೂರಪ್ಪ ತಮ್ಮ ಸರಕಾರದಲ್ಲಿ ಈಶ್ವರಪ್ಪರನ್ನು ವಿದ್ಯುತ್ ಇಲಾಖೆಯ ಮಂತ್ರಿ ಮಾಡಿದರು. ಸದಾನಂದ ಗೌಡ ಸಿಎಂ ಆದಾಗ ಈಶ್ವರಪ್ಪರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು; ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಈಶ್ವರಪ್ಪರನ್ನು ಉಪ ಮುಖ್ಯಮಂತ್ರಿ ಮಾಡಲಾಯಿತು. ಯಡಿಯೂರಪ್ಪ ವಿರೋಧಿಯೆಂಬ ಕಾರಣಕ್ಕೆ ಈಶ್ವರಪ್ಪರಿಗೆ ಸಂಘ ಸೂತ್ರಧಾರರು ಆಯಕಟ್ಟಿನ ಸ್ಥಾನ-ಮಾನ ನೀಡುತ್ತಾ ಹೋದರು; ತನ್ಮೂಲಕ ಯಡಿಯೂರಪ್ಪರ ನಿಯಂತ್ರಿಸುವ ತಂತ್ರಗಾರಿಕೆ ಸಂಘ ಪರಿವಾರದ್ದಾಗಿತ್ತೆಂಬ ಮಾತು ರಾಜಕೀಯ ವಲಯದಲ್ಲಿದೆ. ಈಶ್ವರಪ್ಪ ಅದೆಷ್ಟೇ ಮತೀಯ ಮಸಲತ್ತು ಮಾಡಿದರೂ ಅಥವಾ ಸಂಘ ಶೇಷ್ಠರ ಬೆಂಬಲದಿಂದ ಮೆರೆದಾಡಿದರೂ ಯಡಿಯೂಪ್ಪರ ಸಹಕಾರವಿಲ್ಲದೆ ಶಾಸಕನಾಗಿ ಆಯ್ಕೆಯಾಗಲು ಸಾಧ್ಯವೇ ಇಲ್ಲವೆಂಬ ಅಭಿಪ್ರಾಯ ಜಿಲ್ಲೆಯಲ್ಲಿದೆ. ಈ ವಾದವನ್ನು ಪುಷ್ಟೀಕರಿಸುವಂತಿದೆ 2013 ಅಸೆಂಬ್ಲಿ ಇಲೆಕ್ಷನ್‌ನ ಸೋಲು-ಗೆಲುವಿನ ಚಿತ್ರಣ.

2013ರ ಅಸೆಂಬ್ಲಿ ಚುನಾವಣೆಗೆ ಸ್ವಲ್ಪ ಮೊದಲು ಯಡಿಯೂರಪ್ಪ ಬಿಜೆಪಿ ವಿರುದ್ಧ ಬಂಡೆದ್ದು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಕಟ್ಟಿದರು. ತನಗೆ ಬಿಜೆಪಿಯಲ್ಲಿ ಮಗ್ಗಲು ಮುಳ್ಳಾಗಿದ್ದ ಈಶ್ವರಪ್ಪರನ್ನು ಸೋಲಿಸುವ ಹಠ ಯಡಿಯೂರಪ್ಪ ತೊಟ್ಟಿದ್ದರೆನ್ನುವುದು ಜಿಲ್ಲೆಯ ರಾಜಕಾರಣದಲ್ಲಿ ಜನಜನಿತ ಸಂಗತಿ. 2008ರಲ್ಲೇ ಈಶ್ವರಪ್ಪರಿಗೆ ಬಿಜೆಪಿ ಟಿಕೆಟ್ ತಪ್ಪಿಸಿ ತಮ್ಮ ಪರಮಾಪ್ತ ಎಸ್.ರುದ್ರೇಗೌಡರಿಗೆ ಅಭ್ಯರ್ಥಿ ಮಾಡುವ ಯೋಚನೆ ಯಡಿಯೂರಪ್ಪರದಾಗಿತ್ತೆಂದು ಆ ಹೊತ್ತಲ್ಲಿ ಸುದ್ದಿಯೂ ಆಗಿತ್ತು. 2013ರ ಜಿದ್ದಾಜಿದ್ದಿಯಲ್ಲಿ ಲಿಂಗಾಯತ ಜನಾಂಗದ ಹಣವಂತ ಕೈಗಾರಿಕೋದ್ಯಮಿ ರುದ್ರೇಗೌಡ (39,077) ಕೆಜೆಪಿಯಿಂದ ಅಖಾಡಕ್ಕಿಳಿದರು. ಕಾಂಗ್ರೆಸ್ ಬ್ರಾಹ್ಮಣ ಸಮುದಾಯದ ಕೆ.ಬಿ.ಪ್ರಸನ್ನಕುಮಾರ್‌ಗೆ (39,355) ಅವಕಾಶ ಕೊಟ್ಟಿತು. ಈಶ್ವರಪ್ಪ (33,462) ಬಿಜೆಪಿ ಕ್ಯಾಂಡಿಡೇಟ್. ಕುರುಬ ಸಮುದಾಯದ ಎಂ.ಶ್ರೀಕಾಂತ್ (21,638) ಜೆಡಿಎಸ್ ಅಭ್ಯರ್ಥಿ. ಈ ತುರುಸಿನ ಚತುಷ್ಕೋನ ಸ್ಪರ್ಧೆಯಲ್ಲಿ ಕಾಂಗ್ರೆಸ್‌ನ ಪ್ರಸನ್ನಕುಮಾರ್ ಸಮೀಪದ ಪ್ರತಿಸ್ಪರ್ಧಿ ಕೆಜೆಪಿಯ ರುದ್ರೇಗೌಡರನ್ನು ಕೇವಲ 278 ಮತದಿಂದ ಸೋಲಿಸಿ ಶಾಸನಸಭೆಗೆ ಆಯ್ಕೆಯಾದರೆ ಈಶ್ವರಪ್ಪ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು!

ಕೆ.ಬಿ.ಪ್ರಸನ್ನಕುಮಾರ್‌

ಗಣನೀಯ ಪ್ರಮಾಣದಲ್ಲಿ ಮುಸ್ಲಿಮರ ಮತ ಪಡೆದಿದ್ದ ರುದ್ರೇಗೌಡರು ವಿಜಯದ ಹೊಸ್ತಿಲಿಗೆ ಬಂದು ಎಡವಿದ್ದರು. ಯಡಿಯೂರಪ್ಪರಿಗೆ ಶಿವಮೊಗ್ಗ ಮುಸ್ಲಿಮರ ಮೇಲಿದ್ದ ಪ್ರಭಾವದಿಂದ ಆ ಜನಾಂಗದ ಮತ ಕೆಜೆಪಿಗೆ ಬಂದಿತ್ತು. ಅಲ್ಲಿಗೆ ಯಡಿಯೂರಪ್ಪ ಇಲ್ಲದೆ ಈಶ್ವರಪ್ಪರಿಗೆ ಕ್ಷೇತ್ರದಲ್ಲಿ ಸ್ವತಂತ್ರ ಅಸ್ತಿತ್ವ ಇಲ್ಲವೆಂಬುದು ಸಾಬೀತಾಯಿತೆಂದು ವಿಶ್ಲೇಷಿಸಲಾಗುತ್ತಿದೆ. ಅಸೆಂಬ್ಲಿ ಇಲೆಕ್ಷನ್‌ನಲ್ಲಿ ಮುಖಭಂಗವಾದರೂ ಯಡಿಯೂರಪ್ಪರಿಗೆ ಸೆಡ್ಡು ಹೊಡೆಯುವ ಛಾತಿವಂತನೆಂಬ ಕಾರಣಕ್ಕೆ ಬಿಜೆಪಿಯಲ್ಲಿ ಈಶ್ವರಪ್ಪರ ಕೈಮೇಲಾಯಿತು. 2014ರಲ್ಲಿ ವಿಧಾನಪರಿಷತ್‌ಗೆ ಈಶ್ವರಪ್ಪರನ್ನು ಕಳಿಸಲಾಯಿತಷ್ಟೆ ಅಲ್ಲ, ಕ್ಯಾಬಿನೆಟ್ ಮಂತ್ರಿ ಸೌಲಭ್ಯದ ವಿರೋಧ ಪಕ್ಷದ ನಾಯಕನಾಗಿಯೂ ಮಾಡಲಾಯಿತು! 2018ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಕರಾವಳಿ ಮತ್ತು ಮಲೆನಾಡಿನಲ್ಲಾದ ದೊಡ್ಡಮಟ್ಟದ ಕೋಮು ಧ್ರುವೀಕರಣ ಮತ್ತು ಬಿಜೆಪಿಗೆ ಮರುಳಿದ್ದ ಯಡಿಯೂರಪ್ಪರ ಪ್ರಭಾವದಿಂದ ಈಶ್ವರಪ್ಪನವರಿಗೆ 1,04,027 ಮತ ಬಂತು! ಈಶ್ವರಪ್ಪ ಕಾಂಗ್ರೆಸ್‌ನ ಪ್ರಸನ್ನಕುಮಾರ್‌ರನ್ನು 46,107 ಮತಗಳ ಆಗಾಧ ಅಂತರದಿಂದ ಸೋಲಿಸಿ ಶಾಸಕನಾದರು.

40% ಪರ್ಸೆಂಟ್ ಮಂತ್ರಿ ವಿವಾದ!

ಯಡಿಯೂರಪ್ಪ ತಮ್ಮ ಸರಕಾರದಲ್ಲಿ ಈಶ್ವರಪ್ಪರಿಗೆ ಮಂತ್ರಿಯೇನೊ ಮಾಡಿದರು. ಆದರೆ ಸಂಬಂಧ ಹಳಸಿ ಪ್ರಚ್ಛನ್ನ ಕಾಳಗ ನಡೆದಿತ್ತು ಎನ್ನಲಾಗಿದೆ. ಸಿಎಂ ತನ್ನ ಗ್ರಾಮೀಣಾಭಿವೃದ್ಧಿ ಖಾತೆಯಲ್ಲಿ ಹಸ್ತಕ್ಷೇಪ ನಡೆಸಿರುವುದರಿಂದ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಆಗುತ್ತಿಲ್ಲ ಎಂಬರ್ಥದ ದೂರನ್ನು ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ಕೊಟ್ಟಿದ್ದು ಸುದ್ದಿಯಾಗಿತ್ತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗ ಗ್ರಾಮೀಣ ಭಾಗದಲ್ಲಿ ನಡೆಯುವ ಕೋಟ್ಯಂತರ ರೂ. ಕಾಮಗಾರಿ ಉಸ್ತುವಾರಿಯುಳ್ಳ ಅದೇ ಖಾತೆಯನ್ನು ಮತ್ತೆ ಪಡೆದುಕೊಂಡ ಈಶ್ವರಪ್ಪ ಪರ್ಸೆಂಟೇಜ್ ವ್ಯವಹಾರ ನಿರತರಾಗಿದ್ದಾರೆಂಬ ಆರೋಪ ಜೋರಾಗಿ ಕೇಳಿಬಂದಿತ್ತು.

ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಮಂತ್ರಿ ಈಶ್ವರಪ್ಪ ಕಾಮಗಾರಿಯ ಬಿಲ್ ಪಾವತಿಗೆ ಶೇ.40 ಕಮಿಷನ್ ಕೇಳುತ್ತಿದ್ದಾರೆಂದು ನೇರವಾಗೆ ಆರೋಪಿಸಿದ್ದರು; ಪ್ರಧಾನಿ ಮೋದಿಗೂ ಈಶ್ವರಪ್ಪರ ಮೇಲೆ ದೂರು ಕೊಟ್ಟಿದ್ದರು. ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ಸಂತೋಷ್ ಪಾಟೀಲ್ ಬೇರೆ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾದರು ಎನ್ನಲಾದ ಪ್ರಕರಣ ಆಡಳಿತಾರೂಢ ಬಿಜೆಪಿಯಲ್ಲಿ ಮಾತ್ರವಲ್ಲದೆ, ಇಡೀ ರಾಜ್ಯದಲ್ಲಿ ತಲ್ಲಣ ಮೂಡಿಸಿತ್ತು. ಇಷ್ಟಾದರೂ ಮಂತ್ರಿಗಿರಿ ಬಿಡಲು ಈಶ್ವರಪ್ಪ ಒಪ್ಪಲಿಲ್ಲ; ಮುಜುಗರಕ್ಕೀಡಾದ ಬಿಜೆಪಿ ಈಶ್ವರಪ್ಪರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕಾಗಿಬಂತು! ಈಗ ಸದ್ರಿ ಪ್ರಕರಣದಿಂದ ’ಕ್ಲೀನ್ ಚಿಟ್’ ಪಡೆದಿರುವ ಈಶ್ವರಪ್ಪ ಮತ್ತೆ ಸಚಿವನಾಗುವ ಪ್ರಯತ್ನ ಮಾಡುತ್ತಿದ್ದರೆ, ಅತ್ತ ಸಂಘ ಪರಿವಾರ ಪ್ರಮುಖರು ಮುಂಬರುವ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಡದೆ ಕಡ್ಡಾಯ ನಿವೃತ್ತಿಗೆ ಯೋಚಿಸುತ್ತಿದ್ದಾರೆ ಎಂಬ ಸುದ್ದಿಗಳು ಬಿಜೆಪಿ ಪಡಸಾಲೆಯಿಂದ ಬರುತ್ತಿದೆ.

ನಗರದ ನೋವು-ನಲಿವು!

ಶಿವಮೊಗ್ಗ ಮಹಾನಗರದ ಉದ್ದಗಲಕ್ಕೊಮ್ಮೆ ಕಣ್ಣು ಹಾಯಿಸಿದರೆ ಯದ್ವಾತದ್ವಾ ಬೆಳೆದ ಅಸ್ತವ್ಯಸ್ತ ಊರಿನಂತೆ ಗೋಚರಿಸುತ್ತದೆ. ಕುಡಿಯುವ ನೀರು, ಚರಂಡಿ, ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ, ನೈರ್ಮಲ್ಯದಂಥ ಮೂಲಭೂತ ಸಮಸ್ಯೆಗಳ ಶಿವಮೊಗ್ಗದಲ್ಲಿ ಈಗ ನಡೆಯುತ್ತಿರುವ 1,200 ಕೋಟಿ ರೂ.ಸ್ಮಾರ್ಟ್ ಸಿಟಿ ಯೋಜನೆಯನ್ನಾದರೂ ವೈಜ್ಞಾನಿಕ ನೀಲನಕ್ಷೆಯಂತೆ ಕಾರ್ಯಗತ ಮಾಡಿದರೂ ಸಾಕಿತ್ತು; ನಗರ ಕೊಂಚವಾದರೂ ವ್ಯವಸ್ಥಿತವಾಗುತ್ತಿತ್ತೆಂದು ಜನರು ಹೇಳುತ್ತಾರೆ. ಇದೊಂದು ಪಕ್ಕಾ ಅವೈಜ್ಞಾನಿಕ, ಅಸಮರ್ಪಕ ಮತ್ತು ಕಳಪೆ ಕಾಮಗಾರಿ; ಆಳುವವರಿಗೆ ಅನಾಯಾಸವಾಗಿ ಶೇ.40 ಕಮಿಷನ್ ಸಿಗುವ ಹುಚ್ಚು ಪ್ರಾಜೆಕ್ಟ್ ಎಂಬ ಆಕ್ರೋಶ ಭುಗಿಲೆದ್ದಿದೆ ಐದು ಬಾರಿ ಎಮ್ಮೆಲ್ಲೆ, ನಾಲ್ಕೈದು ಸಲ ಸಚಿವನಾಗಿರುವ ಈಶ್ವರಪ್ಪ ಸಾಧನೆ ಏನೆಂದು ಕೇಳಿದರೆ- “ಅವರೆಂದು ಅಭಿವೃದ್ಧಿ ರಾಜಕಾರಣ ಮಾಡಿದವರಲ್ಲ; ಶ್ರಮವಿಲ್ಲದೆ ದಂಡಿಯಾಗಿ ಮತ ತರುವ ಮತೀಯ ರಾಜಕಾರಣದಲ್ಲಿ ಅವರು ನಿಷ್ಣಾತರು. ಶಿವಮೊಗ್ಗದಲ್ಲಿ ಏನಾದರು ಪ್ರಗತಿ-ಕೆಲಸ-ಕಾಮಗಾರಿ ಆಗಿದ್ದರೆ, ಅದು ಯಡಿಯೂರಪ್ಪ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದು” ಎಂಬ ಉತ್ತರ ಪಕ್ಷ-ಪಂಗಡದ ಹಂಗಿಲ್ಲದೆ ಬರುತ್ತದೆ!

ಸಂತೋಷ್ ಪಾಟೀಲ್

ಶಿವಮೊಗ್ಗ ಕೋಮು ದಂಗೆ-ರಕ್ತದ ಓಕುಳಿಯಿಂದ ಬೆಚ್ಚಿಬಿದ್ದಿದೆ. ಎಲ್ಲ ಜಾತಿ-ಧರ್ಮದ ಮಂದಿ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಯಾವ ಘಳಿಗೆಯಲ್ಲಿ ಯಾವ ಕಾರಣಕ್ಕೆ ಕೋಮು ಗಲಭೆ ಆಗುತ್ತದೆಂದು ಹೇಳಲಾಗದು ಎಂದು ಕಂಗೆಟ್ಟಿರುವ ನಗರವಾಸಿಗಳು ಹೇಳುತ್ತಾರೆ. ಸಾಮರಸ್ಯ-ಸಹಬಾಳ್ವೆ ಸಂಕಟಕ್ಕೆ ಸಿಲುಕಿರುವುದೇ ಶಿವಮೊಗ್ಗದ ದೊಡ್ಡ ಸಮಸ್ಯೆ. ಬಿಟ್ಟೂಬಿಡದೆ ಆಗುತ್ತಿರುವ ಮತೀಯ ದಂಗೆಯಿಂದ ಉದ್ಯೋಗ-ವಹಿವಾಟಿಗೆ ಧಕ್ಕೆಯಾಗಿದೆ. ಬದುಕಿಗೆ ಆಧಾರವಾಗಿದ್ದ ಕಸುಬು-ಕೆಲಸ ನಷ್ಟವಾಗಿ ಅಮಾಯಕರು ಬೀದಿಗೆ ಬಿದ್ದಿದ್ದಾರೆ. ಶಿವಗೊಗ್ಗದ ಜನರು ಶಾಂತಿ-ಸೌಹಾರ್ದತೆ ಬಯಸುತ್ತಿದ್ದರೆ, ಧರ್ಮ ದಂಗಲ್ ಆಗುತ್ತಿದ್ದರೆ ಓಟ್ ಬ್ಯಾಂಕ್ ರಾಜಕಾರಣಕ್ಕೆ ಸಲೀಸೆಂಬ ಲೆಕ್ಕಾಚಾರ ವಿಭಜಕ ರಾಜಕಾರಣಿಗಳದು ಎನ್ನುವ ಮಾತು ಕ್ಷೇತ್ರದಲ್ಲಿ ಜೋರಾಗಿದೆ.

ಕಳೆದ ಏಪ್ರಿಲ್ 20ರಂದು ಭಜರಂದ ದಳದ ಕಾರ್ಯಕರ್ತ ಹರ್ಷನ ಕೊಲೆಯಾದಾಗ ಶಿವಮೊಗ್ಗದಲ್ಲಿ ಭೀಭತ್ಸ ಮತೀಯ ಸಂಘರ್ಷ ಆಗಿಹೋಯಿತು. ಇದು ಧರ್ಮಕಾರಣಿಗಳಿಗೆ ಖುಷಿಯ ಸಂಗತಿಯಾದರೆ ಅತ್ತ ಹರ್ಷನ ಕುಟುಂಬದ ಕಣ್ಣೀರು ಮತ್ತು ದುಗುಡವಿನ್ನೂ ಕಡಿಮೆಯಾಗಿಲ್ಲ. ಹರ್ಷನ ಕುಟುಂಬವನ್ನು ಧರ್ಮಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾತು ಸಹ ಕೇಳಿಬರುತ್ತಿದೆ. ತಮ್ಮನ ಕೊಲೆ ಕೇಸ್ ತನಿಖೆಯ ಬಗ್ಗೆ ವಿಚಾರಿಸಲು ಬಂದಿದ್ದ ಹರ್ಷನ ಅಕ್ಕ ಅಶ್ವಿನಿಗೆ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಮತ್ತು ಜಿಲ್ಲಾ ಮಂತ್ರಿಯಾಗಿದ್ದ ಈಶ್ವರಪ್ಪ ಬೈದು ಕಳಿಸಿದ್ದು ದೊಡ್ಡ ಸುದ್ದಿಯೂ ಆಯಿತು.

ಈ ಹಿಂದುಳಿದ ದರ್ಜಿ ಕುಟುಂಬದ 26 ವರ್ಷದ ಹರ್ಷ ಹತ್ಯೆಗೀಡಾಗುವ ಹಲವು ತಿಂಗಳ ಮೊದಲಿಂದ “ತನ್ನ ಕೊಲೆಗೆ ಸಂಚು ನಡೆದಿದೆ; ರಕ್ಷಣೆ ಕೊಡಿಯೆಂದು” ಪೊಲೀಸರಿಗೆ ಹಲವು ಬಾರಿ ದೂರುಕೊಟ್ಟಿದ್ದ; ಆದರೆ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಧಿಕಾರಸ್ಥರು ಹರ್ಷನ ಬಲಿಯನ್ನು ಬುದ್ಧಿಪೂರ್ವಕವಾಗೆ ತಪ್ಪಿಸಲಿಲ್ಲ ಎಂಬ ಚರ್ಚೆಗಳೀಗ ಹಿಂದುತ್ವದ ಬಿಡಾರಗಳಲ್ಲಿ ಬಿರುಸಾಗಿದೆ ಎನ್ನಲಾಗುತ್ತಿದೆ. ಇದು ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಅರ್ಥಾತ್ ಈಶ್ವರಪ್ಪರಿಗೆ ದೊಡ್ಡ ಡ್ಯಾಮೇಜ್ ಮಾಡಲಿದೆ ಎನ್ನಲಾಗುತ್ತಿದೆ. 2023ರ ಚುನವಣೆಯಲ್ಲಾದರೂ ಸಕಲ ಧರ್ಮ-ಜಾತಿಯವರನ್ನು ಒಗ್ಗೂಡಿಸಿಕೊಂಡು ಹೋಗುವ ’ವಿಭೂತಿ ಪುರುಷ’ ಅವತರಿಸಬಹುದೆಂಬ ಕಾತರದಲ್ಲಿ ಜನರಿರುವುದು ನಗರಲ್ಲಿ ಓಡಾಡಿದರೆ ಅರಿವಾಗುತ್ತದೆ.

ಟಿಕೆಟ್ ಫೈಟ್!

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಆಕಾಂಕ್ಷಿಗಳ ಸರದಿ ಸಾಲು ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ದಿನ ಕಳೆದಂತೆ ಬೆಳೆಯುತ್ತಲೇ ಇದೆ. ಯಾರಿಗೆ ಟಿಕೆಟ್ ಸಿಗಬಹುದೆಂದು ಸಣ್ಣದೊಂದು ಊಹೆ ಕೂಡ ಮಾಡಲಾಗದಷ್ಟು ಗೊಂದಲ ಎರಡೂ ಪಕ್ಷದಲ್ಲಿದೆ. ಸ್ಥಳೀಯ ಹಿಂದುತ್ವ ಸಂಘಟನೆ ಹಾಗು ಬಿಜೆಪಿಯ ಒಂದು ವರ್ಗಕ್ಕೆ ಈಶ್ವರಪ್ಪರ ಬಗ್ಗೆ ಅಸಮಧಾನ-ಆಕ್ರೋಶವಿದೆ; ಈಶ್ವರಪ್ಪರ ವಿಚಿತ್ರ ಮ್ಯಾನರಿಸಂ ಮತ್ತು ಅಸಂಬದ್ಧ ಮಾತುಗಾರಿಕೆಯಿಂದ ಸಂಘ ಪರಿವಾರಕ್ಕೂ ಮುಜುಗರ ಆಗುತ್ತಿದೆ ಎಂಬ ಸುದ್ದಿಗಳು ತೇಲಾಡುತ್ತಿದೆ. 2008-2013ರ ಅವಧಿಯಲ್ಲಿ ಮಂತ್ರಿಯಾಗಿದ್ದಾಗ ಪೊಲೀಸರಿಗೆ ನೋಟು ಎಣಿಸುವ ಯಂತ್ರ ಈಶ್ವರಪ್ಪ ಮನೆಯಲ್ಲಿ ಸಿಕ್ಕಿದ್ದು, ಈಗ ಬಂದಿರುವ 40 ಪರ್ಸೆಂಟ್ ಆರೋಪ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ, ಈಚೆಗೆ ಹತ್ಯೆಗೀಡಾದ ಹಿಂದುತ್ವದ ಸಂಘಟನೆಯಲ್ಲಿದ್ದ ಹುಡುಗ ಹರ್ಷನ ಕೊಲೆ ಮತ್ತು ಆನಂತರ ಕೇಸರಿ ಪಡೆಯಲ್ಲಿ ಸ್ಥಳೀಯ ನಾಯಕತ್ವದ ಬಗ್ಗೆ ಮೂಡಿರುವ ಅನುಮಾನ, ಹರ್ಷನ ಅಕ್ಕ ಈಶ್ವರಪ್ಪ ಬಗ್ಗೆ ಅಸಮಾಧಾನದಿಂದ ಮಾತನಾಡುತ್ತಿರುವುದು ಮತ್ತು 2023ರ ಚುನಾವಣೆ ಹೊತ್ತಲ್ಲಿ ಈಶ್ವರಪ್ಪರಿಗೆ 74 ವರ್ಷ ವಯಸ್ಸಾಗುವುದರಿಂದ ಅವರಿಗೆ ಟಿಕೆಟ್ ಸಿಗಲಾರದೆಂಬ ಲೆಕ್ಕಾಚಾರದ ಚರ್ಚೆ ಬಿಜೆಪಿಯಲ್ಲಿ ಬಿರುಸಾಗಿದೆ.

ಈಶ್ವರಪ್ಪ ಸುಲಭಕ್ಕೆ ಸೀಟು ಬಿಟ್ಟು ಕೊಡುವ ಪೈಕಿಯಲ್ಲ; ತಮ್ಮ ವ್ಯವಹಾರವನ್ನೆಲ್ಲ ನೋಡಿಕೊಳ್ಳುತ್ತಿರುವ-ಜಿಪಂ ಸದಸ್ಯನಾಗಿದ್ದ ಮಗ ಕಾಂತೇಶ್‌ಗೆ ಟಿಕೆಟ್ ಕೇಳುತ್ತಿದ್ದಾರೆ. ಯಡಿಯೂರಪ್ಪರ ಮಗನಿಗೆ ಶಿಕಾರಿಪುರದಲ್ಲಿ ಅವಕಾಶ ಕೊಡುವುದಾದರೆ ತನ್ನ ಮಗನಿಗೇಕೆ ಶಿವಮೊಗ್ಗದಲ್ಲಿ ಟಿಕೆಟ್ ಕೊಡಬಾರದೆಂಬ ವಾದ ಈಶ್ವರಪ್ಪರದು ಎನ್ನಲಾಗುತ್ತಿದೆ. ಯಡಿಯೂರಪ್ಪರಿಗೆ ತಮ್ಮ ಸ್ವಜಾತಿ ಪರಮಾಪ್ತ ರುದ್ರೇಗೌಡರಿಗೆ ಅಭ್ಯರ್ಥಿ ಮಾಡುವ ಮನಸ್ಸಿದೆಯಾದರೂ ಅವರಿಗೆ ವಯಸ್ಸಾಗಿರುವುದರಿಂದ ಕಷ್ಟವೆಂಬ ಮಾತಿದೆ. ಸೂಡಾದ ಅಧ್ಯಕ್ಷರಾಗಿದ್ದ ಲಿಂಗಾಯತ ಸಮುದಾಯದ ಜ್ಯೋತಿ ಪ್ರಕಾಶ್ ಹೆಸರು ಕೇಳಿಬರುತ್ತಿದೆ. ಎಮ್ಮೆಲ್ಸಿ ಆಯನೂರು ಮಂಜುನಾಥ್ ತನಗಿದು ಕೊನೆಯ ಅವಕಾಶ ಟಿಕೆಟ್ ಕೊಡಿಯೆಂದು ಸಂಘ ಶ್ರೇಷ್ಠರಿಗೆ ದುಂಬಾಲು ಬಿದ್ದಿದ್ದಾರಂತೆ.

ಈ ಬಾರಿ ಬ್ರಾಹ್ಮಣ ಸಮುದಾಯ ಬಿಜೆಪಿ ಟಿಕೆಟ್‌ಗೆ ಗಂಭೀರ ಪ್ರಯತ್ನ ಮಾಡುತ್ತಿದೆ; ಮಾಜಿ ಎಮ್ಮೆಲ್ಸಿ ಭಾನುಪ್ರಕಾಶ್, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ದತ್ತಾತ್ರಿ ಮತ್ತು ಸ್ಥಳೀಯ ಹಿಂದು ಮಹಾ ಸಭಾದ ಅಧ್ಯಕ್ಷ ನಟರಾಜ ಭಾಗ್ವತ್ ಎಮ್ಮೆಲ್ಲೆ ಆಗುವ ಕನಸು ಕಾಣುತ್ತಿದ್ದಾರೆ ಎಂಬುದು ಶಿವಮೊಗ್ಗೆಯಲ್ಲಿ ಬಹಿರಂಗ ರಹಸ್ಯ. ಯಡಿಯೂರಪ್ಪ ವಿರೋಧಿ ಕ್ಯಾಂಪಿನ ಭಾನುಪ್ರಕಾಶ್ ತನಗಲ್ಲದಿದ್ದರು ತಮ್ಮ ಮಗನಿಗಾದರು ಟಿಕೆಟ್ ಕೊಡುವಂತೆ ಕೇಳುತ್ತಿದ್ದಾರಂತೆ. ಆರ್‌ಎಸ್‌ಎಸ್ ಹಿನ್ನೆಲೆಯ ಈ ಮೂವರಿಗೆ ತಮ್ಮಲ್ಲಿ ಯಾರು ಸಂಘ ಸರದಾರರ ನೆಚ್ಚಿನ ಕಪ್ಪು ಕುದುರೆ ಆಗಬಹುದೆಂಬುದು ಅರ್ಥವಾಗದೆ ಗೊಂದಲಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ.

ನಗರದ ಹೆಸರಾಂತ ವೈದ್ಯ ಡಾ.ಧನಂಜಯ್ ಸರ್ಜಿ ಬಿಜೆಪಿ ಅಥವಾ ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ಪ್ರಯತ್ನದಲ್ಲಿದ್ದಾರೆಂಬ ಸುದ್ದಿ ಸದ್ದು ಮಾಡುತ್ತಿರುವುದು ಕುತೂಹಲಕ್ಕೆಡೆಮಾಡಿದೆ. ಮಾಜಿ ಶಾಸಕ ಪ್ರಸನ್ನಕುಮಾರ್ ಸೋತರೂ ಜನರ ನಡುವಿದ್ದಾರೆ. ಆದರೆ ಬಿಜೆಪಿ ಕಡೆಗೆ ಹೋಗುವ ಸ್ವಜಾತಿ ಮತ ಸೆಳೆಲು ಪ್ರಸನ್ನಕುಮಾರ್‌ರಿಂದ ಆಗದಿರುವುದರಿಂದ ಲಿಂಗಾಯತ ಅಥವಾ ಕುರುಬ ಸಮುದಾಯದವರಿಗೆ ಅವಕಾಶ ಕೊಟ್ಟರೆ ಗೆಲ್ಲುವ ಸಂಭವವಿದೆ ಎಂಬ ಚರ್ಚೆಗಳು ಕಾಂಗ್ರೆಸ್‌ನಲ್ಲಿ ನಡೆದಿದೆಯೆನ್ನಲಾಗುತ್ತಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಕಾರ್ಪೊರೆಟ್ ಎಚ್.ಸಿ.ಯೋಗೀಶ್ ಮತ್ತು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಸ್ಪರ್ಧಿಸಿ ಸೋತಿರುವ ದಿನೇಶ್ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ. ದಿನೇಶ್ ಬೆನ್ನಿಗೆ ಲಿಂಗಾಯತ ಪಂಗಡದ ಪ್ರಭಾವಿ ಮುಖಂಡ ಶಾಮನೂರು ಶಿವಶಂಕರಪ್ಪನವರಿದ್ದರೆ ಯೋಗೀಶ್‌ಗೆ ಮಾಜಿ ಶಾಸಕ ಚಂದ್ರಶೇಖರಪ್ಪರ ಮಗನೆಂಬುದೆ ಬಲ ಎನ್ನಲಾಗುತ್ತಿದೆ.

ಈ ನಡುವೆ ಲಿಂಗಾಯತರ ಅನುಕಂಪ ಪಡೆದಿರುವ ಆಯನೂರು ಮಂಜುನಾಥರನ್ನು ಬಿಜೆಪಿಯಿಂದ ಕರೆತಂದು ಅಖಾಡಕ್ಕಿಸುವ ಪ್ರಯತ್ನ ಕಾಂಗ್ರೆಸ್‌ನ ಒಂದು ಒಂದು ವರ್ಗ ಮಾಡುತ್ತಿದ್ದರೆ, ಮತ್ತೊಂದೆಡೆ ಎರಡು ಸಲ ಅಸೆಂಬ್ಲಿಗೆ ಸ್ಪರ್ಧಿಸಿದಾಗ 19-21 ಸಾವಿರದಷ್ಟು ಮತ ಪಡೆದ ಕುರುಬ ಜನಾಂಗದ ಜನಬಳಕೆ ಮುಖಂಡ ಎಂ.ಶ್ರೀಕಾಂತ್‌ರನ್ನು ಜೆಡಿಎಸ್‌ನಿಂದ ಸೆಳೆಯುವ ಕಾರ್ಯಾಚರಣೆ ಆಗುತ್ತಿದೆ ಎಂಬ ಮಾತು ಜಿಲ್ಲೆಯ ರಾಜಕೀಯ ವಲಯದಲ್ಲಿದೆ. ಕಾಂಗ್ರೆಸ್ಸಿಗೆ ಈಶ್ವರಪ್ಪರ ಸಂಪನ್ಮೂಲ ಮತ್ತು ಸಂಘ ಪರಿವಾರದ ಅಕ್ರಮಣಕಾರಿ ಹಿಂದುತ್ವ ಕೌಂಟರ್ ಮಾಡುವ ’ಗಟ್ಟಿ’ ಅಭ್ಯರ್ಥಿ ಬೇಕಾಗಿದೆ ಎಂದು ಆ ಪಕ್ಷದ ಕಾರ್ಯಕರ್ತರು ಹೇಳುತ್ತಾರೆ.

ಈಶ್ವರಪ್ಪರಿಗೆ ಬಿಜೆಪಿ ಟಿಕೆಟ್ ಸಿಗುವುದು ಅನುಮಾನ; ಈಗಿನ ಸ್ಥಿತಿಯಲ್ಲಿ ಅವರು ಗೆಲ್ಲುವುದೂ ಕಷ್ಟ; ಮತದಾರರಿಗೂ ಬಿಜೆಪಿ ನಾಯಕರು ಕಂಡವರ ಮಕ್ಕಳನ್ನು ಬಾವಿಗಿಳಿಸಿ ಆಳ ನೋಡುವ ಹಿಂದುತ್ವದಿಂದ ರೋಸಿಹೋಗಿದೆ. ಆದರೆ ವಿಭಜಕ ತಂತ್ರಗಾರಿಕೆ ಶುರುವಾಗುವುದೆ ಚುನಾವಣೆಗೆ ನಾಲ್ಕೈದು ತಿಂಗಳಿರುವಾಗ; ಹಾಗಾಗಿ ಫಲಿತಾಂಶ ಈಗಲೆ ಅಂದಾಜಿಸುವಂತಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ!


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಭದ್ರಾವತಿ: ಬಿಜೆಪಿಗೆ ಖಾತೆ ತೆರೆಯಲಾಗದ ವ್ಯಕ್ತಿ ಪ್ರತಿಷ್ಠೆಯ ಅಖಾಡದಲ್ಲಿ ಹೊಸ ಮುಖಗಳ ಹೋರಾಟ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಿಮ್ಮ ಪ್ರಕಾರ ಭಾಜಪ ಅಥವಾ ಸಂಘ ಪರಿವಾರ ಮತೋನ್ಮತ್ತವಾಗಿವೆ, ಆದರೇ ನಮ್ಮ ಪ್ರಕಾರ ನಿಮ್ಮಂತಹ ಗೋಧಿ ಮೀಡಿಯಾಗಳು ಸೆಕ್ಯುಲರಿಸಂಮತ್ತವಾಗಿವೆ. ನಿಮಗೆ ಹಿಂದೂಗಳ ಹೆಣದ ಮೇಲೂ ಸೆಕ್ಯುಲರಿಸಂ ಹೇರುವ ಹಪಾಹಪಿ ಇದೆ. ನಿಮ್ಮ ಈ ಹೇಸಿಗೆ ಎನಿಸುವಷ್ಟು ಸೆಕ್ಯುಲರಿಸಂ ಇಂದ ರೋಸಿ ಹೋಗಿ ನಾವುಗಳು ಅಭಿವೃದ್ಧಿ ಮರೆತು ಹಿಂದುತ್ವಕ್ಕೆ ಮಾತು ಚಲಾಯಿಸುತಿದ್ದೇವೆ. ಗೌರಿ ಲಂಕೇಶ್ ಮತ್ತು ಅವರ ಅನುಯಾಯಿಗಳಾದ ನಿಮಗೆ ಸೌದಿ, ಪಾಕ್, ಟರ್ಕಿ ಇಂದ ಹಣ ಬರುತ್ತದೆ ಅದಕ್ಕಾಗಿ ನೀವು ನಿಮ್ಮ ಧರ್ಮ, ಸಂಸ್ಕೃತಿ, ಇತಿಹಾಸವನ್ನು ಮಾಡಿಕೊಳ್ಳಲು ತಯಾರಾಗಿದ್ದೀರಿ ಮತ್ತು ಮಾಡಿಕೊಂಡಿದ್ದೀರಿ ಕೂಡ. ಆದರೇ ಸಾಮಾನ್ಯ ಜನಗಳಾದ ನಾವು ಅಷ್ಟು ಹೀನತನಕ್ಕೆ ಇಳಿದಿಲ್ಲ. ನಾವು ನಮ್ಮ ಅಸ್ಮಿತೆಗಾಗಿ ಹೋರಾಡುತ್ತೇವೆ. ಇಂದು ನಮ್ಮ ಅಸ್ಮಿತೆ ಉಳಿದರೆ ನಾಳೆ ಅಭಿವೃದ್ಧಿ ಹೊಂದಬಹುದು, ಅಸ್ಮಿತೆಯನ್ನು ಕಳೆದುಕೊಂಡರೆ ಯಾವ ಅಭಿವೃದ್ಧಿ ಆಗುತ್ತದೆ. ಕಾಶ್ಮೀರದಲ್ಲಿರುವ ಅಭಿವೃದ್ಧಿಯಾ? ಅಫ್ಘಾನಿಸ್ತಾನ್ ಅಭಿವೃದ್ಧಿಯಾ? ಪಾಕ್ ನಲ್ಲಿನ ಅಭಿವೃದ್ಧಿಯಾ? ಅಷ್ಟಕ್ಕೂ ಶಿವಮೊಗ್ಗಕ್ಕೆ ಕಾಂಗ್ರೆಸ್ ಕೊಡುಗೆ ಏನು? ಕರ್ನಾಟಕಕ್ಕೆ ಕಾಂಗ್ರೆಸ್ ಕೊಡುಗೆ ಏನು? ಕಾಂಗ್ರೆಸ್ ಬಗ್ಗೆ ಏಕೆ ನೀವು ಚಕಾರ ಎತ್ತುವುದಿಲ್ಲ? ಇದೆ ನಿಮ್ಮ ಅಭಿವೃದ್ಧಿ ಮಾಡೆಲ್ಲಾ? ನಿಮ್ಮಂತಹ ಗೋಧಿ ಮೀಡಿಯಾಗಳನ್ನು ಜನ ನಂಬುವುದನ್ನು ಬಿಟ್ಟಿದ್ದಾಗಿದೆ. You are all Hippocrates.

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...